Wednesday, October 9, 2013

ಪಂಥದಾಚೆಗೆ ವಿವೇಕಾನಂದರು

ಭಾರತದ ಮಣ್ಣಿನ ಸಾರಸತ್ವವನ್ನು ಹೀರಿ, ಬೆಳೆದು ನಿಂತ ಸಂತ ಸ್ವಾಮಿ ವಿವೇಕಾನಂದ. ನಮ್ಮ ನಮ್ಮ ಬೊಗಸೆ ಎಷ್ಟು ದೊಡ್ಡದಿದೆಯೋ ಅಷ್ಟರ ಮಟ್ಟಿಗೆ ಮಾತ್ರ ನಾವು ವಿವೇಕಾನಂದರನ್ನು ಪಡೆದುಕೊಳ್ಳಬಹುದು. ಅವರನ್ನು ತಮಗೆ ಬೇಕಾದಂತೆ ತಿದ್ದಿ, ತಮ್ಮ ಸಿದ್ಧಾಂತದ ಮುಖವಾಣಿಯಾಗಿ ಬಳಸಿಕೊಂಡವರೂ ಹಲವರಿದ್ದಾರೆ. ಯಾರಿಗೆ ಏನು ಬೇಕೋ ಅದನ್ನಷ್ಟೇ ವಿವೇಕಾನಂದರಲ್ಲಿ ನಿರೀಕ್ಷಿಸಿದವರೂ ಇದ್ದಾರೆ. ಆದರೆ ವಿವೇಕಾನಂದರು ಮಾತ್ರ ಯಾವುದೇ ಸಿದ್ಧಾಂತದ ಚೌಕಟ್ಟಿನಲ್ಲಿ ಹಿಡಿದರೆ ನುಣುಚಿಕೊಳ್ಳುತ್ತಾ ಹೋಗುತ್ತಾರೆ. ಇದೇ ಅವರ ವ್ಯಕ್ತಿತ್ವದ ಹೆಗ್ಗಳಿಕೆ. ಬಲಪಂಥೀಯರು ವಿವೇಕಾನಂದರನ್ನು ದುರುಪಯೋಗ ಪಡಿಸುತ್ತಿರುವ ಸಂದರ್ಭದಲ್ಲೇ, ನಿಜವಾದ ವಿವೇಕಾನಂದರ ಹುಡುಕಾಟವನ್ನು ಹಲವರು ಮಾಡಿದ್ದಾರೆ. ಬರೆದಿದ್ದಾರೆ. ಹಾಗೆ ಬರೆದಾಗಲೆಲ್ಲ ಬಲಪಂಥೀಯರು ವ್ಯಗ್ರರಾಗಿದ್ದಾರೆ. ಒಂದು ರೀತಿಯಲ್ಲಿ ಭಾರತದ ಪಾಲಿಗೆ ವಿವೇಕಾನಂದರು ಅಪ್ರಿಯ ಸತ್ಯ.

 ‘ಕಮ್ಯುನಿಸ್ಟರ ದೃಷ್ಟಿಯಲ್ಲಿ ವಿವೇಕಾನಂದರು’ ಹೇಗಿರುತ್ತಾರೆ ಎನ್ನುವ ಕುತೂಹಲಕ್ಕೆ ಉತ್ತರವಾಗಿ ವಿ. ಎಸ್. ಎಸ್. ಶಾಸ್ತಿಯವರು ತನ್ನ ಸಂಗ್ರಹಾನುವಾದನ್ನು ನೀಡಿದ್ದಾರೆ. ಕೆ. ದಾಮೋದರನ್, ಬಿನಯ್ ಕೆ. ರಾಯ್, ನಂಬೂದರಿಪಾದ್, ಸಿ. ರಾಜೇಶ್ವರ ರಾವ್, ಎ. ಬಿ. ಬರ್ಧನ್ ಅವರು ವಿವೇಕಾನಂದರು ನೋಡಿದ ಬಗೆಯೇ ‘ಕಮ್ಯುನಿಸ್ಟರ ದೃಷ್ಟಿಯಲ್ಲಿ ವಿವೇಕಾನಂದರು’. ಈ ಮೂಲಕ ವಿವೇಕಾನಂದರನ್ನು ಹಿಂದುತ್ವದ ಗೋಡೆಗಳಾಚೆಗಿರುವ ವಿವೇಕಾನಂದರ ಪರಿಚಯ ನಮಗಾಗುತ್ತದೆ. ಸಂಘಪರಿವಾರದ ಜನರು ವಿವೇಕಾನಂದರನ್ನು ಸಂಕುಚಿತ ಗೊಳಿಸುತ್ತಿರುವುದರ ಕುರಿತಂತೆ ಪ್ರಬಲ ಆಕ್ಷೇಪಣೆಯನ್ನು ಈ ಕೃತಿ ಹೊಂದಿದೆ. ಅಷ್ಟೇ ಅಲ್ಲ, ವಿವೇಕಾನಂದರು ಹೊಂದಿದ್ದ ಪ್ರಖರ ವಿಚಾರವಾದದ ಕುರಿತಂತೆ ಈ ಕೃತಿ ಗಮನ ಸೆಳೆಯುತ್ತದೆ. ವಿವೇಕಾನಂದರು ಅತ್ಯಾಧುನಿಕ ಮನಸ್ಥಿತಿಯನ್ನು ಹೊಂದಿದ್ದರು ಎನ್ನುವ ಅಂಶವನ್ನು ಕೃತಿ ಹೊರಗೆಡಹುತ್ತದೆ. ಎಡಪಂಥೀಯ ವಿಚಾರಧಾರೆಗೆ ವಿವೇಕಾನಂದರನ್ನು ಒಗ್ಗಿಸುವ ಪ್ರಯತ್ನ ಕೃತಿಯಲ್ಲಿ ಎದ್ದು ಕಾಣುತ್ತದೆಯಾದರೂ, ವಿವೇಕಾನಂದರೂ ಆ ಪ್ರಯತ್ನವನ್ನು ಮೀರಿ ನಮ್ಮಿಳಗೆ ಬೆಳೆಯುತ್ತಾರೆ. ಹೇಗೆ ವಿವೇಕಾನಂದರೂ ಬಲಪಂಥೀಯರ ನಿಲುವಿಗೆ ಒಗ್ಗಿಗೊಳ್ಳುವುದಿಲ್ಲವೋ ಹಾಗೆಯೇ ಎಡಪಂಥೀಯ ಕೈಗೂ ಸಿಗುವುದಿಲ್ಲ. ನವಕರ್ನಾಟಕ ಪ್ರಕಾಶನ ಹೊರತಂದಿರುವ ಕೃತಿಯ ಮುಖಬೆಲೆ 60 ರೂ.

1 comment:

  1. ಬಲ ಪಂಥೀಯರು ಹಾಗು ಎಡ ಪಂಥೀಯರು ಎಂದು ಹೇಳುವದು, ಕೇವಲ economic policy ಅಲ್ಲವೆ? ಆ ಪದಗಳಿಗೆ communal ಅರ್ಥವನ್ನು ಏಕೆ ಜೋಡಿಸುತ್ತೀರಿ? ಪಂಥ ಯಾವುದೇ ಇದ್ದರೂ ಸಹ, ಆ ವ್ಯಕ್ತಿಯು secular ಅಥವಾ communal ಆಗಿರಬಹುದಲ್ಲವೆ?

    ReplyDelete