Thursday, January 27, 2011

‘ಬೊಳುವಾರು’ ದಾರಿಯಲ್ಲೊಂದು ಇಣುಕು...

ನಾಲ್ಕು ದಿನಗಳ ಹಿಂದೆ ಇದ್ದಕ್ಕಿದ್ದಂತೆಯೇ ನನ್ನ ಮೆಚ್ಚಿನ ಕತೆಗಾರ ಬೊಳುವಾರು ಮೊಹಮ್ಮದ್ ಕುಂಞಯವರು ಮೊಬೈಲ್ ಕರೆ ಮಾಡಿದ್ದರು. ‘ನಿಮಗೆ ಥ್ಯಾಂಕ್ಸ್ ಹೇಳಲು ಫೋನ್ ಮಾಡುತ್ತಿದ್ದೇನೆಎಂದು ಬಿಟ್ಟರು. ‘ಯಾಕೆಎನ್ನುವುದು ಅರ್ಥವಾಗಲಿಲ್ಲ. ಅವರೇ ಮುಂದುವರಿಸಿದರು ‘‘ನಾನು ಬರೆಯುತ್ತಿರುವ ಕಾದಂಬರಿ 500 ಪುಟದಲ್ಲೇ ನಿಂತಿತ್ತು. ನೀವು ನನ್ನ ಬಗ್ಗೆ ಪತ್ರಿಕೆಯಲ್ಲಿ ಬರೆದಿದ್ದ ಲೇಖನವನ್ನು ಮೊನ್ನೆ ಓದಿದ ಬಳಿಕ ಮತ್ತೆ ಬರೆಯುವುದಕ್ಕೆ ಸ್ಫೂರ್ತಿ ಬಂತು. ಈಗ ಮತ್ತೆ ಬರಹ ಮುಂದುವರಿಸುತ್ತಿದ್ದೇನೆ. ಅದಕ್ಕಾಗಿ ನಿಮಗೆ ಥ್ಯಾಂಕ್ಸ್ ಹೇಳುತ್ತಿದ್ದೇನೆ’’ ಎಂದು ಬಿಟ್ಟರು. ಯಾವ ಲೇಖಕ ನಮ್ಮ ಬಾಲ್ಯವನ್ನು ತನ್ನ ಕತೆ,ಕಾದಂಬರಿಗಳ ಮೂಲಕ ಶ್ರೀಮಂತಗೊಳಿಸಿದ್ದನೋ, ಯಾವ ಲೇಖಕ ನಮ್ಮ ಚಿಂತನೆಗಳನ್ನು, ವಿಚಾರಗಳನ್ನು ತಿದ್ದಿ ತೀಡಿದ್ದನೋ, ಯಾವ ಲೇಖಕ ಅಕ್ಷರಗಳನ್ನು ಉಣಿಸಿ ನಮ್ಮನ್ನು ಬೆಳೆಸಿದ್ದನೋ ಲೇಖಕ ಏಕಾಏಕಿ ಹೀಗಂದು ಬಿಟ್ಚರೆ, ನಮ್ಮಂತಹ ತರುಣರ ಸ್ಥಿತಿಯೇನಾಗಬೇಕು? ಅಲ್ಲವೆ!? ‘‘ನಿಮ್ಮದು ದೊಡ್ಡ ಮಾತು...ಸಾರ್...’’ ಎಂದು ಬಿಟ್ಟೆ. ಆದರೆ ಅವರು ತುಸು ಭಾವುಕರಾಗಿದ್ದರು ಎಂದು ಕಾಣುತ್ತದೆ ‘‘ಇಲ್ಲ ಬಶೀರ್...ಇದು ನನ್ನ ಹೃದಯದಿಂದ ಬಂದ ಮಾತು...’’ ಎಂದರು.‘‘ಬರೆಯುವುದು ನಿಂತಾಗೆಲ್ಲ ನೀವು ನನ್ನ ಬಗ್ಗೆ ಬರೆದ ಲೇಖನವನ್ನು ಓದುತ್ತಾ...ಮತ್ತೆ ಬರೆಯಲು ಸ್ಫೂರ್ತಿ ಪಡೆಯುತ್ತೇನೆ’’ ಎಂದರು. ಈಗ ಭಾವುಕನಾಗುವ ಕ್ಷಣ ನನ್ನದು. ಬೊಳುವಾರರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಾಗ ಲೇಖನವನ್ನು ಬರೆದಿದ್ದೆ. ತುಸು ಅವಸರದಿಂದಲೇ ಗೀಚಿದ್ದೆ. ಅವರ ಬರಹಕ್ಕೆ ಸ್ಫೂರ್ತಿ ಕೊಡುವಷ್ಟು ಸುಂದರವಾಗಿದೆಯೇ ಅದು? ಅಥವಾ ತಮ್ಮ ಮಾತುಗಳ ಮೂಲಕ ನನಗೇ ಬರೆಯುವುದಕ್ಕೆ ಸ್ಫೂರ್ತಿ ಕೊಡುತ್ತಿದ್ದಾರೆಯೆ? ಕ್ಷಣಕ್ಕೆ ನನಗೆ ಅರ್ಥವಾಗಲಿಲ್ಲ. ಆದರೆ, ಅವರ ಮಾತುಗಳಹ್ಯಾಂಗೋವರ್ನಿಂದ ಇನ್ನೂ ನಾನು ಹೊರ ಬಂದಿಲ್ಲ. ಬೊಳುವಾರರ ಕುರಿತಂತೆ ನಾನು ಪತ್ರಿಕೆಯಲ್ಲಿ ಬರೆದ ಲೇಖನವನ್ನು ಇಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ.


