Monday, January 27, 2014

ದಿ ಬುಕ್ ಆಫ್ ಎಲಿ: ಪತನದ ಅಂಚಿನಲ್ಲಿ ನಂಬಿಕೆಯ ಹಸ್ತ

ಈ ಚಿತ್ರವನ್ನು ನಾನು ಕಳೆದ ರಾತ್ರಿ ಅಂದರೆ ರವಿವಾರ ನೋಡಿದ್ದು. ಚಿತ್ರದ ಹೆಸರು ‘ದಿ ಬುಕ್ ಆಫ್ ಎಲಿ’. ನನಗ್ಯಾಕೋ ಇಷ್ಟವಾಯಿತು ಈ ಚಿತ್ರ. ಮನುಷ್ಯ ಕುಲದ ದುರಂತದ, ಪತನದ ಕಟ್ಟ ಕಡೆಯ ಅಂಚಿನಲ್ಲಿ ನಡೆಯುವ ಘಟನೆಗಳನ್ನು ಈ ಚಿತ್ರ ಹಿಡಿದಿಡುತ್ತದೆ. ಇದನ್ನು ನಾವು ಮಿಥ್‌ನ ಭಾಗವಾಗಿಯೂ ಸ್ವೀಕರಿಸಬಹುದು. ಆದರೆ ಅದರಾಚೆಗೆ ಹಲವು ಹೊಳಹುಗಳನ್ನು ನೀಡುವ ಶಕ್ತಿ ಈ ಚಿತ್ರಕ್ಕಿದೆ ಎಂದು ನನಗನ್ನಿಸಿತು. ಬೈಬಲ್ ಕತಿಯ ಆಶಯವನ್ನು ಇಟ್ಟುಕೊಂಡು ಈ ಚಿತ್ರದ ಕತೆಯನ್ನು ಹೆಣೆಯಲಾಗಿದೆ.
 

 ಈ ಭೂಮಿ ತನ್ನೆಲ್ಲ ತಪ್ಪುಗಳಿಗೆ ತನ್ನನ್ನು ತೆತ್ತುಕೊಂಡು, ಸರ್ವನಾಶವಾಗಿ ಪಾಳು ಬೀಳುತ್ತದೆ. ಆಧುನಿಕತೆಗಳೆಲ್ಲ ನುಚ್ಚು ನೂರಾಗಿ ಅದರಲ್ಲೇ ತೆವಳುತ್ತಾ ಅಳಿದುಳಿದ ಮನುಷ್ಯರು ಬದುಕುತ್ತಿರುತ್ತಾರೆ. ಮುರಿದು ಬಿದ್ದ ಸೇತುವೆ, ಗೋಪುರ, ಕಟ್ಟಗಳ ಮಧ್ಯೆ, ಯಾವ ಗೊತ್ತುಗುರಿಗಳೂ ಇಲ್ಲದೆ ಈ ಹಿಂದಿನ ಪಳೆವುಳಿಕೆಗಳನ್ನೇ ಬಳಸಿಕೊಂಡು, ದರೋಡೆ ಮಾಡಿಕೊಂಡು ಜೀವಿಸುತ್ತಿರುತ್ತಾರೆ. ಮನುಷ್ಯ ನಂಬಿಕೆ ಸರ್ವನಾಶವಾಗಿ, ಪ್ರೀತಿ, ವಿಶ್ವಾಸಗಳೆಲ್ಲ ನುಚ್ಚು ನೂರಾಗಿ ಬರೇ ಕೋವಿಯ ತುದಿಯಿಂದಲೇ ಬದುಕುತ್ತಿರುವ ದಿನಗಳು ಅವು. ನಾಗರಿಕತೆ ರೂಪಿಸಿದ ಎಲ್ಲ ಮಾಧ್ಯಮಗಳೂ ಕುಸಿದು, ಕರೆನ್ಸಿಗಳೂ ಇಲ್ಲದೆ, ಬರೇ ಅಳಿದುಳಿದ ವಸ್ತುಗಳನ್ನೇ ಅದಲು ಬದಲಿಸಿ ಬದುಕುವ ಕಾಲ. ಕಾಡಿನ ಆದಿ ಕಾಲವನ್ನು ನೆನಪಿಸುವ ಮನುಷ್ಯನ ವ್ಯಕ್ತಿತ್ವ. ಮುರಿದ ಕನ್ನಡಿ, ಕಟ್ಟ ಕಡೆಯ ಶ್ಯಾಂಪು, ಬಟ್ಟೆ, ಎಲ್ಲವೂ ಬೆಲೆಬಾಳುವ ಕ್ಷಣಗಳು. ಒಂದು ಗುಟುಕು ನೀರಿಗೆ ತನ್ನಲ್ಲಿರುವ ಅದೆಷ್ಟೋ ವಸ್ತುಗಳನ್ನು ತೆರಬೇಕಾದಂತಹ ಸ್ಥಿತಿ. ಒಂದು ರೀತಿಯಲ್ಲಿ ಭೂಮಿಯ ನಾಗರಿಕತೆ ಬಹತ್ ಗುಜರಿ ಅಂಗಡಿಯಂತಾಗಿದೆ. ಇಂತಹ ಕಾಲಘಟ್ಟದಲ್ಲಿ ಒಂದು ಪುಸ್ತಕಕ್ಕಾಗಿ ಇಬ್ಬರಲ್ಲಿ ನಡೆಯುವ ತಿಕ್ಕಾಟವೇ ‘ದಿ ಬುಕ್ ಆಫ್ ಎಲಿ’. 

ಅದೊಂದು ಪಾಳು ಬಿದ್ದ ನಗರ. ಅಲ್ಲಿನ ಮುಖ್ಯಸ್ಥ ಕಾರ್ನೆಗಿ(ಗ್ಯಾರಿ ಓಲ್ಡ್‌ಮೇನ್). ಅವನಿಗೆ ಪುಸ್ತಕ ಓದುವುದು ಗೊತ್ತು. ಗುಜರಿ ಅಂಗಡಿಯಂತಹ ಬಹತ್ ಭೂಮಿಯಲ್ಲಿ ಅವನು ಒಂದು ಹಳೆಯ ಕಳೆದು ಹೋದ ಪುಸ್ತಕಕ್ಕಾಗಿ ಹುಡುಕಾಡುತ್ತಿರುತ್ತಿರುತ್ತಾನೆ. ತನ್ನ ಜನರನ್ನು ಅದರ ಹುಡುಕಾಟಕ್ಕೆ ಹಚ್ಚಿದ್ದಾನೆ. ದರೋಡೆ ನಡೆದ ಸಂದರ್ಭದಲ್ಲಿ ಯಾರಲ್ಲಾದರೂ ಪುಸ್ತಕಗಳಿದ್ದರೆ ಅದನ್ನು ಈತನಿಗೆ ತಲುಪಿಸುತ್ತಾರೆ. ಆದರೆ ಅವನು ಹುಡುಕುವ ಪುಸ್ತಕ ಅದಾಗಿರುವುದಿಲ್ಲ. ಮುರಿದು ಬಿದ್ದ ಇಡೀ ವ್ಯವಸ್ಥೆಯನ್ನು ಪುನರ್ ನಿರ್ಮಿಸಿ ಆಳುವುದು ಅವನ ಕನಸು. ಅದಕ್ಕೆ ಆ ಪುಸ್ತಕ ಭಾರೀ ಸಹಾಯ ಮಾಡುತ್ತದೆ ಎಂದು ಅವನು ನಂಬಿದ್ದಾನೆ. ಆ ಪುಸ್ತಕಕ್ಕೆ ಅಸಾಮಾನ್ಯ ಶಕ್ತಿಯಿದೆ ಎಂದು ಅವನಿಗೆ ಗೊತ್ತಿದೆ. ಅದಕ್ಕಾಗಿಯೇ ತನ್ನ ಗೂಂಡಾಗಳನ್ನು ಎಲ್ಲೆಡೆ ಹರಿಬಿಟ್ಟಿದ್ದಾನೆ. ಹೀಗಿರುವಾಗ ಆ ಮುರಿದು ಬಿದ್ದ ನಗರಕ್ಕೆ ಒಬ್ಬ ಅಪರಿಚಿತ ಎಲಿಯ(ಡೆಂಝಿಲ್ ವಾಷಿಂಗ್ಟನ್)ನ ಆಗಮನವಾಗುತ್ತದೆ. ಅವನು ಅಲ್ಲಿಗೆ ಆಗಮಿಸಿರುವುದು ಒಂದಿಷ್ಟು ನೀರಿಗಾಗಿ. ಅದಕ್ಕೆಂದೇ ಕಾರ್ನೆಗಿಯ ಬಾರ್‌ಗೆ ಆಗಮಿಸಿದ್ದಾನೆ. ಆ ನೀರಿರುವುದು ಒಂದು ನಿಗೂಢ ಜಾಗದಲ್ಲಿ. ನೀರಿಗಾಗಿ ಕೆಲವು ಅಮೂಲ್ಯ ವಸ್ತು ನೀಡುವ ಮೂಲಕ ಅವನು ಎಲ್ಲರ ಗಮನ ಸೆಳೆಯುತ್ತಾನೆ. ಅಲ್ಲಿರುವ ದುಷ್ಕರ್ಮಿಗಳು ಅವನ ಮೇಲೆ ಎರಗುತ್ತಾನೆ. ಆದರೆ ಅವನದು ಅಧಮ್ಯ ಶಕ್ತಿ. ದೈತ್ಯ ವ್ಯಕ್ತಿತ್ವ. ನಿರ್ಲಿಪ್ತ ಕಣ್ಣುಗಳು. ಒಂದು ಕ್ಷಣದಲ್ಲೇ ಹಲವರ ಹೆಣ ಬೀಳುತ್ತದೆ. ಅವನಿಗೆ ಆ ಹಿಂಸೆ ಇಷ್ಟವಿರುವುದಿಲ್ಲ. ಆದರೆ ಅಲ್ಲಿರುವ ದುಷ್ಚರು ಹಲವು ದಾರಿಹೋಕರನ್ನು ಕೊಂದು, ಅವರನ್ನು ದರೋಡೆ ಮಾಡಿರುವುದನ್ನು ಅವನು ಹಾದು ಬಂದ ಹಾದಿಯಲ್ಲಿ ಗಮನಿಸಿದ್ದಾನೆ. ಬಾರ್‌ನಲ್ಲಿ ನಡೆದ ಹೋರಾಟ ಅವನನ್ನು ಕಾರ್ನೆಗಿಯ ಕಡೆ ತಲುಪಿಸುತ್ತದೆ. ಒಂದು ದಿನದ ಮಟ್ಟಿಗೆ ತನ್ನ ಅತಿರ್ಥಿಯಾಗಬೇಕು ಎಂದು ಕಾರ್ನೆಗಿ ಒತ್ತಾಯಿಸುತ್ತಾನೆ. ಎಲಿ ಒಪ್ಪುತ್ತಾನೆ. ಎಲಿಯ ಗುಟ್ಟನ್ನು ತಿಳಿದುಕೊಳ್ಳಲು, ರಾತ್ರಿ ಆತನ ಕೋಣೆಗೆ ತನ್ನ ಕುರುಡಿ ಪ್ರೇಯಸಿ ಕ್ಲಾಡಿಯಾಳನ್ನು ಕಾರ್ನೆಗಿ ಕಳುಹಿಸುತ್ತಾನೆ. ಆದರೆ ಎಲಿ ಆಕೆಯನ್ನು ನಯವಾಗಿ ನಿರಾಕರಿಸುತ್ತಾನೆ. ಆತನೊಳಗಿನ ಶಕ್ತಿ ಆ ಕುರುಡಿಗೆ ಅನುಭವವಾಗುತ್ತದೆ. ಕಾರ್ನೆಗಿ ಸಿಟ್ಟಾಗುತ್ತಾನೆ. ಪ್ರೇಯಸಿಯ ಮಗಳು ಅಥವಾ ಮಲಮಗಳು ಸೊಲಾರಳನ್ನು ಕಳುಹಿಸುತ್ತಾನೆ. ಆದರೆ ಆಕೆಯನ್ನೂ ನಿರಾಕರಿಸುತ್ತಾನೆ. ‘‘ತಾನು ವಿಫಲಳಾಗಿ ಹೋದರೆ ಕಾರ್ನೆಗಿ ತನ್ನ ತಾಯಿಯನ್ನು ಹಿಂಸಿಸುತ್ತಾನೆ. ಆದುದರಿಂದ ಒಂದು ರಾತ್ರಿ ನಿನ್ನ ಜೊತೆಗೆ ಇರಲು ಬಿಡು’’ ಎಂದು ಆಕೆ ಮನವಿ ಮಾಡುತ್ತಾಳೆ. ಎಲಿ ಒಪ್ಪುತ್ತಾನೆ. ಅದೇ ಸಂದರ್ಭದಲ್ಲಿ ಸೊಲಾರಗೆ ಒಂದು ಸತ್ಯ ಮನವರಿಕೆಯಾಗುತ್ತದೆ. ಅದೆಂದರೆ ‘ಅಪರಿಚಿತ’ನಿಗೆ ಪುಸ್ತಕ ಓದುವ ಸಾಮರ್ಥ್ಯವಿದೆ! ಅವನು ಪುಸ್ತಕವೊಂದನ್ನು ತನಗೆ ತಿಳಿಯದಂತೆ ಮುಚ್ಚಿಡಲು ಪ್ರಯತ್ನಿಸುತ್ತಿರುವುದು ಗಮನಕ್ಕೆ ಬರುತ್ತದೆ. ಮುಂದೆ ಅದು ಕಾರ್ನೆಗಿಗೆ ತಿಳಿಯುತ್ತದೆ. ಕಾರ್ನೆಗಿ ಆ ಪುಸ್ತಕಕ್ಕಾಗಿ ಎಲಿಯ ಬೆನ್ನು ಬೀಳುತ್ತಾನೆ. 

