Saturday, December 28, 2013

ನನ್ನ ಷರಟಿನ ದುಃಖ ಯಾರಿಗೂ ಬರಬಾರದು...

 ‘‘ಆಶಾ ಭಾವ ಹಾಗೂ ಪ್ರಾಮಾಣಿಕತೆಗಳಿಲ್ಲದೆ ಹೋದಲ್ಲಿ ಕವಿತೆ ಎನ್ನುವುದು ಹೇಳಿಕೆಗಳ ಕಟ್ಟಾಗಿಯಷ್ಟೇ ಉಳಿಯುವುದು. ಈ ಎಚ್ಚರದ ಕಾರಣದಿಂದಲೇ ಸುಬ್ಬು ಹೊಲೆಯಾರರು ತಮ್ಮ ಓರಗೆಯ ಕವಿಗಳ ನಡುವೆ ಭಿನ್ನವಾಗಿ ಕಾಣಿಸುತ್ತಾರೆ’’ ‘ಎಲ್ಲರ ಬೆರಳಲ್ಲೂ ಅಂಟಿಕೊಂಡ ದುಃಖವೇ...’ ಸುಬ್ಬು ಹೊಲೆಯಾರರ ಹೊಸ ಕವನ ಸಂಕಲನ. ಈ ಕುರಿತಂತೆ ಚ. ಹ. ರಘುನಾಥ್ ಬರೆದಿರುವ ಮೇಲಿನ ಸಾಲುಗಳು ಇಡೀ ಕವಿತೆಗೆ ಹಿಡಿದಿರುವ ಕನ್ನಡಿ. ಹಾಗೆ ನೋಡಿದರೆ ಕವಿತೆಯೆನ್ನುವುದು ಕೇವಲ ಕವಿಯ ಕನ್ನಡಿ ಮಾತ್ರವಲ್ಲ, ಅದು ಸಮಾಜಕ್ಕೆ ಹಿಡಿಯುವ ಕನ್ನಡಿಯೂ ಕೂಡ. ತನ್ನ ಹೃದ್ಯವಾದ ಭಾಷೆಯಲ್ಲಿ ಸಮಾಜದ ಎದೆಯನ್ನು ಕಲಕುವ ಸಾಲುಗಳನ್ನು ಇಲ್ಲಿ ಬರೆದಿದ್ದಾರೆ. ಅನ್ಯಾಯ, ಶೋಷಣೆಯ ವಿರುದ್ಧ ತಮ್ಮ ಕೆಂಡದಂತಹ ಸಿಟ್ಟನ್ನು ಇನ್ನಷ್ಟು ಮಾಗಿಸಿ, ಅದು ಕಲೆಯಾಗುವವರೆಗೆ ಸಹನೆಯಿಂದ ಕಾದು, ಕವಿತೆಯ ರೂಪ ಕೊಟ್ಟಿದ್ದಾರೆ ಸುಬ್ಬು ಹೊಲೆಯಾರ್. ಈ ಕೃತಿಗೆ 2010ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿ ದೊರಕಿದೆ.

ಕಪ್ಪು ಹುಡುಗನ ಒಂದು ಕಾವ್ಯ, ಕರಿಬೆಲ್ಲ, ಅನ್ನದ ಮೇಲಿನ ಹೆಸರು, ಇಂತಿ ನಿಮ್ಮ ಹನಿಯೊಂದು...ಸುಬ್ಬು ಹೊಲೆಯಾರ್ ಕವಿತೆಯ ಭಾಷೆ ಹೃದಯಕ್ಕೆ ಸಂಬಂಧಿಸಿದ್ದು ಎನ್ನುವುದನ್ನು ಸಾರುವ ಕವಿತೆಗಳಿವು. ಇಂತಹ ಹಲವು ಕವಿತೆಗಳು ಇಲ್ಲಿವೆ. ದಲಿತ ಹಿನ್ನೆಲೆಯ ನೋವುಗಳನ್ನು, ಮನುಷ್ಯನಿಗೆ ಎದೆಯ ನವಿರು ಭಾಷೆಯಲ್ಲೇ ಕಟ್ಟಿಕೊಟ್ಟು, ಅವರ ಹೃದಯ ಇಬ್ಬನಿಯಂತೆ ತೋಯುವುದನ್ನು ಕಾದು ಕುಳಿತ ಕವಿ ಸುಬ್ಬೂ ಹೊಲೆಯಾರ್. ಸಂಸ್ಕೃತಿ ಪ್ರಕಾಶನ ಬಳ್ಳಾರಿ(9483974089) ಪ್ರಕಟಿಸಿರುವ ಈ ಸಂಕಲನದ ಮುಖಬೆಲೆ 100.

ಹೊಸ ಬೋರ್ಡ್

ಮಲ್ಪೆಯಲ್ಲಿರುವ ಕಲಾವಿದ ಸತೀಶ್ ಕಲ್ಮಾಡಿ ಗ್ರಾಮೀಣ ಪ್ರತಿಭೆ. ವಾರ್ತಾ ಭಾರತಿ ಬಳಗದಲ್ಲೊಬ್ಬರು.  ಸ್ವಯಂ ಬಲದಿಂದ ಈ ಸೃಜನಶೀಲ ಕ್ಷೇತ್ರದಲ್ಲಿ ಬೆಳೆದವರು. ನಾಡಿನ ಹಲವು ಲೇಖಕರ  ಕೃತಿಗಳಿಗೆ ಇವರು ಮುಖಪುಟ ವಿನ್ಯಾಸ ಗೊಳಿಸಿದ್ದಾರೆ. ಪ್ರತಿವರ್ಷ ನನ್ನ ಗುಜರಿ ಅಂಗಡಿಯ ಬೋರ್ಡ್ ಬದಲಾಯಿಸಿ ಅಂಗಡಿಯ ಕಳೆ ಹೆಚ್ಚಿಸೂದು ಗೆಳೆಯ ಸತೀಶ್ ಅವರು. ಇದೀಗ ಹೊಸ ವರ್ಷಕ್ಕೆ ಗುಜರಿ ಅಂಗಡಿಗೆ ಹೊಸ ಬೋರ್ಡ್ ವಿನ್ಯಾಸ ಗೊಳಿಸಿದ್ದಾರೆ.

Tuesday, December 24, 2013

ತೆಂಗಿನ ಕಾಯಿ ಮತ್ತು ಇತರ ಕತೆಗಳು .

ಆಸ್ವಾದ
ಚಿಕನ್ ತಂದೂರಿ ತಿನ್ನುತ್ತಾ ಅವನು ಬರೆದ ‘ಸಸ್ಯಾಹಾರದ ಮಹತ್ವ’ ಕೃತಿಯನ್ನು ಜನರು ಮಟನ್ ಬಿರಿಯಾನಿ ತಿನ್ನುತ್ತಾ ಓದಿ ಆಸ್ವಾದಿಸಿದರು.

ಸ್ಫೋಟ
ಮನೆಯ ಸ್ಟೌ ಬ್ಲಾಸ್ಟ್ ಆಯಿತು. ಆಕೆ ಸುಟ್ಟ ಗಾಯಗಳೊಂದಿಗೆ ಸತ್ತಳು.
ಪತ್ರಿಕೆಗಳು ಬರೆದವು.
ಸ್ಟೌ ಬ್ಲಾಸ್ಟ್ ಆಗುವ ಮೊದಲೇ ಅವಳ ಹೃದಯ ಛಿದ್ರವಾಗಿದ್ದ ಕತೆ ಅವಳೊಂದಿಗೇ ಮುಕ್ತಾಯವಾಯಿತು.

ತೆಂಗಿನ ಕಾಯಿ
ಭಯಾನಕ ನೆರೆ. ಅವನ ಮನೆ ಕೊಚ್ಚಿ ಹೋಗುತ್ತಿತ್ತು. ಅದರಾಸೆ ಬಿಟ್ಟು ತೇಲಿ ಬರುತ್ತಿರುವ ತೆಂಗಿನಕಾಯಿಗಾಗಿ ಅವನು ಈಜುತ್ತಿದ್ದ.

