Wednesday, December 5, 2012

ನಮ್ಮ ನೆಲದ ಶಿವಾಜಿ: ಮುಸ್ಲಿಂ ವಿರೋಧಿಯೆಂಬ ಸುಳ್ಳಿನ ಮುಳ್ಳು ಕಿರೀಟ

ಶಿವಾಜಿ ಸಮಾಧಿ
ಹಿಂದಿನ ವಾರದಿಂದ ಮುಂದುವರೆಯುದು

ಶಿವಾಜಿಯ ಹೋರಾಟ, ಸಂಘರ್ಷಗಳಿಗೆ ‘ಹಿಂದುತ್ವ’ ವನ್ನು ಆರೋಪಿಸಿದ್ದು ಆತನ ಆನಂತರದ ಕಾಲದಲ್ಲಿ. ಅದನ್ನು ವೈಭವೀಕರಿಸಿ ಆತನನ್ನು ಹಿಂದೂನಾಯಕನಾಗಿ ಪರಿವರ್ತಿಸಿದ್ದು ಬಾಲ ಗಂಗಾಧರ ತಿಲಕ್‌ರ ರಾಷ್ಟ್ರೀಯವಾದದ ಸಂದರ್ಭದಲ್ಲಿ. ಜನರಲ್ಲಿ ಹಿಂದೂ ರಾಷ್ಟ್ರೀಯತೆಯನ್ನು ಬಿತ್ತುವ ಉದ್ದೇಶದಿಂದ, ಇತಿಹಾಸವನ್ನು ವೈಭವೀಕರಿಸಲಾಯಿತು. ಮುಂದೆ ಇದನ್ನು ಸಂಘಪರಿವಾರ ಮುಸ್ಲಿಮರನ್ನು ವಿರೋಧಿಸುವು ದಕ್ಕಾಗಿ ಬಳಸಿಕೊಂಡಿತು. ಒಂದು ರೀತಿಯಲ್ಲಿ ಇತಿಹಾಸವನ್ನು ತಿರುಚಲಾಯಿತು. ಪುರಾಣವೂ ಇತಿಹಾಸದೊಂದಿಗೆ ಅನೈತಿಕ ಸಂಬಂಧ ಬೆಳೆಸಿತು. ಈ ಕಾರಣದಿಂದಲೇ ಶಿವಾಜಿಯ ಕೈಯಲ್ಲಿರುವ ಕತ್ತಿಯನ್ನು ಭವಾನಿಯೇ ಪ್ರತ್ಯಕ್ಷಳಾಗಿ ನೀಡಿದಳು ಎನ್ನಲಾಯಿತು. ಆದರೆ ಆತನ ಕೈಯಲ್ಲಿರುವ ಕತ್ತಿ ಪೋರ್ಚುಗೀಸರ ಕಾಲದ್ದು ಎಂದು ಇತಿಹಾಸಕಾರರು ಸಾಬೀತು ಪಡಿಸಿದ್ದಾರೆ. ಆ ಸಂದರ್ಭದಲ್ಲಿ ಪೋರ್ಚುಗೀಸರ ಕಾಲದ ಖಡ್ಗಗಳು ಯುದ್ಧ ಭೂಮಿಯಲ್ಲಿ ಪ್ರಸಿದ್ಧವಾಗಿದ್ದವು.