ಬೊಳುವಾರು!
ಅದು ಎಂಬತ್ತರ ದಶಕದ ದಿನಗಳು.
ಪುತ್ತೂರು, ಉಪ್ಪಿನಂಗಡಿ ಆಸುಪಾಸಿನಲ್ಲಿ ಮಾತ್ರವಲ್ಲ, ದಕ್ಷಿಣ ಕನ್ನಡಾದ್ಯಂತ ಬೊಳುವಾರು ಎನ್ನುವ ಪುಟ್ಟ ಊರಿನ ಕುಖ್ಯಾತಿ ಹರಡಿತ್ತು. ದಕ್ಷಿಣಕನ್ನಡದ ಸಂಘಪರಿವಾರದ ಬೀಜ ಮೊಳಕೆ ಯೊಡೆದು ಹಬ್ಬಿದ್ದು ಇದೇ ಬೊಳುವಾರಿನಲ್ಲಿ. ಪುತ್ತೂರು ಆಗ ಸಂಪೂರ್ಣ ಬಿಜೆಪಿ ಮತ್ತು ಆರೆಸ್ಸೆಸ್ ಕೈ ವಶವಾಗಿತ್ತು. ಉರಿಮಜಲು ರಾಮಭಟ್ಟರು ಪುತ್ತೂರಿನ ಶಾಸಕರಾಗಿದ್ದ ಕಾಲ ಅದು. ಬೊಳುವಾರಿನ ಸಂಘಪರಿವಾರದ ಹುಡುಗರ ‘ಗ್ಯಾಂಗ್‌ವಾರ್’ಗಳು ಸುತ್ತಲಿನ ಪರಿಸರದಲ್ಲಿ ಕುಖ್ಯಾತಿಯನ್ನು ಪಡೆದಿದ್ದವು. ಉಪ್ಪಿನಂಗಡಿ ಆಸುಪಾಸಿನ ಮುಸ್ಲಿಮರು ಪುತ್ತೂರಿಗೆ ಕಾಲಿಡಲು ಅಂಜುತ್ತಿದ ದಿನಗಳದು. ಇಂತಹ ಸಂದರ್ಭದಲ್ಲೇ ಮುತ್ತಪ್ಪ ರೈ ಮತ್ತು ಆತನ ಹುಡುಗರ ಪ್ರವೇಶ ವಾಯಿತು. ವಿನಯಕುಮಾರ್ ಸೊರಕೆ ಎಂಬ ಯುವ ತರುಣ ರಾಜಕೀಯಕ್ಕೆ ಕಾಲಿಟ್ಟರು. ಉರಿಮಜಲು ರಾಮಭಟ್ಟರಿಂದ ಪುತ್ತೂರು ತಾಲೂಕಿನ ಜನ ಅದೆಷ್ಟು ಬೇಸತ್ತು ಹೋಗಿದ್ದ ರೆಂದರೆ, ಸೊರಕೆ ಹೆಸರು ಅಂದಿನ ವಿಧಾನಸಭಾ ಚುನಾವಣೆಯಲ್ಲಿ ಮಿಂಚಿನ ಸಂಚಾರವನ್ನೇ ಮಾಡಿತು. ಆ ಚುನಾವಣೆಯಲ್ಲಿ ಭಾರೀ ಬಹು ಮತದಿಂದ ವಿನಯಕುಮಾರ್ ಎನ್ನುವ ಅಮುಲ್ ಬೇಬಿ ಆಯ್ಕೆಯಾದರು. ಈ ಗೆಲುವು ಪುತ್ತೂರಿನ ಮೇಲೆ ಅದೆಷ್ಟು ಪರಿಣಾಮ ಬೀರಿ ತೆಂದರೆ, ನಿಧಾನಕ್ಕೆ ಕೋಮುಗಲಭೆ, ಗ್ಯಾಂಗ್ ವಾರ್‌ಗಳ ಸದ್ದಡಗಿತು. ಆರೆಸ್ಸೆಸ್‌ನ ಅಧಿನಾಯಕ ಕಲ್ಲಡ್ಕ ಪ್ರಭಾಕರ ಭಟ್ಟರ ಬಾವ ಉರಿಮಜಲು ರಾಮಭಟ್ಟರು ಶಾಶ್ವತ ಮೂಲೆ ಸೇರಿದರು. ನಿಧಾನಕ್ಕೆ ‘ಬೊಳವಾರ’ನ್ನು ಜನ ಮರೆಯತೊಡಗಿ ದರು.
ಇದೇ ಹೊತ್ತಲ್ಲಿ, ಇನ್ನೊಂದು ಭಿನ್ನ ಕಾರಣಕ್ಕಾಗಿ ಬೊಳುವಾರು ನನ್ನಲ್ಲಿ ಕುತೂಹಲವನ್ನು ಹುಟ್ಟಿಸಿತ್ತು. ಅಪರೂಪಕ್ಕೆಂದು ಪುತ್ತೂರು ಬಸ್ಸು ಹತ್ತಿದರೆ, ಇನ್ನೇನು ಪುತ್ತೂರು ತಲುಪಬೇಕು ಎನ್ನುವಷ್ಟರಲ್ಲಿ ಕಂಡಕ್ಟರ್ ‘‘ಯಾರ್ರೀ... ಬೊಳುವಾರು...ಇಳೀರಿ...’’ ಎನ್ನುತ್ತಿದ್ದ. ನಾನು ತಡೆಯ ಲಾರದ ಕುತೂಹಲ ದಿಂದ, ಕಿಟಕಿಯ ಮೂಲಕ ಬೊಳುವಾರನ್ನು ನೋಡಲೆಂದು ಇಣುಕು ತ್ತಿದ್ದೆ. ಯಾರೋ ನನ್ನ ಪರಿಚಿತರನ್ನು ಹುಡುಕು ವವನಂತೆ ಕಣ್ಣಾಡಿಸು ತ್ತಿದ್ದೆ. ಅಲ್ಲೇ ಎಲ್ಲೋ ಮುತ್ತುಪ್ಪಾಡಿ ಎನ್ನುವ ಹಳ್ಳಿ ಇರಬೇಕೆಂದು...ಜನ್ನತ್ ಕತೆಯಲ್ಲಿ ಬರುವ ಮೂಸಾ ಮುಸ್ಲಿಯಾರರು ಅಲ್ಲೇ ಎಲ್ಲೋ ಬಸ್‌ಗಾಗಿ ಕಾಯುತ್ತಿರಬಹುದೆಂದು...ಅಥವಾ ಆ ರಿಕ್ಷಾ ಸ್ಟಾಂಡ್‌ನಲ್ಲಿ ಕಾಯುತ್ತಿರುವ ಹಲವು ಗಡ್ಡಧಾರಿಗಳಲ್ಲಿ ಒಬ್ಬರು ಬೊಳುವಾರು ಮುಹಮ್ಮದ್ ಕುಂಞಿ ಎನ್ನುವ ನನ್ನ ಮೆಚ್ಚಿನ ಕತೆಗಾರರಾಗಿರಬಹುದೆಂದು ನನಗೆ ನಾನೇ ಕಲ್ಪಿಸಿಕೊಳ್ಳುತ್ತಿದ್ದೆ. ಕಂಡಕ್ಟರ್ ‘ರೈಟ್’ ಎಂದು ಹೇಳುವವರೆಗೂ ಆ ಬೊಳುವಾರನ್ನು ಅದೇನೋ ಅದ್ಭುತವನ್ನು ನೋಡುವಂತೆ ನೋಡುತ್ತಿದ್ದೆ. ಯಾರೋ ಕೆತ್ತಿಟ್ಟ ಚಿತ್ರದಂತೆ ಒಂದು ಕಾಲ್ಪನಿಕ ಬೊಳುವಾರು ನನ್ನಲ್ಲಿ ಗಟ್ಟಿಯಾಗಿ ನಿಂತಿತ್ತು.
ಬೊಳುವಾರಿನ ಹುಡುಗರ ‘ಗ್ಯಾಂಗ್‌ವಾರ್’ನ ಕಾಲದಲ್ಲೇ ಬೊಳುವಾರು ಮುಹಮ್ಮದ್ ಕುಂಞಿ ಯವರ ಕತೆಗಳು ತರಂಗ, ಉದಯವಾಣಿ ಯಲ್ಲಿ ಪ್ರಕಟವಾಗಲಾ ರಂಭಿಸಿದವು. ಆಗ ನಾನು ಬಹುಶಃ ಎಂಟನೆ ತರಗತಿಯಲ್ಲಿದ್ದಿರಬೇಕು. ಮನೆಗೆ ಅಣ್ಣ ತರಂಗ ತರುತ್ತಿದ್ದ. ಬಳಿಕ ಗೊತ್ತಾಯಿತು. ಅವನು ತರಂಗ ತರುತ್ತಿದ್ದದ್ದೇ ಅದರಲ್ಲಿರುವ ‘ಜಿಹಾದ್’ ಧಾರಾವಾಹಿಯನ್ನು ಓದುವುದಕ್ಕಾಗಿ. ಬೊಳುವಾರರ ಕತೆಗಳನ್ನು, ಕಾದಂಬರಿ ಯನ್ನು ಓದುತ್ತಿದ್ದ ಹಾಗೆ ನನಗೊಂದು ಅಚ್ಚರಿ. ಅರೆ...ಇಲ್ಲಿರುವ ಹೆಸರುಗಳೆಲ್ಲ ನಮ್ಮದೇ. ಮೂಸಾ ಮುಸ್ಲಿಯಾರ್, ಖೈಜಮ್ಮ, ಸುಲೇಮಾನ್ ಹಾಜಿ, ಮುತ್ತುಪ್ಪಾಡಿ...ಇವನ್ನೆಲ್ಲ ಕತೆ ಮಾಡ್ಲಿಕ್ಕೆ ಆಗ್ತದಾ...! ಎಲ್ಲಕ್ಕಿಂತ ಅವರು ಬಳಸುವ ಕನ್ನಡ ಭಾಷೆ. ನಾವು ಬ್ಯಾರಿ ಭಾಷೆ ಮಾತನಾಡಿದಂತೆಯೇ ಕೇಳುತ್ತದೆ. ನನ್ನ ಸುತ್ತಮುತ್ತ ನಾನು ಕಾಣುತ್ತಿರುವ, ಹೆಚ್ಚೇಕೆ ನನ್ನ ಮನೆಯೊಳಗಿನ ಮಾತುಕತೆಗಳೆಲ್ಲ ಅವರ ಕತೆಯೊಳಗೆ ಸೇರಿತ್ತು. ಅಣ್ಣನಂತೂ ಬೊಳುವಾರಿನ ಕತೆಗಳ ಮೋಡಿಗೆ ಸಿಲುಕಿ ಸಂಪೂರ್ಣ ಕಳೆದು ಹೋದದ್ದನ್ನು, ನಾನೂ ಬಾಲ್ಯದಲ್ಲಿ ತಂದೆ ತಾಯಿಗಳ ಪಾಲಿಗೆ ‘ದಾರಿತಪ್ಪಿ’ದ್ದನ್ನು ಈಗ ನೆನೆದರೆ ನಗು, ನಿಟ್ಟುಸಿರು!
ಜಿಹಾದ್ ಕಾದಂಬರಿ ಪುಸ್ತಕವಾಗಿ ಬಂದಾಗ ಅಣ್ಣ ಅದರ ಪ್ರತಿಯನ್ನು ತಂದಿದ್ದ. ಬಹುಶಃ ಆ ಕಾದಂಬರಿಯನ್ನು ಅವನು ತನಗೆ ತಾನೇ ಆವಾ ಹಿಸಿಕೊಂಡಿದ್ದನೇನೋ ಅನ್ನಿಸು ತ್ತದೆ. ಅದಕ್ಕೊಂದು ಕಾರಣ ವಿತ್ತು. ಅದರಲ್ಲಿ ಬರುವ ಕತಾ ನಾಯಕನ ಪಾತ್ರದ ಹೆಸರೂ, ಇವನ ಹೆಸರೂ ಒಂದೇ ಆಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಆ ಕಾದಂಬರಿಯಲ್ಲಿ ಬರುವ ಕ್ರಿಶ್ಚಿಯನ್ ಹೆಣ್ಣು ಪಾತ್ರಗಳಾದ ಸಲೀನಾ, ರೋಸಿಯಂತಹ ಒಳ್ಳೆಯ ಕ್ರಿಶ್ಚಿಯನ್ ಸ್ನೇಹಿತೆಯರು ಅವನಿಗೂ ಸ್ಕೂಲಲ್ಲಿದ್ದರು. ಅವನಾಗ ಪಿಯುಸಿ ಕಲಿಯುತ್ತಿದ್ದ. ಕಾಲೇಜಲ್ಲಿ ಅವನೊಂದು ಕೈಬರಹ ಪತ್ರಿಕೆಯನ್ನು ಸಂಪಾದಿಸುತ್ತಿದ್ದ (ಅವನೇ ಅದರ ಕಲಾವಿದನೂ ಆಗಿದ್ದ). ‘ಸ್ಪಂದನ’ ಅದರ ಹೆಸರು. ಅದರಲ್ಲಿ ಏನೇನೋ ಬರೆದು ಯಾರ್ಯಾರದೋ ನಿಷ್ಠುರ ಕಟ್ಟಿಕೊಂಡು, ಮೇಷ್ಟ್ರ ಕೈಯಲ್ಲಿ ಬೆನ್ನು ತಟ್ಟಿಸಿಕೊಂಡು ತನ್ನದೇ ಒಂದು ಬಳಗದ ಜೊತೆಗೆ ಓಡಾಡುತ್ತಿದ್ದ. ಅಲ್ಲೆಲ್ಲಾ ನಾನು ಬೊಳುವಾರು ಮುಹಮ್ಮದ್ ಕುಂಞಿ ‘ಫಿತ್ನ’ಗಳನ್ನು ಕಾಣು ತ್ತಿದ್ದೆ. ತನ್ನ ಪಿಯುಸಿ ಕಾಲದಲ್ಲಿ ಬೊಳುವಾರರ ತರಹ ಕತೆ ಗಳನ್ನು ಬರೆಯಲು ಪ್ರಯತ್ನಿಸು ತ್ತಿದ್ದ. ಆದರೆ ಬಳಿಕ, ಬೊಳು ವಾರು, ಫಕೀರರ ಪ್ರಭಾವ ದಿಂದ ಸಂಪೂರ್ಣ ಹೊರ ಬಂದು ಅವನದೇ ಭಾಷೆ, ಶೈಲಿ, ಸ್ವಂತಿಕೆಯುಳ್ಳ ಕೆಲವೇ ಕೆಲವು ಕತೆಗಳನ್ನು ಬರೆದು ಹೊರಟು ಹೋದ ಎನ್ನುವುದು ಬೇರೆ ವಿಷಯ. ಆದರೆ ನಾನು ಬೊಳು ವಾರರ ಕತೆಗಳಿಗೆ ಹತ್ತಿರವಾಗು ವುದಕ್ಕೆ ಅಣ್ಣನೇ ಕಾರಣ. ಅವನ ಪುಸ್ತಕಗಳ ಕಾಪಾಟು ನನ್ನ ಪಾಲಿಗೆ ಆಗ ಚಂದಮಾಮ ಕತೆಗಳಲ್ಲಿ ಬರುವ ಅಮೂಲ್ಯ ವಜ್ರ ವೈಢೂರ್ಯಗಳಿರುವ ತಿಜೋರಿ ಯಾಗಿತ್ತು. ಅದನ್ನು ಯಾವಾಗಲೂ ಅಣ್ಣ ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಿದ್ದ.
ಒಂದು ರೀತಿಯಲ್ಲಿ ಬೊಳುವಾರು ನನ್ನಲ್ಲಿ ಮಾತ್ರವಲ್ಲ, ನನ್ನ ಮನೆಯೊಳಗೇ ಒಂದು ಅರಾಜಕತೆಯನ್ನು ಸೃಷ್ಟಿ ಮಾಡಿ ಹಾಕಿದರೋ ಅನ್ನಿಸುತ್ತದೆ. ಅಣ್ಣನಲ್ಲಾದ ಬದಲಾವಣೆ ಮನೆ ಯೊಳಗೆ ಸಣ್ಣ ಪುಟ್ಟ ಗದ್ದಲಗಳನ್ನು ಸೃಷ್ಟಿಸತೊಡ ಗಿತು. ‘‘ಅಷ್ಟು ಚೆನ್ನಾಗಿ ನಮಾಜು ಮಾಡುತ್ತಿದ್ದ ಹುಡುಗನಿಗೆ ಇದೇನಾಯಿತು...?’’ ಎಂಬ ಅಣ್ಣನ ಮೇಲಿನ ಸಿಟ್ಟನ್ನು ತಾಯಿ ನನ್ನ ಮೇಲೆ ತೀರಿಸುತ್ತಿದ್ದರು. ಸೊಗಸಾಗಿ ಕಿರಾಅತ್‌ಗಳನ್ನು ಓದುತ್ತಾ, ಮೀಲಾದುನ್ನೆಬಿಯ ಸಮಯದಲ್ಲಿ ಹತ್ತು ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಳ್ಳುತ್ತಾ ಇದ್ದ ನಾನು ಕೆಲವೊಮ್ಮೆ ‘ಅಧಿಕ ಪ್ರಸಂಗ’ ಮಾತನಾಡುವುದು ತಾಯಿಗೆ ಸಿಟ್ಟು ತರಿಸುತ್ತಿತ್ತು. ಬೊಳುವಾರು ತಮ್ಮ ಕತೆಗಳಲ್ಲಿ ಎತ್ತಿದ ಪ್ರಶ್ನೆಗಳನ್ನು ನಾನು ಸಮಾಜದೊಳಗೆ ಎತ್ತಬೇಕು ಎನ್ನುವ ತುಡಿತ. ಒಂದು ರೀತಿ ಹುಚ್ಚು ಅನುಕರಣೆ. ಆ ಕಾಲ, ವಯಸ್ಸು ಅದಕ್ಕೆ ಕಾರಣ ಇರಬಹುದು. ಆದರೆ ನಿಧಾನಕ್ಕೆ ಬೊಳುವಾರು ತಮ್ಮ ಕತೆಗಳಲ್ಲಿ ಇನ್ನಷ್ಟು ಬೆಳೆಯುತ್ತಾ ಹೋದರು. ನಾವೂ ಬೆಳೆಯುತ್ತಾ ಹೋದೆವು.
ಆರಂಭದ ಬೊಳುವಾರರ ಕತೆಗಳಲ್ಲಿ ಅಸಾಧಾ ರಣ ಸಿಟ್ಟಿತ್ತು. ಬೆಂಕಿಯಿತ್ತು. ಆಗಷ್ಟೇ ಬೆಂಕಿಯ ಕುಲುಮೆಯಿಂದ ಹೊರ ತೆಗೆದ ಸಲಾಖೆಯಂತೆ ಧಗ ಧಗ ಹೊಳೆಯುತ್ತಿತ್ತು. ಬಹುಶಃ ನಮ್ಮ ಹದಿ ಹರೆಯಕ್ಕೆ ಆ ಕಾರಣದಿಂದಲೇ ಅದು ತುಂಬಾ ಇಷ್ಟವಾಗಿರಬೇಕು. ‘ದೇವರುಗಳ ರಾಜ್ಯದಲ್ಲಿ’ ಕಥಾಸಂಕಲನದಲ್ಲಿ ಇಂತಹ ಕತೆಗಳನ್ನು ಗುರುತಿಸಬಹುದು. ವ್ಯವಸ್ಥೆಯ ವಿರುದ್ಧ ಕಥಾನಾಯಕನ ಹಸಿ ಹಸಿ ಬಂಡಾಯ. ಬೊಳುವಾರರ ಆರಂಭದ ಎಲ್ಲ ಕತೆಗಳಲ್ಲೂ ಇದನ್ನು ಕಾಣಬಹುದು. ಆದರೆ, ‘ಆಕಾಶಕ್ಕೆ ನೀಲಿ ಪರದೆ’ಯ ಕತೆಗಳು ಅವರ ಕತಾ ಬದುಕಿನ ಎರಡನೆ ಹಂತ. ಇಲ್ಲಿ ಬೊಳುವಾರು ಮಹಮ್ಮದ್ ಕುಂಞಿವರ ಅದ್ಭುತ ಕಲೆಗಾರಿಕೆಯನ್ನು ಗುರುತಿಸಬಹುದು. ಬೊಳುವಾರರನ್ನು ಆರಂಭದಿಂದಲೇ ಓದಿಕೊಂಡು ಬಂದವರಿಗೆ ಈ ಬದಲಾವಣೆಯನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ತನ್ನ ಕತೆಯನ್ನು ಹೇಳಲು ಅದ್ಭುತವಾದ ರೂಪಕಗಳನ್ನು ಬಳಸುತ್ತಾರೆ. ವ್ಯಂಗ್ಯ, ತಮಾಷೆಗಳ ಕುಸುರಿಗಾರಿಕೆಯಿಂದ ಕತೆಯನ್ನು ಇನ್ನಷ್ಟು ಚಂದ ಕಾಣಿಸುತ್ತಾರೆ. ಅಂತಹದೊಂದು ಅದ್ಭುತ ಕತೆಗಳಲ್ಲಿ ‘ಇಬಾದತ್’ ಕೂಡ ಒಂದು. ‘ಪವಾಡ ಪುರುಷ’ರೆಂಬ ಜನರ ಮುಗ್ಧ ನಂಬಿಕೆಯ ನಡುವೆಯೇ ಮಿಠಾಯಿ ಅವುಲಿಯಾ ಆ ಊರಿನಲ್ಲಿ ಮಾಡುವ ಸಾಮಾಜಿಕ ಕ್ರಾಂತಿ, ದೇವರನ್ನು ತಲುಪುವ ಮನುಷ್ಯನ ಪ್ರಯತ್ನಕ್ಕೆ ಅವರು ತೋರಿಸುವ ಹೊಸ ದಾರಿ, ಜವುಳಿ ಹಾಜಿಯವರನ್ನು ‘ಯಾ ಸಿದ್ದೀಕ್’ ಎಂದು ಹಾಜಿಯವರೊಳಗಿನ ಭಕ್ತನನ್ನು ಕಂಡು ಮೂಕ ವಿಸ್ಮಿತ ರಾಗುವ ರೀತಿ ಎಲ್ಲವೂ ಕನ್ನಡಕ್ಕೆ ಹೊಸತು. ‘ಆಕಾಶಕ್ಕೆ ನೀಲಿ ಪರದೆ’ಯಲ್ಲಿ ಕತೆಗಾರನ ಸಿಟ್ಟು ತಣ್ಣಗಾಗಿದೆ. ವಿವೇಕ ಜಾಗೃತವಾಗಿದೆ. ಕುಲುಮೆಯಿಂದ ಹೊರ ತೆಗೆದ ಸಲಾಖೆಯನ್ನು ಬಡಿದು, ತಣ್ಣಗೆ ನೀರಿಗಿಳಿಸಲಾಗಿದೆ.
90ರ ದಶಕದ ನಂತರ ಬೊಳುವಾರರದು ಇನ್ನೊಂದು ಹಂತ. ಬಾಬರಿ ಮಸೀದಿ ವಿವಾದ ತುತ್ತ ತುದಿಗೇರಿದ ಸಂದರ್ಭದಲ್ಲಿ ಅವರ ಕತೆಗಳು ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುವುದನ್ನು ನಾವು ಕಾಣಬಹುದು. ಈ ಸಂದರ್ಭದಲ್ಲೇ ಅವರು ಬರೆದ ಸ್ವಾತಂತ್ರದ ಓಟ, ಒಂದು ತುಂಡು ಗೋಡೆ ಕತೆಗಳು ಕನ್ನಡ ಸಾಹಿತ್ಯದಲ್ಲಿ ಅಜರಾಮರವಾಗುಳಿವ ಕತೆಗಳು. ದೇಶದಲ್ಲಿ ಹೆಡೆಯೆತ್ತಿರುವ ಕೋಮುವಾದ, ಇಂತಹ ಸಂದರ್ಭದಲ್ಲಿ ಮುಸ್ಲಿಮನೊಬ್ಬ ಎದುರಿಸಬೇಕಾದ ದೇಶಪ್ರೇಮದ ಸವಾಲುಗಳನ್ನು ತಮ್ಮ ಕತೆಗಳಲ್ಲಿ ಅದ್ಭುತವಾಗಿ ಕಟ್ಟತೊಡಗಿದರು. ಬಾಬರಿ ಮಸೀದಿ ಧ್ವಂಸಗೊಂಡ ಸಂದರ್ಭದಲ್ಲಿ ಬರೆದ ಒಂದು ತುಂಡು ಗೋಡೆ, ಕೋಮುವಾದ ಹೇಗೆ ಹಳ್ಳಿ ಹಳ್ಳಿಗೂ ಕಾಲಿಟ್ಟು ಅಲ್ಲಿನ ಮುಗ್ಧ ಬದುಕಿಗೆ ಸವಾಲನ್ನು ಒಡ್ಡ ತೊಡಗಿವೆ ಎನ್ನುವುದನ್ನು ಹೇಳುತ್ತದೆ.
ಬೊಳುವಾರರು ಬರೆದ ‘ಸ್ವಾತಂತ್ರದ ಓಟ’ ನೀಳ್ಗತೆಯ ಓಟ ಇನ್ನೂ ನಿಂತಿಲ್ಲ. ಅದೀಗ ತನ್ನ ಓಟವನ್ನು ಮುಂದುವರಿಸಿದೆ. ನೀಳ್ಗತೆ ಸಾವಿರಾರು ಪುಟಗಳ ಕಾದಂಬರಿಯಾಗುತ್ತಿದೆ ಎನ್ನುವ ‘ಗುಟ್ಟ’ನ್ನು ಬೊಳುವಾರರು ಬಹಿರಂಗಪಡಿಸಿದ್ದಾರೆ. ಬೊಳುವಾರರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ಸಿಕ್ಕಿದ್ದಕ್ಕಿಂತಲೂ ದೊಡ್ಡ ಸಿಹಿ ಸುದ್ದಿ ಕನ್ನಡಿಗರಿಗೆ ಸಿಕ್ಕಿದೆ. ಬೊಳುವಾರರು ಏನು ಬರೆದರೂ ಅದು ಹೃದಯ ತಟ್ಟುವಂತೆಯೇ ಇರುತ್ತದೆ ಎನ್ನುವುದು ಕನ್ನಡಿಗರಿಗೆ ಗೊತ್ತಿದ್ದದ್ದ್ದೇ. ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಎನ್ನುವ ಮಕ್ಕಳ ಪದ್ಯಗಳ ಸಂಪಾದನೆಯನ್ನು ಹೊರತಂದರು. ಮಕ್ಕಳ ಪಾಲಿಗೆ ಅದೊಂದು ನಿಧಿಯೇ ಆಯಿತು. ಮಕ್ಕಳು ಮಾತ್ರವಲ್ಲ, ಹಿರಿಯರೂ ಅದನ್ನು ಚಪ್ಪಾಳೆ ತಟ್ಟುತ್ತಾ ಸ್ವಾಗತಿಸಿದರು. ಗಾಂಧೀಜಿಯನ್ನು ಮತ್ತೆ ಹೊಸದಾಗಿ, ಮುಗ್ಧವಾಗಿ ಕಟ್ಟಿಕೊಟ್ಟರು. ‘ಈ ಪಾಪು ಯಾರು?’ ಎಂದು ನಾವು ಕೆನ್ನೆ ಹಿಂಡಿ ನೋಡಿದರೆ, ಇದು ನಮ್ಮ ನಿಮ್ಮ ಬಾಪು!

