Saturday, May 24, 2014

ನಾಲ್ವರು ಶಿಷ್ಯರ ಕತೆ

ಮೋದಿ ಗೆದ್ದಾಗ ನನಗೆ ನೆನಪಾದ ಕತೆ ಇದು.

ನಾಲ್ವರು ಶಿಷ್ಯರು ಅದಾಗಲೇ ಶಿಕ್ಷಣ ಮುಗಿಸಿ ಗುರುಕುಲದಿಂದ ತಮ್ಮ ಗುರಿಯೆಡೆಗೆ ಹೊರಟಿದ್ದರು. ನಾಲ್ವರಲ್ಲಿ ಒಬ್ಬ ಮಾತ್ರ ಶತ ದಡ್ಡ. ಉಳಿದವರೆಲ್ಲ ಪ್ರಾಜ್ಞರು. ಅಪಾರ ಜ್ಞಾನವುಳ್ಳವರು. ಹೀಗೆ ದಾರಿ ಸಾಗುತ್ತಿದ್ದಂತೆ...ಒಂದೆಡೆ ಅವರಿಗೆ ಅದೇನೋ ಎಲುಬುಗಳ ಅವಶೇಷ ಕಂಡಿತು. ಒಬ್ಬ ಶಿಷ್ಯ ತನ್ನ ಶಕ್ತಿಯನ್ನು ಪ್ರದರ್ಶಿಸುವುದಕ್ಕೆ ಮುಂದಾದ. ಚೂರು ಚೂರಾಗಿರುವ ಎಲುಬುಗಳನ್ನೆಲ್ಲ ಅವನು ಮರು ಜೋಡಿಸಿದ. ನೋಡುತ್ತಲೇ ಗೊತ್ತಾಗಿ ಹೋಯಿತು ಅದೊಂದು ಹುಲಿಯ ಎಲುಬುಗಳು ಎನ್ನುವುದು. ಇನ್ನೊಬ್ಬ ಶಿಷ್ಯ ಇನ್ನೂ ಶಕ್ತಿವಂತ. ಅವನು ಅದಕ್ಕೆ ರಕ್ತಮಾಂಸವನ್ನು ನೀಡಿದ. ಈಗ ಅದು ಸಂಪೂರ್ಣ ಹುಲಿಯೇ ಆಗಿತ್ತು. ಪ್ರಾಣ ಒಂದು ಇರಲಿಲ್ಲ. ಆಗ ಮೂರನೇಯವ ತನ್ನ ಶಕ್ತಿ ಪ್ರದರ್ಶಿಸಲು ಹೊರಟ. ಅವನ ಶಕ್ತಿ ಎಷ್ಟಿತ್ತೆಂದರೆ ಅವನು ಅದಕ್ಕೆ ಪ್ರಾಣ ಅಥವಾ ಜೀವ ಕೊಡಲು ಹೊರಟ. ಆದರೆ ದಡ್ಡ ಶಿಷ್ಯನಿಗೆ ಇಷ್ಟೆಲ್ಲ ಜ್ಞಾನ, ಶಕ್ತಿ ಇರಲಿಲ್ಲ. ಅವನು ‘ಒಂದು ನಿಮಿಷ’ ಎಂದವನೇ ಪಕ್ಕದಲ್ಲೇ ಒಂದು ಮರವನ್ನು ನೋಡಿದ. ನೇರವಾಗಿ ಅವನು ಆ ಮರವನ್ನು ಹೋಗಿ ಹತ್ತಿಕೊಂಡ. ಇದೀಗ ಮೂರನೇ ಶಿಷ್ಯ ಹುಲಿಗೆ ಜೀವವನ್ನು ನೀಡಿದ. ಹುಲಿ ಜೀವ ಪಡೆದದ್ದೇ ಗರ್ಜಿಸಿ ಮೂವರ ಮೇಲೆ ಹಾರಿ ಅವರನ್ನು ತಿಂದು ಹಾಕಿ, ಕಾಡಿನ ಕಡೆಗೆ ನಡೆಯಿತು. ದಡ್ಡ ಶಿಷ್ಯ ಮರದಿಂದ ಇಳಿದು ತನ್ನ ಊರಿನ ಕಡೆಗೆ ಹೊರಟ.
ಮೋದಿಗೆ ಜೀವ ಕೊಡುವ ಮೂಲಕ ಮಾಧ್ಯಮಗಳು ತಮ್ಮ ಶಕ್ತಿಯನ್ನು ಪ್ರದರ್ಶಿಸಿವೆ. ಆದರೆ ಸರ್ವಾಧಿಕಾರ ಮನಸ್ಥಿತಿ ಮೊತ್ತ ಮೊದಲು ಎರಗುವುದು, ಅದುಮಿ ಹಿಡಿಯುವುದು ಮಾಧ್ಯಮಗಳ ಶಕ್ತಿಯನ್ನೇ. ಇದು ನಿಜ ಆಗದಿರಲಿ ಎನ್ನುವುದು ನನ್ನ ಆಶಯ.

Thursday, May 22, 2014

‘ಗಾಂಧೀಜೀ’ಗೆ ‘ಮೋದೀಜೀ’ ಪತ್ರ...

ಇದು ವಾರ್ತಾ ಭಾರತಿ ಪತ್ರಿಕೆಯಲ್ಲಿ ಗುರುವಾರ ಪ್ರಕಟವಾದ ಬೊಳುವಾರು ಮಹಮ್ಮದ್  ಕುನ್ಜಿ ಅವರ ಬರಹ 

ಕಳೆದೆರಡು ದಿನಗಳಿಂದ ಸುದ್ದಿ ಮಾಧ್ಯಮಗಳಲ್ಲಿ ವಿಪರೀತ ಸದ್ದು ಮಾಡುತ್ತಿರುವ ಶ್ರೀ ಗೋಪಾಲಕೃಷ್ಣ ಗಾಂಧಿಯವರು ದಿನ ಪತ್ರಿಕೆಯೊಂದರಲ್ಲಿ ಶ್ರೀ ನರೇಂದ್ರ ಮೋದಿಯವರಿಗೆ ಬರೆದ ಪತ್ರವನ್ನು ಹಾಗೂ ಮೇ 20ರಂದು ಮೋದಿಯವರು ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ಮಾಡಿದ ಸಮಯೋಚಿತ ಭಾಷಣವನ್ನು ಕೇಳಿದಾಗ, ಹೊಳೆದ ಕಾಲ್ಪನಿಕ ಪತ್ರವಿದು. ದಿನಪತ್ರಿಕೆಗಳಲ್ಲಿ ನಾವು ಓದುವುದು, ಹಾಗೂ ದೃಶ್ಯ ಮಾಧ್ಯಮಗಳಲ್ಲಿ ಆಲಿಸುವುದು, ಆ ಮಾತುಗಳನ್ನು ಬರೆದವರು ಅಥವಾ ಹೇಳಿದವರು ಯಾರು ಎಂಬ ಪ್ರಭಾವಳಿಯಲ್ಲಿ ಮಾತ್ರ. ನಮ್ಮ ಮಾತುಗಳನ್ನು ಅವರು ಬರೆದಾಗ, ಅಥವಾ ಹೇಳಿದಾಗ ಮಾತ್ರ ನಮಗದು ಸುಲಭಸಮ್ಮತವಾಗುತ್ತದೆ. ಶ್ರೀ ಗೊಪಾಲಕೃಷ್ಣ ಗಾಂಧಿಯವರ ಪತ್ರದ ಒಂದಕ್ಷರವನ್ನೂ ಬದಲಾಯಿಸದೆ, ನೀವು ಎಂಬಲ್ಲಿ ನಾನು ಎಂದಷ್ಟೇ ಬದಲಾಯಿಸಿಕೊಂಡು ಬರೆದ ಈ ಕಾಲ್ಪನಿಕ ಪತ್ರದ ಎಲ್ಲ ಮಾತುಗಳು, ನಮ್ಮ ಮಾತುಗಳೂ ಆದಾಗ, ಕೊನೆಯ ಪಾರಾದಲ್ಲಿರುವ ಕೆಲವು ಹೆಸರು ಸಲಹೆ ಇತ್ಯಾದಿಗಳನ್ನು ಹೊರತುಪಡಿಸಿ, ಶ್ರೀ ಮೋದಿಯವರ ಸ್ವಂತ ಮಾತುಗಳಂತೆಯೇ ಅನ್ನಿಸುತ್ತದಲ್ಲವೆ?- ಹಾಗಾದರೆ ಸಾರ್ವಜನಿಕವಾಗಿ ನಾವು ಆಡುವ ಮಾತುಳೆಲ್ಲವೂ ಬರಿಯ ಮಾತು ಮಾತ್ರವೇ?
- ಬೊಳುವಾರು ಮುಹಮ್ಮದ್ ಕುಂಞಿ


***
ಪ್ರೀತಿಯ ಗಾಂಧೀಜೀ,

ಹೃತ್ಪೂರ್ವಕ ಕೃತಜ್ಞತೆಯಿಂದ ಈ ಪತ್ರವನ್ನು ಬರೆಯುತ್ತಿದ್ದೇನೆ. ಆದರೆ, ಕೃತಜ್ಞತೆಗಳನ್ನು ಅಷ್ಟು ಸುಲಭದಲ್ಲಿ ಸಲ್ಲಿಸಲು ನನ್ನಿಂದ ಸಾಧ್ಯವಾಗುತ್ತಿಲ್ಲ. ಯಾಕೆಂದರೆ, ನಾನು ಈಗ ತಲುಪಿರುವ ಈ ಅತ್ಯುನ್ನತ ಹುದ್ದೆಯಲ್ಲಿ ನನ್ನನ್ನು ಕಾಣಬಯಸದ ವ್ಯಕ್ತಿಗಳಲ್ಲಿ ನೀವೂ ಒಬ್ಬರು. ನಾನು ಪ್ರಧಾನಿಯಾಗಿದ್ದೇನೆಂದು ಕೋಟ್ಯಂತರ ಮಂದಿ ಭಾವಪರವಶರಾಗಿದ್ದರೆ, ವಾಸ್ತವಿಕವಾಗಿ ಇನ್ನೂ ಹಲವು ಕೋಟ್ಯಂತರ ಮಂದಿ ದುಗುಡದಲ್ಲಿದ್ದಾರೆಂಬುದು ಎಲ್ಲರಿಗಿಂತ ಹೆಚ್ಚು ಚೆನ್ನಾಗಿ ನನಗೆ ಗೊತ್ತಿದೆ. ನಾನು ಇಲ್ಲಿಗೆ ತಲುಪುತ್ತೇನೆಂದು ಹಲವು ಮಂದಿ ಹೇಳಿದ್ದರಾದರೂ, ತೀರಾ ಇತ್ತೀಚಿನವರೆಗೂ ನಿಮಗದನ್ನು ನಂಬಲು ಸಾಧ್ಯವಾಗಿದ್ದಿರಲಾರದು. ಜವಾಹರಲಾಲ್ ನೆಹರೂ, ಲಾಲ್ ಬಹಾದೂರ್ ಶಾಸ್ತ್ರಿ ಹಾಗೂ ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿಯ ವಿರುದ್ಧ ಐತಿಹಾಸಿಕ ಹೋರಾಟ ನಡೆಸಿದ ಇನ್ನೋರ್ವ ಗುಜರಾತಿ ಮೊರಾರ್ಜಿ ದೇಸಾಯಿ ಮತ್ತು ನನ್ನ ಅಚ್ಚುಮೆಚ್ಚಿನ ರಾಜಕೀಯ ಗುರುವಾದ ಅಟಲ್ ಬಿಹಾರಿ ವಾಜಪೇಯಿಯವರು ಆಸೀನರಾಗಿದ್ದ ಈ ಪೀಠದಲ್ಲಿಯೇ ನಾನು ಕುಳಿತುಕೊಳ್ಳಲಿದ್ದೇನೆ. ನಾನು ಈ ಸ್ಥಾನವನ್ನೇರುವುದನ್ನು ಬಯಸದವರೂ ನಾನು ಇಲ್ಲಿರುವೆನೆಂಬ ಸತ್ಯವನ್ನು ಒಪ್ಪಿಕೊಳ್ಳಲೇಬೇಕು.
ಈ ಅಪರೂಪದ ಸುಯೋಗವು ನನಗೆ ದೊರೆತಿರುವ ಬಗ್ಗೆ ನಿಮಗೆ ಭಾರೀ ಕಳವಳವಾಗಿರುವ ಹೊರತಾಗಿಯೂ ನನ್ನಂತಹ ಅತ್ಯಂತ ಅವಕಾಶವಂಚಿತ ಸಮುದಾಯ ಹಾಗೂ ಕುಟುಂಬದಿಂದ ಬಂದ ವ್ಯಕ್ತಿಯೊಬ್ಬ ಭಾರತದ ಪ್ರಧಾನಿಯಾಗುವುದನ್ನು ನೀವು ಗೌರವಿಸಲೇಬೇಕು. ಇದು ಸಮಾನತೆಯನ್ನು ಪ್ರತಿಪಾದಿಸುವ ನಮ್ಮ ಸಂವಿಧಾನದ ಆಶಯವನ್ನು ಅತ್ಯಂತ ಪರಿಪೂರ್ಣತೆಯೊಂದಿಗೆ ಈಡೇರಿಸುತ್ತದೆ. ನಾನೊಬ್ಬ ‘ಚಾಯ್ ವಾಲಾ’ ಆಗಿದ್ದೇನೆಂದು ಕೆಲವರು ಅಂತ್ಯಂತ ಒರಟಾಗಿ ಹಾಗೂ ಕೀಳಾಗಿ ಮಾತನಾಡಿದಾಗ ನಿಮಗೆ ಹೊಟ್ಟೆ ತೊಳಸಿದಂತಾಗಿರಬಹುದು. ಜೀವನೋಪಾಯಕ್ಕಾಗಿ ಚಾ ಮಾರಾಟ ಮಾಡಿ, ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬ ಭಾರತ ಸರಕಾರದ ನೇತೃತ್ವ ವಹಿಸಲು ಸಮರ್ಥನಾಗುವುದು ಎಷ್ಟು ದೊಡ್ಡ ಅದ್ಭುತವೆಂದು ನಿಮ್ಮಲ್ಲೇ ನೀವು ಹೇಳಿಕೊಳ್ಳುತ್ತಿದ್ದಿರಿ. ಓರ್ವನ ‘ಚಮಚಾ’ ಆಗುವ ಬದಲು ಹಲವರಿಗೆ ‘ಚಹಾ ಪಾತ್ರೆ’ ಆಗುವುದು ಎಷ್ಟೋ ಒಳ್ಳೆಯದು.
ಆದರೆ, ನಾನು ಭಾರತದ ಅತ್ಯುನ್ನತ ಪದವಿಯನ್ನೇರಿದ್ದರಿಂದ ಕೋಟ್ಯಂತರ ಭಾರತೀಯರು ಯಾಕೆ ಆತಂಕಗೊಂಡಿದ್ದಾರೆ ಎಂಬ ವಿಷಯದೆಡೆಗೆ ಬರುತ್ತೇನೆ. 2014ರ ಚುನಾವಣೆಯಲ್ಲಿ ಮತದಾರರು ಮುಖ್ಯವಾಗಿ ನನ್ನ ಪರವಾಗಿ ಅಥವಾ ನನ್ನ ವಿರುದ್ಧವಾಗಿ ಎಂಬ ನಿಲುವಿನೊಂದಿಗೆ ಮತ ಚಲಾಯಿಸಿದ್ದರು. ನಾನು ದೇಶದ ಅತ್ಯುತ್ತಮ ಸಂರಕ್ಷಕ ಅಥವಾ ಅಲ್ಲವೇ? ಎಂಬುದೇ ಈ ಚುನಾವಣೆಯ ವಿಷಯವಾಗಿತ್ತು. ನಾನು ದೇಶದ ಅತ್ಯುತ್ತಮ ಸಂರಕ್ಷಕನೆಂಬುದಾಗಿ ನಮ್ಮ ಶೇ.31ರಷ್ಟು ಮತದಾರರು ಕಲ್ಪಿಸಿಕೊಳ್ಳುವಂತೆ ಮಾಡುವಲ್ಲಿ ನಾನು ಸಫಲನಾಗಿರುವುದರಿಂದ ಬಿಜೆಪಿಯು ಸ್ಥಾನಗಳನ್ನು ಗೆದ್ದಿತು. ಆದರೆ ಶೇ.69ರಷ್ಟು ಮತದಾರರು ನನ್ನನ್ನು ಅವರ ‘ರಖ್‌ವಾಲಾ’ನನ್ನಾಗಿ ನೋಡಬಯಸಲಿಲ್ಲ. ಏಕತೆ ಮತ್ತು ಸ್ಥಿರತೆ ಮಂತ್ರವನ್ನು ಜಪಿಸುವಾಗ ನಾನು ಆಗಾಗ್ಗೆ ಸರ್ದಾರ್ ಪಟೇಲರ ಹೆಸರು ಮತ್ತು ವ್ಯಕ್ತಿತ್ವದೆಡೆಗೆ ಹೊರಳುತ್ತಿದ್ದೆ. ತಮಗೆ ಗೊತ್ತಿರುವಂತೆ, ಸರ್ದಾರ್ ಪಟೇಲ್ ಅವರು ಸಂವಿಧಾನ ರಚನಾ ಅಸೆಂಬ್ಲಿಯ ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಒಂದು ವೇಳೆ ಭಾರತದ ಸಂವಿಧಾನವು ಭಾರತದ ಅಲ್ಪಸಂಖ್ಯಾತರಿಗೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ನಿರ್ಣಾಯಕವಾದ ಖಾತರಿಯನ್ನು ನೀಡುತ್ತಿದೆಯೆಂದಾದರೆ ಅದಕ್ಕಾಗಿ ಸರ್ದಾರ್ ಪಟೇಲ್ ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗುತ್ತದೆ. ಹಾಗೆಯೇ ಸಮಿತಿಯ ಇತರ ಸದಸ್ಯೆಯಾದ ಕಪೂರ್‌ತಲಾದ ಸಿಖ್ಖ್ ಒಬ್ಬರ ಕ್ರೈಸ್ತ ಪುತ್ರಿಯಾದ ರಾಜ್‌ಕುಮಾರಿ ಅಮೃತ್ ಕೌರ್‌ಗೂ ಕೃತಜ್ಞತೆ ವ್ಯಕ್ತಪಡಿಸಬೇಕು. ಒಟ್ಟಾರೆಯಾಗಿ, ಅಲ್ಪಸಂಖ್ಯಾತರ ಬಗ್ಗೆ ಸಂವಿಧಾನದ ಆಶಯವನ್ನು ನಾನು ಬದಲಾಯಿಸಕೂಡದು, ತಿರುಚಬಾರದು ಅಥವಾ ಕಲಬೆರಕೆಗೊಳಿಸಬಾರದು ಎಂದು ನೀವು ಬಯಸುತ್ತೀರಿ. ಆ ಸಮಿತಿಯಲ್ಲಿ ಬಲಿಷ್ಠ ಸರ್ದಾರ್ ಪಟೇಲ್ ಏನು ಹೇಳಿದ್ದಾರೆಂಬುದನ್ನು ನಾನು ಗಮನಿಸುವೆ. ಯಾಕೆ ಅಲ್ಲಿ ಅಷ್ಟೊಂದು ಭಯ ಭೀತಿಗಳು ನೆಲೆಸಿವೆ? ಅವರಿಗೆ ಯಾಕೆ ತಮ್ಮ ಭಯದ ಬಗ್ಗೆ ಧ್ವನಿಯೆತ್ತಲು ಸಾಧ್ಯವಾಗುತ್ತಿಲ್ಲ? ಯಾಕೆಂದರೆ, ನಾನು ಸಭೆಗಳನ್ನುದ್ದೇಶಿಸಿ ಭಾಷಣ ಮಾಡುವಾಗ ಭಾರತದ ಜನತೆಯನ್ನು ತನ್ನೊಂದಿಗೆ ಕೊಂಡೊಯ್ಯುವಂತಹ ಪ್ರಜಾಪ್ರಭುತ್ವವಾದಿಯೊಬ್ಬನ ಮಾತನ್ನು ಕೇಳಲು ಅವರು ಬಯಸುತ್ತಿದ್ದಾರೆಯೇ ಹೊರತು ಕಟ್ಟಾಜ್ಞೆಗಳನ್ನು ವಿಧಿಸುವ ಚಕ್ರವರ್ತಿಯ ಭಾಷಣವನ್ನಲ್ಲ. ಅಭಿವೃದ್ಧಿ ಎಂಬ ಪದವು ಭದ್ರತೆಗೆ ಪರ್ಯಾಯವಲ್ಲ. ಅಲ್ಪಸಂಖ್ಯಾತರಲ್ಲಿ ಮರುಭರವಸೆಯನ್ನು ಮೂಡಿಸಬೇಕು. ‘ಒಂದು ಕೈಯಲ್ಲಿ ಕುರಾನ್, ಇನ್ನೊಂದು ಕೈಯಲ್ಲಿ ಲ್ಯಾಪ್ ಟಾಪ್’ ಬಗ್ಗೆ ಅಥವಾ ಅಂಥಹದೇ ಪರಿಣಾಮವನ್ನು ಬೀರುವ ಇನ್ನಿತರ ಮಾತುಗಳು, ಅಂಥ ದೃಶ್ಯಗಳು ಮರು ಭರವಸೆಗಳನ್ನು ಮೂಡಿಸುವುದಿಲ್ಲ. ಯಾಕೆಂದರೆ ಅದರ ವಿರುದ್ಧವಾದ ಇನ್ನೊಂದು ದೃಶ್ಯವು ಅವರನ್ನು ಭಯಗ್ರಸ್ತಗೊಳಿಸುತ್ತದೆ. ರೌಡಿಯೊಬ್ಬ ಒಂದು ಕೈಯಲ್ಲಿ ಹಿಂದೂ ಪೌರಾಣಿಕ ಡಿವಿಡಿ, ಇನ್ನೊಂದು ಕೈಯ್ಯಲ್ಲಿ ಆಯುಧವನ್ನು ಹಿಡಿದು ಅಡ್ಡಾಡುತ್ತಿರುವ ದೃಶ್ಯಗಳು ಅವರನ್ನು ಭೀತಿಗೊಳಿಸುತ್ತಿವೆ. ಹಿಂದೆಯೆಲ್ಲ, ಶಾಲಾ ಮುಖ್ಯೋಪಾಧ್ಯಾಯರು ತರಗತಿಯ ಕೊಠಡಿಯ ಮೂಲೆಯಲ್ಲಿ ಉಪ್ಪನ್ನು ಸವರಿಗೆ ಬೆತ್ತವನ್ನು ಇರಿಸುತ್ತಿದ್ದರು.