ಶಿವಾಜಿಯು ಮೊಗಲರ ವಿರುದ್ಧ ನಡೆಸಿದ ಯುದ್ಧ ಹಿಂದೂಗಳು ಮುಸ್ಲಿಮರ ವಿರುದ್ಧ ನಡೆಸಿದ ಯುದ್ಧವೇ ಆಗಿದ್ದರೆ ಶಿವಾಜಿಯ ಸೇನೆಯಲ್ಲಿ ಮುಸ್ಲಿಮ್ ಯೋಧರು ಇರುವುದಕ್ಕೆ ಸಾಧ್ಯವಿರಲಿಲ್ಲ. ಹಾಗೆಯೇ ಮೊಗಲರ ಸೇನೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಹಿಂದೂಗಳು ಯೋಧರಾಗಿ ಇರುವುದಕ್ಕೆ ಸಾಧ್ಯ ವಿರಲಿಲ್ಲ. ಶಿವಾಜಿಯ ಸೇನೆಯ ಮಹತ್ವದ ವಿಭಾಗಗಳ ಉಸ್ತುವಾರಿಯನ್ನೆಲ್ಲ ಮುಸ್ಲಿಮರೇ ನೋಡಿಕೊಳ್ಳುತ್ತಿದ್ದರು. ಶಿವಾಜಿಯ ಸೇನೆಯಲ್ಲಿದ್ದ ಹೆಚ್ಚಿನ ಮುಸ್ಲಿಮರು ಮಹತ್ವದ ಪದವಿಯನ್ನು ಹೊಂದಿದ್ದರು. ಶಿವಾಜಿಯ ಸೇನೆಯ ಮುಖ್ಯ ಅಂಗ ತೋಪುಖಾನೆ. ಅದರ ನಿಯಂತ್ರಣ ಇಬ್ರಾಹೀಂ ಖಾನ್ ಬಳಿಯಿತ್ತು. ಶಿವಾಜಿ ಮುಸ್ಲಿಮರ ವಿರುದ್ಧ, ಹಿಂದೂ ಧರ್ಮದ ಪರವಾಗಿ ಯುದ್ಧ ನಡೆಸಿದ್ದು ನಿಜವೇ ಆಗಿದ್ದರೆ ಇದು ಸಾಧ್ಯವಾಗುವ ಮಾತಾಗಿತ್ತೆ? ಇನ್ನೊಂದು ಬಹುಮುಖ್ಯ ವಿಭಾಗ ನೌಕಾಸೇನೆ. ಯಾಕೆಂದರೆ ಕೊಂಕಣದ ಬಹುತೇಕ ಭೂಮಿ ಸಮುದ್ರಕ್ಕೆ ಅಂಟಿಕೊಂಡಿತ್ತು. ಈ ನೌಕಾಸೇನೆಯ ಮುಖ್ಯಸ್ಥನಾಗಿ ದರ್ಯಾಸಾರಂಗ ದೌಲತ್‌ಖಾನ್ ಎಂಬ ಸರದಾರನನ್ನು ಶಿವಾಜಿ ನೇಮಕ ಮಾಡಿದ್ದ. ಶಿವಾಜಿಯ ಖಾಸಾ ಅಂಗರಕ್ಷಕರಲ್ಲಿ 11 ಮಂದಿ ಮುಸ್ಲಿಮರಿದ್ದರು. ಅವರಲ್ಲಿ ಮುಖ್ಯನಾದ ಮಲಾರಿ ಮ್ಹೇತರ ಎಂಬ ವ್ಯಕ್ತಿಯ ಪ್ರಸ್ತಾಪವಿದೆ. ಆಗ್ರಾದಲ್ಲಿ ಶಿವಾಜಿಯ ಬಿಡುಗಡೆಗಾಗಿ ಅತಿ ದೊಡ್ಡ ಸಹಾಯ ವನ್ನು ಮಾಡಿದಾತ ಇದೇ ಮುಸ್ಲಿಮ್ ಅಂಗರಕ್ಷಕ ನಾಗಿದ್ದ. ಶಿವಾಜಿಯ ಹೋರಾಟ ಮುಸ್ಲಿಮರ ಅಥವಾ ಸಂಘಪರಿವಾರ ಹೇಳುವಂತೆ ಮ್ಲೇಚ್ಛರ ವಿರುದ್ಧದ ಹೋರಾಟವಾಗಿದ್ದರೆ ಇದು ಸಂಭವಿಸಲು ಸಾಧ್ಯವಿತ್ತೆ? ಸಾಲೇರಿಯಾ ಕಾಳಗದ ಬಳಿಕ ಮಾತುಕತೆಗಾಗಿ ಶಿವಾಜಿಯು ಔರಂಗಜೇಬನ ಅಧಿಕಾರಿಗಳ ಬಳಿಗೆ ಕಳಿಸಿದ ದೂತನ ಹೆಸರು ಖಾಝಿ ಹೈದರ್. ಇದೇ ಸಂದರ್ಭದಲ್ಲಿ ಔರಂಗಜೇಬನ ಅಧಿಕಾರಿಗಳು ಶಿವಾಜಿಯ ಬಳಿಗೆ ಕಳುಹಿಸಿದ ವಕೀಲ ಒಬ್ಬ ಬ್ರಾಹ್ಮಣನಾಗಿದ್ದ. ಶಿವಾಜಿಗಾಗಿ ಅನೇಕ ಮುಸ್ಲಿಮ್ ಸರದಾರರು ಪ್ರಾಣಾರ್ಪಣೆ ಮಾಡಿದ್ದಾರೆ. 1660ರಲ್ಲಿ ಸಿದ್ದಿ ಜೌಹರನು ಪನ್ಙಾಳಗಡವನ್ನು ಮುತ್ತಿದಾಗ ಶಿವಾಜಿಯ ಪರವಾಗಿ ಸಿದ್ದಿ ಹಿಲಾಲ ಎಂಬ ಮುಸಲ್ಮಾನ ಸರದಾರ ತನ್ನ ಮಗನ ಜೊತೆಗೆ ಹೋರಾಡಿದ. ಈ ಹೋರಾಟದಲ್ಲಿ ಹಿಲಾಲನ ಮಗ ವಾಹವಾಹನು ಗಾಯಗೊಂಡು ಶತ್ರುಗಳಿಗೆ ಸೆರೆಸಿಕ್ಕ. ಶಿವಾಜಿಯ ನಂಬಿಗಸ್ಥ ಮುಖ್ಯ ಹನ್ನೊಂದು ಮುಸ್ಲಿಮ್ ಸರದಾರರ ಹೆಸರು ಕೆಳಗಿನಂತಿವೆ.
1. ಸಿದ್ದಿ ವಾಹ್‌ವಾಹ್2.ನೂರ್‌ಖಾನ್ ಬೇಗ್ 3.ಶಮಾ ಖಾನ್4. ಹುಸೈನ್ ಖಾನ್ ಮಿಯಾನಿ5. ದಾರ್ಯ ಸಾರಂಗ್6. ಇಬ್ರಾಹೀಂ ಖಾನ್7. ದೌಲತ್ ಖಾನ್8. ಸಿದ್ದಿ ಮಿಸ್ತ್ರಿ 9. ಸುಲ್ತಾನ್ ಖಾನ್ 10. ಇಬ್ರಾಹೀಂ ಖಾನ್11. ದಾವೂದ್ ಖಾನ್
1672ರಲ್ಲಿ ಇಂಗ್ಲೆಂಡ್‌ನ ರಾಣಿಗೆ ಇಂಗ್ಲಿಷ್ ಅಧಿಕಾರಿ ಜೋನ್ ಫೈರ್ ಬರೆದ ಪತ್ರದಲ್ಲಿ 66 ಸಾವಿರ ಮುಸ್ಲಿಮರು ಶಿವಾಜಿಯ ಸೇನೆಯಲ್ಲಿ ರುವುದನ್ನು ಉಲ್ಲೇಖಿಸುತ್ತಾನೆ.

