Sunday, February 5, 2012

ಒಬ್ಬ ಚಿಂತಕ-ಸೇನಾಧಿಕಾರಿಯ ನಡುವಿನ ಮುಖಾಮುಖಿ!

ಮೊನ್ನೆ ಅನಂತಮೂರ್ತಿಯವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಬಂದೆ. ತುಸು ಅನಾರೋಗ್ಯದಿಂದಿದ್ದರೂ ನಮ್ಮೆಂದಿಗೆ(ನಾನು, ಬೊಳುವಾರು ಜೊತೆ ಹೋಗಿದ್ದೆ) ಅದೆಷ್ಟು ಚೈತನ್ಯದಾಯಕ ಮಾತುಗಳನ್ನಾಡಿದರೆಂದರೆ, ಈಗಲೂ ಅದೇ ಮಾತಿನ ಗುಂಗಿನಲ್ಲಿದ್ದೇನೆ. ಅವರ ಭೇಟಿಯ ನೆನಪಿಗಾಗಿ, ಅವರ ಒಂದು ಕೃತಿಯ ಕುರಿತಂತೆ 2011 ಜುಲೈಯಲ್ಲಿ ನಾನು ಬರೆದ ಬರಹವೊಂದನ್ನು ಇಲ್ಲಿ ನೀಡುತ್ತಿದ್ದೇನೆ.

ಮನಸ್ಸು-ಮನಸ್ಸುಗಳನ್ನು ಕಟ್ಟುವಲ್ಲಿ ತಮ್ಮ ತಮ್ಮ ಕೊಡುಗೆಗಳನ್ನು ನೀಡಿದ ವಿಶ್ವದ ಹತ್ತು ಸಮಸ್ತರು ಇಲ್ಲಿ ಮಾತನಾಡುತ್ತಾರೆ. ಅದಕ್ಕಿಂತ ಮುಖ್ಯವಾಗಿ ಭಾರತದ ಅಪರೂಪದ ಚಿಂತಕರೊಬ್ಬರು ಆ ಹತ್ತು ಸಮಸ್ತರನ್ನು ಮಾತನಾಡಿಸುತ್ತಾರೆ. ಈ ಮಾತುಗಳನ್ನು ನಾಡಿನ ಇನ್ನೊಬ್ಬ ಹಿರಿಯ ಚಿಂತಕರು ದಾಖಲಿಸಿ ಬರಹರೂಪಕ್ಕಿಳಿಸುತ್ತಾರೆ. ಒಂದು ಪುಸ್ತಕದ ಕುರಿತಂತೆ ಕುತೂಹಲವನ್ನು ಹುಟ್ಟಿಸಿ ಹಾಕಲು ಇಷ್ಟು ಧಾರಾಳ ಸಾಕು.ದೇಶದ ಹಿರಿಯ ಚಿಂತಕ ಯು. ಆರ್. ಅನಂತಮೂರ್ತಿಯವರು ವಿವಿಧ ಕ್ಷೇತ್ರಗಳಲ್ಲಿ ದುಡಿಮೆ ಮಾಡಿದ ವಿಶ್ವದ ಹತ್ತು ಗಣ್ಯರ ಜೊತೆ ನಡೆಸಿದ ಮಾತುಕತೆಯ ಸಂಗ್ರಹವೇ ಎಚ್. ಪಟ್ಟಾಭಿರಾಮ ಸೋಮಯಾಜಿ ಅವರು ಸಂಪಾದಿಸಿದ ‘ಹತ್ತು ಸಮಸ್ತರ ಜೊತೆ’ ಕೃತಿ. ಶಿವಮೊಗ್ಗದ ಅಹರ್ನಿಶಿ ಪ್ರಕಾಶನ ಈ ಪುಸ್ತಕವನ್ನು ಹೊರತಂದಿದೆ.