ಅಲ್ಲಿಂದ ಎಲಿ ಮತ್ತು ಕಾರ್ನೆಗಿಯ ಗೂಂಡಾಗಳ ನಡುವಿನ ಹೋರಾಟ ಆರಂಭವಾಗುತ್ತದೆ. ಆ ಪುಸ್ತಕಕ್ಕಾಗಿ ಹಲವು ಜೀವಗಳು ನೆಲವಪ್ಪುತ್ತದೆ. ಎಲ್ಲ ಹೋರಾಟಗಳ ಬಳಿಕ ಎಲಿ ಆ ಪುಸ್ತಕವನ್ನು ಅನಿವಾರ್ಯವಾಗಿ ಕಾರ್ನೆಗಿಗೆ ಒಪ್ಪಿಸಬೇಕಾಗುತ್ತದೆ. ಸೊಲಾರಳ ಜೀವ ಅಪಾಯದಲ್ಲಿರುವುದರಿಂದ ಆತ ತನ್ನದಲ್ಲಿದ್ದ ಪುಸ್ತಕವನ್ನು ಕಾರ್ನೆಗಿಗೆ ಒಪ್ಪಿಸುತ್ತಾನೆ. ಕಾರ್ನೆಗಿಯಿಂದ ಪಾರಾಗಿ ಎಲಿ ಮತ್ತು ಸೋಲಾರ ಆಮೆರಿಕದ ಪಶ್ಚಿಮವನ್ನು ತಲುಪುತ್ತಾರೆ. ಎಲಿಯ ಬದುಕಿನ ಬಹು ಮುಖ್ಯ ಧ್ಯೇಯವೇ ಆ ಪುಸ್ತಕದಲ್ಲಿರುವ ಪ್ರೀತಿ, ಸ್ನೇಹ, ನಂಬಿಕೆಯನ್ನು ಅಮೆರಿಕದ ಪಶ್ಚಿಮದ ಕಡೆಗೆ ತಲುಪಿಸುವುದಾಗಿತ್ತು. ಆದರೆ ಪುಸ್ತಕವೇ ಅವನಲ್ಲಿಲ್ಲ. ಸೋಲಾರ ಕೇಳುತ್ತಾಳೆ ‘‘ನೀನೀಗ ಆ ಪುಸ್ತಕವನ್ನು ಹೇಗೆ ಪಶ್ಚಿಮದ ಕಡೆಗೆ ತಲುಪಿಸುತ್ತೀಯ?’’ ಎಲಿ ಹೇಳುತ್ತಾನೆ. ‘‘ಅದರಲ್ಲಿರುವ ಪ್ರತಿ ಅಕ್ಷರಗಳೂ ನನಗೆ ನೆನಪಿದೆ’’