ಯಾವ ವಿದ್ಯಾರ್ಥಿಯನ್ನೂ ಬಯಸಿದಾಗ ಹೊಡೆಯಲು ತನಗೆ ಸಾಮರ್ಥ್ಯವಿದೆಯೆಂಬುದನ್ನು ನೆನಪಿಸುವ ಈ ದೃಶ್ಯವು ಮಕ್ಕಳಲ್ಲಿ ಭಯವನ್ನು ಹುಟ್ಟಿಸುತ್ತಿತ್ತು. ಕೆಲವು ತಿಂಗಳ ಹಿಂದೆ ನಡೆದ, ಕನಿಷ್ಠ 42 ಮಂದಿ ಮುಸ್ಲಿಮರು ಹಾಗೂ 20 ಮಂದಿ ಹಿಂದೂಗಳನ್ನು ಬಲಿ ತೆಗೆದುಕೊಂಡ ಹಾಗೂ 50 ಸಾವಿರಕ್ಕೂ ಅಧಿಕ ಮಂದಿಯ ಸ್ಥಳಾಂತರಕ್ಕೆ ಕಾರಣವಾದ ‘ಮುಝಪ್ಫರ್ ನಗರ ಗಲಭೆಯ ನೆನಪುಗಳು ಕೂಡ ಈ ಉಪ್ಪು ಸವರಿದ ಬೆತ್ತವನ್ನು ನೆನಪಿಸುತ್ತದೆ’. ಜಾಗ್ರತೆ. ಇದನ್ನು ನಾವು ನಿಮಗೂ ಮಾಡಬಹುದಾಗಿದೆ’ ಎಂಬ ಈ ಬೆದರಿಕೆಯು, ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಬದುಕುತ್ತಿರುವ ಎಲ್ಲರನ್ನೂ ಭಯಗೊಳಿಸುತ್ತದೆ. ಕೇವಲ ಮುಸ್ಲಿಮರು ಮಾತ್ರವಲ್ಲ. ಕಾಶ್ಮೀರಿ ಪಂಡಿತರು ಸೇರಿದಂತೆ ಭಾರತದಲ್ಲಿರುವ ಎಲ್ಲ ಧಾರ್ಮಿಕ ಅಲ್ಪಸಂಖ್ಯಾತರು ಅಲ್ಲದೆ, ಭಾರತ ವಿಭಜನೆಯ ಸಂದರ್ಭದಲ್ಲಿ ಪಶ್ಚಿಮ ಪಂಜಾಬಿನಿಂದ ನಿರ್ವಸಿತರಾದ ಹಿಂದೂ ಹಾಗೂ ಸಿಖ್ಖರ ಮನಸ್ಸಿನಲ್ಲೂ ಭಯ ನೆಲೆಸಿದೆ. ನೈಜವಾದ ಅಥವಾ ಪೂರ್ವಯೋಜಿತವಾದ ಪ್ರಚೋದನೆಯಿಂದ ಹಠಾತ್ತನೆ ಗಲಭೆ ಸ್ಫೋಟಿಸಬಹುದೆಂಬ ಭೀತಿಯಿಂದಲೇ ಅವರು ದಿನಗಳೆಯುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಬದುಕಿನ ಪ್ರತಿ ನಿಮಿಷವನ್ನು ಅಪಮಾನ, ಶೋಷಣೆಯೊಂದಿಗೆ ಕಳೆಯುತ್ತಿದ್ದಾರೆ. ತಾರತಮ್ಯ, ಪೌರತ್ವವನ್ನು ತುಚ್ಚೀಕರಣಗೊಳಿಸುವುದು, ನೈತಿಕ ಸ್ಥೈರ್ಯವನ್ನು ಕೆಡಿಸುವ ಮೂಲಕ ನಿರಂತರವಾಗಿ ಅವರನ್ನು ಘಾಸಿಗೊಳಿಸಲಾಗುತ್ತಿದೆ. ಸಂವಿಧಾನದ 370ನೆ ವಿಧಿ, ಸಮಾನ ನಾಗರಿಕ ಸಂಹಿತೆ, ಅಯೋಧ್ಯೆಯಲ್ಲಿ ರಾಮ ಮಂದಿರದಂತಹ ಸವಕಲು ಹಾಗೂ ಆಧಾರರಹಿತ ಬೇಡಿಕೆಗಳ ಬಗ್ಗೆ ನನ್ನ ನಿಲುವುಗಳು ಹಾಗೂ ನಮ್ಮ ಉತ್ತರ ಹಾಗೂ ವಾಯವ್ಯ ಪ್ರಾಂತ್ಯದಲ್ಲಿರುವ ಹಿಂದೂ ನಿರಾಶ್ರಿತರ ಮತ್ತು ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿರುವ ಮುಸ್ಲಿಮ್ ನಿರಾಶ್ರಿತರ ಬಗ್ಗೆ ನಾನು ನೀಡಿರುವ ಹೇಳಿಕೆಗಳು ಭಯವನ್ನು ಹೊರತು ವಿಶ್ವಾಸವನ್ನು ಮೂಡಿಸಲಿಲ್ಲ. ಈ ಸಾಮೂಹಿಕ ಭಯವು ಭಾರತದ ಗಣರಾಜ್ಯಕ್ಕೆ ಶೋಭೆ ತರುವಂತದ್ದಲ್ಲ.
ಭಾರತದ ಅಲ್ಪಸಂಖ್ಯಾತರು ಭಾರತದ ಒಂದು ಪ್ರತ್ಯೇಕ ಭಾಗವಲ್ಲ. ಅವರು ಮುಖ್ಯವಾಹಿನಿಯಲ್ಲೇ ಮಿಳಿತವಾಗಿರುವವರು. ಯಾರೂ ಕೂಡ ಹಗ್ಗವನ್ನು ಸುಟ್ಟು ಬೂದಿ ಮಾಡಬಹುದು. ಆದರೆ, ಬೂದಿಯಿಂದ ಹೊಸ ಹಗ್ಗವನ್ನು ತಯಾರಿಸಲು ಸಾಧ್ಯವಿಲ್ಲ. ನಮಗೊಂದು ಐತಿಹಾಸಿಕ ವಿಜಯ ದೊರೆತಿದೆ. ಅದಕ್ಕಾಗಿ ನೀವು ಅಭಿನಂದಿಸಬೇಕು. ನನ್ನ ಬೆಂಬಲಿಗರಿಗೆ ಬೇಡದಿದ್ದರೂ, ಹಲವಾರು ಮಂದಿ ನಾನು ಅನಾವರಣಗೊಳ್ಳುವುದನ್ನು ಬಯಸುತ್ತಿದ್ದಾರೆ. ನಾನು ಅಪಾರ ಬುದ್ಧಿವಂತ ಹಾಗೂ ಹಿಂದಿನ ತಲೆಮಾರಿನ ವ್ಯಕ್ತಿಯೊಬ್ಬರಿಂದ ಆಸಕ್ತಿಕರವಲ್ಲದ ಹಾಗೂ ಅಪ್ರಿಯವಾದ ಸಲಹೆಯನ್ನು ನಾನು ಇಷ್ಟಪಡುವುದಿಲ್ಲ. ಆದರೆ, ನನ್ನನ್ನು ಬೆಂಬಲಿಸಿದವರ ಋಣ ಸಂದಾಯ ಮಾಡುವೆ. ಅಷ್ಟೇ ಸಮಾನವಾಗಿ ನನ್ನ ನನ್ನನ್ನು ಬೆಂಬಲಿಸದವರ ವಿಶ್ವಾಸವನ್ನೂ ಗೆದ್ದುಕೊಳ್ಳುವೆ. ಅಲ್ಪಸಂಖ್ಯಾತ ಆಯೋಗವನ್ನು ರಚಿಸುವಾಗ ನಾನು ಯೋಗ್ಯ ವ್ಯಕ್ತಿಗಳ ಪಟ್ಟಿಯನ್ನು ನೀಡುವಂತೆ ಪ್ರತಿಪಕ್ಷಗಳನ್ನು ಕೇಳಿಕೊಳ್ಳುವೆ ಹಾಗೂ ಯಾವುದೇ ಬದಲಾವಣೆ ಮಾಡದೆ ಅದನ್ನು ಒಪ್ಪಿಕೊಳ್ಳುವೆ. ಪರಿಶಿಷ್ಟ ಜಾತಿ, ಬುಡಕಟ್ಟುಗಳು ಹಾಗೂ ಭಾಷಾ ಅಲ್ಪಸಂಖ್ಯಾತರ ಸಮಿತಿಯ ನೇಮಕದಲ್ಲೂ ಹಾಗೆಯೇ ನಡೆದುಕೊಳ್ಳುವೆ. ಮುಂದಿನ ಮಾಹಿತಿ ಆಯುಕ್ತ, ಸಿಎಜಿ, ಸಿವಿಸಿ ಮತ್ತಿತರ ಹುದ್ದೆಗಳ ನೇಮಕದಲ್ಲೂ ಆಯ್ಕೆ ಸಮಿತಿಯ ಸರಕಾರೇತರ ಸದಸ್ಯರ ಶಿಫಾರಸ್ಸುಗಳು ಪಕ್ಷಪಾತರಹಿತವಾಗಿದ್ದರೆ, ಅದನ್ನು ಕ್ರೀಡಾಸ್ಫೂರ್ತಿಯೊಂದಿಗೆ ಪುರಸ್ಕರಿಸುವೆ. ನಾನು ಗಟ್ಟಿಯಾಗಿರುವೆ ಹಾಗೂ ಅಂತಹ ಅಪಾಯಗಳನ್ನು ನಿರ್ವಹಿಸಲು ಸಮರ್ಥನಿರುವೆ. ನಮ್ಮ ಅಖಿಲ ಭಾರತ ಮಟ್ಟದ ವರ್ಚಸ್ಸಿನಲ್ಲಿ ದಕ್ಷಿಣ ಪ್ರಾಂತ್ಯದ ಕೊರತೆ ಎದ್ದು ಕಾಣುತ್ತಿದೆ. ನಮ್ಮ ವಿಜಯಕ್ಕೆ ಹಿಂದಿ ಬೆಲ್ಟ್ ಪ್ರದೇಶಗಳು ನೀಡಿದ ಕೊಡುಗೆಯು, ಉತ್ತರ ಭಾರತದ ನಡುವೆ ಕಂದರವನ್ನು ಸೃಷ್ಟಿಸದಂತೆ ನೋಡಿಕೊಳ್ಳುವೆ. ದಕ್ಷಿಣ ಭಾರತದಿಂದ ರಾಜಕೀಯ ಹಿನ್ನೆಲೆಯಿರದ, ಆದರೆ ಪರಿಣಿತ ಸಮಾಜ ವಿಜ್ಞಾನಿ, ಪರಿಸರವಾದಿ, ಅರ್ಥ ಶಾಸ್ತ್ರಜ್ಞ ಅಥವಾ ಜನಸಂಖ್ಯಾ ಶಾಸ್ತ್ರಜ್ಞರೊಬ್ಬರನ್ನು ಪರಿಗಣಿಸುವೆ. ನೆಹರೂ ಸಂಪುಟದಲ್ಲಿ ಷಣ್ಮುಖನ್ ಚೆಟ್ಟಿ, ಜಾನ್ ಮಥಾಯ್, ಸಿ.ಎ. ದೇಶಮುಖ್ ಹಾಗೂ ಕೆ.ಎಲ್.ರಾವ್ ಇದ್ದರು. ಅವರು ಕಾಂಗ್ರೆಸ್ಸಿಗರಾಗಿರಲಿಲ್ಲ. ಅಷ್ಟೇಕೆ, ಅವರು ರಾಜಕಾರಿಣಿಗಳೂ ಆಗಿದ್ದಿರಲಿಲ್ಲ. ಇಂದಿರಾ ಗಾಂಧಿ ಸಂಪುಟದಲ್ಲಿ ಎಸ್. ಚಂದ್ರಶೇಖರ್ ಹಾಗೂ ವಿ.ಕೆ.ವಿ.ಆರ್. ರಾವ್ ಇದ್ದರು. ‘ಯುಪಿಎ’ ಸರಕಾರದ ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾದ ಪ್ರೊ. ಎಂ.ಎಸ್. ಸ್ವಾಮಿನಾಥನ್ ಅಥವಾ ಶ್ಯಾಮ್ ಬೆನೆಗಲ್ ಸದಸ್ಯರನ್ನಾಗಿ ಯಾಕೆ ನೇಮಿಸಲಿಲ್ಲವೆಂದು ನನಗಿನ್ನೂ ಅರ್ಥವಾಗಿಲ್ಲ.
ರಾಜ್ಯ ಸಭೆಯ ನಾಮ ನಿರ್ದೇಶಿತ ಸದಸ್ಯರಾಗಿದ್ದ ನೂರುಲ್ ಹುಸೇನ್, ಭಾರತ ಕಂಡ ಅತ್ಯುತ್ತಮ ಶಿಕ್ಷಣ ಸಚಿವರಲ್ಲೊಬ್ಬರಾಗಿದ್ದರು. ಸಾಮ್ರಾಜ್ಯವಾದಿ ಹಾಗೂ ಸೈಧಾಂತಿಕ ಅನುಕರಣೀಯತೆಗಳು ನನಗೆ ಇಷ್ಟವಾಗುತ್ತವೆ. ರಾಣಾ ಪ್ರತಾಪನಂತೆ ಹೋರಾಟ ನಡೆಸಿದರೂ ಆಡಳಿತದಲ್ಲಿ ಅಕ್ಬರನಂತಾಗುವೆ. ಹೃದಯದಲ್ಲಿ ‘ಸಾವರ್‌ಕರ್ ಆಗಿರುವ ನಾನು ಚಿಂತನೆಯಲ್ಲಿ ಅಂಬೇಡ್ಕರ್ ಆಗುವೆ.’ ಒಂದು ವೇಳೆ ನನ್ನ ‘ಡಿಎನ್‌ಎ’ನಲ್ಲಿ ಆರೆಸ್ಸೆಸ್ ಪ್ರಣೀತ ಹಿಂದುತ್ವವಿದ್ದರೂ, ನನಗೆ ಮತ ಚಲಾಯಿಸಿರದ ದೇಶದ ಶೇ.69ರಷ್ಟು ಮತದಾರರ ಪಾಲಿಗೆ ನಾನು ‘ವಝೀರ್ ಎ ಅಝಾಮ್’ ಕೂಡಾ ಆಗುವೆ. ನಮ್ಮ ದೇಶದ ಅತ್ಯುನ್ನತ ಸ್ಥಾನವನ್ನು ನಾನು ವಹಿಸಿಕೊಳ್ಳುವ ಸಂದರ್ಭದಲ್ಲಿ ನಿಮ್ಮ ಶುಭ ಹಾರೈಕೆಗಳನ್ನು ಕೋರುವೆ.
- ನರೇಂದ್ರ ಮೋದಿ

Wednesday, May 21, 2014

ಮತಯಂತ್ರ(ಇವಿಎಂ) ದುರ್ಬಳಕೆ ಸಾಧ್ಯವೇ?

ಎನ್‌ಡಿಎ ಅಥವಾ ಬಿಜೆಪಿ ಈ ಬಾರಿ ಗೆಲ್ಲುವುದು ತೀರಾ ಅನಿರೀಕ್ಷಿತವಾಗಿರಲಿಲ್ಲ. ಅವರ ಗೆಲುವಿಗೆ ಕಾಂಗ್ರೆಸ್ ಅಥವಾ ಯುಪಿಎ ಸರಕಾರ ಎಲ್ಲ ರೀತಿಯಲ್ಲೂ ದಾರಿಯನ್ನು ಸುಗಮ ಮಾಡಿಕೊಟ್ಟಿತ್ತು. ಮಾಧ್ಯಮಗಳು ಸೃಷ್ಟಿಸಿದ ಮೋದಿ ಅಲೆಯೂತನ್ನ ಪರಿಣಾಮ ಬೀರಲಿರುವುದು ಎಲ್ಲರಿಗೂ ಸ್ಪಷ್ಟವಿತ್ತು.ಇವುಗಳ ನಡುವೆಯೂಮೋದಿಗೆ ಸಿಕ್ಕಿದ ಸುನಾಮಿ ರೂಪದ ಜಯ ಅನೇಕಮುಖಂಡರಿಗೆ ಆಘಾತವನ್ನು ತಂದಿದೆ. ಹಲವರು ಈಗಾಗಲೇ ವಿದ್ಯುನ್ಮಾನ ಮತದಾನ ಯಂತ್ರದ(ಇವಿಎಂ)ಬಗ್ಗೆ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಹಲವೆಡೆ ಭ್ರಷ್ಟ ಅಭ್ಯರ್ಥಿಗಳು ಲಕ್ಷಾಂತರಮತಗಳ ಅಂತರದಿಂದಗೆದ್ದಿರುವುದು ಈ ಅನುಮಾನಕ್ಕೆ ಪುಷ್ಟಿಯನ್ನೂ ನೀಡಿದೆ. ಇದು ಕೇವಲ ಮೋದಿ ಅಲೆಯಿಂದಾದ ಪರಿಣಾಮ ಮಾತ್ರವೆ? ಎನ್ನುವ ಪ್ರಶ್ನೆ ಎಲ್ಲೆಡೆ ಹುಟ್ಟಿಕೊಂಡಿದೆ.
ಹಾಗೆ ನೋಡಿದರೆ ಭಾರತದಲ್ಲಿ ಪ್ರಪ್ರಥಮವಾಗಿ ಇವಿಎಂ ಕುರಿತಂತೆ ಅನುಮಾನ ವ್ಯಕ್ತಪಡಿಸಿದವರು ಬಿಜೆಪಿ ಮುಖಂಡ ಎಲ್. ಕೆ. ಅಡ್ವಾಣಿ. ಭಾರತ ಪ್ರಕಾಶಿಸುತ್ತಿದೆ ಎನ್ನುವಘೋಷಣೆ ವಿಫಲವಾಗಿ ಯುಪಿಎ ಅಧಿಕಾರಕ್ಕೆಬಂದಾಗ ಎಲ್. ಕೆ. ಅಡ್ವಾಣಿಯವರು, ಇವಿಎಂ ದುರ್ಬಳಕೆಯಾಗಿರುವಕುರಿತಂತೆ ಅನುಮಾನ ವ್ಯಕ್ತಪಡಿಸಿದ್ದರು.ಆ ಸಂದರ್ಭದಲ್ಲಿಹೇಗೆಮತಯಂತ್ರ ಕೆಲವುಕಡೆಗಳಲ್ಲಿ ದುರ್ಬಳಕೆಯಾಗಿದೆಎನ್ನುವುದನ್ನು ಅಧಿಕಾರಿಗಳೂ ಪತ್ತೆ ಹಚ್ಚಿದ್ದರು.ಆದರೆಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಈ ಬಾರಿ ಮೋದಿಯ ಭರಪೂರವಿಜಯಕೆಲವರಲ್ಲಿಅನುಮಾನವನ್ನು ಹುಟ್ಟಿಸಿದೆ. ಚುನಾವಣೆ ಫಲಿತಾಂಶ ಹೊರಬಿದ್ದ ಬೆನ್ನಿಗೇಮತಯಂತ್ರ ದುರ್ಬಳಕೆಯಾಗಿರುವ, ಹ್ಯಾಕ್ ಆಗಿರುವಕುರಿತಂತೆ ಆಪ್ ಅಭ್ಯರ್ಥಿಮೇಧಾ ಪಾಟ್ಕರ್ ದೂರೊಂದನ್ನು ಸಲ್ಲಿಸಿದರು. ಹ್ಯಾಕ್‌ಗೆ ಸಂಬಂಧಪಟ್ಟ ಅಂಶವೊಂದು ಮುಂಬಯಿಯಲ್ಲಿ ಪತ್ತೆಯಾಗಿರುವಬಗ್ಗೆಯೂಅವರು ದೂರಿನಲ್ಲಿ ತಿಳಿಸಿದ್ದಾರೆ.ಇದೀಗ ಒಬ್ಬೊಬ್ಬರೇ ಮತಯಂತ್ರಗಳ ಕುರಿತಂತೆ ತಮ್ಮ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಮತಯಂತ್ರ ಭಾರತದಲ್ಲಿ ಪ್ರಯೋಗಗೊಳ್ಳುವಮೊದಲೇವಿದೇಶಗಳಲ್ಲಿ ಪ್ರಯೋಗಗೊಂಡಿದ್ದು, ಹಲವೆಡೆ ಇದರ ಕುರಿತಂತೆಆಕ್ಷೇಪಗಳು ವ್ಯಕ್ತ ವಾಗಿವೆ.2000ನೆ ಇಸವಿಯಲ್ಲಿ ಫ್ಲೋರಿಡಾದಲ್ಲಿ ನಡೆದಚುನಾವಣೆಯವೇಳೆ ಭಾರೀ ಪ್ರಮಾಣದ ಅವ್ಯವಹಾರ ನಡೆದಂದಿನಿಂದಇವಿಎಂಗಳ ಭದ್ರತಾಸಮಸ್ಯೆ ವ್ಯಾಪಕವಾಗಿ ಜಾಹೀರಾಗಿದೆ.
ಹಲವು ದೇಶಗಳುಇವಿಎಂಗಳಬಳಕೆಗೆಕೊನೆಹಾಡಲುಬಯಸಿವೆ. 2006ರಲ್ಲಿ ಡಚ್ ಟಿ.ವಿ. ಒಂದುಸಾಕ್ಷಚಿತ್ರವನ್ನು ಪ್ರಸಾರಿಸಿದ್ದು, ಅವರ ಮಹಾಚುನಾವಣೆಯಲ್ಲಿಬಳಕೆಯಾಗಲಿದ್ದ ಇವಿಎಂಗಳನ್ನು ಹ್ಯಾಕ್ ಮಾಡುವುದುಎಷ್ಟುಸುಲಭವೆಂಬುದನ್ನು ತೋರಿಸಿತ್ತು.ಬಳಿಕ ಕ್ರಮೇಣ ಮತಯಂತ್ರಗಳನ್ನು ಹಿಂದಕ್ಕೆ ಪಡೆದ ನೆದರ್ಲ್ಯಾಂಡ್, ಬ್ಯಾಲೆಟ್ ಪೇಪರ್‌ಗಳಿಗೆಮರಳಿತ್ತು.
ಜರ್ಮನಿಯುಇವಿಎಂಗಳುಸಂವಿಧಾನ ಬಾಹಿರವೆಂದುಘೋಷಿಸಿದೆ. ಇವಿಎಂಗಳಿಗಾಗಿಸುಮಾರು 75 ದಶಲಕ್ಷ ಡಾಲರ್ ವ್ಯಯಿಸಿದ್ದ ಐರ್ಲ್ಯಾಂಡ್ ಅವುಗಳುಎಷ್ಟುಅಭದ್ರವೆಂದು ತಿಳಿದ ಬಳಿಕ ಅವುಗಳನ್ನು ಅಕ್ಷರಶಃ ರದ್ದುಗೊಳಿಸಿತು.
2009ರಲ್ಲಿ ಸ್ಟೀವ್ ಸ್ಟಿಗಾಲ್ ಎಂಬ ಸಿಬಿಐ ಸೈಬರ್ ಭದ್ರತಾ ಪರಿಣತನೊಬ್ಬ ವೆನಿಝವೆಲಾ, ಮೆಸಿಡೋನಿಯಾ ಹಾಗೂ ಯುಕ್ರೇನ್‌ಗಳಲ್ಲಿ ವಿದ್ಯುನ್ಮಾನ ಮತದಾನದಲ್ಲಿ ಅವ್ಯವಹಾರ ನಡೆಯುವಕಳವಳವಿದೆಯೆಂದು ಅಮೆರಿಕದಚುನಾವಣಾ ಸಹಕಾರ ಆಯೋಗಕ್ಕೆ ತಿಳಿಸಿದ್ದನು.
ಮೆಕ್ಲೆಚಿ ವರದಿಯ ಪ್ರಕಾರ ಸ್ಟೀವ್ ಹೇಳಿದ್ದ ಮಾತುಗಳು ಈ ಕೆಳಗಿನಂತಿವೆ.
ಮತದಾನಮಾಡುವಾಗ, ಬ್ಯಾಲೆಟ್‌ಗಳನ್ನು ಕೇಂದ್ರೀಯಸಂಗ್ರಹಕೇಂದ್ರಕ್ಕೆರವಾನಿಸುವಾಗ, ಅಧಿಕತ ಫಲಿತಾಂಶದತಖ್ತೆ ಸಿದ್ಧಪಡಿಸುವಾಗಹಾಗೂ ಫಲಿತಾಂಶವನ್ನು ಇಂಟರ್ನೆಟ್‌ನಲ್ಲಿ ಹಾಕುವಾಗಚುನಾವಣೆಗಳಲ್ಲಿ ಅವ್ಯವಹಾರ ನಡೆಯಬಹುದು.
ವೆಬ್‌ಸೈಟ್‌ನಲ್ಲಿ ಭಾರತೀಯಚುನಾವಣಾ ಆಯೋಗದಕುರಿತುಆಘಾತಕಾರಿ ಶೋಧನೆಯೊಂದರ ಫಲವಾಗಿ 2009ರ ಚುನಾವಣೆಯಲ್ಲಿ ಭಾರತದಇವಿಎಂಗಳಬಗ್ಗೆ ಭಾಗಶಃ ಕಳವಳವೆದ್ದಿತ್ತು. ನಿಜವಾಗಿಮತದಾನ ನಡೆದಹಾಗೂಮತಎಣಿಕೆ ನಡೆದಹಲವು ದಿನಗಳ ಮೊದಲೇಚುನಾವಣಾ ಫಲಿತಾಂಶವನ್ನು ತೋರಿಸಿದಂತಿದ್ದುದನ್ನು ಚುನಾವಣಾಆಯೋಗದವೆಬ್‌ಸೈಟ್ ಫೈಲ್‌ಗಳಲ್ಲಿ, ಪುಣೆ ನಗರದ ಮುಖ್ಯ ಮಾಹಿತಿ ಆಯುಕ್ತರಾಗಿದ್ದ ಡಾ.ಅನುಪಮ್ ಸರಾಫ್ ಹಾಗೂಮಣಿಪಾಲ್ ಅಡ್ವಾನ್ಸ್‌ಡ್ ರೀಸರ್ಚ್ ಗ್ರೂಪ್‌ನ ಉಪಾಧ್ಯಕ್ಷ ಪ್ರೊ.ಎಂ.ಡಿ.ನಲಪಾಟ್ ಪತ್ತೆ ಹಚ್ಚಿದ್ದರು.
ಭಾರತದಲ್ಲಿ 2009ರ ಚುನಾವಣೆ ಎ.16ರಿಂದ ಮೇ 13ರ ವರೆಗೆ 5 ಹಂತಗಳಲ್ಲಿ ನಡೆದಿತ್ತು. ಎಲ್ಲ ಹಂತಗಳುಮುಗಿಯುವವರೆಗೆಮತಎಣಿಕೆ ನಡೆಯುವಸಾಧ್ಯತೆಯಿಲಿಲ್ಲ. ಮತದಾನಆರಂಭವಾಗುವಮೊದಲು ಸರಾಫ್ ಹಾಗೂ ನಲಪಾಟ್ ಚುನಾವಣೆಯಮೇಲೆ ಕಣ್ಣಿಡಲು ನಿರ್ಧರಿಸಿದರು. ಹಾಗೂಚುನಾವಣಾಆಯೋಗದವೆಬ್‌ಸೈಟ್‌ನ ಎಕ್ಸೆಲ್ ಫೈಲ್‌ಗಳಿಂದ ಮಾಹಿತಿ ಮೂಲವನ್ನು ಪಡೆದುಕ್ಷೇತ್ರಗಳಹಾಗೂಅಭ್ಯರ್ಥಿಗಳ ವಿಕಿ ಒಂದನ್ನು ಸಷ್ಟಿಸಲು ನಿರ್ಧರಿಸಿದರು.
ಇಸಿಇಯಸ್ಪ್ರೆಡ್‌ಶೀಟ್‌ನಲ್ಲಿ ನೀವು ನಿರೀಕ್ಷಿಸಿರಬಹುದಾದುದೇ ಇತ್ತು. ಅಭ್ಯರ್ಥಿಗಳ ಹೆಸರು, ಲಿಂಗ, ವಿಳಾಸ, ಪಕ್ಷ ಇತ್ಯಾದಿ. ಆದರೆ, ಮೇ 6ರ ಬಳಿಕ ಸ್ಪ್ರೆಡ್‌ಶೀಟ್ ಬದಲಾಯಿತುಹಾಗೂಅನಿರೀಕ್ಷಿತವಾದ ಕೆಲವುವಿಷಯಗಳು ಸೇರ್ಪಡೆಗೊಂಡವು.
ಮೇ 6ರ ಬಳಿಕ, ಅಭ್ಯರ್ಥಿಯ ಹೆಸರಿಗೆಇವಿಎಂನಲ್ಲಿ ಆತನ ಸ್ಥಾನವನ್ನು ಅನುಸರಿಸಿಸಂಕೇತವನ್ನು ನೀಡಲಾಯಿತು. ಹಾಗೂಚಲಾವಣೆಯಾದಮತಗಳ ಸಂಖ್ಯೆಯನ್ನು ಸೇರಿಸಲಾಯಿತು.ಆದರೆ, ಅನೇಕಕ್ಷೇತ್ರಗಳಲ್ಲಿಮತದಾನ ಇನ್ನಷ್ಟೇಆಗಬೇಕಿತ್ತು ಹಾಗೂಮತದಾನ ನಡೆದಲ್ಲೂಮತಗಳ ಎಣಿಕೆಯಾಗಿರಲಿಲ್ಲ.ಇನ್ನೂ ವಿಚಿತ್ರವೆಂದರೆ, ಕ್ರಮೇಣ ಸ್ಪ್ರೆಡ್‌ಶೀಟ್‌ಗಳಲ್ಲಿ ‘ಚಲಾವಣೆಯಾದಮತಗಳ’ ಸಂಖ್ಯೆಯನ್ನು ಫಲಿತಾಂಶ ಪ್ರಕಟಿಸುವಮೊದಲುಹೊಂದಾಣಿಕೆಮಾಡಲಾಯಿತು.
ಚುನಾವಣೆ  ಪೂರ್ಣಗೊಳ್ಳುವ ಮೊದಲೇಆಯೋಗದವೆಬ್‌ಸೈಟ್‌ನಲ್ಲಿ ಫಲಿತಾಂಶ ಪ್ರಕಟಿಸಿದಂತೆತೋರುತ್ತಿದೆ ಎಂಬುದರ ಕುರಿತುತಂಡವು ತಕ್ಷಣವೇ ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಹಾಗೂ ಭಾರತದಚುನಾವಣಾಆಯೋಗವನ್ನು ಎಚ್ಚರಿಸಿತು.
 ಮೇ 16ರಂದು ಚುನಾವಣಾ ಫಲಿತಾಂಶ ಘೋಷಿಸಲಾಯಿತು. ಆ ದಿನ, ಆಯೋಗದಸ್ಪ್ರೆಡ್‌ ಶೀಟ್‌ನಲ್ಲಿ ಎ.16ರಂದು ಇದ್ದಂತೆಯೇಅಭ್ಯರ್ಥಿಯಹೆಸರು, ಲಿಂಗ, ವಿಳಾಸ, ಪಕ್ಷ ಇತ್ಯಾದಿಗಳಿದ್ದವು.ಆದರೆ, ಚಲಾವಣೆಯಾದ ಮತಗಳಅಂಕಿ-ಅಂಶವಿರಲಿಲ್ಲ.ಇದರಿಂದಾಗಿ ‘ವಿಚಿತ್ರವಾದಚಲಾಯಿತಮತ’ ಸಂಖ್ಯೆಯೊಂದಿಗೆಚುನಾವಣಾ ಪೂರ್ವಹಾಗೂ ಬಳಿಕದ ಹೋಲಿಕೆಅಸಾಧ್ಯವಾಯಿತು.
 ಬಳಿಕ, ಮಿಚಿಗನ್ ವಿವಿಯಜೆ.ಅಲೆಕ್ಸ್ ಹಾಲ್ಡರ್ಮನ್, ಇಲೆಕ್ಟ್ರಾನಿಕ್ ಫ್ರಂಟಿಯರ್ ಫೌಂಡೇಶನ್‌ನ ಸ್ಥಾಪಕ ಪ್ರಶಸ್ತಿ ವಿಜೇತ ಹರಿ ಕೆ.ಪ್ರಸಾದ್ ಹಾಗೂಡಚ್ ಇಂಟರ್ನೆಟ್ ಆದ್ಯ ರೋಪ್ ಗೋಂಗಿಜ್ಪ್ ಸಹಿತಐಟಿವಿಶೇಷಜ್ಞರತಂಡವೊಂದು ಭಾರತೀಯಇವಿಎಂಒಂದನ್ನು ಬಳಿಸಿ, ಅದನ್ನು 2 ಮಾರ್ಗಗಳಲ್ಲಿಹೇಗೆ ಹ್ಯಾಕ್ ಮಾಡಬಹುದೆಂಬುದರ ಪ್ರಾತ್ಯಕ್ಷಿಕೆಯೊಂದನ್ನು ನಡೆಸಿದರು.
ಫ್ಲೊರಿಡಾದಮತದಾರರು (ಹಾಗೂ ಅವ್ಯವಹಾರ ವೀಕ್ಷಕರು) ತಿಳಿದಿರುವಂತೆ, ಆಗಾಗ, ಕೆಲವುಕ್ಷೇತ್ರಗಳಕೆಲವುಎಲ್ಲೆಕಟ್ಟುಗಳಲ್ಲಿಚುನಾವಣೆಅವ್ಯವಹಾರಗಳು ನಡೆಯುತ್ತಿರುತ್ತವೆ.ಚುನಾವಣಾವಂಚನೆಮಾಡಲುಬಯಸುವವರಿಗೆಕೆಲವು ಆರಿಸಿದ ಮತಯಂತ್ರಗಳಲ್ಲಿಕೌಶಲವನ್ನು ತೋರಿಸಿದರೆಸಾಕಾಗುತ್ತದೆ. ಅದಕ್ಕಿಂತಕಡಿಮೆಯೆಂದರೆ, ನಿರ್ದಿಷ್ಟವ್ಯಕ್ತಿಗೆ ಲಾಭ ಆಗುವಂತೆ ಅಥವಾ ಆತನ ಸ್ಥಾನ ಉಳಿಯುವಂತೆಮಾಡಬಹುದು.
ತಮ್ಮ ಪ್ರಜಾಪ್ರಭುತ್ವದಸುರಕ್ಷೆಯಬಗ್ಗೆ ಚಿಂತಿತರಾದ ನಾಗರಿಕರು ಅದರಲ್ಲಿ ಕೈಜೋಡಿಸಿದರು.ಮಾಜಿಕಾನೂನು, ವಾಣಿಜ್ಯಹಾಗೂ ನ್ಯಾಯಸಚಿವ ಡಾ.ಸುಬ್ರಹ್ಮಣ್ಯನ್ ಸ್ವಾಮಿ, ಇದರ ನೇತತ್ವ ವಹಿಸಿ ಸುಪ್ರೀಂ ಕೋರ್ಟ್‌ಗೆಹೋದರು.ನ್ಯಾಯಾಲಯ ಭಾರತದಇವಿಎಂಗಳುಕನಿಷ್ಠ ಕಾಗದದ ದಾಖಲೆಯೊಂದನ್ನು ನೀಡುವಂತಿರಬೇಕೆಂದು ತೀರ್ಪು ನೀಡಿತು.
ಆದಾಗ್ಯೂ, ಈ ಚುನಾವಣೆಯಲ್ಲಿ 543ರಲ್ಲಿ ಕೇವಲ 8 ಕ್ಷೇತ್ರಗಳಲ್ಲಷ್ಟೇವೋಟ್ ವೆರಿಫೈಯರ್ ಪೇಪರ್ ಆಡಿಟ್ ಟ್ರೈಲ್ (ಎವಿಪಿಎಟಿ) ವ್ಯವಸ್ಥೆ ಇತ್ತು.ಎರಡು ಮತಯಂತ್ರಗಳೂ ಚಲಾಯಿಸಿದ ಎಲ್ಲ ಮತಗಳನ್ನು ಕಾಂಗ್ರೆಸ್‌ಗೆ ವರ್ಗಾಯಿಸುತ್ತಿದೆಯೆಂಬ ಆರೋಪ ಸಹಿತ ಇವಿಎಂಗಳಕಾರ್ಯಾಚರಣೆ ದೋಷದ ಬಗ್ಗೆ ಗಂಭೀರ ವರದಿಗಳಿದ್ದವು. ಇದು ಮತದಾರರ ಯಾದಿಯ ತಪ್ಪುಗಳಿಗೆ ಹೊರತಾದುದಾಗಿದೆ. ಮತದಾರರ ಪಟ್ಟಿಯಿಂದ ನೂರಾರು, ಸಾವಿರಾರುಹೆಸರುಗಳುಕಾಣೆಯಾಗಿದ್ದವು.ಇದಕ್ಕೆಆಯೋಗಕ್ಷಮೆ ಯಾಚನೆಯಹೊರತು, ಮರುಚುನಾವಣೆಯನ್ನೇನೂಮಾಡಿಲ್ಲ.
ಈ ಚುನಾವಣೆಯಲ್ಲಿಏನೇ ನಡೆದಿರಲಿ, ಭಾರತದಲ್ಲಿ ಚುನಾವಣಾಆಯೋಗ ಹಾಗೂಚುನಾವಣೆಗಳುಹೇಗೆ ನಡೆಯುತ್ತಿವೆಎಂಬುದರ ಗಂಭೀರ ಮರುಚಿಂತನೆ ನಡೆಯುವಸಾಧ್ಯತೆಯಿದೆ. ಈ ಸಲ ಮೇಲುಗೈಸಾಧಿಸಿದವರು ಮುಂದಿನ ಸಲ ಅಂತಹ ಅದಷ್ಟವಂತರಾಗಲಾರರು. ಪ್ರಜಾಪ್ರಭುತ್ವದಲ್ಲಿವಿಶ್ವಾಸವಿರಿಸಿರುವ ದೇಶವೊಂದರಲ್ಲಿ ವಿದ್ಯುನ್ಮಾನ ಯಂತ್ರಗಳಲ್ಲಿವಂಚನೆ ನಡೆಸುವುದೆಂದರೆಕೇವಲಮತಗಳನ್ನು ಕದಿಯುವುದಲ್ಲ. ಅದು ದೇಶದ ಆತ್ಮವನ್ನೇ ಕದ್ದಂತೆ.
ಸಿಐಎ ಸೈಬರ್ ಭದ್ರತಾ ತಜ್ಞ ಸ್ಟೀವ್ ಸ್ಟಿಗಾಲ್‌ನ ಅಭಿಪ್ರಾಯದಂತೆ: ಎಲ್ಲಿ ಮತವುಇಲೆಕ್ಟ್ರಾನ್ ಆಗಿ ಕಂಪ್ಯೂಟರ್ ಒಂದನ್ನು ಮುಟ್ಟುತ್ತದೆಯೋ, ಅದು ದುರುದ್ದೇಶ ಹೊಂದಿರುವವ್ಯಕ್ತಿಯೊಬ್ಬನಿಗೆಕೆಟ್ಟಸಂಗತಿಗಳು ನಡೆಯುವಂತೆಮಾಡುವಒಂದುಅವಕಾಶವಾಗಿರುತ್ತದೆ.
ಭಾರತದ ಪ್ರಜಾಪ್ರಭುತ್ವವು ವಿಶ್ವದ ಅದ್ಭುತಗಳಲ್ಲೊಂದಾಗಿದೆ. ಎಲ್ಲ ಪ್ರಜಾಪ್ರಭುತ್ವಗಳಂತೆಯೇ, ಮತದಾನಮಾಡುವ ಪವಿತ್ರಕರ್ತವ್ಯದ ವೇಳೆಎಲ್ಲರೂಸಮಾನರು, ಎಲ್ಲರಿಗೂವೌಲ್ಯವಿದೆ. ಎಲ್ಲರೂ ದೇಶದ ಭಾಗ ಹಾಗೂ ಎಲ್ಲರ ಧ್ವನಿಯೂ ಕೇಳಲ್ಪಡುತ್ತದೆ.
ಆ ಧ್ವನಿಯು ಅದುಮಲ್ಪಟ್ಟರೆ ಅಥವಾ ಅಪಹರಿಸಲ್ಪಟ್ಟರೆ, ಸುರಕ್ಷಾಕೂಟ ಮುಚ್ಚಲ್ಪಟ್ಟರೆ, ವ್ಯಕ್ತಿ ಮತ್ತು ದೇಶದ ನಡುವಿನ ಸಂಬಂಧಹಾಳಾದರೆ, ಆ ಸೂಕ್ಷ್ಮವಾದ ಸಂಬಂಧಕಡಿಯುತ್ತದೆ ಹಾಗೂ ವ್ಯಕ್ತಿಗೂ ದೇಶಕ್ಕೂ ಸಂಬಂಧವಿರುವುದಿಲ್ಲ. ಅದುಸ್ಟೀವ್ ಹೇಳಿದಂತೆ ಖಂಡಿತವಾಗಿ ಕೆಟ್ಟದ್ದು ನಡೆಯುವಂತೆ ಮಾಡಬಹುದು.