 ಕೆ. ಎಂ. ಕಾರಿಯಪ್ಪ, ಆರ್. ಕೆ. ನಾರಾಯಣ್, ಆರ್. ಕೆ. ಲಕ್ಷ್ಮಣ್, ಶಿವರಾಮ ಕಾರಂತ, ಗೋಪಾಲಕೃಷ್ಣ ಅಡಿಗ, ಮಾಸ್ತಿ, ಅಚಿಬೆ, ಜೆ. ಎಚ್. ಪಟೇಲ್, ಎಸ್. ಎಂ. ಕೃಷ್ಣ, ಕೆ. ವಿ. ಸುಬ್ಬಣ, ಜಿ. ಎಸ್. ಶಿವರುದ್ರಪ್ಪ, ರಾಜೀವ ತಾರಾನಾಥ, ಗಿರೀಶ್ ಕಾರ್ನಾಡ್ ಇವರೊಂದಿಗೆ ಅನಂತಮೂರ್ತಿಯವರು ಮಾತುಕತೆಯನ್ನು ನಡೆಸಿದ್ದಾರೆ. ಸಾಧಾರಣವಾಗಿ ಮಾತುಕತೆ ಎನ್ನುವಾಗ ನಾವು ಅದಕ್ಕೆ ‘ಸಂದರ್ಶನ’ ಎಂಬ ಹಣೆಪಟ್ಟಿಯನ್ನು ಲಗತ್ತಿಸಿ ಬಿಡುತ್ತೇವೆ. ಅಂದರೆ, ಒಬ್ಬ ಪ್ರಶ್ನೆ ಕೇಳುವುದು ಮತ್ತು ಇನ್ನೊಬ್ಬ ಉತ್ತರಿಸುವುದು. ಇಲ್ಲಿ ಕೆಲವೊಮ್ಮೆ ಏನಾಗುತ್ತದೆಯೆಂದರೆ ಪ್ರಶ್ನೆ ಕೇಳುವವನಿಗೆ ಯಾವ ಜವಾಬ್ದಾರಿಗಳೂ ಇರುವುದಿಲ್ಲ. ಎಲ್ಲ ಜವಾಬ್ದಾರಿಯನ್ನು ಉತ್ತರ ಹೇಳುವವನೇ ಹೊರಬೇಕಾಗುತ್ತದೆ. ಆದರೆ ಇಲ್ಲಿ ಹಾಗಾಗಿಲ್ಲ. ಇದೊಂದು ಮಾತುಕತೆ. ಇಲ್ಲಿ ಅನಂತಮೂರ್ತಿ ಸಂಪೂರ್ಣ ಹೊರಗೆ ನಿಂತು ಲೇಖಕರೊಂದಿಗೆ ಮಾತನಾಡಿಲ್ಲ. ಬದಲಿಗೆ ಅವರೊಂದಿಗೆ ಒಂದಾಗಿ ಮಾತುಕತೆಯನ್ನು ನಡೆಸಿದ್ದಾರೆ. ಆದುದರಿಂದ, ಈ ಕೃತಿಯಲ್ಲಿ ನಮಗೆ ಅನಂತಮೂರ್ತಿಯವರ ಮಾತುಗಳನ್ನೂ ಆಲಿಸುವ ಅವಕಾಶ ಸಿಗುತ್ತದೆ.

 ಪ್ರಶ್ನೆಗಳೆನ್ನುವುದು ಉತ್ಖನನ ನಡೆಸಿದಂತೆ ಇರಬೇಕು. ಅವನಿಗೊಂದು ಜವಾಬ್ದಾರಿಯಿದೆ. ಉತ್ತರವನ್ನು ಅಗೆಯುವ ಭರದಲ್ಲಿ ಒಳಗಿರುವ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ ನೋಡಿಕೊಳ್ಳುವ ಮುಖ್ಯ ಜವಾಬ್ದಾರಿ ಪ್ರಶ್ನೆ ಕೇಳುವವನಿಗಿರುತ್ತದೆ. ಇಲ್ಲಿ ಅನಂತಮೂರ್ತಿ ತಮ್ಮ ವಿವೇಕ, ವಿನಯ, ಸಹೃದಯತೆ, ತಿಳುವಳಿಕೆ, ವೈಚಾರಿಕತೆ, ಕಾಳಜಿ ಎಲ್ಲವನ್ನು ಸಮರ್ಥವಾಗಿ ಬಳಸಿಕೊಂಡು ಗಣ್ಯರೊಳಗಿನ ವಿಚಾರಗಳನ್ನು ಅಗೆಯುತ್ತಾ, ಬಗೆಯುತ್ತಾ ಹೋಗುತ್ತಾರೆ. ಆಳಕ್ಕೆ ಹೋದಂತೆ ಅವರೂ ಅವರ ವಿಚಾರಗಳಲ್ಲಿ ಒಂದಾಗುತ್ತಾರೆ. ಇಲ್ಲಿರುವ ಎಲ್ಲ ಮಾತುಕತೆಗಳಲ್ಲೂ ಅದನ್ನು ನಾವು ಅನುಭವಿಸುತ್ತಾ ಓದಿಕೊಂಡು ಹೋಗಬಹುದಾಗಿದೆ.

ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಮತ್ತು ಅನಂತಮೂರ್ತಿಯವರ ನಡುವಿನ ಮುಖಾಮುಖಿಯೇ ಒಂದು ರೀತಿಯಲ್ಲಿ ಕುತೂಹಲಕಾರಿಯಾದುದು. ಕಾರ್ಯಪ್ಪ ನಿವೃತ್ತ ಯೋಧ. ಯುದ್ದ್ಧಭೂಮಿಯಲ್ಲಿ ಕೆಲಸ ಮಾಡಿದವರು. ದೇಶದ ಬಗ್ಗೆ, ಜನರ ಬಗ್ಗೆ ಅವರಿಗೆ ಅವರದೇ ಆದ ಕೆಲವು ಶಿಸ್ತುಬದ್ಧವಾದ ನಿರಂಕುಶ ನಿಲುವುಗಳಿವೆ. ಒಬ್ಬ ಕವಿ, ಚಿಂತಕ ದೇಶದ ಕುರಿತಂತೆ ಯೋಚಿಸುವುದಕ್ಕೂ ಒಬ್ಬ ಸೇನಾಧಿಕಾರಿ ಯೋಚಿಸುವುದಕ್ಕೂ ಭಾರೀ ವ್ಯತ್ಯಾಸಗಳಿವೆ. ಇವರಿಬ್ಬರ ಮುಖಾಮುಖಿಯಾದರೆ ಅದರ ಸ್ವಾರಸ್ಯವೇ ಬೇರೆ. ಇಲ್ಲಿ ಕಾರಿಯಪ್ಪರ ಒಳಗೆ ಅನಂತಮೂರ್ತಿ ನಿಧಾನಕ್ಕೆ ಪ್ರವೇಶಿಸುವ ರೀತಿ, ಅವರೊಳಗೆ ಗಣಿಗಟ್ಟಿರುವ ಮಾತುಗಳನ್ನು ನಿಧಾನಕ್ಕೆ ಬಗೆಯುವ ವಿಧಾನ ಅವರ ಪ್ರತಿಭೆಗೆ ಸಾಕ್ಷಿ.