ಇತ್ತೀಚೆಗೆ ಬೊಳುವಾರರು ಕತೆ ಬರೆಯುವುದನ್ನು ನಿಲ್ಲಿಸಿಯೇ ಬಿಟ್ಟರಲ್ಲ ಎಂಬ ಕೊರಗು ಕಾಡುತ್ತಿತ್ತು. ನಾನಂತೂ ಪ್ರತಿ ದೀಪಾವಳಿಯನ್ನು ಕಣ್ಣಲ್ಲಿ ಹಣತೆ ಹಚ್ಚಿ ಕಾಯುತ್ತಿದ್ದೆ. ಯಾಕೆಂದರೆ ಬೊಳುವಾರು ದೀಪಾವಳಿ ವಿಶೇಷಾಂಕಕ್ಕೆ ಮಾತ್ರ ಬರೆಯುತ್ತಿದ್ದರು. ಆದರೆ ಕೆಲವರ್ಷಗಳಿಂದ ಅದೂ ಇಲ್ಲ. ಇಂತಹ ಸಂದರ್ಭದಲ್ಲಿ, ತಾನು ಈವರೆಗೆ ಬರೆಯದೇ ಇದ್ದುದಕ್ಕೆ ಪಶ್ಚಾತ್ತಾಪವೋ ಎಂಬಂತೆ, ನಮ್ಮೆಲ್ಲರ ಆಸೆಯನ್ನು ಈಡೇರಿಸುವುದಕ್ಕೆ ‘ಬೃಹತ್ ಕಾದಂಬರಿ’ಯನ್ನು ನೀಡುವುದಾಗಿ ಹೇಳಿದ್ದಾರೆ. ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡುವುದಾಗಿಯೂ ಘೋಷಿಸಿದ್ದಾರೆ. ಕಾದಂಬರಿ ಈಗಾಗಲೇ 500 ಪುಟಗಳನ್ನು ದಾಟಿದೆ. 60ರ ದಶಕದವರೆಗಿನ ಕತೆಯಷ್ಟೇ ಪೂರ್ತಿಯಾಗಿದೆ. ಗುರಿ ತಲುಪುವುದಕ್ಕೆ ಇನ್ನೂ ಸಾಕಷ್ಟು ದೂರವಿದೆ.ಅಂದರೆ ಕನ್ನಡದ ಪಾಲಿಗೆ ಇದು ಬೃಹತ್ ಕಾದಂಬರಿಯೇ ಸರಿ. ಈ ದೇಶದ ಸ್ವಾತಂತ್ರೋತ್ತರ ಇತಿಹಾಸವನ್ನು ಈ ಮಹಾ ಕಾದಂಬರಿಯ ಮೂಲಕ ಮರು ಓದುವ ಅವಕಾಶ ನಮಗೆಲ್ಲ. ಬೊಳುವಾರರ ಈವರೆಗಿನ ಕತೆಗಳ ಪಾತ್ರಗಳೆಲ್ಲ ಮತ್ತೆ ಈ ಕಾದಂಬರಿಯಲ್ಲಿ ಮರುಜೀವ ಪಡೆಯಲಿದೆ. ಅವರ ವೃತ್ತಿ ಬದುಕಿನ ನಿವೃತ್ಥಿಗೆ ಇನ್ನು ಒಂದು ವರ್ಷ. ನಿವೃತ್ತಿಯ ದಿನವೇ ಅವರ ಕಾದಂಬರಿ ಬಿಡುಗಡೆಯಾಗಲಿದೆಯಂತೆ. ಬೊಳುವಾರು ವೃತ್ತಿಯಿಂದ ನಿವೃತ್ತರಾಗಲಿ. ಆದರೆ ಪ್ರವೃತ್ತಿಯಿಂದ ದೂರ ಸರಿಯದಿರಲಿ. ಬದಲಿಗೆ ಇನ್ನಷ್ಟು ಹತ್ತಿರವಾಗಲಿ. ಅವರಿಂದ ಇನ್ನೂ ಕತೆ, ಕಾದಂಬರಿಗಳು ಹುಟ್ಟಿ ಬರಲಿ. ಆ ಕತೆ, ಕಾದಂಬರಿಯ ಮೂಲಕ, ಇನ್ನಷ್ಟು ಸೃಜನಶೀಲ, ಸಂವೇದನಾ ಶೀಲ ಬರಹಗಾರರು ಹುಟ್ಟಲಿ. ನನ್ನ ಮೆಚ್ಚಿನ ಕತೆಗಾರ ಬೊಳುವಾರರಿಗೆ ಅಭಿನಂದನೆಗಳು.

Tuesday, January 25, 2011

ಗೊತ್ತಾಗಲಿಲ್ಲ!

ನಾಲ್ಕು ಸಾಲಿನ ಬರಹವೊಂದು ಇಲ್ಲಿದೆ. ಇದನ್ನು ಕತೆಯೆಂದು ಕರೆಯಬಹುದಾ?
ಅವರಿಬ್ಬರು ಜೊತೆಯಾಗಿ ನಮಾಝ್ ಮಾಡುತ್ತಿದ್ದರು.


ನಮಾಝ್‌ನ ಬಳಿಕ ಆತ ಹೇಳಿ
‘‘ನಮಾಝ್‌ನ ಸಂದರ್ಭದಲ್ಲಿ ನೀನು ನಿಂತ ಭಂಗಿ, ಕೈ ಕಟ್ಟಿದ ರೀತಿ ಯಾವುದೂ ಸರಿ ಇರಲಿಲ್ಲ’’

ಈತ ವಿನೀತನಾಗಿ ಉತ್ತರಿಸಿದ ‘‘ಹೌದಾ!? ನನ್ನ ಗಮನವೆಲ್ಲ ನನ್ನ ಮುಂದಿದ್ದ ದೇವರೆಡೆಗಿತ್ತು. ಆದುದರಿಂದ ನನಗೆ ಗೊತ್ತಾಗಲಿಲ್ಲ. ದಯವಿಟ್ಟು ಕ್ಷಮಿಸು’’

Thursday, January 20, 2011

ಟಾಲ್‌ಸ್ಟಾಯ್ ಮತ್ತು ಶುಕ್ರವಾರದ ನಮಾಝ್


ಗೆಳೆಯರೇ ಈ ಬರಹ ನನ್ನ ಪ್ರೀತಿಯ ಗುರುಗಳೊಬ್ಬರು ನಿವೃತ್ತರಾದ ಸಂದರ್ಭದಲ್ಲಿ ಬರೆದುದು. ಇದನ್ನು ಓದಿದ ಬಳಿಕ ನಿಮ್ಮ ಮೆಚ್ಚಿನ ಗುರುವಿನ ಬಗ್ಗೆ ಎರಡು ವಾಕ್ಯಗಳನ್ನು ಕೆಳಗಿನ ‘ಕಮೆಂಟ್ಸ್’ನಲ್ಲಿ ಬರೆಯಲು ಸಾಧ್ಯವೇ ನೋಡಿ. ನಾವೆಲ್ಲರೂ ನಮ್ಮ ನಮ್ಮ ನೆಚ್ಚಿನ ಗುರುಗಳನ್ನು ಪರಸ್ಪರ ಹಂಚಿಕೊಳ್ಳೋಣ.


