Thursday, October 17, 2013

ಕತೆಗಾರ ಮತ್ತು ಪತ್ರಕರ್ತನ ತಿಕ್ಕಾಟ

 
ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ಎದುರಾಗುವ ಸವಾಲುಗಳು ಒಂದೆರಡಲ್ಲ. ಸದ್ಯದ ಸಂದರ್ಭದಲ್ಲಿ ಪತ್ರಿಕೋದ್ಯಮ ಎದುರಿಸುತ್ತಿರುವ ಸವಾಲು ಗಳೊಂದಿಗೆ ನೇರ ಸಂಬಂಧವನ್ನು ಇವು ಹೊಂದಿವೆ. ಕೆಲವು ವಿದ್ಯಾರ್ಥಿಗಳು ಕತೆ, ಕವಿತೆಗಳು ಬರೆಯುವುದು ಪತ್ರಿಕೋದ್ಯಮಕ್ಕಿರುವ ಅರ್ಹತೆ ಎಂದೇ ತಿಳಿದುಕೊಂಡಿದ್ದಾರೆ. ಮತ್ತು ಸಂದರ್ಶನಕ್ಕೆ ಬರುವಾಗ ತಾವು ಬರೆದಿರುವ ಕವಿತೆಗಳ ಕಟ್ಟನ್ನು ಜೊತೆ ತರುತ್ತಾರೆ. ಒಬ್ಬ ಪತ್ರಕರ್ತನಿಗೂ, ಕತೆಗಾರನಿಗೂ ಇರುವ ವ್ಯತ್ಯಾಸ ತಿಳಿಯದೇ ಇರುವ ಪರಿಣಾಮವಾಗಿಯೇ ಇಂದು ಪತ್ರಿಕೆಗಳಲ್ಲಿ ವರದಿಗಳು ಇರುವ ಜಾಗದಲ್ಲಿ ಕತೆಗಳಿರುತ್ತವೆ. ಕತೆಗಳಿರುವ ಜಾಗದಲ್ಲಿ ವರದಿಗಳಿರುತ್ತವೆ. ಕತೆಗಾರನಾದ ವನು ಹೆಚ್ಚು ಸಂವೇದನಾಶೀಲನಾಗಿರುತ್ತಾನೆ. ಜೊತೆಗೆ ಅವನು ವರದಿಯೊಳಗೆ ತನಗೆ ತಿಳಿಯದೆಯೇ ಪ್ರವೇಶಿಸಿ ಬಿಟ್ಟಿರುತ್ತಾನೆ. ಇದೊಂದು ವಿಚಿತ್ರ ತಿಕ್ಕಾಟ. 

ವರದಿ ಮಾಡುವ ಸಂದರ್ಭದಲ್ಲಿ ನಾನು ಹೆಚ್ಚು ಭಾವೋದ್ವೇಗಗೊಳ್ಳುತ್ತಿದ್ದೆ. ಭಾವುಕನಾಗಿ ಬಿಡುತ್ತಿದ್ದೆ. ಆಗ ನನ್ನನ್ನು ಎಚ್ಚರಿಸಿದ್ದು ಒಬ್ಬ ಹಿರಿಯ ಪತ್ರಕರ್ತರು. ‘‘ನೀನೊಬ್ಬ ಒಳ್ಳೆಯ ಕತೆಗಾರ ನಿಜ. ಆದರೆ ಪತ್ರಕರ್ತ ಬೇರೆ, ಕತೆಗಾರ ಬೇರೇ. ಅವೆರಡೂ ಬೇರೆ ಬೇರೆ ಕ್ಷೇತ್ರ. ಪತ್ರಕರ್ತನ ಕ್ಷೇತ್ರದಲ್ಲಿ ಕತೆಗಾರನನ್ನು ಯಾವ ಕಾರಣಕ್ಕೂ ಪ್ರವೇಶಿಸಲು ಬಿಡಬೇಡ’’ ಎಂದಿದ್ದರು. ಅಂದಿನಿಂದ ನನ್ನೊಳಗಿನ ಕತೆಗಾರನಿಂದ ಪತ್ರಕರ್ತನನ್ನು ರಕ್ಷಿಸಿಕೊಳ್ಳಲು, ಹಾಗೆಯೇ ನನ್ನೊಳಗಿನ ಕತೆಗಾರನನ್ನು