Monday, May 20, 2013

ನನ್ನ ಅತ್ತಿಗೆ ಮತ್ತು ಅವರ ಗೋಸಾಕಣೆ

ನನ್ನ ಅತ್ತಿಗೆ (ಅಂದರೆ ಹಿರಿಯ ಕವಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಉಳ್ಳಾಲದ ಮಾಜಿ ಶಾಸಕ ದಿವಂಗತ ಬಿ. ಎಂ. ಇದಿನಬ್ಬರ ಹಿರಿಯ ಸೊಸೆ) ತನ್ನ ಗಂಡನ ಮನೆಗೆ ಕಾಲಿಡುವಾಗ ಅವರ ಜೊತೆಯಾಗಿ ಬಂದದ್ದು ಒಂದು ಹಸು. ನನ್ನ ಅತ್ತಿಗೆಯ ತಂದೆಯ ಪ್ರಧಾನ ವೃತ್ತಿಯೇ ಗೋಸಾಕಣೆ, ಹೈನುಗಾರಿಕೆಯಾಗಿತ್ತು. ಆದುದರಿಂದ ಅತ್ತಿಗೆ ಬಾಲ್ಯದಿಂದಲೂ ಹಸುಗಳ ಜೊತೆಗೆ ಒಡನಾಟವಿಟ್ಟುಕೊಂಡಿದ್ದರು. ತನ್ನ ಮಗಳನ್ನು ಪತಿಯ ಮನೆಗೆ ಕಳುಹಿಸುವಾಗ ಒಂದು ಹಸುವನ್ನೇ ಮಗಳಿಗೆಂದು ಕೊಟ್ಟಿದ್ದರಂತೆ ಅವರ ತಂದೆ. ತವರು ಮನೆ ಕೊಟ್ಟ ಹಸುವಿನ ಜೊತೆಗೆ ಅವರು ಕವಿ ಇದಿನಬ್ಬರ ಮನೆಯ ಸೊಸೆಯಾದರು.

   ನಾನು ಕಂಡಂತೆ ಅತ್ತಿಗೆ ಶ್ರಮಕ್ಕೆ ಇನ್ನೊಂದು ಹೆಸರು.(ಅವರ ಹೆಸರು ಆಯಿಶಾ ಎಂದು. ಇದಿನಬ್ಬರ ಹಿರಿಯ ಮಗ ಬಿ. ಎಂ. ಭಾಷಾ ಅವರ ಪತ್ನಿ) ತನ್ನ ಬದುಕಿನಲ್ಲಿ ಎದುರಾದ ಕಷ್ಟ ಪರಂಪರೆಯನ್ನೆಲ್ಲ ಹಸುಗಳ ಜೊತೆಗೇ ಹಂಚಿಕೊಂಡು ಕಳೆದವರು. ಗಂಡನ ಮನೆಗೆ ಬಂದ ಆರಂಭದಲ್ಲಿ ಅವರಿಗೆ ಒಂಟಿತನ ಕಾಡಿದಾಗೆಲ್ಲ ಅಪ್ಪ ಕೊಟ್ಟ ಹಸುವೇ ಜೊತೆಯಾಗಿತ್ತಂತೆ. ಆಗ ಇದಿನಬ್ಬರು ಶಾಸಕರಾಗಿರುವ ಆರಂಭ. ಶಾಸಕರ ಪುತ್ರನಾಗಿದ್ದರೂ ಪತಿಯೂ ಆರಂಭದ ಜೀವನವನ್ನು ಸಂಕಷ್ಟದಲ್ಲೇ ಕಳೆದವರು. ಇಂತಹ ಸಂದರ್ಭದಲ್ಲಿ ಅತ್ತಿಗೆ ತನ್ನ ಮನೆಯ ಹಿಂಭಾಗದಲ್ಲಿರುವ ಮೂವತ್ತು ಸೆಂಟ್ಸ್ ಜಾಗದಲ್ಲಿ ಗೋ ಸಾಕಾಣೆಯ ಕನಸು ಕಂಡರು. ಹೇಗೂ ತಂದೆ ಕೊಟ್ಟಿದ್ದ ಒಂದು ಹಸು ಇತ್ತು. ಇದರ ಜೊತೆಗೆ ಇನ್ನಷ್ಟು ಹಸುಗಳನ್ನು ತಂದು ಸಾಕಿದರೆ ಹೇಗೆ ಎಂದು ಯೋಚಿಸಿದರಂತೆ. ಹಾಗೆ ಭೂಮಿಗಿಳಿಯಿತು ಅವರ ಗೋಸಾಕಣೆಯ ಕನಸು. ಇದು ಸುಮಾರು 30-40 ವರ್ಷಗಳ ಹಿಂದಿನ ಕತೆ. ಅವರ ಕನಸು ನಿಧಾನಕ್ಕೆ ಭೂಮಿಯಿಂದೆದ್ದು ಗಿಡವಾಗಿ ಮರವಾಗಿ ಫಸಲು ಬಿಡತೊಡಗಿತು. ಮನೆಯ ಹಿತ್ತಲ ಆ 30 ಸೆಂಟ್ಸ್ ಜಾಗದಲ್ಲಿ ಸುಮಾರು 50 ವಿವಿಧ ತಳಿಯ ಹಸುಗಳನ್ನು ಸಾಕಿ ಉಳ್ಳಾಲದ ಆಸುಪಾಸಿನಲ್ಲಿ ಒಂದು ಕ್ರಾಂತಿಯನ್ನೇ ಮಾಡಿದರು. ಒಂದು ಹಂತದಲ್ಲಿ ಪತಿಗೆ ಆರ್ಥಿಕ ಸಂಕಟಗಳು ಎದುರಾದಾಗ ಇವರ ಗೋಸಾಕಾಣೆಯೇ ಇಡೀ ಕುಟುಂಬಕ್ಕೆ ಆಧಾರವಾಗಿದ್ದುದನ್ನು ಅಣ್ಣ ಭಾಷಾ ಅವರು ಹಂಚಿಕೊಳ್ಳುತ್ತಾರೆ.ಇದಿನಬ್ಬರು ಮಂಗಳೂರಿನ ಒಮೆಗಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಅಲ್ಲಿನ ಖ್ಯಾತ ವೈದ್ಯರೊಬ್ಬರು ದೊಡ್ಡಪ್ಪನೊಂದಿಗೆ ಹಂಚಿಕೊಂಡಿದ್ದರು ‘‘ನಾನು ನಿಮ್ಮ ಮನೆಯ ಹಾಲು ಕುಡಿದು ಬೆಳೆದಿದ್ದೇನೆ ಸಾರ್’’ ಎಂದು. ಅತ್ತಿಗೆಯ ಹಟ್ಟಿಯ ಹಾಲು ಸುತ್ತಮುತ್ತಲೆಲ್ಲ ಅತ್ಯುತ್ತಮ ಹಾಲು ಎಂದು ಹೆಸರಾಗಿದೆ. ಅತ್ಯುತ್ತಮ ಹಾಲೆಂದೂ, ಔಷಧಿಗೆಂದೂ, ನೀರು ಬೆರಸದ ಹಾಲೆಂದೂ ಹೀಗೆ ವಿವಿಧ ಕಾರಣವನ್ನು ಮುಂದಿಟ್ಟು ಹಾಲು ಕೊಳ್ಳುವವರಿದ್ದಾರೆ.