ನನ್ನ ಬಾಲ್ಯವನ್ನು ಸುತ್ತಿಕೊಂಡ ಹಲವು ನೆನಪುಗಳ ಬಳ್ಳಿಗಳಲ್ಲಿ ನಾನು ಮೊತ್ತ ಮೊದಲು ಶುಕ್ರವಾರದ ನಮಾಝನ್ನು ತಪ್ಪಿಸಿಕೊಂಡ ದಿನವೂ ಒಂದು. ವಿಚಿತ್ರವೆಂದರೆ ಈ ಬಳ್ಳಿ ತುಸು ಮಿಸುಕಾಡಿದರೂ, ಅಲ್ಲೊಬ್ಬ ಗುರು, ಜೊತೆಗೆ ಟಾಲ್‌ಸ್ಟಾಯ್, ಆತನ ಕತೆಯೊಂದರಲ್ಲಿ ಬರುವ ಹತ್ತು ಹಲವು ಪಾತ್ರಗಳು ಘಮ್ಮೆಂದು ಕಣ್ಣರಳಿಸುತ್ತವೆ.
***


ಏಳನೆ
ತರಗತಿ ಮುಗಿದದ್ದೇ ನನ್ನನ್ನು ದೂರದ ನೆಲ್ಯಾಡಿಯಲ್ಲಿರುವ ಸಂತ ಜೋರ್ಜ್ ಪ್ರೌ
ಢ ಶಾಲೆಗೆ ಸೇರಿಸಲಾಯಿತು. ಸುತ್ತಮುತ್ತಲಿನ ಪರಿಸರದಲ್ಲೆಲ್ಲ ಆ ಶಾಲೆ ಸಾಕಷ್ಟು ಹೆಸರು ಗಳಿಸಿತ್ತು. ಸ್ಥಳದ ಕೊರತೆ, ಕೊಠಡಿಯ ಕೊರತೆ ಇತ್ಯಾದಿಗಳಿದ್ದರೂ, ಮೇಷ್ಟ್ರುಗಳ ಅಪಾರ ಶ್ರಮ, ಶ್ರದ್ಧೆಯ ಕಾರಣದಿಂದ ಈ ಶಾಲೆ ಗುರುತಿಸಲ್ಪಟ್ಟಿತ್ತು. ನನ್ನೊಂದಿಗೆ ನನ್ನ ಸೋದ ಮಾವಂದಿರ ನಾಲ್ವರು ಹುಡುಗರೂ ಬರುತ್ತಿದ್ದರು. ಬಂಧುಗಳು, ಸ್ನೇಹಿತರು ಎಲ್ಲವೂ ಆಗಿರುವ ಕಾರಣದಿಂದ ನಾವು ಐದು ಮಂದಿ ಒಟ್ಟಾಗಿಯೇ ಇರುತ್ತಿದ್ದೆವು. ನಾವು ಕಲಿಯುವುದಕ್ಕೆ ದಡ್ಡರಾಗಿದ್ದರೂ, ದೂರದ ಉಪ್ಪಿನಂಗಡಿಯಿಂದ ಬರುತ್ತಿರುವ ಮಕ್ಕಳೆಂದೂ, ಪ್ರಪ್ರಥಮವಾಗಿ ಪ್ಯಾಂಟ್ ಹಾಕಿ ಇನ್‌ಶರ್ಟ್ ಮಾಡಿಕೊಂಡು ಬರುತ್ತಿದ್ದ ಮಕ್ಕಳೆಂದು, ನಮ್ಮಲ್ಲೇ ಒಂದಿಬ್ಬರು ಕ್ರೀಡೆಯಲ್ಲಿ ಮೊದಲಿಗರಾಗಿದ್ದರೆಂದೂ, ನಾನು ಕವಿ ಬಿ. ಎಂ. ಇದ್ದಿನಬ್ಬರ ತಮ್ಮನ ಮಗನೆಂದು, ಎಲ್ಲಕ್ಕಿಂತ ಮುಖ್ಯವಾಗಿ ಉಪ್ಪಿನಂಗಡಿಯ ಮಕ್ಕಳು ಪಾಠದ ಬದಲಿಗೆ ಪುಂಡಾಟದಲ್ಲೇ ಹೆಚ್ಚು ಆಸಕ್ತಿ ಹೊಂದಿರುತ್ತಾರೆನ್ನುವ ಪೂರ್ವಗ್ರಹದ ಕಾರಣಕ್ಕಾಗಿಯೂ ಶಾಲೆಯಲ್ಲಿ ಎಲ್ಲ ವಿದ್ಯಾರ್ಥಿಗಳ, ಮೇಷ್ಟ್ರುಗಳ ಕಣ್ಣಿಗೆ ಬಿದ್ದಿದ್ದೆವು. ಇದಲ್ಲದೆ ಮತ್ತೊಂದು ಮುಖ್ಯ ಕಾರಣವೂ ಇತ್ತು. ನಾವು ಅದಾಗಲೇ ಮದರಸದಿಂದ ಹೊರ ಬಿದ್ದ ಮಕ್ಕಳು. ನಮಾಝ್- ಅದರಲ್ಲೂ ಶುಕ್ರವಾರದ ನಮಾಝನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಧಾರ್ಮಿಕವಾಗಿ ಶ್ರದ್ಧಾವಂತರಾಗಿದ್ದುದರಿಂದ ನಮ್ಮ ನಮ್ಮ ಮನೆಯವರೂ ಕೂಡ, ನಮ್ಮನ್ನು ಶಾಲೆಗೆ ದಾಖಲು ಮಾಡಿದ ಸಂದರ್ಭದಲ್ಲಿ ಐವರು ವಿದ್ಯಾರ್ಥಿಗಳಿಗೂ ‘‘ಶುಕ್ರವಾರದ ನಮಾಝ್’’ಗೆ ತೆರಳಲು ಅನುಮತಿ ನೀಡಬೇಕು ಎಂದು ವಿನಂತಿಸಿಕೊಂಡಿದ್ದರು. ಶಾಲೆಯ ಮಧ್ಯಾಹ್ನದ ಕೊನೆಯ ಗಂಟೆ 1.15ಕ್ಕೆ ಬಾರಿಸುತ್ತಿತ್ತು. ಮಸೀದಿಯಲ್ಲಿ ಶುಕ್ರವಾರದ ನಮಾಝ್ 12-45ಕ್ಕೆ ಆರಂಭವಾಗುತ್ತಿತ್ತು. ಶಾಲೆಯ ಪ್ರಾಂಶುಪಾಲರು ಅಬ್ರಹಾಂ ವರ್ಗೀಸ್ ಎನ್ನುವವರಾಗಿದ್ದರು. ಆ ಶಾಲೆಯನ್ನು ಕಟ್ಟಿ ಬೆಳೆಸಿದ ಹೆಗ್ಗಳಿಕೆ ಅವರದು. ವಿದ್ಯಾರ್ಥಿಗಳಿಗೆ ಶುಕ್ರವಾರದ ನಮಾಝಿಗೆ ಅನುಮತಿ ನೀಡಬೇಕೆಂದು ಕೇಳಿಕೊಂಡಾಗ ಅವರು ಧಾರಾಳವಾಗಿ ಒಪ್ಪಿಗೆ ನೀಡಿದ್ದರು. ಆ ಕುರಿತಂತೆ ಇತರ ಶಿಕ್ಷಕರಿಗೆ ಸೂಚನೆಯನ್ನೂ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶುಕ್ರವಾರದಂದು, ಅದೆಂತಹ ಪಾಠವಿರಲಿ, ಮಧ್ಯಾಹ್ನ 12-45ಕ್ಕೆ ಸರಿಯಾಗಿ ನಾವು ಐದು ಮಂದಿ ಒಮ್ಮೆಲೇ ಎದ್ದು ನಿಲ್ಲುತ್ತಿದ್ದೆವು. ಇಡೀ ತರಗತಿಯ ಅಷ್ಟೂ ಕಣ್ಣುಗಳು ಆ ಸಂದರ್ಭದಲ್ಲಿ ನಮ್ಮೆಡೆಗೆ ಹೊರಳುತ್ತಿದ್ದವು. ಶಿಕ್ಷಕರು ಹೊರ ಹೋಗುವುದಕ್ಕೆ ಅನುಮತಿ ನೀಡುತ್ತಿದ್ದರು. ನಾವು ತರಗತಿಯಿಂದ ಹೊರ ಹೋಗುತ್ತಿರುವುದನ್ನು ಅಷ್ಟೂ ವಿದ್ಯಾರ್ಥಿಗಳು ಹೊಟ್ಟೆ ಕಿಚ್ಚಿನಿಂದ ನೋಡುತ್ತಿದ್ದರು. ಶುಕ್ರವಾರದ ಬೆಳಗ್ಗಿನ ಕೊನೆಯ ತರಗತಿ ವಿಜ್ಞಾನವಾಗಿತ್ತು. ವಿಜ್ಞಾನ ನನ್ನ ಪಾಲಿಗೆ ಅದೆಷ್ಟು ಸಂಕಟದ ವಿಷಯವಾಗಿತ್ತು ಎಂದರೆ, ಪಾಠ ಕೇಳುತ್ತಾ ಕೇಳುತ್ತಾ ನಿದ್ದೆಗೆ ಜಾರುತ್ತಿದ್ದ ನನ್ನನ್ನು ಮೇಷ್ಟ್ರ ಛಡಿಯೇಟು ಮತ್ತೆ ತರಗತಿಗೆ ತಂದಿಳಿಸುತ್ತಿತ್ತು. ವಿಜ್ಞಾನ ತರಗತಿಯಲ್ಲಿ ಹಗಲುಗನಸು ಕಾಣುತ್ತಾ, ನನ್ನದೇ ಜಗತ್ತೊಂದಕ್ಕೆ ಜಾರಿಕೊಳ್ಳುವುದು ನನಗೆ ಇಷ್ಟದ ಸಂಗತಿಯಾಗಿತ್ತು. ವಿಜ್ಞಾನದ ಮೇಷ್ಟ್ರು ಕೇಳಿದ ಒಂದೇ ಒಂದು ಪ್ರಶ್ನೆಗೆ ಉತ್ತರಿಸಿದ ನೆನಪು ನನಗಿಲ್ಲ. ಶುಕ್ರವಾರದಂದು ಮಾತ್ರ ಮಧ್ಯಾಹ್ನದ ನಮಾಝ್ ಈ ವಿಜ್ಞಾನ ತರಗತಿಯಿಂದ ನನ್ನನ್ನು ಪಾರು ಮಾಡುತ್ತಿತ್ತು. ವಿಜ್ಞಾನ ಮೇಷ್ಟ್ರು ಅತ್ಯುತ್ಸಾಹದಿಂದ ಪಾಠ ಹೇಳುವುದರಲ್ಲಿ ತನ್ಮಯರಾಗಿದ್ದಾಗ, ನಾವು ಅವರೊಂದಿಗೆ ಸೇಡು ತೀರಿಸಿಕೊಳ್ಳುವವರಂತೆ 12-45ಕ್ಕೆ ಸರಿಯಾಗಿ ‘ಸಾರ್...’ ಎಂದು ಅವರ ತನ್ಮಯತೆಯನ್ನು ಭಂಗಗೊಳಿಸುತ್ತಿದ್ದೆವು. ಪಾಠದ ಓಘವನ್ನು ಕೆಡಿಸಿದ ನಮ್ಮನ್ನು ದುರುಗುಟ್ಟಿ ನೋಡುತ್ತಾ ಮೇಷ್ಟ್ರು ‘‘ಹೋಗಿ...ಒಮ್ಮೆ ಇಲ್ಲಿಂದ ಹೋಗಿ....’’ ಎನ್ನುತ್ತಿದ್ದರು. ಪಾಠ ನಡೆಯುತ್ತಿದ್ದಾಗ ಮಧ್ಯದಲ್ಲೇ ನಾವು ಎದ್ದು ನಿಂತು, ಇಡೀ ತರಗತಿಯ ಏಕಾಗ್ರತೆಯನ್ನು ಕೆಡಿಸುವುದು ಅವರಿಗೆ ಅಸಾಧ್ಯದ ಸಿಟ್ಟು ತರಿಸುತ್ತಿತ್ತು. ಆದರೆ ಪ್ರಿನ್ಸಿಪಾಲರ ಕಟ್ಟುನಿಟ್ಟಿನ ಸೂಚನೆಯಿದ್ದುದರಿಂದ ಅವರು ಅಸಹಾಯಕರಾಗಿದ್ದರು. ನನಗಂತೂ ಶುಕ್ರವಾರದ ವಿಜ್ಞಾನದ ತರಗತಿಯಲ್ಲಿ ಒಮ್ಮಿಂದೊಮ್ಮೆಗೆ ಎದ್ದು ನಿಂತು ‘‘ಸಾರ್...’’ ಎಂದು ಕರೆಯುವುದು ಅತ್ಯಂತ ಇಷ್ಟದ ಸಂಗತಿಯಾಗಿತ್ತು. ‘‘ಈ ಮಹಾಶಯ ಒಂದು ದಿನವಾದರೂ ಪಾಠಕ್ಕೆ ಸಂಬಂಧಿಸಿದಂತೆ ಹೀಗೆ ಎದ್ದು ನಿಂದು ‘ಸಾರ್’ ಎಂದು ಕರೆದದ್ದಿದೆಯ?’’ ಎಂದು ಮೇಷ್ಟ್ರು ಕಿಡಿಕಾರುತ್ತಿದ್ದರು. ನಮಾಝ್ ಹೆಸರಿನಲ್ಲಿ ಕ್ಲಾಸಿನಿಂದ ಹೊರಗೆ ಬರುವಾಗ, ಹೊರಗಿನ ಮಧ್ಯಾಹ್ನದ ಆ ಸುಡು ಗಾಳಿಯನ್ನು ‘ಆಹಾ...’ ಎಂದು ಆಸ್ವಾದಿಸುತ್ತಿದ್ದೆ. ಇದು ಹೀಗೆಯೇ ಮುಂದುವರಿಯುತ್ತಿತ್ತು. ಅಂದು ಶುಕ್ರವಾರ. ವಿಜ್ಞಾನದ ಮೇಷ್ಟ್ರು ಯಾವುದೋ ಕಾರಣಕ್ಕೆ ರಜೆಯಲ್ಲಿದ್ದರು. ವಿಜ್ಞಾನದ ತರಗತಿ ಇಲ್ಲದಿರುವ ಖುಷಿಗೆ ಸಮನಾದದ್ದು ಇನ್ನೊಂದಿಲ್ಲ ಎನ್ನುವಂತೆ ಅದನ್ನು ಅನುಭವಿಸುತ್ತಿದ್ದೆ. ಬೆಳಗ್ಗಿನ ಕೊನೆಯ ತರಗತಿಯಲ್ಲಿ ಇನ್ನೇನು ನಾನು ಪತ್ತೇದಾರಿ ಕಾದಂಬರಿಯೊಂದನ್ನು ಬಿಡಿಸಿಟ್ಟು ಓದಬೇಕು ಎನ್ನುವಷ್ಟರಲ್ಲಿ ಶಾಲೆಯ ಪ್ರಿನ್ಸಿಪಾಲ್ ಅಬ್ರಹಾಂ ವರ್ಗೀಸರು ಇಂಗ್ಲಿಷ್ ಪಠ್ಯವನ್ನು ಹಿಡಿದುಕೊಂಡು ಬಂದರು. ಅದು ನಮಗೆ ಅನಿರೀಕ್ಷಿತವಾಗಿತ್ತು. ನಮ್ಮ ತರಗತಿಗೆ ಪ್ರಿನ್ಸಿಪಾಲರು ಬರುವುದು ತೀರಾ ಅಪರೂಪ. ನಾವೆಲ್ಲ ಒಳ್ಳೆಯ ಮಕ್ಕಳ ಮುಖಭಾವದಿಂದ ಕುಳಿತೆವು. ಅವರು ತರಗತಿ ಪ್ರವೇಶಿಸಿದವರು ನಮ್ಮನ್ನೆಲ್ಲ ಪರಿಚಯಿಸಿಕೊಂಡ ಬಳಿಕ ಇಂಗ್ಲಿಷ್ ಪಠ್ಯದಿಂದ ಟಾಲ್‌ಸ್ಟಾಯ್ ಅವರ ಕತೆಯೊಂದನ್ನು ಆಯ್ಕೆ ಮಾಡಿಕೊಂಡರು. ನೋಡು ನೋಡುತ್ತಿದ್ದಂತೆಯೇ ಟಾಲ್‌ಸ್ಟಾಯ್ ಕತೆ ಅಬ್ರಹಾಂ ವರ್ಗೀಸರ ಮೂಲಕ ತೆರೆದುಕೊಂಡ ರೀತಿಗೆ ಇಡೀ ತರಗತಿ ಮಾರು ಹೋಯಿತು. ಅದೊಂದು ನೆರೆ-ಹೊರೆಯ ಜಗಳದ ಕತೆ. ಒಂದು ಸಣ್ಣ ದ್ವೇಷದ ಕಿಡಿ ಹಂತ ಹಂತವಾಗಿ ಹರಡಿ ಇಡೀ ಊರನ್ನೇ ಹೇಗೆ ಆಹುತಿ ತೆಗೆದುಕೊಂಡಿತು ಎನ್ನುವುದು ಕತೆಯ ವಸ್ತು. ಈ ಜಗಳವನ್ನು ತಡೆಯುವುದಕ್ಕೆ ‘ಗ್ಯಾಬ್ರಿಯಲ್’ ಎನ್ನುವ ಮುದುಕ ಮಾಡುವ ಪ್ರಯತ್ನ, ಆತನ ವೈಫಲ್ಯ, ಗ್ಯಾಬ್ರಿಯಲ್ ಮಗನ ಸಿಟ್ಟು, ಸೊಸೆಯ ಹಟಮಾರಿತನ ಇತ್ಯಾದಿಗಳನ್ನು ಅವರು ಅಭಿನಯಿಸುತ್ತಾ ನಮ್ಮ ಮುಂದಿಡುತ್ತಿದ್ದರು. ನಮ್ಮ ತರಗತಿಯಲ್ಲಿ ಒಂದು ಊರೇ ತೆರೆದುಕೊಂಡಿತ್ತು. ವಿವಿಧ ಪಾತ್ರಗಳು ಅಬ್ರಹಾಂ ವರ್ಗೀಸರ ಮೂಲಕ ಅಲ್ಲಿ ಜೀವ ತಳೆಯುತ್ತಿದ್ದವು. ಕೋಲೂರುತ್ತಾ ನಡುಗು ಕಂಠದಿಂದ ಮಗನಿಗೆ ಬುದ್ಧಿವಾದ ಹೇಳುವ ಗ್ಯಾಬ್ರಿಯಲ್‌ನ್ನು ಅದೇ ತರಹ ಅಭಿನಯಿಸಿ ತೋರಿಸುವಾಗ ಇಡೀ ತರಗತಿ ಗ್ಯಾಬ್ರಿಯಲ್ ಜೊತೆಗಿತ್ತು. ಕಡಲಿನೆಡೆಗೆ ಸಾಗುವ ನದಿಯಂತೆ ಅವರ ಪಾಠ ಹರಿಯುತ್ತಿತ್ತು. ನಮ್ಮ ಮುಂದೆ ಅಬ್ರಹಾಂ ವರ್ಗೀಸರು ಇದ್ದೇ ಇರಲಿಲ್ಲ. ಅಲ್ಲಿ ಟಾಲ್‌ಸ್ಟಾಯ್ ಕತೆಯ ವಿವಿಧ ಪಾತ್ರಗಳು ಓಡಾಡುತ್ತಿದ್ದವು. ನಾವು ಕೂಡ ಅಷ್ಟೇ, ತರಗತಿಯಿಂದ ಟಾಲ್‌ಸ್ಟಾಯ್ ಜಗತ್ತಿಗೆ ಎತ್ತಿ ಎಸೆಯಲ್ಪಟ್ಟಿದ್ದೆವು. ಹೀಗೆ ಸಾಗುತ್ತಿದ್ದಂತೆಯೇ ಒಮ್ಮೆಲೆ ಅವರು ಪಾಠವನ್ನು ನಿಲ್ಲಿಸಿದರು. ತಮ್ಮ ಗಡಿಯಾರದತ್ತ ಕಣ್ಣಾಯಿಸಿದರು. ನನ್ನನ್ನು ಮತ್ತು ನನ್ನ ನಾಲ್ವರು ಗೆಳೆಯರನ್ನು ನಿಲ್ಲಿಸಿದ ಅವರು ‘‘ನಮಾಝಿಗೆ ಸಮಯವಾಯ್ತು. ಹೊರಡಿ’’ ಎಂದರು. ನನ್ನ ನಾಲ್ವರು ಗೆಳೆಯರು ಗಡಿಬಿಡಿಯಿಂದ ಎದ್ದು ಹೊರಟರು. ಆದರೆ ನನಗ್ಯಾಕೋ ತರಗತಿಯಿಂದ ಹೊರ ಹೋಗುವುದು ಇಷ್ಟವಿರಲಿಲ್ಲ. ನನ್ನತ್ತ ನೋಡಿ ‘‘ಹೋಗು ಹೋಗು ಹೊತ್ತಾಯ್ತು’’ ಎಂದರು. ನಾನು ತಡವರಿಸುತ್ತಾ ‘‘ಇವತ್ತು ನಾನು ಹೋಗುವುದಿಲ್ಲ ಸಾರ್...’’ ಎಂದೆ. ‘‘ಯಾಕೆ?’’ ನನ್ನಲ್ಲಿ ಉತ್ತರವಿರಲಿಲ್ಲ. ಅಬ್ರಹಾಂ ವರ್ಗೀಸ್ ನಕ್ಕು ‘‘ಸರಿ....’’ ಎಂದರು. ನಾನು ಕೂತೆ. ಮತ್ತೆ ತರಗತಿಯಲ್ಲಿ ಟಾಲ್‌ಸ್ಟಾಯ್ ಜಗತ್ತು ನಿಧಾನಕ್ಕೆ ತೆರೆದುಕೊಳ್ಳತೊಡಗಿತು.
***