ಇತ್ತ ಕಾರ್ನೆಗಿ ಭದ್ರ ಪಡಿಸಿದ್ದ ಪುಸ್ತಕವನ್ನು ತಂತ್ರಜ್ಞನ ಸಹಾಯದಿಂದ ಬಿಡಿಸುತ್ತಾನೆ. ನೋಡಿದರೆ ಅದರ ತುಂಬಾ ಖಾಲಿ ಹಾಳೆಗಳು. ಅದರಲ್ಲೇನೂ ಇಲ್ಲ. ಅವನು ವಿಕಾರವಾಗಿ ಚೀರುತ್ತಾನೆ. ಆತನ ಕುರುಡಿ ಪ್ರೇಯಸಿ ಆ ಪುಸ್ತಕವನ್ನು ಬಿಡಿಸುತ್ತಾಳೆ. ಖಾಲಿ ಹಾಳೆಗಳನ್ನು ಮುಟ್ಟಿದಂತೆಯೇ ಅದರಲ್ಲಿರುವ ಸಾಲುಗಳು ಅವಳ ಒಳಗೆ ಅನುಭವವಾಗುತ್ತಾ ಹೋಗುತ್ತದೆ. ಯಾಕೆಂದರೆ ಅದು ಬ್ರೈಲ್ ಲಿಪಿಯಲ್ಲಿತ್ತು. ಅದನ್ನು ಓದಿ ವಿವರಿಸಲು ಕಾರ್ನೆಗಿ ಆದೇಶಿಸುತ್ತಾನೆ. ಆದರೆ ಆಕೆಗೆ ಆ ಪುಸ್ತಕ, ಅವನ ಆದೇಶವನ್ನು ಧಿಕ್ಕರಿಸುವ ಶಕ್ತಿಯನ್ನು ನೀಡುತ್ತದೆ.


