Wednesday, June 26, 2013

ಹೆಬ್ಬೆರಳು

ಅದೇನೋ ಮಾಡಲು ಹೋಗಿ
ನನ್ನ ಹೆಬ್ಬೆರಳು ಗಾಯಗೊಂಡಿತ್ತು
ನೆತ್ತರು ಒಸರೂದು ಬೇಡವೆಂದು
ಬಟ್ಟೆ ಸುತ್ತಿಕೊಳ್ಳುತ್ತಿರುವಾಗ
ಯಾರೋ ಕರೆದಂತಾಯಿತು
"ಏನೋ ಏಕಲವ್ಯ?"
ತಲೆ ಎತ್ತಿ ನೋಡಿದರೆ
ನನ್ನ ಗುರುಗಳು ನಗುತ್ತಿದ್ದರು

"ನಾನಂತೂ ಕೇಳಿಲ್ಲ ಗುರುಕಾಣಿಕೆ,
ಹೇಳು
ಯಾರಿಗೆ ಕೊಟ್ಟೆ ನಿನ್ನ
ಹೆಬ್ಬೆರಳು ?''

ನಕ್ಕು ಬಾಗಿದೆ...
"ಕಲಿಸು  ಎಂದು ನಾನು
ಅವನಲ್ಲಿ ಕೇಳಲಿಲ್ಲ,
ಕಲಿಸಿದ...
ನಾನು ಕೊಡಲಾರೆ
ಎಂದು ಹೇಳುವ ಮೊದಲೇ
ಕತ್ತರಿಸಿಕೊಂಡ
ನನ್ನ ಹೆಬ್ಬೆರಳ ಗುರುಗಳೇ''

ಗುರುಗಳು ಮೆದುವಾದರು
"ಎಲ್ಲಿರುವನು ಅವನು?,
ಗುರು ಕುಲಕ್ಕೆ  ಕಳಂಕ ತಂದವನು''
"ನಾನು ನೋಡಿಲ್ಲ ಗುರುವೇ
ಈ ವರೆಗೆ ಅವನನ್ನು''
ಎಂದು ಮೌನಕ್ಕೆ ಶರಣಾದೆ

ಗುರುಗಳು ನನ್ನ ಮುಂದೆ
ತಮ್ಮ ಅಂಗೈಯನ್ನೂ ಚಾಚಿದರು
ನನಗೆ ಗೊತ್ತೇ ಇಲ್ಲದ ಸಂಗತಿ
'ಅವರಿಗೂ ಹೆಬ್ಬೆರಳು ಇದ್ದಿರಲಿಲ್ಲ'

"ಸಮಯ ಕೆಟ್ಟ ಗುರು.
ಮೊದಲು ದಕ್ಷಿಣೆ
ಕಿತ್ತುಕೊಂಡು,
ಬಳಿಕ  ಪಾಠ ಕಲಿಸುತ್ತಾನೆ''
ಎನ್ನುತ್ತಾ ಗುರುಗಳು
ನನ್ನ ತಲೆ ಸವರಿ
ನಡೆದು ಹೋದರು...

ಬಟ್ಟೆ ಸುತ್ತಿದ್ದರೂ
ನನ್ನ ಹೆಬ್ಬೆರಳಿಂದ
ರಕ್ತ ಒಸರೂದು ನಿಂತಿರಲಿಲ್ಲ

Monday, June 17, 2013

ಅನುಮಾನ ಮತ್ತು ಇತರ ಕತೆಗಳು

 ಕೂಲಿಕಾರ
ಸಾಹುಕಾರನೊಬ್ಬ ಕೂಲಿಕಾರನನ್ನು ಬರ್ಬರವಾಗಿ ಥಳಿಸುತ್ತಿದ್ದ.
ಆ ದಾರಿಯಲ್ಲಿ ಹೋಗುತ್ತಿದ್ದ ಸಂತ ಅವನನ್ನು ತಡೆದು ಕೂಲಿಕಾರನನ್ನು ಬಿಡಿಸಿಕೊಂಡ.
ಸಂತ ಬಳಿಕ ಕೂಲಿಕಾರನನ್ನು ಸಂತೈಸಿ ಕೇಳಿದ ‘‘ನಿನ್ನ ಈ ಸಾಹುಕಾರ ಮೊದಲಿನಿಂದಲೂ ಹೀಗೆಯೇ ವರ್ತಿಸುತ್ತಿದ್ದಾರೆಯೆ?’’
ಕೂಲಿಕಾರ ಕೈ ಮುಗಿದು ಹೇಳಿದ ‘‘ಹಾಗೇನೂ ಇಲ್ಲ. ಮೊದಲು ತುಂಬಾ ಕ್ರೂರಿಯಾಗಿದ್ದರು. ಈ ಸ್ವಲ್ಪ ಒಳ್ಳೆಯವರಾಗಿದ್ದಾರೆ’’
‘‘ಅದು ಹೇಗೆ?’’ ಸಂತ ಅಚ್ಚರಿಯಿಂದ ಕೇಳಿದ
‘‘ಮೊದಲು ಜೋರಾಗಿ ಥಳಿಸುತ್ತಿದ್ದರು. ನೋವು ತಡೆಯಲಿಕ್ಕೆ ಆಗುತ್ತಿರಲಿಲ್ಲ. ಈಗ ಸ್ವಲ್ಪ ಮೆಲ್ಲಗೆ ಹೊಡೆಯುತ್ತಿದ್ದಾರೆ’’ ಕೂಲಿಕಾರ ಉತ್ತರಿಸಿದ.
ಸಂತ ನಕ್ಕ. ಹಾಗು ಬೆನ್ನು ತಟ್ಟಿ ಹೇಳಿದ ‘‘ನೋಡು, ಸಾಹುಕಾರ ಮೊದಲಿನಷ್ಟೇ ಜೋರಾಗಿ ಹೊಡೆಯುತ್ತಿದ್ದಾನೆ. ಅದರಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಆದರೆ ಆ ಪೆಟ್ಟಿಗೆ ನಿನ್ನ ದೇಹ ಜಡ್ಡು ಕಟ್ಟಿದೆ. ದೇಹ ಒಗ್ಗಿ ಹೋಗಿದೆ. ಆದುದರಿಂದ ನಿನಗೆ ಮೊದಲಿನಷ್ಟು ನೋವಾಗುತ್ತಿಲ್ಲ’’

ಸಾಲ
ದಿನಗಳು ಬಡ್ಡಿಯಂತೆ ಬೀಳುತ್ತಿವೆ.
ಉರುಳುತ್ತಿರುವ ವರ್ಷಗಳು ಚಕ್ರಬಡ್ಡಿಯಂತೆ ಹೆದರಿಸುತ್ತಿವೆ.
ಪಾವತಿ ಮಾಡಲಾಗದ ಸಾಲಗಳು ಕುತ್ತಿಗೆಗೆ ಬಂದಿವೆ.
ಪ್ರಾಯಕ್ಕೆ ಬಂದ ನಾಲ್ಕು ಹೆಣ್ಣು ಮಕ್ಕಳ ಬಡ ತಂದೆಯ ಅಳಲು.

ಕೂಲಿ

ದಿನವಿಡೀ ತೋಟದಲ್ಲಿ ದುಡಿದು ಆತ ಒಡೆಯನಲ್ಲಿ ಕೂಲಿಗಾಗಿ ಬಂದ. ಒಡೆಯ ಕೊಡಲೆಂದು ಹೊರಟಾಗ ಹೆಂಡತಿ ಕರೆದಳು.
‘‘ಕೂಲಿಯ ಎಲ್ಲ ಹಣ ಕೊಡಬೇಡಿ. ಕೊಟ್ರೆ ಅವನು ಸೋಮಾರಿ ಆಗ್ತಾನೆ. ನಾಳೆ ಕೆಲಸಕ್ಕೆ ಬರಲ್ಲ...’’

ಅನುಮಾನ

ನನ್ನ ಗೆಳೆಯರ ಜೊತೆಗೆ ನಾನು ಕನಸುಗಳ ಬಗ್ಗೆ ಚರ್ಚೆ ನಡೆಸುತ್ತಿದ್ದೆ.
ಇದ್ದಕ್ಕಿದ್ದಂತೆಯೇ ನಮಗೆಲ್ಲರಿಗೂ ಅನುಮಾನ ಬರಲು ಶುರುವಾಯಿತು.
‘‘ನಾವು ಕನಸಿನಲ್ಲಿದ್ದೇವೆಯೋ ಅಥವಾ ನನಸಿನಲ್ಲಿದ್ದೇವೆಯೋ...’’

ಬಂಗಾರದ ತೆನೆ

 ಆ ಊರಲ್ಲೊಬ್ಬ ಸ್ವಾಮೀಜಿ ಬಂದ. ಅವನಲ್ಲಿ ಬಂಗಾರದ ಬೀಜಗಳಿವೆ ಎನ್ನುವುದು ಸುದ್ದಿಯಾಯಿತು. ಅದನ್ನು ಗದ್ದೆಯಲ್ಲಿ ಬಿತ್ತಿದರೆ, ಅದು ಬಂಗಾರದ ತೆನೆಯನ್ನು ಬಿಡುತ್ತದೆಯಂತೆ. ಸರಿ. ಎಲ್ಲ ರೈತರೂ ಅವನಲ್ಲಿ ಬೀಜಕ್ಕಾಗಿ ಬೇಡಿದರು. ಸ್ವಾಮಿ ಎಲ್ಲರಿಗೂ ಕೊಟ್ಟ. ಒಬ್ಬ ರೈತ ಮಾತ್ರ ತನ್ನ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡತೊಡಗಿದ. ತನ್ನ ಗದ್ದೆಯಲ್ಲಿ ಭತ್ತವನ್ನು ಬಿತ್ತಿದ.
ಆ ವರ್ಷ ಎಲ್ಲರ ಗದ್ದೆಯಲ್ಲಿ ಬಂಗಾರದ ತೆನೆ. ಒಬ್ಬ ರೈತನ ಗದ್ದೆಯಲ್ಲಿ ಮಾತ್ರ ಭತ್ತದ ತೆನೆ. ಎಲ್ಲರೂ ತಮ್ಮ ಬಂಗಾರದ ತೆನೆಯನ್ನು ಕೊಯ್ದು ಭತ್ತ ಬೆಳೆದ ರೈತನ ಅಂಗಳದಲ್ಲಿ ರಾಶಿ ಹಾಕಿ ಬೇಡ ತೊಡಗಿದರು ‘‘ಉಣ್ಣುವುದಕ್ಕೆ ಅಕ್ಕಿಯಿಲ್ಲ. ಈ ಬಂಗಾರವನ್ನು ತೆಗೆದುಕೊಂಡು ಒಂದು ಸೇರು ಅಕ್ಕಿಯಾದರೂ ಕೊಡು’’

ಪತ್ರಕರ್ತ

ಶ್ರೇಷ್ಠ ಪತ್ರಕರ್ತನೊಬ್ಬನನ್ನು ಕೇಳಲಾಯಿತು.
‘‘ನಿಮ್ಮದು ಯಾವ ಪಕ್ಷ?’’
ಪತ್ರಕರ್ತ ನಕ್ಕು ಉತ್ತರಿಸಿದ ‘‘ಈ ನಾಡನ್ನು ಆಳುತ್ತಿರುವುದು ಯಾವ ಪಕ್ಷವೋ, ಅದರ ವಿರೋಧ ಪಕ್ಷ ’’

ಗಿಡ

ಯಾರೋ ಹೇಳಿದರು.
ಗಿಡ ಬೆಳೆಯಬೇಕಾದರೆ ನೀರು ಹಾಕಬೇಕು.
ಅವನು ಗಿಡ ನೆಟ್ಟು ಮಳೆಗಾಲದಲ್ಲೂ ಅದಕ್ಕೆ ನೀರು ಸುರಿಯತೊಡಗಿದ.
ಗಿಡ ಒಂದು ತಿಂಗಳಲ್ಲಿ ಕೊಳೆತು ಹೋಯಿತು.

ಕೊಡ್ತೀರಾ?
ಬಸ್ ನಿಲ್ದಾಣದಲ್ಲಿ ಒಬ್ಬ ಪುಸ್ತಕ ಓದುತ್ತಾ ಕೂತಿದ್ದ.
ಕುರುಡ ಬಾಲಕನೊಬ್ಬ ತಡವರಿಸುತ್ತಾ ಬಂದು ಅವನ ಪಕ್ಕದಲ್ಲಿ ಕೂತ.
‘‘ಸಾರ್, ಏನ್ಮಾಡ್ತಾ ಇದ್ದೀರಿ?’’ ಕುರುಡ ಬಾಲಕ ಕೇಳಿದ.
ಪುಸ್ತಕ ಓದುತ್ತಿದ್ದವನು ಅಚ್ಚರಿಯಿಂದ ಅವನ ಕಡೆಗೆ ತಿರುಗಿ ಉತ್ತರಿಸಿದ ‘‘ಪುಸ್ತಕ ಓದುತ್ತಾ ಇದ್ದೇನೆ’’
ಬಾಲಕ ಆಸೆಯಿಂದ ಕೇಳಿದ ‘‘ನಿಮ್ಮದು ಮುಗಿದ ಬಳಿಕ ನನಗೆ ಕೊಡುತ್ತೀರಾ?’’
‘‘ಯಾವುದನ್ನು, ಪುಸ್ತಕವನ್ನೇ?’’ ಅವನು ಇನ್ನಷ್ಟು ಅಚ್ಟರಿಯಿಂದ ಕೇಳಿದ.
‘‘ಅಲ್ಲ, ನಿಮ್ಮ ಕಣ್ಣನ್ನು’’ ಬಾಲಕ ಉತ್ತರಿಸಿದ.
(ಸಿಂಹಳೀ ಜಾಹೀರಾತೊಂದರ ಪ್ರೇರಣೆಯಿಂದ)

ಶಾಂತಿ
ಆ ಊರಲ್ಲೊಂದು ಭಾರೀ ಗಲಭೆಯಾಯಿತು.
ಆ ಗಲಭೆಗೆ ಕಾರಣನಾದವನನ್ನು ಬಹುಸಂಖ್ಯಾತ ಜನರು ಅವನನ್ನು ಓಟಿಗೆ ನಿಲ್ಲಿಸಿ ದಿಲ್ಲಿಗೆ ಕಳುಹಿಸಿದರು.
‘‘ಯಾಕೆ ಅವನನ್ನು ಗೆಲ್ಲಿಸಿದಿರಿ?’’ ಪತ್ರಕರ್ತನೊಬ್ಬ ಕೇಳಿದ.
‘‘ಅವನಿದ್ದರೆ ಇಲ್ಲಿ ಪ್ರತಿ ಬಾರಿ ಗಲಭೆ. ಈಗ ಅವನು ದಿಲ್ಲಿಯಲ್ಲಿದ್ದಾನೆ. ಈಗ ನೋಡಿ, ನಮ್ಮ ಗ್ರಾಮದಲ್ಲಿ ತುಂಬಾ ಶಾಂತಿ ನೆಲೆಸಿದೆ.’’