 ಕಾರಿಯಪ್ಪರನ್ನು ‘ಭಾರತದ ಹೆಮ್ಮೆಯ ಪುತ್ರ’ ಎಂದು ಕರೆದು ಮಾತು ಆರಂಭಿಸುವ ಅನಂತಮೂರ್ತಿ, ನಿಧಾನಕ್ಕೆ ಒಂದೊಂದೇ ಪ್ರಶ್ನೆಗಳ ಮೂಲಕ ಮುಚ್ಚಿರುವ ಅವರ ಎದೆಬಾಗಿಲನ್ನು ತಟ್ಟುತ್ತಾ ಹೋಗುತ್ತಾರೆ. ‘ಸೇನೆಯ ಜನ ಅದ್ಭುತ ಸಾರ್’ ಎನ್ನುತ್ತಾ, ಕಾಶ್ಮೀರದ ಅವರ ಅನುಭವಕ್ಕೆ ತಲೆದೂಗುತ್ತಾ, ಥಕ್ಕನೆ ಒಂದು ಪ್ರಶ್ನೆಯನ್ನು ಎಸೆಯುತ್ತಾರೆ ‘‘ದ್ವೇಷವೇ ಇಲ್ಲದೆ ಯುದ್ಧ ಮಾಡೋದಕ್ಕೆ ಸಾಧ್ಯ ಇದ್ಯಾ ಸರ್?’’ ಇದು ಒಬ್ಬ ಸೇನಾಧಿಕಾರಿಯನ್ನು ಅಲುಗಾಡಿಸುವ ಪ್ರಶ್ನೆ. ಇದು ಅಪ್ಪಟ ಅನಂತಮೂರ್ತಿ ಪ್ರಶ್ನೆ. ಇದಕ್ಕೆ ಕಾರಿಯಪ್ಪ ಹೇಳುತ್ತಾರೆ ‘‘ಸ್ವಲ್ಪ ಮಟ್ಟಿಗಾದರೂ ದ್ವೇಷ ಇರಲೇಬೇಕಾಗುತ್ತದೆ. ಇಲ್ಲಾಂದ್ರೆ ಸುಮ್ಮನೆ ಶೂಟ್ ಮಾಡೋಕೆ ಆಗೋಲ್ಲ....’’ ಇಂತಹ ಮಾತನ್ನು ಒಬ್ಬ ಸೇನಾಧಿಕಾರಿಯ ಬಾಯಿಯಿಂದ ಹೊರಡಿಸುವುದು ಸಣ್ಣ ವಿಷಯವಲ್ಲ. ಒಂದು ರೀತಿಯಲ್ಲಿ ಅನಂತಮೂರ್ತಿಯ ಮೋಡಿಗೆ ಸಂಪೂರ್ಣ ಒಳಗಾಗಿರುವ ಕಾರಿಯಪ್ಪ ಅನಂತಮೂರ್ತಿಯ ಮನದಾಳದ ಮಾತುಗಳನ್ನೇ ತಮಗರಿಯದೇ ಆಡುತ್ತಾ ಹೋಗುವ ಸೋಜಿಗವನ್ನು ಕಾಣುತ್ತೇವೆ. ಅನಂತಮೂರ್ತಿಯವರ ಒಂದೊಂದು ಪ್ರಶ್ನೆಗಳಿಗೂ ಕಾರಿಯಪ್ಪ ತನ್ನ ಸೇನಾಧಿರಿಸುಗಳನ್ನು ಒಂದೊಂದಾಗಿ ಕಳಚುತ್ತಾ ಅಪ್ಪಟ ಮನುಷ್ಯರಾಗಿ ಮಾತನಾಡುವುದನ್ನು ಕಾಣುತ್ತೇವೆ. ನಿಜಕ್ಕೂ ಕಾರಿಯಪ್ಪ ಏನು ಅನ್ನುವುದನ್ನು ಕಂಡುಕೊಳ್ಳಬೇಕಾದರೆ, ಅನಂತಮೂರ್ತಿಯ ಜೊತೆಗೆ ಅವರು ಆಡಿದ ಮಾತುಗಳನ್ನು ನಾವು ಆಲಿಸಬೇಕು. ಆ ಸಂಭಾಷಣೆಗಳನ್ನು ಪಟ್ಟಾಭಿರಾಮ ಸೋಮಯಾಜಿಯವರು ಎಷ್ಟು ಜಾಗರೂಕತೆಯಿಂದ ಆರಿಸಿ ಬರಹ ರೂಪಕ್ಕಿಳಿಸಿದ್ದಾರೆಂದರೆ, ಆ ಮಾತುಕತೆಯಲ್ಲಿ ಪಟ್ಟಾಭಿಯೂ ಒಂದಾಗಿ ಬಿಟ್ಟಂತಿದೆ.