ಬಿಡುಗಡೆ
ಒಬ್ಬ ಕೊಲೆ ಮಾಡಿದ. ಆದರೆ ನ್ಯಾಯವಾದಿಗಳ ಜಾಣಕ್ಷತೆಯಿಂದ ಬಿಡುಗಡೆಗೊಂಡ.
‘‘ನಾನು ಬಿಡುಗಡೆಗೊಂಡೆ’’ ಅಪರಾಧಿ ಹೇಳಿದ.
‘‘ನೀನು ಬಿಡುಗಡೆಗೊಂಡಿದ್ದು ನ್ಯಾಯಾಲಯದಿಂದ. ಆದರೆ ನಿನ್ನಿಂದ ಅಲ್ಲ’’ ಸಂತ ಉತ್ತರಿಸಿದ.

ಸಮಯ
ಗಡಿಯಾರ ಬಿದ್ದು ಪುಡಿಯಾಯಿತು.
ಅವನು ವ್ಯಥೆ ಪಟ್ಟ.
ಆದರೆ ಅದೆಷ್ಟೋ ಸಮಯವನ್ನು ಅವನು ಕೈಯಾರೆ ಕೊಂದಿದ್ದ.
ಅದಕ್ಕಾಗಿ ಅವನು ಎಂದೂ ಪಶ್ಚಾತ್ತಾಪ ಪಟ್ಟಿರಲಿಲ್ಲ.

ಹೆಸರು
ವೇಶ್ಯೆಯೊಬ್ಬಳ ಜೊತೆಗೆ ಯಾರೋ ಹೆಸರು ಕೇಳಿದರು.
ಆಕೆ ವಿಷಾದದಿಂದ ಹೇಳಿದಳು ‘‘ನನಗೆ ಹೆಸರಿಲ್ಲ. ನಿನಗೆ ಯಾವ ಹೆಸರು ಚಂದವೋ ಅದನ್ನೇ ನನಗೆ ಇಟ್ಟುಕೋ’’

Tuesday, December 17, 2013

ರೋಹಿತ್ ಚಕ್ರತೀರ್ಥ ಅವರ ಎರಡು ಕುತೂಹಲಕಾರಿ ಕೃತಿಗಳು


ಬದುಕಿಗೆ ಸ್ಫೂರ್ತಿಯಾಗುವ ಬದುಕು
 
ರೋಹಿತ್ ಚಕ್ರತೀರ್ಥ, ಕನ್ನಡದಲ್ಲಿ ವಿಜ್ಞಾನವನ್ನು ಬರೆಯುತ್ತಿರುವ ಲೇಖಕರ ಸಾಲಿನಲ್ಲಿ ಹೊಸ ಹೆಸರು. ಗಣಿತದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರೋಹಿತ್‌ರ ಆಸಕ್ತಿ , ಬದುಕು ಸಾಹಿತ್ಯವಾಗಿರುವುದರಿಂದಲೋ ಏನೋ, ಗಣಿತ, ವಿಜ್ಞಾನ ಇವೆಲ್ಲವನ್ನೂ ಸ್ವಾರಸ್ಯಕರವಾಗಿ ಕಟ್ಟಿಕೊಡುವ ಕಲೆ ಗೊತ್ತಿದೆ. ‘ಏಳು ಸಾವಿರ ವರ್ಷ ಬದುಕಿದ ಮನುಷ್ಯ’ ರೋಹಿತ್ ಚಕ್ರತೀರ್ಥ ಅವರ ಇನ್ನೊಂದು ಕುತೂಹಲಕ ಕೃತಿ. ಇದೊಂದು ರೀತಿಯಲ್ಲಿ ಬಿಡಿಬಿಡಿಯಾಗಿರುವ ವ್ಯಕ್ತಿ ಚಿತ್ರಗಳ ಸಂಗ್ರಹ. ಆದರೆ ಎಲ್ಲ ವ್ಯಕ್ತಿಗಳ ಬೇರು ತಮ್ಮ ವ್ಯಕ್ತಿತ್ವದ ಮೂಲಕ ಎಲ್ಲೋ ಒಂದೆಡೆ ಸಂದಿಸುತ್ತದೆ ಎನ್ನಿಸುತ್ತದೆ. ಆದುದರಿಂದಲೇ ಇಲ್ಲಿರುವ ವ್ಯಕ್ತಿಗಳು ಬೇರೆ ಬೇರೆಯಾಗಿದ್ದರು, ಎಲ್ಲೋ ಒಬ್ಬರು ಮತ್ತೊಬ್ಬರಿಗೆ ಸಂಬಂಧಿಸಿದವರು ಅನ್ನಿಸಿ ಬಿಡುತ್ತದೆ. ಇದು ಈ ಕೃತಿಯ ಹೆಗ್ಗಳಿಕೆಯೂ ಹೌದು.
 ಏಳು ಸಾವಿರ ವರ್ಷ ಬದುಕಿದ ಮನುಷ್ಯ ಪಾಲ್ ಏರ್ಡಿಶ್ ಕುರಿತಂತೆ ಇಲ್ಲೊಂದು ಕುತೂಹಲಕಾರಿ ಬರಹವಿದೆ. ಇದೊಂದು ರೀತಿಯಲ್ಲಿ ವಾಸ್ತವವೂ ಹೌದು. ಪುರಾಣವೂ ಹೌದು. ಒಬ್ಬ ಎಷ್ಟು ವರ್ಷ ಬದುಕಿದ್ದಾನೆ ಎನ್ನುವುದನ್ನು ನಿರ್ಧರಿಸುವುದು ಹೇಗೆ? ಅವನು ಮಾಡಿದ ಕೆಲಸದ ಮೂಲಕವೋ ಅಥವಾ ಆಯಸ್ಸಿನ ಮೂಲಕವೋ. ಎಪ್ಪತ್ತು ಮಹಾನ್ ಸಾಧಕರು ಪ್ರತಿಯೊಬ್ಬರೂ ನೂರು ನೂರು ವರ್ಷ ಕೂತು ಮಾಡುವಷ್ಟು ಕೆಲಸ ಮಾಡಿ, ತಾತ್ವಿಕವಾಗಿ ಏಳು ಸಾವಿರ ವರ್ಷ ಬದುಕಿ ಹೋದ ಮನುಷ್ಯನ ಕುರಿತಂತೆ ರೋಹಿತ್ ಇಲ್ಲಿ ಕಟ್ಟಿಕೊಡುತ್ತಾರೆ. ಇವರ ಜೊತೆ ಜೊತೆಗೆ ಖರಸೇಟ್ಜಿ, ಟಾ, ರೋನಾಲ್ಡ್, ರಾಮಾನುಜನ್, ಸತ್ಯೇನ್ ಬೋಸ್...ಹೀಗೆ ಈ ಜಗತ್ತಿನಲ್ಲಿ ದೊಡ್ಡ ದೊಡ್ಡ ಸಾಧನೆಯನ್ನು ಮಾಡಿ, ವಯಸ್ಸನ್ನು ಮೀರಿ ಬದುಕಿದವರ ಕುರಿತಂತೆ ಚಕ್ರತೀರ್ಥ ಅವರು ಹೃದಯಸ್ಪರ್ಶಿಯಾಗಿ ಕಟ್ಟಿಕೊಡುತ್ತಾರೆ. ಇವರೆಲ್ಲರ ಬದುಕು ಓದುಗನಲ್ಲಿ ಬದುಕುವ ಸ್ಫೂರ್ತಿಯೊಂದು ಬಿತ್ತುವುದರಲ್ಲಿ ಅನುಮಾನವಿಲ್ಲ.
ನವಕರ್ನಾಟಕ ಪ್ರಕಾಶನ(ದೂರವಾಣಿ-22203580) ಹೊರತಂದಿರುವ ಕೃತಿಯ ಮುಖಬೆಲೆ 70 ರೂ.
------------
ಪ್ರಕೃತಿ ಎಂಬ ಅದ್ಭುತ 