ಮನುಸ್ಮತಿ ವಿರೋಧಿ ಶಿವಾಜಿ:
ಶಿವಾಜಿಯನ್ನು ಮನು ವಿರೋಧಿ ಅಥವಾ ಬ್ರಾಹ್ಮಣ ವಿರೋಧಿ ಎಂದು ಮಹಾರಾಷ್ಟ್ರದ ದಲಿತ ಹೋರಾಟಗಾರರು, ಇತಿಹಾಸಕಾರರು ಕರೆಯುವುದಿದೆ. ಶಿವಾಜಿ ಮನು ವಿರೋಧಿ ಎನ್ನುವುದಕ್ಕಿಂತ ಮನುಷ್ಯ ಪರನಾಗಿದ್ದ.. ಆ ಹಿನ್ನೆಲೆಯಲ್ಲಿ ಅವನು ತೆಗೆದುಕೊಂಡ ಕ್ರಮಗಳೆಲ್ಲ ಮನು ವಿರೋಧಿಯಾಗಿದ್ದವು. ಪ್ರಜ್ಞಾಪೂರ್ವಕವಾಗಿ ಹೇಗೆ ಆತ ಮುಸ್ಲಿಮ್ ವಿರೋಧಿಯಾಗಿರಲಿಲ್ಲವೋ ಹಾಗೆಯೇ ಮನು ವಿರೋಧಿಯೂ ಆಗಿರಲಿಲ್ಲ. ಆದರೆ ಶಿವಾಜಿಯು ಶೈವ ಪಂಥದವನಾಗಿದ್ದ. ಆದುದರಿಂದ ಒಳಗೊಳಗೆ ವೈದಿಕ ಗುಂಪುಗಳು ಅವನನ್ನು ದ್ವೇಷಿಸಿದವು. ಆದರೂ ಶಿವಾಜಿಯ ಮನು ವಿರೋಧಿ ಗುರುತಿಸಬಹುದಾದ ನಿಲುವುಗಳನ್ನು ಕೆಳಗಿನಂತೆ ಪಟ್ಟಿ ಮಾಡಬಹುದಾಗಿದೆ.
1. ಶೂದ್ರರು, ದಲಿತರಿಗೆ ಸೇನೆಯಲ್ಲಿ ಅವಕಾಶ:
ಮನುಸೃತಿಯ ಪ್ರಕಾರ ಶೂದ್ರರು ಅತಿ ಶೂದ್ರರು ಸೇನೆಗೆ ಸೇರಲು ಸಾಧ್ಯವಿಲ್ಲ. ಆದರೆ ಶಿವಾಜಿಯ ಸೇನೆಯಲ್ಲಿ ಶೂದ್ರರು ಮತ್ತು ದಲಿತರು ಬಹುಸಂಖ್ಯೆಯಲ್ಲಿದ್ದರು. ರೈತರನ್ನು, ಬುಡಕಟ್ಟು ಜನರನ್ನು ಸಂಘಟಿಸಿ ಅವನು ಸೇನೆಯನ್ನು ಕಟ್ಟಿದ. ಜೊತೆಗೆ ಮ್ಲೇಚ್ಛರು ಎಂದು ಬ್ರಾಹ್ಮಣರು ತಿಳಿದುಕೊಂಡಿರುವ ಮುಸ್ಲಿಮರು ಶಿವಾಜಿಗೆ ತುಂಬಾ ಆಪ್ತರಾಗಿದ್ದರು. ಅವರ ವಿಶೇಷ ಅಂಗರಕ್ಷಕ ಪಡೆಯಲ್ಲಿ ಮುಸ್ಲಿಮರು ಅಥವಾ ಮ್ಲೇಚ್ಛರು ದೊಡ್ಡ ಸಂಖ್ಯೆಯಲ್ಲಿದ್ದರು.
2. ಸತಿ ಪದ್ಧತಿಯನ್ನು ವಿರೋಧಿಸಿದ:
ಶಿವಾಜಿಯ ತಂದೆ ಶಾಹಜಿ ಸತ್ತಾಗ ಜೀಜಾಬಾಯಿ ಸತಿ ಹೋಗಲು ನಿರ್ಧರಿಸಿದಳು. ಆದರೆ ಇದನ್ನು ಶಿವಾಜಿ ವಿರೋಧಿಸಿ, ತನ್ನ ತಾಯಿಯನ್ನು ರಕ್ಷಿಸಿಕೊಂಡ. ಈ ಮೂಲಕ ಸತಿ ಪದ್ಧತಿಯನ್ನು ಖಾಸಗಿ ನೆಲೆಯಲ್ಲೇ ವಿರೋಧಿಸಿದ. ಹಾಗೆಯೇ ಸಮುದ್ರ ದಾಟಬಾರದು ಎಂಬ ವಾದವನ್ನು ಮೀರಿ, ಸಮುದ್ರದಲ್ಲಿ ನೌಕಾ ಸೇನೆಯನ್ನು ಕಟ್ಟಿದ. ಅದರ ನೇತೃತ್ವವನ್ನು ಮುಸ್ಲಿಮ್ ಸರದಾರರಿಗೆ ವಹಿಸಿದ.
3. ಮತಾಂತರ:
ನೇತಾಜಿ ಪಾಲೇಕರ್ ಶಿವಾಜಿಯ ಸೇನೆಯಲ್ಲಿದ್ದ ಅಧಿಕಾರಿಗಳಲ್ಲೊಬ್ಬ. ಆದರೆ ಅವನು ಬಹು ವರ್ಷಗಳ ಹಿಂದೆಯೇ ಇಸ್ಲಾಮ್ ಸ್ವೀಕರಿಸಿದ್ದ. ಕಾಲಾನಂತರ ಇವನು ಮತ್ತೆ ಹಿಂದೂ ಧರ್ಮವನ್ನು ಸ್ವೀಕರಿಸಲು ಇಷ್ಟಪಟ್ಟಾಗ ಶಿವಾಜಿ ಅದನ್ನು ಹಾರ್ದಿಕವಾಗಿ ಅಂಗೀಕರಿಸಿದ. ಹಾಗೆಯೇ ಬಾಜಾಜಿ ನಿಂಬಾಳ್ಕರ್ ಸುಮಾರು 40 ವರ್ಷಗಳ ಕಾಲ ಮುಸ್ಲಿಮಾಗಿ ಬದುಕಿದ್ದ. ಹೋರಾಟದ ಸಂದರ್ಭದಲ್ಲಿ ಕಾಲು ಕಳೆದುಕೊಂಡು ಎಲ್ಲರಿಂದ ಕುಂಟನೆಂದು ಅಪಮಾನಕ್ಕೂ ಒಳಗಾಗಿದ್ದ. ಅವನನ್ನು ಮರು ಮತಾಂತರಗೊಳಿಸಿದ ಶಿವಾಜಿ, ತನ್ನ ಅಳಿಯನನ್ನಾಗಿ ಮಾಡಿಕೊಂಡ.
4. ದಲಿತ ಹೆಣ್ಣನ್ನು ವಿವಾಹವಾದ:
ಶಿವಾಜಿಯ ಪಟ್ಟಾಭಿಷೇಕಕ್ಕೆ ಸ್ಥಳೀಯ ಬ್ರಾಹ್ಮಣರು ವಿರೋಧವನ್ನು ವ್ಯಕ್ತಪಡಿಸಿದ್ದನ್ನು ಈ ಹಿಂದೆ ಬರೆದಿದ್ದೇನೆ. ಇದಾದ ಬಳಿಕ ಶೈವರು ಮತ್ತೊಮ್ಮೆ ಶಿವಾಜಿಗೆ ಪಟ್ಟಾಭಿಷೇಕ ಮಾಡಿದರು. ಶಾಕ್ತ ನಿಯಮದ ಪ್ರಕಾರ ಪಟ್ಟಾಭಿಷೇಕದ ಸಂದರ್ಭದಲ್ಲಿ ಅತಿಶೂದ್ರ ಅಥವಾ ದಲಿತ ಹೆಣ್ಣನ್ನು ಶಿವಾಜಿ ಮದುವೆಯಾದ. ಈ ಮೂಲಕ ಮನುಸ್ಮತಿಯ ಅಡಿಗಲ್ಲನ್ನೇ ಅಲುಗಾಡಿಸಿದ.

5. ಬ್ರಾಹ್ಮಣರ ಕಗ್ಗೊಲೆ:
ಶಿವಾಜಿ ತನ್ನ ಸಾಮ್ರಾಜ್ಯ ವಿಸ್ತರಣೆಗೆ ಅಡ್ಡಿ ಬಂದವರನ್ನೆಲ್ಲ ಕತ್ತರಿಸಿ ಹಾಕಿದ. ಮುಸ್ಲಿಮರು- ಬ್ರಾಹ್ಮಣರೆಂದು ಅವನು ನೋಡಲಿಲ್ಲ.
