Saturday, August 24, 2013

ಮದ್ರಾಸ್ ಕೆಫೆ: ಒಂದು ರಾಜಕೀಯ ಹತ್ಯೆ ಮತ್ತು ಅದರ ಒಳಸುಳಿಗಳು....

ಸತ್ಯಘಟನೆಗಳನ್ನು ಸಂಗ್ರಹಿಸಿ, ಅದನ್ನು ಸಿನಿಮಾ ಮಾಡುವಾಗ ‘ಸಾಕ್ಷ ಚಿತ್ರ’ವೂ ಅಗದೆ, ಸಿನಿಮಾವೂ ಆಗದೆ ಇರುವ ಅಪಾಯವಿದೆ. ಕನ್ನಡದಲ್ಲಿ ರಾಜೀವ್‌ಗಾಂಧಿ ಹಂತಕರನ್ನು ಬಂಧಿಸುವ ಕತೆಯೊಂದು ‘ಸೈನೈಡ್’ ಹೆಸರಲ್ಲಿ ತೆರೆಗಿಳಿದಿತ್ತು. ನಿರ್ದೇಶಕನ ಪ್ರಯತ್ನ ಉತ್ತಮವಾಗಿಯೇ ಇತ್ತಾದರೂ, ಸೈನೈಡ್ ಪೂರ್ಣವಾಗಿ ಒಂದು ಚಿತ್ರವಾಗಿ ಮನಸ್ಸನ್ನು ಆವರಿಸುವಲ್ಲಿ ಸಫಲವಾಗಲಿಲ್ಲ. ಎಲುಬುಗಳನ್ನು ಜೋಡಿಸುವಲ್ಲಿ ನಿರ್ದೇಶಕ ಯಶಸ್ವಿಯಾದರೂ, ಅದಕ್ಕೆ ಮಾಂಸವನ್ನು ತುಂಬಿ, ಸಿನಿಮಾವೆಂಬ ಆತ್ಮವನ್ನು ಆವಾಹಿಸುವಲ್ಲಿ ವಿಫಲರಾಗುತ್ತಾರೆ. ಈ ಕಾರಣದಿಂದಲೇ ರಾಜೀವ್‌ಗಾಂಧಿಯ ಹತ್ಯೆಯ ದುರಂತವನ್ನು ಆಧರಿಸಿ ಪ್ರತಿಭಾವಂತ ನಿರ್ದೇಶಕ ಶೂಜಿತ್ ಸರಕಾರ್ ‘ಮದ್ರಾಸ್ ಕೆಫೆ’ ಮಾಡಲು ಹೊರಟಾಗ, ಇದು ಎಷ್ಟರ ಮಟ್ಟಿಗೆ ಸಿನಿಮಾ ಆಗಬಹುದು ಎನ್ನುವ ಅನುಮಾನ ಎಲ್ಲರನ್ನೂ ಕಾಡಿತ್ತು. ಆದರೆ ಎಲ್ಲ, ಅನುಮಾನ, ಆತಂಕಗಳನ್ನು ಒದ್ದು, ಒಂದು ಪರಿಪೂರ್ಣ ಸಿನಿಮಾವಾಗಿ ‘ಮದ್ರಾಸ್ ಕೆಫೆ’ ಮೂಡಿ ಬಂದಿದೆ. ಚಿತ್ರದ ಆರಂಭದಿಂದ ಕೊನೆಯವರೆಗೂ ಕುತೂಹಲವನ್ನು ಕಾಯ್ದುಕೊಂಡೇ, ರಾಜೀವ್‌ಗಾಂಧಿಯ ಹತ್ಯೆಯ ಹಿನ್ನೆಲೆಯಲ್ಲಿರುವ ರಾಜಕೀಯಗಳ ಸಿಕ್ಕುಗಳನ್ನು ಬಿಡಿಸಲು ಪ್ರಯತ್ನಿಸುತ್ತದೆ ಈ ಚಿತ್ರ. ಒಂದು ಅಪರೂಪದ ಥ್ರಿಲ್ಲರ್ ಚಿತ್ರವನ್ನು ನೋಡಿದ ಅನುಭವ ನಮ್ಮದಾಗುತ್ತದೆ.

