Thursday, August 22, 2013

ಶಿಪ್ ಆಫ್ ಥೀಸಿಯಸ್: ಬಿಡಿ ಭಾಗಗಳನ್ನು ಕಳಚಿಟ್ಟ ಮನುಷ್ಯ ಮತ್ತು ಬದುಕು...!

 ಭಾರತೀಯ ಚಿತ್ರ ಪರಂಪರೆಯಲ್ಲಿ ಕಲಾತ್ಮಕ ಚಳವಳಿಯ ಬೇರುಗಳನ್ನು ತಡಕಾಡಿದರೆ ಅಲ್ಲಿ ಕೈಗೆ ತೊಡರುವುದು ಕನ್ನಡ ಮತ್ತು ಬಂಗಾಳಿ ಮೊದಲಾದ ಪ್ರಾದೇಶಿಕ ಭಾಷೆಗಳು. ಬಾಲಿವುಡ್ ಮಂದಿ ಸಿನಿಮಾವನ್ನು ಒಂದು ಉದ್ಯಮವಾಗಿ ಭಾವಿಸಿ ಚಿತ್ರಗಳನ್ನು ಮಾಡುತ್ತಿದ್ದಾಗ, ಕನ್ನಡ, ಬಂಗಾಳಿ, ಮಲಯಾಳಂನಂತಹ ಪ್ರಾದೇಶಿಕ ಭಾಷೆಗಳು ಸಿನಿಮಾವನ್ನು ಕಲೆಯಾಗಿ ಸ್ವೀಕರಿಸಿ, ಹಲವು ಪ್ರಯೋಗಗಳನ್ನು ಮಾಡಿದವು. ಕಲಾತ್ಮಕ ಮತ್ತು ವಾಣಿಜ್ಯ ಎಂದು ಗೆರೆ ಎಳೆದಂತೆ ಸಿನಿಮಾ ಸೀಳಾದಾಗ, ಅದರ ನಡುವೆ ಒಂದು ಸೇತುವೆಯನ್ನು ನಿರ್ಮಿಸಿ ಚಿತ್ರವನ್ನು ಮಾಡುವ ನಿರ್ದೇಶಕರ ತಂಡ ಹುಟ್ಟಿಕೊಂಡಿತು. ಬಾಲಿವುಡ್‌ನಲ್ಲಿ ಅರ್ಧ ಸತ್ಯ, ಅಂಕುರ್, ಉತ್ಸವ್, ಮಂಡಿ ಹೀಗೆ ಕಲಾತ್ಮಕತೆಯ ಜೊತೆಗೇ ಸಿನಿಮಾವನ್ನು ಜನರೆಡೆಗೆ ಕೊಂಡೊಯ್ಯುವ ಪ್ರಯತ್ನ ನಡೆಯಿತು. ಮಲಯಾಳಂ ಚಿತ್ರಗಳೂ ಇದರಲ್ಲಿ ಯಶಸ್ವಿಯಾದವು. ಆದರೆ ಕರ್ನಾಟಕದಲ್ಲಿ ದುರದೃಷ್ಟವಶಾತ್, ಇನ್ನೂ ಆ ಪ್ರಯತ್ನ ನಡೆದಿಲ್ಲ. ಈ ಕಾರಣದಿಂದಲೇ, ಕನ್ನಡದ ಚಿತ್ರೋದ್ಯಮ ನಿಂತ ನೀರಾಗಿ ಕೊಳೆಯುತ್ತಿದೆ.