ಪತ್ರಕರ್ತ ನಿಂದ ರಕ್ಷಿಸಿಕೊಳ್ಳಲು ಪ್ರಯತ್ನ ನಡೆದೇ ಇದೆ. ಒಂದು ರೀತಿಯಲ್ಲಿ ಕತೆಗಾರ ಪತ್ರಕರ್ತನಾಗುವುದು ಅತ್ಯಂತ ಅಪಾಯಕಾರಿ. ಅದರ ಪರಿಣಾಮವನ್ನು ಇಂದಿನ ಪತ್ರಿಕೆಗಳು ಅನುಭವಿಸುತ್ತಿವೆ. ಜೊತೆಗೆ ಸಮಾಜವೂ ಅನುಭವಿಸುತ್ತಿದೆ. ವರದಿಗಳನ್ನು ಮಾಡುವ ಬದಲು ಕತೆಗಳನ್ನು ಹೆಣೆಯುವುದರಲ್ಲಿ ಮಗ್ನರಾಗಿದ್ದಾರೆ ಇಂದಿನ ಪತ್ರಕರ್ತರು. ಭಯೋತ್ಪಾದಕರ ಕುರಿತಂತೆ, ನಕ್ಸಲೀಯರ ಕುರಿತಂತೆ ಕತೆಕಟ್ಟಲು ಇವರಷ್ಟು ಜಾಣರು ಇನ್ನೊಬ್ಬರಿಲ್ಲ. ಕುಳಿತಲ್ಲೇ ಅವರು, ಭಯೋತ್ಪಾದಕರ ನಿಗೂಢತಾಣಗಳನ್ನು, ಸಂಚುಗಳನ್ನು ಸೊಗಸಾಗಿ ವಿವರಿಸಬಲ್ಲರು. ಯಾವ್ಯಾವ ಸಂಚು ಎಲ್ಲೆಲ್ಲಿ ನಡೆದಿದೆ, ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದಕರು ಹೇಗೆ ಅದರಲ್ಲಿ ಶಾಮೀಲಾಗಿದ್ದಾರೆ ಎಂಬಿತ್ಯಾದಿಗಳನ್ನು ರಸವತ್ತಾಗಿ ಪೋಣಿಸಬಲ್ಲರು. ಕತೆಗಾರರು ತಪ್ಪಿ ಪತ್ರಕರ್ತರಾದ ಪರಿಣಾಮ ಇದು.

ವರದಿಗಾರನದು ಯಾವತ್ತಿದ್ದರೂ ಮೂರನೆಯ ಪಾತ್ರ. ಅವನು ಅದರೊಳಗಿದ್ದೂ ಇಲ್ಲದಂತಿರಬೇಕು. ಒಂದು ರೀತಿಯಲ್ಲಿ ವರದಿ ಒಪ್ಪಿಸುವುದಷ್ಟೇ ಅವನ ಕರ್ತವ್ಯ. ಯಾರದು ತಪ್ಪು, ಯಾರದು ಸರಿ ಎನ್ನುವುದನ್ನು ನಿರ್ಣಯಿಸುವ ಅಧಿಕಾರವೂ ಅವನಿಗಿಲ್ಲ. ಅದನ್ನು ನಿರ್ಣಯಿಸಬೇಕಾದ ಅಧಿಕಾರವಿರುವುದು ಓದುಗರಿಗಷ್ಟೇ. ಓದುಗರ ಮೇಲೆ ತನ್ನದಾದ ಯಾವುದನ್ನೂ ಹೇರುವ ಅಧಿಕಾರ ವರದಿಗಾರನಿಗಿಲ್ಲ. ಘಟನೆಗೆ ಅವನೊಂದು ರೀತಿ ಮೂರನೆಯವನು. ನಿರ್ಭಾವುಕನು. ತನ್ನ ವರದಿಯಲ್ಲಿ ಕಣ್ಣೀರಿಡುವ ಹಕ್ಕೂ ಅವನಿಗಿಲ್ಲ. ಕಣ್ಣೀರಿಡುವುದೇನಿದ್ದರೂ, ಕರ್ತವ್ಯ ನಿರ್ವಹಿಸಿ ಮನೆಗೆ ತೆರಳಿದ ಮೇಲೆ. ಅದುವೇ ಅವನ ನಿಜವಾದ ಹೊಣೆಗಾರಿಕೆ. ಯಾಕೆಂದರೆ ಅವನಿಗೆ ಕಣ್ಣೀರು ತರಿಸಿದ್ದು ಓದುಗನಿಗೆ ಕಣ್ಣೀರು ತರಿಸಬೇಕಾಗಿಲ್ಲ. ಆದುದರಿಂದಲೇ ವರದಿಗಾರ ತನ್ನ ವರದಿಯಲ್ಲಿ ಯಾವತ್ತೂ ಕಣ್ಣೀರಿಡಬಾರದು. ವೈಯಕ್ತಿಕವಾದ ಯಾವ ಭಾವನೆಗಳೂ ಅದರಲ್ಲಿರಬಾರದು. ಯಾವ ವೈಭವೀಕರಣ, ರೋಚಕತೆ ಅದರಲ್ಲಿರಬಾರದು. ವಿಪರ್ಯಾಸ ನೋಡಿ. ಇತ್ತೀಚಿನ ದಿನಗಳಲ್ಲಿ ಟಿ.ವಿ.ಗಳಲ್ಲಿ ಯಾವುದೋ ಬರ್ಬರ ಅಪಘಾತ ಅಥವಾ ಆತ್ಮಹತ್ಯೆಗಳ ಸುದ್ದಿಗಳು ಪ್ರಕಟವಾಗುತ್ತಿರುತ್ತದೆ. ಒಂದೆಡೆ ವರದಿಗಾರ ಅದನ್ನು ರೋಚಕವಾಗಿ ಮಂಡಿಸುತ್ತಿರುತ್ತಾನೆ. ಇನ್ನೊಂದೆಡೆ ಆ ದೃಶ್ಯಗಳಿಗೆ ಹಿನ್ನೆಲೆ ಸಂಗೀತವನ್ನು ಅಳವಡಿಸಲಾಗಿರುತ್ತದೆ. ಸುದ್ದಿ ಸುದ್ದಿಯಾಗಿಯಷ್ಟೇ ನಮ್ಮನ್ನು ತಟ್ಟಬೇಕಾಗುತ್ತದೆ. ಇಲ್ಲಿ, ಟಿ. ವಿ.ಗಳು ಏನು ಮಾಡುತ್ತಿದೆಯೆಂದರೆ ಬಲವಂತವಾಗಿ ನಮ್ಮ ಎದೆಯೊಳಗೆ ಅದನ್ನು ನುಗ್ಗಿಸುವ ಕೆಲಸವನ್ನು ಮಾಡುತ್ತದೆ. ವರದಿಗಾರ ವರದಿ ಮಾಡುವ ಕೆಲಸವೊಂದನ್ನು ಬಿಟ್ಟು ಬೇರೆಲ್ಲವನ್ನೂ ಮಾಡುತ್ತಾನೆ. ತೀರ್ಪನ್ನು ಕೊಟ್ಟು, ಆರೋಪಿಗಳನ್ನು ಗಲ್ಲಿಗೇರಿಸುವ ಕೆಲಸವೂ ಅವನಿಂದಲೇ ನಡೆದು ಬಿಡುತ್ತದೆ. ಕೆಲವು ವರದಿಗಾರರಿಗಂತೂ ಸಂಪಾದಕೀಯ ಬರೆಯುವ ಚಟ. ಆ ಪತ್ರಿಕೆಗಳಿಗೆ ಸಂಪಾದಕೀಯವೆನ್ನುವುದೇ ಇರುವುದಿಲ್ಲ. ಇದ್ದರೂ ಅದರ ಸಂಪಾದಕೀಯ ಪುಟದಲ್ಲಿ ಸಂಪಾದಕೀಯದ ಹೆಸರಿನಲ್ಲಿ ವರದಿಗಳಿರುತ್ತದೆ. ವರದಿಗಳಿರಬೇಕಾದ ಜಾಗದಲ್ಲಿ ಸಂಪಾದಕೀಯವಿರುತ್ತದೆ. ಸಾಧಾರಣವಾಗಿ ಯಾವುದೇ ಪತ್ರಿಕೆ ವರದಿಗಳಲ್ಲಿ ತನ್ನ ನಿರ್ಣಯವನ್ನು ಹೇಳುವುದಿಲ್ಲ. ಹೇಳಿಕೊಳ್ಳಬಾರದು ಕೂಡ. ಇತರರ ಮಾತುಗಳನ್ನಷ್ಟೇ ವರದಿಯಾಗಿ ನೀಡುತ್ತವೆ. ಆ ಘಟನೆಯ ಬಗ್ಗೆ ಪತ್ರಿಕೆಯ ನಿಲುವು ಏನು ಎನ್ನುವುದನ್ನು ಪತ್ರಿಕೆಯ ಸಂಪಾದಕೀಯ ಪುಟ ನಿರ್ಣಯಿಸುತ್ತದೆ. ಆದರೆ ಕೆಲವು ಪತ್ರಿಕೆಗಳ ಸಂಪಾದಕೀಯ ಓದಿದರೆ, ಅದು ಘಟನೆಯ ಕುರಿತಂತೆ ಏನನ್ನು ಹೇಳುತ್ತದೆ ಎನ್ನುವುದೇ ಅರ್ಥವಾಗುವುದಿಲ್ಲ. ಅದೇ ಸಂದರ್ಭದಲ್ಲಿ ಅವುಗಳು ಪ್ರಕಟಿಸಿರುವ ವರದಿಗಳನ್ನು ಓದಿದಾಕ್ಷಣ ಆ ಪತ್ರಿಕೆಯ ನಿಲುವು ಏನು ಎನ್ನುವುದು ಅರ್ಥವಾಗಿ ಬಿಡುತ್ತದೆ. ಇದು ಇಂದಿನ ಪತ್ರಿಕೋದ್ಯಮದ ದುರಂತ ಕೂಡ.

ಹೆಚ್ಚಿನ ವರದಿಗಾರರು ರಾಜಕೀಯ ವ್ಯಕ್ತಿಗಳೊಂದಿಗೆ ಸಂಬಂಧಗಳನ್ನು ಹೊಂದಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಅದು ವರದಿಗಳ ಮೇಲೆ ತಿಳಿದೋ ತಿಳಿಯದೆಯೋ ಪ್ರಭಾವವನ್ನು ಬೀರಿಯೇ ಬೀರುತ್ತದೆ. ಆದುದರಿಂದಲೇ ವರದಿಗಾರನಿಗೆ ಯಾರೊಂದಿಗೂ ಸಂಬಂಧ ಇರಬಾರದು. ಸಂಪರ್ಕವಷ್ಟೇ ಇರಬೇಕು. ಸಂಪರ್ಕವಿಲ್ಲದೇ ಇದ್ದರೆ ವರದಿಗಾರರು ಸುದ್ದಿ ಮೂಲವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಇದೇ ಸಂದರ್ಭದಲ್ಲಿ ಸಂಪರ್ಕದಾಚೆಗಿನ ಸಂಬಂಧವನ್ನು ಇಟ್ಟುಕೊಂಡರೆ, ಸುದ್ದಿ ಸುದ್ದಿಯಾಗಿ ಉಳಿಯದೇ ವಿರೂಪಗೊಳ್ಳುವ ಸಾಧ್ಯತೆಗಳಿರುತ್ತದೆ. ಇವನ್ನೆಲ್ಲ ಒಳಗೊಳ್ಳುವಂತೆ ಪತ್ರಿಕೋದ್ಯಮ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವುದೆಂದರೆ ಸುಲಭ ಸಾಧ್ಯವಲ್ಲ. ಬೇರೆ ಯಾವುದೇ ತರಗತಿಗಳಲ್ಲಿ ಪ್ರವೇಶ ಸಿಗದೇ ಇದ್ದ ಕಾರಣ, ಎಂಸಿಜೆ ಅಥವಾ ಪತ್ರಿಕೋದ್ಯಮದಲ್ಲಿ ಎಂ.ಎ ಮಾಡುವ ವಿದ್ಯಾರ್ಥಿಗಳಿಂದ ಇವನ್ನು ನಿರೀಕ್ಷಿಸುವುದು ತೀರಾ ಕಷ್ಟ. ಹಾಗೆಯೇ ಪತ್ರಿಕೋದ್ಯಮವನ್ನು ಒಂದು ಪದವಿಯಾಗಿ ಕಲಿತು, ಅದರ ಅಂಕಪಟ್ಟಿಯ ಆಧಾರದಲ್ಲಿ ಕೆಲಸ ಹುಡುಕುತ್ತಾ ಹೋಗುವ ವಿದ್ಯಾರ್ಥಿ ಗಳಿಂದಲೂ ನಾವು ನಿರೀಕ್ಷೆ ಗಳನ್ನು ಇಟ್ಟುಕೊಳ್ಳುವುದು ತೀರಾ ಕಷ್ಟ .