ಚಿತ್ರದ ನಾಯಕ ಜಾನ್‌ಅಬ್ರಾಹಾಂ ಆಗಿರುವುದರಿಂದ ಚಿತ್ರದ ಕುರಿತಂತೆ ಕೆಲವು ಪೂರ್ವಾಗ್ರಹಗಳನ್ನು ಇಟ್ಟುಕೊಂಡೇ ನಾವು ಚಿತ್ರಮಂದಿರ ಪ್ರವೇಶಿಸಿರುತ್ತೇವೆ. ಅವನು ರಾ ಏಜೆಂಟ್ ಅಂದ ಮೇಲೆ, ಒಂಟಿ ನಾಯಕನ ಸಾಹಸಗಳನ್ನು ಅವನ ಅಭಿಮಾನಿಗಳು ನಿರೀಕ್ಷಿಸಿದರೆ ಅವರಿಗೆ ನಿರಾಸೆ ಕಟ್ಟಿಟ್ಟ ಬುತ್ತಿ. ಇಲ್ಲಿ ಜಾನ್ ಅಬ್ರಹಾಂ ಮೇಜರ್ ವಿಕ್ರಮ್ ಸಿಂಗ್ ಪಾತ್ರವನ್ನು ನಿರ್ವಹಿಸಿದ್ದಾರೆ. ಶಾಂತಿಸೇನೆಯ ವೈಫಲ್ಯದ ಹಿನ್ನೆಲೆಯಲ್ಲಿ ಸಿಂಗ್‌ನ ಪ್ರವೇಶವಾಗುತ್ತದೆ. ಈ ಚಿತ್ರದಲ್ಲಿ ಭಾರತ ಸರಕಾರ ತಮಿಳರ ಹೋರಾಟ ಮತ್ತು ಎಲ್‌ಟಿಎಫ್(ಚಿತ್ರದಲ್ಲಿ ಎಲ್ಲ ಹೆಸರುಗಳನ್ನು ಅಲ್ಪಸ್ವಲ್ಪ ಬದಲಿಸಲಾಗಿದೆ)ನ ನಾಯಕ ಅಣ್ಣಾ ಭಾಸ್ಕರನ್(ಪ್ರಭಾಕರನ್ ಪಾತ್ರ)ನನ್ನು ಬೇರೆ ಬೇರೆಯಾಗಿ ಇಟ್ಟು ತನ್ನ ಯುದ್ಧ ತಂತ್ರವನ್ನು ಹೆಣೆಯುತ್ತದೆ. ಆದುದರಿಂದ ಅಣ್ಣಾನ ಬದಲಿಗೆ ತಮಿಳು ಹೋರಾಟಕ್ಕೆ ಪರ್ಯಾಯ ನಾಯಕನನ್ನು ಒದಗಿಸುವುದು ಶಾಂತಿಯ ಪಡೆಯ ಚಟುವಟಿಕೆ ಯಶಸ್ವಿಯಾಗಲು ಅನಿವಾರ್ಯ ಎಂದು ಅಭಿಪ್ರಾಯ ಪಡುತ್ತದೆ.. ಅಣ್ಣಾ ಭಾಸ್ಕರನ್ ಎಲ್ಲಿಯವರೆಗೆ ಇರುತ್ತಾನೆಯೋ ಅಲ್ಲಿಯವರೆಗೆ ಶ್ರೀಲಂಕಾದಲ್ಲಿ ತಮಿಳರು ಶಾಂತಿಯಿಂದ ಬದುಕಲು ಸಾಧ್ಯವಿಲ್ಲ. ಯಾಕೆಂದರೆ, ಅಣ್ಣಾನಿಗೆ ಇಡೀ ಜಾಫ್ನಾದ ಸೂತ್ರ ತನ್ನ ಕೈಯಲ್ಲಿರಬೇಕಾಗಿದೆ. ಆದುದರಿಂದ ಅಣ್ಣಾನನ್ನು ಬಂಧಿಸುವ ಪ್ರಕ್ರಿಯೆಗಾಗಿ ಮೇಜರ್ ವಿಕ್ರಮ್ ಸಿಂಗ್‌ನನ್ನು ರಾ ಏಜೆಂಟ್ ಆಗಿ ಜಾಫ್ನಾಕ್ಕೆ ಕಳುಹಿಸಲಾಗುತ್ತದೆ.

 ರಾ ಏಜೆಂಟ್ ಸಾಹಸಗಳ ಕುರಿತಂತೆ ಬಾಲಿವುಡ್‌ನಲ್ಲಿ ಹಲವು ಚಿತ್ರಗಳು ಬಂದಿವೆ. ಏಕ್ ಥಾ ಟೈಗರ್‌ನಲ್ಲಿ ಸಲ್ಮಾನ್‌ನ ಹೊಡಿ ಬಡಿ ನೋಡಿದವರಿಗೆ ಜಾನ್ ಅಬ್ರಹಾಂ ಪಾತ್ರ ನಿರಾಸೆ ತರುವ ಸಾಧ್ಯತೆಯಿದೆ. ನಿರ್ದೇಶಕರು ಇಡೀ ಚಿತ್ರವನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆಂದರೆ, ಅತ್ಯಂತ ವಾಸ್ತವಿಕವಾಗಿ ಪ್ರತಿ ಫ್ರೇಮ್‌ನ್ನು ಸೆರೆ ಹಿಡಿಯಲು ಪ್ರಯತ್ನಿಸಿದ್ದಾರೆ. ಇಲ್ಲಿ ರಾ ಏಜೆಂಟ್‌ನ ಕೆಲಸ ತಂತ್ರಗಾರಿಕೆ ಮಾತ್ರ. ಅಣ್ಣಾನಿಗೆ ವಿರೋಧಿಗಳಾಗಿರುವ ಗುಂಪಿನೊಂದಿಗೆ ಮಾತುಕತೆ ನಡೆಸಿ, ಅಣ್ಣಾನ ವಿರುದ್ಧ ನಿಲ್ಲಿಸುವುದು. ಅಣ್ಣಾನನ್ನು ಬಂಧಿಸುವ ಅಥವಾ ಕೊಲ್ಲುವ ಶಾಂತಿ ಪಡೆಯ ದಾರಿಯನ್ನು ಸುಗಮ ಮಾಡಿಕೊಡುವುದು. ಆದರೆ ವಿಕ್ರಮ್ ಸಿಂಗ್ ಆರಂಭದಲ್ಲೇ ಇದರಲ್ಲಿ ಸೋಲನುಭವಿಸಬೇಕಾಗುತ್ತದೆ. ಶಾಂತಿ ಪಡೆಯ ಸೋಲಿನ ಹಿಂದಿರುವ ತನ್ನವರ ದ್ರೋಹ, ಅದಕ್ಕೆ ಬಲಿಯಾಗುವ ಅಮಾಯಕ ಸೈನಿಕರು, ಹೊಸದಿಲ್ಲಿಯ ರಾಜಕೀಯ ಇವೆಲ್ಲವನ್ನು ಸಿನಿಮಾದೊಳಗೆ ತರುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ವಿಕ್ರಮ್ ಸಿಂಗ್ ಈ ಒಳಸುಳಿಗಳ ನಡುವೆಯೇ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಾ, ಅಣ್ಣಾನ ಕೇಂದ್ರ ಸ್ಥಳವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗುತ್ತಾನೆ. ಶಾಂತಿ ಸೇನೆ ದಾಳಿ ನಡೆಸುತ್ತದೆ. ಆದರೆ ಅಣ್ಣಾ ಕೂದಲೆಳೆಯ ಅಂತರದಿಂದ ಜೀವವನ್ನು ಉಳಿಸಿಕೊಳ್ಳುತ್ತಾನೆ. ಇದೇ ಸಂದರ್ಭದಲ್ಲಿ ಭಾರತ ಸರಕಾರ ಶಾಂತಿಪಡೆಯನ್ನು ಹಿಂದೆಗೆದುಕೊಳ್ಳುವ ನಿರ್ಧಾರ ಮಾಡುತ್ತ.ದೆ. ಸರಕಾರ ವಿಸರ್ಜನೆಯಾಗಿ ಹೊಸ ಚುನಾವಣೆ ಘೋಷಣೆಯಾಗುತ್ತದೆ. ಲಂಕಾದಲ್ಲಿ ತಮಿಳರ ಕ್ಷೇಮ ತನ್ನ ಗುರಿ ಎಂದು ಮಾಜಿ ಪ್ರಧಾನಿ ಘೋಷಿಸುತ್ತಾರೆ. ಮುಂದೆ ಚುನಾವಣೆಯಲ್ಲಿ ಈ ಪ್ರಧಾನಿ ಗೆದ್ದು ಬಂದರೆ ತನ್ನ ನಾಶ ಸ್ಪಷ್ಟ ಎಂದು ಅರಿತುಕೊಂಡ ಅಣ್ಣಾ ರಾಜೀವ್‌ಗಾಂಧಿ ಕೊಲೆಯ ಸಂಚನ್ನು ಹೂಡುತ್ತಾನೆ. ಉತ್ತರಾರ್ಧದಲ್ಲಿ ರಾ ಈ ಸಂಚನ್ನು ಭೇದಿಸಿ, ರಾಜೀವ್‌ಗಾಂಧಿಯನ್ನು ರಕ್ಷಿಸಲು ಯತ್ನಿಸುವುದು. ಆದರೆ ರಾಜಕೀಯ ಒಳಸುಳಿಗಳಿಂದಾಗಿ ಅದರಲ್ಲಿ ವಿಫಲವಾಗುವುದು ಒಟ್ಟುಕತೆ.