ಇದೇ ಸಂದರ್ಭದಲ್ಲಿ ಬಾಲಿವುಡ್‌ನ ಕೆಲವು ಪ್ರತಿಭಾವಂತ ತರುಣರು ಇಂದು ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ ಮತ್ತು ಅವುಗಳಿಗಾಗಿಯೇ ಚಿತ್ರಗಳನ್ನು ಮಾಡುವಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ. ಮಲ್ಟಿಪ್ಲೆಕ್ಸ್‌ನ ಬುದ್ದಿಜೀವಿ ಜನರನ್ನು ಗುರಿಯಾಗಿರಿಸಿಕೊಂಡು ಗಂಭೀರ ಚಿತ್ರಗಳು ಒಂದರನಂತರ ಒಂದರಂತೆ ಬರತೊಡಗಿವೆ. ಅವುಗಳಲ್ಲಿ ಮುಖ್ಯವಾದದ್ದು ಮತ್ತು ಇತ್ತೀಚೆಗೆ ಭಾರೀ ಸುದ್ದಿಯಲ್ಲಿರುವುದು ಆನಂದ್ ಗಾಂಧಿ ಎನ್ನುವ 30ರ ತರುಣ ನಿರ್ದೇಶಕನ ‘ಶಿಪ್ ಆಫ್ ಥೀಸಿಯಸ್. ‘ಭಾರತದ ಚಿತ್ರಗಳೂ ಅಂತಾರಾಷ್ಟ್ರೀಯ ಚಲನ ಚಿತ್ರೋತ್ಸವಗಳ ಚಿತ್ರಗಳ ಮಟ್ಟಿಗೆ ಬೆಳೆದಿದೆ ಎನ್ನುವುದನ್ನು ಶಿಪ್ ಆಫ್ ಥೀಸಿಯಸ್’ ತೋರಿಸಿಕೊಂಡಿದೆ ಎಂದು ವಿದೇಶಿ ಚಿತ್ರ ವಿಮರ್ಶಕರು ಈ ಚಿತ್ರವನ್ನು ವೀಕ್ಷಿಸಿ ತಮ್ಮ ಷರಾವನ್ನು ಬರೆದಿದ್ದಾರೆ. ಜೊತೆಗೆ ಬಾಲಿವುಡ್‌ನ ಹಿರಿಯ, ಖ್ಯಾತ ನಿದೇರ್ಶಕರೂ ಆನಂದ್ ಗಾಂಧಿಯ ಪ್ರಯತ್ನವನ್ನು ಅಭಿನಂದಿಸಿದ್ದಾರೆ. ಭಾರತೀಯ ಚಿತ್ರಪಂಡಿತರ ಹೊಗಳಿಕೆಯ ಸುರಿಮಳೆಯೇ ಈ ಚಿತ್ರದ ಮೇಲೆ ಸುರಿದಿದೆ. ಹಲವು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಈ ಚಿತ್ರ ತನ್ನದಾಗಿಸಿಕೊಂಡಿದೆ.


  ‘ಶಿಪ್ ಆಫ್ ಥೀಸಿಯಸ್’ ಮೂಲಭೂತವಾಗಿ ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಶಬ್ದ. ಒಂದು ವಸ್ತುವಿನ ಎಲ್ಲ ಭಾಗಗಳನ್ನು ಬಿಡಿಬಿಡಿಯಾಗಿ ಸ್ಥಳಾಂತರಿಸಿ, ಪುನರ್ನಿಮಿಸಿದರೆ ಅದು ಮೂಲ ವಸ್ತುವಾಗಿ ಉಳಿಯುತ್ತದೆಯೆ? ಎಂಬ ವಿರೋಧಾಭಾಸದ ಕುರಿತು ಉತ್ತರವನ್ನು ಹುಡುಕುವ ಪ್ರಯತ್ನವೇ ‘ಶಿಪ್ ಅಫ್ ಥೀಸಿಯಸ್’. ಹೆರಾಕ್ಲಿಟಸ್, ಸಾಕ್ರಟೀಸ್, ಪ್ಲೇಟೋರಂತಹ ಚಿಂತಕರನ್ನು ತಲೆಕೆಡಿಸಿದ ಪ್ರಶ್ನೆಯಿದು. ಥೀಸಿಯಸ್ ಎಂಬ ಹಡಗಿನ ಬಿಡಿ ಭಾಗಗಳನ್ನು ತೆಗೆದು ಹೊಸ ಹಡಗನ್ನು ನಿರ್ಮಿಸಲಾಯಿತು. ಈಗ ಹಡಗು ಮೂಲ ಹಡಗಾಗಿ ಉಳಿದಿದೆಯೆ? ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಪ್ಲುಟಾರ್ಕ್, ಥಾಮಸ್ ಹೋಬ್ಸ್ ತಮ್ಮದೇ ಆದ ವ್ಯಾಖ್ಯಾನಗಳನ್ನು ನೀಡುತ್ತಾರೆ. ಆನಂದ್ ಗಾಂಧಿ ಆ ಸಿದ್ಧಾಂತವನ್ನು ಕೇಂದ್ರವಾಗಿಸಿಕೊಂಡು, ಮನುಷ್ಯನ ಕುರಿತಂತೆ ಈ ಚಿತ್ರದಲ್ಲಿ ಚರ್ಚಿಸುತ್ತಾರೆ.