Wednesday, June 12, 2013

ಎರಡೂವರೆ ಎಕರೆ ಬದಿಗಿಟ್ಟು, 4 ಲಕ್ಷ ಎಕರೆಯನ್ನು ನಮ್ಮದಾಗಿಸೋಣ....

ವಕ್ಫ್ ಆಸ್ತಿಯ ನೆಲದಲ್ಲಿ ನಿಂತಿರುವ ವಿನ್ಸರ್ ಮ್ಯಾನರ್ ಹೋಟೆಲ್ ಬೆಂಗಳೂರ್
ಬಾಬರಿ ಮಸೀದಿಯಿದ್ದ 2.77 ಎಕರೆ ಭೂಮಿಯೇ ಭಾರತ ಮುಸ್ಲಿಮರ ಸರ್ವ ಸಮಸ್ಯೆಗಳಿಗೆ ಪರಿಹಾರ ಎಂಬಂತೆ ಇಂದಿಗೂ ಇಲ್ಲಿನ ಮುಸ್ಲಿಮರನ್ನು ರಾಜಕೀಯ ನಾಯಕರು ನಂಬಿಸುತ್ತಿದ್ದಾರೆ. ವರ್ಷಗಳ ಹಿಂದೆ ಅಲಹಾಬಾದ್ ನ್ಯಾಯಾಲಯ ತನ್ನ ‘ಕಟ್ಟೆ ಪಂಚಾಯತಿ’ ತೀರ್ಪಿನಲ್ಲಿ ಈ ಜಾಗವನ್ನು ಮೂರು ಗುಂಪುಗಳಿಗೆ ಹಂಚಿಕೆ ಮಾಡಿತು. ಒಂದು ವೇಳೆ ಇಲ್ಲಿರುವ ಅಷ್ಟೂ ಸೆಂಟ್ಸ್ ಭೂಮಿಯನ್ನು ನ್ಯಾಯಾಲಯ ಮುಸ್ಲಿಮರಿಗೇ ನೀಡಿತು ಎಂದು ಭಾವಿಸೋಣ. ಅದರಿಂದ ಈ ದೇಶದ ಮುಸ್ಲಿಮರ ಬದುಕಿನಲ್ಲಿ ಏನು ಬದಲಾವಣೆಯಾಗಬಹುದು? ಹೆಚ್ಚೆಂದರೆ ಅಲ್ಲೊಂದು ಮಸೀದಿ ನಿರ್ಮಾಣವಾಗಬಹುದು. ಈ ದೇಶದಲ್ಲಿ ಮುಸ್ಲಿಮರಿಗೆ ಮಸೀದಿಗಳ ಕೊರತೆಯಿದೆಯೆ?  ಬಾಬರ್ ಯಾವ ಧರ್ಮ ಪ್ರಚಾರಕನೂ ಅಲ್ಲ. ಅವನು ಒಬ್ಬ ರಾಜನಾಗಿ ಭಾರತಕ್ಕೆ ಕಾಲಿಟ್ಟ. ಅದೂ ಇಲ್ಲಿನ ರಾಜನೊಬ್ಬನ ಆಹ್ವಾನದ ಮೇರೆಗೆ. ಬಾಬರಿ ಮಸೀದಿ ಮುಸ್ಲಿಮರ ಧಾರ್ಮಿಕ ಕ್ಷೇತ್ರವೂ ಅಲ್ಲ. ಎಲ್ಲಿ ನಮಾಝ್ ಸಲ್ಲಿಸಲಾಗುತ್ತದೋ ಅದಷ್ಟೇ ಮುಸ್ಲಿಮರಿಗೆ ಮಸೀದಿ. ಇಲ್ಲದಿದ್ದರೆ ಅದು ಬರಿದೇ ಕಟ್ಟಡ. ಬಾಬರಿ ಮಸೀದಿ ಈ ದೇಶದ ಇತಿಹಾಸವನ್ನು ಹೇಳುವ ಅತ್ಯಮೂಲ್ಯ ಪ್ರಾಚ್ಯವಸ್ತು ವಾಗಿ ಪರಿಗಣಿಸಬಹುದು.

ನನಗನಿಸುವ ಮಟ್ಟಿಗೆ ಬಾಬರಿ ಮಸೀದಿ ಧ್ವಂಸ ಮತ್ತು ಅಲ್ಲಿರುವ ಜಾಗದ ವಿವಾದ ಈ ದೇಶದ ಸಂವಿಧಾನ ಮತ್ತು ಪ್ರಜಾಸತ್ತೆಯ ಸಮಸ್ಯೆ. ಇದು ಕೇವಲ ಮುಸ್ಲಿಮರೊಂದಿಗೆ ತಳಕು ಹಾಕಿಕೊಂಡಿರುವ ವಿವಾದವಲ್ಲ. ಬಾಬರಿ ಮಸೀದಿಯ ಜೊತೆಗೆ ಈ ದೇಶದ ಸಂವಿಧಾನವೂ ಧ್ವಂಸವಾಯಿತು. ಬಾಬರಿ ಮಸೀದಿಯನ್ನು ಯಾಕೆ ಪುನರ್‌ನಿರ್ಮಾಣ ಮಾಡಿಕೊಡಬೇಕು ಎಂದರೆ ಆ ಮೂಲಕ ಧ್ವಂಸಗೊಂಡ ಸಂವಿಧಾನ ಪುನರ್‌ನಿರ್ಮಾಮಾಣವಾದಂತಾಗುತ್ತದೆ.ದುರ್ಬಲಗೊಂಡ ಈ ದೇಶದ ಪ್ರಜಾಸತ್ತೆ ಮತ್ತೆ ಸದೃಢವಾಗುತ್ತದೆ. ಅಲ್ಪಸಂಖ್ಯಾತರಲ್ಲಿ ಆವರಿಸಿ ಕೊಂಡಿರುವ ಅಭದ್ರತೆಗೆ ಮುಖ್ಯ ಕಾರಣ ಬಾಬರಿ ಮಸೀದಿಯ ಅತಿಕ್ರಮಣವಲ್ಲ. ದುರ್ಬಲಗೊಂಡಿರುವ ಹಾಗೂ ಫ್ಯಾಶಿಸ್ಟ್ ಶಕ್ತಿಗಳಿಂದ ದಮನಕ್ಕೀಡಾಗುತ್ತಿರುವ ಈ ದೇಶದ ಸಂವಿಧಾನ. ಆದುದರಿಂದಲೇ, ಬಾಬರಿಮಸೀದಿ ಪುನರ್‌ನಿರ್ಮಾಣ, ಭಾರತದ ಪ್ರಜಾಸತ್ತೆ ಮತ್ತು ಸಂವಿಧಾನದ ಮೇಲೆ ನಂಬಿಕೆಯಿರುವ ಸರ್ವ ಭಾರತೀಯರ ಅಪೇಕ್ಷೆಯೇ ಹೊರತು, ಇದರೊಂದಿಗೆ ಮುಸ್ಲಿಮರ ಧಾರ್ಮಿಕ ಭಾವನೆ ತಳಕು ಹಾಕಿಕೊಂಡಿರುವುದು ಅತ್ಯಲ್ಪ.ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ಈ ದೇಶದ ಮುಸ್ಲಿಮರು ತೀರಾ ಭಾವುಕವಾಗಿ ಹಚ್ಚಿಕೊಳ್ಳು ವುದನ್ನು ಬಿಟ್ಟು, ವಾಸ್ತವದೆಡೆ ಕಣ್ಣು ಹೊರಳಿಸುವ ಸಮಯ ಇದೀಗ ಬಂದಿದೆ.

ಬಾಬರಿ ಮಸೀದಿಗೆ ಸೇರಿದ ಒಟ್ಟು ಜಾಗ ಕೇವಲ ಎರಡೂವರೆ ಎಕರೆ. ಇದು ಮರಳಿ ದೊರಕಿದರೆ ಅದನ್ನು ನಾವು ರಾಜಕೀಯ ಲಾಭ ವೆಂದು ಪರಿಗಣಿಸಬಹುದು. ಫ್ಯಾಶಿಸ್ಟ್ ಶಕ್ತಿಗಳ ಸೋಲಾಗಿ ಪರಿಗಣಿಸಿ, ವಿಜಯೋತ್ಸವ ಆಚರಿಸಬಹುದು. ಆದರೆ ಮುಸ್ಲಿಮರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಬದುಕಿನಲ್ಲಿ ಈ ಎರಡೂವರೆ ಎಕರೆ ಭೂಮಿಯ   ಪಾತ್ರ ಏನೇನೂ ಇಲ್ಲ.ಆದರೆ ಈ ಬಾಬರಿ ಮಸೀದಿ ಭೂ ವಿವಾದದ ಗದ್ದಲದಲ್ಲಿ, ಮುಸ್ಲಿಮರ ತಳ ಮಟ್ಟದ ಬದುಕಿನ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಬೇಕೆಂದೇ ಮೀಸಲಿಟ್ಟ ಸುಮಾರು ನಾಲ್ಕು ಲಕ್ಷ  ಎಕರೆ ಭೂಮಿ ನರಿ, ನಾಯಿಗಳ ಪಾಲಾಗಿರುವುದನ್ನು ಮುಸ್ಲಿಮರಿಂದ ಮುಚ್ಚಿಡ ಲಾಗುತ್ತಿದೆ. ಈ ನಾಲ್ಕು ಲಕ್ಷ ಎಕರೆ ಭೂಮಿಗಾಗಿ ಹೋರಾಟ ನಡೆಸಬೇಕು, ಅದನ್ನು ವಶಪಡಿಸಿ ಕೊಂಡು ಮುಸ್ಲಿಮರ ಏಳಿಗೆಗೆ ಬಳಸಬೇಕು ಎಂದು ಯಾವ ಮುಸ್ಲಿಮ್ ನಾಯಕರಿಗೂ  ಯೋಚನೆ ಬಂದಿಲ್ಲ. ಬಂದರೂ ಅದನ್ನು ರಾಜಕೀಯವಾಗಿ ಬಳಸುವುದಕ್ಕೆ ಎಲ್ಲರೂ ಹಿಂದೇಟು ಹಾಕುತ್ತಿದ್ದಾರೆ? ಕೇರಳದ ದೇವಸ್ಥಾನವೊಂದರಲ್ಲಿ ಬಡವರಿಗೆ ಸೇರಬೇಕಾದ ಚಿನ್ನ ಸಂಪತ್ತು ಕೊಳೆಯುತ್ತಾ ಬಿದ್ದಿರುವಂತೆಯೇ ಮುಸ್ಲಿಮರ ಅಭಿವೃದ್ಧಿಯಲ್ಲಿ ಅಪಾರ ಪಾತ್ರ ವಹಿಸಬಹುದಾಗಿದ್ದ ಕೋಟ್ಯಂತರ ಬೆಲೆಬಾಳುವ ಭೂಮಿಯನ್ನು ಕೆಲವೇ ಕೆಲವು ಶ್ರೀಮಂತರು ಅನುಭೋಗಿಸುತ್ತಿದ್ದಾರೆ. ಅತ್ಯಂತ ವಿಷಾದನೀಯ ಸಂಗತಿಯೆಂದರೆ, ಈ ನಾಲ್ಕು ಲಕ್ಷ ಎಕರೆ ಭೂಮಿಯನ್ನು ತಮ್ಮ ಕೈವಶ ಮಾಡಿಕೊಂಡು ಅನುಭವಿಸುತ್ತಿರುವುದು ಯಾರೋ ಸಂಘ ಪರಿವಾರದ ಜನರಲ್ಲ. ಇವರಲ್ಲಿ ಬಹು ಸಂಖ್ಯಾತರು ಮುಸ್ಲಿಮ್ ಶ್ರೀಮಂತರೇ ಆಗಿ ದ್ದಾರೆ. ಹಾಗೆಯೇ ಅಂಬಾನಿಯಂತಹ ಕುಳ ಗಳೂ ಯಾವ ಸಂಕೋಚವೂ ಇಲ್ಲದೆ ಮುಸ್ಲಿಮ್ ಬಡವರಿಗೆ ಸೇರಬೇಕಾದ ಆಸ್ತಿಯನ್ನು ತಮ್ಮದಾಗಿಸಿಕೊಂಡು ಅನುಭವಿಸುತ್ತಿದ್ದಾರೆ.