(ಆಧಾರ)

Monday, May 19, 2014

ಗಾಂಧಿಯಿಂದ ಮೋದಿಗೊಂದು ಪತ್ರ....!

ಮಹಾತ್ಮ ಗಾಂಧೀಜಿಯ ಮೊಮ್ಮಗ ಗೋಪಾಲಕೃಷ್ಣ ಗಾಂಧಿ ಅವರು ಭಾವೀ ಪ್ರಧಾನಿಮಂತ್ರಿ ನರೇಂದ್ರಮೋದಿಗೆ ಬರೆದಿರುವ ಬಹಿರಂಗ ಪತ್ರ ಇದು. ದಿ ಹಿಂದೂ ಪತ್ರಿಕೆಯಲ್ಲಿ ಬಂದಿರುವ ಈ ಬರಹವನ್ನು ಕನ್ನಡಕ್ಕಿಳಿಸಲಾಗಿದೆ. ಗೋಪಾಲಕೃಷ್ಣ ಗಾಂಧಿ ಇವರು ಮಾಜಿ ಆಡಳಿತಾಧಿಕಾರಿ ಹಾಗೂ ರಾಜತಾಂತ್ರಿಕರಾಗಿದ್ದರು. 2004-2009ರಲ್ಲಿ ಪಶ್ಚಿಮ ಬಂಗಾಳದಲ್ಲಿ ಹಾಗೂ 2005-2006ರಲ್ಲಿ ಬಿಹಾರದಲ್ಲಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು.

ಆತ್ಮೀಯ ನಿಯೋಜಿತ ಪ್ರಧಾನಿಯವರೇ,
  ನನ್ನ ಹತ್ಪೂರ್ವಕ ಅಭಿನಂದನೆಗಳೊಂದಿಗೆ ಈ ಪತ್ರವನ್ನು ಬರೆಯುತ್ತಿದ್ದೇನೆ.ಆದರೆ ಈ ಅಭಿನಂದನೆಗಳನ್ನು ನನಗೆ ಅಷ್ಟು ಸುಲಭವಾಗಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ನೀವು ಈಗ ತಲುಪಿರುವ ಈ ಅತ್ಯುನ್ನತ ಹುದ್ದೆಯಲ್ಲಿ ನಿಮ್ಮನ್ನು ಕಾಣಬಯಸದ ವ್ಯಕ್ತಿಗಳಲ್ಲಿ ನಾನೂ ಒಬ್ಬನು.ನೀವು ಪ್ರಧಾನಿಯಾಗಲಿದ್ದರೆಂದು ಕೋಟ್ಯಾಂತರ ಮಂದಿ ಭಾವಪರವಶರಾಗಿದ್ದಾರೆ. ವಾಸ್ತವಿಕವಾಗಿ ಇನ್ನೂ ಹಲವು ಕೋಟ್ಯಂತರ ಮಂದಿ ದುಗುಡದಲ್ಲಿದ್ದಾರೆಂಬುದು ನಿಮಗೆ ಎಲ್ಲರಿಗಿಂತಲೂ ಹೆಚ್ಚು ಚೆನ್ನಾಗಿ ಗೊತ್ತಿದೆ.
   ನೀವು ಅಲ್ಲಿಗೆ( ಪ್ರಧಾನಿ ಪದವಿಯೆಡೆಗೆ) ಮುನ್ನಡೆಯುತ್ತಿದ್ದೀರಿ ಎಂದು ಹಲವು ಮಂದಿ ಹೇಳಿದರಾದರೂ, ತೀರಾ ಇತ್ತೀಚಿನವರೆಗೂ ನನಗೆ ಅದನ್ನು ನಂಬಲು ಸಾಧ್ಯವಾಗಲಿಲ್ಲ. ಜವಾಹರಲಾಲ್ ನೆಹರೂ, ಲಾಲ್ ಬಹಾದೂರ್ ಶಾಸ್ತ್ರಿ ಹಾಗೂ ಇಂದಿರಾ ಗಾಂಧಿಯವರ ತುರ್ತುಪರಿಸ್ಥಿತಿಯ ವಿರುದ್ಧ ಐತಿಹಾಸಿಕ ಹೋರಾಟ ನಡೆಸಿದ ಇನ್ನೋರ್ವ ಗುಜರಾತಿ ಮೊರಾರ್ಜಿ ದೇಸಾಯಿ ಮತ್ತು ನಿಮ್ಮ ಅಚ್ಚುಮೆಚ್ಚಿನ ರಾಜಕೀಯ ಗುರುವಾದ ಅಟಲ್ ಬಿಹಾರಿ ವಾಜಪೇಯಿ ಆಸೀನರಾಗಿದ್ದ ಈ ಪೀಠದಲ್ಲಿಯೇ ನೀವೂ ಕುಳಿತುಕೊಳ್ಳಲಿದ್ದೀರಿ. ನೀವು ಈ ಸ್ಥಾನವನ್ನೇರುವುದನ್ನು ಬಯಸದವರು, ನೀವು ಅಲ್ಲಿರುವಿರೆಂಬ ಸತ್ಯವನ್ನು ಒಪ್ಪಿಕೊಳ್ಳಲೇಬೇಕು.
ಈ ಅಪರೂಪದ ಸುಯೋಗವು ನಿಮಗೆ ದೊರೆತಿರುವ ಬಗ್ಗೆ ನನಗೆ ಭಾರೀ ಕಳವಳವಾಗಿರುವ ಹೊರತಾಗಿಯೂ ನಿಮ್ಮಂತಹ ಅತ್ಯಂತ ಅವಕಾಶವಂಚಿತ ಸಮುದಾಯ ಹಾಗೂ ಕುಟುಂಬದಿಂದ ಬಂದ ವ್ಯಕ್ತಿಯೊಬ್ಬರು ಭಾರತದ ಪ್ರಧಾನಿಯಾಗುವುದನ್ನು ಗೌರವಿಸುತ್ತೇನೆ. ಇದು ಸಮಾನತೆಯನ್ನು ಪ್ರತಿಪಾದಿಸುವ ನಮ್ಮ ಸಂವಿಧಾನದ ಅಶಯವನ್ನು ಅತ್ಯಂತ ಪರಿಪೂರ್ಣತೆಯೊಂದಿಗೆ ಈಡೇರಿಸುತ್ತದೆ.