  ಈ ದನಗಳ ಜೊತೆಗೆ ಅತ್ತಿಗೆ ನಡೆಸಿದ ಹೋರಾಟ ಸಣ್ಣದೇನೂ ಅಲ್ಲ. ಅತ್ತಿಗೆಯ ಅತಿ ದೊಡ್ಡ ಸಮಸ್ಯೆಯೆಂದರೆ ಜಾಗದ ಕೊರತೆಯಾಗಿತ್ತು. ಅಷ್ಟು ಸಣ್ಣ ಜಾಗದಲ್ಲಿ 60 ಹಸುಗಳನ್ನು ಸಾಕುವುದು ಎಂದರೆ ಸಣ್ಣ ವಿಷಯವಲ್ಲ. ಅದರಲ್ಲೂ ವಿದೇಶಿ ತಳಿಯ ಹಸುಗಳೂ ಇದ್ದವು. ಹಟ್ಟಿಯನ್ನು ಸಂಪೂರ್ಣ ಆಧುನಿಕೀಕರಣಗೊಳಿಸಲಾಗಿತ್ತು. ನಳ್ಳಿ ನೀರು, ಬೆಳಕು ಇತ್ಯಾದಿಗಳೂ ಇದ್ದವು. ಸೆಗಣಿ, ಮೂತ್ರಗಳನ್ನು ಸಂಗ್ರಹಿಸಲು ಪ್ರತ್ಯೇಕ ವ್ಯವಸ್ಥೆ ಇದ್ದವು. ಆದರೂ ಸೆಗಣಿಯ ವಾಸನೆ ಅಲ್ಪಸ್ವಲ್ಪ ನೆರೆಹೊರೆಗೆ ತೊಂದರೆ ನೀಡುವುದು ಸಹಜ. ಮುಖ್ಯವಾಗಿ ಅತ್ತಿಗೆ ಗೋಸಾಕಾಣೆಯಲ್ಲಿ ಯಶಸ್ವಿಯಾಗಿ ಕೈತುಂಬಾ ಸಂಪಾದಿಸುತ್ತಿರುವುದೂ ಕೆಲವರಲ್ಲಿ ಹೊಟ್ಟೆ ಕಿಚ್ಚು ಸೃಷ್ಟಿಸಿತ್ತು. ಪರಿಣಾಮವಾಗಿ ಸ್ಥಳೀಯ ಪಂಚಾಯತ್‌ಗಳಿಗೆ, ಪುರಸಭೆಗಳಿಗೆ, ಪರಿಸರ ಮಾಲಿನ್ಯ ವಿಭಾಗಕ್ಕೆ ತಳ್ಳಿ ಅರ್ಜಿಗಳು, ಗುಪ್ತ ದೂರುಗಳು ಹೋಗುವುದು ಹೆಚ್ಚಾಯಿತು. ಆಗಾಗ ಮನೆಗೆ ಅಧಿಕಾರಿಗಳು ದಾಳಿ ನಡೆಸುವುದು ಹಾಗೂ ವ್ಯವಸ್ಥಿತವಾದ ಹಟ್ಟಿಯನ್ನು ನೋಡಿ ಅಧಿಕಾರಿಗಳು ಮೆಚ್ಚಿ ಮರಳಿ ಹೋಗುವುದು ನಡೆದೇ ಇತ್ತು. ಎಲ್ಲಕ್ಕಿಂತ ಮುಖ್ಯವಾಗಿ ಮಹಿಳೆಯೊಬ್ಬರು ಮನೆಯಲ್ಲೇ ಇಷ್ಟರ ಮಟ್ಟಿಗೆ ಹೈನುಗಾರಿಕೆ ನಡೆಸುವುದನ್ನು ತಡೆಯಲು ಯಾವ ಅಧಿಕಾರಿಗಳೂ ಸಿದ್ಧರಿರಲಿಲ್ಲ.