ನಮ್ಮ ರಾಜ್ಯದಲ್ಲಿ ವಕ್ಫ್  ಎನ್ನುವ ಒಂದು ಖಾತೆಯಿದೆ. ಸಾಧಾರಣವಾಗಿ ರಾಜ್ಯದ ಮುಸ್ಲಿಮರಿಗೆ ಯಾವ ಖಾತೆ ಸಿಗದೇ ಇದ್ದರೂ ವಕ್ಫ್ ಖಾತೆಯೊಂದು ತಮಗಿದ್ದೇ ಇದೆ ಎನ್ನುವ ಸಂತೃಪ್ತಿಯಿದೆ. ಇರುವಷ್ಟು ದಿನ ಈ ವಕ್ಫ್‌ನ ಹೆಸರಿನಲ್ಲಿ ಗೂಟದ ಕಾರಿನಲ್ಲಿ ತಮ್ಮ ಸಮುದಾಯದ ನಾಯಕರೂ ತಿರುಗಾಡಿದರು ಎನ್ನುವ ಸಂತೃಪ್ತಿ ಬಿಟ್ಟರೆ ಈ ನಾಡಿನ ಬಡ ಮುಸ್ಲಿಮರಿಗೆ ವಕ್ಫ್ ಸಚಿವರುಗಳಿಂದಾದ ಪ್ರಯೋಜನ ತೀರಾ ಕಡಿಮೆ.ವಕ್ಫ್‌ನ ನೇರ ಅರ್ಥ ದತ್ತಿ ನೀಡುವುದು. ಅಂದರೆ ದೇವರ ಹೆಸರಿನಲ್ಲಿ ಭೂಮಿಯನ್ನು ದತ್ತಿಯಾಗಿ ಸಮಾಜಕ್ಕೆ ಅರ್ಪಿಸುವುದು. ಈ ರೀತಿ ದಾನಿಗಳು ಮುಸ್ಲಿಮ್ ಸಮಾಜದ ಬಡವರ ಉದ್ಧಾರಕ್ಕಾಗಿ ನೀಡಿದ ಭೂಮಿಯೇ ಈ ವಕ್ಫ್ ಆಸ್ತಿ. ಸುಮಾರು ೮೦೦ಕ್ಕೂ ಅಧಿಕ ವರ್ಷಗಳ ಇತಿಹಾಸ ಈ ವಕ್ಫ್‌ಗಿದೆ. ರಾಜರು ಮಾತ್ರವಲ್ಲ, ಮುಸ್ಲಿಮ್ ಜಮೀನ್ದಾರರು ಮತ್ತು ಮುಸ್ಲಿಮ್ ಶ್ರೀಮಂತರು ಸಮುದಾಯದ ಅಭಿವೃದ್ಧಿಗಾಗಿ ದಾನವಾಗಿ ನೀಡಿದ ಆಸ್ತಿ ಇದು. ದೇಶಾದ್ಯಂತ ೩ ಲಕ್ಷ ವಕ್ಫ್ ಆಸ್ತಿಗಳು ನೋಂದಣಿ ಯಾಗಿವೆ. ಸುಮಾರು ನಾಲ್ಕು ಲಕ್ಷ ಎಕರೆ ಭೂಮಿ ಮುಸ್ಲಿಮ್ ಬಡವರ ಅಭಿವೃದ್ಧಿ ಗಾಗಿಯೇ ವಕ್ಫ್ ಮಾಡಲ್ಪಟ್ಟಿದೆ.ರೈಲ್ವೆ ಮತ್ತು ರಕ್ಷಣಾ ಖಾತೆಗಳ ಬಳಿಕ ಅತ್ಯಧಿಕ ಆಸ್ತಿ ವಕ್ಪ್ ಇಲಾಖೆಯ ಬಳಿಯಿದೆ. ಎಂದರೆ ಅದಕ್ಕಿಂತ ದೊಡ್ಡ ಕೊಡುಗೆ ಈ ದೇಶದ ಮುಸ್ಲಿಮರಿಗೆ ಇನ್ನೇನು ಬೇಕು? ಆದರೆ ದುರದೃಷ್ಟವಶಾತ್ ಈ ಆಸ್ತಿ ಎಷ್ಟರ ಮಟ್ಟಿಗೆ ಮುಸ್ಲಿಮರ ಅಭಿವೃದ್ಧಿಗಾಗಿ ಬಳಕೆಯಾಗುತ್ತಿದೆ ಎಂದು ತನಿಖೆಗಿಳಿದರೆ ಆಘಾತಕಾರಿ ಅಂಶಗಳು ಹೊರಬರುತ್ತವೆ. ಒಂದು ಮೂಲದ ಪ್ರಕಾರ ಕೇವಲ ಕರ್ನಾಟಕ ದಲ್ಲೇ ೨೭ ಸಾವಿರ ಎಕರೆ ವಕ್ಫ್‌ಭೂಮಿಯ ಅತಿಕ್ರಮಣ ನಡೆದಿದ್ದು ಅದೆಲ್ಲ ಸದ್ಯ ಯಾರ‍್ಯಾರದೋ ಕೈಯಲ್ಲಿದೆ. ಇಂದು ದೇಶದ ಅತಿ ದೊಡ್ಡ ಭೂ ಹಗರಣ  ವಕ್ಫ್ ಭೂಮಿಯ ಹಗರಣ. ಇದನ್ನು ಔಟ್‌ಲುಕ್ ಆಂಗ್ಲ ಪತ್ರಿಕೆ ಮುಖಪುಟದಲ್ಲಿ ಮುಖ್ಯ ಸುದ್ದಿಯಾಗಿ ವರದಿ ಮಾಡಿತ್ತು. ಒಂದೆಡೆ ಒತ್ತುವರಿ. ಇನ್ನೊಂದೆಡೆ ಅತ್ಯಂತ ಕಡಿಮೆ ಬೆಲೆಗೆ ವಕ್ಫ್ ಆಸ್ತಿಯ ಮಾರಾಟ. ಮಗದೊಂದೆಡೆ, ಒಂದು ಕಾಲದಲ್ಲಿ ಅಲ್ಪ ಬೆಲೆಗೆ ಲೀಸಿಗೆ ಭೂಮಿ ಪಡೆದುಕೊಂಡು ಅದೇ ಚಿಲ್ಲರೆ ಹಣವನ್ನು ಪಾವತಿಸುತ್ತಾ ಭೂಮಿ ಅನುಭೋಗಿ ಸುತ್ತಿರುವ ಶ್ರೀಮಂತರು, ಜೊತೆಗೆ ವಕ್ಫ್ ಆಸ್ತಿಯನ್ನು ದುರ್ಬಳಕೆ ಮಾಡಿಕೊಂಡಿರುವ ಬೆಂಗಳೂರಿನ ಭೂಮಾಫಿಯಾ. ಮುಸ್ಲಿಮ್ ಬಡವರ ಆಸ್ತಿಯನ್ನು ಲೂಟಿ ಹೊಡೆದ ವಂಚನೆಯಲ್ಲಿ ಮುಖೇಶ್ ಅಂಬಾನಿಯಂಥ ವರು ಮಾತ್ರವಲ್ಲ, ಮುಸ್ಲಿಮ್ ಸಮುದಾಯಕ್ಕೇ ಸೇರಿದ ಹಲವು ಬೃಹತ್ ಶ್ರೀಮಂತರು ಹಾಗೂ ರಾಜಕಾರಣಿಗಳು ಒಳಗೊಂಡಿರುವುದು ದುರಂತ. ಈ ಕಾರಣದಿಂದಲೇ ಈ ಪರಿಯ ಅನ್ಯಾಯದ ವಿರುದ್ಧ ಧ್ವನಿಯೆತ್ತಲು ಯಾರೂ ನೇತೃತ್ವ ವಹಿಸುತ್ತಿಲ್ಲ. ಹಾಗೆ ನೇತೃತ್ವ ವಹಿಸಲು ಮುಂದಾದರೂ ಆ ಧ್ವನಿಯನ್ನು ಅಲ್ಲೇ ಅಮುಕಿ ಬಿಡಲಾಗುತ್ತದೆ.

ವಕ್ಫ್ ಬೋರ್ಡಿನ ಆಸ್ತಿ ಹೇಗೆ ಕಂಡವರ ಪಾಲಾಗುತ್ತಿದೆ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ಬೆಂಗಳೂರಿನ ವಿಂಡ್ಸರ್ ಮ್ಯಾನರ್ ಹೊಟೇಲ್ ಪ್ರಕರಣ.1.65 ಲಕ್ಷ ಚದರ ಅಡಿ ವಿಸ್ತೀರ್ಣದ ಈ ಭೂಮಿಗೆ ಈ ಹೊಟೇಲ್ ನೀಡುತ್ತಾ ಬಂದಿದ್ದ ಲೀಸ್‌ನ ಹಣ ಎಷ್ಟು ಗೊತ್ತೆ? ತಿಂಗಳಿಗೆ ಬರೇ ಒಂದೂವರೆ ಸಾವಿರ ರೂಪಾಯಿ.  ಈ ಭೂಮಿ ಮುಸ್ಲಿಮ್ ಬಡವರಿಗೆ ದೇವರ ಹೆಸರಲ್ಲಿ ೧೯೬೫ರಲ್ಲಿ ಸರ್ ಮಿರ್ಝಾ ಇಸ್ಮಾಯೀಲ್  ವಕ್ಫ್ ಮಾಡಿದ್ದರು.೧೯೭೩ರಲ್ಲಿ ವಕ್ಫ್‌ನಿಂದ ಹೊಟೇಲ್ ಉದ್ಯಮಿ ಗಳು ಈ ಭೂಮಿಯನ್ನು ತಮ್ಮದಾಗಿಸಿಕೊಂಡು ೯೦ ವರ್ಷದ ಲೀಸನ್ನು ಬರೆಸಿಕೊಂಡರು. ಆರಂಭದಲ್ಲಿ 30 ವರ್ಷಕ್ಕೆ ಲೀಸ್ ಮಾಡಿ ಕೊಂಡಿದ್ದ ಅವರು ಬಳಿಕ ಅದನ್ನು ವಿಸ್ತರಿಸಿದರು. ೭೦ರ ದಶಕದ ದರವನ್ನೇ ಇತ್ತೀಚಿನವರೆಗೂ ಈ ಹೊಟೇಲ್ ಯಾವ ನಾಚಿಕೆಯೂ ಇಲ್ಲದೆ ಪಾವತಿಸಿಕೊಂಡು ಬಂದಿದೆ. ವಕ್ಫ್ ಮಾಡುವು ದೆಂದರೆ ದೇವರ ಹೆಸರಲ್ಲಿ ಬಡವರಿಗೆ ಮಾಡಿದ ದಾನ. ಅದನ್ನು ಅನುಭೋಗಿಸುತ್ತಿರುವವರು ಪರೋಕ್ಷವಾಗಿ ಬಡವರ ಹಣವನ್ನೇ ದೋಚು ತ್ತಿದ್ದಾರೆ ಎನ್ನುವ ಅರಿವು ಅವರಿಗಿರಬೇಕು.  ಆದರೆ ಇದರ ವಿರುದ್ಧ ಯಾವುದೇ ಧಾರ್ಮಿಕ ಮೌಲ್ವಿಗಳಾಗಲಿ, ರಾಜಕೀಯ ಮುಖಂಡರಾಗಲಿ ಮಾತನಾಡದೇ ತೆಪ್ಪಗಿರುವುದು ಈ ದೇಶದ ಬಡ ಮುಸ್ಲಿಮರ ದೌರ್ಭಾಗ್ಯವೇ ಸರಿ.

ಅದೇನೇ ರಾಜಕೀಯ ಕಾರಣ ಇರಲಿ. ಕರ್ನಾಟಕದಲ್ಲಿ ವೊತ್ತ ವೊದಲಾಗಿ ಬಿಜೆಪಿ ಸರಕಾರ ವಕ್ಫ್ ಆಸ್ತಿಯ ಅಕ್ರಮಗಳ ವರದಿ ಯೊಂದನ್ನು ತಯಾರಿಸಲು ತನಿಖಾ ಆಯೋಗ ವನ್ನು ನೇಮಿಸಿತು. ಆದರೆ ಮುಸ್ಲಿಮರ ದುರದೃಷ್ಟಕ್ಕೆ, ಅದೂ ಕೂಡ ಕೆಟ್ಟ ರಾಜಕೀಯಕ್ಕೆ ಬಳಕೆ ಯಾಯಿತು. ಅಧಿಕಾರ ಲಾಲಸೆಯಿಂದ ಆರೆಸ್ಸೆಸ್‌ನ್ನು ಮೆಚ್ಚಿಸಲಿಕ್ಕಾಗಿ ನಿತ್ಯ ಹಲವು ಬಗೆಯ ಕೋತಿಯಾಟವನ್ನು ಆಡುವ ಕುಖ್ಯಾತ ಮರಿ ಪುಡಾರಿಯೊಬ್ಬರನ್ನು   ಈ ತನಿಖೆಗೆ ಮುಖ್ಯಸ್ಥ ನನ್ನಾಗಿ ಮಾಡಲಾಯಿತು.  ಈ ವರದಿಯೊಳ ಗಿರುವ ಹಲವು ಲೋಪಗಳು, ಪೂರ್ವಗ್ರಹಗಳು, ಬಿಜೆಪಿ ಪ್ರೇರಿತ ಆರೋಪಗಳು ಇವೆಲ್ಲ ಅದರ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿವೆ.ಇಂದು ಆ ಕಾರಣವನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ಸರಕಾರ ವರದಿಯನ್ನು ತಿರಸ್ಕರಿಸು ವುದಕ್ಕೆ ಮುಂದಾಗಿದೆ. ಆದರೆ ಕಾಂಗ್ರೆಸ್ ಸರಕಾರ ಒಂದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಬಿಜೆಪಿ ಸರಕಾರ ಬಹು ದೊಡ್ಡ ಹಗರಣವೊಂದರ ತನಿಖೆಗೆ ಒಂದು ಪೀಠಿಕೆಯನ್ನಾದರೂ ಹಾಕಿತು. ಅವರ ವರದಿಯನ್ನು ತಿರಸ್ಕರಿಸಿ ಕಾಂಗ್ರೆಸ್ ಹೆಗಲು ಕೊಡವಿಕೊಂಡರೆ, ಅದು ಈ ನಾಡಿನ ಬಡ ಮುಸ್ಲಿಮರಿಗೆ ಮಾಡುವ ದೊಡ್ಡ ಅನ್ಯಾಯವಾದೀತು.ಮೊದಲು ನಾಡಿನಾದ್ಯಂತವಿರುವ ವಕ್ಫ್ ಆಸ್ತಿಯ ಸರ್ವೇ ಕಾರ್ಯವನ್ನು ಹಮ್ಮಿಕೊಳ್ಳಬೇಕು. ಅದಾದ ಬೆನ್ನಿಗೆ, ಯಾರ‍್ಯಾರಿಂದ ಎಷ್ಟೆಷ್ಟು ಎಕರೆ ವಕ್ಫ್ ಆಸ್ತಿ ಅತಿಕ್ರಮಣವಾಗಿದೆ ಎನ್ನುವ ವರದಿ ಸಿದ್ಧವಾಗಬೇಕು. ಅದನ್ನು  ಸರಿಯಾದ ರೀತಿಯಲ್ಲಿ ಅನುಷ್ಠಾನಕ್ಕೆ ತರಬೇಕು. ಇದೆಲ್ಲ ಕಾಂಗ್ರೆಸ್‌ನ ಹೊಣೆ.ಮುಖ್ಯವಾಗಿ, ಅಲ್ಪಸಂಖ್ಯಾತರ ಬಗ್ಗೆ ಒಲವುಳ್ಳ ಸಿದ್ದರಾಮಯ್ಯನವರ ಹೊಣೆ. ಈ ವರದಿ ಬರಲೇ ಬೇಕಾಗಿದೆ. ಒತ್ತುವರಿಯಾಗಿರುವ, ಅಕ್ರಮವಾಗಿ ನರಿ ನಾಯಿಗಳ ಪಾಲಾಗಿರುವ ವಕ್ಫ್ ಆಸ್ತಿ ಮತ್ತೆ ಅಲ್ಲಾಹನ ಹೆಸರಿನಲ್ಲಿ ಬಡವರಿಗೆ ಸೇರಬೇಕು.ಬಡ ಮುಸ್ಲಿಮರ ಅಭಿವೃದ್ದಿಗೆ ಯಾವುದೇ ಪಕ್ಷದ ಭಿಕ್ಷೆ ಬೇಕಾಗಿಲ್ಲ. ಅವರದೇ ಆಸ್ತಿ, ಸಂಪತ್ತನ್ನು ಅವರಿಗೆ ಮರಳಿಸಿದರೂ ಸಾಕು. ಈ ಮೂಲಕ ಈ ದೇಶದ ಶೇ. ೫೦ರಷ್ಟು ಬಡ ಮುಸ್ಲಿಮರಿಗೆ ಶಾಲೆ, ವಸತಿ, ಆರೋಗ್ಯ ಇತ್ಯಾದಿಗಳನ್ನು ಒದಗಿಸಬಹುದು. ವೇದಿಕೆ ಏರಿದಾಕ್ಷಣ ಸಾಚಾರ್ ವರದಿಯ ಪ್ರತಿಯನ್ನು ಹಿಡಿದು ಅರಚಾಡುವ ಕೂಗುವ ರಾಜಕಾರಣಿಗಳು-ಅದರಲ್ಲೂ ಮುಸ್ಲಿಮ್ ನಾಯಕರು -ಬಡ ಮುಸ್ಲಿಮರ ಹಕ್ಕನ್ನು, ಅಕ್ರಮಿಗಳಿಂದ ಕಿತ್ತು ಬಡವರಿಗೆ ತಲುಪಿಸುವ ಕೆಲಸದಲ್ಲಿ ಮುಂಚೂಣಿಯನ್ನು ವಹಿಸಬೇಕು. ವಕ್ಫ್ ಆಸ್ತಿಯೆಂದರೆ ಅಲ್ಲಾಹನ ಹೆಸರಲ್ಲಿ ದಾನ ಮಾಡಲಾದ ಆಸ್ತಿ. ಆ ಆಸ್ತಿಯನ್ನು ಕಾನೂನು, ಕಾಯ್ದೆ ಇತ್ಯಾದಿಗಳ ಹೆಸರಿನಲ್ಲಿ ಮೋಸದಿಂದ ಲಪಟಾಯಿಸಿ ಅನುಭೋಗಿಸುವುದೆಂದರೆ, ಅಲ್ಲಾಹನಿಗೆ ದ್ರೋಹ ಬಗೆದಂತೆ.

ಕುರ್‌ಆನ್‌ನಲ್ಲಿ ಹೀಗೊಂದು ಕ್ರಾಂತಿಕಾರಿ ಸವಾಲಿದೆ ‘ನಿಮಗೇನಾಗಿದೆ?........ ವೊರೆ ಇಡುತ್ತಿರುವ ಮರ್ದಿತ ಪುರುಷರು, ಸ್ತ್ರೀಯರು ಮತ್ತು ಮಕ್ಕಳ ಪರವಾಗಿ ನೀವೇಕೆ ಹೋರಾಡುವುದಿಲ್ಲ?” ಈ ಪ್ರಶ್ನೆಗೆ ಪ್ರತಿಕ್ರಿಯಿಸುವ ಸಮಯ ಬಂದಿದೆ. ದುರ್ಬಲ ವರ್ಗದ ಜನರ ಸಂಪತ್ತನು ಮೋಸದಿಂದ ತಮದಾಗಿಸಿಕೊಂಡು ಅನುಭೋಗಿಸುತ್ತಿರುವ ಶ್ರೀಮಂತರ ವಿರುದ್ಧ ಜನಚಳವಳಿ ನಡೆಯಬೇಕಾಗಿದೆ. ಬಡವರ ಸಂಪತ್ತು ಮತ್ತೆ ಬಡವರ ಕೈ ಸೇರಬೇಕಾಗಿದೆ. ಈ ಹೋರಾಟಕ್ಕಾಗಿ ಶೋಷಿತ ಮುಸ್ಲಿಮ್ ಸಮುದಾಯವು ನಾಯಕನೊಬ್ಬನ ನಿರೀಕ್ಷೆಯಲ್ಲಿದೆ.

Tuesday, June 11, 2013

ಒಂದಿಷ್ಟು ಸಾಲುಗಳು

1
ರಾತ್ರಿ ಕನಸಲ್ಲಿ
ಬಂದವಳು
ಇಲ್ಲೇ ಕೋಣೆಯಲ್ಲೆಲ್ಲೋ
ಬಚ್ಚಿಟ್ಟು ಕೊಂಡಂತೆ

ಅವಳ ಕಾಲ ಗೆಜ್ಜೆಯ
ಉದುರಿದ ಮಣಿ
ಇಲ್ಲೇ ಎಲ್ಲೋ ಅನುರಣಿಸಿದಂತೆ

ರಾತ್ರಿ ಕಂಡದ್ದು
ಕನಸೇ ಆಗಿರಬೇಕು ಏಕೆ?
 

2
ನಾನು ಬರೆಯುತ್ತೇನೆ
ನೀವು ಒಪ್ಪಬೇಕು ಎಂದಲ್ಲ...
ನಾನು ಬರೆಯುತ್ತೇನೆ
ನೀವು ತಿರಸ್ಕರಿಸಬೇಕೆಂದೂ ಅಲ್ಲ...
ಶಾಂತ ಸಾಗರದಂತೆ ನಿದ್ರಿಸುವ
ನಿಮ್ಮ ಎದೆಗಡಲಲ್ಲಿ
ನಾನು ಬೀಳಿಸುವ ಸಣ್ಣದೊಂದು ಉಂಗುರ
ಮುಂದೊಂದು ದಿನ
ಮೀನ ಗರ್ಭ ಹರಿದು
ಶಕುಂತಲೆಯ ಕತೆಯಾಗಿ
ಹೊರಬರಬಹುದೆನ್ನುವ
ಸಣ್ಣ ಆಸೆಯಷ್ಟೇ ನನ್ನದು

3
ಬಾಣ ಎಸೆದದ್ದು
ಶತ್ರುವಿನ ಕಡೆಗೆ
ಆದರೆ ನನ್ನ ದುರ್ವಿಧಿಯೇ
ಅದು ಇರಿಯುತ್ತಾ
ಹೋದದ್ದು ನನ್ನ
ಮಿತ್ರರ ಎದೆಯನ್ನೇ....

4

ಒಂದು ಪುಸ್ತಕ
ಬೇಕಾಗಿತ್ತು..
ಇಡೀ ದಿನ ಹುಡುಕುತ್ತಿದ್ದೆ

ಕೊನೆಗೂ ಸಿಕ್ಕಿತು
ಆದರೆ ಹುಡುಕುತ್ತಿದ್ದ  ಪುಸ್ತಕವಲ್ಲ

ಕಳೆದವಾರ ಹುಡುಕಿ
ಸುಸ್ತಾಗಿ ಕೈ ಬಿಟ್ಟ
ಪುಸ್ತಕ ಇಂದು ನನ್ನೆದುರು
ಹಲ್ಲು ಕಿರಿಯುತ್ತಿತ್ತು

ಬಹುಷಃ ನಮಗೇನು
ಬೇಕು ಎನ್ನುದನ್ನು
ಕಾಲನ ಕೈಯಲ್ಲಿ ಕೊಟ್ಟ ವಿಧಿ
ಪುಸ್ತಕದ ರೂಪದಲ್ಲೇ ನನ್ನ ಅಣಕಿಸಿದಂತೆ

ಬೇಡವೆಂದರೂ ಅದನ್ನು
ಕೈಗೆತ್ತಿ ಸುಮ್ಮಗೆ ಬಿಡಿಸಿ
ನಕ್ಕು ಕಪಾಟಿನೊಳಗಿಡುತ್ತೇನೆ

Saturday, June 8, 2013

ನಾಝಿ ಸಾಮ್ರಾಜ್ಯವಾದದ ವಿರುದ್ಧ ಹೋರಾಡಿ, ಮಡಿದ ಟಿಪ್ಪು ಸುಲ್ತಾನ್ ಕುಡಿ

ಟಿಪ್ಪು ವೀರ ಮರಣದ  ಬಳಿಕ ಅವರ ವಂಶಸ್ಥರು ಎಲ್ಲಿ ಹೋದರು? ಹಲವರು ಬೀದಿ ಪಾಲಾದರು ನಿಜ. ಆದರೆ ಟಿಪ್ಪುವಿನ ಬದುಕು ಅಲ್ಲಿಗೆ ಮುಗಿಯಲಿಲ್ಲ. ವಿಧಿ ವಿಪರ್ಯಾಸವೆಂದರೆ  ಇದೆ ಟಿಪ್ಪುವಿನ ಒಂದು ಹೆಣ್ಣು ಕುಡಿ ಬ್ರಿಟಿಷರ ಪರವಾಗಿ ಜರ್ಮನ್ ನಾಝಿಗಳ ವಿರುದ್ಧ ಹೋರಾಡಿ ಹುತಾತ್ಮವಾಯಿತು. ಅದೇ ತಾತನ ಧೀರೋದ್ಧಾತತೆಯನ್ನು ಮೆರೆದು ಬದುಕಿ, ಮರಣವಪ್ಪಿದ ಹೆಣ್ಣು ಮಗಳ ಹೆಸರು ನೂರ್ ಇನಾಯತ್. ಈಕೆ ಟಿಪ್ಪುವಿನ ಮೂರನೇ ತಲೆಮಾರಿನ ಕುಡಿ. 

'ಮೈಸೂರಿನ ಹುಲಿ' ಎಂದೇ ವಿಶ್ವವಿಖ್ಯಾತನಾಗಿರುವ ಸುಲ್ತಾನ್ ಫತೇ ಅಲಿ ಟಿಪ್ಪು, ಬ್ರಿಟಿಶರ ವಿರುದ್ಧ ದಿಟ್ಟ ಹೋರಾಟ ನಡೆಸಿ ಪ್ರಾಣಾರ್ಪಣೆ ಮಾಡಿದ ಮಹಾನ್ ದೇಶಭಕ್ತ. ಶ್ರದ್ಧಾವಂತ ಮುಸ್ಲಿಮನಾಗಿದ್ದ ಟಿಪ್ಪು, ತನ್ನ ಜೀವಿತದುದ್ದಕ್ಕೂ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿದಿದ್ದ.ಟಿಪ್ಪು ಸುಲ್ತಾನ್‌ನ ವಂಶಸ್ಥ ಇನಾಯತ್ ಖಾನ್‌ಗೆ ಜನಿಸಿದ ನೂರ್ ಎಂಬ ಹೆಣ್ಣು ಮಗಳೊಬ್ಬಳ ಬಗ್ಗೆ ನಾವು ತಿಳಿದಿರೂದು ತೀರ ಕಡಿಮೆ. ಲಂಡನ್ ಈಕೆಗೆ ಚಿರ ಋಣಿಯಾಗಿ ಪ್ರತಿವರ್ಷ ನೆನೆಯುತ್ತಿದೆ.  ಎರಡನೆ ವಿಶ್ವಮಹಾಯುದ್ಧದ ಸಂದರ್ಭದಲ್ಲಿ ಬೇಹುಗಾರ್ತಿಯಾಗಿ ದುಡಿದು ಬಲಿದಾನ ಮಾಡಿದ ಈಕೆಯ ಶೌರ್ಯ,  ದುರಂತದ  ಕತೆ ಟಿಪ್ಪುವಿನ ಕತೆಯಂತೆಯೇ ಮೈ ನವಿರೇಳಿಸುವಂಥಹದ್ದು.


 ಇನಾಯತ್ ಖಾನ್‌ರ ತಾಯಿ ಟಿಪ್ಪುಸುಲ್ತಾನ್ ವಂಶದವಳು. ಸೂಫಿ ಸಂಪ್ರದಾಯದ ಬಗ್ಗೆ ಅಪಾರ ಶ್ರದ್ಧೆಯನ್ನು ಹೊಂದಿದ್ದ ಇನಾಯತ್ ಖಾನ್ 1910ರಲ್ಲಿ ಭಾರತವನ್ನು ತೊರೆದು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಸಂಚರಿಸುತ್ತಾ, ಸೂಫಿ ತತ್ವಗಳ ಪ್ರಸಾರ ಮಾಡತೊಡಗಿದರು.ಅಮೆರಿಕದಲ್ಲಿ ತನ್ನ ಸುದೀರ್ಘ ವಾಸ್ತವ್ಯದ ಸಂದರ್ಭದಲ್ಲಿ ಇನಾಯತ್ ನ್ಯೂಮೆಕ್ಸಿಕೊದ ಯುವತಿ ಓರಾ ರೇ ಬೇಕರ್ ಎಂಬವರನ್ನು ವಿವಾಹವಾದರು. ಮದುವೆಯ ನಂತರ ಓರಾ ತನ್ನ ಹೆಸರನ್ನು ಪಿರಾನಿ ಅಮೀನಾ ಬೇಗಂ ಎಂಬುದಾಗಿ ಬದಲಾಯಿಸಿಕೊಂಡರು.ಇನಾಯತ್ ಖಾನ್ ಹಾಗೂ ಪಿರಾನಿ ಅಮೀನಾ ಬೇಗಂ ದಂಪತಿಗೆ ಎರಡು ಗಂಡು ಹಾಗೂ ಎರಡು ಹೆಣ್ಣು ಮಕ್ಕಳಿದ್ದರು. ಇವರಲ್ಲಿ ನೂರುನ್ನೀಸಾ ಯಾನೆ ನೂರ್ ಇನಾಯತ್ ಖಾನ್ ಎಲ್ಲರಿಗಿಂತಲೂ ದೊಡ್ಡವಳು.