ದೇಶದ ಚಿಂತನೆಯ ಮರುಆವಲೋಕನ
ನೀವು ಓರ್ವ ‘ಚಾಯ್‌ವಾಲಾ’ ಆಗಿದ್ದೀರೆಂದು ಕೆಲವರು ಅತ್ಯಂತ ಒರಟಾಗಿ ಹಾಗೂ ಕೀಳಾಗಿ ಮಾತನಾಡಿದಾಗ ನನಗೆ ಹೊಟ್ಟೆ ತೊಳಸಿದಂತಾಗುತ್ತಿತ್ತು. ಜೀವನೋಪಾಯಕ್ಕಾಗಿ ಚಾ ಮಾರಾಟ ಮಾಡಿ, ಜೀವನ ಸಾಗಿಸುತ್ತಿದ್ದ ವ್ಯಕ್ತಿಯೊಬ್ಬ ಭಾರತ ಸರಕಾರದ ನೇತತ್ವ ವಹಿಸಲು ಸಮರ್ಥನಾಗುವುದು ಎಷ್ಟು ದೊಡ್ಡ ಅದ್ಭುತವೆಂದು ನನ್ನಲ್ಲೇ ನಾನು ಹೇಳಿಕೊಳ್ಳುತ್ತಿದ್ದೆ. ಓರ್ವನ ಚಮಚಾ ಆಗುವ ಬದಲು ಹಲವರಿಗೆ ‘ಚಹಾ ಪಾತ್ರೆ’ ಆಗುವುದು ಎಷ್ಟೋ ಒಳ್ಳೆಯದು.
  ಆದರೆ, ಶ್ರೀಮಾನ್ ಮೋದಿಯವರೇ, ನೀವು ಭಾರತದ ಅತ್ಯುನ್ನತ ಪದವಿಯನ್ನೇರಿರುವುದರಿಂದ ಕೋಟ್ಯಂತರ ಭಾರತೀಯರು ಯಾಕೆ ಆತಂಕಗೊಂಡಿದ್ದಾರೆಂಬ ವಿಷಯದೆಡೆಗೆ ಬರುತ್ತೇನೆ. 2014ರ ಚುನಾವಣೆಯಲ್ಲಿ ಮತದಾರರು ಮುಖ್ಯವಾಗಿ ಮೋದಿಯ ಪರವಾಗಿ ಅಥವಾ ಮೋದಿಯ ವಿರುದ್ಧ ಎಂಬ ನಿಲುವಿನೊಂದಿಗೆ ಮತಚಲಾಯಿಸಿದ್ದರು. ‘‘ನರೇಂದ್ರ ಮೋದಿ ದೇಶದ ಅತ್ಯುತ್ತಮ ಸಂರಕ್ಷಕರೇ ಅಥವಾ ಅಲ್ಲವೇ?’’ ಎಂಬುದೇ ಈ ಚುನಾವಣೆಯ ವಿಷಯವಾಗಿತ್ತು.ನೀವು ದೇಶದ ಅತ್ಯುತ್ತಮ ಸಂರಕ್ಷಕರೆಂಬುದಾಗಿ ನಮ್ಮ ಶೇ.31ರಷ್ಟು (ಪಕ್ಷವು ಚುನಾವಣೆಯಲ್ಲಿ ಪಡೆದಿರುವ ಮತಗಳ ಪಾಲು) ಮತದಾರರು ಕಲ್ಪಿಸಿಕೊಳ್ಳುವಂತೆ ಮಾಡುವಲ್ಲಿ ನೀವು ಸಫಲರಾಗಿರುವುದರಿಂದ ಬಿಜೆಪಿಯು ಸ್ಥಾನಗಳನ್ನು ಗೆದ್ದಿತು. ಆದರೆ, ಶೇ.69ರಷ್ಟು ಮತದಾರರು ನಿಮ್ಮನ್ನು ಅವರ ರಖ್‌ವಾಲಾ(ರಕ್ಷಕ)ರನ್ನಾಗಿ ನೋಡಬಯಸುತ್ತಿಲ್ಲ.
ಅಲ್ಪಸಂಖ್ಯಾತರಲ್ಲಿ ಆತ್ಮವಿಶ್ವಾಸವನ್ನು ಮೂಡಿಸುವುದು
ಏಕತೆ ಮತ್ತು ಸ್ಥಿರತೆಯ ಮಂತ್ರವನ್ನು ಜಪಿಸುವಾಗ, ನೀವು ಆಗಾಗ್ಗೆ ಸರ್ದಾರ್ ಪಟೇಲ್‌ರ ಹೆಸರು ಮತ್ತು ವ್ಯಕ್ತಿತ್ವದೆಡೆಗೆ ಹೊರಳುತ್ತೀರಿ. ನಿಮಗೆ ಗೊತ್ತಿರುವಂತೆ, ಸರ್ದಾರ್ ಪಟೇಲ್ ಅವರು ಸಂವಿಧಾನರಚನಾ ಅಸೆಂಬ್ಲಿಯ ಅಲ್ಪಸಂಖ್ಯಾತರ ಸಮಿತಿಯ ಅಧ್ಯಕ್ಷತೆಯನ್ನು ರಚಿಸಿದ್ದರು. ಒಂದು ವೇಳೆ ಭಾರತದ ಸಂವಿಧಾನವು ಭಾರತದ ಅಲ್ಪಸಂಖ್ಯಾತರಿಗೆ ಶೈಕ್ಷಣಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ನಿರ್ಣಾಯಕವಾದ ಖಾತರಿಯನ್ನು ನೀಡುತ್ತಿದೆಯೆಂದಾದರೆ ಅದಕ್ಕಾಗಿ ಸರ್ದಾರ್ ಪಟೇಲ್ ಅವರಿಗೆ ಕತಜ್ಞತೆ ಸಲ್ಲಿಸಲೇಬೇಕಾಗುತ್ತದೆ. ಹಾಗೆಯೇ ಸಮಿತಿಯ ಇತರ ಸಸ್ಯೆಯಾದ ಕಪೂರ್‌ತಲಾದ ಸಿಖ್ಖ್ ಒಬ್ಬರ ಕ್ರೈಸ್ತ ಪುತ್ರಿಯಾದ ರಾಜ್‌ಕುಮಾರಿ ಅಮತ್ ಕೌರ್‌ಗೂ ಕತಜ್ಞತೆ ವ್ಯಕ್ತಪಡಿಸಬೇಕು. ಒಟ್ಟಾರೆಯಾಗಿ, ಅಲ್ಪಸಂಖ್ಯಾತರ ಬಗ್ಗೆ ಸಂವಿಧಾನದ ಆಶಯವನ್ನು ಮೋದಿ ಬದಲಾಯಿಸಕೂಡದು,ತಿರುಚಬಾರದು ಅಥವಾ ಕಲಬೆರಕೆಗೊಳಿಸಕೂಡದು. ಆ ಸಮಿತಿಯಲ್ಲಿ ಬಲಿಷ್ಠಸರ್ದಾರ್ ಪಟೇಲ್ ಏನು ಹೇಳಿದ್ದರೆಂಬುದನ್ನು ನೀವು ಓದುವುದು ಒಳ್ಳೆಯದು.
ಯಾಕೆ ಅಲ್ಲಿ ಅಷ್ಟೊಂದು ಭಯಭೀತಿಗಳು ನೆಲೆಸಿವೆ? ಅವರಿಗೆ ಯಾಕೆ ತಮ್ಮ ಭಯದ ಬಗ್ಗೆ ಧ್ವನಿಯೆತ್ತಲು ಸಾಧ್ಯವಾಗುತ್ತಿಲ್ಲ?
  ಯಾಕೆಂದರೆ ನೀವು ರ್ಯಾಲಿಗಳನ್ನು ಉದ್ದೇಶಿಸಿ ಭಾಷಣ ಮಾಡುವಾಗ ಭಾರತದ ಜನತೆಯನ್ನು ತನ್ನೊಂದಿಗೆ ಕೊಂಡೊಯ್ಯುವಂತಹ ಪ್ರಜಾಪ್ರಭುತ್ವವಾದಿಯೊಬ್ಬನ ಮಾತನ್ನು ಕೇಳಲು ಅವರು ಬಯಸುತ್ತಿದ್ದಾರೆಯೇ ಹೊರತು ಕಟ್ಟಾಜ್ಞೆಗಳನ್ನು ವಿಧಿಸುವ ಚಕ್ರವರ್ತಿಯ ಭಾಷಣವನ್ನಲ್ಲ. ಮೋದಿಯವರೇ ಅಲ್ಪಸಂಖ್ಯಾತರಲ್ಲಿ ಮರುಭರವಸೆಯನ್ನು ಮೂಡಿಸಿ. ‘‘ಅಭಿವದ್ಧಿ’’ ಎಂಬ ಪದವು ಭದ್ರತೆಗೆ ಪರ್ಯಾಯವಲ್ಲ. ‘‘ಖುರ್‌ಆನ್ ಒಂದು ಕೈಯಲ್ಲಿ, ಇನ್ನೊಂದು ಕೈಯಲ್ಲಿ ಲ್ಯಾಪ್‌ಟಾಪ್’’ ಬಗ್ಗೆ ಅಥವಾ ಅಂತಹದೇ ಪರಿಣಾಮವನ್ನು ಬೀರುವ ಇನ್ನಿತರ ಮಾತುಗಳನ್ನು ಆಡಿದ್ದೀರಿ. ಆಂತಹ ದಶ್ಯವು, ಅವರಲ್ಲಿ ಮರುಭರವಸೆಯನ್ನು ಮೂಡಿಸಲಾರದು. ಏಕೆಂದರೆ ಅದಕ್ಕೆ ವಿರುದ್ಧವೊಂದು ಇನ್ನೊಂದು ದಶ್ಯವು ಅವರನ್ನು ಭಯಗ್ರಸ್ತಗೊಳಿಸಿದೆ. ರೌಡಿಯೊಬ್ಬ ಒಂದು ಕೈಯಲ್ಲಿ ಹಿಂದೂ ಪೌರಾಣಿಕ ಡಿವಿಡಿ, ,ಇನ್ನೊಂದು ಕೈಯಲ್ಲಿ ತ್ರಿಶೂಲವನ್ನು ಹಿಡಿದು ಅಡ್ಡಾಡುತ್ತಿರುವ ದಶ್ಯಗಳು ಅವರನ್ನು ಭೀತಿಗೊಳಿಸುತ್ತವೆ.
ಹಿಂದಿನ ದಿನಗಳಲ್ಲಿ, ಶಾಲಾಮುಖ್ಯೋಪಾಧ್ಯಾಯರು ತರಗತಿಯ ಕೊಠಡಿಯ ಮೂಲೆಯಲ್ಲಿ ಉಪ್ಪನ್ನು ಸವರಿದ ಬೆತ್ತವನ್ನು ಇರಿಸುತ್ತಿದ್ದರು. ಯಾವ ವಿದ್ಯಾರ್ಥಿಗೂ ತನಗೆ ಬೇಕಾದರೆ ಹೊಡೆಯಲು ತನಗೆ ಸಾಮರ್ಥ್ಯವಿದೆಯೆಂಬುದನ್ನು ನೆನಪಿಸುವ ಈ ದಶ್ಯವು ಮಕ್ಕಳಲ್ಲಿ ಭಯವನ್ನು ಹುಟ್ಟಿಸುತ್ತಿತ್ತು. ಕೆಲವು ತಿಂಗಳ ಹಿಂದೆ ನಡೆದ, ಕನಿಷ್ಠ 42 ಮಂದಿ ಮುಸ್ಲಿಮರು ಹಾಗೂ 20 ಮಂದಿ ಹಿಂದೂಗಳನ್ನು ಬಲಿತೆಗೆದುಕೊಂಡ ಹಾಗೂ 50 ಸಾವಿರಕ್ಕೂ ಅಧಿಕ ಮಂದಿಯ ಸ್ಥಳಾಂತರಕ್ಕೆ ಕಾರಣವಾದ ಮುಝಫ್ಫರ್‌ನಗರ್ ಗಲಭೆಯ ನೆನಪುಗಳೂ ಕೂಡಾ ಈ ಉಪ್ಪು ಸವರಿದ ಬೆತ್ತವನ್ನು ನೆನಪಿಸುತ್ತದೆ. ‘‘ಜಾಗ್ರತೆ. ಇದನ್ನು ನಾವು ನಿಮಗೆ ಮಾಡಬಹುದಾಗಿದೆ’’ ಎಂಬ ಈ ಬೆದರಿಕೆಯು, ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಬದುಕುತ್ತಿರುವ ಎಲ್ಲರನ್ನೂ ಭಯಗೊಳಿಸುತ್ತದೆ.
  ಕೇವಲ ಮುಸ್ಲಿಮರು ಮಾತ್ರವಲ್ಲ, ಕಾಶ್ಮೀರಿ ಪಂಡಿತರು ಸೇರಿದಂತೆಭಾರತದಲ್ಲಿರುವ ಎಲ್ಲಾ ಧಾರ್ಮಿಕ ಅಲ್ಪಸಂಖ್ಯಾತರು ಅಲ್ಲದೆ ಭಾರತ ವಿಭಜನೆಯ ಸಂದರ್ಭದಲ್ಲಿ ಪಶ್ಚಿಮ ಪಂಜಾಬ್‌ನಿಂದ ನಿರ್ವಸಿತರಾದ ಹಿಂದೂ ಹಾಗೂ ಸಿಖ್ಖರ ಮನದಲ್ಲೂ ಭಯ ನೆಲೆಸಿದೆ. ನೈಜವಾದ ಅಥವಾ ಪೂರ್ವಯೋಜಿತವಾದ ಪ್ರಚೋದನೆಯಿಂದ ಹಠಾತ್ತನೆ ಗಲಭೆ ಸ್ಫೋಟಿಸಬಹುದೆಂಬ ಭೀತಿಯಿಂದಲೇ ಅವರು ದಿನಗಳೆಯುತ್ತಿದ್ದಾರೆ. ದಲಿತರು, ಮಹಿಳೆಯರು ಅದರಲ್ಲೂ ವಿಶೇಷವಾಗಿ ಮಹಿಳೆಯರು ತಮ್ಮ ಬದುಕಿನ ಪ್ರತಿ ನಿಮಿಷವನ್ನು ಅಪಮಾನ, ಶೋಷಣೆಯೊಂದಿಗೆ ಕಳೆಯುತ್ತಿದ್ದಾರೆ.ತಾರತಮ್ಯ,ಪೌರತ್ವವನ್ನು ತುಚ್ಛೀಕರಣಗೊಳಿಸುವುದು, ನೈತಿಕ ಸ್ಥೆೃರ್ಯವನ್ನು ಕೆಡಿಸುವ ಮೂಲಕ ನಿರಂತರವಾಗಿ ಅವರನ್ನು ಘಾಸಿಗೊಳಿಸುತ್ತಿದೆ.
ಸಂವಿಧಾನದ 370ನೆ ವಿಧಿ, ಸಮಾನನಾಗರಿಕ ಸಂಹಿತೆ, ಅಯೋಧ್ಯೆಯಲ್ಲಿ ರಾಮಮಂದಿರದಂತಹ ಸವಕಲು ಹಾಗೂ ಆಧಾರರಹಿತ ಬೇಡಿಕೆಗಳ ಬಗ್ಗೆ ನೀವು ಯಾವ ನಿಲುವನ್ನು ತೆಗೆದುಕೊಂಡಿದ್ದೀರಿ. ನಮ್ಮ ಉತ್ತರ ಹಾಗೂ ವಾಯವ್ಯ ಪ್ರಾಂತ್ಯದಲ್ಲಿರುವ ಹಿಂದೂ ನಿರಾಶ್ರಿತರು ಮತ್ತು ಪೂರ್ವ ಹಾಗೂ ಈಶಾನ್ಯ ಭಾರತದಲ್ಲಿರುವ ಮುಸ್ಲಿಂ ನಿರಾಶ್ರಿತರ ಬಗ್ಗೆ ನೀವು ನೀಡಿರುವ ಹೇಳಿಕೆಗಳು ಭಯವನ್ನು ಹುಟ್ಟಿಸುತ್ತವೆಯೇ ಹೊರತು ವಿಶ್ವಾಸವನ್ನು ಮೂಡಿಸುವುದಿಲ್ಲ. ಶ್ರೀಯುತ ಮೋದಿಯವರೇ ಈ ಸಾಮೂಹಿಕ ಭಯವು ಭಾರತದ ಗಣರಾಜ್ಯಕ್ಕೆ ಶೋಭೆ ತರುವಂತಹದ್ದಲ್ಲ.
 ಭಾರತದ ಅಲ್ಪಸಂಖ್ಯಾತರು ಭಾರತದ ಒಂದು ಪ್ರತ್ಯೇಕ ಭಾಗವಲ್ಲ. ಅವರು ಮುಖ್ಯವಾಹಿನಿಯಲ್ಲೇ ಮಿಳಿತವಾಗಿರುವವರು. ಯಾರೂ ಕೂಡ ಹಗ್ಗವನ್ನು ಸುಟ್ಟು ಬೂದಿ ಮಾಡಬಹುದು. ಆದರೆ ಬೂದಿಯಿಂದ ಹೊಸ ಹಗ್ಗವನ್ನು ತಯಾರಿಸಲು ಸಾಧ್ಯವಿಲ್ಲ.
   ನಿಮಗಾಗಿ ಐತಿಹಾಸಿಕ ವಿಜಯವೊಂದು ದೊರೆತಿದೆ. ಅದಕ್ಕಾಗಿ ನಿಮ್ಮನ್ನು ಮತ್ತೊಮ್ಮೆ ಅಭಿನಂದಿಸುತ್ತೇನೆ. ಇಡೀ ಜಗತ್ತೇ ಅಚ್ಚರಿಪಟ್ಟಿರುವಂತಹ ಐತಿಹಾಸಿಕ ಇನ್ನಿಂಗ್ಸ್ ಒಂದು ಆರಂಭಗೊಂಡಿದೆ. ನಿಮ್ಮ ಬೆಂಬಲಿಗರಿಗೆ ಬೇಡದಿದ್ದರೂ, ಹಲವಾರು ಮಂದಿ ನೀವು ಅನಾವರಣಗೊಳ್ಳುವುದನ್ನು ಬಯಸುತ್ತಿದ್ದಾರೆ. ನೀವು ಅಪಾರ ಬುದ್ಧಿವಂತರು ಹಾಗೂ ಹಿಂದಿನ ತಲೆಮಾರಿನ ವ್ಯಕ್ತಿಯೊಬ್ಬರಿಂದ ಅಸಕ್ತಿಕರವಲ್ಲದ ಹಾಗೂ ಅಪ್ರಿಯವಾದ ಸಲಹೆಯನ್ನು ನೀವು ಇಷ್ಟಪಡದಿರಬಹುದು. ಆದರೆ ನಿಮ್ಮನ್ನು ಬೆಂಬಲಿಸಿದವರ ಋಣ ಸಂದಾಯ ಮಾಡಿ. ಅಷ್ಟೇ ಸಮಾನವಾಗಿ ನಿಮ್ಮನ್ನು ಬೆಂಬಲಿಸದವರ ವಿಶ್ವಾಸವನ್ನೂ ಗೆದ್ದುಕೊಳ್ಳಿ. ಅಲ್ಪಸಂಖ್ಯಾತ ಆಯೋಗವನ್ನು ರಚಿಸುವಾಗ ನೀವು ಯೋಗ್ಯ ವ್ಯಕ್ತಿಗಳ ಪಟ್ಟಿಯನ್ನು ನೀಡುವಂತೆ ಪ್ರತಿ ಪಕ್ಷಗಳನ್ನು ಕೇಳಿಕೊಳ್ಳಿ ಹಾಗೂ ಯಾವುದೇ ಬದಲಾವಣೆ ಮಾಡದೆ ಅದನ್ನು ಒಪ್ಪಿಕೊಳ್ಳಿ.ಪರಿಶಿಷ್ಟ ಜಾತಿ, ಬುಡಕಟ್ಟುಗಳು ಹಾಗೂ ಭಾಷಾ ಅಲ್ಪಸಂಖ್ಯಾತರ ಸಮಿತಿಯ ನೇಮಕದಲ್ಲೂ ಹಾಗೆಯೇ ನಡೆದುಕೊಳ್ಳಿ. ಮುಂದಿನ ಮಾಹಿತಿ ಆಯುಕ್ತ, ಸಿಎಜಿ, ಸಿವಿಸಿ ಮತ್ತಿತರ ಹುದ್ದೆಗಳ ನೇಮಕದಲ್ಲೂ ಆಯ್ಕೆ ಸಮಿತಿಯ ಸರಕಾರೇತರ ಸದಸ್ಯರ ಶಿಫಾರಸುಗಳು ಪಕ್ಷಪಾತರಹಿತವಾಗಿದ್ದರೆ, ಅದನ್ನು ಕ್ರೀಡಾಸ್ಫೂರ್ತಿಯೊಂದಿಗೆ ಪುರಸ್ಕರಿಸಿ. ನೀವು ಬಲಿಷ್ಠರಾಗಿದ್ದೀರಿ ಹಾಗೂ ಅಂತಹ ಅಪಾಯಗಳನ್ನು ಸಹಿಸಲು ನೀವು ಸಮರ್ಥರಿದ್ದೀರಿ.
ದಕ್ಷಿಣದ ಭಾರತದ ಪ್ರಾತಿನಿಧ್ಯದ ಕೊರತೆಯನ್ನು ನಿವಾರಿಸಿ
     ಶ್ರೀಯುತ ಮೋದಿಯವರೇ, ನಿಮ್ಮ ಅಖಿಲ ಭಾರತ ಮಟ್ಟದ ವರ್ಚಸ್ಸಿನಲ್ಲಿ ದಕ್ಷಿಣ ಪ್ರಾಂತ್ಯದ ಕೊರತೆ ಎದ್ದುಕಾಣುತ್ತದೆ. ನಿಮ್ಮ ವಿಜಯಕ್ಕೆ ಹಿಂದಿ ಬೆಲ್ಟ್ ಪ್ರದೇಶಗಳು ನೀಡಿದ ಕೊಡುಗೆಯು, ಉತ್ತರ ಭಾರತದ ನಡುವೆ ಕಂದರವನ್ನು ಸಷ್ಟಿಸದಂತೆ ನೋಡಿಕೊಳ್ಳಿ. ದಯವಿಟ್ಟು ದಕ್ಷಿಣ ಭಾರತದಿಂದ ರಾಜಕೀಯ ಹಿನ್ನೆಲೆಯಿರದ ಆಂದರೆ ಪರಿಣಿತ ಸಮಾಜ ವಿಜ್ಞಾನಿ, ಪರಿಸರವಾದಿ, ಅರ್ಥಶಾಸ್ತ್ರಜ್ಞ ಅಥವಾ ಜನಸಂಖ್ಯಾ ಶಾಸ್ತ್ರಜ್ಞರೊಬ್ಬರನ್ನು ಉಪಪ್ರಧಾನಿಯಾಗಿ ನೇಮಿಸಿ. ನೆಹರೂ ಸಂಪುಟದಲ್ಲಿೆ ಷಣ್ಮುಖನ್ ಚೆಟ್ಟಿ, ಜಾನ್ ಮಥಾಯ್,ಸಿ.ಡಿ.ದೇಶಮುಖ್ ಹಾಗೂ ಕೆ.ಎಲ್.ರಾವ್ ಇದ್ದರು. ಅವರು ಕಾಂಗ್ರೆಸಿಗರಾಗಿರಲಿಲ್ಲ.ಅಷ್ಟೇಕೆ ಅವರು ರಾಜಕಾರಣಿಗಳೂ ಆಗಿರಲಿಲ್ಲ. ಇಂದಿರಾಗಾಂಧಿ ಸಂಪುಟದಲ್ಲಿ ಎಸ್.ಚಂದ್ರಶೇಖರ್ ಹಾಗೂ ವಿ.ಕೆ.ಆರ್.ವಿ. ರಾವ್ ಇದ್ದರು. ಯುಪಿಎ ಸರಕಾರವು ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾದ ಪ್ರೊ.ಎಂ.ಎಸ್.ಸ್ವಾಮಿನಾಥನ್ ಅಥವಾ ಶ್ಯಾಮ್ ಬೆನೆಗಲ್ ಸದಸ್ಯರನ್ನಾಗಿ ಯಾಕೆ ನೇಮಿಸಲಿಲ್ಲವೆಂದು ನನಗೆ ಈಗಲೂ ಅರ್ಥವಾಗಿಲ್ಲ. ರಾಜ್ಯಸಭೆಯ ನಾಮನಿರ್ದೇಶಿತ ಸದಸ್ಯರಾಗಿದ್ದ ನೂರುಲ್ ಹುಸೇನ್, ಭಾರತ ಕಂಡ ಅತ್ಯುತ್ತಮ ಶಿಕ್ಷಣ ಸಚಿವರಲ್ಲೊಬ್ಬರಾಗಿದ್ದರು.
ಸಾಮ್ರಾಜ್ಯವಾದಿ ಹಾಗೂ ಸೈದ್ಧಾಂತಿಕ ಅನುಕರಣೀಯತೆಗಳು ನಿಮಗೆ ಇಷ್ಟವಾಗುತ್ತವೆ. ರಾಣಾ ಪ್ರತಾಪ್‌ನಂತೆ ಹೋರಾಟ ನಡೆಸಿದರೂ,ಆಡಳಿತದಲ್ಲಿ ಅಕ್ಬರ್‌ನಂತಾಗಿರಿ. ಹೃದಯದಲ್ಲಿ ನೀವು ಸಾವರ್‌ಕರ್ ಆಗಿರಿ, ಆದರೆ ಚಿಂತನೆಯಲ್ಲಿ ಅಂಬೇಡ್ಕರ್ ಆಗಿರಬೇಕು. ಒಂದು ವೇಳೆ ನಿಮ್ಮ ಡಿಎನ್‌ಎನಲ್ಲಿ ಆರೆಸ್ಸೆಸ್ ಪ್ರಣೀತ ಹಿಂದುತ್ವವಿದ್ದರೂ, ನಿಮಗೆ ಮತ ಚಲಾಯಿಸಿರದ ದೇಶದ ಶೇ.69ರಷ್ಟು ಮತದಾರರ ಪಾಲಿಗೆ ನೀವು ವಝೀರ್ ಎ ಅಝಂ ಕೂಡಾ ಆಗಿರಬೇಕು.
 ನಮ್ಮ ದೇಶದ ಅತ್ಯುನ್ನತ ಸ್ಥಾನವನ್ನು ನೀವು ವಹಿಸಿಕೊಳ್ಳುವ ಈ ಸಂದರ್ಭದಲ್ಲಿ ಸಕಲ ಶುಭ ಹಾರೈಕೆಗಳೊಂದಿಗೆ.
ನಿಮ್ಮ ಸಹ ಪೌರ,
ಗೋಪಾಲ್ ಕೃಷ್ಣ ಗಾಂಧಿ
(ಇವರು ಮಾಜಿ ಆಡಳಿತಾಧಿಕಾರಿ ಹಾಗೂ ರಾಜತಾಂತ್ರಿಕರಾಗಿದ್ದರು. 2004-2009ರಲ್ಲಿ ಪಶ್ಚಿಮ ಬಂಗಾಳದಲ್ಲಿ ಹಾಗೂ 2005-2006ರಲ್ಲಿ ಬಿಹಾರದಲ್ಲಿ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು)

Wednesday, May 7, 2014

ಸಾಮ್ರಾಜ್ಯದ ಕೊನೆ

ಸಾದತ್ ಹಸನ್ ಮಾಂಟೋ ಬರೆದಿರುವ ಈ ಕತೆಯನ್ನು ಅನುವಾದ ಮಾಡಿರೋದು ಕವಿ, ಪತ್ರಕರ್ತ ದಿ. ಬಿ. ಎಮ್. ರಶೀದ್. " ಪರುಷ ಮಣಿ '' ಕೃತಿಯಿಂದ ಆರಿಸಿ ಕೊಳ್ಳಲಾಗಿದೆ.