ಳೆದ್ ತಿಂಗಳು ನನ್ನ ಮೆಚ್ಚಿನ ಅಬ್ರಹಾಂ ವರ್ಗೀಸ್ ಮೇಷ್ಟ್ರು ಉದ್ಯೋಗದಿಂದ ನಿವೃತ್ತರಾದರು. ಅವರಿಗೆ ಊರವರೆಲ್ಲ ಸೇರಿ ನೆಲ್ಯಾಡಿಯ ಸಂತ ಜೋರ್ಜ್ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಅದ್ದೂರಿಯ ಸನ್ಮಾನವನ್ನು ಏರ್ಪಡಿಸಿದ್ದರು. ಆ ಸಮಾರಂಭದಲ್ಲಿ ಭಾಗವಹಿಸಲು ನನಗೆ ಸಾಧ್ಯವಾಗಲಿಲ್ಲ. ಆದರೆ, ನನ್ನಂತಹ ಸಾವಿರಾರು ವಿದ್ಯಾರ್ಥಿಗಳ ಮನದಂಗಳದಲ್ಲಿ ಅವರಿಗೆ ನಿತ್ಯವೂ ಸನ್ಮಾನವೇ.

Sunday, January 16, 2011

ತಂಗಿ ಬರೆದಿದ್ದಾಳೆ....

ಗೆಳೆಯರೇ, ನಾನು ಮುಂಬಯಿಯಲ್ಲಿ ಎಂ.ಎ. ಮಾಡುತ್ತಿದ್ದ ಸಂದರ್ಭದಲ್ಲಿ ಬರೆದ ಕವಿತೆ ಇದು. ಬಳಿಕ ನನ್ನ ಮೊದಲ ಕವನ ಸಂಕಲನ ‘ಪ್ರವಾದಿಯ ಕನಸು’ ಕೃತಿಯಲ್ಲಿ ಈ ಕವನ ಪ್ರಕಟಗೊಂಡಿತು. 1996ರಲ್ಲಿ ಈ ಕೃತಿಗೆ ‘ಮುದ್ದಣ ಕಾವ್ಯ ಪ್ರಶಸ್ತಿ’ಯೂ ದೊರಕಿತ್ತು. ನನ್ನ ತೀರಾ ಹಳೆಯ ಈ ಕವಿತೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನ್ನಿಸಿತು. ಹಂಚಿಕೊಂಡಿದ್ದೇನೆ.


ನನ್ನ ಪುಟ್ಟ ತಂಗಿಗೀಗ ತಿಳಿದು ಹೋಗಿದೆ
ನಾ ಕೊಟ್ಟ ವಿಲು ಗರಿಗೆ ಎಂದೂ
ಜೀವ ಬರುವುದಿಲ್ಲ ಎಂದು
ಪತ್ರದಲ್ಲಿ ತಿಳಿಸಿದ್ದಾಳೆ
ನಾನೀಗ ಬೆಳೆದಿದ್ದೇನೆ!
ಹಾರಿ ಬಿಟ್ಟ ಗಾಳಿಪಟ
ದೈತ್ಯ ವೃಕ್ಷದ ಎದೆಗೂಡೊಳಗೆ ಸಿಕ್ಕಿ
ಹರಿದು ಚೆಲ್ಲಾಪಿಲ್ಲಿಯಾದ ಬಗೆ;
ನಿನ್ನೆಯ ಮುಂಗಾರು ಮಳೆ ತಿಳಿಸಿ ಹೋಗಿದೆ...
ನೀ ಕೊಟ್ಟ ಕಾಗದದ ದೋಣಿ
ಅದರೊಳಗೇ ಕರಗಿ ಡಲ ಸೇರಿದೆ!

ತಿಳಿಸಿದ್ದಾಳೆ-
ಏಳು ಕೋಟೆಯ ಒಳಗಿರುವ
ಮಲ್ಲಿಗೆ ತೂಕ ರಾಜಕುಮಾರಿ
ಕುದುರೆಯೇರಿ ಬರುವ ರಾಜಕುವರನ
ಕಾದು-ಸೋತು
ತಾನೇ ಕೋಟೆಯೇರುವ ಹುನ್ನಾರ ನಡೆಸಿದ
ಹೊಸ ಕಥೆ!
ಪಶ್ಚಿಮದ ಗಾಳಿ ಅವಳ ಕೆನ್ನೆ ಸವರಿ
ಉಸುರಿದ ಬಗೆ
ತಿಳಿಸಿದ್ದಾಳೆ ಪತ್ರದಲ್ಲಿ....

ನೀ ಮುತ್ತಿಕ್ಕಿದ ಹಾಲ್ಗೆನ್ನೆಯಲ್ಲೀಗ
ಮೊಡವೆಯೆದ್ದು ಕೀವು ತುಂಬಿದೆ
ಅದೀಗ ಒಡೆಯುವುದಕ್ಕೆ ಕಾದು ನಿಂತಿದೆ!

Wednesday, January 12, 2011

ಹೀಗೊಂದು ಮುಖಾಮುಖಿ...!