‘‘ಆಸ್ಟ್ರೇಲಿಯಾದ ಬಗ್ಗೆ ನಮಗೆ ಸ್ವಲ್ಪ ಹೇಳ್ತೀರಾ ಸರ್?’’ ಎಂದು ಅನಂತಮೂರ್ತಿ ಕೇಳಿದರೆ, ಅವರು ಅಲ್ಲಿನ ಮಿಲಿಟರಿ ಶಕ್ತಿಯ ಕುರಿತಾಗಿಯಾಗಲಿ, ರಾಜಕೀಯ ಶಕ್ತಿಯ ಕುರಿತಾಗಿಯಾಗಲಿ ಮಾತನಾಡುವುದಿಲ್ಲ. ಬದಲಿಗೆ, ಅಲ್ಲಿಯ ಎಬ್ ಓರಿಜಿನ್ಸ್‌ಗಳ ಕುರಿತಂತೆ ಮಾತನಾಡುತ್ತಾರೆ. ಆಸ್ಟ್ರೇಲಿಯಾವನ್ನು ಕಟ್ಟಿದ್ದು ಅವರು ಎನ್ನುತ್ತಾರೆ. ಆದರೂ ಅವರ ಮಾತುಗಳಲ್ಲಿ ಕೊಡಗಿನ ಶ್ರೀಮಂತ ಪಾಳೇಗಾರನ ಗುಣ ಮತ್ತು ಅವರ ಆಳದಲ್ಲಿ ಮಲಗಿರುವ ಸಾಮಾನ್ಯ ಮನುಷ್ಯನ ನಡುವಿನ ತಾಕಲಾಟವನ್ನು ಅಲ್ಲಲ್ಲಿ ಗುರುತಿಸಬಹುದು. ಆದರೆ ಅದನ್ನು ಹೊರಗೆಡಹಿದ ಚಾಕಚಕ್ಯತೆ ಮಾತ್ರ ಅನಂತಮೂರ್ತಿಯವರಿಗೆ ಸೇರಿದ್ದು.
ಯುದ್ದ ಭೂಮಿಯಲ್ಲಿ ಮನುಷ್ಯರ ವಿರುದ್ದ ಗುಂಡಿನ ದಾಳಿ ನಡೆಸಲು ಆದೇಶ ನೀಡುವ ಸೇನಾನಿಯೊಬ್ಬ ಹಿಂಸೆಯ ಕುರಿತಂತೆ ಮಾತನಾಡುವ, ಅಥವಾ ಅದರ ಕುರಿತಂತೆ ಅವರಿಗಿರುವ ಗೊಂದಲಗಳನ್ನು ಕೆಲವು ಮಾತುಗಳು ಅಭಿವ್ಯಕ್ತಿಗೊಳಿಸುತ್ತದೆ.
ಅನಂತ ಮೂರ್ತಿ ಕೇಳುತ್ತಾರೆ ‘‘ನೀವು ಸಸ್ಯಾಹಾರಿ ಯಾಗಿದ್ದೀರಿ ಅಂತ...’’ ಆದರೆ ತಾನು ಸಸ್ಯಾಹಾರಿಯಲ್ಲ ಎನ್ನುತ್ತಾರೆ ಕಾರಿಯಪ್ಪ. ಕೋಳಿ, ಮೀನುಗಳ ಬಗ್ಗೆ ನನಗೆ ಅತೀವ ಪ್ರೀತಿ ಅನ್ನುತ್ತಾರೆ. ಜೀವನದ ಕೊನೆಯ ಘಟ್ಟದಲ್ಲಿ ಕೋಳಿ, ಹಂದಿಯನ್ನು ಬಿಡುತ್ತಾರೆ. ಬಳಿಕ ಮೀನನ್ನೂ ಬಿಡುತ್ತಾರೆ. ಅವರು ಈ ಕುರಿತಂತೆ ಹೇಳುವ ಮಾತು ಅತ್ಯಂತ ಮುಗ್ದವಾಗಿದೆ. ಹಾಗೇ ಅಷ್ಟೇ ತಮಾಷೆಯೂ ಆಗಿದೆ ‘‘ಕುರಿ, ಕೋಳಿ, ಬಾತುಕೋಳಿ ಮರಿಗಳು, ಮತ್ತೆ ಹಂದಿ ಮರಿಗಳು, ಕರುಗಳು ಎಲ್ಲ ಬೆಳೆದು ದೊಡ್ಡ ಆಗ್ತವೆ. ಅದನ್ನು ಕತ್ತರಿಸಿ ತಿಂತಾರೆ ಕ್ರೂರಿ ಮನುಷ್ಯರು. ನಾನು ಕ್ರೂರಿಯಲ್ಲ...’’ ಇದು ಒಬ್ಬ ನಿವೃತ್ತ ಸೇನಾಧಿಕಾರಿಯ ಒಳಗಿನ ತಳಮಳ, ಘರ್ಷಣೆಗಳು. ಅಥವಾ ಪಾಪಪ್ರಜ್ಞೆ! ಒಂದು ಕಾದಂಬರಿಗೆ ವಸ್ತುವಾಗಬಲ್ಲ ಸಾಲುಗಳು ಇವು.

