Wednesday, October 3, 2012

ಗಾಂಧಿಗೊಂದು ಗುಡಿಯ ಕಟ್ಟಿ...


ಈ ಲೇಖನ ನಾನು ಸೆಪ್ಟಂಬರ್ 12, 2008 ರಲ್ಲಿ ಬರೆದಿರುದು. ಗಾಂಧಿ ಜಯಂತಿಯ ಹಿನ್ನೆಲೆಯಲ್ಲಿ ಮತ್ತೆ ಗುಜರಿ ಅಂಗಡಿಗೆ ಹಾಕಿದ್ದೇನೆ.

ಕಳೆದ ಸ್ವಾತಂತ್ರೋತ್ಸವ ಸಂದರ್ಭದಲ್ಲಿ ವಿವಿಧ ಮಾಧ್ಯಮಗಳಲ್ಲಿ ವರದಿಯ ರೂಪದಲ್ಲಿ ವಿಚಿತ್ರವೊಂದು ಪ್ರಸಾರಗೊಂಡಿತು. ಅದೇನೆಂದರೆ, ದಾವಣಗೆರೆ, ಮೈಸೂರು, ಬೆಂಗಳೂರು, ಮಂಗಳೂರು ಸೇರಿದಂತೆ ವಿವಿಧ ಊರುಗಳಲ್ಲಿ ಗಾಂಧೀಜಿಯ ದೇವಸ್ಥಾನಗಳು ತೆರೆದಿರುವುದು. ಈ ದೇವಸ್ಥಾನಗಳಲ್ಲಿ ಗಾಂಧೀಜಿಯನ್ನು ದೇವರಂತೆ ಪ್ರತಿಷ್ಠಾಪಿಸಲಾಗಿದ್ದು, ಪೂಜೆ, ಆರತಿ, ಮಂಗಳಾರತಿ ಇತ್ಯಾದಿ ವೈದಿಕ ಆಚರಣೆಗಳು ಎಲ್ಲ ದೇವಸ್ಥಾನಗಳಲ್ಲಿ ನಡೆಯುವಂತೆ ನಡೆಯುತ್ತಿದ್ದವು. ಮಾಧ್ಯಮಗಳಲ್ಲಿ ಈ ದೇವಸ್ಥಾನಗಳನ್ನು ವೈಭವೀಕರಿಸಲಾಗುತ್ತಿತ್ತು. ಒಂದು ಚಾನೆಲ್‌ನಲ್ಲಂತೂ ರಾಜ್ಯದ ವಿವಿಧೆಡೆಗಳಲ್ಲಿರುವ ಗಾಂಧೀ ದೇವಸ್ಥಾನಗಳು, ಅವುಗಳ ದಿನಚರಿಯ ಕುರಿತು ಸ್ವಾತಂತ್ರೋತ್ಸವದ ವಿಶೇಷ ಎನ್ನುವ ರೀತಿಯಲ್ಲಿ ತೋರಿಸಲಾಗುತ್ತಿತ್ತು. ‘ಹೇಗೆ ಗ್ರಾಮೀಣ ಪ್ರದೇಶದ ಜನರು ಗಾಂಧಿಯಿಂದ ಪ್ರಭಾವಿತರಾಗಿದ್ದಾರೆ?’ ಎನ್ನುವುದನ್ನು ಹೇಳುವ ಪ್ರಯತ್ನವೂ ಇಲ್ಲಿ ನಡೆಯುತ್ತಿತ್ತು. ನಿಜಕ್ಕೂ ಇಲ್ಲಿ ಗಾಂಧಿಯನ್ನು ಗೌರವಿಸಲಾಗುತ್ತಿದೆಯೇ? ಈ ಗಾಂಧಿಗೆ ಗುಡಿಯನ್ನು ಕಟ್ಟಿದವರು ನಿಜಕ್ಕೂ ಗಾಂಧೀಜಿಯ ಹಿಂಬಾಲಕರೇ? ಗಾಂಧಿಗೆ ಮಂಗಳಾರತಿ ಎತ್ತುತ್ತಿರುವ ಪೂಜಾರಿಗೆ ಗಾಂಧೀಜಿಯ ಬಗ್ಗೆ ಏನಾದರೂ ಗೊತ್ತಿದೆಯೇ? ಈ ಗುಡಿಯ ಅಂತಿಮ ಉದ್ದೇಶವಾದರೂ ಏನು? ಸ್ವಾತಂತ್ರದ ದಿನ ನನ್ನ ತಲೆ ಕೊರೆಯತೊಡಗಿತು.