ಆತ ಅಮಾಯಕ. ಒಂದಿಷ್ಟು ಧಾರ್ಮಿಕ. ಒಂದು ಸ್ಫೋಟಕ್ಕೆ ಸಂಬಂಧಿಸಿ ಇದ್ದಕ್ಕಿದ್ದಂತೆಯೇ ಪೊಲೀಸರು ಆತನ ಮನೆಗೆ ನುಗ್ಗಿ ಆತನನ್ನು ಬಂಧಿಸುತ್ತಾರೆ. ಅವನನ್ನು ಹಿಂಸಿಸುತ್ತಾರೆ. ಪೊಲೀಸ್ ಠಾಣೆಯ ಎಲ್ಲ ತಂತ್ರಗಳನ್ನು ಬಳಸಿ ಅವನಿಂದ ತಪ್ಪೊಪ್ಪಿಗೆಯನ್ನು ಬರೆಸಲಾಗುತ್ತದೆ. ಸುಮಾರು ಎರಡು ವರ್ಷಗಳಿಂದ ಆತ ಜೈಲಲ್ಲೇ ಕೊಳೆಯುತ್ತಿರುತ್ತಾನೆ.ಆತನ ಕನಸುಗಳು ಜೈಲಿನಲ್ಲಿ ನುಚ್ಚು ನೂರಾಗುತ್ತವೆ. ಹೀಗಿರುವಾಗ ಒಂದು ದಿನ ಆ ಸ್ಫೋಟಕ್ಕೆ ಸಂಬಂಧ ಪಟ್ಟ ನಿಜವಾದ ಆರೋಪಿಯನ್ನು ಬಂಧಿಸಲಾಗುತ್ತದೆ. ಆತನನ್ನೂ ಇದೇ ಅಮಾಯಕನಿರುವ ಜೈಲಿನೊಳಗೇ ಸೇರಿಸಲಾಗುತ್ತದೆ. ಅಮಾಯಕ ಮತ್ತು ಅಪರಾಧಿ ಮುಖಾಮುಖಿಯಾಗುತ್ತಾರೆ. ಕೆಲವೇ ದಿನಗಳಲ್ಲಿ ಅಮಾಯಕ ಮತ್ತು ಅಪರಾಧಿ ಆತ್ಮೀಯರಾಗುತ್ತಾರೆ.
ಸ್ಫೋಟದ ನಿಜವಾದ ಆರೋಪಿ ತುಸು ವೃದ್ಧ. ಆತನಿಗೆ ನೆರವಿಗೊಬ್ಬ ಜನ ಬೇಕು. ಈ ಅಮಾಯಕ ಆತನಿಗೆ ನೆರವಾಗುತ್ತಾನೆ. ಆತನ ಓಡಾಟಕ್ಕೆ ಹೆಗಲು ಕೊಡುತ್ತಾನೆ. ಆತನ ಆಹಾರವನ್ನು ಈತನೇ ತಂದು ಕೊಡುತ್ತಾನೆ. ಅಸ್ವಸ್ಥನಾದಾಗ ಅಮಾಯಕ ಆತನನ್ನು ಜೋಪಾನವಾಗಿ ನೋಡಿಕೊಳ್ಳುತ್ತಾನೆ. ತನ್ನ ಸ್ಥಿತಿಗೆ ಕಾರಣನಾದ ಅಪರಾಧಿಯನ್ನು ಒಂದಿಷ್ಟೂ ದ್ವೇಷಿಸದೇ ಅಮಾಯಕ, ಅಪರಾಧಿಯೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುತ್ತಾನೆ. ಅಪರಾಧಿ ಕೆಲವೊಮ್ಮೆ ಈ ಅಮಾಯಕನನ್ನು ಕಣ್ಣಿಗೆ ಕಣ್ಣಿಟ್ಟು ನೋಡಲು ಪ್ರಯತ್ನಿಸುತ್ತಾನೆ.ಆದರೆ ಸಾಧ್ಯವಾಗದೆ ತಲೆತಗ್ಗಿಸುತ್ತಾನೆ. ಯಾವತ್ತಾದರೊಮ್ಮೆ ಅಮಾಯಕನನ್ನು ಆತನ ನಿರಪರಾಧಿತ್ವದ ಕುರಿತಂತೆ ಮಾತನಾಡಲು ಪ್ರೇರೇಪಿಸುತ್ತಾನೆ. ಆದರೆ ಅಮಾಯಕ ‘‘ಎಲ್ಲ ನಮ್ಮ ಹಣೆಬರಹ’’ ಎಂದು ತೇಲಿ ಬಿಡುತ್ತಾನೆ. ಕೆಲವೊಮ್ಮೆ ಮಾತ್ರ ಅಮಾಯಕ ತನ್ನ ಮನೆಯವರನ್ನು ನೆನೆದು ಭಾವುಕನಾಗುತ್ತಾನೆ.
ನಿಧಾನಕ್ಕೆ ಅಪರಾಧಿಯ ಕಣ್ಣು ತೆರೆಯುತ್ತಾ ಹೋಗುತ್ತದೆ. ‘ತನ್ನ ದ್ವೇಷ ಎಷ್ಟು ಕುರುಡಾದುದು’ ಎನ್ನುವುದನ್ನು ಅವನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಈ ಅಮಾಯಕ ಶಿಕ್ಷೆ ಅನುಭವಿಸುತ್ತಿರುವುದು ತನ್ನ ಕಾರಣದಿಂದ ಎನ್ನುವುದು ಅವನನ್ನು ಕಾಡತೊಡಗುತ್ತದೆ, ಚುಚ್ಚತೊಡಗುತ್ತದೆ. ಒಂದು ದಿನ ಇದ್ದಕ್ಕಿದ್ದಂತೆಯೇ ಆತ ಪೊಲೀಸರೊಂದಿಗೆ ತಾನು ಮಾಡಿದ ಎಲ್ಲ ತಪ್ಪುಗಳನ್ನು ಅಧಿಕೃತವಾಗಿ ಒಪ್ಪಿಕೊಂಡ. ನ್ಯಾಯಾಲಯದಲ್ಲೂ ‘ಸ್ಫೋಟದ ಹಿಂದೆ ನನ್ನ ಮತ್ತು ನನ್ನ ಸಂಗಡಿಗರ ಸಂಚಿದೆ’ ಎನ್ನುವುದನ್ನು ಒಪ್ಪಿ, ಪಾಯಶ್ಚಿತ ಮಾಡಿಕೊಂಡ.‘‘ನನಗೆ ಮರಣದಂಡನೆ ದೊರೆಯಬಹುದೆಂಬುದನ್ನು ನಾನು ಬಲ್ಲೆ. ಆದರೂ ಕೂಡಾ ನಾನು ತಪ್ಪೊಪ್ಪಿಗೆ ನೀಡಲು ಬಯಸುತ್ತಿದ್ದೇನೆ’’ ಇದು ಅಪರಾಧಿ ಮ್ಯಾಜಿಸ್ಟ್ರೇಟರ ಮುಂದೆ ಹೇಳಿದ ಮಾತು.

ಬ್ರೆಕ್ಟ್‌ನ ಅಸಂಗತ ನಾಟಕದ ತುಣುಕಿನಂತಿರುವ ಈ ಘಟನೆಯ ಎಲ್ಲ ಪಾತ್ರಗಳು ನಮ್ಮ ನಡುವೆ ಜೀವಂತ ಇವೆ. ಸ್ಫೋಟ ಸಂಚಿನಲ್ಲಿ ಭಾಗಿಯಾದ ಆ ಅಪರಾಧಿ ಇನ್ನಾರೂ ಅಲ್ಲ, ಕೇಸರಿ ಉಗ್ರ ಎಂದು ಹಣೆಪಟ್ಟಿ ಧರಿಸಿರುವ ಸ್ವಾಮೀ ಅಸೀಮಾನಂದ. ಭಾರತ-ಪಾಕಿಸ್ತಾನದ ನಡುವಿನ ಸ್ನೇಹದ ಬಳ್ಳಿಯಾಗಬಹುದಾಗಿದ್ದ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಸೇರಿದಂತೆ ಹಲವು ಸ್ಫೋಟಗಳ ಸಂಚಿನಲ್ಲಿ ಭಾಗಿಯಾದವನೀತ. ಆತನ ಮನ ಪರಿವರ್ತನೆಯನ್ನು ಮಾಡಿದ ಅಮಾಯಕ, ಮಕ್ಕಾ ಮಸೀದಿ ಸ್ಫೋಟದಲ್ಲಿ ಯಾವ ತಪ್ಪೆಸಗದಿದ್ದರೂ ಬಂಧಿತನಾಗಿದ್ದ ಅಬ್ದುಲ್ ಕಲೀಂ. ಹಿಂದೂಗಳನ್ನು ದ್ವೇಷಿಸುವ ಮುಸ್ಲಿಮ್ ಮತಾಂಧರನ್ನು, ಮುಸ್ಲಿಮರನ್ನು ದ್ವೇಷಿಸುವ ಹಿಂದೂ ಮತಾಂಧರನ್ನು ಖಾಸಗಿಯಾಗಿ ಕೆಲ ಕಾಲ ಜೊತೆಯಾಗಿ ಬಾಳಲು ಬಿಟ್ಟರೆ ಅವರು ಪರಸ್ಪರ ಮಾನವೀಯತೆಯನ್ನು ಕಲಿತಾರಲ್ಲವೆ? ಹಾಗೊಂದು ಮಿನುಕು ಆಸೆ ನನ್ನದು.

ಗರ್ಭಪಾತ

ನಾಲ್ಕೇ ನಾಲ್ಕು ಸಾಲಿನ ಈ ಕತೆಯನ್ನು ಗುಜರಿ ಅಂಗಡಿಯ ತಕ್ಕಡಿಯಲ್ಲಿಟ್ಟಿದ್ದೇನೆ. ತೂಗಿ ನೋಡುವ ಕೆಲಸ ನಿಮ್ಮದು.

ಅವಳು ಗರ್ಭಿಣಿ. ನೋವಿನಿಂದ ಒದ್ದಾಡುತ್ತಿದ್ದಳು.
ಆಕೆಯ ಗಂಡನೂ ಗರ್ಭ ಧರಿಸಿದ್ದಾನೆ. ಹೆರಿಗೆಯ ನಿರೀಕ್ಷೆಯಲ್ಲಿ ಒದ್ದಾಡುತ್ತಿದ್ದ.
ಆಕೆ ಹೆತ್ತಳು. ಗಂಡನ ಕಿವಿಗೆ ಬಿತ್ತು ‘‘ಮಗು ಹೆಣ್ಣು’’
ಅವನಿಗೆ ‘ಗರ್ಭಪಾತ’ವಾಯಿತು.

ಮೋನು

ಇತ್ತೀಚೆಗೆ ನನ್ನ ಗೆಳೆಯನೊಬ್ಬ ಕೇಳಿದ್ದ ‘‘ನಿನ್ನ ಅಣ್ಣನ ನೆನಪಿಗಾಗಿ ಏನಾದರೂ ಮಾಡಬಹುದಲ್ಲ....’’ ಅವನಿಗೆ ನಾನು ಹೇಳಿದ್ದೆ ‘‘ಅವನನ್ನು ಮರೆಯುವುದಕ್ಕೆ ನಾನೇನಾದರೂ ಮಾಡಬೇಕಾಗಿದೆ....’’ ಈ ಉತ್ತರದಿಂದ ಆ ಗೆಳೆಯನಿಗೆ ನೋವಾಗಿರಬಹುದೋ ಏನೋ. ತುಂಬಾ...ಹಿಂದೆ ಪತ್ರಿಕೆಯೊಂದಕ್ಕೆ ಅವನ ಬಗ್ಗೆ ಪುಟ್ಟ ಲೇಖನವನ್ನು ಬರೆದಿದ್ದೆ.. ನೀವು ಓದಿರಲಿಕ್ಕಿಲ್ಲ ಎಂದು ಭಾವಿಸಿ ಇಲ್ಲಿ ಹಾಕಿದ್ದೇನೆ.



ಭೂಲ್ನೇ ವಾಲೆ ಯಾದ್ ಆಯೆ....
-ಮುಖೇಶ್ ಹಾಡೊಂದರ ಸಾಲು

ಅಚ್ಚಿಗೆ ಹೋಗುವ ಮೊದಲು ಕಟ್ಟ ಕಡೆಯದಾಗಿ ಎಂಬಂತೆ, ಮತ್ತೊಮ್ಮೆ ಆ ಬರಹಗಳತ್ತ ಕಣ್ಣಾಯಿಸಿದ್ದೆ. ಅಕ್ಷರಗಳ ರಾಶಿಯಲ್ಲಿ ಹೊಂಚಿ ಕುಳಿತಿದ್ದ ತಪ್ಪುಗಳು ಆರಿಸಿದಷ್ಟು ಮುಗಿಯುತ್ತಲೇ ಇಲ್ಲ. ನಾನೇ ಕುಳಿತು ಕೀ ಮಾಡಿದ್ದ ಅಕ್ಷರಗಳು, ಒಂದು ಅಗುಳೂ ತಪ್ಪಿರಲಿಕ್ಕಿಲ್ಲ ಎಂದು ತಿಳಿದುಕೊಂಡಿದ್ದೆ. ಆರು ಕತೆಗಳು, ಹತ್ತು ಕವಿತೆಗಳು, ನಾಲ್ಕು ಲೇಖನಗಳು, ಮೂರು ವರದಿಗಳುಳ್ಳ ತೀರಾ ಸಣ್ಣ ಪುಸ್ತಕ ಇದು. ನಾವಿಬ್ಬರೂ ಎಣಿಸಿ ಎಣಿಸಿ ಆಡಿದ ಮಾತು ಮತ್ತು ಬಿಡಿಸಿ ಓದಿಕೊಂಡ ಪರಸ್ಪರರ ಬದುಕಿನ ಪುಟಗಳಿಗೆ ಹೋಲಿಸಿದರೆ ತೀರ ದೊಡ್ಡ ಪುಸ್ತಕ. ಪುಸ್ತಕಕ್ಕೆ ಏನು ಹೆಸರು ಕೊಡಬೇಕೆಂದು ಹೊಳೆಯದೆ ಆತನದೇ ಕವಿತೆಯ ತಲೆಬರಹ ಒಂದನ್ನು ಕೊಟ್ಟಿದ್ದೇನೆ, ‘ಪರುಷಮಣಿ’. ಪ್ರಕಾಶನಕ್ಕೆ ಆತನದೇ ಹೆಸರನ್ನು ಕೊಟ್ಟಿದ್ದೇನೆ. ‘ಬಿ. ಎಂ. ರಶೀದ್ ಪ್ರಕಾಶನ’
***