 ಇಡೀ ಭೂಮಿ ವಿಚ್ಛಿದ್ರವಾಗಿದ್ದಾಗ ಮನುಷ್ಯನನ್ನು ಪರಸ್ಪರ ಬೆಸೆಯುವುದು ನಾಗರಿಕತೆಯಲ್ಲ. ಬರೇ ನಂಬಿಕೆ ಎನ್ನುವುದನ್ನು ಚಿತ್ರ ಹೇಳುತ್ತದೆ. ಚಿತ್ರದಲ್ಲಿ ಆ ಪುಸ್ತಕ ‘ಬೈಬಲ್’ ಆಗಿರುತ್ತದೆ. ಆದುದರಿಂದ ಚಿತ್ರಕ್ಕೆ ಕೆಲವು ಮಿತಿಗಳೂ, ಪೂರ್ವಾಗ್ರಹಗಳು ಅಂಟಿ ಬಿಡುತ್ತದೆ. ಆದರೆ ಇದರಾಚೆಗೆ ಚಿತ್ರವನ್ನು ತಂದು ನೋಡಿದರೆ, ಅದರ ಆಶಯ ನಮ್ಮೆಳಗೆ ಬೆಳೆಯುತ್ತಾ ಹೋಗುತ್ತದೆ. ಎಲಿ ತನ್ನೊಳಗಿನ ಬೈಬಲ್‌ಗೆ ಪುಸ್ತಕರೂಪ ನೀಡಿ ಸಾಯುತ್ತಾನೆ.ಮುರಿದ ಬಿದ್ದ ಜಗತ್ತನು ನಂಬಿಕೆಯ ಮೂಲಕ ಕಟ್ಟುವ ಆಶಯವನ್ನು ಎಲಿಯಿಂದ ಸೋಲಾರ ತನ್ನದಾಗಿಸಿಕೊಂಡು ತನ್ನ ನಗರಕ್ಕೆ ಮರಳುವಲ್ಲಿಗೆ ಚಿತ್ರ ಮುಗಿಯುತ್ತದೆ.
 ಎಲಿಯ ವ್ಯಕ್ತಿತ್ವ ಇಡೀ ಕತೆಯ ಕೇಂದ್ರ ಬಿಂದು. ಈತ ಜೀಸಸ್‌ನಂಥವನಲ್ಲ. ಇಡೀ ಭೂಮಿಯಲ್ಲಿ ಮತ್ತೆ ಪರಸ್ಪರ ನಂಬಿಕೆಯನ್ನು ಬಿತ್ತಿ, ಹೊಸ ನಾಗರಿಕತೆಯನ್ನು ಕಟ್ಟುವುದಕ್ಕಾಗಿ ಅವನು ಹಲವರೊಡನೆ ಸೆಣಸುತ್ತಾನೆ. ಹಲವರನ್ನು ಕೊಲ್ಲುತ್ತಾನೆ. ತಾನೂ ಗಾಯಗೊಳ್ಳುತ್ತಾನೆ. ಕೊನೆಗೂ ತನ್ನ ಉದ್ದೇಶವನ್ನು ಸಾಧಿಸುತ್ತಾನೆ. ಕ್ಲಾಡಿಯಾ ಪಾತ್ರ ಸಣ್ಣದಾದರೂ, ಇಡೀ ಕತೆಗೆ ಆಳ, ಅಗಲವನ್ನು ಕೊಡುತ್ತದೆ. ಒಂದು ಪುಸ್ತಕವನ್ನು ತನ್ನದಾಗಿಸಿಕೊಳ್ಳುವ ನಿರೀಕ್ಷೆಯಲ್ಲಿ ಹಲವು ಕಾಲಗಳನ್ನು ಕಳೆದು, ಹೋರಾಟ ಮಾಡಿ ತನ್ನದಾಗಿಸಿಕೊಂಡರೂ, ಅದನ್ನು ಓದಲು ಕಾರ್ನೆಗಿ ಅಸಮರ್ಥನಾಗುವುದರಲ್ಲಿ ಅವನ ದುರಂತವನ್ನು ಚಿತ್ರ ಕಟ್ಟಿಕೊಡುತ್ತದೆ. ಎಲಿಯ ನಿಸ್ವಾರ್ಥ ಕರ್ಮ ಮತ್ತು ಅವನ ನಂಬಿಕೆ ಅವನನ್ನು ಅವನ ಗುರಿಯೆಡೆಗೆ ಸಾಗಿಸುತ್ತದೆ. ಮತ್ತು ಆ ನಂಬಿಕೆಯೇ ವಿಶ್ವವನ್ನು ಮತ್ತೊಮ್ಮೆ ಶುರುವಿನಿಂದ ಮುನ್ನಡೆಸುತ್ತದೆ. ಆ ನಂಬಿಕೆಯ ಬಲದೊಂದಿಗೆ ಸೋಲಾರ ಮತ್ತೆ ತನ್ನ ಮುರಿದು ಬಿದ್ದ ನಗರಕ್ಕೆ ಮರಳುತ್ತಾಳೆ.