ಜಾನ್ ಅಬ್ರಹಾಂ ಇಡೀ ಚಿತ್ರದಲ್ಲಿ ತನ್ನ ಪಾತ್ರದ ಗಾಂಭೀರ್ಯವನ್ನು ಕಾಪಾಡಿಕೊಂಡಿದ್ದಾರೆ. ಅವರ ವೌನವೇ ಅವರ ಮಾತಿಗಿಂತ ಹೆಚ್ಚು ಪರಿಣಾಮಕಾರಿಯಾಗಿದೆ. ಬಿಗಿಯಾದ ಚಿತ್ರಕತೆ ಚಿತ್ರದ ಹೆಗ್ಗಳಿಕೆ. ಸಂಗೀತ ಚಿತ್ರದ ನಡೆಗೆ ಪೂರಕವಾಗಿದೆ. ರಾ ಅಧಿಕಾರಿ ಪಾತ್ರಕ್ಕೆ ಸಿದ್ಧಾರ್ಥ ಬಸು ನ್ಯಾಯ ನೀಡಿದ್ದಾರೆ. ಪತ್ರಕರ್ತೆಯ ಪಾತ್ರದಲ್ಲಿ ನರ್ಗೀಸ್ ಫಖ್ರಿ ಕಾಣಿಸಿಕೊಂಡಿದ್ದಾರೆ. ಇಡೀ ಚಿತ್ರದಲ್ಲಿ ಯಾರೂ ನಾಯಕರಲ್ಲ. ಎಲ್ಲರೂ ನಾಯಕರೇ. ಅಣ್ಣಾ ಪಾತ್ರದಲ್ಲಿ ಸಣ್ಣದಾಗಿ ಕಾಣಿಸಿಕೊಂಡಿರುವ ಅಜಯ್ ರತ್ನಂ ಕೂಡ ಯಾವುದೇ ಮೆಲೋಡ್ರಾಮಗಳಿಲ್ಲದೆ ತನ್ನ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದ ನಿರೂಪಣೆ, ನಟನೆ, ಸಂಭಾಷಣೆ ವಾಸ್ತವಕ್ಕೆ ಹತ್ತಿರವಾಗಿದೆ. ರಾಜೀವ್‌ಗಾಂಧಿಯ ಪಾತ್ರವನ್ನು ಎಲ್ಲೂ ರಾಜಕೀಯ ವೈಭವೀಕರಣಕ್ಕೆ ಅಥವಾ ಪೂರ್ವಾಗ್ರಹಕ್ಕೆ ಈಡಾಗದೆ ಕಟ್ಟಿಕೊಟ್ಟಿರುವುದು ನಿರ್ದೇಶಕನ ಪಕ್ವತೆಯನ್ನು ತೋರಿಸುತ್ತದೆ. ಆದುದರಿಂದಲೇ ಇಡೀ ಚಿತ್ರ ಇಷ್ಟವಾಗುತ್ತದೆ. ಕೆಲವೊಮ್ಮೆ ಚಿತ್ರದ ನಿಲುವು ನಮಗೆ ಒಪ್ಪಿಗೆಯಾಗದೇ ಇರಬಹುದು. ಆದರೆ ಒಂದು ಥ್ರಿಲ್ಲರ್ ರಾಜಕೀಯ ಚಿತ್ರವನ್ನು ನೋಡಲು ಹೋದ ನಿಮಗೆ ಸಿನಿಮಾವಾಗಿ ‘ಮದ್ರಾಸ್‌ಕೆಫೆ’ ಮೋಸ ಮಾಡುವುದಿಲ್ಲ.

No comments:

Post a Comment