ಇಂದು ಎಂಸಿಜೆಯಿಂದ ಹೊರಬರುವ ವಿದ್ಯಾರ್ಥಿಗಳಲ್ಲಿ ಶೇ. 2ರಷ್ಟು ವಿದ್ಯಾರ್ಥಿಗಳಷ್ಟೇ ನಿಜಕ್ಕೂ ಪತ್ರಿಕೋದ್ಯಮಕ್ಕೆ ಅರ್ಹರಾಗಿರುತ್ತಾರೆ. ಪತ್ರಕರ್ತನಿಗೆ ಮೊತ್ತಮೊದಲಿರಬೇಕಾದುದು ತಾಳ್ಮೆ. ಇನ್ನೊಬ್ಬರ ಮಾತನ್ನು ಆಲಿಸುವ ತಾಳ್ಮೆ. ನಡೆದ ಘಟನೆಯನ್ನು ಕೂಲಂಕಷವಾಗಿ ವೀಕ್ಷಿಸುವ ತಾಳ್ಮೆ. ಇವೆರಡೂ ಇಂದಿನ ವಿದ್ಯಾರ್ಥಿಗಳಲ್ಲಿಲ್ಲ. ಇನ್ನೊಬ್ಬರ ಮಾತುಗಳನ್ನು ಆಲಿಸುವುದು ತನ್ನ ಹುದ್ದೆಯ ಘನತೆಗೆ ತಕ್ಕುದಲ್ಲ ಎಂಬ ತಪ್ಪು ಇಗೋಗಳಿಂದ ನರಳುತ್ತಿದ್ದಾರೆ ಹೆಚ್ಚಿನ ಪತ್ರಕರ್ತರು. ಇನ್ನೊಬ್ಬರನ್ನು ಮಾತನಾಡುವುದಕ್ಕೆ ಬಿಡದೆ ತಾವೇ ಮಾತನಾಡುವುದನ್ನು ಚಟವಾಗಿಸಿ ಕೊಂಡಿದ್ದಾರೆ. ಹಾಗೆಯೇ ವೀಕ್ಷಣೆ. ಯಾವುದೇ ಘಟನೆಯನ್ನು ಸಂಪೂರ್ಣವಾಗಿ ವೀಕ್ಷಿಸುವ ತಾಳ್ಮೆ ಇಂದಿನ ಪತ್ರಿಕೋದ್ಯಮಕ್ಕಿಲ್ಲ. ಸ್ಥಳಕ್ಕೆ ಭೇಟಿ ಕೊಡದೆಯೇ ಸುದ್ದಿಗಳನ್ನು ಮಾಡಿ ಎಷ್ಟು ಬೇಗ ತಲುಪಿಸಿಯೇನೂ ಎಂಬ ಆತುರ ಪತ್ರಕರ್ತರದು. ಇದರ ಪರಿಣಾಮವನ್ನು ವರದಿ ಅನುಭವಿಸಬೇಕಾಗುತ್ತದೆ. ತಪ್ಪು ವರದಿಗಳಿಗೆ, ಅಸ್ಪಷ್ಟ ವರದಿಗಳಿಗೆ, ಗೊಂದಲದ ವರದಿಗಳಿಗೆ ಇದೇ ಕಾರಣವಾಗಿದೆ. ‘ಯಾರು ಮೊತ್ತ ಮೊದಲು ವರದಿ ನೀಡಿದರು’ ಎನ್ನುವುದೇ ಇಂದು ಮುಖ್ಯ. ಯಾರು ಎಷ್ಟು ಸತ್ಯವಾದ, ಸ್ಪಷ್ಟವಾದ, ನಿಷ್ಪಕ್ಷಪಾತವಾದ ವರದಿ ನೀಡಿದರು ಎನ್ನುವುದು ಅನಂತರದ ವಿಷಯ ಎಂಬಂತಾಗಿದೆ. ಆದರೆ ನಿಜವಾದ ಪತ್ರಿಕೋದ್ಯಮದ ಉಳಿವು ‘ಬ್ರೇಕಿಂಗ್ ನ್ಯೂಸ್’ನಲ್ಲಿಲ್ಲ. ಇದನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ನಡೆಯಬೇಕಾಗಿದೆ.