  ಎಲ್ಲೂ ಯಶಸ್ವಿಯಾಗದೇ ಇದ್ದಾಗ ಕಿಡಿಗೇಡಿಗಳು ಆಗ ಶಾಸಕರಾಗಿದ್ದ ಇದಿನಬ್ಬರಿಗೇ ಅನಾಮಿಕ ಹೆಸರಿನಲ್ಲಿ ಪತ್ರ ಬರೆಯತೊಡಗಿದರು. ತನ್ನ ಮನೆಯವರಿಂದ ಇತರರಿಗೆ ತೊಂದರೆಯಾಗುವುದನ್ನು ಇದಿನಬ್ಬರು ಯಾವತ್ತೂ ಸಹಿಸುತ್ತಿರಲಿಲ್ಲ. ಇದಿನಬ್ಬ ಮತ್ತು ಅವರ ಪುತ್ರ ಭಾಷಾ ಅವರ ಮನೆ ಅಕ್ಕಪಕ್ಕ. ಹಾಗೆ ನೋಡಿದರೆ, ಹಟ್ಟಿಯ ಸೆಗಣಿಯ ವಾಸನೆ ಇದಿನಬ್ಬರ ಮೂಗಿಗೂ ಬಡಿದಿರಬಹುದು. ಆದರೆ, ಶ್ರಮಕ್ಕೆ ಅಗಾಧ ಬೆಲೆ ನೀಡುತ್ತಿದ್ದವರು ದೊಡ್ಡಪ್ಪ. ಆದುದರಿಂದ ಅವರು ಅದನ್ನು ಮೆಚ್ಚುಗೆಯಿಂದಲೇ ನೋಡುತ್ತಿದ್ದರು. ಆದರೆ ಮನೆಗೇ ತಳ್ಳಿಅರ್ಜಿಗಳು, ದೂರು ಅರ್ಜಿಗಳು ಬಂದರೆ ಏನು ಮಾಡುವುದು? ಆಗ ಸ್ವತಃ ಇದಿನಬ್ಬರೇ ಹಿರಿಯ ಮಗನನ್ನ ಕರೆದು ಹಟ್ಟಿಯ ಕುರಿತಂತೆ ತನ್ನ ಆಕ್ಷೇಪವನ್ನು ವ್ಯಕ್ತಪಡಿಸಿದರಂತೆ. ಈಗ ಮಗನಿಗೆ ಧರ್ಮ ಸಂಕಟ. ಇಂತಹ ಸಂದರ್ಭದಲ್ಲಿ ಇದಿನಬ್ಬರನ್ನು ಮೆಚ್ಚಿಸುವುದು ಹೇಗೆ? ಎನ್ನುವ ಸಮಸ್ಯೆ ಎದುರಾಯಿತು. ಆಗ ಅಣ್ಣ ನನ್ನನ್ನು ಕರೆದರು. ‘ಯಾವುದಾದರೂ ಹಿರಿಯ ಕವಿಗಳು ಗೋವುಗಳ ಕುರಿತಂತೆ ಬರೆದ ಕವಿತೆ ಇದೆಯ?’’ ಎಂದು ಕೇಳಿದರು.
ನಾನೂ ಆಲೋಚಿಸಿದೆ. ಅಣ್ಣನ ಸಮಸ್ಯೆ ನನಗೆ ಅರ್ಥವಾಯಿತು. ತಕ್ಷಣ ನಾನು ಕುವೆಂಪು ಬರೆದಿರುವ ‘ಗೊಬ್ಬರ’ ಕವಿತೆಯನ್ನು ಅಣ್ಣನಿಗೆ ನೀಡಿದೆ. ಅದರ ವಾಕ್ಯಗಳ ಅರ್ಥಗಳನ್ನು ಕೂಡ ಅದರಲ್ಲಿ ಅಣ್ಣನಿಗೆ ವಿವರಿಸಿದ್ದೆ. ಅಣ್ಣನಿಗೋ ತುಂಬಾ ಸಂತೋಷವಾಯಿತು. ಮುಖ್ಯವಾಗಿ, ಗೊಬ್ಬರದ ಕುರಿತಂತೆ ಹೀನಾಯವಾಗಿ ನೋಡುವ ಜನರನ್ನು ಉದ್ದೇಶಿಸಿ ಕುವೆಂಪು ಬರೆದ ಮೊದಲ ಕವಿತೆ ಅದು. ಒಂದು ರೀತಿಯ ಮೊದಲ ಬಂಡಾಯ ಕವಿತೆ. ಗೊಬ್ಬರದ ಬಗ್ಗೆ ಹೀನಾಯವಾಗಿ ನೋಡುವ ಎಲ್ಲರೂ ಒಂದಲ್ಲ ಒಂದು ದಿನ ಗೊಬ್ಬರವಾಗಲೇ ಬೇಕು ಎನ್ನುತ್ತಾ, ಗೊಬ್ಬರದ ಪ್ರಯೋಜನಗಳನ್ನು ಕುವೆಂಪು ಆ ಕವಿತೆಯಲ್ಲಿ ಎತ್ತಿ ಹಿಡಿಯುತ್ತಾರೆ. ಅಣ್ಣ ಒಂದು ಪತ್ರದ ಮೂಲಕ ಆ ಕವಿತೆಯನ್ನು ತಂದೆಗೆ ಕಳುಹಿಸಿಕೊಟ್ಟರಂತೆ. ದೊಡ್ಡಪ್ಪನಿಗೆ ಆ ಕವಿತೆ ನೋಡಿ ತುಂಬಾ ಖುಷಿಯಾಯಿತಂತೆ. ಆದರೂ ಆ ಕವಿತೆಯ ಹಿಂದೆ ನಾನೂ ಇದ್ದೇನೆ ಎನ್ನುವ ಅನುಮಾನ ಅವರಿಗೆ ಕಾಡಿತ್ತು ಎಂದು ನನಗೂ ಗೊತ್ತು. ಆದರೆ ನನ್ನಲ್ಲಿ ಅದನ್ನು ಯಾವತ್ತೂ ಅವರು ಪ್ರಶ್ನಿಸಿರಲಿಲ್ಲ. ಇದಿನಬ್ಬರು ಅಲ್ಲಿಂದ ಯಾರ ದೂರನ್ನೂ ಕಿವಿಗೆ ಹಾಕುತ್ತಿರಲಿಲ್ಲವಂತೆ. ಇದಿನಬ್ಬರಿಗೆ ತನ್ನ ಸೊಸೆಯ ಕೆಲಸದ ಕುರಿತಂತೆ ಯಾವಾಗಲೂ ಹೆಮ್ಮೆಯಿತ್ತು. ನನ್ನಲ್ಲಿ ಹಲವು ಬಾರಿ ಹೇಳಿದ್ದರು ‘‘ನನ್ನ ಹಿರಿಯ ಸೊಸೆ ಇದ್ದಾಳಲ್ಲ. ಅವಳು ನನ್ನ ಹೆಂಡತಿಯ ಹಾಗೆ, ಬಹಳ ಶ್ರಮಗಾರ್ತಿ. ಸ್ವಾಭೀಮಾನಿ. ನನ್ನ ಹಿರಿಯ ಮಗ ಸುಧಾರಣೆಯಾಗುವುದಕ್ಕೆ ಹಿರಿ ಸೊಸೆಯ ಕೊಡುಗೆ ತುಂಬಾ ದೊಡ್ಡದು’’ ಇದಿನಬ್ಬರ ಪತ್ನಿ ಅಂದರೆ ನನ್ನ ದೊಡ್ಡಮ್ಮನೂ ಶ್ರಮದ ಮೇಲೆ ಅಗಾಧ ನಂಬಿಕೆಯಿಟ್ಟವರು. ಸೋಮಾರಿಗಳನ್ನು, ತಿಂದುಂಡು ಒರಗುವ ಹೆಂಗಸರನ್ನು ಕಂಡರೆ ಅವರಿಗಾಗುತ್ತಿರಲಿಲ್ಲ. ಮೊದಲ ಚುನಾವಣೆಯಲ್ಲಿ ಇದಿನಬ್ಬರು ಸೋತರು. ಅತ್ತ ಸೊಸೈಟಿಯ ಕೆಲಸಕ್ಕೂ ರಾಜೀನಾಮೆ ನೀಡಿದ್ದರು. ಆಗ ತೆಂಗಿನ ನಾರಿನಿಂದ ಹಗ್ಗ ಮಾಡಿ ಮಾರಿ ಇಡೀ ಕುಟುಂಬವನ್ನು ಸಾಕಿ ಬೆಳೆಸಿದವರು ಇದಿನಬ್ಬರ ಪತ್ನಿ. ಅಂದರೆ ನನ್ನ ದೊಡ್ಡಮ್ಮ.