ಶಿವಾಜಿಯ ಇತಿಹಾಸದಲ್ಲಿ ಅಫ್ಝಲ್ ಖಾನ್‌ನನ್ನು ಆತ ಕೊಂದಿರುವುದು ಬಹುಮುಖ್ಯ ಪ್ರಸಂಗ. ಸಂಘಪರಿವಾರದ ಕಣ್ಣಲ್ಲಿ ಇದು ಹಿಂದು- ಮುಸ್ಲಿಮ್ ಮುಖಾಮುಖಿ. ಆದರೆ ಗಮನಿಸಿ. ಅಂದು ಅಫ್ಜಲ್‌ಖಾನ್‌ನ ಅಂದಿನ ಅಂಗರಕ್ಷಕನಾಗಿ ಬಂದುದು ಒಬ್ಬ ಬ್ರಾಹ್ಮಣ. ಅವನ ಹೆಸರು ಕೃಷ್ಣಜೀ ಭಾಸ್ಕರ್ ಕುಲಕರ್ಣಿ. ಅಫ್ಝಲ್ ಖಾನ್‌ನನ್ನು ಶಿವಾಜಿ ಕೊಲ್ಲುತ್ತಿರುವ ಸಂದರ್ಭದಲ್ಲಿ ಈ ಕುಲಕರ್ಣಿ ಶಿವಾಜಿಯ ಮೇಲೆ ಹಿಂದಿನಿಂದ ದಾಳಿ ನಡೆಸಿದ. ಶಿವಾಜಿಯ ತಲೆಗೆ ಗಾಯ ಮಾಡಿದ. ಆಗ ಶಿವಾಜಿ ಮತ್ತು ಆತನ ಅಂಗರಕ್ಷಕ ಇಬ್ರಾಹೀಂ ಖಾನ್ ಜೊತೆ ಸೇರಿ ಕೃಷ್ಣಜೀ ಭಾಸ್ಕರ್ ಕುಲಕರ್ಣಿಯನ್ನು ಬರ್ಬರವಾಗಿ ಕೊಂದು ಹಾಕಿದರು.

  ಶಿವಾಜಿ ಮಾತ್ರವಲ್ಲ, ಶಿವಾಜಿಯ ಮಗ ಸಾಂಭಾಜಿ ಕೂಡ ಬ್ರಾಹ್ಮಣರನ್ನು ಕೊಂದ ಕುರಿತಂತೆ ಇತಿಹಾಸದಲ್ಲಿ ದಾಖಲೆಗಳು ಸಿಗುತ್ತವೆ. ಸಾಂಭಾಜಿಗೆ ಕೆಲ ಬ್ರಾಹ್ಮಣರು ಸೇರಿ ವಿಷಪ್ರಾಷಣ ಪ್ರಯತ್ನ ನಡೆಸಿ ದಾಗ, ಸಿಟ್ಟಿಗೆದ್ದ ಸಾಂಭಾಜಿ ಬ್ರಾಹ್ಮಣರ ಹತ್ಯಾಕಾಂಡವನ್ನೇ ನಡೆಸಿದ್ದ. ಶಿವಾಜಿಯನ್ನೂ ಅವನ ಮಗನನ್ನೂ ಸೋಲಿಸಿ ಆಗ್ರಾದ ಸೆರೆಯಲ್ಲಿಟ್ಟಿದ್ದು ಯಾವುದೇ ಮುಸ್ಲಿಮ್ ಅರಸನಲ್ಲ. ಅವನ ವಿರುದ್ಧ ಯುದ್ಧ ಘೋಷಿಸಿದವನು ಮಿರ್ಝಾ ರಾಜೇ ಜಯಸಿಂಹ, ಅಸಲಿ ರಜಪೂತ ಹಿಂದು. ಮೊಗಲರ ಸೇನಾಪತಿ ಈತ. ಶಿವಾಜಿಯ ವಿರುದ್ಧ ಹೋರಾಡುವಾಗ ಜಯಸಿಂಹನ ಸೇನೆಯಲ್ಲಿ ಜಾಠರು, ಮರಾಠರು, ರಜಪೂತರಿದ್ದರು. ರಾಜಾ ರಾಯಸಿಂಗ್, ಸುಜನ್ ಸಿಂಗ್, ಹರಿಭಾನ್ ಸಿಂಗ್, ಉದಯಭಾನ್ ಗೌರ, ಶೇರ್ ಸಿಂಹ್ ರಾಥೋಡ್, ಚತುರ್ಭುಜ ಚೌಹಾನ್, ಮಿತ್ರಸೇನ, ಬಾಜಿರಾವ ಚಂದ್ರರಾವ್ ಇವರೆಲ್ಲ ಶಿವಾಜಿಯ ವಿರುದ್ಧ ಹೋರಾಡಿದ್ದರು. ಇದೇ ಸಂದರ್ಭದಲ್ಲಿ ಮುಸ್ಲಿಮ್ ಸರದಾರರು ಶಿವಾಜಿಯ ರಕ್ಷಣೆಯಲ್ಲಿ ಬಹುದೊಡ್ಡ ಪಾತ್ರವಹಿಸಿದ್ದರು.