ನ್ಯಾಶನಲ್ ಜಿಯೋಗ್ರಫಿ ಎನ್ನುವ ಅದ್ಭುತ ಚಾನೆಲ್‌ನ್ನು ಪ್ರೀತಿಸದವರಿಲ್ಲ. ಜಗತ್ತನ್ನು, ಪ್ರಕೃತಿಯನ್ನು, ಪ್ರಾಣಿ, ಪಕ್ಷಿಗಳನ್ನು ಆ ಚಾನೆಲ್ ಹೃದಯಸ್ಪರ್ಶಿಯಾಗಿ ಮನುಷ್ಯನ ಮುಂದಿಟ್ಟಿದೆ. ಅಂತಹದೊಂದು ಚಾನೆಲ್‌ನಿಂದ ಸ್ಫೂರ್ತಿ ಪಡೆದವರಂತೆ, ರೋಹಿತ್ ಚಕ್ರತೀರ್ಥ ‘ದೇವ ಕೀಟದ ರತಿ ರಹಸ್ಯ’ ಎನ್ನುವ ಪುಟ್ಟ ಕೃತಿಯೊಂದನ್ನು ರಚಿಸಿದ್ದಾರೆ. ಜನಪ್ರಿಯ ವಿಜ್ಞಾನ ಲೇಖನಗಳ ಸರಮಾಲೆಗಳಲ್ಲಿ ಈ ಕೃತಿಯೂ ಒಂದು. ನಿಸರ್ಗದ ಸೌಂದರ್ಯದಿಂದ ವಂಚಿತನಾಗುತ್ತಾ, ಹೆಚ್ಚು ಹೆಚ್ಚು ಒಂಟಿಯಾಗಿ ಬದುಕುವುದೇ ಸದ್ಯಕ್ಕೆ ನಾಗರಿಕತೆಯ ಲಕ್ಷಣಗಳೆಂದು ನಾವು ಭಾವಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಪರಿಸರದ ಅದ್ಭುತಗಳನ್ನು, ಸೌಂದರ್ಯವನ್ನು ತನ್ನ ನವಿರಾದ ಭಾಷೆಯಲ್ಲಿ ಕಟ್ಟಿಕೊಟ್ಟಿದ್ದಾರೆ ಲೇಖಕರು. ಬೆಂಕಿಯೊಳಗೆ ವೀರಾಗ್ರಣಿಯಂತೆ ನುಗ್ಗುವ ರೋಬೊಟ್ ನೊಣ, ಮನುಷ್ಯರ ಆರೋಗ್ಯಕ್ಕಾಗಿ ಪ್ರಾಣ ತ್ಯಾಗ ಮಾಡುವ ಇಲಿಗಳು, ಕ್ಯಾನ್ಸರಿಗೆ ಸೆಡ್ಡು ಹೊಡೆವ ಹೆಗ್ಗಣ, ಸ್ತ್ರೀಲೋಲನನ್ನೇ ಆರಿಸುವ ಬಿನ್ನಾಣಗಿತ್ತಿ ಹೆಂಗಪ್ಸಿ, ಡೋಡೋ ಎಂಬ ಮೊದ್ದು ಹಕ್ಕಿ ನಾಶವಾದ ಬೆನ್ನಿಗೇ ಸರ್ವನಾಶವಾದ ಕ್ಯಾಲ್ವರಿ ವೃಕ್ಷ....ಹೀಗೆ ಪ್ರಕೃತಿಯ ಚೋದ್ಯಗಳನ್ನು ಮೊಗೆದು ಕೊಡುತ್ತದೆ ಈ ಪುಸ್ತಕ. ಒಂದಕ್ಕಿಂತ ಒಂದು ಸ್ವಾರಸ್ಯಕರವಾದ ಬರಗಳು ಇಲ್ಲಿವೆ. ಪ್ರಕೃತಿಯೊಳಗಿನ ಜೀವಿಗಳು ನಮಗಿಂತಲೂ ಹೆಚ್ಚು ಅದ್ಭುತ, ಆಧುನಿಕವಾಗಿರುವ, ಸಂವೇದನಾಶೀಲವಾಗಿರುವ ಅಂಶವನ್ನು ರೋಹಿತ್ ಕಟ್ಟಿಕೊಡುತ್ತಾರೆ.
ನವಕರ್ನಾಟಕ ಪ್ರಕಾಶನ ಹೊರತಂದಿರುವ ಈ ಕೃತಿ ಮುಖಬೆಲೆ 55 ರೂ.

Friday, December 13, 2013

ಆಯಿಶಾಳಿಗೆ ಉಗ್ರರೊಂದಿಗೆ ಸಂಬಂಧವಿಲ್ಲವಂತೆ!!