ಫೋನ್ ರಿಂಗಣಿಸಿತು.
ಮನಮೋಹನ್ ರಿಸೀವರ್ ಎತ್ತಿಕೊಂಡು ನುಡಿದ: ‘‘ಹಲೋ 44457’’
‘‘ಸಾರಿ ರಾಂಗ್ ನಂಬರ್’’ ಆ ಕಡೆಯ ಹೆಣ್ಣು ಧ್ವನಿ ಫೋನ್ ಕುಕ್ಕಿತು.
ಮನಮೋಹನ್ ರಿಸೀವರ್ ಕೆಳಗಿಟ್ಟು ತಾನು ಓದುತ್ತಿದ್ದ ಪುಸ್ತಕದಲ್ಲಿ ತಲೆ ತೂರಿಸಿದ. ಅವನು ಆ ಪುಸ್ತಕವನ್ನು ಇಪ್ಪತ್ತಕ್ಕೂ ಹೆಚ್ಚು ಸಲ ಓದಿದ್ದಾನೆ! ಅಂದರೆ ಅದರರ್ಥ ಅದೊಂದು ವಿಶೇಷವಾದ ಪುಸ್ತಕವೆಂದೇನೂ ಆಗಿರಲಿಲ್ಲ. ಆ ಕೋಣೆಯಲ್ಲಿದ್ದದ್ದು ಅದೊಂದೇ ಪುಸ್ತಕ! ಅದರ ಕೊನೆಯ ಪುಟ ಕೂಡ ಕಳೆದು ಹೋಗಿತ್ತು.
 ಕಳೆದ ಒಂದು ವಾರದಿಂದ ಮನಮೋಹನ ಆ ಆಫೀಸು ಕೋಣೆಯಲ್ಲಿ ವಾಸಿಸುತ್ತಿದ್ದಾನೆ. ಆ ಕೋಣೆ ಅವನ ಗೆಳೆಯನೊಬ್ಬನಿಗೆ ಸೇರಿದ್ದು. ಗೆಳೆಯ ವ್ಯಾಪಾರ ನಿಮಿತ್ತ ದೂರದ ರಾಜ್ಯಗಳಿಗೆ ಪ್ರವಾಸ ಹೋಗಿದ್ದನು. ಹೋಗುವ ಮುಂಚೆ ಮುಂಬೈ ಶಹರದ ಯಾವುದಾದರೂ ಕೊಳಕು ಫುಟ್‌ಪಾತ್ ಮೇಲೆ ಮಲಗಿ ರಾತ್ರಿಗಳನ್ನು ಕಳೆಯುತ್ತಿದ್ದ ಮನಮೋಹನನನ್ನು ಕರೆದು ಆ ಕೋಣೆಯ ಉಸ್ತುವಾರಿ ವಹಿಸಿ ಹೋಗಿದ್ದನು. ಹಾಗಾಗಿ ಸದ್ಯಕ್ಕೀಗ ಆ ಕೋಣೆಯಲ್ಲಿ ಮನೋಹನನದ್ದೇ ಆಧಿಪತ್ಯ.
ಮನಮೋಹನ ಗೊತ್ತು ಗುರಿಯೊಂದೂ ಇಲ್ಲದ ಅಲೆಮಾರಿ. ಉದ್ಯೋಗವನ್ನಾತ ದ್ವೇಷಿಸುತ್ತಿದ್ದ ಕಾರಣದಿಂದ ಅವನು ಕೆಲಸದಿಂದ ದೂರವಿದ್ದ. ಅವನು ಶ್ರಮಿಸಿದ್ದರೆ ಸಿನಿಮಾ ಕಂಪನಿಯೊಂದರ ನಿರ್ದೇಶಕನಾಗುವುದು ಕಷ್ಟವಿರಲಿಲ್ಲ. ಆದರೆ ಇನ್ನೊಬ್ಬನ ಕೈ ಕೆಳಗೆ ದುಡಿಯುವುದೆಂದರೆ ಅವನ ಪಾಲಿಗೆ ಗುಲಾಮಗಿರಿಗೆ ಸಮವಾಗಿತ್ತು. ಮನಮೋಹನ ಒಬ್ಬ ನಿರಪಾಯಕಾರಿಯಾದ ಮನುಷ್ಯನಾಗಿದ್ದನು. ಅವನಿಗೆ ಅವನದೆನ್ನುವ ದೊಡ್ಡ ಖರ್ಚುಗಳೇನೂ ಇರಲಿಲ್ಲ. ನಾಲ್ಕು ಕಪ್ ಟೀ, ಎರಡು ತುಣುಕು ಬ್ರೆಡ್, ಒಂದೆರಡು ಪ್ಯಾಕ್ ಸಿಗರೇಟ್ ಇವು ಅವನ ಒಂದು ದಿನದ ಅಗತ್ಯಗಳಾಗಿದ್ದವು. ಅದಷ್ಟವಶಾತ್ ಅವನ ಈ ಸರಳ ಅವಶ್ಯಕತೆಗಳನ್ನು ಸಂತೋಷದಿಂದಲೇ ಪೂರೈಸಬಲ್ಲ ಅನೇಕ ಸ್ನೇಹಿತರನ್ನು ಅವನು ಹೊಂದಿದ್ದನು. ಅಗತ್ಯ ಬಿದ್ದಲ್ಲಿ ಅದೆಷ್ಟೋ ದಿನಗಳನ್ನು ಆಹಾರವಿಲ್ಲದೆಯೂ ಕಳೆಯಲು ಮನಮೋಹನ ಶಕ್ತನಾಗಿದ್ದನು.
ಮನಮೋಹನ ತನ್ನದೆನ್ನುವ ಕುಟುಂಬವನ್ನಾಗಲೀ, ಆಪ್ತ ನೆಂಟರಿಷ್ಟರನ್ನಾಗಲೀ ಹೊಂದಿರಲಿಲ್ಲ. ಆತ ಬಾಲ್ಯದಲ್ಲೇ ಮನೆಯನ್ನು ತೊರೆದು ಓಡಿ ಬಂದು ಈ ಮಹಾನಗರದ ಮಡಿಲಿಗೆ ಬಿದ್ದವನು ಎಂಬ ಸಂಗತಿಯೊಂದನ್ನು ಬಿಟ್ಟರೆ ಅವನ ಗೆಳೆಯರಿಗೆ ಆತನ ಬಗ್ಗೆ ಹೆಚ್ಚಿನ ಸಂಗತಿಯೇನೂ ಗೊತ್ತಿರಲಿಲ್ಲ. ಅವನ ಬದುಕಿನಲ್ಲಿ ಇನ್ನೊಬ್ಬರು ತಿಳಿಯಬಹುದಾಗಿದ್ದ ‘ಹೆಚ್ಚಿನ ಸಂಗತಿಗಳೂ ಕೂಡ ಬಹಳ ವಿರಳವಾಗಿದ್ದವು. ಮನಮೋಹನ ತನ್ನ ಬದುಕಿನಲ್ಲಿ ಕಳೆದುಕೊಂಡಿದ್ದ ಅನೇಕ ವಸ್ತುಗಳಿದ್ದವು. ಅವುಗಳಲ್ಲಿ ಮುಖ್ಯವಾದುದೆಂದರೆ ಹೆಣ್ಣು! ಅವನು ಆಗಾಗ ತನ್ನ ಸ್ನೇಹಿತರ ಜೊತೆ ತಮಾಷೆಗಾಗಿ ಹೇಳುವುದಿತ್ತು. ‘‘ನಾನೊಂದು ಹೆಣ್ಣನ್ನು ಪ್ರೇಮಿಸಿದ್ದರೆ, ಆಗಲಾದರೂ ನನ್ನ ಬದುಕಿಗೊಂದು ಲಯ ಸಿಗಬಹುದಿತ್ತೋ ಏನೋ’’ ಈ ತಮಾಷೆಯಲ್ಲಿ ಸತ್ಯದ ಪಾಲು ಇಲ್ಲದಿಲ್ಲವೆನ್ನುವುದು ಖುದ್ದು ಮನಮೋಹನನಿಗೇ ಗೊತ್ತಿದೆ. ಮಧ್ಯಾಹ್ನ ಊಟದ ಹೊತ್ತಿಗೆ ಸರಿಯಾಗಿ ಫೋನ್ ಮತ್ತೆ ರಿಂಗಾಯಿತು. ಮನಮೋಹನ ರಿಸೀವರ್ ಎತ್ತಿ ‘‘ಹಲೋ, 44457’’ಎಂದು ಹೇಳಿದ.
‘‘44457?’’ ಮತ್ತೇ ಅದೇ ‘ರಾಂಗ್ ನಂಬರ್ ಹುಡುಗಿ!’
‘‘ಹೌದು’’ ಎಂದು ಅವನು ಉತ್ತರಿಸಿದ.
‘‘ಯಾರು ನೀನು?’’ ಅವಳು ಕೇಳಿದಳು.
‘‘ನಾನು ಮನಮೋಹನ’’
ಅವಳು ಪ್ರತಿಕ್ರಿಯಿಸಲಿಲ್ಲ.
‘‘ನಿನಗೆ ಯಾರ ಜೊತೆ ಮಾತನಾಡಬೇಕಾಗಿತ್ತು?’’ ಅವನು ಕೇಳಿದನು.
‘‘ನಿನ್ನ ಜೊತೆಯಲ್ಲೇ ಎಂದಾದರೆ ಅಡ್ಡಿಯಿದೆಯೇ?’’
‘‘ಇಲ್ಲ...ಖಂಡಿತಾ ಇಲ್ಲ’’
‘‘ನಿನ್ನ ಹೆಸರು ಮದನಮೋಹನ ಎಂದು ಹೇಳಿದೆಯಲ್ಲವೇ?’’
‘‘ಅಲ್ಲಲ್ಲ, ಮನಮೋಹನ’’
‘‘ಮನಮೋಹನ?’’
‘‘ಹೌದು’’
ಅವಳ ಕಡೆಯಿಂದ ಒಂದು ಕ್ಷಣ ವೌನ. ಕೊನೆಗೆ ಆ ವೌನವನ್ನು ಒಡೆದು ಮನಮೋಹನ ಕೇಳಿದನು. ‘‘ನಿನಗೆ ನನ್ನಲ್ಲೇನಾದರೂ ಮಾತಾಡುವುದಿದೆಯೇ?’’
‘‘ಇದೆ ಎಂದಾದರೆ..’’
‘‘ಹಾಗಿದ್ದರೆ ಹೇಳು’’
‘‘ನನಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ನೀನೇ ಯಾಕೆ ಏನಾದರೂ ಹೇಳಬಾರದು...’’
‘‘ಸರಿ ಹಾಗಿದ್ದರೆ, ಕೇಳು’’ ಮನಮೋಹನ ಹೇಳಿದನು ‘‘ಈಗಾಗಲೇ ನಾನು ನನ್ನ ಹೆಸರನ್ನು ನಿನಗೆ ಹೇಳಿರುವೆ. ತಾತ್ಕಾಲಿಕವಾಗಿ ಈ ಆಫೀಸು ಕೋಣೆಯೇ ನನ್ನ ಸಾಮ್ರಾಜ್ಯ. ನಗರದ ಫುಟ್‌ಪಾತ್ ಮೇಲೆ ಮಲಗುತ್ತಿದ್ದ ನಾನು ಕಳೆದ ಒಂದು ವಾರದಿಂದ ಈ ಕೋಣೆಯ ಟೇಬಲ್ ಮೇಲೆ ಮಲಗುತ್ತಿದ್ದೇನೆ.’’
‘‘ಫುತ್‌ಪಾತ್ ಮೇಲೆ ಮಲಗುವಾಗ ಸೊಳ್ಳೆ ಕಾಟದಿಂದ ಹೇಗೆ ಪಾರಾಗುವೆ? ಸೊಳ್ಳೆ ಪರದೆ ಬಳಸುವಿಯಾ ಹೇಗೆ?’’ ಆಕೆ ಕೀಟಲೆಯ ಧ್ವನಿಯಲ್ಲಿ ಕೇಳಿದಳು.
ಮನಮೋಹನ ನಕ್ಕು ಹೇಳಿದ ‘‘ನನ್ನನ್ನು ನಂಬು, ನಾನು ನಿಜವನ್ನೇ ಹೇಳುತ್ತಿದ್ದೇನೆ. ಕಳೆದ ಹತ್ತಾರು ವರ್ಷಗಳಿಂದ ಈ ನಗರದ ಫುಟ್‌ಪಾತ್‌ಗಳಲ್ಲಿ ಮಲಗಿ ನಾನು ರಾತ್ರಿ ಕಳೆಯುತ್ತಿದ್ದೇನೆ. ಈ ಆಫೀಸು ಕೋಣೆಯಲ್ಲಿ ಬದುಕಲು ತೊಡಗಿ ಒಂದು ವಾರವಷ್ಟೇ ಆಯ್ತು.’’
‘‘ಬದುಕುವುದು ಎಂದರೆ ಹೇಗೆ?’’
‘‘ಇಲ್ಲೊಂದು ಪುಸ್ತಕವಿದೆ. ಅದರ ಕೊನೆಯ ಪುಟ ಕಳೆದು ಹೋಗಿದೆ. ಆದರೂ ಅದನ್ನು ಇಪ್ಪತ್ತು ಬಾರಿ ಓದಿ ಮುಗಿಸಿದ್ದೇನೆ. ಆ ಕಳೆದು ಹೋದ ಪುಟದ ಮೇಲೆ ನನ್ನ ಕೈಯ ತೋರುಬೆರಳನ್ನು ಊರಿದರೂ ಕೂಡ ಸಾಕು, ಈ ಪುಸ್ತಕದ ಅಂತ್ಯವನ್ನು ನಾನು ಸಲೀಸಾಗಿ ಹೇಳಿಬಿಡಬಲ್ಲೆ’’
‘‘ನೀನೊಬ್ಬ ಕುತೂಹಲಕರ ಮನುಷ್ಯ’’ಆಕೆ ನುಡಿದಳು. ಮನಮೋಹನ ಮರು ನುಡಿಯಲಿಲ್ಲ. ಅವಳು ಮರಳಿ ಪ್ರಶ್ನಿಸಿದಳು ‘‘ನೀನು ಏನು ಮಾಡುತ್ತಿರುವೆ?’’
‘‘ಅಂದರೆ..?’’ ಅವನು ಕೇಳಿದನು.
‘‘ಅಂದರೆ.. ನಿನ್ನ ಉದ್ಯೋಗವೇನು ಎಂದು ಕೇಳಿದೆ’’
 ‘‘ಉದ್ಯೋಗವೇ? ಆ ಒಂದು ರಗಳೆ ನನ್ನ ಪಾಲಿಗಿಲ್ಲ. ಕೆಲಸ ಮಾಡಲು ಇಚ್ಛಿಸದ ಒಬ್ಬ ಮನುಷ್ಯ ಯಾವ ಉದ್ಯೋಗವನ್ನು ತಾನೆ ಮಾಡಬಲ್ಲ? ಆದರೂ ನಿನ್ನ ಪ್ರಶ್ನೆಗೆ ನಾನು ಉತ್ತರಿಸುತ್ತೇನೆ. ಹಗಲಿಡೀ ನಾನು ಈ ಶಹರದ ಬೀದಿಗಳಲ್ಲಿ ಅಲೆಯುತ್ತೇನೆ. ಮತ್ತು ರಾತ್ರಿ ನಿದ್ದೆ ಹೋಗುತ್ತೇನೆ.’’
‘‘ನಿನ್ನ ಈ ಥರದ ಬದುಕನ್ನು ನೀನು ಇಷ್ಟ ಪಡುತ್ತಿರುವೆಯಾ?’’
‘‘ತಾಳು, ಇದೊಂದು ಮುಖ್ಯವಾದ ಪ್ರಶ್ನೆ, ಈ ಪ್ರಶ್ನೆಯನ್ನು ಇದುವರೆಗೆ ನನಗೆ ನಾನು ಕೂಡ ಕೇಳಿಕೊಂಡಿರಲಿಲ್ಲ. ನೀನೀಗ ಮೊದಲ ಬಾರಿಗೆ ಈ ಪ್ರಶ್ನೆಯನ್ನು ಎತ್ತಿರುವ ಕಾರಣದಿಂದ ನನ್ನ ನಾನು ಪ್ರಶ್ನಿಸಬೇಕಾಗಿ ಬಂದಿದೆ. ನನ್ನ ಈ ಬದುಕನ್ನು ನಾನು ಪ್ರೀತಿಸುತ್ತಿದ್ದೇನೆಯೇ?’’
‘‘ಉತ್ತರ ಏನಾಗಿದೆ?’’
‘‘ಯಾವ ಉತ್ತರವೂ ಸಿಗುತ್ತಿಲ್ಲ. ಯಾವುದಕ್ಕೂ ಇನ್ನು ಸ್ವಲ್ಪ ಕಾಲ ಬದುಕಿ ಆಮೇಲೆ ತೀರ್ಮಾನಕ್ಕೆ ಬರುವುದು ಒಳ್ಳೆಯದೇನೋ?’’
ಆಕೆ ನಕ್ಕಳು.
‘‘ನಿನ್ನ ನಗು ಸುಂದರವಾಗಿದೆ’’ ಮನಮೋಹನ ಹೇಳಿದ.
‘‘ಥ್ಯಾಂಕ್ಸ್’’ ತುಸು ಲಜ್ಜೆಯೊಂದಿಗೆ ನುಡಿದು ಆಕೆ ಫೋನ್ ಕೆಳಗಿಟ್ಟಳು. ಆಕೆ ರಿಸೀವರ್ ಕೆಳಗಿಟ್ಟ ಅದೆಷ್ಟು ಹೊತ್ತಿನ ಬಳಿಕವೂ ಮನಮೋಹನ ರಿಸೀವರ್ ಕೈಯಲ್ಲಿಡಿದು ನಿಂತೇ ಇದ್ದನು. ಅವನ ತುಟಿಗಳಲ್ಲಿ ಉಲ್ಲಾಸಕರವಾದ ನಗುವೊಂದು ಚಿಗುರೊಡೆಯುತ್ತಿತ್ತು.
ಮರುದಿನ ಬೆಳಗ್ಗೆ ಎಂಟು ಗಂಟೆಯ ಹೊತ್ತಿಗೆ ಫೋನ್ ಮೊಳಗತೊಡಗಿತು. ಗಾಢ ನಿದ್ದೆಯಲ್ಲಿ ಮುಳುಗಿ ಹೋಗಿದ್ದ ಮನಮೋಹನನನ್ನು ಫೋನ್ ಸದ್ದು ಬಡಿದೆಬ್ಬಿಸಿತು. ಅವನೊಮ್ಮೆ ಜೋರಾಗಿ ಆಕಳಿಸಿ ರಿಸೀವರ್ ಎತ್ತಿ ನುಡಿದನು.
‘‘ಹಲೋ 44457’’
‘‘ಗುಡ್‌ಮಾರ್ನಿಂಗ್, ಮನಮೋಹನ್ ಸಾಬ್’’
‘‘ಗುಡ್‌ಮಾರ್ನಿಂಗ್...ಓ, ಇದು ನೀನು.. ಇಷ್ಟೊಂದು ಬೆಳಗ್ಗೆಯೇ’’
‘‘ಗಾಢ ನಿದ್ದೆಯಲ್ಲಿದ್ದೆಯಾ..?’’ ಆಕೆ ಕೇಳಿದಳು.
‘‘ಹೌದು, ನಾನು ಈ ಕೋಣೆಯಲ್ಲಿ ಬದುಕಲು ಬಂದು ಸರ್ವನಾಶವಾಗುತ್ತಿದ್ದೇನೆ. ನಾನು ಪುನಃ ಫುಟ್‌ಪಾತ್‌ಗೆ ಮರಳಿದಾಗ ಕಷ್ಟದಲ್ಲಿ ಬೀಳಲಿದ್ದೇನೆ’’
‘‘ಏನು ಸಮಸ್ಯೆ?’’
‘‘ಫುಟ್‌ಪಾತ್‌ನಲ್ಲಿ ಮಲಗಿದಾಗ ಬೆಳಗ್ಗೆ ಕಡಿಮೆಯೆಂದರೂ ಐದು ಗಂಟೆಗೇ ಏಳಬೇಕಾಗುತ್ತದೆ’’
‘‘ಆಕೆ ನಕ್ಕಳು.’’
‘‘ಇದೇನು ಒಮ್ಮಿಂದೊಮ್ಮೆಲೆ ಫೋನ್ ಮಾಡಿದೆ ನೀನು’’ ಆತ ಕೇಳಿದನು.
‘‘ನಿನ್ನೆ ನೀನು ನನ್ನ ನಗು ಸುಂದರವಾಗಿದೆಯೆಂದು ಯಾಕೆ ಹೇಳಿದೆ?’’
‘‘ಇದೆಂತಹಾ ಮೂರ್ಖ ಪ್ರಶ್ನೆ. ಸುಂದರವಾದದ್ದು ಮಾತ್ರ ಹಾಗೆಂದೇ ಗುರುತಿಸಲ್ಪಡುತ್ತದೆ’’
‘‘ಹಾಗೇನೂ ಇಲ್ಲ..’’
‘‘ಈ ಕುರಿತು ಯಾವ ಮೊಂಡು ತರ್ಕವೂ ಅಗತ್ಯವಿಲ್ಲ. ನೀನು ಸುಂದರವಾಗಿ ನಕ್ಕೆ ಎಂದಾದಲ್ಲಿ ನಾನು ಹಾಗೆಂದು ಹೇಳಿಯೇ ತೀರುವೆನು’’
‘‘ಒಂದು ವೇಳೆ ನಾನು ನೇಣು ಹಾಕಿಕೊಂಡೆ ಎಂದಾದಲ್ಲಿ..’’
‘‘ಎಂದಾದಲ್ಲಿ...’’
‘‘ನಿನಗೆ ದುಃಖವಾಗಬಹುದೇ..?’’
‘‘ನನಗೇನಾಗಬಹುದೋ ಅದನ್ನು ನಾನೀಗಲೇ ಹೇಳುವುದು ಅಸಾಧ್ಯ. ಆದರೆ ಒಂದು ಮಾತಂತೂ ಸತ್ಯ. ನಿನ್ನ ನಗು ಚೆನ್ನಾಗಿಲ್ಲವೆಂದರೆ ಅದು ನನ್ನ ಒಳ್ಳೆಯ ಅಭಿರುಚಿಗೆ ದ್ರೋಹವೆಸಗಿದ ಹಾಗೆ, ಅಷ್ಟೇ’’ ಅವನು ಗಂಭೀರವಾಗಿ ಹೇಳಿದನು.
 ಆಕೆ ಕ್ಷಣ ಹೊತ್ತು ವೌನ ವಹಿಸಿದಳು. ಬಳಿಕ ನುಡಿದಳು. ‘‘ನಿನ್ನ ಒಳ್ಳೆಯ ಅಭಿರುಚಿಯನ್ನು ನಾನು ಅನುಮಾನಿಸಿದ್ದರೆ ಕ್ಷಮೆಯಿರಲಿ. ಈಗ ನೀನು ನಿನ್ನ ಆ ಒಳ್ಳೆಯ ಅಭಿರುಚಿಯ ಕುರಿತು ಸ್ವಲ್ಪ ಹೇಳುವವನಾಗು’’
‘‘ಏನು ಹೇಳಲಿ..?’’
‘‘ಅಂದರೆ ನಿನ್ನ ಹವ್ಯಾಸಗಳೇನೆಂದು ಹೇಳು’’
‘‘ನಾನೊಬ್ಬ ಒಳ್ಳೆ ಫೊಟೋಗ್ರಾಫರ್ ಎನ್ನುವುದನ್ನು ಬಿಟ್ಟರೆ ಬೇರೇನೂ ಇಲ್ಲ’’ ಅವನು ಉತ್ತರಿಸಿದನು.