1913ರಲ್ಲಿ ಇನಾಯತ್ ಖಾನ್ ರಶ್ಯದ ತ್ಸಾರ್ ದೊರೆ ಎರಡನೆ ನಿಕೋಲಾಸ್‌ನ ಅತಿಥಿಯಾಗಿ ಕ್ರೆಮ್ಲಿನ್‌ನಲ್ಲಿ ನೆಲೆಸಿದ್ದ ಸಂದರ್ಭದಲ್ಲಿ ಇನಾಯತ್ ಜನಿಸಿದ್ದಳು. ಅಂತರ್‌ಕಲಹ ಹಾಗೂ ಯುದ್ಧದ ಭೀತಿಯನ್ನು ಎದುರಿಸುತ್ತಿದ್ದ ನಿಕೋಲಾಸ್ ದೊರೆಯು ಇನಾಯತ್‌ರ ಧಾರ್ಮಿಕ ಮಾರ್ಗದರ್ಶನವನ್ನು ಕೋರಿದ್ದ.

1914ರಲ್ಲಿ ಮೊದಲ ಮಹಾಯುದ್ಧವು ಭುಗಿಲೆದ್ದಾಗ, ಇನಾಯತ್ ಖಾನ್ ಕುಟುಂಬವು ರಶ್ಯವನ್ನು ತೊರೆದು ಲಂಡನ್‌ಗೆ ತೆರಳಿತು. 1920ರಲ್ಲಿ ಫ್ರಾನ್ಸ್‌ನಲ್ಲಿ ಆಗಮಿಸಿದ ಇನಾಯತ್ ಕುಟುಂಬವು ಅಲ್ಲಿನ ಸೂಫಿ ಚಳವಳಿಯ ಬೆಂಬಲಿಗರೊಬ್ಬರು ಕೊಡುಗೆಯಾಗಿ ನೀಡಿದ್ದ ಮನೆಯಲ್ಲಿ ವಾಸವಾಗಿತ್ತು. 1927ರಲ್ಲಿ ತನ್ನ ತಂದೆಯ ಅಕಾಲಿಕ ನಿಧನದ ಬಳಿಕ ನೂರ್, ಶೋಕತಪ್ತ ಕುಟುಂಬಕ್ಕೆ ಆಸರೆಯಾಗುವ ಹೊಣೆ ಹೊರಬೇಕಾಯಿತು. ತನ್ನ ಶೋಕತಪ್ತ ತಾಯಿ ಹಾಗೂ ಒಡಹುಟ್ಟಿದವರನ್ನು ಸಲಹುವ ಜವಾಬ್ದಾರಿ ಆ ಹದಿಹರೆಯದ ಬಾಲಕಿಯ ಹೆಗಲೇರಿತು.
ಫ್ರಾನ್ಸ್‌ನ ಸೊರ್ಬೊನ್‌ನಲ್ಲಿ ಶಿಶು ಮನಶಾಸ್ತ್ರವನ್ನು ಅಧ್ಯಯನ ಮಾಡಿದ ನೂರ್‌ಗೆ ಸಂಗೀತದಲ್ಲಿಯೂ ಅಪಾರ ಅಸಕ್ತಿಯಿತ್ತು. ಆಕೆ ಪ್ರಸಿದ್ಧ ಪಾಶ್ಚಾತ್ಯ ಸಂಗೀತಗಾರ್ತಿ ನಾಡಿಯಾ ಬೌಲೆಂಜರ್‌ರಿಂದ ಪ್ಯಾರಿಸ್‌ನಲ್ಲಿ ಪಿಯಾನೊ ಹಾಗೂ ಹಾರ್ಪ್ ವಾದನವನ್ನು ಕಲಿತರು.ಈ ಸಮಯದಲ್ಲಿ ನೂರ್ ಮಕ್ಕಳ ಕತೆಗಳನ್ನು ಹಾಗೂ ಕವನಗಳನ್ನು ಬರೆಯುವ ಕಾಯಕದಲ್ಲಿ ತೊಡಗಿದರು.ಫ್ರಾನ್ಸ್‌ನ ಮಕ್ಕಳ ಪತ್ರಿಕೆಗಳಲ್ಲಿ ಆಕೆಯ ಕಥೆ, ಕವನಗಳು ಆಗಾಗ್ಗೆ ಪ್ರಕಟವಾಗುತ್ತಿದ್ದವು.
ಫ್ರೆಂಚ್ ರೇಡಿಯೋದಲ್ಲೂ ಆಕೆ ಕಾರ್ಯಕ್ರಮಗಳನ್ನು ನೀಡುತ್ತಿದ್ದರು.1939ರಲ್ಲಿ ಆಕೆ ಬುದ್ಧನ ಜಾತಕ ಕಥೆಗಳನ್ನು ಆಧರಿಸಿ ರಚಿಸಿದ ‘20 ಜಾತಕ ಟೇಲ್ಸ್’ ಕೃತಿಯು ಲಂಡನ್‌ನಲ್ಲಿ ಪ್ರಕಟವಾಯಿತು.

ಎರಡನೆ ವಿಶ್ವಮಹಾಯುದ್ಧದ ಸ್ಫೋಟಗೊಂಡಾಗ 1940ರಲ್ಲಿ ಫ್ರಾನ್ಸ್ ದೇಶವನ್ನು ಹಿಟ್ಲರನ ನಾಜಿ ಪಡೆಗಳು ಆಕ್ರಮಿಸಿದವು.ಆಗ ನೂರ್ ತನ್ನ ಕುಟುಂಬದೊಂದಿಗೆ ಲಂಡನ್‌ಗೆ ಪಲಾಯನ ಮಾಡಿದಳು. ಶಾಂತಿಯನ್ನು ಪ್ರತಿಪಾದಿಸುವ ತನ್ನ ತಂದೆಯ ಬೋಧನೆಗಳಿಂದ ನೂರ್ ಪ್ರಭಾವಿತಳಾಗಿದ್ದರೂ, ನಾಜಿ ಸೇನೆಯ ದಬ್ಬಾಳಿಕೆಯ ವಿರುದ್ಧ ಹೋರಾಡಲು ಆಕೆ ದೃಢ ಸಂಕಲ್ಪ ಮಾಡಿದಳು. ಆಕೆಯ ಸಹೋದರ ವಿಲಾಯತ್ ಇನಾಯತ್ ಖಾನ್ ಕೂಡಾ ಆಕೆಯೊಂದಿಗೆ ಕೈಜೋಡಿಸಿದ.

1940ರ ನವೆಂಬರ್ 19ರಂದು ಆಕೆ ಬ್ರಿಟಿಶ್ ಸೇನೆಯ ಮಹಿಳಾ ಆಕ್ಸಿಲರಿ ಏರ್‌ಪೋರ್ಸ್ (ಡಬ್ಲುಎಎಎಫ್)ಗೆ ಸೇರ್ಪಡೆಗೊಂಡಳು.ದ್ವಿತೀಯ ದರ್ಜೆಯ ವೈಮಾನಿಕ ಯೋಧೆಯಾಗಿ ನೇಮಕಗೊಂಡ ಆಕೆಯನ್ನು ವಯರ್‌ಲೆಸ್ ಆಪರೇಟರ್ ತರಬೇತಿಗಾಗಿ ಕಳುಹಿಸಲಾಯಿತು. ತರಬೇತಿಯ ಬಳಿಕ ನೂರ್‌ಳನ್ನು ಬ್ರಿಟನ್‌ನ ವಿಶೇಷ ಕಾರ್ಯಾಚರಣೆಗಳಿಗಾಗಿನ ವಿಭಾಗದಲ್ಲಿ (ಎಸ್‌ಓಇ) ನೇಮಕಗೊಳಿಸಲಾಯಿತು.

1943ರಲ್ಲಿ ಆಕೆಯನ್ನು ವಾಯುಪಡೆ ಸಚಿವಾಲಯದ,ವೈಮಾನಿಕ ಬೇಹುಗಾರಿಕೆ ನಿರ್ದೇಶನಾಲಯದಲ್ಲಿ ನಿಯೋಜನೆ ಮಾಡಲಾಯಿತು. ತರಬೇತಿಯ ಅವಧಿಯಲ್ಲಿ ಆಕೆ ತನ್ನ ಹೆಸರನ್ನು ನೂರಾ ಬೇಕರ್ ಎಂದು ಬದಲಾಯಿಸಿಕೊಂಡಳು. ಫ್ರೆಂಚ್ ಭಾಷೆಯಲ್ಲಿ ಪಾಂಡಿತ್ಯ ಹಾಗೂ ವಯರ್‌ಲೆಸ್ ಕಾರ್ಯಾಚರಣೆಯಲ್ಲಿ ಆಕೆ ಹೊಂದಿರುವ ದಕ್ಷತೆಯು ನೂರ್‌ಗೆ ನಾಝಿ ಆಕ್ರಮಿತ ಫ್ರಾನ್ಸ್‌ನಲ್ಲಿ ಬ್ರಿಟಿಶ್ ಬೇಹುಗಾರ್ತಿಯಾಗುವ ಅವಕಾಶವನ್ನು ದೊರಕಿಸಿಕೊಟ್ಟಿತು.


1943ರ ಜೂನ್ ತಿಂಗಳ 16-17ರ ಮಧ್ಯರಾತ್ರಿಯಂದು ನೂರ್ ನಾಜಿಪಡೆಗಳಿಂದ ಆಕ್ರಮಿತವಾದ ಫ್ರಾನ್ಸ್ ದೇಶದೊಳಗೆ ನುಸುಳಿದಳು. ಈಗ ಆಕೆ ತನ್ನ ಹೆಸರನ್ನು ಜೀಯಾನ್ ಮೇರಿ ರೆಜಿನರ್ ಎಂದು ಬದಲಾಯಿಸಿಕೊಂಡಳು.ಇತರ ಎಸ್‌ಓಇ ಮಹಿಳಾ ಬೇಹುಗಾರ್ತಿಯರ ಜೊತೆ ನೂರ್, ಫ್ರಾನ್ಸಿಸ್ ಸ್ಯುಟಿಲ್ ಎಂಬ ವೈದ್ಯನ ತಂಡವನ್ನು ಸೇರಿಕೊಂಡಳು. ಫ್ರಾನ್ಸ್‌ನಲ್ಲಿ ನಾಜಿಗಳ ಚಲನವಲನಗಳ ಬಗ್ಗೆ ಮಾಹಿತಿಯನ್ನು ರವಾನಿಸುವುದೇ ಆಕೆಯ ಕರ್ತವ್ಯವಾಗಿತ್ತು.

ಆದರೆ ಒಂದೂವರೆ ತಿಂಗಳುಗಳಲ್ಲಿ ನೂರ್‌ಳನ್ನು ಹೊರತುಪಡಿಸಿ, ಉಳಿದ ಎಲ್ಲಾ ರೇಡಿಯೋ ಅಪರೇಟರ್‌ಗಳ ಜಾಲವನ್ನು ನಾಜಿ ಪಡೆಗಳು ಬಂಧಿಸಿದವು. ಆದರೆ ನಾಜಿ ಸೇನೆಯಿಂದ ತಪ್ಪಿಸಿಕೊಂಡ ನೂರ್, ಫ್ರಾನ್ಸ್‌ನಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಂಚರಿಸುತ್ತಾ ಬೇಹುಗಾರಿಕಾ ಮಾಹಿತಿಗಳನ್ನು ರವಾನಿಸತೊಡಗಿದಳು. ಬ್ರಿಟನ್‌ಗೆ ವಾಪಸಾಗಬಹುದು ಎಂಬ ತನ್ನ ಇಲಾಖೆಯ ಸಲಹೆಯನ್ನು ತಿರಸ್ಕರಿಸಿ, ಆಕೆ ನಾಜಿ ಪಡೆಗಳ ಚಲನವಲನಗಳ ಬಗ್ಗೆ ಮಾಹಿತಿಯನ್ನು ಲಂಡನ್‌ಗೆ ಕಳುಹಿಸುತ್ತಲೇ ಇದ್ದಳು.
ಆದರೆ ನಾಜಿಗಳ ಪರ ಡಬ್ಬಲ್ ಏಜೆಂಟ್ ಆಗಿ ಕೆಲಸ ಮಾಡಿದ್ದ ಫ್ರೆಂಚ್ ವಾಯುಪಡೆಯ ಪೈಲಟ್‌ನ ವಿಶ್ವಾಸದ್ರೋಹದಿಂದಾಗಿ ಇನಾಯತ್ ಖಾನ್ ಜರ್ಮನ್ ಪಡೆಗಳಿಗೆ ಸಿಕ್ಕಿಬೀಳಬೇಕಾಯಿತು.1943ರ ಅಕ್ಟೋಬರ್ 13ರಂದು ಇನಾಯತ್‌ ಖಾನ್‌ಗಳನ್ನು ನಾಜಿ ಸೈನಿಕರು ಬಂಧಿಸಿದರು ಹಾಗೂ ಪ್ಯಾರಿಸ್‌ನಲ್ಲಿ ನಾಝಿಗಳ ಭದ್ರತಾ ಸೇವೆಗಳ ಮುಖ್ಯ ಕಾರ್ಯಾಲಯ(ಎಸ್‌ಡಿ)ದಲ್ಲಿ ಬಂಧನದಲ್ಲಿಡಲಾಯಿತು.