ಅಂದ ಹಾಗೆ ರಾಜಾ ಜಯಸಿಂಹ, ಮೊಗಲರ ಪರವಾಗಿ ಶಿವಾಜಿಯ ವಿರುದ್ಧ ಯುದ್ಧಕ್ಕೆ ಬಂದಾಗ ಶಿವಾಜಿಯ ಸೋಲಿಗೆ ಏನು ಮಾಡಬೇಕು ಎಂದು ಸ್ಥಳೀಯ ಬ್ರಾಹ್ಮಣರ ಸಲಹೆ ಕೇಳಿದನಂತೆ. ಬಳಿಕ ಬ್ರಾಹ್ಮಣರ ಸಲಹೆಯಂತೆ ಕೋಟಿ ಚಂಡಿಹವನ ಮಾಡಿದ ಕತೆಯೂ ಇತಿಹಾಸದಲ್ಲಿ ದಾಖಲಾಗಿದೆ. ಹನ್ನೊಂದು ಕೋಟಿ ಲಿಂಗ ತಯಾರಿಸಲಾಯಿತಂತೆ. ಕಾಮನಾರ್ಥಕ್ಕಾಗಿ ಬಗಲಾಮುಖಿ ಕಾಳರಾತ್ರಿ ಪ್ರೀತ್ಯರ್ಥ ಜಪ ಮಾಡಲಾಯಿತಂತೆ. ನಾನೂರು ಬ್ರಾಹ್ಮಣರು ಈ ಯಾಗದಲ್ಲಿ ಭಾಗವಹಿಸಿದರು. ಇದಕ್ಕಾಗಿ ಜಯಸಿಂಹ ಎರಡು ಕೋಟಿ ರೂಪಾಯಿಯನ್ನು ತೆಗೆದಿರಿಸಿದನಂತೆ. ಮೂರು ತಿಂಗಳ ಕಾಲ ಈ ಅನುಷ್ಠಾನ ನಡೆಯಿತು. ಅನುಷ್ಠಾನದ ಪೂರ್ಣಾಹುತಿ ಮುಗಿಸಿ ಬ್ರಾಹ್ಮಣರಿಗೆ ದಾನ ದಕ್ಷಿಣೆ ನೀಡಿ ಅನ್ನ ಸಂತರ್ಪಣೆ ಮಾಡಲಾಯಿತು. ಇದೇ ಯುದ್ಧದಲ್ಲಿ ಶಿವಾಜಿ ಮತ್ತು ಅವನ ಮಗ ಸಾಂಭಾಜಿ ಸೋತು ಜಯಸಿಂಹನಿಗೆ ಸೆರೆ ಸಿಕ್ಕರು. 