ಆದುದರಿಂದಲೇ ಮಾತುಕತೆ ಮುಂದುವರಿದಂತೆಲ್ಲ, ಅನಂತಮೂರ್ತಿಯವರು ಕಾರ್ಯಪ್ಪರ ಇನ್ನಷ್ಟು ಆಳಕ್ಕೆ ಹೋಗಬೇಕು ಎಂಬ ಆತುರ ದುರಾಸೆ ನಮ್ಮನ್ನು ಕಾಡುತ್ತದೆ. ಈ ಸಂದರ್ಶನಕ್ಕೆ ಆ ಸಾಧ್ಯತೆಯಿತ್ತು. ಆದರೆ ಅನಂತ ಮೂತಿರ್ಯ ಮುಂದೆ ಕುಳಿತಿರುವವರು, ಸೇನೆಯಿಂದ ನಿವೃತ್ಥರಾಗಿರುವ ವೃದ್ಧ ಜೀವ. ಅದರ ಘನತೆಯನ್ನು ಬಿಟ್ಟುಕೊಡುವುದಕ್ಕೆ ಅನಂತಮೂರ್ತಿ ಸಿದ್ಧರಿಲ್ಲ. ಆದುದರಿಂದ ಎಲ್ಲಿಯೂ ಪ್ರಶ್ನೆಯನ್ನ್ನು ಹರಿತವಾಗಿಸಿಲ್ಲ. ಸಂದರ್ಭದ ಸೂಕ್ಷ್ಮತೆಯನ್ನು ಅರಿತುಕೊಂಡು, ಅನಂತಮೂರ್ತಿಯವರು ಪ್ರಶ್ನಿಸುತ್ತಾ ಹೋದ ಕಾರಣ, ಎಲ್ಲೂ ಮಾತುಕತೆಯ ಸಹಜ ಸೌಂದರ್ಯಕ್ಕೆ ಧಕ್ಕೆಯಾಗದಂತೆಯೇ ಪ್ರಶ್ನೆಗಳನ್ನು ಇಡುತ್ತಾ ಹೋಗುತ್ತಾರೆ. ಇನ್ನಷ್ಟು ಅಗೆಯಬೇಕು, ಬಗೆಯಬೇಕು, ಅವರಿಂದ ಉತ್ತರಗಳನ್ನು ಬಲವಂತದಿಂದ ಪಡೆಯಬೇಕು ಎಂಬಿತ್ಯಾದಿ ಸಂದರ್ಶಕನ ಸ್ವಾರ್ಥ ಅನಂತಮೂರ್ತಿಯವರ ಪ್ರಶ್ನೆಗಳಿಲ್ಲ. ಇದು ಒಟ್ಟು ಮಾತುಕತೆಯ ಹೆಗ್ಗಳಿಕೆಯೂ ಹೌದು.