 ಎಂಸಿಜೆ ವಿದ್ಯಾರ್ಥಿಗಳು ಕನಿಷ್ಠ ತಾನು ನಿಜಕ್ಕೂ ಕಲಿಯುವುದು ಇನ್ನು ಮುಂದೆ ಎಂಬ ಅರಿವನ್ನು ಹೊಂದಿದರೆ ಒಂದಿಷ್ಟಾದರೂ ಬೆಳೆಯಬಹುದು. ಯಾವುದೇ ಪತ್ರಿಕೆಗಳಲ್ಲಿ ಎಂಸಿಜೆ ವಿದ್ಯಾರ್ಥಿಗಳಿಗೆ ನೇರವಾಗಿ ಕೆಲಸವನ್ನು ನೀಡುವುದು ಅಪಾಯಕಾರಿ. ಅವರನ್ನು ಪತ್ರಿಕೋದ್ಯಮಕ್ಕೆ ಸಿದ್ಧಗೊಳಿಸುವ ಕೆಲಸ ನಡೆಯಬೇಕಾಗಿದೆ. ಹಿರಿಯ ಪತ್ರಕರ್ತರಿಂದ ಅವರನ್ನು ಉಜ್ಜಿ, ತಿದ್ದಿ, ತೀಡಿ ಬಯಲಿಗಿಳಿಸಬೇಕು. ಕನಿಷ್ಠ ಒಂದೈವತ್ತು ಪುಸ್ತಕಗಳನ್ನು ಕೊಟ್ಟು ಇದನ್ನು ಒಂದು ವರ್ಷದೊಳಗೆ ಓದಿ ಮುಗಿಸಿ ಎಂಬ ಆದೇಶ ನೀಡಬೇಕಾಗಿದೆ. ಸರಳ ಭಾಷೆ, ಸರಳ ವಾಕ್ಯ ಹೀಗೆ ಅವರನ್ನು ಸರಳರನ್ನಾಗಿಸುವ ಕೆಲಸ ಮೊದಲು ನಡೆಯಬೇಕು. ಭಾಷೆಯನ್ನು ಹೊಸದಾಗಿ ಕಲಿಸಬೇಕು. ಬೆಳೆಸಬೇಕು. ಅದರ ಮೂಲಕ ಪತ್ರಿಕೋದ್ಯಮ ಬೆಳೆಯುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಸಮಾಜಕ್ಕೆ ಪ್ರಯೋಜನವಾಗುತ್ತದೆ.

2 comments:

  1. ಪತ್ರಕರ್ತನಿಗೆ ಹಾಗು ಕತೆಗಾರನಿಗೆ ಒಳ್ಳೆಯ ಎಚ್ಚರ ನೀಡಿದ್ದೀರಿ. ಇನ್ನು ಕತೆಗಾರನಿಗೆ ಭಾಷೆಯ ವ್ಯಾಕರಣ ತಿಳಿಯದಿದ್ದರೂ ನಡೆಯುತ್ತದೆ. ಉದಾಹರಣೆಗೆ ನಮ್ಮ ಹಳ್ಳಿಯ ಅನೇಕ ಕತೆಗಾರರಿಗೆ ಭಾಷೆಯ ಶುದ್ಧತೆ ಇಲ್ಲದಿದ್ದರೂ ಅವರು ಅದ್ಭುತ ಕಥೆಗಾರರು. ಆದರೆ ಪತ್ರಕರ್ತರಿಗೆ ಶುದ್ಧ ಭಾಷೆ ಅನಿವಾರ್ಯ. ಇಲ್ಲವಾದರೆ ಅವರು ತಮ್ಮ ಓದುಗರನ್ನೂ ಸಹ ತಪ್ಪು ಭಾಷೆಗೆ ಎಳೆಯುತ್ತಾರೆ.

    ReplyDelete