‘‘ಅದೊಂದು ಒಳ್ಳೆಯ ಹಾಬಿ. ಹಾಗಿದ್ದರೆ ನೀನೊಂದು ಒಳ್ಳೆಯ ಕ್ಯಾಮರವನ್ನೂ ಹೊಂದಿರಬೇಕಲ್ಲ?’’
‘‘ಕ್ಯಾಮರವೇ ಇಲ್ಲದ ಕ್ಯಾಮರಾಮನ್ ನಾನು. ಕ್ಯಾಮರ ಬೇಕಾದಾಗ ಗೆಳೆಯನೊಬ್ಬನಿಂದ ಇಸಿದುಕೊಳ್ಳುವೆನು. ನಾನು ಸ್ವಲ್ಪ ಹಣ ಸಂಪಾದಿಸಿದಲ್ಲಿ ಖಂಡಿತಾ ಒಂದು ಕ್ಯಾಮರಾ ಕೊಳ್ಳುವೆನು’’
‘‘ಯಾವ ಕ್ಯಾಮರಾ?’’
‘‘ಎಕ್ಸಕ್ಟಾ. ಅದು ನನ್ನ ಇಷ್ಟದ ಕ್ಯಾಮರ’’
ಆಕೆ ತುಸು ಹೊತ್ತು ಮಾತಾಡಲಿಲ್ಲ. ಬಳಿಕ ಹೇಳಿದಳು: ‘‘ನಾನು ಬೇರೆಯೇ ಒಂದು ವಿಚಾರವನ್ನು ಯೋಚಿಸುತ್ತಿದ್ದೇನೆ.’’
‘‘ಏನು ಹೇಳು’’
‘‘ನೀನು ನನ್ನ ಹೆಸರನ್ನಾಗಲೀ, ನನ್ನ ಫೋನ್ ನಂಬರನ್ನಾಗಲೀ ಕೇಳಲೇ ಇಲ್ಲವಲ್ಲ?’’
‘‘ನನಗದರ ಅಗತ್ಯವಿದೆಯೆಂದು ಅನಿಸುವುದಿಲ್ಲ’’ಆತ ಹೇಳಿದ.
‘‘ಯಾಕಿಲ್ಲ?’’
‘‘ನಿನ್ನ ಹೆಸರು ಏನಾಗಿದ್ದರೂ ಅದರಲ್ಲೇನಿದೆ? ನನ್ನ ಫೋನ್ ನಂಬರ್ ನಿನ್ನಲ್ಲಿದೆ. ಅಷ್ಟು ಸಾಲದೆ? ನಾನು ನಿನಗೆ ಫೋನ್ ಮಾಡಬೇಕೆಂದು ನೀನು ಬಯಸಿದ ದಿನ ನಿನ್ನ ಫೋನ್ ನಂಬರನ್ನು ನನಗೆ ತಿಳಿಸಲು ಯಾವ ಅಡ್ಡಿಯೂ ಇಲ್ಲ.’’
‘‘ಇಲ್ಲ, ನಾನು ತಿಳಿಸುವುದಿಲ್ಲ’’
‘‘ನಿನ್ನಿಷ್ಟ. ನಾನಾಗಿಯಂತೂ ಕೇಳಲಾರೆ’’
‘‘ಖಂಡಿತಾ ನೀನೊಬ್ಬ ವಿಚಿತ್ರ ಮನುಷ್ಯ’’ ಎಂದು ಅವಳು ಫೋನ್ ಕೆಳಗಿಟ್ಟಳು. ಮನಮೋಹನ ನಸುನಕ್ಕು ಮುಖ ತೊಳೆಯಲು ಹೊರಟ. ಅವನು ಹೊರಗಡೆ ಹೊರಡುವ ಸಲುವಾಗಿ ಉಡುಪು ಧರಿಸತೊಡಗಿದನು. ಆತ ಇನ್ನೇನು ಹೊರಗಡೆ ಕಾಲಿಡಬೇಕೆನ್ನುವ ಹೊತ್ತಿಗೆ ಸರಿಯಾಗಿ ಫೋನ್ ಪುನಃ ರಿಂಗಾಯಿತು. ಮನಮೋಹನ್ ರಿಸೀವರ್ ಎತ್ತಿ ನುಡಿದ ‘‘ಹಲೋ, 44457’’
 ‘‘ಮಿ. ಮನಮೋಹನ್?’’ ಮತ್ತೆ ಅವಳು!
‘‘ನಿನಗೆ ನನ್ನಿಂದೇನಾಗಬೇಕಿತ್ತು?’’ ಅವನು ಪ್ರಶ್ನಿಸಿದನು.
‘‘ನಾನು ನಿನಗೊಂದು ವಿಚಾರ ಹೇಳಬೇಕಾಗಿತ್ತು. ಇನ್ನು ಮುಂದೆ ನಿನಗೆ ನಾನು ಕಾಟ ಕೊಡಲಾರೆ’’
‘‘ಅದು ಖಂಡಿತಾ ಒಳ್ಳೆಯ ವಿಚಾರ’’
‘‘ನಾನು ತಿಂಡಿ ತಿನ್ನಲು ಕೂತಾಗ, ನಿನ್ನನ್ನು ಕಾಡಿಸುವುದು ಸರಿಯಲ್ಲ ಎಂದು ನನಗೆ ಹೊಳೆಯಿತು. ನೀನು ತಿಂಡಿ ತಿಂದೆಯಾ?’’
‘‘ಇಲ್ಲ. ನಿನ್ನ ಫೋನ್ ಬಂದಾಗ ನಾನು ಹೊರಗೆ ಹೊರಟಿದ್ದೆನಷ್ಟೇ’’
‘‘ಓ, ನನ್ನಿಂದ ನಿನಗೆ ತೊಂದರೆಯಾಯಿತು’’
‘‘ತೊಂದರೆಯೇನೂ ಇಲ್ಲ. ಯಾಕೆಂದರೆ ನನ್ನ ಕಿಸೆಯಲ್ಲಿ ನಯಾ ಪೈಸೆಯೂ ಇಲ್ಲ. ಇವತ್ತು ಬೆಳಗಿನ ಉಪಹಾರ ನನಗೆ ದಕ್ಕುತ್ತದೆ ಎನ್ನುವ ಯಾವ ಭರವಸೆಯೂ ಇಲ್ಲ.’’
‘‘ನೀನು ಹಾಗೆಲ್ಲಾ ಯಾಕೆ ಮಾತಾಡುವೆ? ನಿನ್ನ ನೀನು ನೋಯಿಸಿಕೊಂಡು ಸಂತೋಷಪಡುತ್ತಿರುವೆಯಾ?’’
‘‘ಖಂಡಿತಾ ಇಲ್ಲ, ಇರುವುದನ್ನು ಹೇಳಿದೆ ಅಷ್ಟೇ’’
‘‘ನಿನಗೆ ನಾನು ಸ್ವಲ್ಪ ಹಣ ಕಳಿಸಲೇ?’’
‘‘ನನ್ನ ಸಾಲಗಾರರ ಪಟ್ಟಿಗೆ ಇನ್ನೊಂದು ಹೆಸರು ಸೇರಿದಂತಾಗುತ್ತದೆ’’
‘‘ಹಾಗಿದ್ದರೆ ಕಳಿಸಲಾರೆ’’
‘‘ನಿನ್ನಿಷ್ಟ’’ ಎಂದು ಹೇಳಿ ಮನಮೋಹನ ಫೋನ್ ಕೆಳಗಿಟ್ಟು ಹೊರನಡೆದನು. ಮೆಟ್ಟಿಲು ಇಳಿಯುತ್ತಿದ್ದಂತೇ ಮನಮೋಹನ ಎಡಪಕ್ಕೆಯನ್ನು ಒತ್ತಿ ಹಿಡಿದುಕೊಂಡನು. ಕಳೆದ ಕೆಲವು ತಿಂಗಳಿಂದ ಅವನ ಎಡಪಕ್ಕೆಯಲ್ಲಿ ಅಸಾಧಾರಣವಾದ ನೋವೊಂದು ಆಗಾಗ ಕಾಣಿಸಿಕೊಳ್ಳುತ್ತಿತ್ತು. ಯಾರಾದರೂ ವೈದ್ಯರಿಗೆ ತೋರಿಸಬೇಕೆಂದು ಅವನು ಅಂದುಕೊಳ್ಳುವುದಿದ್ದರೂ ಅವನು ಬದುಕಿನಲ್ಲಿ ರೂಢಿಸಿಕೊಂಡು ಬಂದ ದಿವ್ಯ ನಿರ್ಲಕ್ಷದಿಂದಾಗಿ ಅದು ಇದುವರೆಗೂ ಸಾಧ್ಯವಾಗಿರಲಿಲ್ಲ. ತುಸುಹೊತ್ತು ಮೆಟ್ಟಲಲ್ಲೇ ಕೂತು ಸಾವರಿಸಿಕೊಂಡ ಮನಮೋಹನ ‘ಇದು ಸುಲಭದಲ್ಲಿ ತಳ್ಳಿ ಹಾಕುವಂತಹ ನೋವಲ್ಲ’ ಎಂದು ಮನಸ್ಸಿನಲ್ಲಿಯೇ ಅಂದುಕೊಂಡನು.
ಮನಮೋಹನ ಮರಳಿ ಕೋಣೆಗೆ ಸೇರಿದಾಗ ರಾತ್ರಿ ಬಹಳ ತಡವಾಗಿತ್ತು. ಅವನ ಮನಸ್ಸನ್ನಿಡೀ ಆ ಹುಡುಗಿಯೇ ತುಂಬಿಕೊಂಡಿದ್ದಳು. ಆಕೆಯೋರ್ವ ವಿದ್ಯಾವಂತ ತರುಣಿ ಎನ್ನುವುದರಲ್ಲಿ ಅವನಿಗೆ ಯಾವ ಸಂಶಯವೂ ಇರಲಿಲ್ಲ. ಆಕೆಯ ನಗುವಿನಲ್ಲೇ ಆಕೆಯ ಸಕಲ ಸೌಂದರ್ಯಗಳೂ ಅಡಗಿದಂತಿತ್ತು. ರಾತ್ರಿ ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಫೋನ್ ಮೊಳಗಿತು.
‘‘ಹಲೋ 44457’’
‘‘ಇದು ಮನಮೋಹನ್ ತಾನೇ?’’ ಅವಳು!
‘‘ಹೌದು ಮಾತಾಡುತ್ತಿದ್ದೇನೆ’’
‘‘ನಾನು ಬೆಳಗಿನಿಂದ ಇಡೀ ದಿನ ಫೋನ್ ಮಾಡುತ್ತಿದ್ದೆ. ನೀನು ಎಲ್ಲಿ ಹಾಳಾಗಿ ಹೋಗಿದ್ದೆ?’’
‘‘ನನಗೆ ನೌಕರಿಯಿಲ್ಲ ಎಂದಾದರೂ ನನಗೂ ಮಾಡಲು ಕೆಲಸಗಳಿವೆ’’
‘‘ಎಂತಹ ಕೆಲಸ?’’
‘‘ಅಲೆಯುವುದು’’
‘‘ಎಷ್ಟೊತ್ತಿಗೆ ಬಂದೆ?’’
‘‘ಸುಮಾರು ಒಂದು ಗಂಟೆ ಕಳೆಯಿತು’’
‘‘ನನ್ನ ಫೋನ್ ಬಂದಾಗ ನೀನು ಏನು ಮಾಡುತ್ತಿದ್ದೆ?’’
‘‘ಟೇಬಲ್ ಮೇಲೆ ಮಲಗಿ ನೀನು ನೋಡಲು ಹೇಗಿರಬಹುದೆಂದು ಊಹಿಸಲು ಯತ್ನಿಸುತ್ತಿದ್ದೆ.’’
‘‘ಹೇಗಿದ್ದೇನೆ ನಾನು?’’
‘‘ಇಲ್ಲ ನಿನ್ನ ಸ್ವರವೊಂದನ್ನು ಬಿಟ್ಟು ನನಗೇನನ್ನೂ ಊಹಿಸಲು ಕೂಡ ಸಾಧ್ಯವಾಗುತ್ತಿಲ್ಲ.’’
‘‘ಆ ಪ್ರಯತ್ನವನ್ನು ಬಿಟ್ಟು ಬಿಡು. ನಾನು ಬಹಳ ಕುರೂಪಿ’’
‘‘ಹಾಗಿದ್ದಲ್ಲಿ ದಯವಿಟ್ಟು ನೀನು ನೇಣು ಹಾಕಿಕೊಳ್ಳಬಹುದು. ಕುರೂಪವೆಂದರೆ ನನಗೆ ದ್ವೇಷ’’
‘‘ಇಲ್ಲ, ಇಲ್ಲ, ನಾನು ಸುಂದರಿ. ನಿನ್ನ ದ್ವೇಷಕ್ಕೆ ಗುರಿಯಾಗುವುದು ನನ್ನಿಂದ ಸಾಧ್ಯವಿಲ್ಲ’’
 ತುಸು ಹೊತ್ತು ಅವರಿಬ್ಬರು ಏನನ್ನೂ ಮಾತಾಡದೆ ತಮ್ಮಿಬ್ಬರ ನಡುವೆ ನೆಲೆಸಿದ ವೌನವನ್ನೇ ಆಲಿಸಿದರು. ಬಳಿಕ ಅವಳು ಕೇಳಿದಳು ‘‘ನಾನು ನಿನಗೋಸ್ಕರ ಒಂದು ಹಾಡನ್ನು ಹಾಡಲೇ?’’
‘‘ಖಂಡಿತಾ ಹಾಡು’’
ಆಕೆ ತನ್ನ ಮದು ಕಂಠವನ್ನು ಇನ್ನೂ ಕೋಮಲವಾಗಿಸಿ ಹಾಡತೊಡಗಿದಳು. ಆ ಹಾಡಿನ ಅಲೆಯಲ್ಲಿ ತುಯ್ದು ಹೋದ ಮನಮೋಹನ ‘‘ನೀನು ಅದ್ಭುತವಾಗಿ ಹಾಡುತ್ತಿ’’ ಎಂದು ಉದ್ಗರಿಸಿದನು.
‘‘ಥ್ಯಾಂಕ್ಸ್’’ ಹೇಳಿ ಆಕೆ ಫೋನ್ ಕೆಳಗಿಟ್ಟಳು.
ರಾತ್ರಿ ಇಡೀ ಅವಳ ದೇವ ಕಿನ್ನರಿಯಂತಹ ಕಂಠ ಅವನ ಮೈ ಮನಸ್ಸನ್ನು ಆವರಿಸಿತು. ಬೆಳಗ್ಗೆ ಸಾಮಾನ್ಯವಾಗಿ ಏಳುವುದಕ್ಕಿಂತಲೂ ಬೇಗನೇ ಎದ್ದ ಮನಮೋಹನ ಆಕೆಯ ಫೋನಿಗಾಗಿ ಕಾದು ಕೂತನು. ಆದರೆ ಆ ಇಡೀ ದಿವಸ ಫೋನ್ ತಣ್ಣಗಿತ್ತು. ಮನಮೋಹನ ಪ್ರಕ್ಷುಬ್ಧನಂತೆ ಕೋಣೆಯಿಡೀ ಶತಪಥ ನಡೆದಾಡತೊಡಗಿದನು. ಆತ ಇಪ್ಪತ್ತು ಬಾರಿ ಓದಿ ಮುಗಿಸಿದ್ದ ಆ ಪುಸ್ತಕವನ್ನು ಕೂತು ಮತ್ತೊಮ್ಮೆ ಓದಿದನು. ಕೆಂಡದ ಮೇಲೆ ಕೂತವನಂತೆ ಮನಮೋಹನ ದಿನವಿಡೀ ಚಡಪಡಿಸುತ್ತಿದ್ದ. ಸಂಜೆ ಸುಮಾರು ಏಳು ಗಂಟೆಗೆ ಫೋನ್ ರಿಂಗಾಯಿತು. ಆತ ಧಾವಿಸಿ ಬಂದು ರಿಸೀವರ್ ಎತ್ತಿಕೊಂಡನು. ‘‘ಹಲೋ ಮನಮೋಹನ್, ಹೇಗಿದ್ದೀಯಾ?’’ ಅವಳು ಕೇಳಿದಳು.
 ‘‘ಇಡೀ ದಿನ ಎಲ್ಲಿ ಹೋಗಿದ್ದೇ?’’ ಎಂದು ಆತ ತೀಕ್ಷ್ಮವಾಗಿ ಕೇಳಿದನು.
‘‘ಏಕೆ?’’ ಆಕೆಯ ಸ್ವರ ತುಸು ಕಂಪಿಸಿತು.
‘‘ನಿನ್ನ ಫೋನ್‌ಗಾಗಿ ಇಡೀ ದಿನ ನಾನಿಲ್ಲಿ ಕಾಯುತ್ತಿದ್ದೆ. ನಿನಗೆ ಗೊತ್ತೇ? ಈ ದಿನ ನನ್ನ ಜೇಬಿನಲ್ಲಿ ಸಾಕಷ್ಟು ದುಡ್ಡಿದ್ದರೂ ಕೂಡ ನಾನು ಕಾಫಿಯನ್ನಾಗಲೀ, ತಿಂಡಿಯನ್ನಾಗಲೀ ತಿನ್ನಲು ಹೊರಗೆ ಹೋಗಲಿಲ್ಲ.’’
‘‘ನಾನು ನನಗೆ ಬೇಕಾದಾಗ ಫೋನ್ ಮಾಡುತ್ತೇನೆ. ನೀನು...’’
ಅವಳ ಮಾತನ್ನು ಅರ್ಧದಲ್ಲೇ ತಡೆದ ಮನಮೋಹನ ‘‘ನೋಡು, ಬೇಕಿದ್ದರೆ ನಮ್ಮ ಈ ವ್ಯವಹಾರವನ್ನು ಇಲ್ಲಿಗೇ ಮುಗಿಸಿಬಿಡೋಣ. ಅಥವಾ ಯಾವ ಸಮಯಕ್ಕೆ ನೀನು ಫೋನ್ ಮಾಡುತ್ತೀಯಾ ಎಂದು ಸರಿಯಾಗಿ ನನಗೆ ಹೇಳು. ಈ ಕಾಯುವ ಕೆಲಸ ಯಾವ ಶತ್ರುವಿಗೂ ಬೇಡ’’
‘‘ಮೋಹನ್, ನಾನು ನಿನ್ನಲ್ಲಿ ಕ್ಷಮೆ ಬೇಡುವೆನು. ನಾಳೆಯಿಂದ ಬೆಳಗ್ಗೆ ಮತ್ತು ಸಂಜೆ ಕರಾರುವಕ್ಕಾಗಿ ಫೋನ್ ಮಾಡುವೆನು’’ ಅವಳು ಭರವಸೆ ಕೊಟ್ಟಳು.
‘‘ಅದಾಗಬಹುದು’’ ಅವನೂ ಸಮ್ಮತಿಸಿದನು.
‘‘ನೀನು ನನ್ನ ಫೋನಿಗಾಗಿ ಹೀಗೆ ಕಾಯುತ್ತಿರಬಹುದೆಂದು ನಾನು ಭಾವಿಸಿರಲಿಲ್ಲ’’
‘‘ಕಾಯುವುದು ನನ್ನ ತಾಳ್ಮೆಗೆ ಮೀರಿದ ವಿಷಯ. ಇಂತಹ ಹೊತ್ತಿನಲ್ಲಿ ನಾನು ನನ್ನನ್ನೇ ಶಿಕ್ಷಿಸಿಕೊಳ್ಳುವೆನು.’’
‘‘ಅದು ಹೇಗೆ..?’’
‘‘ನೋಡು, ನೀನು ಬೆಳಗಿನಿಂದ ಫೋನ್ ಮಾಡಲಿಲ್ಲ. ನನಗೆ ಹೊರಗೆ ಹೋಗಬಹುದಿತ್ತಾದರೂ ಹೋಗಲಿಲ್ಲ. ಅಸಾಧ್ಯ ಅಸಹನೆಯಿಂದ ರೇಗುತ್ತಾ ಇಡೀ ದಿನ ಇಲ್ಲೇ ಕಳೆದೆ’’
‘‘ನಾನು ಬೇಕೆಂದೇ ಫೋನ್ ಮಾಡಲಿಲ್ಲ’’ಆಕೆ ಹೇಳಿದಳು.
‘‘ಯಾಕೆ?’’
‘‘ನಾನು ಫೋನ್ ಮಾಡದೇ ಹೋದಲ್ಲಿ ನಿನಗೆ ಸಂಕಟವಾಗುವುದೇ ಎಂದು ತಿಳಿಯಬೇಕಾಗಿತ್ತು.’’
‘‘ನೀನು ಬಹಳ ತುಂಟಿ. ನಾನೀಗ ತುರ್ತಾಗಿ ಹೊರಗೆ ಹೋಗಬೇಕಾಗಿದೆ. ಏನನ್ನಾದರೂ ತಿನ್ನದೇ ಹೋದರೆ ನನ್ನ ಪ್ರಾಣ ಹೋಗಿ ಬಿಡಬಹುದು.’’
‘‘ಬೇಗ ಬರುವಿಯಲ್ಲ?’’
‘‘ಹೆಚ್ಚೆಂದರೆ ಅರ್ಧಗಂಟೆಯೊಳಗೆ’’
ಮನಮೋಹನ ಹೇಳಿದ ಮಾತಿಗೆ ಸರಿಯಾಗಿ ಅರ್ಧಗಂಟೆಯೊಳಗೆ ಕೋಣೆಗೆ ಮರಳಿದನು. ಆಕೆ ಫೋನ್ ಮಾಡಿದಳು. ಅವರಿಬ್ಬರು ಸುಮಾರು ಹೊತ್ತು ಮಾತಾಡಿಕೊಂಡರು. ಹಿಂದೆ ಹಾಡಿದ ಹಾಡನ್ನು ಪುನಃ ಒಮ್ಮೆ ಹಾಡಲು ಮನಮೋಹನ ಅವಳಲ್ಲಿ ವಿನಂತಿಸಿಕಂಡನು. ಆಕೆ ಹಾಡಿದಳು.
ಈಗ ಆಕೆ ದಿನವೂ ಬೆಳಗ್ಗೆ ಮತ್ತು ಸಂಜೆ ತಪ್ಪದೇ ಫೋನ್ ಮಾಡುತ್ತಿದ್ದಳು. ಕೆಲವೊಮ್ಮೆ ಅವರಿಬ್ಬರು ಗಂಟೆಗಟ್ಟಳೆ ಹೊತ್ತು ಮಾತಾಡುವುದಿತ್ತು. ಹಾಗಿದ್ದರೂ ಮನಮೋಹನ ಅವಳ ಹೆಸರನ್ನಾಗಲೀ, ಅವಳ ಫೋನ್ ನಂಬರನ್ನಾಗಲೀ ಅವಳಲ್ಲಿ ಕೇಳಲಿಲ್ಲ. ಆರಂಭದಲ್ಲಿ ಆಕೆ ಹೇಗಿರಬಹುದೆಂದು ಕಲ್ಪಿಸಿಕೊಳ್ಳಲು ಆತ ಪ್ರಯತ್ನಿಸಿದ್ದಿತು. ಆದರೆ ದಿನ ಕಳೆದಂತೆ ಅದರ ಅಗತ್ಯ ಅವನಿಗೆ ಕಾಣದಾಯಿತು. ಅವಳ ದೇವರಾಗದಂತಹ ಸ್ವರವೇ ಅವನ ಪಾಲಿಗೆ ಎಲ್ಲವೂ ಆಗಿತ್ತು. ಅವಳ ಮುಖ, ಅವಳ ಆತ್ಮ, ಅವಳ ದೇಹ, ಎಲ್ಲವೂ!