 ಅಂತೆಯೇ ಅತ್ತಿಗೆಯ ಬದುಕಿನಲ್ಲಿ ಗೋಸಾಕಣೆ ಅವಿನಾಭಾವವಾಗಿ ಬೆಸೆದಿತ್ತು. ಹಣ ಸಿಗುತ್ತದೆ ಎನ್ನುವುದು ಅವರಿಗೆ ಎಂದೂ ಮುಖ್ಯವಾಗಿರಲಿಲ್ಲ. ಅದು ಅವರ ಕುಟುಂಬದಿಂದ ಬಂದ ಬಳುವಳಿ. ಇಬ್ಬರು ಕೆಲಸಗಾರರನ್ನು ಇಟ್ಟುಕೊಂಡು ಅವರು ಆ ಹಟ್ಟಿಯನ್ನು ನಡೆಸುತ್ತಿದ್ದಾರೆ. ಇಂದಿಗೂ. ‘ಗೋವುಗಳನ್ನು ಸಂಬಾಳಿಸಬಹುದು. ಕೆಲಸಗಾರರನ್ನು ಸಂಬಾಳಿಸುವುದು ಕಷ್ಟ’ ಎನ್ನುತ್ತಾರೆ ಅತ್ತಿಗೆ. ಯಾಕೆಂದರೆ, ಕೆಲಸಗಾರರು ಈ ಕಷ್ಟದ, ಸೆಗಣಿ ಬಳಿಯುವ ಕೆಲಸಕ್ಕೆ ಹೆಚ್ಚು ಸಮಯ ನಿಲ್ಲುವುದಿಲ್ಲವಂತೆ. ಅದಕ್ಕಾಗಿ ದೂರದ ಊರಿಂದ ಅಂದರೆ ಬಿಜಾಪುರ ಆ ಕಡೆಯ ಕೆಲಸಗಾರರನ್ನು ಬಳಸಿಕೊಳ್ಳುತ್ತಿದ್ದರು. ಅವರೂ ಹೆಚ್ಚು ಸಮಯ ನಿಲ್ಲುತ್ತಿರಲಿಲ್ಲ. ಅತ್ತಿಗೆಯ ಅತಿ ದೊಡ್ಡ ಸಮಸ್ಯೆಯೆಂದರೆ ಗೋವುಗಳಿಗೆ ಹುಲ್ಲುಗಳನ್ನು ಸಂಗ್ರಹಿಸುವುದು. ಹುಲ್ಲು ಬೆಳೆಸಲು ಅವರ ಹಿತ್ತಲಲ್ಲಿ ಹೆಚ್ಚು ಜಾಗವಿಲ್ಲ. ಗದ್ದೆಯಿಲ್ಲ. ದೂರದಿಂದ ಲೋಡ್‌ಗಟ್ಟಳೆ ಹುಲ್ಲನ್ನು ಕ್ರಯಕ್ಕೆ ತೆಗೆದುಕೊಂಡು ಬರಬೇಕಾಗಿತ್ತು. ಹುಲ್ಲನ್ನು ಹಣಕೊಟ್ಟೇ ತೆಗೆದುಕೊಳ್ಳಬೇಕು. ಅದನ್ನು ಮನೆಯಲ್ಲಿ ಸಂಗ್ರಹಿಸಿಡಬೇಕು. ಸುಮಾರು 50 ದನಗಳಿಗೆ ಅದೆಷ್ಟು ಲೋಡು ಹುಲ್ಲುಗಳನ್ನು ಕೊಂಡರೂ ಸಾಕಾಗುವುದಿಲ್ಲ. ಹಾಗೆಯೇ ಅವರ ಪತಿಯ ಮೂಲಕ ಬೇರೆ ತರಕಾರಿ ಅಂಗಡಿಗಳ ವೇಸ್ಟ್ ತರಕಾರಿಗಳು, ಅದರ ಸಾಗಾಟದ ಹುಲ್ಲುಗಳು ಇವುಗಳನ್ನೆಲ್ಲ ಬಳಸಿಕೊಂಡು ಬೇರೆ ಬೇರೆ ರೀತಿಯಲ್ಲಿ ದನದ ಹೊಟ್ಟೆ ತುಂಬಿಸಬೇಕು. ಮುಂಜಾವು ನಾಲ್ಕು ಗಂಟೆಗೆ ಅತ್ತಿಗೆ ಏಳುತ್ತಾರೆ. ಕೆಲಸದವರನ್ನೂ ಎಬ್ಬಿಸಿ, ಈ ಹಟ್ಟಿಯ ಕೆಲಸ ಸಾಗುತ್ತದೆ. ಕಳೆದ ಮೂವತ್ತು, ನಲವತ್ತು ವರ್ಷಗಳಿಂದ ಇದನ್ನು ಬಿಡದೆಯೇ ಪಾಲಿಸಿಕೊಂಡು ಬರುತ್ತಿದ್ದಾರೆ.
ನಾನು ಕೇಳಿದ್ದೆ ‘‘ನಿಮ್ಮ ಹಟ್ಟಿಯಲ್ಲಿ ಹೋರಿಗಳು ಹುಟ್ಟಿದರೆ ಏನು ಮಾಡುತ್ತೀರಿ?’’