 
ಸಾಧಾರಣವಾಗಿ ಒಬ್ಬ ನಿರಪರಾಧಿಯನ್ನು ಪೊಲೀಸ್ ಅಧಿಕಾರಿ ಬಂಧಿಸಿರುವುದು ಬೆಳಕಿಗೆ ಬಂದರೆ, ಅಧಿಕಾರಿಯನ್ನು ಇಲಾಖೆ ಅಮಾನತು ಮಾಡಬಹುದು. ಆತನ ಮೇಲೆ ಬೇರೆ ರೀತಿಯಲ್ಲೂ ಕ್ರಮ ತೆಗೆದುಕೊಳ್ಳುವ ವ್ಯವಸ್ಥೆಯಿದೆ. ಒಬ್ಬ ಗ್ರಾಮ ಕರಣಿಕ ತಪ್ಪಾಗಿ ಒಂದು ಆರ್ಟಿಸಿ ತೆಗೆದುಕೊಟ್ಟಿರುವುದು ಬೆಳಕಿಗೆ ಬಂದರೆ ಅವನನ್ನು ವಜಾ ಮಾಡಲಾಗುತ್ತದೆ. ಎಲ್ಲ ವ್ಯವಸ್ಥೆಯಲ್ಲೂ ತಪ್ಪು ಮಾಡಿದವರಿಗೆ ತಕ್ಷಣ ಶಿಕ್ಷೆಯಿದೆ. ಆದರೆ ಮಾಧ್ಯಮ ಗಳಲ್ಲಿ ಮಾತ್ರ, ವರದಿಗಾರರು, ಸಂಪಾದಕರು ತಪ್ಪು ಮಾಹಿತಿಗಳನ್ನು ನೀಡುವುದು, ವದಂತಿಗಳನ್ನು ಹರಡುವುದು ತಮ್ಮ ಕರ್ತವ್ಯದ ಭಾಗ ಎಂದೇ ತಿಳಿದುಕೊಂಡು ಬರುತ್ತಿದ್ದಾರೆ. 
ಉದ್ದೇಶಪೂರ್ವಕ ವಾಗಿ ಸುಳ್ಳು ಕಂತೆಗಳನ್ನು ವರದಿಯ ರೂಪದಲ್ಲಿ ಕೊಟ್ಟ ವರದಿಗಾರನ ಮೇಲೆ ಕ್ರಮ ತೆಗೆದು ಕೊಳ್ಳುವುದಿರಲಿ, ಹಿಂದೆ ಮಾಡಿದ ವರದಿಗಾಗಿ ಸಣ್ಣದೊಂದು ಕ್ಷಮೆಯಾಚನೆ ಮಾಡುವ ಔದಾರ್ಯವನ್ನೂ ಪತ್ರಿಕೆಗಳು ಮಾಡುವುದಿಲ್ಲ. ಪತ್ರಿಕೆ ಉದ್ಯಮ ಮತ್ತು ಕೋಮುವಾದಿಯಾದಂತೆ ಅದು ಹೆಚ್ಚು ಹೆಚ್ಚು ಕ್ರೂರವಾಗುತ್ತಾ ಹೋಗುತ್ತಿದೆ. ಅದರ ಎದೆ ಕಲ್ಲಾಗಿದೆ. ನಾಚಿಕೆಯನ್ನಂತೂ ಅದು ಬಿಟ್ಟೇ ಬಿಟ್ಟಿದೆ. 
ಆಯಿಶಾ ಹವಾಲಾ ಪ್ರಕರಣಕ್ಕೆ ಸಂಬಂಧಿಸಿ ದಂತೆ ಇದನ್ನು ಬರೆಯಬೇಕಾಯಿತು. ಮೋದಿ ಸಮಾವೇಶದ ದಿನ ಪಾಟ್ನಾ ದಲ್ಲಿ ನಿಗೂಢ ರೀತಿಯಲ್ಲಿ ಸರಣಿ ಸ್ಫೋಟಗಳು ನಡೆದವು. ಇದರ ಬೆನ್ನಿಗೇ ಒಬ್ಬ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಲಾಯಿತು. ಆದರೆ ಮಾಧ್ಯಮ ಗಳು ಇದನ್ನು ಮುಚ್ಚಿ ಹಾಕಿದವು. ಇದಾದ ಬಳಿಕ ಮೂವರು ತರುಣರನ್ನು ಬಂಧಿಸ ಲಾಯಿತು. ಅವರ ಹೆಸರು ಮುಸ್ಲಿಮರದಲ್ಲ ಎನ್ನುವ ಒಂದೇ ಕಾರಣಕ್ಕೆ ಮಾಧ್ಯಮಗಳು ಅವರನ್ನು ರಕ್ಷಿಸಿದವು. ಅಮಾಯಕರೆಂದು ಕರೆದವು.
ಆದರೆ ಯಾವಾಗ ಬಂಧನ ಮಂಗಳೂರಿನ ಆಯಿಶಾ ಕಡೆಗೆ ತಿರುಗಿತೋ, ಆಯಿಶಾಳಿಗೆ ಅಂತಾರಾಷ್ಟ್ರೀಯ ಉಗ್ರರೂ ಸೇರಿದಂತೆ ಎಲ್ಲ ಸಂಬಂಧವನ್ನು ಕಟ್ಟಿ ಮಾಧ್ಯಮಗಳು ಪುಂಖಾನು ಪುಂಖವಾಗಿ ವರದಿ ಮಾಡತೊಡಗಿದವು. ಕರಾವಳಿಯಲ್ಲಿ ಒಂದು ದಿನಪತ್ರಿಕೆಯಂತೂ ಮುಖಪುಟದಲ್ಲಿ ಎಂಟು ಕಾಲಂಗಳಲ್ಲಿ ಎರಡು ಸಾಲುಗಳಲ್ಲಿ ಬೃಹತ್ ತಲೆಬರಹವೊಂದನ್ನು ಬರೆದು, ಆಯಿಶಾಳಿಗೂ ಪಾಟ್ನಾ ಸ್ಫೋಟಕ್ಕೂ ಸಂಬಂಧವನ್ನು ಕಲ್ಪಿಸಿತು. ಆಕೆ ಹವಾಲಾ ಮೂಲಕ ಉಗ್ರರಿಗೆ ಹಣ ಪೂರೈಸುತ್ತಿದ್ದಳು ಎಂದು ಬರೆಯಿತು. ಅಷ್ಟೇ ಅಲ್ಲ, ಆಕೆ ಹಣ ಪೂರೈಸಿದ ಇಬ್ಬರ ಕುರಿತಂತೆ ಇನ್ನೇನೇನೋ ಬರೆದು, ಅವರ ಚಾರಿತ್ರವನ್ನು ಬೀದಿಗೆ ಹಾಕಿತು. ಒಬ್ಬ ಕ್ಯಾನ್ಸರ್ ರೋಗಿಯ ತಲೆಗೂ ಉಗ್ರನ ಪಟ್ಟವನ್ನು ಕಟ್ಟಿತು. ಅವರನ್ನು ಅನಗತ್ಯವಾಗಿ ಪಾಟ್ನಾಕ್ಕೆ ಒಯ್ಯ ಲಾಯಿತು. ಅದರಿಂದ ಆಘಾತಗೊಂಡು ಆತನ ಸೋದರ ರೈಲಿನಲ್ಲೇ ಮೃತಪಟ್ಟರು. ಕ್ಯಾನ್ಸರ್ ರೋಗಿಯ ಮಕ್ಕಳು ಶಾಲೆ ತೊರೆಯಬೇಕಾಯಿತು. ಗರ್ಭಿಣಿ ಪತ್ನಿ ಆಘಾತದಿಂದ ಆಸ್ಪತ್ರೆ ಸೇರಬೇಕಾ ಯಿತು. ಇಡೀ ಕುಟುಂಬ ಜರ್ಝರಿತವಾಯಿತು. ಆಯಿಶಾ ಎನ್ನುವ ತರುಣಿಯ ಕುರಿತಂತೆ ಪುಂಖಾನುಪುಂಖವಾಗಿ ಕತೆಗಳನ್ನು ಹೆಣೆಯ ಲಾಯಿತು. ಯಾಸೀನ್ ಭಟ್ಕಳನಿಗೂ ಆಯಿಶಾ ರಿಗೂ ಸಂಬಂಧ ಇದೆ ಎಂದೂ ವರದಿ ಮಾಡಿ ದವು. ಆದರೆ ಹೀಗೆಲ್ಲ ವರದಿ ಮಾಡಿದ ಪತ್ರಿಕೆ, ಇಂದು ಮುಖಪುಟದಲ್ಲಿ, ಕೆಳಗಡೆ ಸಣ್ಣದಾಗಿಆಯಿಶಾಳಿಗೂ ಉಗ್ರರಿಗೂ ಯಾವುದೆ ಸಂಬಂಧ ಇಲ್ಲಎಂಬ ವರದಿಯೊಂದನ್ನು ಬರೆದು ಕೈ ತೊಳೆದುಕೊಂಡಿದೆ.ಹಾಗಾದರೆ ತಮ್ಮ ಪತ್ರಿಕೆಯ ಮುಖಪುಟದಲ್ಲಿ ಪುಂಖಾನುಪುಂಖವಾಗಿ ಆಕೆಗೂ ಉಗ್ರರಿಗೂ ಇರುವ ವಿವಿಧ ನಂಟಿನ ಕುರಿತಂತೆ ವರದಿಗಳು ಬಂತಲ್ಲ, ವಿವರ ನಿಮಗೆ ಎಲ್ಲಿಂದ ಸಿಕ್ಕಿತು? ಅದನ್ನು ವರದಿ ಮಾಡಿದ ವರದಿಗಾರ ಯಾರು? ಅದಕ್ಕೆ ಜವಾಬ್ದಾರಿ ಯಾರು? ವದಂತಿಗಳನ್ನು ಸುದ್ದಿಯೆಂದು ಪ್ರಕಟ ಮಾಡಿದ ರಲ್ಲ, ಈಗ ತಪ್ಪು ವರದಿ ಮಾಡಿದ ಪತ್ರಕರ್ತನ ವಿರುದ್ಧ ಏನು ಕ್ರಮ ತೆಗೆದುಕೊಂಡಿರಿ? ತಪ್ಪು ವರದಿಗಳು ಒಂದು ಕುಟುಂಬವನ್ನು ಸರ್ವನಾಶ ಮಾಡಿದೆ. ಒಂದು ಜೀವವನ್ನು ಕೊಂದು ಹಾಕಿದೆ. ಮಕ್ಕಳನ್ನು ಶಾಲೆ ತೊರೆಯುವಂತೆ ಮಾಡಿದೆ. ಇಷ್ಟೆಲ್ಲ ಅನಾಹುತ ನಡೆಯಿತಲ್ಲ, ಇದನ್ನು ಹೇಗೆ ತುಂಬಿ ಕೊಡುತ್ತೀರಿ? ಹವಾಲಾ ಎನ್ನುವುದು ಉರುಳು ಹಾಕಿದಂತೆ ತಪ್ಪಿಸಿಕೊಳ್ಳುವ ಒಂದು ಅವ್ಯವಹಾರ. ಇಲ್ಲಿ ಆಯಿಶಾಳಿಗೆ ಸಿಗುವುದು ಸಣ್ಣ ಕಮಿಶನ್ ಮಾತ್ರ. ಇದರಿಂದ ಕೋಟಿ ಕೋಟಿ ಉಳಿತಾಯ ಮಾಡುವವರು ಭಾರೀ ಶ್ರೀಮಂತರು. ಇಂದು ಆಯಿಶಾ ಅಪರಾಧಿ ಹೌದು. ಹಾಗೆಯೇ ಅವಳಿಂದ ಹಣ ಪಡೆದುಕೊಂಡ ಎಲ್ಲ ಉದ್ಯಮಿ ಗಳೂ ಅಪರಾಧಿಗಳೇ.ಗುಜರಾತ್ ಸೇರಿದಂತೆ ಹಲವು ಉದ್ಯಮಿಗಳಿಗೆ ಇವರು ಹವಾಲಾ ಹಣ ಪೂರೈಸಿದ್ದಾರೆ. ಈಕೆಯಿಂದ ಪ್ರಯೋಜನ ಪಡೆದಿರುವುದು ಕೇವಲ ಮುಸ್ಲಿಮರಷ್ಟೇ ಅಲ್ಲ. ಗುಜರಾತಿನ ಮಾರ್ವಾಡಿಗಳಿಗೂ ಈಕೆಯಿಂದ ಹಣ ಪೂರೈಕೆಯಾಗಿದೆ. ಒಂದು ಕಾಲದಲ್ಲಿ ಅಂದಿನ ಗೃಹ ಸಚಿವ ಎಲ್.ಕೆ.ಅಡ್ವಾಣಿ ಮೇಲೆಯೂ ಹವಾಲಾ ಆರೋಪ ಬಂದಿರುವು ದನ್ನು ನಾವು ನೆನಪಿನಲ್ಲಿಡಬೇಕು. ಹೀಗಿರುವಾಗ ಹವಾಲಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸ ಲ್ಪಟ್ಟ ಆಯಿಶಾಳ ತಲೆಗೆ ಪಾಟ್ನಾ ಸ್ಫೋಟದ ಕಳಂಕವನ್ನು ಯಾಕೆ ಕಟ್ಟಲಾಯಿತು.ಎನ್ಐಎ ಮಾಡಬೇಕಾದ ತನಿಖೆಯನ್ನು ಏಕಾಏಕಿ ಪೊಲೀಸರು ಮಂಗಳೂರಿಗೆ ಬಂದು ಯಾಕೆ ವಿಚಾರಣೆ ನಡೆಸತೊಡಗಿದರು. ಆಕೆಯ ತಲೆಗೆ ಉಗ್ರರ ಪಟ್ಟವನ್ನು ಕಟ್ಟಿ ಆಕೆಯನ್ನು ಇನ್ನಿತರರನ್ನು ಪಾಟ್ನಾಕ್ಕೆ ಯಾಕೆ ಹೊತ್ತೊಯ್ಯಲಾಯಿತು? ಉತ್ತರ ಸ್ಪಷ್ಟ. ಕೇವಲ ರಾಜಕೀಯ ಕಾರಣಕ್ಕಾಗಿ ಮಾತ್ರ. ಪಾಟ್ನಾದಲ್ಲಿ ನಡೆದ ಸರಣಿ ಸ್ಫೋಟಕ್ಕೂ ಮಂಗಳೂರಿಗೂ ನಂಟು ಕಲ್ಪಿಸುವುದು ಮೋದಿ ನೇತೃತ್ವದ ಬಿಜೆಪಿಗೆ ಅತ್ಯಗತ್ಯವಾಗಿತ್ತು.