ತಾಯಿಂದ ಹಿಡಿದು ನಾವೆಲ್ಲರೂ ಆತನನ್ನು ಮೋನು(ಮಗು) ಎಂದೇ ಕರೆಯುತ್ತಿದ್ದೆವು. ‘ಅದು ಮೋನುವಿನ ಪುಸ್ತಕ, ಮುಟ್ಬೇಡ’, ‘ಅದು ಮೋನುನ ಬಟ್ಟೆ, ಅಲ್ಲೇ ಜಾಗೃತೆ ಇಟ್ಟು ಬಿಡು’, ಅದು ಮೋನುನ ಪೆನ್ನು, ಅವನು ಬರುವ ಹೊತ್ತಾಯ್ತು, ಬೇಗ ಇದ್ದಲ್ಲೇ ಇಡು’ ನಾನು ಆತನ ಪೆನ್ನನ್ನೋ, ಪುಸ್ತಕವನ್ನೋ ಅವನಿಲ್ಲದ ಹೊತ್ತಲ್ಲಿ ಎತ್ತಿಕೊಂಡೆನೆಂದರೆ ಅಮ್ಮ ಆತಂಕದಿಂದ ಒಳ ಹೊರಗೆ ಓಡಾಡುತ್ತಿದ್ದಳು.
ಅವನದಾದ ಎಲ್ಲವನ್ನು ಅವನು ಜೋಪಾನವಾಗಿ ತೆಗೆದಿಟ್ಟುಕೊಳ್ಳುತ್ತಿದ್ದ. ಬಾಲ್ಯದಲ್ಲಿ ಅವನು ಕೊಂಡ ಇಂದ್ರಜಾಲ ಕಾಮಿಕ್ಸ್‌ಗಳು, ಅಮರ ಚಿತ್ರ ಕತೆಗಳು, ಇತ್ತೀಚಿನವರೆಗೂ ಆತನ ಕಪಾಟಿನಲ್ಲಿ ಭದ್ರವಾಗಿದ್ದವು. ಯಾವುದಾದರೂ ಒಂದು ಪುಸ್ತಕ ಕೊಂಡರೆ ಅದಕ್ಕೆ ಸುಂದರವಾಗಿ ‘ಹೊದಿಕೆ’ ಹಾಕುತ್ತಿದ್ದ. ಕಲಾವಿದನೂ ಆಗಿದ್ದ ಆತ, ಅದರ ಮೇಲೆ ಅಷ್ಟೇ ಸುಂದರವಾಗಿ ಪುಸ್ತಕದ ಹೆಸರು ಬರೆದಿಡುತ್ತಿದ್ದ. ಅದೆಂದೋ ಜೋಪಾನವಾಗಿ ತೆಗೆದಿಟ್ಟಿದ್ದ ‘ಸ್ಕ್ರೂಡ್ರೈವರ್’ ಈಗಲೂ ಆತನ ಕಪಾಟಿನಲ್ಲಿ ಹಾಗೆಯೇ ಇದೆ. ಪರಿಮಳದ ರಬ್ಬರ್‌ನ ತುಂಡು, ಅರ್ಧ ಮುಗಿದ ವಾಟರ್ ಕಲರ್ ಬಾಕ್ಸ್, ತುಂಡಾದ ಬ್ರಶ್, ಒಟ್ಟಾರೆಯಾಗಿ ಗೀಚಿದ ಡ್ರಾಯಿಂಗ್ ಪುಸ್ತಕ ಇತ್ಯಾದಿ ಇತ್ಯಾದಿಗಳೆಲ್ಲ ಯಾವುದೋ ಭಗ್ನ ಸ್ವಪ್ನವೊಂದರ ಅವಶೇಷಗಳಂತೆ ಈಗಲೂ ಮನೆಯ ಕಪಾಟಿನಲ್ಲಿ ಉಳಿದು ಬಿಟ್ಟಿದೆ.
ನಾನಾಗ ನಾಲ್ಕನೆ ತರಗತಿಯೋ, ಐದನೆ ತರಗತಿಯೋ ಇದ್ದಿರಬೇಕು. ಈತ ಶಾಲೆಯಿಂದ ಬರುವಾಗ ಇಂದ್ರಜಾಲಕಾಮಿಕ್ಸ್, ಪುಟಾಣಿ, ಅಮರ ಚಿತ್ರ ಕತೆ, ಇಸೋಪನ ಕತೆ, ವಿಚಿತ್ರ ಪ್ರಪಂಚ ಇತ್ಯಾದಿಗಳನ್ನು ತರುತ್ತಿದ್ದ. ಅವನಿಗೊಂದು ಮರದ ಪೆಟ್ಟಿಗೆಯಿತ್ತು. ಅದಕ್ಕೊಂದು ಬೀಗ. ತಂದ ಪುಸ್ತಕಗಳನ್ನು ಅದರೊಳಗೆ ಜೋಪಾನವಾಗಿಡುತ್ತಿದ್ದ. ನೆರೆಯ, ಹತ್ತಿರದ ಹುಡುಗರಿಗೆ ಆ ಪುಸ್ತಕಗಳನ್ನು ಓದುವುದಕ್ಕೆ ಕೊಡುತ್ತಿದ್ದ. ಒಮ್ಮೆ ಓದಿದರೆ ಹತ್ತು ಪೈಸೆ ತೆಗೆದುಕೊಳ್ಳುತ್ತಿದ್ದ. ನನ್ನಿಂದಲೂ ಬಿಡುತ್ತಿರಲಿಲ್ಲ. ಹತ್ತು ಪೈಸೆಗಾಗಿ ಅಮ್ಮನನ್ನು ಕಾಡಿ, ಅಣ್ಣನಿಂದ ಪುಸ್ತಕಗಳನ್ನು ಇಸಿದುಕೊಳ್ಳುತ್ತಿದ್ದೆ. ಬಹಾದ್ದೂರ್, ಮಾಂಡ್ರೇಕ್, ಫ್ಯಾಂಟಮ್‌ನ ಹೊಸ ಸಾಹಸಗಳು ಬಂದಾಗ ಆತ ಅವನ್ನು ತಂದು ಮುಖಪುಟವನ್ನು ನನ್ನ ಎದುರುಗಡೆ ಹಿಡಿಯುತ್ತಿದ್ದ. ಆಮೇಲೆ ಈ ಬಾರಿಯ ವಿಶೇಷ ಏನು ಎನ್ನುವುದಷ್ಟನ್ನೇ ನಾಲ್ಕು ವಾಕ್ಯಗಳಲ್ಲಿ ಹೇಳಿ ನನ್ನ ಕುತೂಹಲವನ್ನು ಚುಚ್ಚುತ್ತಿದ್ದ. ಅನೇಕ ವೇಳೆ ನನ್ನಲ್ಲಿ ಹಣವಿಲ್ಲದೆ, ಸಾಲವಾಗಿ ಪುಸ್ತಕವನ್ನು ತೆಗೆದುಕೊಂಡು ಓದುತ್ತಿದ್ದೆ. ಅವನೋ, ಹತ್ತು ಹತ್ತು ಪೈಸೆಯನ್ನೂ ಚೀಟಿಯೊಂದರಲ್ಲಿ ಬರೆದು ಲೆಕ್ಕವಿಡುತ್ತಿದ್ದ. ಒಮ್ಮೆ ಸಾಲ ಏಳು ರೂಪಾಯಿಯನ್ನು ತಲುಪಿತು. ‘ಹಳೆ ಬಾಕಿ ತೀರುವವರೆಗೆ ಇನ್ನು ನಿನಗೆ ಪುಸ್ತಕ ಕೊಡಲಾಗುವುದಿಲ್ಲ’ ಎಂದ. ಅಮ್ಮನ ಪೆಟ್ಟಿಗೆಯಿಂದ ಹತ್ತು ರೂಪಾಯಿಯನ್ನು ಕದ್ದು ಆತನ ಸಾಲ ತೀರಿಸಿದ್ದೆ.
ನನ್ನ ಪಾಲಿಗೆ ಆತನ ಬೀಗ ಹಾಕಿದ ಮರದ ಪೆಟ್ಟಿಗೆ ಅದ್ಭುತ ಮಾಯಾ ತಿಜೋರಿಯಾಗಿತ್ತು. ಅದೆಷ್ಟೋ ಬಾರಿ ಆ ಬೀಗವನ್ನು ಅವನಿಲ್ಲದ ವೇಳೆ ಸಣ್ಣ ಸರಿಗೆ ಬಳಸಿ ತೆರೆದು, ಪುಸ್ತಕಗಳನ್ನು ಓದುತ್ತಿದ್ದೆ. ಒಂದು ದಿನ ಅವನಿಗೆ ಯಾಕೋ ನನ್ನ ಮೇಲೆ ಅನುಮಾನ ಬಂದು, ಸಂಖ್ಯೆಗಳ ಕೋಡ್ ಇರುವ ಬೀಗವನ್ನು ತಂದು ಹಾಕಿದ್ದ. ನಾನೋ...ಶಾಲೆಗೆ ಚಕ್ಕರ್ ಹಾಕಿ ಇಡೀ ದಿನ ಅಂಕಿಗಳನ್ನು ತಿರುಗಿಸಿ ತಿರುಗಿಸಿ ಆ ತಿಜೋರಿಯನ್ನು ತೆರೆಯಲು ಸಫಲನಾಗಿದ್ದೆ.