ಬಂಧಿತ ನೂರ್‌ಳನ್ನು ಅತ್ಯಂತ ಅಪಾಯಕಾರಿ ಕೈದಿಗಳ ಸಾಲಿಗೆ ಸೇರಿಸಲಾಯಿತು.ವಿಚಾರಣೆಯ ಸಂದರ್ಭದಲ್ಲಿ ನೂರ್‌ಗೆ ಅತ್ಯಂತ ಅಮಾನುಷವಾದ ಚಿತ್ರಹಿಂಸೆಯನ್ನು ನೀಡಿದರೂ ಆಕೆ ಒಂದೇ ಒಂದು ಮಾಹಿತಿಯನ್ನು ಕೂಡಾ ಬಾಯಿ ಬಿಡಲಿಲ್ಲವೆಂದು, ನಾಜಿ ಸೇನೆಯ ಗೂಢಚರ್ಯೆ ವಿಭಾಗ ಗೆಸ್ಟಪೋದ ಪ್ಯಾರಿಸ್ ಘಟಕದ ಮಾಜಿ ಮುಖ್ಯಸ್ಥ ಹ್ಯಾನ್ಸ್ ಎರಡನೆ ಮಹಾಯುದ್ಧದ ಬಳಿಕ ಬಹಿರಂಗಪಡಿಸಿದ್ದನು.1943ರ ನವೆಂಬರ್ 25ರಂದು ಇನಾಯತ್, ಇನ್ನಿಬ್ಬ ಎಸ್‌ಓಇ ಏಜೆಂಟರ ಜೊತೆಗೆ ಬಂಧನದಿಂದ ತಪ್ಪಿಸಿಕೊಂಡಳು. ಆದರೆ ದುರದೃಷ್ಟವಶಾತ್ ಅವರೆಲ್ಲಾ ಕೆಲವೇ ತಾಸುಗಳಲ್ಲಿ ಸಿಕ್ಕಿಬಿದ್ದರು.

ತರುವಾಯ, ನೂರ್‌ಳನ್ನು 1943ರ ನವೆಂಬರ್ 27ರಂದು ಜರ್ಮನಿಗೆ ಕೊಂಡೊಯ್ಯಲಾಯಿತು. ಅಲ್ಲಿ ಫೊರ್‌ಜೆಮ್ ಎಂಬಲ್ಲಿ ಆಕೆಯನ್ನು ಏಕಾಂತ ಬಂಧನದಲ್ಲಿ ಇಡಲಾಯಿತು.ಆಕೆಗೆ ಹೊರಜಗತ್ತಿನ ಯಾವುದೇ ಸಂಪರ್ಕವನ್ನೂ ನಿರಾಕರಿಸಲಾಯಿತು. ದಿನದ ಹೆಚ್ಚಿನ ಸಮಯದಲ್ಲಿ ಆಕೆಯ ಕೈಕಾಲುಗಳನ್ನು ಸರಪಳಿಯಲ್ಲಿ ಕಟ್ಟಿಹಾಕಲಾಗುತ್ತಿತ್ತು. ಇಲ್ಲಿಯೂ ಎಂತಹ ಚಿತ್ರಹಿಂಸೆಗೂ ಬಗ್ಗದ ನೂರ್ ತನ್ನ ಹಾಗೂ ತನ್ನ ಸಹಚರರ ಕಾರ್ಯಾಚರಣೆಗಳ ಬಗ್ಗೆ ಯಾವುದೇ ಸುಳಿವನ್ನು ನೀಡಲೂ ನಿರಾಕರಿಸಿದಳು.

1944ರ ನೂರ್ ಹಾಗೂ ಇತರ ಮೂವರು ಎಸ್‌ಓಇ ಏಜೆಂಟರಾದ ಯೊಲಾಂಡ್ ಬೀಕ್‌ಮ್ಯಾನ್, ಎಲಿಯಾನ್ ಪ್ಲೂಮ್ಯಾನ್ ಹಾಗೂ ಮೇಡಲಿನ್‌ರನ್ನು ಡಕಾಯು ಯಾತನಾ ಶಿಬಿರಕ್ಕೆ ಕಳುಹಿಸಲಾಯಿತು.1944ರ ಸೆಪ್ಟಂಬರ್ 13ರಂದು ಕೈಕೋಳಗಳಿಂದ ಬಂಧಿಸಲಾದ ಈ ನಾಲ್ವರು ಮಹಿಳೆಯರನ್ನು ಮರಣದಂಡನೆ ವಿಧಿಸಲಾಯಿತು.ನಾಲ್ವರನ್ನೂ ಮೈದಾನದಲ್ಲಿ ಮೊಣಕಾಲೂರುವಂತೆ ಮಾಡಿ, ಅವರಿಗೆ ಗುಂಡಿಕ್ಕಲಾಯಿತು.ಪ್ರತ್ಯಕ್ಷದರ್ಶಿಗಳು ಹೇಳುವಂತೆ ಸಾಲಾಗಿ ನಿಂತ ಟ್ರೂಪರ್‌ಗಳು ಒಬ್ಬರಾದ ಮೇಲೆ ಒಬ್ಬರಂತೆ ಯೊಲಾಂಡ್ ಬೀಕ್‌ಮ್ಯಾನ್, ಎಲಿಯಾನ್ ಪ್ಲೂಮ್ಯಾನ್ ಹಾಗೂ ಮೇಡಲಿನ್‌ರನ್ನು ಗುಂಡಿಕ್ಕಿ ಕೊಂದರು.

ನೂರ್‌ಗೆ ಗುಂಡಿಕ್ಕುವ ಸರದಿ ಬಂದಾಗ, ಹಂತಕ ಪಡೆಯ ನೇತೃತ್ವ ವಹಿಸಿದ್ದ ಫ್ರೆಡ್ರಿಕ್ ವಿಲ್‌ಹೆಮ್ ರ್ಯೂಪರ್ಟ್ ಗುಂಡಿಕ್ಕುವುದನ್ನು ನಿಲ್ಲಿಸುವಂತೆ ಆದೇಶಿಸಿದ. ಆತ ತನ್ನ ಬಂದೂಕಿನ ಹಿಡಿಯಿಂದ ನೂರ್‌ಳ ತಲೆಗೆ ಬಡಿದ. ಆಕೆಯ ತಲೆಯಿಂದ ರಕ್ತದ ಕೋಡಿಯೇ ಹರಿಯಿತು. ಆದರೂ ನೂರ್ ಎದ್ದೇಳಲು ಯತ್ನಿಸಿದಳು. ಆಗ ವಿಲ್‌ಹೆಮ್, ನೂರ್‌ಳ ತಲೆಯ ಹಿಂಭಾಗಕ್ಕೆ ಗುಂಡಿಕ್ಕಿದ. ಅಲ್ಲಿಗೆ ನೂರ್‌ಳ ಪ್ರಾಣಪಕ್ಷಿ ಹಾರಿ ಹೋಯಿತು.‘ಲಿಬರ್ಟೆ’ (ಫ್ರೆಂಚ್‌ನಲ್ಲಿ ಸ್ವಾತಂತ್ರ ಎಂದರ್ಥ) ಎಂದು ಆಕೆ ಸಾವಿಗೆ ಮುನ್ನ ಹೇಳಿದ ಕೊನೆಯ ಪದವಾಗಿತ್ತು.

ರಾಜವಂಶಸ್ಥೆ, ಗೂಢಚಾರಿಣಿ, ಯೋಧೆಯಾಗಿ  ನೂರ್ ಇನಾಯತ್ ಖಾನ್‌ರ ಬದುಕು 30ರ ಸಣ್ಣ ವಯಸ್ಸಿನಲ್ಲಿಯೇ ಬಾಡಿಹೋಯಿತು.ಟಿಪ್ಪು ಸುಲ್ತಾನ್ ಬ್ರಿಟಿಶ್ ಸಾಮ್ರಾಜ್ಯದ ವಿರುದ್ಧ ಹೋರಾಡಿದರೆ, ಇನಾಯತ್ ಖಾನ್ ನಾಝಿ ಸಾಮ್ರಾಜ್ಯವಾದದ ವಿರುದ್ಧ ಹೋರಾಡಿ ಮಡಿದಳು. ವೀರ ವನಿತೆ ನೂರ್ ಇನಾಯತ್ ಖಾನ್‌ಗೆ ಮರಣೋತ್ತರ ಬ್ರಿಟನ್, ಶೌರ್ಯ ಪುರಸ್ಕಾರ ಜಾರ್ಜ್ ಕ್ರಾಸ್ ಹಾಗೂ ಚಿನ್ನದ ನಕ್ಷತ್ರ ಪದಕವನ್ನು ನೀಡಿ,  ಗೌರವವನ್ನು ಅರ್ಪಿಸಿದೆ. ನೂರ್ ಇನಾಯತ್‌ ಖಾನ್‌ಳ ಬದುಕು ರೋಚಕವಷ್ಟೇ ಅಲ್ಲ, ಆಕೆಯ ಶೌರ್ಯ, ಕರ್ತವ್ಯ ನಿಷ್ಠೆಗಳು ಇಂದಿನ ಯುವಪೀಳಿಗೆಗೆ ಆದರ್ಶಪ್ರಾಯವೂ ಆಗಿವೆ

Friday, June 7, 2013

ಹುಡುಕು

ಒಂದು ಪುಸ್ತಕ 
ಬೇಕಾಗಿತ್ತು 
ಅದೆಷ್ಟೋ ಹೊತ್ತು ಹುಡುಕಿದ ಬಳಿಕ 
ಕಳೆದವಾರ ಇಡೀ  ದಿನ 
ಹುಡುಕಿ ಸಿಗದ ಪುಸ್ತಕ 
ಇಂದು ನನ್ನೆದುರು 
ಹಲ್ಲು ಕಿರಿಯುತ್ತಿತ್ತು 
ಹುಡುಕಿದ್ದು ಕೊನೆಗೂ ಸಿಗಲೇ ಇಲ್ಲ 

ಹುಡುಕುವ ಆಟ 
ಹೀಗೆ ಬಹಳ ಮಜವಾಗಿರುತ್ತದೆ 
ಎಂದೋ ಹುಡುಕಿ ಬೇಸತ್ತು 
ಕೈ ಬಿಟ್ಟದ್ದು ಒಮ್ಮೆಲೇ 
ಉದ್ಭವವಾಗುವ 
ಅನಿರೀಕ್ಷಿತತೆಗಾದರು ಹುಡುಕುತ್ತಿರಬೇಕು 

ಇಂದು ಹುಡುಕಿದ್ದು 
ಸಿಗದಿದ್ದರೇನಂತೆ 
ಬದುಕುತ್ತಿರಬೇಕು 
ಎಂದರೆ 
ಸುಮ್ಮನೆ ಹುಡುಕು

ಬಹುಷಃ ನಮಗೇನು 
ಬೇಕು ಎನ್ನುದನ್ನು 
ಕಾಲನ ಕೈಯಲ್ಲಿ ಕೊಟ್ಟ ವಿಧಿ 
ಪುಸ್ತಕದ ರೂಪದಲ್ಲೇ ನನ್ನ ಅಣಕಿಸಿದಂತೆ 
ಬೇಡವೆಂದರೂ ಅದನ್ನು 
ಕೈಗೆತ್ತಿ ಸುಮ್ಮಗೆ ಬಿಡಿಸಿ 
ನಕ್ಕು ಕಪಾಟಿನೊಳಗಿಡುತ್ತೇನೆ 

ಅಂದ ಹಾಗೆ 
ನಾನೇನು ಹುಡುಕುತ್ತಿದ್ದೆ?



Thursday, June 6, 2013

ಬಣ್ಣದ ಲೋಕದ ಕಪ್ಪು ಗುಲಾಬಿ-ರೋಸಿ

ಕೆ. ಪಿ. ರೋಸಿ.
ಇತ್ತೀಚೆಗೆ ನಾನು ಮಲಯಾಳಂ ಚಿತ್ರ ‘ಸೆಲ್ಯುಲಾಯ್ಡ’ ನೋಡಿದೆ. ಇದನ್ನು ನೋಡುವುದಕ್ಕೆ ಮುಖ್ಯ ಕಾರಣ, ಈ ಚಿತ್ರವನ್ನು ನಿರ್ದೇಶಿಸಿರುವುದು ಮಲಯಾಳಂನ ಖ್ಯಾತ ನಿರ್ದೇಶಕ ಕಮಲ್. ಕಮರ್ಶಿಯಲ್ ಮತ್ತು ಕಲಾತ್ಮಕತೆಯ ನಡುವೆ ಸಮನ್ವಯತೆಯನ್ನು ಸಾಧಿಸಿದ ನಿರ್ದೇಶಕ ಕಮಲ್. ಬದುಕಿನ ತಳಮಟ್ಟದ ಸೂಕ್ಷ್ಮಗಳನ್ನು ಹಿಡಿದಿಡುವ ಶಕ್ತಿ ಕಮಲ್‌ಗಿರುವ ಕಾರಣದಿಂದಲೇ, ನಾನು ಇವರ ಹೆಚ್ಚಿನ ಚಿತ್ರಗಳನ್ನು ನೋಡಿದ್ದೇನೆ. ‘ಸೆಲ್ಯುಲಾಯ್ಡ’ ಚಿತ್ರ ನೋಡುವುದಕ್ಕೆ ಇನ್ನೂ ಒಂದು ಕಾರಣವಿತ್ತು. ಪರೋಕ್ಷವಾಗಿ ಇದೊಂದು ಸಾಕ್ಷ ಚಿತ್ರವೂ ಹೌದು. ಜೊತೆಗೆ ಚಿತ್ರರಂಗವನ್ನೇ ಆಧರಿಸಿದ ಅದರೊಳಗಿನ, ರಾಜಕೀಯ ಮತ್ತು ದುರಂತಗಳ ಕಡೆಗೆ ಬೆಳಕು ಚೆಲ್ಲುವ ಉದ್ದೇಶದಿಂದ ಮಾಡಿದ ಚಿತ್ರ ಇದು.

