Saturday, April 20, 2013

ಎಂಜಿನಿಯರ್ ಮತ್ತು ಇತರ ಕತೆಗಳು

ಮರಳು ಶಿಲ್ಪಿ
ಅವನೊಬ್ಬ ವಿಶ್ವವಿಖ್ಯಾತ ಮರಳ ಶಿಲ್ಬಿ.
ಮರಳಿನಲ್ಲಿ ಅದೆಂತಹ ಅದ್ಭುತವಾದುದನ್ನು ಕಟ್ಟಿ ನಿಲ್ಲಿಸಬಲ್ಲ. ಹಲವಾರು ಪ್ರಶಸ್ತಿಗಳು ದೊರಕಿತ್ತು.
ಅವನಿಗೆ ಮದುವೆಯಾಯಿತು. ಒಂದೇ ತಿಂಗಳಲ್ಲಿ ದಾಂಪತ್ಯ ಮುರಿದು ಬಿತ್ತು.
ಅವಳಲ್ಲಿ ಕೇಳಿದರು ‘‘ಅಂತಹ ಕಲಾವಿದನೊಂದಿಗೆ ಯಾಕೆ ಬದುಕಲಾಗಲಿಲ್ಲ’’
‘‘ಅವನೊಬ್ಬ ಮರಳ ಶಿಲ್ಪಿ. ಮರಳಲ್ಲಿ ಕಟ್ಟಿದ್ದು ಹೆಚ್ಚು ಬಾಳಲಾರದು ಎನ್ನುವುದು ನನಗೆ ಗೊತ್ತಿರಲಿಲ್ಲ’’

ಎಂಜಿನಿಯರ್
ಅವನೊಬ್ಬ ಶ್ರೇಷ್ಟ ಎಂಜಿನಿಯರ್.
ಅವಳಲ್ಲಿ ಹೇಳಿದ ‘‘ಹೇಳು...ನೀನು ಮದುವೆಯಾಗುವುದಾದರೆ...ನಿನಗೆ ತಾಜ್‌ಮಹಲ್‌ಗಿಂತಲೂ ಸುಂದರ ಕಟ್ಟಡ ಕಟ್ಟಿಕೊಡುವೆ...’’
ಅವಳು ನಕ್ಕು ಉತ್ತರಿಸಿದಳು...‘‘ನೀನು ನಿಜಕ್ಕೂ ಶ್ರೇಷ್ಟ ಎಂಜಿನಿಯರ್ ಆಗಿದ್ರೆ...ಆ ಕಾಜಾಣ ಹಕ್ಕಿಯ ಗೂಡನ್ನು ನಿನ್ನ ಕೈಯಾರೆ ನನಗೆ ಕಟ್ಟಿಕೊಡು...ನಿನ್ನ ಮದುವೆಯಾಗುವೆ...’’

ಕಲಿಕೆ
ನದಿ ತೀರದ ಮುಂದೆ ನಿಂತು ಆತ ಚಳಿಯಿಂದ ನಡುಗುತ್ತಾ ಗೆಳೆಯನಲ್ಲಿ ಕೇಳಿದ ‘‘ಈಜು ಕಲಿಯುವ ಮೊದಲ ಹಂತ ಯಾವುದು?’’
ಗೆಳೆಯ ‘‘ಇದು ಮೊದಲ ಹಂತ’’ ಎನ್ನುತ್ತಾ ಆತನನ್ನು ನದಿಗೆ ದೂಡಿದ.

ಗುರು-ಶಿಷ್ಯ
 ‘‘ಒಳ್ಳೆಯ ಗುರು, ಒಳ್ಳೆಯ ಶಿಷ್ಯನ ಮಾನದಂಡ ಯಾವುದು ಗುರುಗಳೇ?’’
ಶಿಷ್ಯ ಕೇಳಿದ.
ಸಂತ ಶಾಂತವಾಗಿ ಉತ್ತರಿಸಿದ ‘‘ಪ್ರತಿ ಗುರುವಿನಲ್ಲಿ ಒಬ್ಬ ಶಿಷ್ಯನಿರುತ್ತಾನೆ. ಪ್ರತಿ ಶಿಷ್ಯನಲ್ಲಿ ಒಬ್ಬ ಗುರುವೂ ಇರುತ್ತಾನೆ. ತನ್ನೊಳಗೆ ಶಿಷ್ಯನಿರುವುದು ಅರಿತ ಗುರು ಒಳ್ಳೆಯ ಗುರು. ತನ್ನೊಳಗೆ ಗುರುವಿರುವುದು ಅರಿಯದ ಶಿಷ್ಯ ಒಳ್ಳೆಯ ಶಿಷ್ಯ’’