ಕಿರುಚಿತ್ರಗಳ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಆನಂದ್ ಗಾಂಧಿಯ ಈ ಚಿತ್ರವೂ, ಮೂರು ಕಿರುಚಿತ್ರಗಳ ಸಂಗಮ. ಆದರೆ ಕ್ಲೈಮಾಕ್ಸ್‌ನಲ್ಲಿ ಈ ಮೂರು ಚಿತ್ರಗಳ ಮುಖ್ಯಪಾತ್ರಗಳನ್ನು ಜೊತೆ ಸೇರಿಸುವ ಪ್ರಯತ್ನವನ್ನು ಮಾಡುತ್ತಾರೆ. ಚಿತ್ರದಲ್ಲಿ ಮೂರು ವಿಭಿನ್ನ ಪಾತ್ರಗಳಿವೆ. ಒಬ್ಬ ಕುರುಡಿ ಛಾಯಾಚಿತ್ರಗ್ರಾಹಕಿ, ಇನ್ನೊಬ್ಬ ಜೈನ ಸನ್ಯಾಸಿ ಮತ್ತು ಮಗದೊಬ್ಬ ಷೇರು ಉದ್ಯಮಿ. ಈ ಮೂರು ಪಾತ್ರಗಳಿಗೆ ತಮ್ಮ ತಮ್ಮ ಐಡೆಂಟಿಟಿಗಳು ಸವಾಲಾಗುವುದು ಮತ್ತು ಆ ಸವಾಲನ್ನು ಮುಖಾಮುಖಿಯಾಗುವುದು ಒಟ್ಟು ಚಿತ್ರದ ಕತೆ. ಛಾಯಾಗ್ರಾಹಕಿಯ ಕತೆ ಅಲೌಕಿಕ ಪ್ರಜ್ಞೆಗೆ ಸಂಬಂಧಿಸಿದ್ದು. ಕುರುಡಿಯಾಗಿದ್ದರೂ ಸದ್ದುಗಳನ್ನು ಆಲಿಸುತ್ತದೇ ಮುಂದಿರುವ ದೃಶ್ಯಗಳನ್ನು ತನ್ನ ಕ್ಯಾಮರಾದಲ್ಲಿ ಹಿಡಿಯುವ ಚಾಕಚಕ್ಯತೆ ಆಲಿಯಾ ಕಮಾಲ್ ಅವಳದು. ಈ ಮೂಲಕವೇ ಅವರು ವಿಶ್ವವಿಖ್ಯಾತಳಾಗುತ್ತಾಳೆ. ಅವಳ ಫೋಟೋಗಳು ಬಹು ಚರ್ಚೆಗೊಳಗಾಗುತ್ತವೆ. ಇದೇ ಸಂದರ್ಭದಲ್ಲಿ ವೈದ್ಯರ ಶಸ್ತ್ರ ಚಿಕಿತ್ಸೆಯ ಬಳಿಕ ಅವಳಿಗೆ ಕಣ್ಣು ಮರಳಿ ಬರುತ್ತದೆ. ವಿಪರ್ಯಾಸವೆಂದರೆ, ಅವಳಿಗೆ ಈಗ ಮೊದಲಿನಂತೆ ಸದ್ದುಗಳನ್ನು ಹಿಂಬಾಲಿಸಿ ದೃಶ್ಯವನ್ನು ಸೆರೆಹಿಡಿಯುವುದಕ್ಕಾಗುವುದಿಲ್ಲ. ಮೊದಲಿನಂತೆ ಅದ್ಭುತ ಫೋಟೋಗಳನ್ನು ಹಿಡಿಯುವಲ್ಲಿ ಅವಳು ವಿಫಲಳಾಗುತ್ತಾಳೆ. ತನಗೆ ದೊರಕಿದ ಕಣ್ಣು ಮತ್ತು ಸದ್ದು ಇವುಗಳ ನಡುವಿನ ತಿಕ್ಕಾಟದಲ್ಲಿ ಆಲಿಯಾ ತತ್ತರಿಸುತ್ತಾಳೆ. ಆದರೆ ಒಂದು ಸಂದರ್ಭದಲ್ಲಿ ಅವಳು ಮುಖಾಮುಖಿಯಾಗುವ ಹಿಮಾಲಯದ ತಪ್ಪಲು, ಹರಿಯುವ ನೀರು, ನೀಲಿ ಆಕಾಶ, ಸುತ್ತಲಿನ ನೀರವತೆ ಅವಳ ಆಲೋಚನೆಯ ದೃಷ್ಟಿಯನ್ನು ಬದಲಿಸುತ್ತದೆ. ಕ್ಯಾಮರಾ ಕೈ ಜಾರುತ್ತದೆ. ಪ್ರಕೃತಿಯನ್ನು ವಿನೀತಳಾಗಿ, ಮೂಕವಿಸ್ಮಿತಳಾಗಿ ಆಸ್ವಾದಿಸತೊಡಗುತ್ತಾಳೆ.