ಪಾಟ್ನಾದ ಬಳಿಕ ಮೋದಿಯ ಸಮಾವೇಶ ಕರ್ನಾಟಕದಲ್ಲಿ ನಡೆಯುವುದಿತ್ತು. .17ರಂದು ರಾಜ್ಯದಲ್ಲಿ ನಡೆದ ಮೋದಿಯ ಸಮಾವೇಶಕ್ಕೆ ಪ್ರಚಾರದ ರೂಪದಲ್ಲಿ ಪಾಟ್ನಾ ಸ್ಫೋಟಕ್ಕೂ ಮಂಗಳೂರಿಗೂ ನಂಟು ಕಲ್ಪಿಸಲಾಗಿತ್ತು. ಪತ್ರಿಕೆಗಳೆಲ್ಲ ಮೂಲಕ ಮೋದಿಯನ್ನು ಹುತಾತ್ಮ ಮಾಡಲು ಹೊರಟಿ ದ್ದವು.
ಹವಾಲ ಎನ್ನುವ ಹಣದ ಅವ್ಯವಹಾರಕ್ಕೆ ಸಂಬಂಧಿಸಿದ ಪ್ರಕರಣವನ್ನು ಅನ್ಯಾಯವಾಗಿ ಪಾಟ್ನಾ ಸ್ಫೋಟಕ್ಕೆ ನಂಟು ಕಲ್ಪಿಸಿ, ಕರಾವಳಿ ಸೇರಿದಂತೆ ಇಡೀ ಕರ್ನಾಟಕದಲ್ಲಿ ತಲ್ಲಣವನ್ನು ಸೃಷ್ಟಿಸಲಾಯಿತು. ಮೋದಿಯ ರಾಜಕೀಯ ಸಮಾವೇಶದ ಬಲಿಪಶುಗಳಾಗಿ ಆಯಿಶಾ, ಝಬೇರ್ ಮತ್ತು ಇನ್ನಿತರ ಮೂವರನ್ನು ಬಳಸಲಾಯಿತು. ಮೋದಿಯ ಸಮಾವೇಶ ಯಶಸ್ವಿಯಾಯಿತು. ಇದೀಗ ಪಾಟ್ನಾದಲ್ಲಿ ನಡೆದ ಸ್ಫೋಟದ ಹಿಂದೆ ಯಾರಿದ್ದಾರೆ ಎನ್ನುವುದು ಇನ್ನೂ ಗೊತ್ತಾಗಿಲ್ಲ ಎಂದು ರಾಷ್ಟ್ರೀಯ ತನಿಖಾ ತಂಡ ಹೇಳಿದೆ.
ಇದೇ ಸಂದರ್ಭದಲ್ಲಿ ಬಿಹಾರ ಪೊಲೀಸರು ಬಂಧಿಸಿದ 10ಕ್ಕೂ ಅಧಿಕ ಮಂದಿಗೆ ಸ್ಫೋಟದೊಂದಿಗೆ ಯಾವುದೇ ಸಂಬಂಧ ಇಲ್ಲ ಎಂದೂ ತನಿಖಾ ತಂಡ ಹೇಳಿದೆ. ಪೊಲೀಸರಿಗೆ ಛೀಮಾರಿ ಹಾಕಿದೆ. ‘ಯಾವ ಅಧಾರದಲ್ಲಿ ಬಂಧಿಸಿದ್ದೀರಿ?’ ಎಂದು ಪೊಲೀಸರನ್ನು ಎನ್ಐಎ ಕೇಳಿದೆ. ಬಿಹಾರ ಪೊಲೀಸರು ಒಂದು ನಿರ್ದಿಷ್ಟ ರಾಜಕೀಯ ಕಾರಣಕ್ಕಾಗಿ ಪಾಟ್ನಾದ ಸ್ಫೋಟಕ್ಕೂ ಹವಾಲಾ ಪ್ರಕರಣಕ್ಕೂ ನಂಟು ಹಾಕಲು ಪ್ರಯತ್ನಿಸಿದ್ದರು ಎನ್ನುವುದು ಇದೀಗ ಬಯಲಾ ಗಿದೆ.
ಪೊಲೀಸರಿಗೆ ಮುಜುಗರ ಉಂಟಾಗಿದೆ. ಇದೇ ಸಂದರ್ಭದಲ್ಲಿ, ಆಯಿಶಾ ಮತ್ತು ಆಕೆಯೊಂದಿಗೆ ಹಣದ ವ್ಯವಹಾರ ಮಾಡಿದ ಹಲವು ಮುಸ್ಲಿಮ್ ಯುವಕರನ್ನು ಉಗ್ರರು ಎಂದು ಕರೆದ ಪತ್ರಿಕೆಯೇ, ಪುರಾವೆ ಇಲ್ಲ ಎನ್ನುವ ವರದಿ ಮಾಡಿದೆ. ಉಳಿದ ಪತ್ರಿಕೆಗಳು ಅಷ್ಟನ್ನೂ ಪ್ರಕಟಿಸಲು ಹಿಂದೇಟು ಹಾಕಿದೆ.
ನಾಳೆ ಆಯಿಶಾ ಮತ್ತು ಇನ್ನಿತರರು ಬಿಡುಗಡೆ ಆಗಬಹುದು. ಆದರೆ ಅವರಿಗೆ ಅಂಟಿದ ಉಗ್ರರು ಎನ್ನುವ ಕಳಂಕದಿಂದ ಅವರಿಗೆ ಬಿಡುಗಡೆ ಯಾಗಲು ಸಾಧ್ಯವೆ? ಸಮಾಜ ಆಕೆಯನ್ನು ನೆಮ್ಮದಿಯಿಂದ ಬದುಕುವುದಕ್ಕೆ ಬಿಡುತ್ತದೆಯೆ? ಮುಷ್ತಾಕ್ ಎನ್ನುವ ಕ್ಯಾನ್ಸರ್ ರೋಗಿ ಉಗ್ರ ಎನ್ನುವ ಪಟ್ಟದೊಂದಿಗೆ ಜೈಲಿನಲ್ಲಿ ಅನುಭವಿಸಿದ ಮಾನಸಿಕ ಹಿಂಸೆಗೆ ಪರಿಹಾರ ನೀಡುವವರು ಯಾರು? ತನ್ನ ಸೋದರನನ್ನು ನೋಡಲು ಪಾಟ್ನಾಗೆ ತೆರಳಿ, ಅದು ಸಾಧ್ಯವಾಗದೆ ರೈಲಿನಲ್ಲೇ ಮೃತಪಟ್ಟವನನ್ನು ಮರಳಿ ತರುವುದು ಸಾಧ್ಯವೆ? ಇದಕ್ಕೆಲ್ಲ ಯಾರು ಹೊಣೆ? ನಿಜಕ್ಕೂ ಉಗ್ರರು ಯಾರು? ಅಕ್ಷರವೆನ್ನುವ ಅಸ್ತ್ರವನ್ನು ಸ್ಫೋಟಕ ಗಳಾಗಿ ಬಳಸಿಕೊಂಡು, ತಮ್ಮ ದುರುದ್ದೇಶಕ್ಕಾಗಿ ಸಮಾಜದಲ್ಲಿ ಅದನ್ನು ಸ್ಫೋಟಿಸುವ ಪತ್ರಕರ್ತರು ಉಗ್ರರಲ್ಲವೆ?