ದೊಡ್ಡ ಕವಿ
ಮಹಾ ಕವಿಯಾತ. ಬರೆದರೆ ಮಹಾಕಾವ್ಯವನ್ನೇ ಬರೆಯುತ್ತಿದ್ದ.
ಒಮ್ಮೆ ಅವನ ಪುಟ್ಟ ಮಗು ಕೇಳಿತು ‘‘ಅಪ್ಪಾ ನೀನು ಬರೆದದ್ದು ಯಾಕೆ ಅರ್ಥವಾಗುವುದಿಲ್ಲ...’’
‘‘ಯಾಕೆಂದರೆ ಪಂಡಿತರಿಗಷ್ಟೇ ಅದು ಅರ್ಥವಾಗುತ್ತದೆ ಮಗು...’’
‘‘ಸರಿ, ನನಗೆ ಅರ್ಥವಾಗುವಂತಹ ಒಂದು ಪದ್ಯ ಬರಿ...’’
ಕವಿ, ಸರಳ ಪದ್ಯವೊಂದನ್ನು ಬರೆಯಲು ಹೊರಟ.
ವರ್ಷ ಒಂದು ಉರುಳಿತು. ಎರಡಾಯಿತು. ಸರಳವಾದ ಪದ್ಯವೊಂದನ್ನು ಬರೆಯಲು ಅವನಿಗಾಗಲಿಲ್ಲ.
ಕೊನೆಗೆ ಸೋತು ಮಗುವಿಗೆ ಹೇಳಿದ ‘‘ಮಗುವೇ....ಮಕ್ಕಳಿಗೆ ಅರ್ಥವಾಗುವ ಸರಳ ಪದ್ಯ ಬರೆಯುವಷ್ಟು ದೊಡ್ಡ ಕವಿ ನಿನ್ನ ಅಪ್ಪ ಅಲ್ಲ’’
ಅಂದು ಅವನಿಗೆ ಮೊದಲ ಬಾರಿಗೆ ಒಂದು ಸರಳ ಶಬ್ಬ ಹೊಳೆಯಿತು. 


ಹುಟ್ಟು ಹಬ್ಬ
ತಾಯಿಗೆ ನೂರು ವರ್ಷ ಪೂರ್ತಿಯಾಯಿತು.
 ಎಲ್ಲ ಮಕ್ಕಳಿಗೂ ಸಂಭ್ರಮ. ದೇಶವಿದೇಶಗಳಲ್ಲಿರುವ ಮಕ್ಕಳೆಲ್ಲ ಭಾರತಕ್ಕೆ ಬಂದರು.
ತಾಯಿಯ ಹುಟ್ಟು ಹಬ್ಬ ಆಚರಣೆಗೆ ವೇದಿಕೆ ಸಿದ್ಧವಾಯಿತು.
ಕೇಕು ತಂದರು. ಅದರ ಮೇಲೆ ಮೊಂಬತ್ತಿ ಹಚ್ಚಿದರು.
ಹಿರಿಯ ಮಗ ಹೇಳಿದ ‘‘ಇಬ್ಬರು ಹೋಗಿ, ತಕ್ಷಣ ತಾಯಿಯನ್ನು ವೃದ್ಧಾಶ್ರಮದಿಂದ ಕರೆತನ್ನಿ’’

ಮರಣ
ಒಬ್ಬ ಲೇಖಕನನ್ನು ಜೈಲಿನೊಳಗೆ ಬಂಧಿಸಿಡಲಾಯಿತು.
ಕಲ್ಲಿನಿಂದ ಕಟ್ಟಿದ ಸಣ್ಣ ಕೋಣೆ.
ಅಲ್ಲಿ ಬೇರೇನೂ ಇಲ್ಲ. ಸಣ್ಣದೊಂದು ಕಿಂಡಿ. ಅದರಲ್ಲಿ ಅವನಿಗೆ ಆಹಾರ ಪೂರೈಸಲಾಗುತ್ತಿತ್ತು.
ಒಂದು ದಿನ ಜೈಲರ್ ಕೇಳಿದ ‘‘ಹೇಳು, ನಿನಗೇನು ಬೇಕು’’
ಲೇಖಕ ಹೇಳಿದ ‘‘ಪೆನ್ನು ಮತ್ತು ಕಾಗದ’’
‘‘ಅದೊಂದು ಬಿಟ್ಟು ಬೇರೇನಾದರೂ ಕೇಳು’’ ಜೈಲರ್ ಇನ್ನೊಂದು ಅವಕಾಶ ನೀಡಿದ.
‘‘ಹಾಗಾದರೆ ನನಗೆ ಮರಣವನ್ನು ಕೊಡಿ’’ ಲೇಖಕ ಕೇಳಿದ.

ತುಳಿತ
ರೈತ ಮಣ್ಣನ್ನು ತುಳಿದ. ಬೆಳೆ ಬೆಳೆದ.
ಅದನ್ನು ಉಂಡ ಮನುಷ್ಯ ರೈತನನ್ನು ತುಳಿದ.
ತಾನೇ ಅಳಿದ.

1 comment:

  1. Ivella Zen kathegalante toruttide. Adbutha

    ReplyDelete