ಅತ್ತಿಗೆ ಉತ್ತರಿಸುತ್ತಿದ್ದರು ‘‘ಏನು ಮಾಡಲಿಕ್ಕೆ ಆಗುತ್ತದೆ. ಹೋರಿಗಳನ್ನು ಇಟ್ಟುಕೊಂಡು ಗದ್ದೆ ಉಳುವುದಕ್ಕೆ ನಮ್ಮಲ್ಲಿ ಗದ್ದೆಯೂ ಇಲ್ಲ. ಈಗ ಯಾರೂ ಗದ್ದೆಗಳನ್ನು ಉಳುವುದಕ್ಕೆ ಹೋರಿಗಳನ್ನು ಬಳಸುವುದೂ ಇಲ್ಲ. ಹಟ್ಟಿಯಲ್ಲೇ ಎಷ್ಟು ಸಮಯ ಹೋರಿಗಳನ್ನಿಟ್ಟು ಹುಲ್ಲು ಹಾಕಿ ಸಾಕಬಹುದು? ಇರುವ ದನಗಳಿಗೇ ಇಲ್ಲಿ ಜಾಗವಿಲ್ಲ. ಒಂದು ಲೋಡ್ ಹುಲ್ಲಿಗೆ ಚಾರ್ಜ್ ಎಷ್ಟಾಗುತ್ತದೆ ಗೊತ್ತುಂಟಾ....? ಹೋರಿ ಕರು ದೊಡ್ಡದಾದ ಮೇಲೆ ಅದನ್ನು ಮಾರುತ್ತೇವೆ...ಹಾಗೆ ಮಾರಿ ಬಂದ ಹಣದಿಂದ ಇರುವ ದನಗಳನ್ನು ಚೆನ್ನಾಗಿ ಸಾಕಲು ಸಾಧ್ಯವಾಗುತ್ತದೆ’’ ‘‘ಹುಲ್ಲನ್ನೆಲ್ಲ ಕ್ರಯಕೊಟ್ಟು ತರಬೇಕಲ್ಲ, ದುಬಾರಿಯಾಗುವುದಿಲ್ಲವೆ?’’ ಎಂದರೆ ಅವರು ಇಲ್ಲ ಎನ್ನುತ್ತಾರೆ. ಅದರ ಹುಲ್ಲು, ಅದರ ಆಹಾರಕ್ಕೆ ಬೇಕಾದ ಉತ್ಪಾದನೆಯನ್ನು ಅವುಗಳೇ ಮಾಡುತ್ತವೆ. ಅದರ ಸೆಗಣಿ, ಮೂತ್ರ ಎಲ್ಲವೂ ಕೃಷಿಕರಿಗೆ ಬೇಕು. ಸೆಗಣಿ, ಮೂತ್ರಗಳನ್ನು ಸಂಗ್ರಹಿಸಿ, ಮಾರಿದರೆ ಬಂದ ಹಣ ಹಸುಗಳಿಗೆ ಬೇಕಾದ ಆಹಾರ ಒದಗಿಸಲು ಭಾಗಶಃ ಸಾಕಾಗುತ್ತದೆ.