ಗಾಂಧೀಜಿ ಶ್ರೀರಾಮಚಂದ್ರನ ಪರಮ ಭಕ್ತ. ಅವರಿಗೆ ಶ್ರೀರಾಮ ಒಂದು ನೆಪ. ಅದೊಂದು ಸಂಕೇತವೇ ಹೊರತು, ಅವರ ಪಾಲಿಗೆ ಯಾವತ್ತೂ ಸ್ಥಾವರವಾಗಿರಲಿಲ್ಲ. ಆತನ ವೌಲ್ಯ, ಆದರ್ಶಗಳನ್ನು ಗೌರವಿಸುತ್ತಿದ್ದವರು. ಆದರೆ ಯಾವತ್ತೂ ಅವರು ‘ಅಯೋಧ್ಯೆಯಲ್ಲಿ ರಾಮನ ದೇವಸ್ಥಾನವಾಗಬೇಕು’ ಎಂದವರಲ್ಲ. ಅಷ್ಟೇ ಏಕೆ, ಪರಮಶ್ರೇಷ್ಠ ಹಿಂದೂ ಆಗಿರುವ ಮಹಾತ್ಮಾ ಗಾಂಧೀಜಿ ತನ್ನ ಜೀವನಾವಧಿಯಲ್ಲಿ ಒಂದೇ ಒಂದು ಗುಡಿಯನ್ನು ಕಟ್ಟಿದವರೂ ಅಲ್ಲ. ಗಾಂಧೀಜಿಯ ಬದುಕಿನಲ್ಲಿ ಅವರು ಇಂತಹಾ ದೇವಸ್ಥಾನದ ಆರಾಧಕರು ಎಂದೂ ಎಲ್ಲೂ ಉಲ್ಲೇಖವಾಗಿಲ್ಲ. ಆರಾಧನೆಯು ಅವರಿಗೆ ಜನರನ್ನು ಒಂದೆಡೆ ಸೇರಿಸುವ ಒಂದು ದಾರಿಯಾಗಿತ್ತು. ಆದುದರಿಂದಲೇ ಅವರು ‘ಈಶ್ವರ ಅಲ್ಲಾ ತೇರೇ ನಾಮ್’ ಎಂದರು. ಯಾವತ್ತೂ ಅವರು ಪೂಜೆಗಾಗಿ ಗುಡಿಗೆ ತೆರಳಿದವರಲ್ಲ. ತನ್ನ ಆಶ್ರಮದಲ್ಲಿ ರಾಮಭಜನೆಯನ್ನು ಏರ್ಪಡಿಸುತ್ತಿದ್ದರು. ಎಲ್ಲ ಧರ್ಮೀಯರ ಜೊತೆ ಒಂದಾಗಿ ಅದನ್ನು ನೆರವೇರಿಸುತ್ತಿದ್ದರು. ಅವರಿಗೆ ರಾಮ ವಿಗ್ರಹ ಆಗಿರಲಿಲ್ಲ. ಸತ್ಯ, ವಚನ ಪರಿಪಾಲನೆ ಮೊದಲಾದ ಆದರ್ಶಗಳಿಗೆ ಅವರು ರಾಮನ ಹೆಸರನ್ನು ಕೊಟ್ಟಿದ್ದರು. ಅದು ಬರೇ ಹೆಸರು ಅಷ್ಟೇ. ಆ ಹೆಸರನ್ನು ಈಶ್ವರ, ಅಲ್ಲಾ ಎಂದು ವ್ಯತ್ಯಾಸಗೊಳಿಸಿದರೂ ಅವರಿಗೆ ಅದರಲ್ಲೇನೂ ವ್ಯತ್ಯಾಸ ಕಾಣುತ್ತಿರಲಿಲ್ಲ. ಸತ್ಯದಲ್ಲಿ ಅವರು ದೇವರನ್ನು ಕಾಣುವ ಪ್ರಯತ್ನ ಮಾಡುತ್ತಿದ್ದರು. ಯಾವತ್ತೂ ತನ್ನ ಪೂಜೆಗಾಗಿ ಅವರು ವೈದಿಕ ಬ್ರಾಹ್ಮಣರನ್ನು ಆಶ್ರಮದೊಳಗೆ ಬಿಟ್ಟುಕೊಟ್ಟ ಉದಾಹರಣೆಯಿಲ್ಲ. ವೈದಿಕ ಆಚರಣೆಯಲ್ಲಿ ನಂಬಿಕೆ ಇದ್ದವರು ಗಾಂಧೀಜಿಯನ್ನು ಗೌರವಿಸುವ ಉದಾಹರಣೆಯೂ ಇತಿಹಾಸದಲ್ಲಿಲ್ಲ. ಗಾಂಧೀಜಿ ಒಮ್ಮೆ ದೇಶದ ಎಲ್ಲಾ ದೇವಸ್ಥಾನಗಳನ್ನು ಸಂದರ್ಶಿಸಿದ್ದರು. ಆದರೆ ಅಲ್ಲಿರುವ ಜಾತೀಯತೆ ಮತ್ತು ಪರಿಸರ ಮಾಲಿನ್ಯವನ್ನು ಕಂಡ ಗಾಂಧೀಜಿ, ಆ ದೇವಸ್ಥಾನಗಳ ಮೇಲೆ, ಪುಣ್ಯಕ್ಷೇತ್ರಗಳ ಮೇಲೆ ರೋಸಿ ಮಾತನಾಡಿದ್ದರು. ಅದೇ ಕೊನೆ. ಮತ್ತೆಂದಿಗೂ ಅವರು ದೇವಸ್ಥಾನಗಳನ್ನು, ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುವ ಸಾಹಸವನ್ನು ಮಾಡಲಿಲ್ಲ. ಗಾಂಧೀಜಿಯನ್ನು ಕೊಂದವರು ಯಾರು ಎನ್ನುವುದನ್ನು ನಾವು ಒಂದು ಕ್ಷಣ ನೆನೆಯೋಣ. ಇಂದು ರಾಮನಿಗಾಗಿ ಗುಡಿಯನ್ನು ಕಟ್ಟಲು ಹೋರಾಡುತ್ತಿರುವವರೇ ಈ ದೇಶದ ಶ್ರೇಷ್ಠ ರಾಮಭಕ್ತನನ್ನು ಗುಂಡಿಟ್ಟು ಕೊಂದರು. ಗಾಂಧೀಜಿ ರಾಮನ ಕುರಿತಂತೆ ಮಾತನಾಡುತ್ತಿದ್ದರು. ಗಾಂಧಿಯನ್ನು ಕೊಂದವರು ರಾಮನ ಕುರಿತಂತೆಯೇ ಮಾತನಾಡುತ್ತಾರೆ. ಗಾಂಧಿ ಸದಾ ರಾಮನ ಕುರಿತಂತೆ, ಆತನ ವೌಲ್ಯಗಳ ಕುರಿತಂತೆ ಮಾತನಾಡುತ್ತಿದ್ದರು. ಆದರೆ ರಾಮನಿಗೆ ಗುಡಿ ಕಟ್ಟುವ ಕುರಿತಂತೆ ಯಾವತ್ತೂ ಮಾತನಾಡಿರಲಿಲ್ಲ. ರಾಮನ ಕುರಿತಂತೆ ಗಾಂಧಿ ಮಾತನಾಡುತ್ತಿದ್ದಾಗ ಅವರ ಅಕ್ಕಪಕ್ಕದಲ್ಲೇ ಅಬುಲ್ ಕಲಾಂ ಆಝಾದ್, ಖಾನ್ ಅಬ್ದುಲ್ ಗಫಾರ್ ಖಾನ್‌ರಂತಹಾ ಮುಸ್ಲಿಂ ವಿದ್ವಾಂಸರು ತಲೆದೂಗುತ್ತಿದ್ದರು. ಆದರೆ ಸದ್ಯದ ದಿನಗಳಲ್ಲಿ ಕೆಲವರಿಗೆ ರಾಮನ ಬಗ್ಗೆ ಮಾತನಾಡುವುದೆಂದರೆ, ಈ ದೇಶದ ಹಿಂದೂಗಳನ್ನು ಮುಸ್ಲಿಮರ ಮೇಲೆ ಎತ್ತಿ ಕಟ್ಟುವುದು ಎಂದರ್ಥ. ಸಂಘ ಪರಿವಾರ ರಾಮನಿಗೆ ಗುಡಿಯನ್ನು ಕಟ್ಟ ಹೊರಟಿದ್ದರೆ, ಗಾಂಧೀಜಿ ರಾಮನನ್ನು ಗುಡಿಯಿಂದ ಬಿಡುಗಡೆ ಮಾಡಲು ಬಯಸಿದ್ದರು. ಗುಡಿಯ ಹೊರಗಿರುವ ರಾಮ ಬೇರೆ, ಒಳಗಿರುವ ರಾಮ ಬೇರೆ. ಒಳಗಿರುವ ರಾಮನಿಗೆ ವಾರಸುದಾರರಿರುತ್ತಾರೆ. ಆ ಗುಡಿಯ ಒಡೆಯರು, ಆ ಗುಡಿಯ ಪೂಜಾರಿಗಳು, ಆ ಗುಡಿಯನ್ನು ಸುತ್ತುವರಿದಿರುವ ಜಾತಿ, ಧರ್ಮ ಇವೆಲ್ಲವುಗಳಿಂದ ರಾಮ ಬಂಧಿತನಾಗಿರುತ್ತಾನೆ. ಒಂದು ರೀತಿಯಲ್ಲಿ ಅಲ್ಲಿ ರಾಮನಿರುವುದೇ ಇಲ್ಲ. ಬರೇ ರಾಮನ ವಿಗ್ರಹ ಮಾತ್ರವಿರುತ್ತದೆ. ಇದು ರಾಮನ ಕುರಿತಂತೆ ಗಾಂಧಿಯ ತಿಳುವಳಿಕೆಯಾಗಿತ್ತು. ರಾಮ ಹುಟ್ಟಿದುದು ಅಯೋಧ್ಯೆಯಲ್ಲಲ್ಲ, ಗೋಡ್ಸೆಯ ಗುಂಡೇಟಿಗೆ ಉರುಳಿಬಿದ್ದ ಗಾಂಧಿಯ ಉದ್ಗಾರದಲ್ಲಿ ರಾಮ ಹುಟ್ಟಿದ ಎನ್ನುವುದು ಈ ಕಾರಣಕ್ಕೆ.
ಇಂತಹ ಗಾಂಧಿಯನ್ನು ಸಂಪೂರ್ಣ ಇಲ್ಲವಾಗಿಸುವ ಪ್ರಯತ್ನವಾಗಿ, ಗಾಂಧೀಜಿಗಾಗಿಯೇ ಗುಡಿಯನ್ನು ಕಟ್ಟುವ ಪ್ರಯತ್ನ ನಡೆಯುತ್ತಿದೆ. ಗೋಡ್ಸೆಯ ಗುಂಡಿನಿಂದ ಸಾಯದ ಗಾಂಧಿಯನ್ನು ಗುಡಿಯ ಕಲ್ಲುಗಳಿಂದ ಸಮಾಧಿ ಮಾಡುವ ಪ್ರಯತ್ನ ಇದಾಗಿದೆ. ಗಾಂಧೀಜಿಗೆ ದೇವಸ್ಥಾನವನ್ನು ಕಟ್ಟಿ, ಪೂಜೆ ಸಲ್ಲಿಸುವುದನ್ನು ನಾವು ಈ ಕಾರಣಕ್ಕಾಗಿ ಕಟುವಾಗಿ ವಿರೋಧಿಸಬೇಕಾಗಿದೆ. ಟಿವಿ ಚಾನೆಲ್‌ಗಳಲ್ಲಿ ಪೂಜಾರಿಯೊಬ್ಬ ಗಾಂಧೀಜಿಯ ವಿಗ್ರಹ ಮುಂದೆ ಆರತಿ ಎತ್ತಿ, ಗಂಟೆ ಆಡಿಸುತ್ತಿದ್ದ. ಕೆಳಜಾತಿಯವರನ್ನು ಕಂಡರೆ ಮೈಲು ದೂರ ಹಾರುವ ಇವರಿಂದ ಗಾಂಧೀಜಿಯನ್ನು ಆರಾಧಿಸಲು, ಪೂಜಿಸಲು ಸಾಧ್ಯವೇ? ನಾಳೆ ಈ ಗುಡಿ ದೊಡ್ಡ ದೇವಸ್ಥಾನವಾಗಿ ಗಾಂಧೀಜಿಯ ಅಕ್ಕಪಕ್ಕದಲ್ಲಿ ರಾಮ, ಕೃಷ್ಣರು ನೆಲೆಯಾಗಬಹುದು. ಯಾವುದಾದರೂ ಒಂದು ಮಠ ಇದರ ಉಸ್ತುವಾರಿ ನೋಡಿಕೊಳ್ಳಲು ಮುಂದಾಗಬಹುದು. ಬಳಿಕ, ಎಲ್ಲಾ ದೇವಸ್ಥಾನಗಳಿಗೂ ಅಮರಿಕೊಂಡಂತೆ, ಈ ಗಾಂಧಿಯ ದೇವಸ್ಥಾನಕ್ಕೂ ಸಂಘ ಪರಿವಾರ ಅಮರಿಕೊಳ್ಳಬಹುದು. ಈ ದೇವಸ್ಥಾನದ ಆವರಣದಲ್ಲೆ ಗೋಡ್ಸೆಯ ಹಿಂಬಾಲಕರು ತಮ್ಮ ಬೈಠಕ್‌ಗಳನ್ನು ನಡೆಸಬಹುದು. ಗಾಂಧೀಜಿಯನ್ನು ಕೊಲ್ಲುವುದಕ್ಕೆ ಹುಡುಕಿರುವ ಹೊಸ ದಾರಿ ಇದು.

ಈ ದೇಶದಲ್ಲಿ ದೇವರಿಗಳಿಗೇನೂ ಬರವಿಲ್ಲ. ಅವುಗಳ ಸಾಲಿನಲ್ಲಿ ಗಾಂಧೀಜಿ ನಿಲ್ಲುವುದು ಬೇಡ. ಗಾಂಧೀಜಿ ನಮ್ಮ ಮುಂದೆ ಒಬ್ಬ ಸಾಮಾನ್ಯ ಮನುಷ್ಯನಾಗಿ ಶಾಶ್ವತವಾಗಿ ಇರಲಿ. ಒಬ್ಬ ಮನುಷ್ಯನಾಗಿ ಎಷ್ಟು ಎತ್ತರಕ್ಕೆ ಏರಬಹುದು ಎನ್ನುವುದಕ್ಕೆ ಗಾಂಧೀಜಿ ನಮ್ಮ ಮುಂದಿದ್ದಾರೆ, ಸಕಲ ಮನುಷ್ಯರಿಗೂ ಒಂದು ಭರವಸೆಯಾಗಿ. ಆ ಭರವಸೆಯನ್ನು ನಾವು ಇಲ್ಲವಾಗಿಸುವುದು ಬೇಡ. ಗಾಂಧೀಜಿಯ ಹೆಸರಿನಲ್ಲಿ ಕಟ್ಟಿರುವ ಗುಡಿಗಳು ಗಾಂಧೀಜಿಗೆ ಮಾಡಿರುವ ಅವಮಾನ. ಗಾಂಧೀಜಿಯ ಹೆಸರಲ್ಲಿ ಗ್ರಂಥಾಲಯಗಳು, ಶಾಲೆಗಳು ತೆರೆಯಲಿ. ಯಾವ ಕಾರಣಕ್ಕೂ ಗಾಂಧೀಜಿಗೆ ಗುಡಿಯ ಹೆಸರಿನಲ್ಲಿ ಸಮಾಧಿ ಕಟ್ಟುವುದು ಬೇಡ.
ಸೆಪ್ಟಂಬರ್ 12, 2008

No comments:

Post a Comment