ನಾನು ಆರನೆ ತರಗತಿಯಲ್ಲಿದ್ದಾಗ ನನ್ನನ್ನು ಮೊತ್ತ ಮೊದಲ ಬಾರಿಗೆ ಲೈಬ್ರರಿಗೆ ಕರೆದುಕೊಂಡು ಹೋಗಿದ್ದು ಆತನೇ. ಅವನು ಹೇಳಿದಲ್ಲಿ ಕೂತು, ಅವನು ತಂದುಕೊಟ್ಟ ಪುಸ್ತಕವನ್ನು ಓದಿದ್ದೆ. ಜೊತೆಗೆ ‘ಇಲ್ಲಿಗೆ ಬರುವುದಾದರೆ ನನ್ನೊಂದಿಗೇ ಬರಬೇಕು’ ಎಂದು ಕಟ್ಟು ನಿಟ್ಟಾಗಿ ಸೂಚನೆ ಕೊಟ್ಟಿದ್ದ. ಆದರೆ ಮರುದಿನವೇ ಆತನ ಮಾತನ್ನು ಉಲ್ಲಂಘಿಸಿ, ನಾನೊಬ್ಬನೇ ಲೈಬ್ರರಿಯ ದಾರಿ ಹುಡುಕಿ ಹೊರಟಿದ್ದೆ. ಉಪ್ಪಿನಂಗಡಿಯ ಆ ಗ್ರಂಥಾಲಯದಲ್ಲಿ ಅಂದಿದ್ದ ಅದೇ ಲೈಬ್ರೆರಿಯನ್ ಈಗಲೂ ಇದ್ದಾರೆ. ಅವನು ಬೆಳೆದಂತೆ ನಾನೂ ಬೆಳೆದೆ. ಅವನು ಮನೆಗೆ ತಂದ ಪುಸ್ತಕಗಳ ದಾರಿಯಲ್ಲಿ ನಾನೂ ನಡೆದೆ. ಆತ ಪಿಯುಸಿಯಲ್ಲಿದ್ದ ಸಮಯ. ಕಾಲೇಜಲ್ಲಿ ಆತ ‘ಸ್ಪಂದನ’ ಎನ್ನುವ ಕೈ ಬರಹದ ಪತ್ರಿಕೆಯೊಂದನ್ನು ಹೊರ ತರುತ್ತಿದ್ದ. ಮುಖಚಿತ್ರ, ಬರಹ, ಕಲೆ ಎಲ್ಲವೂ ಆತನದೇ. ನನಗೆ ‘ಓದು’ ಎಂದು ತಂದು ಕೊಡುತ್ತಿದ್ದ. ಒಂದು ಸಂಚಿಕೆಯನ್ನು ಸಂಪೂರ್ಣ ನಾಸ್ತಿಕವಾದಕ್ಕೆ ಮೀಸಲಿರಿಸಿದ್ದ. ಅದರ ಮುಖಪುಟ ಈಗಲೂ ನನಗೆ ನೆನಪಿದೆ. ಭಾರತದ ಚಿತ್ರವನ್ನು ಬಿಡಿಸಿದ್ದ. ಅದರೊಳಗೆ ಚಂದ್ರ, ಶಿಲುಬೆ ಮತ್ತು ಓಂ ಆಕಾರಗಳು ಧಗಧಗಿಸಿ ಉರಿಯುತ್ತಿವೆ. ಆ ಸಂಚಿಕೆಯನ್ನು ಕೆಲ ಹುಡುಗರು ಸೇರಿ ಕದ್ದೊಯ್ದರಂತೆ. ಆ ಪ್ರಕರಣ ಶಾಲೆಯಲ್ಲಿ ಒಂದಿಷ್ಟು ವಿವಾದಕ್ಕೆ ಕಾರಣವಾಗಿತ್ತು.
ಇದೇ ಸಂದರ್ಭದಲ್ಲಿ ಆತ ಪಕ್ಕಾ ಕಮ್ಯುನಿಷ್ಟ್ ಹೇಳಿಕೆಗಳನ್ನು ನೀಡುತ್ತಾ ತಿರುಗಾಡುತ್ತಿದ್ದದ್ದು. ಸಾರಾ ಅಬೂಬಕರ್‌ಗೆ ಪತ್ರ ಬರೆದು, ಅವರಿಂದ ಉತ್ತರ ದೊರಕಿದಾಗ ಅದನ್ನು ಸಂಭ್ರಮದಿಂದ ನನಗೆ ತೋರಿಸಿ ‘ಓದು’ ಅಂದಿದ್ದ. ಸಾರಾ ಅಬೂಬಕರ್‌ನ ಕಳಪೆ ಹಸ್ತಾಕ್ಷರ ನೋಡಿ ನನಗೋ ಅಚ್ಚರಿಯ ಮೇಲೆ ಅಚ್ಚರಿ. ದೇವರುಗಳ ರಾಜ್ಯದಲ್ಲಿ, ಚಿತ್ತಾಲರ ಶಿಕಾರಿ, ಛೇದ, ಕತೆಯಾದಳು ಹುಡುಗಿ, ಇವೆಲ್ಲದರ ಜೊತೆಗೆ ಲಂಕೇಶ್ ಪತ್ರಿಕೆ...ನಮ್ಮಿಬ್ಬರ ನಡುವೆ ಬಿದ್ದದ್ದ ವೌನದ ಗೋಡೆಯನ್ನು ಸಣ್ಣಗೆ ಕದಲಿಸುತ್ತಿದ್ದವು.
ಅಂದು ಶುಕ್ರವಾರ. ನಾನು ಶಾಲೆಯಿಂದ ಮನೆಗೆ ಬಂದಿದ್ದೆ. ನೋಡಿದರೆ ಅಮ್ಮ ಕಣ್ಣೀರಿಡುತ್ತಿದ್ದಾಳೆ. ತಂಗಿಯರೆಲ್ಲ ಅಮ್ಮನ ಸುತ್ತ ಕೂತಿದ್ದಾರೆ. ‘ಏನಾಯ್ತು?’ ಎಂದು ಕೇಳಿದೆ. ಅಣ್ಣ ಮನೆ ಬಿಟ್ಟು ಹೋಗಿದ್ದ! ಆಗ ಆತ ಪಿಯುಸಿ ಓದುತ್ತಿದ್ದ. ನಾನು ಒಂಬತ್ತನೆಯ ತರಗತಿಯಲ್ಲಿದ್ದಿರಬೇಕು. ಕಮ್ಯುನಿಷ್ಟ್ ಕುರಿತು ಅದೆಷ್ಟು ಡೈಲಾಗ್‌ಗಳನ್ನು ಹೊಡೆಯುತ್ತಿದ್ದರೂ, ಆತ ವಾರಕ್ಕೊಮ್ಮೆ ಮಸೀದಿಗೆ ಹೋಗುತ್ತಿದ್ದ. ಹಾಗೆ, ಆ ಶುಕ್ರವಾರ ಮಸೀದಿ ಬಿಟ್ಟು ಹೊರ ಬರುವಾಗ ಒಬ್ಬರೊಂದಿಗೆ ಸಣ್ಣದಾಗಿ ಮಾತಿನ ಚಕಮಕಿ ನಡೆದಿತ್ತು. ಅಲ್ಲೇ ಇದ್ದ ತಂದೆ, ಅಣ್ಣನ ಮೇಲೆ ಹಾರಿ ಬಿದ್ದಿದ್ದರು. ಈತ ಮನೆಗೆ ಬಂದವನೇ ತನ್ನ ಬಟ್ಟೆಯೊಂದಿಗೆ ಹೊರ ಬಿದ್ದಿದ್ದ. ಹಾಗೆ ಹೊರಟವನು ಸ್ಥಳೀಯ ಪತ್ರಿಕೆಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ಸುಮಾರು ಆರು ತಿಂಗಳ ಕಾಲ ಮನೆಗೆ ಬಂದಿರಲಿಲ್ಲ. ಒಂದು ದಿನ ರಾತ್ರಿ, ನಾನು ಎಸ್ಸೆಸೆಲ್ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದೆ. ಬಾಗಿಲು ತಟ್ಟಿದ ಸದ್ದು. ಬಾಗಿಲು ತೆರೆದರೆ ಹೆಗಲಿಗೊಂದು ಬ್ಯಾಗು ಹಾಕಿಕೊಂಡು ಮೋನು ನಿಂತಿದ್ದ.
‘ಉಮ್ಮಾ ಮೋನು ಬಂದ’ ನನ್ನ ಹಿಂದಿನಿಂದ ತಂಗಿ ಉದ್ಗರಿಸಿದ್ದಳು.
ಬರುವಾಗ ಒಂದಿಷ್ಟು ಸ್ವೀಟ್ಸ್ ತಂದಿದ್ದ. ಅಮ್ಮನ ಕೈಯಲ್ಲಿಟ್ಟ. ಅಮ್ಮ ಅಳುತ್ತಿದ್ದಳು. ನನಗೆಂದು ಪೂರ್ಣಚಂದ್ರ ತೇಜಸ್ವಿಯ ‘ಚಿದಂಬರ ರಹಸ್ಯ’ ಪುಸ್ತಕವನ್ನು ತಂದಿದ್ದ.
ನಾನು ಉಪ್ಪಿನಂಗಡಿ ಸರಕಾರಿ ಕಾಲೇಜಿಗೆ ಬಿ. ಎ. ಸೇರಲು ಅರ್ಜಿ ಹಿಡಿದು ನಿಂತಿದ್ದಾಗ ಈತ ಅದೇ ಕಾಲೇಜಿನಲ್ಲಿ ಅಂತಿಮ ಬಿ. ಎ. ಓದುತ್ತಿದ್ದ. ಏನನ್ನಿಸಿತೋ, ‘ನಿನ್ನನ್ನು ಕಾಲೇಜಿಗೆ ನಾನೇ ಸೇರಿಸುತ್ತೇನೆ’ ಎಂದ. ನಾನು ಅವನ ಹಿಂದೆ ನಡೆದೆ. ಮೊರಬದ ಮಲ್ಲಿಕಾರ್ಜುನರು ಕಾಲೇಜಿನ ಪ್ರಿನ್ಸಿಪಾಲರು. ಅವರು ನನಗೆ ಅದಾಗಲೇ ಪರಿಚಿತರು. ವಿವಿಧ ಸಮಾರಂಭಗಳಲ್ಲಿ, ಸಾಕ್ಷರತಾ ಆಂದೋಲನದ ಸಂದರ್ಭದಲ್ಲಿ ಅವರು ನನ್ನನ್ನು ನೋಡಿದ್ದರು. ಅಣ್ಣ ಅಡ್ಮಿಶನ್‌ಗೆಂದು ನನ್ನನ್ನು ಕರೆದೊಯ್ದಿಗ ತುಂಬಾ ಪ್ರೀತಿಯಿಂದ ಸ್ವಾಗತಿಸಿದ್ದರು. ಆದರೆ ಅಷ್ಟರಲ್ಲಿ ಇನ್ನೊಬ್ಬ ಉಪನ್ಯಾಸಕರು, ‘ಏನು ಏನು...’ ಎಂದು ಕಣ್ಣು ತಿರುಗಿಸುತ್ತಾ ಬಂದರು. ‘ತಮ್ಮನ ಅಡ್ಮಿಶನ್‌ಗೆ ಬಂದಿದ್ದೇನೆ ಸಾರ್’ ಎಂದ.
‘ನೀವೇ ಈ ಶಾಲೆಯ ವಿದ್ಯಾರ್ಥಿಯಾಗಿರುವಾಗ, ತಮ್ಮನ ಅಡ್ಮಿಶನ್‌ಗೆ ನೀವು ಬರುವುದು ಹೇಗೆ ಸಾಧ್ಯ?’ ಉಪನ್ಯಾಸಕರು ಪ್ರಶ್ನಿಸಿದರು.
‘ನಾನು ಈ ಶಾಲೆಯ ವಿದ್ಯಾರ್ಥಿಯಾಗಿ ಬಂದಿಲ್ಲ. ಈತನ ಅಣ್ಣನಾಗಿ ಬಂದಿದ್ದೇನೆ’ ಎಂದು ಮೋನು ಉತ್ತರಿಸಿದ.
‘ನಿಮ್ಮ ತಮ್ಮ ಪುಂಡಾಟಿಕೆ ಮಾಡಿದ್ರೆ ನಿಮ್ಮ ಜೊತೆ ದೂರು ಹೇಳಬಹುದು. ಆದರೆ ನೀವೇ ಪುಂಡಾಟಿಕೆ ಮಾಡುತ್ತಿರುವಾಗ ನಾವು ಯಾರಲ್ಲಿ ದೂರು ಹೇಳಬೇಕು...’
ಆ ಉಪನ್ಯಾಸಕರು ಪಟ್ಟು ಹಿಡಿದು ನಿಂತಿದ್ದರು. ಮೋನು ಕೂಡ ಜಗ್ಗಲಿಲ್ಲ. ಅವರ ನಡುವೆ ಅಕ್ಷರಶಃ ಜಗಳವೇ ನಡೆಯುತ್ತಿತ್ತು. ನಾನು ಮತ್ತು ಮೊರಬದ ಮಲ್ಲಿಕಾರ್ಜುನರು ಪ್ರೇಕ್ಷಕರಾಗಿದ್ದೆವು. ಬಳಿಕ ಪ್ರಿನ್ಸಿಪಾಲರು ಮಧ್ಯ ಪ್ರವೇಶಿಸಿದರು. ನನ್ನನ್ನು ತೋರಿಸಿ ‘ಈ ಹುಡುಗ ನನಗೆ ಗೊತ್ತು’ ಎಂದರು. ಕೊನೆಯಲ್ಲಿ ಅಣ್ಣನ ಎದುರಿಗೇ ನಗುತ್ತಾ ನನಗೆ ಹೇಳಿದರು ‘ಭಾಷಣ, ಬರವಣಿಗೆ, ಸಾಂಸ್ಕೃತಿಕ ಚಟುವಟಿಕೆ ಎಲ್ಲದಕ್ಕೂ ನಿಮಗೆ ಅಣ್ಣ ಮಾದರಿಯಾಗಿರಲಿ. ಆದರೆ ಓದಿನಲ್ಲಿ ಮಾತ್ರ ಅವರು ಮಾದರಿಯಾಗುವುದು ಬೇಡ...’
ಕಾಲೇಜಲ್ಲಿ ಹೊಸ ಹುಡುಗರಿಗಾಗಿ ‘ವೆಲ್‌ಕಮ್ ಡೇ’ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ನಾನೂ ಮಾತನಾಡಿದ್ದೆ. ಉಪನ್ಯಾಸಕರ ಬಗ್ಗೆ, ಮೊರಬದ ಮಲ್ಲಿಕಾರ್ಜುನರ ಬಗ್ಗೆ, ನನ್ನ ಬದುಕಿನ ಕನಸುಗಳ ಕುರಿತಂತೆ ಮಾತನಾಡುವಾಗ ತುಸು ಭಾವುಕನಾಗಿ ಬಿಟ್ಟಿದ್ದೆ. ಅಂದು ಸಂಜೆ ಮನೆಯಲ್ಲಿ ಇದ್ದಕ್ಕಿದ್ದಂತೆ ನನ್ನೆದುರು ಬಂದ ಮೋನು ‘ನೀನು ಮೊರಬದರ ಬಗ್ಗೆ, ಕಾಲೇಜಿನ ಬಗ್ಗೆ ಮಾತನಾಡಿದ್ದು ಚೆನ್ನಾಗಿತ್ತು. ಮೊರಬದರನ್ನು ಚೆನ್ನಾಗಿಟ್ಟುಕೋ...’ ಎಂದಿದ್ದ.
***

ಒಬ್ಬ ಅಣ್ಣ ಮತ್ತು ತಮ್ಮನ ನಡುವೆ ಗೋಡೆ ತಂದು ಹಾಕುವಷ್ಟು ದೊಡ್ಡದಾಗಿರಲಿಲ್ಲ ನಮ್ಮ ಮನೆ. ಆದರೂ ಮೋನು ತನ್ನ ಸುತ್ತ ‘ಅಣ್ಣ’ನ ಅಹಂಕಾರ ಮತ್ತು ಹಕ್ಕುಗಳ ಕಾಂಪೌಂಡು ನಿಮಿರ್ನಸಿ, ಗೇಟಿಗೆ ಬೀಗ ಜಡಿದು ಬಿಟ್ಟಿದ್ದ. ಅವನ ಮರದ ಪೆಟ್ಟಿಗೆಯ ಬೀಗವನ್ನು ಒಡೆದಷ್ಟು ಸಲೀಸಾಗಿ ಆ ಗೇಟಿನ ಬೀಗವನ್ನು ಒಡೆದು ಅವನ ಬಳಿಗೆ ಸಾಗುವುದಕ್ಕೆ ನನ್ನಿಂದಾಗಲಿಲ್ಲ. ‘ಮೋನುವಿನ ಕೋಣೆ’ ‘ಮೋನುವಿನ ಕಪಾಟು’ ‘ಮೋನುವಿನ ರೇಡಿಯೋ’ ‘ಮೋನುವಿನ ಮಂಚ’ ಎಲ್ಲವೂ ಈಗ ಬರಿದಾಗಿದೆ. ಮನುಷ್ಯರು ಕಟ್ಟಿ ಕೊಳ್ಳುವ ಎಲ್ಲ ಗೋಡೆಗಳನ್ನು ಕಿತ್ತೆಸೆದು ಅವರನ್ನು ಒಂದಾಗಿಸುವ ಶಕ್ತಿ ಸಾವಿಗೆ ಮಾತ್ರ ಇದೆಯೇನೋ!