ಈ ದನಗಳ ಜೊತೆಗೆ ಒಂದು ರೀತಿಯ ಬಾಂಧವ್ಯವನ್ನೂ ಅತ್ತಿಗೆ ಕಟ್ಟಿಕೊಂಡಿದ್ದಾರೆ. ಒಂದು ಹಸುವಿನ ಜೊತೆಗೆ ಅತ್ತಿಗೆ ತುಂಬ ಪ್ರೀತಿಯಿತ್ತಂತೆ. ಅದು ಅತ್ತಿಗೆ ಸ್ವತಃ ಆಹಾರ ಕೊಡದೇ ಇದ್ದರೆ ತಿನ್ನುತ್ತಲೇ ಇರುತ್ತಿರಲಿಲ್ಲವಂತೆ. ಅಂತಹ ಸಂದರ್ಭದಲ್ಲೇ, ಅತ್ತಿಗೆ ಕೆಲಸ ಮಾಡುತ್ತಿರುವಾಗ ಬಿದ್ದು ಕಾಲು ಮುರಿದುಕೊಂಡರು. ಆಸ್ಪತ್ರೆ ಸೇರಿದರು. ಸುಮಾರು ಒಂದು ತಿಂಗಳು ಆಸ್ಪತ್ರೆಯಲ್ಲೇ ಇರಬೇಕಾಯಿತು. ಈ ಸಂದರ್ಭದಲ್ಲೇ ಅತ್ತಿಗೆಯ ಆ ಪ್ರೀತಿ ಪಾತ್ರ ಹಸುವಿನ ಆರೋಗ್ಯ ಕೆಟ್ಟಿತು. ಅತ್ತಿಗೆ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗುವ ಹೊತ್ತಿಗೆ ಹಸು ಏನನ್ನೂ ತಿನ್ನದೇ ಸತ್ತೆ ಹೋಯಿತಂತೆ. ‘‘ಕೆಲಸಗಾರರಷ್ಟೇ ನೋಡಿಕೊಂಡರೆ ಸಾಕಾಗುವುದಿಲ್ಲ. ನಾನು ಜೊತೆ ಜೊತೆಯಾಗಿಯೇ ಇರಬೇಕಾಗುತ್ತದೆ. ಹಾಗಾದಲ್ಲಿ ಮಾತ್ರ ನನಗೂ, ಹಸುಗಳಿಗೂ ಸಮಾಧಾನ’’ ಎಂದು ಅತ್ತಿಗೆ ಒಮ್ಮೆ ನುಡಿದಿದ್ದರು. ತನ್ನ ಗೋಸಾಕಣೆಯ ಬದುಕಿನ ಬಗ್ಗೆ ನೀನೇನಾದರೂ ಬರೆಯಲು ಕೂತರೆ, ದೊಡ್ಡ ಕಾದಂಬರಿಯಾದೀತು ಎನ್ನುತ್ತಾರೆ ಅತ್ತಿಗೆ. ‘‘ಅಣ್ಣ ನಿಮ್ಮ ಗೋಸಾಕಣೆಯಲ್ಲಿ ಹೇಗೆ ಸಹಾಯ ಮಾಡಿದ್ದಾರೆ...’’ ಎಂದು ಅತ್ತಿಗೆಯನ್ನು ಕೇಳಿದರೆ ಅವರು ತುಂಟತನದಿಂದ ಹೇಳುತ್ತಾರೆ ‘‘ಪ್ರತಿ ತಿಂಗಳು ಹಾಲಿನಿಂದ ಬಂದ ದುಡ್ಡನ್ನು ಎಣಿಸುವುದಕ್ಕೆ ಸಹಾಯ ಮಾಡುವುದು ಅವರೇ’’ ಅತ್ತಿಗೆಯ ಗೋಸಾಕಣೆಯ ಕನಸಿನ ಹಿಂದೆ ಅಣ್ಣನ ಬಲವಾದ ಬೆಂಬಲವಿದೆ. ಅದನ್ನು ಒಂದು ಉದ್ಯಮ ರೂಪಕ್ಕೆ ತಂದದ್ದು ನಿನ್ನ ಅಣ್ಣನೇ ಎಂದು ಅವರು ಹೇಳುತ್ತಾರೆ.
 ಒಂದು ರೀತಿಯಲ್ಲಿ ಅತ್ತಿಗೆ ಎಂದೆಂದಿಗೂ ಸ್ವಾವಲಂಬಿಯಾಗಿಯೇ ಬದುಕಿದರು. ಇಂದಿಗೂ ಅವರು ಸ್ವಾವಲಂಬಿಯೇ ಆಗಿದ್ದಾರೆ. ಅದಕ್ಕೆ ಕಾರಣವೇ ಈ ಗೋಸಾಕಣೆ. ಕೆಲಸದವರ ಮೂಲಕ ಮೊದಲು ಹಾಲನ್ನು ಮನೆಮನೆಗೆ ಸಾಗಿಸುತ್ತಿದ್ದರು. ಈಗ ಹಾಲನ್ನು ಸಾಗಿಸುವುದಕ್ಕಾಗಿಯೇ ವಾಹನವಿದೆ. ಈ ಗೋಸಾಕಣೆಯಲ್ಲಿ ಬಂದ ದುಡ್ಡಿನಿಂದ ಅವರು ತಮ್ಮ ಕುಟುಂಬಿಕರಿಗೆ ಬಹಳಷ್ಟು ನೆರವಾಗಿದ್ದಾರೆ. ಪ್ರತಿ ರಮಝಾನ್‌ನಲ್ಲಿ ತಮ್ಮ ಹಣದಿಂದಲೇ, ಕುಟುಂಬಿಕರಿಗೆ ಝಕಾತ್ ನೀಡುತ್ತಾರೆ. ಹಬ್ಬದ ಸಂದರ್ಭದಲ್ಲಿ ಬಡ ಕುಟುಂಬಸ್ಥರಿಗೆ ಬಟ್ಟೆಗಳನ್ನು ಹಂಚುತ್ತಾರೆ. ಈಗ ಅತ್ತಿಗೆಯ ಹಿರಿಯ ಮಗ ಅಮೀರ್ ಅಮೆರಿಕದಲ್ಲಿ ಒಳ್ಳೆಯ ಕಂಪೆನಿಯಲ್ಲಿ ಹುದ್ದೆಯಲ್ಲಿದ್ದಾನೆ. ಮಗ ಅಮೆರಿಕಕ್ಕೆ ಹೋಗಿ 15-20 ವರ್ಷಗಳಾಗಿವೆ. ಇನ್ನೊಬ್ಬ ಕಿರಿಯ ಮಗ ಹುರೈರ್ ಮಂಗಳೂರಲ್ಲೇ ಖ್ಯಾತ ಮೀನಿನ ಉದ್ಯಮಿ. ಪತಿಯೂ ಉದ್ಯಮಿ. ಶಿಕ್ಷಣ ಸಂಸ್ಥೆಯೊಂದರ ಮುಖ್ಯಸ್ಥರೂ ಆಗಿದ್ದಾರೆ. ಈಗ ಅತ್ತಿಗೆಗೆ ವಯಸ್ಸಾಗಿದೆ. ಆರೋಗ್ಯವೂ ಮೊದಲಿನಂತಿಲ್ಲ. ಆದರೆ ಹಟ್ಟಿಯನ್ನು ಮುಚ್ಚುವುದಕ್ಕೆ ಅವರ ಮನಸ್ಸು ಒಪ್ಪುತ್ತಿಲ್ಲ.