ಆಕರ ಗ್ರಂಥ: ಸರ್ಕಾರ್ ಜೆ.ಎನ್.ಶಿವಾಜಿ ಎಂಡ್ ಹಿಸ್ ಟೈಮ್ಸ್
ಗ್ರಾಂಡ್ ಡಫ್-ಹಿಸ್ಟರಿ ಆಫ್ ಮರಾಠಾಸ್
ಭಾವರೆ ಎನ್. ಜಿ: ಕಾಸ್ಟ್ಸ್ ಫೇವರ್ಸ್‌, ಪ್ಯಾಟರ್ನೇಜ್ ಎಂಡ್ ಪ್ರಿವಿಲೇಜಸ್ ಅಂಡರ್ ಶಿವಾಜಿಸ್ ರೂಲ್
ಶಕಕರ್ತಾ ಶಿವಾಜಿ
ಗೋವಿಂದ ಪಾನಸರೆ ‘ಶಿವಾಜಿ ಯಾರು?’

1 comment:

  1. ಅಯ್ಯೋ... ಹೀಗೆ ನಮ್ಮ ಬುಡವನ್ನೇ ಅಲುಗಾಡಿಸಿಬಿಟ್ಟರೆ ಹೇಗೆ ಬಶೀರ್! ನೀವು ಹೀಗೆ ಮಾಡಿದರೆ ನಾವು ಹೇಗೆ ಹಿಂದೂಗಳನ್ನು ಸಂಘಟಿಸೋದು? ನಾವು ಕೆಡವಲು ಇನ್ನೂ ಎರಡು ಮಸೀದಿಗಳಿವೆ. ಕೊಲ್ಲಲು ಅನೇಕ ಮುಸ್ಲಿಂ ಭಯೋತ್ಪಾದಕರಿದ್ದಾರೆ. ಹತ್ಯಾಕಾಂಡಕ್ಕೆ ಒಳಗಾಗಲು ಇನ್ನೂ ೨೭ ಗುಜರಾತುಗಳಿವೆ... ಇವೆಲ್ಲಾ ಮಾಡಲು ಬಿಡದೆ ಹಿಂದುಗಳ ಆರಾಧ್ಯದೈವ, ಮುಸ್ಲಿಮರ ಪರಮಶತ್ರುವಾದ ಶಿವಾಜಿಯ ಬಗ್ಗೆ ಹೀಗೆಲ್ಲಾ ಬರೆಯಲು ಕಾರಣವೇ ನೀವೊಬ್ಬ ಮುಸ್ಲಿಮ್ ಆಗಿರುವುದು. ಇಷ್ಟೆಲ್ಲಾ ಸತ್ಯ ಹೇಳಿದ ನೀವು ದೇಶದ್ರೋಹಿ! ಹಿಂದೂ ಮುಸ್ಲಿಂ ದಲಿತರನ್ನೆಲ್ಲಾ ಮನುಷ್ಯರಂತೆ ಕಾಣುತ್ತಿರುವ ನೀವು ಮತಾಂಧ!! ನೀವು ಆಕರವಾಗಿ ಬಳಸಿರುವ ಇತಿಹಾಸಕಾರರು ಮುಸ್ಲಿಂ ಪಕ್ಷಪಾತಿಗಳು, ಅವರದ್ದು ನಿಜವಾದ ಇತಿಹಾಸವೇ ಅಲ್ಲಾ!! ಇದೆಲ್ಲಾ ಬ್ರಿಟೀಶರು ಭಾರತವನ್ನು ಒಡೆದು ಆಳಲು ಮಾಡಿದ ಕುತಂತ್ರ!!
    ನಿಜವಾದ ದೇಶಭಕ್ತರಾಗಬೇಕಾದರೆ ಅವನು ಹಿಂದುವೇ ಆಗಿರಬೇಕು. ಹಿಂದುವಾಗಿದ್ದೂ ಕೊಲೆಗಡುಕನಾದರೂ ಅವನ ದೇಶಭಕ್ತಿ ಪ್ರಶ್ನಾತೀತ! ಮುಸ್ಲಿಮನಾಗಿ ಹುಟ್ಟಿಬಿಟ್ಟರೆ ಸಾಕು... ದೇಶಪ್ರೇಮವನ್ನು ಸಾಬೀತುಪದಿಸಲು ನೀವು ನಿಸಾರ್ ಅಹ್ಮದ್, ಅಬ್ದುಲ್ ಕಲಾಂ, ಕರೀಂಖಾನ್ ಆಗಬೇಕು!!

    - ಆನಂದ್

    ReplyDelete