ಕಮಲ್ ಅವರ ಈ ಚಿತ್ರದ ವಸ್ತು ಮಲಯಾಳಂ ಚಿತ್ರರಂಗದ ಪಿತಾಮಹ ಜೆ. ಸಿ. ಡೇನಿಯಲ್‌ನ ದುರಂತ ಬದುಕು. ಮಲಯಾಳಂ ಚಿತ್ರೋದ್ಯಮ ಕುಡಿಯೊಡೆದದ್ದು ಜೆ. ಸಿ. ಡೇನಿಯಲ್ ಮಡಿಲಿನಲ್ಲಿ. ಈತ ಮಲಯಾಳಂನ ಮೊತ್ತ ಮೊದಲ ಚಿತ್ರ ನಿರ್ದೇಶಕ, ನಿರ್ಮಾಪಕ ಹಾಗೂ ನಟ. ಈತ ಮಲಯಾಳಂಗೆ ಕೊಟ್ಟಿರುವುದು ಒಂದೇ ಒಂದು ಚಿತ್ರ. ಅದರ ಹೆಸರು ವಿಗದ ಕುಮಾರನ್. ಇದೊಂದು ಮೂಕಿ ಚಿತ್ರ. ಬಳಿಕ ಡೇನಿಯಲ್ ಬದುಕು ಕೂಡ ಒಂದು ಮೂ
ಚಿತ್ರವಾಯಿತು. ಈ ಚಿತ್ರದ ಜೊತೆಗೆ ಅವರು ನಡೆಸಿದ ಹೋರಾಟ, ಒಂದೇ ಒಂದು ಕಾಪಿ ಇಟ್ಟುಕೊಂಡು ಅದನ್ನು ಜನರೆಡೆಗೆ ತಲುಪಿಸಲು ಅವನು ನಡೆಸಿದ ಪ್ರಯತ್ನ, ಪಟ್ಟಭದ್ರ ಹಿತಾಸಕ್ತಿಗಳಿಂದ ಎದುರಾದ ವಿರೋಧ ಇವೆಲ್ಲವನ್ನು ಸೆಲ್ಯುಲಾಯ್ಡಿ ಚಿತ್ರ ಕಟ್ಟಿಕೊಡುತ್ತದೆ. ಎಲ್ಲಕ್ಕಿಂತ ದುಃಖದ ಸಂಗತಿಯೆಂದರೆ, ಇಷ್ಟೆಲ್ಲ ಮಾಡಿ ಬಿಕಾರಿಯಾದ ಡೇನಿಯಲ್‌ನನ್ನು ಮಲಯಾಳಂನ ಮೊತ್ತ ಮೊದಲ ನಿರ್ದೇಶಕ, ನಿರ್ಮಾಪಕ, ನಟ ಎಂದು ಗುರುತಿಸುವುದಕ್ಕೂ ಕೇರಳ ಸರಕಾರ ಹಿಂಜರಿಯುತ್ತದೆ. ಅದಕ್ಕೆ ಕುಂಟು ನೆಪಗಳನ್ನು ಒಡ್ಡುತ್ತದೆ. ಜೀವನದಲ್ಲಿ ಸೋತು ಸುಣ್ಣವಾದ ಡೇನಿಯಲ್ ತಮಿಳುನಾಡಲ್ಲಿ ಅಜ್ಞಾತವಾಗಿ ಬದುಕುತ್ತಿರುತ್ತಾನೆ. ಆತ ತಮಿಳ, ಕ್ರಿಶ್ಚಿಯನ್ ಎಂಬ ಕಾರಣ ಒಡ್ಡಿ, ಸರಕಾರ ಮನವಿಯನ್ನು ತಿರಸ್ಕರಿಸುತ್ತದೆ. ವೃದ್ಧಾಪ್ಯ ಕಾಲದಲ್ಲಿ ಪಿಂಚಣಿಗಾಗಿ ಕೇರಳ ಸರಕಾರದೆಡೆಗೆ ಬೊಗಸೆಯೊಡ್ಡಿದಾಗಲೂ ಸರಕಾರ ಕೈ ಚೆಲ್ಲಿತು. ‘‘ನಿಮ್ಮ ವ್ಯಾಪ್ತಿ ನಮಗೆ ಬರುವುದಿಲ್ಲ. ನೀವು ತಮಿಳು ನಾಡು ಸರಕಾರದೊಂದಿಗೆ ಕೇಳಿ’’ ಎಂದಿತು. 1975ರಲ್ಲಿ ಡೇನಿಯಲ್ ಮೃತಪಟ್ಟರು. ಇದಾದ ಬಳಿಕ ಸರಕಾರ ‘ವಿಗದಕುಮಾರನ್’ ಚಿತ್ರ ಮಲಯಾಳಂನ ಮೊತ್ತ ಮೊದಲ ಚಿತ್ರವೆಂದು ಒಪ್ಪಿಕೊಂಡಿತು. ಜೊತೆಗೆ ಡೇನಿಯಲ್‌ನನ್ನು ಕೇರಳ ಚಿತ್ರರಂಗದ ಪಿತಾಮಹ ಎಂದು ಘೋಷಿಸಿತು.

ನಾನು ಹೇಳಲು ಹೊರಟಿರುವುದು ಡೇನಿಯಲ್ ಕತೆಯನಲ್ಲ. ಡೇನಿಯಲ್ ಕತೆಯನ್ನು ಅರಸುತ್ತಾ ಹೋಗುವ ನಿರ್ದೇಶಕನಿಗೆ ಇನ್ನೊಂದು ಕಪ್ಪುಗುಲಾಬಿಯ ಪರಿಚಯವಾಗುತ್ತದೆ. ಆಕೆ ಇನ್ನಾರೂ ಅಲ್ಲ. ಕೇರಳ ಚಿತ್ರರಂಗದ ಮೊತ್ತ ಮೊದಲ ನಟಿ ಕೆ. ಪಿ. ರೋಸಿ. ನಿರ್ದೇಶಕ ಡೇನಿಯಲ್ ಅವರ 'ವಿಗದ ಕುಮಾರನ್' ಚಿತ್ರದ ನಾಯಕಿಯಾಗಿ ನಟಿಸಿ, ಬಳಿಕ ಇದ್ದಕ್ಕಿದ್ದಂತೆಯೇ ಕಣ್ಮರೆಯಾದ ರೋಸಿ ಮಲಯಾಳಂ ಚಿತ್ರರಂಗದ ಆರಂಭ ಕಾಲದ ಒಡೆದ ಕನ್ನಡಿ. ಅವಳನ್ನು ಬದುಕನ್ನು ಮುಟ್ಟ ಹೋದರೆ ನಮ್ಮ ಕೈತುಂಬಾ ಗಾಯಗಳು. ಕಮಲ್ ಅವರ
‘ಸೆಲ್ಯುಲಾಯ್ಡ’ ಚಿತ್ರದಲ್ಲಿ ನಮ್ಮನ್ನು ಡೇನಿಯಲ್‌ಗಿಂತ ಹೆಚ್ಚು ರೋಸಿ ಕಾಡುತ್ತಾಳೆ.

 ಸುಮಾರು 1928ರ ಕಾಲಘಟ್ಟದಲ್ಲಿ ತನ್ನೆಲ್ಲ ಜಮೀನನ್ನು ಮಾರಿ, ‘ವಿಗದಕುಮಾರನ್’ ಚಿತ್ರವನ್ನು ಮಾಡಲು ಹೊರಡುತ್ತಾರೆ ಡೇನಿಯಲ್. ಆಗ ಅವರಿಗೆ ಎದುರಾದ ಅತಿ ದೊಡ್ಡ ಸಮಸ್ಯೆಯೆಂದರೆ ನಟಿಯದು. ನಾಟಕ, ಚಿತ್ರದಲ್ಲಿ ನಟಿಸುವವರ ಕುರಿತಂತೆ ಅತ್ಯಂತ ಕೀಳುಭಾವನೆ ಹೊಂದಿದ ಕಾಲಘಟ್ಟವದು. ಕೇರಳದಲ್ಲಂತೂ ಮೇಲ್ವರ್ಣೀಯರ ದಬ್ಬಾಳಿಕೆ ತನ್ನ ಗರಿಷ್ಠ ಹಂತಕ್ಕೆ ತಲುಪಿದ್ದ ಸಂದರ್ಭ. ನಟಿಗಾಗಿ ಹಲವು ತಿಂಗಳುಗಳ ಕಾಲ ಹುಡುಕಾಡಿದ ಅವರಿಗೆ ಪರಿಚಯವಾದುದು ರಾಜಮ್ಮ ಎನ್ನುವ ಪುಲೆಯ ಹುಡುಗಿ. ಅಂದಿನ ಕಾಲದಲ್ಲಿ ಕೇರಳದಲ್ಲಿ ಪುಲೆಯ ಅಂದರೆ ಹೊಲೆಯ. ಕೂಲಿ ಕೆಲಸ ಮಾಡುತ್ತಾ ಬದುಕು ನಡೆಸುವ ಈ ದಲಿತ ಹುಡುಗಿಗೆ ನಾಟಕದಲ್ಲಿ ನಟಿಸುವ ಚಟವಿತ್ತು. ಒಂದೆರಡು ನಾಟಕಗಳಲ್ಲಿ ಕಾಣಿಸಿಕೊಂಡಿದ್ದಳು. ಈಕೆಯ ತಂದೆ ಕೂಲಿಕೆಲಸ ಮಾಡುತ್ತಾ ಜೀವನ ಮಾಡುತ್ತಿದ್ದ. ಇನ್ನೊಬ್ಬ ದೊಡ್ಡಪ್ಪ ಒಂದು ಆಸ್ಪತ್ರೆಯಲ್ಲಿ ಶೌಚಾಲಯದಲ್ಲಿ ಕೆಲಸ ಮಾಡುತ್ತಿದ್ದ. ಇವರಿಬ್ಬರನ್ನು ಒಲಿಸಿದ ಡೇನಿಯಲ್, ರಾಜಮ್ಮನನ್ನು ಕೇರಳದ ಮೊತ್ತ ಮೊದಲ ನಟಿಯನ್ನಾಗಿ ಮಾಡುವಲ್ಲಿ ಯಶಸ್ವಿಯಾದರು. ಡೇನಿಯಲ್ ಕೈಯಲ್ಲಿ ರಾಜಮ್ಮ ರೋಸಿಯಾದರು. ಶೂಟಿಂಗ್ ಸಂದರ್ಭದಲ್ಲಿ ಅವಳ ಊಟವನ್ನು ಅವಳೇ ತಂದು ಪ್ರತ್ಯೇಕವಾಗಿ ಉಣ್ಣಬೇಕಾಗಿತ್ತು. ನಟಿಸಿದ ಬಳಿಕ, ಸಂಜೆ ಕೂಲಿಕೆಲಸಕ್ಕೆ ತೆರಳಬೇಕಾಗಿತ್ತು. ಈಕೆಯ ಪಾಲಿಗೆ ನಟಿಸುವುದರ ಜೊತೆಗೆ ಸಿನಿಮಾದಲ್ಲಿ ಇನ್ನೊಂದು ರೋಮಾಂಚನ ತರುವ ವಿಷಯವಿತ್ತು. ಆಕೆ ಚಿತ್ರದಲ್ಲಿ ನಟಿಸಲಿರುವುದು ಮೇಲ್ಜಾತಿಯ ನಾಯರ್ ಹೆಣ್ಣು ಸರೋಜಾಳ ಪಾತ್ರ. ಆದರೆ ಅದೇ ಪಾತ್ರ ತನ್ನ ಬದುಕಿಗೆ ಕುತ್ತಾಗುತ್ತದೆ ಎಂದು ಅವಳು ಭಾವಿಸಿರಲಿಲ್ಲ.


 ಎಲ್ಲ ಸಂಕಷ್ಟಗಳ ನಡುವೆ ಮೊತ್ತ ಮೊದಲ ಮಲಯಾಳಂ ಮೂಕಿ ಚಿತ್ರ ಬಿಡುಗಡೆಗೆ ಸಿದ್ಧವಾಯಿತು. ದೀಪ ಹಚ್ಚುವ ಕೆಲಸಕ್ಕೆ ಹಿರಿಯ ಬ್ರಾಹ್ಮಣರೊಬ್ಬರನ್ನು ಕರೆಸಲಾಗಿತ್ತು. ತನ್ನ ಮೊತ್ತ ಮೊದಲ ಚಿತ್ರವನ್ನು ನೋಡಲು ರೋಸಿ ಸಂಭ್ರದಿಂದ ಸಿದ್ಧಳಾಗಿ ಬಂದಿದ್ದಳು. ಆದರೆ, ಕಾರ್ಯಕ್ರಮ ಉದ್ಘಾಟಿಸುವ ಹಿರಿಯರು ರೋಸಿಯನ್ನು ನೋಡಿ ಬಿಟ್ಟರು. ಆಕೆ ದಲಿತ ಹೆಣ್ಣು ಎನ್ನುವುದು ಅವರಿಗೆ ಗೊತ್ತಿತ್ತು. ಡೇನಿಯಲ್‌ನನ್ನು ಕರೆಸಿದವರೇ ‘ತಕ್ಷಣ ಆಕೆಯನ್ನು ಹೊರಗೆ ಕಳುಹಿಸಿ. ಅವಳು ಇಲ್ಲಿದ್ದರೆ ನಾನು ದೀಪಬೆಳಗಿಸುವುದಿಲ್ಲ’’ ಎಂದು ಬಿಟ್ಟರು. ಡೇನಿಯಲ್ ತಬ್ಬಿಬ್ಬಾದರು. ಸಾಲಸೋಲ ಮಾಡಿ ತಯಾರಿಸಿದ ಮೊತ್ತ ಮೊದಲ ಚಿತ್ರ. ಹೇಗಾದರೂ ಬಿಡುಗಡೆಯಾದರೆ ಸಾಕು ಎಂಬ ಸ್ಥಿತಿಯಲ್ಲಿ ಅವರಿದ್ದರು. ತಾನು ನಟಿಸಿದ ಚಿತ್ರವನ್ನು ನೋಡಲು ಹಂಬಲಿಸಿದ್ದ ರೋಸಿಯನ್ನು ಬಲವಂತವಾಗಿ ಹೊರ ಹಾಕಲಾಯಿತು. ಕೊನೆಗೂ ಹಿರಿಯರು ದೀಪ ಬೆಳಗಿಸಿದರು. ಉದ್ಘಾಟನೆಗೊಂಡು ಚಿತ್ರ ಆರಂಭವಾಯಿತು. ಮೂಕಿ ಚಿತ್ರವಾದುದರಿಂದ, ಡೇನಿಯಲ್ ಅವರೇ ಸಂದರ್ಭಗಳನ್ನು ವಿವರಿಸುತ್ತಿದ್ದರು. ಇದೇ ಸಂದರ್ಭದಲ್ಲಿ ರೋಸಿ ಪಾತ್ರ ಪ್ರವೇಶವಾಯಿತು. ರೋಸಿ ನಟಿಸಿರುವುದು ಮೇಲ್ವರ್ಣದ ನಾಯರ್ ಪಾತ್ರದಲ್ಲಿ ಎನ್ನೋದು ದೀಪಬೆಳಗಿಸಿದ ಹಿರಿಯರಿಗೆ ತಿಳಿದದ್ದೇ ಕೆಂಡಾಮಂಡಲವಾದರು. ‘ದಲಿತ ಹೆಣ್ಣು ಮೇಲ್ಜಾತಿಯವರ ಪಾತ್ರ ನಿರ್ವಹಿಸುವುದೇ?’ ಚಿತ್ರ ನಿಲ್ಲಿಸಿ ಎಂದು ಅಬ್ಬರಿಸಿದರು. ಅವರೊಂದಿಗಿದ್ದ ಬೆಂಬಲಿಗರು ಗದ್ದಲವೆಬ್ಬಿಸಿದರು. ಅನಿವಾರ್ಯವಾಗಿ ಡೇನಿಯಲ್ ಪ್ರದರ್ಶನವನ್ನು ಅರ್ಧದಲ್ಲೇ ನಿಲ್ಲಿಸಬೇಕಾಯಿತು. ಹಿರಿಯರು ಅಲ್ಲಿಂದ ಎದ್ದು ಹೊರ ನಡೆದರು.
ಡೇನಿಯಲ್
 