‘‘ಕೆಲಸಗಾರರು ಸಿಕ್ಕುವುದಿಲ್ಲ. ದೊಡ್ಡ ಸಮಸ್ಯೆಯಾಗಿದೆ. ಹೀಗೆ ಆದರೆ ಇದ್ದ ಹಸುಗಳನ್ನು ಮಾರಿ, ಹಟ್ಟಿಯನ್ನು ಮುಚ್ಚಬೇಕಾಗುತ್ತದೆ’’ ಹೀಗೆಂದು ಹಲವು ಬಾರಿ ನನ್ನಲ್ಲಿ ಅತ್ತಿಗೆ ಹೇಳಿದ್ದರು. ಆದರೆ ಈವರೆಗೂ ಹಟ್ಟಿಯನ್ನು ಮುಚ್ಚುವುದಕ್ಕೆ ಅವರಿಂದಾಗಲಿಲ್ಲ. ಆದರೆ ಹಿಂದಿನ ದಿನಗಳಿಗೆ ಹೋಲಿಸಿದರೆ, ಹಟ್ಟಿಯಲ್ಲಿ ದನಗಳ ಸಂಖ್ಯೆ ಕಡಿಮೆಯಾಗಿದೆ. 60 ದನಗಳಿದ್ದಲ್ಲಿ ಇಂದು ಹೆಚ್ಚೆಂದರೆ 15 ದನಗಳಿವೆ. ಅತ್ತಿಗೆ ಅವರ ಆರೋಗ್ಯ ಮೊದಲಿನಂತಿಲ್ಲ. ವಯಸ್ಸೂ ಇದರ ಮೇಲೆ ದಾಳಿಯಿಟ್ಟಿದೆ. ಕೌಟುಂಬಿಕ ಸಮಸ್ಯೆಗಳೂ ಅವರನ್ನು ಕಾಡಿದೆ. ಇದೆಲ್ಲ ಕಾರಣದಿಂದ ಅವರು ಗೋಸಾಕಣೆಯನ್ನು ನಿಲ್ಲಿಸಬೇಕು ಎಂದು ಯೋಚಿಸುತ್ತಿದ್ದಾರೆ. ಮೊನ್ನೆ ಪತಿಯ ಜೊತೆಗೆ ಉಮ್ರಕ್ಕೆಂದು ಮಕ್ಕಾಕ್ಕೆ ಹೊರಟವರು ಫೋನ್‌ನಲ್ಲಿ ಹೇಳಿದ್ದರು ‘‘ಇಲ್ಲ ಇನ್ನು ನನ್ನಿಂದ ಸಾಧ್ಯವಿಲ್ಲ. ಕೆಲಸದವರು ಸರಿಯಾಗಿ ಸಿಗುವುದಿಲ್ಲ. ನೋಡಬೇಕು...ಸರಿಯಾಗದಿದ್ದರೆ ಮುಚ್ಚುವುದೇ...’’


 ಆದರೆ ಅತ್ತಿಗೆಯ ಮನಸ್ಸು ನನಗೆ ಗೊತ್ತು. ತಂದೆ ಕೊಟ್ಟ ಒಂದು ದನದೊಂದಿಗೆ ಮಾವನ ಮನೆಗೆ ಕಾಲಿಟ್ಟರು. ಮಾವ ಗಣ್ಯ ರಾಜಕಾರಣಿ, ಪತಿ ಎಂಎಲ್‌ಎ ಒಬ್ಬರ ಮಗ ಎನ್ನುವ ಯಾವ ಪ್ರತಿಷ್ಠೆಯೂ ಇಲ್ಲದೆ ಸೆಗಣಿ ಬಾಚಿ ತನ್ನ ಬದುಕನ್ನು ಕಟ್ಟಿಕೊಂಡವರು ಅತ್ತಿಗೆ. ಖಾಲಿ ಬದುಕಿಗೆ ಆಸರೆಯಾದ ಈ ಹಸುಗಳಿಲ್ಲದೆ ಸಮಯ ಕಳೆಯುವುದು ಅವರಪಾಲಿಗೆ ಅಷ್ಟು ಸುಲಭವಿಲ್ಲ. ಪ್ರತಿ ಕ್ಷಣವೂ ದುಡಿಮೆಯನ್ನೇ ಬದುಕಾಗಿಸಿಕೊಂಡ ಅತ್ತಿಗೆಗೆ ಎಲ್ಲಿ ಹೋದರು ನೆನಪು ‘‘ತನ್ನ ಹಸುಗಳದ್ದೇ...’’. ಅಮೆರಿಕದಲ್ಲಿ ಮಗನ ಜೊತೆಗೆ ಇರಲು ಹೋದವರು ‘‘ನನ್ನ ಹಸುಗಳನ್ನು ಬಿಟ್ಟು ತುಂಬ ಸಮಯವಾಯಿತು’’ ಚಿಂತೆ ಮಾಡುತ್ತಿದ್ದರು. ಹಜ್ಜ್‌ಗೆಂದು ಹೋದವರಿಗೂ ಹಸುಗಳದೇ ನೆನಪು. ಹೀಗಿರುವಾಗ ಅತ್ತಿಗೆ ತನ್ನ ಹಟ್ಟಿಯನ್ನು ಮುಚ್ಚುತ್ತಾರೆ ಎನ್ನುವುದನ್ನು ನನಗೆ ಕಲ್ಪಿಸುವುದಕ್ಕೂ ಸಾಧ್ಯವಿಲ್ಲ.

Saturday, May 4, 2013

ಡಾಕ್ಟರ್ ಮತ್ತು ಇತರ ಕತೆಗಳು

 ಗೆಳೆಯ
ಅವನು ನನ್ನ ಆತ್ಮೀಯ ಗೆಳೆಯ.
ತನ್ನ ಇನ್ನೊಬ್ಬ ಗೆಳೆಯನಿಗೆ ನನ್ನನ್ನು ಪರಿಚಯಿಸಿದ ‘‘ಇವನು ನನ್ನ ಆತ್ಮೀಯ ಗೆಳೆಯ. ಮುಸ್ಲಿಮನಾದರೂ ಎಲ್ಲ ಮುಸ್ಲಿಮರಂತಲ್ಲ. ತುಂಬಾ ಒಳ್ಳೆಯವನು’’

ಜಪ್ತಿ
ಬ್ಯಾಂಕ್‌ನಿಂದ ರೈತನಿಗೆ ಜಪ್ತಿ ನೋಟಿಸ್ ಬಂತು.
ಅಲ್ಲಿ ಜಪ್ತಿ ಮಾಡುವುದಕ್ಕೆ ರೈತನ ಮಾನ ಮರ್ಯಾದೆ, ಗೌರವ ಬಿಟ್ಟು ಬೇರೇನೂ ಇರಲಿಲ್ಲ.
ಬ್ಯಾಂಕ್‌ನಿಂದ ಬಂದವರು ಅದನ್ನೇ ಜಪ್ತಿ ಮಾಡಿದರು.
ರೈತ ಕುಟುಂಬ ಸಹಿತ ಆತ್ಮಹತ್ಯೆ ಮಾಡಿಕೊಂಡ.