ಇಡೀ ಪುಸ್ತಕದಲ್ಲಿ ಒಬ್ಬ ನಿವೃತ್ತ ಸೇನಾಧಿಕಾರಿ ಮತ್ತು ಚಿಂತಕನ ನಡುವಿನ ಮಾತುಕತೆ ಸದ್ಯದ ಸಂದರ್ಭಕ್ಕೆ ಅತ್ಯಂತ ಮಹತ್ವದ್ದು ಎಂದು ನಾನು ಭಾವಿಸಿ, ಅದಕ್ಕೆ ಆದ್ಯತೆ ನೀಡಿ ಉಲ್ಲೇಖಿಸಿದ್ದೇನೆ. ರಾಜೀವ ತಾರಾನಾಥ್ ಮತ್ತು ಅನಂತಮೂರ್ತಿಯವರ ನಡುವಿನ ಸಂಭಾಷಣೆ ಯಂತೂ ಹೃದ್ಯ, ಪದ್ಯವೆನಿಸುವ ಜುಗಲ್‌ಬಂದಿ. ಜೆ. ಎಚ್. ಪಟೇಲ್ ಮತ್ತು ಎಸ್. ಎಂ. ಕೃಷ್ಣ ಅವರೊಂದಿಗಿನ ಮಾತುಕತೆಯೂ ಇಲ್ಲಿ ಉಲ್ಲೇಖಿಸಬೇಕಾದುದು. ಸದ್ಯದ ಕರ್ನಾಟಕ ರಾಜಕೀಯ ಸ್ಥಿತಿಗತಿಯ ಸಂದರ್ಭದಲ್ಲಿ ಈ ಮಾತುಕತೆ ಇನ್ನಷ್ಟು ಮಹತ್ವವನ್ನು ಪಡೆಯುತ್ತದೆ. ಮಾಸ್ತಿ ಮತ್ತು ಶಿವರಾಮಕಾರಂತರೊಂದಿಗಿನ ಸಂಭಾಷಣೆಗಳೂ ದಾಖಲಾರ್ಹ. ಇವೆಲ್ಲವನ್ನು ಜಾಗರೂಕತೆಯಿಂದ ಸಂಗ್ರಹಿಸಿದ ಪಟ್ಟಾಭಿರಾಮ ಸೋಮಯಾಜಿ ನಿಜಕ್ಕೂ ಅಭಿನಂದನಾರ್ಹರು. ಅನಂತಮೂರ್ತಿಯವರ ಜೊತೆಗಿನ ಅವರ ಸಾಮೀಪ್ಯವೂ ಈ ಪುಸ್ತಕವನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಿದೆ. ಮುತ್ತುಗಳಂತೆ ಪದ ಪದಗಳನ್ನೂ ಜಾಗರೂಕತೆಯಿಂದ ಆರಿಸಿ ತೆಗೆದಿರುವ ಪಟ್ಟಾಭಿ, ಕನ್ನಡ ಜಗತ್ತಿಗೆ ಒಂದು ಒಳ್ಳೆಯ ಕೊಡುಗೆಯನ್ನು ನೀಡಿದ್ದಾರೆ. ಈ ಪುಸ್ತಕದ ಮುಖಬೆಲೆ 125 ರೂ. ಆದರೆ ಈ ಪುಸ್ತಕ ನಮಗೆ ಕೊಡುವ ಸುಖಕ್ಕೆ, ಸಂತೋಷಕ್ಕೆ, ಆನಂದಕ್ಕೆ ಯಾವ ಬೆಲೆಯನ್ನೂ ಕಟ್ಟಲು ಸಾಧ್ಯವಿಲ್ಲ.
 
ಪುಸ್ತಕ : ಅನಂತಮೂರ್ತಿ ಮಾತುಕತೆ
       ಹತ್ತು ಸಮಸ್ತರ ಜೊತೆ
ಸಂಪಾದಕರು: ಎಚ್. ಪಟ್ಟಾಭಿರಾಮ ಸೋಮಯಾಜಿ
ಪ್ರಥಮ ಮುದ್ರಣ: 2010
ಬೆಲೆ: 125ರೂ.
ಪ್ರಕಾಶಕರು: ಅಹರ್ನಿಶಿ ಪ್ರಕಾಶನ
ಪ್ರಶಾಂತ ನಿಲಯ, 4ನೇ ತಿರುವು, ವಿದ್ಯಾನಗರ ಶಿವಮೊಗ್ಗ

No comments:

Post a Comment