ಇಷ್ಟರಲ್ಲೇ ದಲಿತ ಹೆಣ್ಣು ನಾಯರ್ ಪಾತ್ರವನ್ನು ನಿರ್ವಹಿಸಿರುವುದು ಬೆಂಕಿಯಂತೆ ಹರಡತೊಡಗಿತು. ರೋಸಿಯ ತಂದೆಗೆ ಬೆದರಿಕೆ ಹಾಕಲಾಯಿತು. ಪುಂಡು ಪೋಕರಿಗಳು ಆಕೆಯ ಮನೆಗೆ ಕಲ್ಲು ತೂರಾಟ ನಡೆಸುವುದು ಸಾಮಾನ್ಯವಾಯಿತು. ಮೂರನೆ ದಿನ ಮತ್ತೆ ಚಿತ್ರ ಪ್ರದರ್ಶಿಸಲು ಡೇನಿಯಲ್ ಹೊರಟರು. ಚಿತ್ರ ಪ್ರದರ್ಶನವೂ ಆಯಿತು. ಆದರೆ ಅಂದೇ ರಾತ್ರಿ ಮೇಲ್ವರ್ಣೀಯರ ಒಂದು ತಂಡ ರೋಸಿಯ ಮನೆಗೆ ಬೆಂಕಿ ಹಚ್ಚಿತ್ತು. ಆಕೆಯನ್ನು ಜೀವಂತ ದಹಿಸುವುದು ಅವರ ಉದ್ದೇಶವಾಗಿತ್ತು. ಆದರೆ ಆ ಕಾಳ ಕತ್ತಲೆಯಲ್ಲಿ ತನ್ನ ಇಬ್ಬರು ತಂಗಿಯರು ಹಾಗೂ ತಮ್ಮನ ಜೊತೆಗೆ ಪರಾರಿಯಾದಳು. ಮಲಯಾಳಂ ಚಿತ್ರರಂಗದ ರೋಸಿ ಅಲ್ಲಿಗೆ ಮುಗಿದು ಹೋದಳು. ಈ ಬಳಿಕ ಆಕೆಯನ್ನು ಮಲಯಾಳಂ ಚಿತ್ರರಂಗ ಸಂಪೂರ್ಣ ಮರೆತೇ ಬಿಟ್ಟಿತು.

ಆದರೆ ಅಂದು ಕಾಳಕತ್ತಲೆಯಲ್ಲಿ ತನ್ನ ಸೋದರಿಯರೊಂದಿಗೆ ಪರಾರಿಯಾದ ರೋಸಿ, ಹೆದ್ದಾರಿಗೆ ಬಂದಳು. ಆ ದಾರಿಯಲ್ಲಿ ಬಂದ ಒಂದು ಲಾರಿಗೆ ಕೈ ತೋರಿಸಿದಳು. ಅವಳನ್ನು ಲಾರಿಗೆ ಹತ್ತಿ ಕುಳ್ಳಿರಿಸಿದ ಲಾರಿ ಡ್ರೈವರ್ ಕೇಶವನ್ ಪಿಳ್ಳೈ ಅವಳ ಬದುಕಿನ ಉದ್ದಕ್ಕೂ ಆಸರೆಯಾದ. ರೋಸಿಯ ಕತೆ ಕೇಳಿ ಕೇಶವನ್ ಪಿಳ್ಳೈ ಆಕೆಯನ್ನು ವರಿಸಿದ. ತಮಿಳುನಾಡಿನಲ್ಲಿ ಯಾವ ಸದ್ದುಗದ್ದಲವೂ ಇಲ್ಲದ ಒಂದು ಮೂಕಿ ಚಿತ್ರದಂತೆ ತನ್ನ ಬದುಕನ್ನು ಮುಗಿಸಿದರು ರೋಸಿ. ಪದ್ಮಾ, ನಾಗಪ್ಪನ್ ಇಬ್ಬರು ಮಕ್ಕಳು ತನ್ನ ತಾಯಿಯ ಬದುಕಿಗೆ ಸಾಕ್ಷಿಯಾಗಿ ತಮಿಳುನಾಡಿನಲ್ಲಿ ಬೆಳೆಯುತ್ತಿದ್ದಾರೆ. ವಿಷಾದನೀಯ ಸಂಗತಿಯೆಂದರೆ, ಡೇನಿಯಲ್‌ನನ್ನು ಮಾನ್ಯ ಮಾಡಿದ ಕೇರಳ ಸರಕಾರ ರೋಸಿಯನ್ನು ಕೊನೆಯವರೆಗೂ ಒಪ್ಪಿಕೊಳ್ಳಲೇ ಇಲ್ಲ. ಮಲಯಾಳಂ ಚಿತ್ರರಂಗದ ಮೊತ್ತ ಮೊದಲ ಕಲಾವಿದೆ ಎನ್ನುವ ಗೌರವವನ್ನು ನೀಡಲು ಅದು ಮಾನಸಿಕವಾಗಿ ಸಿದ್ಧವಾಗಿರಲಿಲ್ಲ. ಆದರೆ ಸೆಲ್ಯುಲಾಯ್ಡಿ ತಂಡದ ಕೆಲಸದಿಂದಾಗಿ ಅದೂ ಸಾಧ್ಯವಾಯಿತು. ಮಲಯಾಳಂ ಚಿತ್ರರಂಗದಲ್ಲಿ ಸಾಧನೆ ಮಾಡಿದವರಿಗೆ ರೋಸಿಯ ಹೆಸರಿನಲ್ಲಿ ಪ್ರಶಸ್ತಿಯೊಂದನ್ನು ನೀಡಲು ಸರಕಾರ ಮುಂದಾಗಿದೆ. ಚಿತ್ರದಲ್ಲಿ ನಟಿಸಿದ ಸುಮಾರು 90 ವರ್ಷಗಳ ಬಳಿಕ ಕೇರಳ ಸರಕಾರ ರೋಸಿಯನ್ನು ಪ್ರಪ್ರಥಮ ಮಲಯಾಳಂ ನಟಿ ಎನ್ನುವುದನ್ನು ಮಾನ್ಯ ಮಾಡಿದೆ.


ಸೆಲ್ಯುಲಾಯ್ಡನಲ್ಲಿ ಹೊಸ ಮುಖವಾಗಿರುವ ಚಾಂದಿನಿ ರೋಸಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸೆಲ್ಯುಲಾಯ್ಡಾ ಚಿತ್ರ ಕೇರಳದ ಏಳು ರಾಜ್ಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ಬಹುಶಃ ಇದನ್ನು ನೋಡಿ ಡೇನಿಯಲ್ ಮತ್ತು ರಾಜಮ್ಮ ಯಾನೆ ರೋಸಿಯ ಆತ್ಮಗಳು ನಿಟ್ಟುಸಿರು ಬಿಟ್ಟಿರಬಹುದು.

Saturday, June 1, 2013

ಗದ್ದೆ ಮತ್ತು ಇತರ ಕತೆಗಳು

 ಹಬ್ಬ
ಇಬ್ಬರು ಪುಟಾಣಿಗಳು ಶಾಲೆಗೆ ಹೋಗುತ್ತಾ ಮಾತನಾಡಿಕೊಳ್ಳುತ್ತಿದ್ದವು.
‘‘ನಮ್ಮ ಮನೆಯಲ್ಲಿ ಇವತ್ತು ಹಬ್ಬ’’
‘‘ಏನು ಅಡುಗೆ ಮಾಡಿದ್ರು...’’
‘‘ಗಂಜಿ ಮತ್ತು ಚಟ್ನಿ...’’
‘‘ಹಬ್ಬ ಅಂದೆ...’’
‘‘ಹೌದು...ಮನೆಯಲ್ಲಿ ಗಂಜಿ ಮಾಡಿದ ದಿನ ನಮಗೆ ಹಬ್ಬ’’

ಸೂರ್ಯ
ಮಗ ಕೇಳಿದ ‘‘ಸೂರ್ಯನೇಕೆ ಅಷ್ಟು ದೂರದಲ್ಲಿದ್ದಾನೆ?’’
‘‘ಹತ್ತಿರದಲ್ಲಿದ್ದರೆ ಮನುಷ್ಯ ಅದಕ್ಕೇನಾದರೂ ಕೇಡು ಮಾಡಿಯಾನು ಎಂಬ ಭಯದಲ್ಲಿ ದೇವರು ಅಷ್ಟು ದೂರದಲ್ಲಿಟ್ಟಿದ್ದಾನೆ ಮಗಾ’’ ತಂದೆ ಹೇಳಿದ. 


ಯುವಕ
ಯುವಕನೊಬ್ಬ ರಸ್ತೆ ದಾಟುವುದಕ್ಕೆ ಹೆದರುತ್ತಿದ್ದ.
ಅಲ್ಲಿಗೆ ಬಂದ ತುಸು ಪ್ರಾಯದ ಮುದುಕನೊಬ್ಬ ಅವನನ್ನು ಕೈ ಹಿಡಿದು ರಸ್ತೆ ದಾಟಿಸಿದ.
ಯಾರೋ ಯುವಕನ ಬೆನ್ನು ತಟ್ಟಿದರು ‘‘ಮುದುಕನನ್ನು ರಸ್ತೆ ದಾಟಿಸಿದ ನಿನ್ನದು ಒಳ್ಳೆಯ ಮನಸ್ಸು’’

ಬರ
ಬರಗಾಲ.
ಆದರೂ ರೈತ ಉಳುತ್ತಿದ್ದ.
ಯಾರೋ ಕೇಳಿದರು ‘‘ಭೂಮಿ ಆಕಾಶ ಬತ್ತಿ ಹೋಗಿದೆ....ಹೊಲ ಉಳುತ್ತಿದ್ದೀಯಲ್ಲ...’’
‘‘ಆದರೆ ಎದೆಯಲ್ಲಿ ಒಂದಿಷ್ಟು ಜಲ ಬತ್ತದೇ ಉಳಿದಿದೆ. ಅಲ್ಲಿಯವರೆಗೆ ಉಳುತ್ತೇನೆ’’ ರೈತ ಹೇಳಿದ.


ಗದ್ದೆ
ಹಸಿರಾಗಿ ಹರಡಿಕೊಂಡಿತ್ತು ರೈತನ ಗದ್ದೆ.
ಕೈಗಾರಿಕಾ ಉದ್ಯಮಿ ಅದನ್ನು ನೋಡಿ ಹೇಳಿದ ‘‘ಛೇ...ಅದೆಷ್ಟು ಜಾಗ ವ್ಯರ್ಥವಾಗಿ ಬಿದ್ದುಕೊಂಡಿದೆ’’

ಕನಸು
ರೈಲಿನಲ್ಲಿ ಪ್ರತಿ ದಿನ ನನ್ನ ಎದುರುಗಡೆ ಬಂದು ಕೂರುತ್ತಿದ್ದ ಹುಡುಗಿ.
ಸಮಯ ಕಳೆಯುವುದಕ್ಕೆಂದು ಅದೇನೋ ಹೆಣೆಯುತ್ತಿದ್ದಳು.
ಸ್ವೆಟರ್ ಆಗಿರಬಹುದು. ಅಥವಾ ಕುಲಾವಿ....
ಪ್ರತಿ ದಿನ ನಡೆಯುತ್ತಲೇ ಇತ್ತು. ಒಂದು ದಿನ ಹಾಗೇ ಹೆಣೆಯುತ್ತಿದ್ದವಳು, ತನ್ನ ಕೆಲಸ ಮುಗಿಸಿದ್ದೇ ಎದ್ದು ನಿಂತಳು.
ನನ್ನಡೆಗೆ ಬಾಗಿ ಹೇಳಿದಳು ‘‘ಇದು ನಿಮಗಾಗಿ ನಾನು ಹೆಣೆದ ನನ್ನ ಕನಸು. ಅಳತೆ ಸರಿಯಾಗಿದೆಯೋ ನೋಡಿ...’’

ಹಸಿವು
ಆತನಿಗೆ ತುಂಬಾ ಹಸಿವಾಗುತ್ತಿತ್ತು.
ಮನೆಯಲ್ಲೇನೂ ಇಲ್ಲ.
ಸೀದಾ ಗೆಳೆಯನ ಮನೆಗೆ ಹೋದರೆ ಹೇಗೆ? ಯೋಚಿಸದವನೇ ಅಲ್ಲಿಗೆ ನಡೆದ.
ಗೆಳೆಯ ಆಗಷ್ಟೇ ಉಂಡು ಕೈ ತೊಳೆಯುತ್ತಿದ್ದ. ಬಂದ ಗೆಳೆಯನನ್ನು ನೋಡಿದ್ದೇ ‘‘ಏನೋ...ಊಟ ಆಯ್ತ?’’ ಕೇಳಿ ಬಿಟ್ಟ.
ಗೆಳೆಯ ಮರಳಿದ.

ನೀರು ಕುಡಿದು ಮಲಗಿದ.