 ಎರಡನೆಯ ಕಥೆ ಮಧ್ಯ ವಯಸ್ಸಿನ ಜೈನ ಸನ್ಯಾಸಿಯದು. ಇಲ್ಲಿಯ ತಾಕಲಾಟ ಹಿಂಸೆ ಮತ್ತು ಅಹಿಂಸೆಯದು. ಔಷಧಿ ತಯಾರಿಕೆಗಾಗಿ ಮೂಕ ಪ್ರಾಣಿಗಳ ಹಿಂಸೆಯ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿ ಹೋರಾಟ ನಡೆಸುವ ಮೈತ್ರೇಯಿಗೆ ಪರಿಚಯವಾಗುವುದು ಚಾರ್ವಾಕ ಎಂಬ ಯುವ ವಕೀಲ. ಈ ಹೋರಾಟದ ಹಂತದಲ್ಲೇ ಸನ್ಯಾಸಿಯ ಅತ್ಯಂತ ಕಠಿಣ ಬದುಕನ್ನೂ ತೋರಿಸಲಾಗುತ್ತದೆ. ಇದೇ ಸಂದರ್ಭದಲ್ಲಿ ಸನ್ಯಾಸಿ ಯಕೃತ್ತಿನ ಕ್ಯಾನ್ಸರಿಗೆ ಒಳಗಾಗುತ್ತಾನೆ. ಈಗ ಅವನ ಆಯ್ಕೆ ಒಂದೋ ಕೃತಕ ಅಂಗವನ್ನು ಪಡೆದು, ಔಷಧಿಯನ್ನು ಸೇವಿಸುವುದು. ಅಥವಾ ದೇಹ ತ್ಯಾಗ ಮಾಡುವುದು. ಈ ಹಂತದಲ್ಲಿ ಸನ್ಯಾಸಿ ದೇಹ ತ್ಯಾಗಕ್ಕಿಳಿಯುತ್ತಾನೆ. ಇದೇ ಸಂದರ್ಭದಲ್ಲಿ ಚಾರ್ವಾಕ ಕೇಳುವ ಪ್ರಶ್ನೆ ‘ತನ್ನ ದೇಹವನ್ನು ತಾನೇ ದಂಡಿಸಿಕೊಳ್ಳುವ ಹಕ್ಕು ನಮಗಿದೆಯೇ? ಅದು ಹಿಂಸೆಯಲ್ಲವೇ?’ ಸಾವಿನ ಕೊನೆಯ ಹಂತದಲ್ಲಿರುವಾಗ ಆತ ಈ ಪ್ರಶ್ನೆಯನ್ನು ಒಪ್ಪಿಕೊಂಡು ಔಷಧಿಯನ್ನು ಸ್ವೀಕರಿಸಿ, ಬದುಕಿಗೆ ಮುಖ ಮಾಡುತ್ತಾನೆ.

