Tuesday, November 26, 2013

ವೇಶ್ಯೆ ಮತ್ತು ಇತರ ಕತೆಗಳು

ನವಿಲು
ಸುಂದರ ನವಿಲು ಆ ಕೇರಿಗೆ ಬಂತು.
ಎಲ್ಲರೂ ಅದರ ಕುಣಿತವನ್ನು ನೋಡಿ ಆನಂದಿಸುತ್ತಿದ್ದರು.
ಆದರೆ ಹಸಿವಿನಿಂದ ಕಂಗೆಟ್ಟ ಬಡವನೊಬ್ಬ ಅದರ ತುಂಬಿದ ತೊಡೆಗಳನ್ನು ನೋಡಿ ನಿಟ್ಟುಸಿರುಡುತ್ತಿದ್ದ

ಮಗ
ತುಂಬಾ ವರ್ಷಗಳ ಬಳಿಕ ನಗರದಿಂದ ಮಗ ಬಂದ ಎಂದು ತಾಯಿ ಸಂತೋಷ ಪಟ್ಟಳು.
ಅಂದು ರಾತ್ರಿ ಮಗ ಕೇಳಿದ ‘‘ಅಮ್ಮ, ಈ ಮನೆ, ಜಮೀನು ಮಾರೋಣವೆ?’’
ಬಂದದ್ದು ಮಗನಲ್ಲ ಎನ್ನುವುದು ಅವಳಿಗೆ ಸ್ಪಷ್ಟವಾಯಿತು.


ರುಚಿ
ತಾಯಿ ತೀರಿ ಹೋದ ದಿನದಿಂದ
ನನ್ನ ಮನೆಯಲ್ಲಿ
ಉಪ್ಪಿಗೆ ಉಪ್ಪಿನ ರುಚಿಯಿಲ್ಲ.

ಉಗ್ರಗಾಮಿ
‘‘ಸಾರ್...ಇಲ್ಲೊಬ್ಬ ಉಗ್ರಗಾಮಿಯನ್ನು ಬಂಧಿಸಲಾಗಿದೆ...’’
‘‘ಆದರೆ ಅವನು ಆ ಧರ್ಮದವನಲ್ಲವಲ್ಲ, ಮತ್ತೆ ಹೇಗೆ ಉಗ್ರಗಾಮಿಯಾಗಲು ಸಾಧ್ಯ?’

ಓದು...
‘‘ಸಾರ್...ನಾನೊಂದು ಕವಿತೆ ಬರೆದಿದ್ದೇನೆ...ದಯವಿಟ್ಟು ಓದಿ...’’
‘‘ನೋಡಪ್ಪ, ಓದು ಎನ್ನುವುದು ದುಂಬಿಯೊಂದು ಹೂವನ್ನು ಅರಸಿ ಹೋದಂತೆ. ಬಲವಂತವಾಗಿ ಹೂವೇ ದುಂಬಿಯನ್ನು ಅರಸಿ ಹೋಗಬಾರದು...’’

ಯಾಕೆ
‘‘ಸಾರ್, ಸಮಾಜಕ್ಕೆ ಬೇಕಾಗಿರುವ ಕೃತಿಯೊಂದನ್ನು ಬರೆದಿದ್ದೇನೆ’’
‘‘ಹೌದಾ, ಮತ್ಯಾಕೆ ಅದು ಇನ್ನೂ ನಿಷೇಧ ಆಗಿಲ್ಲ?’’

ಗಿಡ
ಅಷ್ಟೂ ದೂರದಿಂದ ಅವನು ಅವಳಿಗಾಗಿ ಹೂವಿನ ಜೊತೆಗೆ ಬಂದ.
ಆದರೆ ಅಲ್ಲಿಗೆ ತಲುಪುವಷ್ಟರಲ್ಲಿ ಅದು ಬಾಡಿತ್ತು.
ಅವಳು ನಕ್ಕು ನುಡಿದಳು. ‘‘ಹೂ ತರುವ ಬದಲು, ಅದರ ಬೀಜವನ್ನು ತರಬಾರದಿತ್ತೆ...ನಮ್ಮ ಮನೆಯ ಹಿತ್ತಲಲ್ಲಿ ಬಿತ್ತಿ, ಪ್ರತಿ ದಿನ ಅರಳುವುದನ್ನು ನೋಡಬಹುದಿತ್ತು’’

ಚಿನ್ನ
ಹುಡುಗಿಯನ್ನು ಮೈತುಂಬಾ ಚಿನ್ನದ ಜೊತೆಗೆ ಗಂಡನ ಮನೆಗೆ ಕಳುಹಿಸಿದರು.
ಎಲ್ಲರೂ ಚಿನ್ನವನ್ನು ಮುಟ್ಟಿ ನೋಡಿ ಆನಂದಿಸಿದರು.
ಹುಡುಗಿ ತಾನೆಲ್ಲಿದ್ದೇನೆ ಎಂದು ಕನ್ನಡಿಯನ್ನೊಮ್ಮೆ ನೋಡಿದಳು.

ಕಲೆ
ದೇವಸ್ಥಾನದ ಕಲ್ಲು ಗೋಡೆಯ ಮೇಲೆ ಶಿಲಾಬಾಲಿಕೆ.
ಯಾರೋ ಕಲೆ ಎಂದರು.
ಮಬ್ಬುಗತ್ತಲಲ್ಲಿ ಹೊಟ್ಟೆ ಪಾಡಿಗೆ ದೀಪದ ಕಂಬದ ಬುಡದಲ್ಲಿ ಒರಗಿನಿಂತ ಬಾಲೆ.
‘‘ವೇಶ್ಯೆ’’ ಎಂದರು.

1 comment: