Wednesday, July 11, 2012

ಭವಿಷ್ಯದ ರಘುವರನ್ !

ತೆಲುಗಿನ ‘ಈಗ’ ಚಿತ್ರದಲ್ಲಿ ಸುಧೀಪ್ ಅಭಿನಯ ನೋಡಿದವರ ಮನದಲ್ಲಿ -ಸುದೀಪ್ ಅವರು ರಘುವರನ್ ಜಾಗವನ್ನು ತುಂಬಲಿದ್ದಾರೆಯೆ’ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡರೆ ಅದರಲ್ಲಿ ಅಚ್ಚರಿಯಿಲ್ಲ. ಖಳಪಾತ್ರಕ್ಕೆ ಒಂದು ಹೊಸ ‘ಇಮೇಜ್’ನ್ನು ತಂದುಕೊಟ್ಟವರು ರಘುವರನ್. ಆವರೆಗೆ ಖಳನೆಂದರೆ, ಆಜಾನುಬಾಹು, ಅಟ್ಟಹಾಸದ ನಗು ಎಂದು ನಂಬಿದವರಿಗೆ ಒಂದು ಹೊಸ ಶಾಕ್ ನೀಡಿದವರು ರಘುವರನ್. ರಾಮ್‌ಗೋಪಾಲ್‌ವರ್ಮಾ ಅವರ ತೆಲುಗಿನ ‘ಶಿವ’ ಚಿತ್ರದಲ್ಲಿ ನಾಯಕನಿಗಿಂತ ಖಳನಾಯಕನೇ ಮೊದಲಬಾರಿಗೆ ಪ್ರೇಕ್ಷಕರಿಗೆ ಇಷ್ಟವಾದ. ನಾಯಕ ನಾಗಾರ್ಜುನ್ ಈ ಚಿತ್ರದಲ್ಲಿ ಪರಿಣಾಮಕಾರಿ ಅಭಿನಯ ನೀಡಿದ್ದರೂ, ರಘುವರನ್ ಅತನನ್ನು ಮೀರಿಸಿ ಪ್ರೇಕ್ಷಕರ ಎದೆಯೊಳಗೆ ಇಳಿದರು.
ಪೀಚಲು ದೇಹ, ಗೊಗ್ಗರು ಸ್ವರ, ಎಲ್ಲಕ್ಕಿಂತ ಮುಖ್ಯವಾಗಿ ಆ ಧ್ವನಿಯಲ್ಲಿನ ಏರಿಳಿತ ಪ್ರೇಕ್ಷಕರ ಪಾಲಿಗೆ ಹೊಸ ಅನುಭವವಾಗಿತ್ತು. ಮುಂದೆ ರಘುವರನ್‌ನ್ನು ಖಳಪಾತ್ರದಲ್ಲಿ ಮೀರಿಸುವವರೇ ಇಲ್ಲ ಎನ್ನುವಂತಾಯಿತು. ಕನ್ನಡದ ಪ್ರಕಾಶ್ ರೈ ತಮಿಳು, ತೆಲುಗಿಗೆ ಕಾಲಿಡುವವರೆಗೆ ರಘುವರನ್ ಖಳ ಜಗತ್ತನ್ನು ಏಕ ವ್ಯಕ್ತಿಯಾಗಿ ಆಳಿದರು.
ವಿಶೇಷವೆಂದರೆ ರಘುವರನ್ ಕನ್ನಡದಲ್ಲೂ ನಟಿಸಿದ್ದರು. ಅವರು ನಟಿಸಿದ ‘ಪ್ರತ್ಯರ್ಥ’ ಚಿತ್ರದಲ್ಲಿ ಸುದೀಪ್ ಒಂದು ಪುಟ್ಟ ಪಾತ್ರವನ್ನು ಮಾಡಿದ್ದರು. ಅಂತಹ ಸುದೀಪ್ ಇದೀಗ ತೆಲುಗಿನಲ್ಲಿ ರಘುವರನ್ ಅವರನ್ನು ನೆನಪಿಸುವಂತಹ ಪಾತ್ರವೊಂದನ್ನು ‘ಈಗ’ ಚಿತ್ರದಲ್ಲಿ ನಿರ್ವಹಿಸಿದ್ದಾರೆ. ರಘುವರನ್ ಅವರನ್ನೇ ಹೋಲುವ ಅದೇ ಪೀಚಲು ದೇಹ. ಗೊಗ್ಗರು ಸ್ವರ. ಧ್ವನಿಯ ಏರಿಳಿತ. ಬ್ಲೇಡಿನ ಅಲಗಿನಂತಹ ನೋಟ. ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದ ಅಪೂರ್ವ ಖಳನಟನಾಗಿ ಸುದೀಪ್ ಮಿಂಚಿದರೆ ಅದರಲ್ಲಿ ಅಚ್ಚರಿಯಿಲ್ಲ. ಹಿಂದಿಯ ‘ರಣ್’ ಚಿತ್ರದಲ್ಲಿ ಸುದೀಪ್ ಖಳನಾಗಿ ನಟಿಸಿದ್ದರೂ, ಅದರಲ್ಲಿ ಈ ಪರಿ ಭರವಸೆಯನ್ನು ಮೂಡಿಸಿರಲಿಲ್ಲ.
ಕನ್ನಡದ ಹಲವು ನಟರು ದಕ್ಷಿಣ ಭಾರತದ ಖಳರಾಗಿ ಮಿಂಚಿದ್ದಾರೆ. ಅವರಲ್ಲಿ ಪ್ರಮುಖರು ಟೈಗರ್ ಪ್ರಭಾಕರ್ ಮತ್ತು ಪ್ರಕಾಶ್ ರೈ. ಇದೀಗ ತೆಲುಗು ಚಿತ್ರರಂಗದ ಮೂಲಕ ಸುದೀಪ್ ಗುರುತಿಸಲ್ಪಟ್ಟಿದ್ದಾರೆ. ಸುದೀಪ್‌ಗೆ ನಾಯಕನಾಗಿ ನಟಿಸುವ ಆಸೆಯಿದ್ದರೂ, ಅವರ ಪ್ರತಿಭೆ ಖಳಪಾತ್ರಗಳಿಗೆ ಪೂರಕವಾಗಿದೆ. ಆದುದರಿಂದ ನಾಯಕ ಭ್ರಮೆಯನ್ನು ಬಿಟ್ಟು, ರಘುವರನ್ ಉಳಿಸಿಹೋದ ಸಾಮ್ರಾಜ್ಯದ ಖಾಲಿ ಪೀಠವನ್ನು ಸುದೀಪ್ ಏರಬೇಕಾಗಿದೆ. ಅವರ ಪ್ರತಿಭೆಗೆ ಇನ್ನಷ್ಟು ಅವಕಾಶಗಳು ಸಿಗಬೇಕಾಗಿದೆ.

No comments:

Post a Comment