 ಮೂರನೆಯ ಕತೆ ಶೇರು ಉದ್ಯಮವನ್ನು ಅವಲಂಬಿಸಿದ ಯುವಕ ನವೀನ್ ಪರ್ನಾಮಿಗೆ ಸಂಬಂಧಿಸಿದ್ದು. ಕಿಡ್ನಿ ಶಸ್ತಕ್ರಿಯೆ ಮುಗಿಸಿ, ಚೇತರಿಸಿ ಮನೆ ಸೇರುವ ಈತನನ್ನು ಈತನ ಅಜ್ಜಿ ‘ಬದುಕನ್ನು ಗಂಭೀರವಾಗಿ ಸ್ವೀಕರಿಸು’ ಎಂದು ಸದಾ ತರಾಟೆಗೆ ತೆಗೆದುಕೊಳ್ಳುತ್ತಿರುತ್ತಾರೆ. ಆಕೆ ಬದುಕಿನ ವೌಲ್ಯಗಳನ್ನು ನಂಬಿದಾಕೆ. ಒಂದು ದಿನ ಅವಳೇ ಬಿದ್ದು ಆಸ್ಪತ್ರೆ ಸೇರಬೇಕಾಗುತ್ತದೆ. ಅಜ್ಜಿಯನ್ನು ನೋಡಿಕೊಳ್ಳುವ ಹೊಣೆ ನವೀನ್ ಮೇಲೆ ಬೀಳುತ್ತದೆ. ತನ್ನ ಕಂಪ್ಯೂಟರ್ ಜೊತೆ ಕೆಲಸ ಮಾಡುತ್ತಲೇ ಅಜ್ಜಿಯ ಉಪದೇಶವನ್ನೂ ಕೇಳಬೇಕಾಗುತ್ತದೆ ಆತನಿಗೆ. ಇದೇ ಹೊತ್ತಿನಲ್ಲಿ ಆಸ್ಪತ್ರೆಯಲ್ಲಿ ಯಾರೋ ಚೀರಿದ ಧ್ವನಿ. ನವೀನ್ ಧ್ವನಿ ಬಂದತ್ತ ದಾವಿಸುತ್ತಾನೆ. ನೋಡಿದರೆ ಜನರಲ್ ವಾರ್ಡ್‌ನಲ್ಲಿ ಒಬ್ಬಾಕೆ ಚೀರಾಡುತ್ತಿರುತ್ತಾಳೆ. ಆಕೆಯ ಗಂಡನ ಕಿಡ್ನಿಯನ್ನು ಆಸ್ಪತ್ರೆಯ ವೈದ್ಯರು ಕದ್ದಿರುತ್ತಾರೆ. ನವೀನ್ ಈ ಕುರಿತು ವಿಚಾರಿಸುತ್ತಾ ಹೋದಂತೆ ತನಗೆ ಅಳವಡಿಸಿದ ಕಿಡ್ನಿ ಅವಳ ಗಂಡನಿಂದ ಕದ್ದಿರುವುದೇ ಎಂಬ  ಅನುಮಾನ ತಲೆಯೆತ್ತುತ್ತದೆ.  ಅದರ ಮೂಲವನ್ನು ಹುಡುಕಿ, ಕಿಡ್ನಿಯನ್ನು ಅವನಿಗೆ ಮರಳಿಸುವ ಪ್ರಯತ್ನವನ್ನು ಮಾಡುತ್ತಾನೆ. ಆರೋಪಿಗಳಿಗೆ ಶಿಕ್ಷೆಯಾಗಿಸಲು ಪ್ರಯತ್ನಿಸುತ್ತಾನೆ. ಆದರೆ ಕಿಡ್ನಿ ಕಳೆದುಕೊಂಡಾತ ಹೋರಾಟದ ಬದಲಿಗೆ, ಸಂಸ್ಥೆ ನೀಡುವ ಪರಿಹಾರಕ್ಕೇ ಸಂತೃಪ್ತನಾಗುತ್ತಾನೆ. ಆದರೆ, ಈ ಘಟನೆ ಆತನಿಗೆ ಬದುಕಿನ ಕಡೆಗೆ ಮುಖ ಮಾಡುವಂತೆ ಮಾಡುತ್ತದೆ. ಚಿತ್ರದ ಕೊನೆಯಲ್ಲಿ ಈ ಮೂರು ಕಥಾ ಪಾತ್ರಗಳು, ಹಾಗೆಯೇ ಇವರಂತಹ ಇನ್ನೂ ಹಲವು ಪಾತ್ರಗಳು ಒಂದು ಆಸ್ಪತ್ರೆಯಲ್ಲಿ ಜೊತೆಯಾಗುತ್ತಾರೆ. 