Saturday, December 7, 2013

6-5=2: ಇಷ್ಟವಾಗುವ ಜೊಲ್ಲು, ತಿಗಣೆ...

 ಕನ್ನಡ ಚಿತ್ರೋದ್ಯಮದಲ್ಲಿ ಹೊಸ ತಲೆಮಾರುಗಳು ಮಾತನಾಡತೊಡಗಿವೆ. ತಮಿಳು, ತೆಲುಗು ಚಿತ್ರಗಳ ಮಡೆಸ್ನಾನದಿಂದಲೇ ಗಾಂಧಿನಗರ ಉದ್ಧಾರವಾಗಬೇಕು ಎಂಬ ಮೂಢನಂಬಿಕೆಯನ್ನು ಒಡೆದು, ಇದೀಗ ಹಲವು ಹೊಸ ಮುಖಗಳು ಕನ್ನಡ ಚಿತ್ರೋದ್ಯಮದೊಳಗೆ ಭರವಸೆಯ ರೂಪದಲ್ಲಿ ಕಾಣಿಸಿಕೊಂಡಿವೆ. ಯೋಗರಾಜ್ ಭಟ್, ದುನಿಯಾ ಸೂರಿ ಮಾತ್ರವಲ್ಲ.... ಇವರ ಜೊತೆ ಜೊತೆಗೆ ಇನ್ನಿತರ ಪಡ್ಡೆ ಹುಡುಗರ ತಂಡವೂ ತಮ್ಮ ತಮ್ಮ ಗಂಟುಮೂಟೆಗಳನ್ನು ಹರಡಿಕೊಂಡಿವೆ. ಹೊಸ ಅಭಿರುಚಿಗಳಿಗೆ ತಕ್ಕಂತೆ ಹೊಸ ಹೊಸ ಸೃಜನ ಶೀಲ ಪ್ರಯೋಗಗಳು ನಡೆಯುತ್ತಿರುವುದು ಕನ್ನಡದ ಪಾಲಿಗೆ ನಿಜಕ್ಕೂ ಶುಭ ಸೂಚನೆ. ಡಬ್ಬಿಂಗ್ ಸವಾಲಿಗೂ ಇದೇ ನಿಜವಾದ ಉತ್ತರ. ಯಾವಾಗ ಕನ್ನಡದಿಂದ ಉಳಿದವರು ರಿಮೇಕ್ ಮಾಡಲು ಆರಂಭಿಸುತ್ತಾರೋ ಅಲ್ಲಿಂದ ಕನ್ನಡ ಚಿತ್ರೋದ್ಯಮದ ನಿಜವಾದ ದಿನಗಳು ಆರಂಭವಾಗುತ್ತವೆ.ಈಗಾಗಲೇ ಬೇರೆ ಬೇರೆ ಭಾಷಿಗರ ದೃಷ್ಟಿ ಕನ್ನಡ ಚಿತ್ರಗಳ ಮೇಲೆ ಬಿದ್ದಿದೆ. ಇತ್ತೀಚೆಗೆ ‘ಲೂಸಿಯಾ’ ಪ್ರಯೋಗವಂತೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಿತು. ತಮಿಳಲ್ಲೂ ಇದರ ರಿಮೇಕ್ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. 

ಇದೀಗ ಪಡ್ಡೆ ಹುಡುಗರ ತಂಡದಿಂದ ಇನ್ನೊಂದು ಪ್ರಯೋಗ ನಡೆದಿದೆ. ಅದರ ಹೆಸರು 6-5=2. ಈ ಚಿತ್ರ ತನ್ನ ಪ್ರಯೋಗಕ್ಕಾಗಿಯೇ ನಮಗೆ ಇಷ್ಟವಾಗುತ್ತದೆ. ಇದನ್ನು ಹಾರರ್ ಚಿತ್ರ ಎಂದು ಸೀಮಿತಗೊಳಿಸುವುದರ ಬದಲು ಭಿನ್ನ ಚಿತ್ರ ಎಂದೇ ಗುರುತಿಸುವುದು ಸೂಕ್ತ ಅನ್ನಿಸುತ್ತದೆ. ಚಿತ್ರದ ಇಡೀ ತಂಡಕ್ಕೆ ಯಶಸ್ಸು ಸಲ್ಲುತ್ತದೆ. ಚಿತ್ರದ ನಿರೂಪಣೆಯೇ ಚಿತ್ರದ ಹೆಗ್ಗಳಿಕೆ. ಇಡೀ ಚಿತ್ರವನ್ನು ಸಾಕ್ಷ ಚಿತ್ರದ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಸಾಧಾರಣವಾಗಿ ಒಂದು ಚಿತ್ರ ಸಾಕ್ಷ ಚಿತ್ರವಾಗುವುದು ಅದರ ಸೋಲು. ಆದರೆ ಇಲ್ಲಿ, ಉದ್ದೇಶ ಪೂರ್ವಕವಾಗಿ ನಿರ್ದೇಶಕರು ಸಾಕ್ಷ ರೂಪದ ತಂತ್ರವನ್ನು ಅನುಸರಿಸಿದ್ದಾರೆ. ಚಿತ್ರದ ಘಟನೆಗಳು ವಾಸ್ತವವಾದಷ್ಟು ಪ್ರೇಕ್ಷಕರಿಗೆ ಹತ್ತಿರವಾಗುತ್ತವೆ ಎನ್ನುವುದಕ್ಕಾಗಿಯೇ ನಿರ್ದೇಶಕರು ಈ ತಂತ್ರವನ್ನು ಬಳಸಿದಂತಿದೆ. ಮತ್ತು ಈ ತಂತ್ರ ಇಲ್ಲಿ ಯಶಸ್ವಿಯೂ ಆಗಿದೆ. ಒಂದು ಮಾಮೂಲಿ ಹಾರರ್ ಚಿತ್ರವಾಗುವುದನ್ನು ತಪ್ಪಿಸಿ, ಇನ್ನಷ್ಟು ಹೇಳುವುದಕ್ಕೆ ಪ್ರಯತ್ನಿಸುತ್ತದೆ.