ಡಾಕ್ಟರ್
ಪ್ರತಿ ದಿನ ಆ ತರುಣ ಡಾಕ್ಟರ್‌ನ್ನು ನೋಡಲು ಅವಳು ಬರುತ್ತಿದ್ದಳು.
ಡಾಕ್ಟರ್ ಎದೆಗೆ ಸ್ಕೆತೋಸ್ಕೋಪ್ ಇಟ್ಟು, ನಿಮಗೆ ಏನೂ ಆಗಿಲ್ಲ ಎಂದು ಹೇಳುತ್ತಿದ್ದರು.
ಒಂದು ದಿನ ಡಾಕ್ಟರ್ ಸ್ಕೆತೋಸ್ಕೋಪ್‌ನ್ನು ಅವಳ ಎದೆಗೆ ಒತ್ತಿ ಅವಳನ್ನು ನೋಡಿದರು.
ಸ್ಕೆತೋಸ್ಕೋಪ್ ಹೇಳದ್ದನ್ನು ಅವಳ ಕಣ್ಣಿನ ಮೂಲಕ ಅವರು ಕೇಳಿಸಿಕೊಂಡರು.
‘‘ಡಾಕ್ಟರ್, ಏನಾದರೂ ಗೊತ್ತಾಯಿತಾ?’’
‘‘ಗೊತ್ತಾಯಿತು...ಹೃದಯದ ಸಮಸ್ಯೆ ಕಣಮ್ಮಾ...’’ ಎಂದು ನಕ್ಕರು.

ಆಸೆ
ಚುನಾವಣೆ. ಹೇಳುತ್ತಿದ್ದ ‘‘ಊರಿನ ಸೇವೆ ಮಾಡಬೇಕು ಎನ್ನೋದು ನನ್ನ ಆಸೆ. ನನ್ನನ್ನು ಗೆಲ್ಲಿಸಿ’’
ಅವನನ್ನು ಸೋಲಿಸಿ ಅವನ ಆಸೆಯನ್ನು ಈಡೇರಿಸಿದರು.

ಕಕ್ಕಸು

ಮನೆಗೆ ಬಂದರೆ ಕಕ್ಕಸು ಬ್ಲಾಕ್ ಆಗಿತ್ತು.
ತಕ್ಷಣ ಅವನಿಗೆ ಊರ ದಲಿತರ ನೆನಪಾಯಿತು.
ಬೆಳ್ಳಂಬೆಳಗ್ಗೆ ಎದ್ದು ದಲಿತರ ಕೇರಿಗೆ ಹೊರಟ. ದಲಿತನೊಬ್ಬನಿಗೆ ಅಡ್ವಾನ್ಸ್ ಕೊಟ್ಟು ಮರಳಿ ಬರುವ ದಾರಿಯಲ್ಲಿ ಯಾರೋ ಮಾಡಿದ ಹೇಲನ್ನು ತುಳಿದ. ಅಷ್ಟಕ್ಕೇ ಅವನು ಬಸಬಸನೆ ವಾಂತಿ ಮಾಡಿಕೊಳ್ಳ ತೊಡಗಿದ.

ಸೇಡು
ಮತ ಹಾಕುತ್ತೇನೆಂದು ರಾಜಕಾರಣಿಯಿಂದ ನೂರು ರೂ. ಇಸ್ಕೊಂಡ ರೈತ. ಮತ ಹಾಕದೆ ಮನೆಯಲ್ಲೇ ಉಳಿದುಕೊಂಡ.
ಭರವಸೆಕೊಟ್ಟು ಮೋಸ ಮಾಡಿದ ರಾಜಕಾರಣಿಗಳಿಗೆ ಪ್ರತಿ ಮೋಸ ಮಾಡಿದ ತೃಪ್ತಿ ಅವನದು.

ಕಾಯಿಲೆ
ಪುಟ್ಟೂರು ಎನ್ನುವುದೊಂದು ಊರು.
ಆ ಊರಿನ ಸರಕಾರಿ ಆಸ್ಪತ್ರೆಗೆ ತರುಣಿ ವೈದ್ಯೆಯೊಬ್ಬಳು ಆಗಮಿಸಿದರು.
ಅಂದಿನಿಂದ ಊರಿನ ಯುವಕರಿಗೆಲ್ಲ ನಿಗೂಢ ಜ್ವರ ಕಾಡತೊಡಗಿದವು.
ಪತ್ರಿಕೆಗಳಲ್ಲಿ ವರದಿ ಬಂದವು. ರಾಜ್ಯಮಟ್ಟದಲ್ಲಿ ಸುದ್ದಿಯಾಯಿತು.
ವಿಧಾನಸಭೆಯಲ್ಲಿ ಚರ್ಚೆಯಾಯಿತು. ಆ ಜ್ವರವನ್ನು ಪುಟ್ಟೂರು ಜ್ವರ ಎಂದೇ ಕರೆಯಲಾಯಿತು.
ಸರಿ, ತನಿಖೆಗೆ ತಜ್ಞರನ್ನು ಪುಟ್ಟೂರಿಗೆ ಕಳುಹಿಸಲಾಯಿತು.
ಒಂದು ತಿಂಗಳ ತನಿಖೆಯ ಬಳಿಕ ತಜ್ಞರು ‘‘ಸರಕಾರಿ ವೈದ್ಯೆಯನ್ನು ಬೇರೆ ಊರಿಗೆ ವರ್ಗಾವಣೆ ಮಾಡಲು’’ ಶಿಫಾರಸು ನೀಡಿದರು.