ಕುರುಡಿ ಮತ್ತು ಶೇರು ಉದ್ಯಮಿಯ ಕತೆ ಎದೆಯನ್ನು ಕಲಕುವಂತಿದೆ. ನಿರ್ದೇಶಕನ ಉದ್ದೇಶವನ್ನು ಮೀರಿ ಕತೆ ನಮ್ಮಾಳಗೆ ಬೆಳೆಯುತ್ತದೆ. ಆದರೆ ಜೈನ ಸನ್ಯಾಸಿಯ ಕತೆ ಎಲ್ಲೋ ಒಂದಿಷ್ಟು ವಾಚ್ಯವಾದಂತೆನಿಸುತ್ತದೆ. ಅಲ್ಲಿ, ಮಾತು, ಚರ್ಚೆಗಳು ಕತಾವಸ್ತುವಿನ ಬೆಳವಣಿಗೆಗೆ ಅಡ್ಡಿಯಾಗುತ್ತದೆ. ಕತೆಯನ್ನು ಒಟ್ಟಾಗಿ ‘ಶಿಪ್ ಆಫ್ ಥೀಸಿಯಸ್’ ಹಿನ್ನೆಲೆಯಲ್ಲಿ ಗ್ರಹಿಸುವಾಗ ಕೆಲವು ಸಮಸ್ಯೆಗಳು ಕಾಡುತ್ತವೆ. ಚಿತ್ರಕ್ಕೆ ಆ ಹೆಸರು ಮಿತಿಯನ್ನು ಹೇರುತ್ತದೆ. ನಿರ್ದೇಶಕ ಆ ಹೆಸರಿಗೆ ಬದ್ಧನಾಗದೆ ಉಳಿದಿದ್ದರೆ ಚೆನ್ನಾಗಿತ್ತು ಅನ್ನಿಸುತ್ತದೆ. ಚಿತ್ರದ ಕತೆ ತಣ್ಣಗೆ ಒಂದು ಕಿರು ನದಿಯಂತೆ ಸದ್ದಿಲ್ಲದೆ ನಮ್ಮಿಳಗೇ ಒಂದಾಗಿ ನಮ್ಮ ನರ ನಾಡಿಗಳಲ್ಲಿ ಹರಿಯತೊಡಗುತ್ತದೆ. ಸಂಗೀತದ ಅಬ್ಬರವಿಲ್ಲ. ನಿರೂಪಣೆಯ ವೈಭವವಿಲ್ಲ. ಮೂರು ಮುಖ್ಯ ಪಾತ್ರಗಳಲ್ಲಿ ಆಬಿದಾ ಅಲ್‌ಕಶಫ್, ನೀರಜ್ ಕಬಿ ಮತ್ತು ಸೋಹಮ್ ಶಾ ನಟನೆ ಚಿತ್ರವನ್ನು ಇನ್ನಷ್ಟು ಹತ್ತಿರವಾಗಿಸುತ್ತದೆ ಒಂದು ಸಿನಿಮಾವನ್ನು ಯಾಕಾಗಿ ಮಾಡಬೇಕು, ಹೇಗೆ ಮಾಡಬೇಕು ಎನ್ನುವುದಕ್ಕೆ ಇಲ್ಲಿ ಉತ್ತರವಿದೆ. ಛಾಯಾಗ್ರಹಣವಂತೂ ಅತ್ಯದ್ಭುತವಾಗಿದೆ. ಹೃದಯದ ಕಣ್ಣುಗಳಿಂದ ಛಾಯಾಗ್ರಾಹಕ ದೃಶ್ಯಗಳನ್ನು ನಿರೂಪಿಸಿದ್ದಾನೆ. 

ಇವೆಲ್ಲವುಗಳ ನಡುವೆ ಒಂದು ಮಾತು. ಇದು ಮಲ್ಟಿಪ್ಲೆಕ್ಸ್‌ನ ಬುದ್ದಿಜೀವಿಗಳನ್ನು ಗುರಿಯಾಗಿರಿಸಿಕೊಂಡು, ಅಂತಾರಾಷ್ಟ್ರೀಯ ಚಿತ್ರವಿಮರ್ಶಕರನ್ನು ಉದ್ದೇಶವಾಗಿಟ್ಟುಕೊಂಡು ಮಾಡಿದ ಚಿತ್ರವಾದುದರಿಂದ ಅಥವಾ ನಿರ್ದೇಶಕರಲ್ಲಿ ಮತ್ತು ನಿರ್ಮಾಪಕರಲ್ಲಿ ಆ ‘ಮೇಲರಿಮೆ’ ಗಟ್ಟಿಯಾಗಿರುವುದರಿಂದ ಜನಸಾಮಾನ್ಯರನ್ನು ತಲುಪುವುದು ಕಷ್ಟ.

No comments:

Post a Comment