6 ಮಂದಿ ಟ್ರೆಕ್ಕಿಂಗಿಗೆಂದು ಹೋಗಿ, ಒಂದು ಅವ್ಯಕ್ತವಾದ ಶಕ್ತಿಗೆ ಬಲಿಯಾಗುವ ಕತೆಯನ್ನು ಚಿತ್ರ ಹೊಂದಿದೆ. ಇತ್ತೀಚೆಗೆ ಪತ್ರಿಕೆಗಳಲ್ಲಿ ಬಂದ ಒಂದು ಘಟನೆಯನ್ನು ಆಧರಿಸಿ ಈ ಕತೆಯನ್ನು ಹೆಣೆಯಲಾಗಿದೆ. ಮತ್ತು ನಿರ್ದೇಶಕ ಅಶೋಕ್, ಇಡೀ ಘಟನೆಯೇ ಆ ವರದಿಯ ದಾಖಲಾತಿಗಳು ಎಂದು ನಂಬಿಸಲು ಪ್ರಯತ್ನಿಸುತ್ತಾರೆ. ನಾಪತ್ತೆಯಾದವರಿಗಾಗಿ ಹುಡುಕಾಡಿದಾಗ ಒಂದು ಕ್ಯಾಮೆರಾ ಸಿಗುತ್ತದೆ. ಅದರ ಆಧಾರದಲ್ಲಿ ಇಡೀ ಘಟನೆ ಇಲ್ಲಿ ನಿರೂಪಣೆಗೊಳ್ಳುತ್ತದೆ. ನಿರ್ದೇಶಕ ಇಲ್ಲಿ ಹೊರಗಿನವನಾಗಿ ಉಳಿಯುತ್ತಾನೆ.


  ಈ ಚಿತ್ರ ಪ್ರಚಾರ ಪಡೆದಿರುವುದು ಹಾರರ್ ಎನ್ನುವ ಕಾರಣಕ್ಕೆ. ಆದರೆ ಇದು ಇಷ್ಟವಾಗುವುದು ಟ್ರೆಕ್ಕಿಂಗ್‌ಗೆ ಹೊರಟ ಆರು ಮಂದಿಯ ಲವಲವಿಕೆ, ತಮಾಷೆ, ತುಂಟತನದ ಕಾರಣದಿಂದ. ಇಬ್ಬರು ಹುಡುಗಿಯರು ನಾಲ್ವರು ತರುಣರನ್ನೊಳಗೊಂಡ ತಂಡ ದಟ್ಟ ಕಾಡು ಹಾಗೂ ಗುಡ್ಡಗಳ ನಡುವೆ ಅಲೆಯುತ್ತಾ, ಅಲ್ಲಿಯೂ ಬದುಕಿನ ಲವಲವಿಕೆಗಳನ್ನು ಕಳೆದುಕೊಳ್ಳದೆ ಇರುವುದು ಚಿತ್ರವನ್ನು ಆಪ್ತವಾಗಿಸುತ್ತದೆ. ಒಂದು ರೀತಿಯಲ್ಲಿ, ಇವರ ಲವಲವಿಕೆಯ ಮಾತುಕತೆಗಳು ಮತ್ತು ಸಹಜ ನಟನೆಗಳೇ ಹಾರರ್‌ನ ಭೀಕರತೆಯನ್ನು ತಣ್ಣಗಾಗಿಸುತ್ತದೆ. ಕೊನೆ ಕೊನೆಯಲ್ಲಿ ಹಾರರ್ ಘಟನೆಗಳು ನಮ್ಮನ್ನು ಹೆಚ್ಚು ಮುಟ್ಟುವುದಿಲ್ಲ ಅನ್ನಿಸುತ್ತದೆ. ಅದು ಇನ್ನಷ್ಟು ಬಿಗಿಯಾಗಬೇಕಿತ್ತು, ಇನ್ನಷ್ಟು ನಿಗೂಢತೆಯನ್ನು ಮೈಗೂಢಿಸಿಕೊಳ್ಳಬೇಕಾಗಿತ್ತು ಅನ್ನಿಸುತ್ತದೆ. ಚಿತ್ರದ ಕ್ಲೈಮಾಕ್ಸ್‌ನ್ನು ಬಿಗಿಯಾಗಿಸುವ ಅವಕಾಶ ನಿರ್ದೇಶಕರಿಗಿತ್ತು. ಇವೆಲ್ಲವುಗಳ ನಡುವೆ ಟ್ರಕ್ಕಿಂಗ್‌ನ ಹಾದಿ, ನಿಸರ್ಗ, ಛಾಯಾಗ್ರಹಣ, ಸಂಭಾಷಣೆ ಹಾಗೂ ಉದಯೋನ್ಮುಖ ನಟರ ಅತ್ಯಂತ ಸಹಜ ನಟನೆ ಚಿತ್ರವನ್ನು ಗೆಲ್ಲಿಸುತ್ತದೆ. ಸೌಮ್ಯ ಮತ್ತು ದೀಪಾ ತುಸು ನಟನೆ ತುಸು ಮಂಕಾಗಿದೆ. ಚಿತ್ರಕ್ಕೆ ಪೂರಕವಾದ ಸಂಗೀತ ಇಷ್ಟವಾಗುತ್ತದೆ. ಚಿತ್ರ ಮಂದಿರದಿಂದ ಹೊರಹೋಗುವಾಗ, ಹಾರರ್ ನೆನಪು ಸಂಪೂರ್ಣ ಮಟಾ ಮಾಯಾವಾದರೂ ತಿಗಣೆ, ಜೊಲ್ಲು ಮೊದಲಾದವರ ಮುಗ್ಧತೆ ಮನದಲ್ಲಿ ಉಳಿದು ಬಿಡುತ್ತದೆ. ಹೌದು. ಒಂದೆಡೆ ಈ ಚಿತ್ರವನ್ನು ಹಾಲಿವುಡ್‌ನ ಕೆಲವು ಚಿತ್ರಗಳಿಗೆ, ಹಾಗೆಯೇ ಬಾಲಿವುಡ್‌ನ ಅಜ್ಞಾತ್, ರಾಗಿಣಿ ಎಂಎಂಎಸ್‌ಗಳಿಗೆ ಹೋಲಿಸುವುದುಂಟು. ಚಿತ್ರದ ಒಂದೆರಡು ಸಣ್ಣ ಎಳೆಗಳು ಅದನ್ನು ಹೋಲುತ್ತವೆ ನಿಜ. ಆದರೆ ಜೊಲ್ಲು, ತಿಗಣೆಗಳಂತಹ ಗ್ರಾಮೀಣ ಪಾತ್ರಗಳು ಹಾಗೂ ನಮ್ಮದೇ ಆದ ರಮ್ಯ ಪ್ರಕೃತಿ ಇಡೀ ಚಿತ್ರವನ್ನು ಈ ನೆಲಕ್ಕೆ ಒಪ್ಪುವಂತೆ ಮಾಡುತ್ತದೆ.


ಇಂತಹದೊಂದು ಪ್ರಯೋಗವನ್ನು ಮಾಡಿ ಗೆದ್ದ ನಿರ್ದೇಶಕ ಅಶೋಕ್‌ನಿಜಕ್ಕೂ ಅಭಿನಂದನಾರ್ಹರು. ಸಿನಿಮಾವಾಗಿ ಇದು ಗೆದ್ದಿದೆ ಎನ್ನುವುದು ನಿಜವಾದರೂ, ಭೂತ ಪ್ರೇತಗಳ ಕುರಿತಂತೆ ಜನರಲ್ಲಿ ನಂಬಿಕೆ ಬಲವಾಗುವುದಕ್ಕೂ ಈ ಚಿತ್ರ ನೆರವಾಗಬಹುದು. ನಿಜವಾಗಿ ಘಟಿಸಿದ್ದು ಎಂದು ನಂಬಿಸಲು ನಿರ್ದೇಶಕರು ಮಾಡಿರುವ ಪ್ರಯತ್ನ, ಬೇರೆ ರೀತಿಯ ಪ್ರಭಾವವನ್ನು ಬೀರಿದರೂ ಬೀರಿತು. ಆದುದರಿಂದ, ಸಿನಿಮಾವನ್ನು ಸಿನಿಮಾ ಆಗಿ ಮಾತ್ರ ನೋಡಿ. ಆದರೆ ಈ ಸಿನಿಮಾವನ್ನು ನಂಬಬೇಡಿ. ಪ್ರಕೃತಿಯ ಮಡಿಲಲ್ಲಿ ಟ್ರಕ್ಕಿಂಗಿಗೆಂದು ಹೋಗಿ ಅಲ್ಲಿಯ ರುದ್ರ ರಮಣೀಯತೆಗೆ ಬೆಚ್ಚಿ, ಖುಷಿ ಪಡಿ. ಆದರೆ ಇಲ್ಲದ ದೆವ್ವ ಭೂತಗಳನ್ನು ಕಲ್ಪಿಸಿಕೊಂಡು ನಿಮ್ಮ ಟ್ರೆಕ್ಕಿಂಗ್ ಖುಷಿಯನ್ನು ಕಳೆದುಕೊಳ್ಳಬೇಡಿ.