ಸಂಗೀತ ಮತ್ತು ಛಾಯಾಗ್ರಹಣ ಭೂಮಿಯ ದುರಂತ, ಕ್ರೌರ್ಯ ಮತ್ತು ಹೊಸ ನಿರೀಕ್ಷೆಗಳನ್ನು ಕಟ್ಟಿಕೊಡುವಲ್ಲಿ ಉದ್ದಕ್ಕೂ ಯಶಸ್ವಿಯಾಗುತ್ತದೆ. ಚಿತ್ರದೊಳಗೊಂದು ದರ್ಶನವಿದೆ. ಆ ದರ್ಶನವೇ ಚಿತ್ರವನ್ನು ನಮಗೆ ಹತ್ತಿರವಾಗಿಸುತ್ತದೆ. ತೀರಾ ಶ್ರೇಷ್ಟವಲ್ಲದಿದ್ದರೂ, ಒಂದಿಷ್ಟು ಆಪ್ತತೆಯನ್ನು ಕಟ್ಟಿಕೊಡುವ ಚಿತ್ರ ಇದು. ಹಾಗೆಂದು ಇದು ಎಲ್ಲರಿಗೂ ಇಷ್ಟವಾಗಬೇಕೆಂದೂ ಇಲ್ಲ. ಯಾಕೆಂದರೆ, ಚಿತ್ರ ಪ್ರತಿಪಾದಿಸುವ ಆಶಯವನ್ನು ಎಲ್ಲರೂ ಒಪ್ಪಿಕೊಳ್ಳಬೇಕೆಂದೂ ಇಲ್ಲ.

1 comment:

  1. That was a nice movie. I had watched that movie last week.. :-)
    I like his all movies such as: Deja Vu, Unstoppable etc

    ReplyDelete