Thursday, November 21, 2013

ಹೊಸ ನುಡಿಗಟ್ಟು, ಹೊಸ ಧ್ವನಿ...

‘ಬಿಡುಗಡೆಯ ಬೆಳಕು’ ಸಾಹಿತ್ಯ ಅಕಾಡೆಮಿ ಸಂಪಾದಿಸಿರುವ 1980-2000ದ ವರೆಗಿನ ಆಯ್ದ ಕನ್ನಡದ ಕವನಗಳ ಸಂಕಲ. ಚಿ. ಶ್ರೀನಿವಾಸ ರಾಜು ಮತ್ತು ಚ. ಸರ್ವಮಂಗಳಾ ಅವರು ಈ ಕೃತಿಯನ್ನು ಸಂಪಾದಿಸಿದ್ದಾರೆ. ಸುಮಾರು ನೂರು ಕವಿಗಳ ನೂರೆಂಟು ಕವನಗಳು ಇಲ್ಲಿವೆ. 80ರ ದಶಕದ ಕವಿತೆಗಳು ಇಲ್ಲಿವೆಯಾದರೂ, ನವೋದಯ ಕಾಲವನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ ಆಯ್ಕೆಗಳು ನಡೆದಿರುವುದು ಕಾಣುವುದಿಲ್ಲ. ನವ್ಯ ಮತ್ತು ನವ್ಯೋತ್ತರಗಳ ಕವಿಗಳಿಗೆ ಹೆಚ್ಚು ಆದ್ಯತೆಯನ್ನು ನೀಡಲಾಗಿದೆ. ಬಹುತೇಕ ಯುವಕವಿಗಳು ಇಲ್ಲಿ ಪ್ರಾಧಾನ್ಯವನ್ನು ಪಡೆದಿದ್ದಾರೆ. ‘ಮಾಜಿ’ ಯುವಕವಿಗಳು ಹಿರಿಯರ ಸ್ಥಾನವನ್ನು ಅಲಂಕರಿಸಿದ್ದಾರೆ.
ಅಬ್ದುಲ್ ರಶೀದ್, ಅರವಿಂದ ಮಾಲಗತ್ತಿ, ಅಂಕುರ್ ಬೆಟಗೇರಿ, ಆನಂದ ಝಂಝರವಾಡ, ಜಯಂತಕಾಯ್ಕಿಣಿ, ಪ್ರತಿಭಾನಂದಕುಮಾರ್, ರಾಮಚಂದ್ರ ದೇವ, ಸತ್ಯಾನಂದ ಪಾತ್ರೋಟ, ಸಿದ್ದಲಿಂಗಯ್ಯ ಮೊದಲಾದವರೆಲ್ಲ ಇಲ್ಲಿ ಒಟ್ಟು ಸೇರಿದ್ದಾರೆ. ಹೊಸ ನುಡಿಗಟ್ಟು, ಸಮಕಾಲೀನತೆ, ಲವಲವಿಕೆ, ಜೀವಪರತೆ ಇಲ್ಲಿರುವ ಹೆಚ್ಚಿನ ಕವಿತೆಗಳ ಹೆಗ್ಗಳಿಕೆ. ಹಾಗೆಯೇ ಇನ್ನಷ್ಟು ಬೆಳೆಯಬೇಕಾದ ಎಳೆಕವಿಗಳನ್ನೂ ಗುರುತಿಸಿ ಅವರ ಕವಿತೆಗಳನ್ನು ಇಲ್ಲಿ ಸೇರಿಸಲಾಗಿದೆ. ಇದೊಂದು ರೀತಿಯಲ್ಲಿ, ಕನ್ನಡದ ಹೊಸ ಧ್ವನಿಯ ಹುಡುಕಾಟದ ಗುರಿಯನ್ನು ಹೊಂದಿದಂತಿದೆ. ಕನ್ನಡ ಬದುಕಿನ ಬೆಸುಗೆ-ಬಿರುಕು, ಒಗಟು-ಒಡಕುಗಳನ್ನು, ಅನನ್ಯತೆಯನ್ನು ಇಲ್ಲಿರುವ ಕವಿತೆಗಳಲ್ಲಿ ಕಾಣಬಹುದು. ಅಧ್ಯಯನದ ಉದ್ದೇಶವುಳ್ಳವರಿಗೂ ಇದೊಂದು ಅಪರೂಪದ ಸಂಕಲನವಾಗಬಲ್ಲುದು.
ಸಾಹಿತ್ಯ ಅಕಾಡೆಮಿ ಹೊರತಂದಿರುವ ಈ ಕವನಸಂಕಲನದ ಮುಖಬೆಲೆ 170 ರೂಪಾಯಿ.

1 comment:

  1. ಮಾಹಿತಿಗಾಗಿ ಧನ್ಯವಾದಗಳು.

    ReplyDelete