Thursday, December 5, 2013

ಕಣ್ಣುಗಳೆಡೆಗೆ ಕಣ್ಣಾಯಿಸೋಣ...

ಕಣ್ಣು ಇರುವುದು ಯಾಕೆ? ಇದು ಹೊರಗಿನದ್ದನ್ನು ನೋಡುವುದಕ್ಕೆ ಮಾತ್ರವಲ್ಲ. ನಮ್ಮೆಳಗನ್ನು ನೋಡುವುದಕ್ಕೂ ಸಹಾಯ ಮಾಡುತ್ತದೆ. ನಮ್ಮೆಳಗನ್ನು ನೋಡುವುದು ಎಂದಾಕ್ಷಣ ಅದು ಆಧ್ಯಾತ್ಮ ಅರ್ಥ ಪಡೆಯುತ್ತದೆ. ಆದರೆ ಇದಕ್ಕೆ ಲೌಕಿಕ ಅರ್ಥವೂ ಇದೆ.

 ‘ದೈಹಿಕ ಕಾಯಿಲೆಗಳು ಮತ್ತು ಕಣ್ಣು’ ಡಾ. ಎಚ್. ಎಸ್. ಮೋಹನ್ ಬರೆದ ಕೃತಿ. ಕಣ್ಣು ಮತ್ತು ದೇಹಕ್ಕಿರುವ ಸಂಬಂಧ, ಹಾಗೆಯೇ ನಮ್ಮ ದೇಹದ ಕಾಯಿಲೆಗಳಿಗೆ ಸುಲಭದಲ್ಲಿ ಈಡಾಗುವ ಕಣ್ಣಿನ ಕುರಿತಂತೆ ಆರೋಗ್ಯಕರವಾದ ಅಪಾರ ಮಾಹಿತಿಗಳು ಈ ಕೃತಿಯಲ್ಲಿವೆ. ಕಣ್ಣು ಎನ್ನುವುದು ದೇವರ ಅತಿ ಅಮೂಲ್ಯವಾದ ಕೊಡುಗೆ. ನಮ್ಮ ದೇಹ ಕುಸಿದಾಗ, ಅನಾರೋಗ್ಯಕ್ಕೀಡಾದಾಗ ಕಣ್ಣುಗಳು ಹೇಗೆ ಪ್ರತಿಕ್ರಿಯಿಸುತ್ತವೆ ಎನ್ನುವುದನ್ನು ಲೇಖಕರು ಬರೆಯುತ್ತಾರೆ. ಕಣ್ಣಿನ ಏರುಪೇರುಗಳ ಮೂಲಕವೇ ದೇಹದ ಕಾಯಿಲೆಗಳನ್ನು ಹೇಗೆ ಪತ್ತೆ ಮಾಡಬಹುದು ಎನ್ನುವುದನ್ನು ಕುತೂಹಲಕರವಾಗಿ ಮಂಡಿಸಿದ್ದಾರೆ ಡಾ. ಮೋಹನ್ ಅವರು. ಕಣ್ಣಿನ ಮೂಲಕ ನಾವು ಬಹಳಷ್ಟನ್ನು ನೋಡಿದ್ದೇವೆ. ಕಣ್ಣುಗಳಿಲ್ಲದ ನಾವುಗಳನ್ನು ನಮಗೆ ಕಲ್ಪಿಸಿಕೊಳ್ಳಲು ಸಾಧ್ಯವೂ ಇಲ್ಲ. ಹೀಗಿರುವಾಗ, ನಮ್ಮ ಬದುಕನ್ನು ಅರ್ಥಪೂರ್ಣಗೊಳಿಸಿದ ಕಣ್ಣಿನ ಕಡೆಗೊಮ್ಮೆ ನೋಡುವುದು, ಅದರ ಭಾಷೆಗಳನ್ನು ಅರ್ಥ ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಈ ಕಾರಣಕ್ಕಾಗಿ ಈ ಕೃತಿಯನ್ನು ನೀವೊಮ್ಮೆ ಓದಲೇ ಬೇಕು. ನಿಮ್ಮ ಕಣ್ಣಿನ ಕುರಿತ ಕಾಳಜಿಯ ಜೊತೆಗೇ ದೈಹಿಕ ಆರೋಗ್ಯದ ಕುರಿತ ಕಾಳಜಿಯನ್ನೂ ಈ ಕೃತಿ ಹೊಂದಿದೆ. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಈ ಕೃತಿಯ ಮುಖಬೆಲೆ 90 ರೂಪಾಯಿ. ಆದರೆ ಕಣ್ಣಿನ ಬೆಲೆಗೆ ಹೋಲಿಸಿದರೆ ಈ ಬೆಲೆ ನಗಣ್ಯ.

Monday, December 2, 2013

ಅರಮನೆಯಂತಹ ಮಸೀದಿ!

1
ಅರಮನೆಯ ಹಂಗು 
ಬೇಡವೆಂದು 
ಮಸೀದಿಯೆಡೆಗೆ 
ನಡೆದೆ ನನ್ನ ದೊರೆಯೇ, 
ಆದರೆ ಮಸೀದಿಯ ಪಂಡಿತನೋ 
ಅರಮನೆಗೆ ಮುಖ ಮಾಡಿ 
ಪ್ರಾರ್ಥನೆ ಸಲ್ಲಿಸುತ್ತಿದ್ದ 
2

ಅರಮನೆಯಂತಹ ಮಸೀದಿ!
ಅಮೃತ ಶಿಲೆಯಲ್ಲಿ 
ದಾನಿಗಳ ಹೆಸರು ಕೆತ್ತಿದ್ದಾರೆ!
ರಾತ್ರಿ ನನಗೆ ನರಕದ ಕನಸು ಬಿತ್ತು
ನನ್ನ ದೊರೆಯೇ,
ನರಕದ ಬಾಗಿಲಲ್ಲಿ
ಆ ದಾನಿಗಳ ಹೆಸರೂ ಕೆತ್ತಲ್ಪಟ್ಟಿತ್ತು
3
ಅರಮನೆಯಂತಹ
ಮಸೀದಿಗಳ
ಬುಡ ದುರ್ಬಲವಾಗಿರುತ್ತದೆ
ನನ್ನ ದೊರೆಯೇ,
ಯಾವ ದಾನಿಗಳ
ಹಂಗೂ ಇಲ್ಲದ ಬಯಲಲ್ಲಿ
ನಿರ್ಭಯನಾಗಿ ನಿನಗೆ ಬಾಗಿದೆ
4
ಮಸೀದಿಯನ್ನು
ಅಮೃತ ಶಿಲೆಯಲ್ಲಿ
ಬಗೆ ಬಗೆಯಾಗಿ ಅಲಂಕರಿಸಲಾಗಿದೆ
ನನ್ನ ದೊರೆಯೇ,
ಇವರು ನಿನ್ನ ಮರೆತು
ಮಸೀದಿಯನ್ನೇ ಆರಾಧಿಸತೊಡಗಿದ್ದಾರೆ!
5
ನಮಾಜಿಗೆಂದು
ಬಂದವನು ಮಸೀದಿಯ
ವೈಭವಕ್ಕೆ ದಂಗಾಗಿದ್ದಾನೆ!
ನನ್ನ ದೊರೆಯೇ,
ನಾನೋ ಮಸೀದಿಯ ಹೊರಗಿದ್ದೇನೆ
ನಿನ್ನ ವೈಭವಕ್ಕೆ ದಂಗಾಗಿದ್ದೇನೆ!