ಅವಳು ಮತ್ತೊಮ್ಮೆ ಅವನಲ್ಲಿ ಕೇಳಿದಳು: ‘‘ಯಾಕೆ ಮೋಹನ್, ನನ್ನ ಹೆಸರನ್ನೇ ನೀನು ಕೇಳುತ್ತಿಲ್ಲ?’’
‘‘ಯಾಕೆಂದರೆ ನಿನ್ನ ಸ್ವರವೇ ನಿನ್ನ ಹೆಸರು’’ ಅವನು ಉತ್ತರಿಸಿದ.
ಮತ್ತೊಂದು ದಿನ ಅವಳು ಕೇಳಿದಳು: ‘‘ಮೋಹನ್, ಹಿಂದೆ ನೀನು ಯಾರನ್ನಾದರೂ ಪ್ರೀತಿಸಿದ್ದೀಯಾ?’’
‘‘ಇಲ್ಲ’’
‘‘ಯಾಕೆ?’’
‘‘ಈ ಪ್ರಶ್ನೆಗೆ ಉತ್ತರಿಸಬೇಕಿದ್ದರೆ ಈವರೆಗಿನ ನನ್ನ ಬದುಕಿನ ತುಣುಕುಗಳನ್ನೆಲ್ಲಾ ಕಣ್ಣ ಮುಂದೆ ಬಿಡಿಸಬೇಕಾಗುತ್ತದೆ. ಆದರೆ ಅಲ್ಲಿ ಕಾಣ ಸಿಗಬಹುದಾದ ಮಹಾ ಶೂನ್ಯತೆಯನ್ನು ಕಂಡು ನನ್ನ ಎದೆ ಒಡೆದು ಹೋಗಬಹುದು.’’
‘‘ಹಾಗಿದ್ದರೆ ಬಿಟ್ಟುಬಿಡು’’
 ಹೀಗೆ ಒಂದು ತಿಂಗಳು ಕಳೆಯಿತು. ಒಂದು ದಿನ ಗೆಳೆಯನ ಪತ್ರ ಮನಮೋಹನನ ಕೈಗೆ ತಲುಪಿತು. ಗೆಳೆಯ ತನ್ನ ವ್ಯವಹಾರಗಳನ್ನು ಮುಗಿಸಿಕೊಂಡು ಇನ್ನು ಒಂದು ವಾರದೊಳಗೆ ಮುಂಬೈಗೆ ಮರಳುವವನಿದ್ದನು. ಅಂದು ಸಂಜೆ ಆಕೆ ಫೋನ್ ಮಾಡಿದಾಗ ಮನಮೋಹನ ಹೇಳಿದನು: ‘‘ನನ್ನ ಈ ಸಾಮ್ರಾಜ್ಯ ಕೊನೆಯಾಗುವ ಗಳಿಗೆ ಹತ್ತಿರ ಬರುತ್ತಿದೆ.’’
‘‘ಯಾಕೆ?’’
‘‘ನನ್ನ ಗೆಳೆಯ ಇನ್ನೊಂದು ವಾರದೊಳಗೆ ಇಲ್ಲಿಗೆ ಮರಳಲಿದ್ದಾನೆ’’
‘‘ಫೋನ್ ಇರುವ ಬೇರೆ ಗೆಳೆಯರಾರು ನಿನಗಿಲ್ಲವೇ?’’
‘‘ಬೇಕಾದಷ್ಟಿದ್ದಾರೆ. ಆದರೆ ಅವರ ನಂಬರ್ ನಿನಗೆ ಕೊಡಲಾರೆ’’
‘‘ಯಾಕೆ?’’
‘‘ನಿನ್ನ ಸ್ವರವನ್ನು ನನ್ನ ಒಬ್ಬನನ್ನು ಬಿಟ್ಟು ಬೇರೆ ಯಾರೂ ಕೇಳುವುದು ನನಗಿಷ್ಟವಿಲ್ಲ’’
‘‘ಯಾಕೆ?’’
‘‘ನನಗೆ ಅಸೂಯೆಯಾಗುತ್ತದೆ’’
‘‘ಮತ್ತೆ ನಾವೇನು ಮಾಡೋಣ?’’
‘‘ನೀನೇ ಹೇಳು’’
‘‘ನಿನ್ನ ಸಾಮ್ರಾಜ್ಯ ಕೊನೆಯಾಗುವ ಕಡೆಯ ದಿನ ನಾನು ನನ್ನ ಫೋನ್ ನಂಬರನ್ನು ನಿನಗೆ ನೀಡುತ್ತೇನೆ.’’
ಅವನಿಗೆ ಒಮ್ಮೆಲೆ ನಿರಾಳವಾಯಿತು.ರಿಸೀವರ್ ಕೆಳಗಿಟ್ಟು ಅವನು ಮತ್ತೆ ಅವಳ ಚಿತ್ರವನ್ನು ಕಲ್ಪಿಸಿಕೊಳ್ಳಲು ಯತ್ನಿಸಿದನು. ಅವಳ ಆ ದಿವ್ಯ ಸ್ವರವನ್ನು ಬಿಟ್ಟರೆ ಬೇರೇನೂ ಹೊಳೆಯಲಿಲ್ಲ. ಇದ್ದಕ್ಕಿದ್ದಂತೆಯೇ ಅವಳನ್ನೊಮ್ಮೆ ಕಾಣುವ ಆಸೆ ಅವನಲ್ಲಿ ಉತ್ಕಟವಾಯಿತು.
ಮರುದಿನ ಆಕೆ ಫೋನ್ ಮಾಡಿದಾಗ ‘‘ನಿನ್ನನ್ನು ನೋಡಬೇಕೆನ್ನುವ ಕುತೂಹಲ ನನ್ನಲ್ಲಿ ಹುಟ್ಟಿದೆ’’ ಎಂದು ಅವನು ಹೇಳಿದನು.
‘‘ನೀನು ನನ್ನನ್ನು ಯಾವಾಗ ಬೇಕಿದ್ದರೂ ನೋಡಬಹುದು. ಬೇಕಿದ್ದರೆ ಈ ದಿನವೇ’’ ಅವಳು ನುಡಿದಳು.
‘‘ಬೇಡ, ಈ ದಿನವೇ ಬೇಡ. ನಿನ್ನನ್ನು ನೋಡುವ ದಿನ ನಾನು ಹೊಸ ಬಟ್ಟೆಗಳನ್ನು ಧರಿಸಿರಬೇಕು. ನನಗೆ ಕೆಲವು ಹೊಸ ಬಟ್ಟೆಗಳನ್ನು ತರುವಂತೆ ನನ್ನ ಗೆಳೆಯನಿಗೆ ಇಂದೇ ತಿಳಿಸುವೆನು.’’
 ‘‘ಓ, ನೀನು ಸಣ್ಣ ಮಗುವಿನಂತೆ ಆಡುತ್ತಿರುವೆ. ಅಂದ ಹಾಗೆ ನಾವಿಬ್ಬರು ಭೇಟಿಯಾದ ದಿನ ನಾನು ನಿನಗೊಂದು ಉಡುಗೊರೆ ಕೊಡುವೆನು.’’
‘‘ನಿನ್ನನ್ನು ಭೇಟಿಯಾಗುವುದಕ್ಕಿಂತ ದೊಡ್ಡ ಉಡುಗೊರೆ ಈ ಜಗತ್ತಿನಲ್ಲಿ ನನಗೆ ಬೇರೊಂದಿಲ್ಲ’’
‘‘ನಾನು ನಿನಗಾಗಿ ಒಂದು ಎಕ್ಸಕ್ಟಾ ಕ್ಯಾಮರಾ ಖರಿದಿಸಿದ್ದೇನೆ’’
‘‘ಓಹ್’’
‘‘ಆದರೆ ಒಂದು ಷರತ್ತಿದೆ. ಆ ಕ್ಯಾಮರಾದಿಂದ ನೀನು ನನ್ನದೊಂದು ಫೊಟೋ ತೆಗೆಯಬೇಕು.’’
‘‘ಅದನ್ನೆಲ್ಲಾ ನಾವು ಭೇಟಿಯಾದ ದಿನ ನಾನು ತೀರ್ಮಾನಿಸುತ್ತೇನೆ.’’
‘‘ನಾಳೆ ಮತ್ತು ನಾಳಿದ್ದು ಎರಡು ದಿನ ನಾನು ನಿನಗೆ ಫೋನ್ ಮಾಡುವುದಿಲ್ಲ’’ ಅವಳು ನುಡಿದಳು.
‘‘ಏಕೆ?’’
‘‘ನಾನು ಮನೆಯಲ್ಲಿರುವುದಿಲ್ಲ. ನಾನು ನನ್ನ ಸದಸ್ಯರೊಂದಿಗೆ ನಗರದಿಂದ ಹೊರಗೆ ಪಿಕ್‌ನಿಕ್ ಹೋಗುತ್ತಿದ್ದೇನೆ. ಕೇವಲ ಎರಡು ದಿನಗಳಿಗೋಸ್ಕರ’’
ಮರುದಿನ ಇಡೀ ದಿವಸ ಮನಮೋಹನ ಸುಮ್ಮನೇ ಆ ಆಫೀಸು ಕೋಣೆಯಲ್ಲಿಯೇ ಕುಳಿತು ಕಳೆದನು. ಆಕೆಯ ಸ್ವರ ವಿನ್ಯಾಸದ ಎಳೆಗಳನ್ನೇ ಪೋಣಿಸಿ ಆಕೆಯ ವ್ಯಕ್ತಿತ್ವವನ್ನು ನೇಯುವ ಪ್ರಯತ್ನದಲ್ಲಿ ತೊಡಗಿದ. ಆ ಒಂದು ದಿನ ಹಾಗೆಯೇ ಕಳೆದು ಹೋಯ್ತು. ಅದರ ಮರುದಿವಸ ಮನಮೋಹನನಿಗೆ ಸಣ್ಣಗೆ ಜ್ವರ ಕಾಣಿಸಿಕೊಂಡಿತು. ಆತನ ಮೈಯಿಡೀ ಕೊರಡಿನಂತೆ ಜಡಗಟ್ಟಿ ಹೋಗಿತ್ತು. ಆಕೆ ಪೋನ್ ಮಾಡದ ಶೂನ್ಯತೆಯೇ ತನ್ನ ಈ ಸ್ಥಿತಿಗೆ ಕಾರಣವಾಗಿರಬಹದೆಂದು ಅವನು ಮೊದಲು ಯೋಚಿಸಿದನು. ಆದರೆ ಮಧ್ಯಾಹ್ನವಾಗುತ್ತಿದ್ದಂತೇ ಜ್ವರ ಏರತೊಡಗಿತ್ತು. ಅವನ ದೇಹವಿಡೀ ಕುಲುಮೆಯಂತೆ ನಿಗಿ ನಿಗಿಸತೊಡಗಿತು. ಕಣ್ಣುಗಳೆರಡೂ ಭಗಭಗನೇ ಉರಿಯುತ್ತಿರುವಂತೆ ಅವನಿಗೆ ಭಾಸವಾದವು.
 ಮನಮೋಹನ ಟೇಬಲ್ ಮೇಲೆ ಅಂಗಾತ ಬಿದ್ದುಕೊಂಡನು. ಸಮುದ್ರವನ್ನೇ ಒಂದು ಗುಟುಕಿಗೆ ಹೀರಿ ಬಿಡುವಂತಹ ಬಾಯಾರಿಕೆಯಿಂದ ಅವನು ಇಡೀ ದಿನ ನೀರು ಕುಡಿಯುತ್ತಲೇ ಇದ್ದನು. ಎದೆಯಲ್ಲಿ ಸುತ್ತಿಗೆಯಲ್ಲಿ ಬಾರಿಸಿದಂತಹ ಭಯಂಕರ ನೋವು! ಸಂಜೆಯಾಗುತ್ತಿದ್ದಂತೆ ಆತನ ಸ್ಥಿತಿ ಇನ್ನಷ್ಟು ಹದಗೆಟ್ಟಿತು. ಅವನ ತಲೆಯೊಳಗೆ ಸಾವಿರಾರು ಟೆಲಿಫೋನ್‌ಗಳು ಏಕ ಕಾಲಕ್ಕೆ ಮೊಳಗಿದಂತೆ ಸದ್ದುಗಳು ಮೊಳಗತೊಡಗಿದವು. ಮನಮೋಹನ ಉಸಿರು ಸಿಕ್ಕಿಕೊಂಡವನಂತೆ ಚಡಪಡಿಸತೊಡಗಿದನು. ರಾತ್ರಿಯಿಡೀ ಅರೆನಿದ್ರೆ-ಅರೆ ಎಚ್ಚರದ ನಡುವೆ ಮುಳುಗೇಳುತ್ತಾ ಮನಮೋಹನ ಕನವರಿಸುತ್ತಾ ಕಳೆದನು.
ಮರುದಿನ ಬೆಳಗ್ಗೆ ಎಚ್ಚರವಾದಾಗ ಮನಮೋಹನನಿಗೆ ಕಣ್ಣುಗಳನ್ನಷ್ಟೇ ತೆರೆದು ಅತ್ತಿತ್ತ ಹೊರಳಿಸುವುದು ಸಾಧ್ಯವಾಯಿತು. ಅವನ ದೇಹ ಗಾಣಕ್ಕೆ ಕೊಟ್ಟ ಕಬ್ಬಿನಂತೆ ಸೂತ್ರ ಕಳೆದುಕೊಂಡಿತ್ತು. ಎದೆ ನೋವಿನಿಂದ ತೋಯ್ದು ಹೋಗಿತ್ತು. ಬಹಳ ಕಷ್ಟದಿಂದ ಆತ ಉಸಿರಾಡುತ್ತಿದ್ದನು.
ಅಷ್ಟರಲ್ಲಿ ಫೋನ್ ರಿಂಗಾಯಿತು. ಆದರೆ ಆ ಸದ್ದು ಅವನಿಗೆ ಕೇಳಿಸದಾಗಿತ್ತು. ಅವನ ಕಿವಿಗಳಿಗೆ ಕಿವುಡು ಸಂಭವಿಸಿತ್ತು. ಟೆಲಿಫೋನ್ ಅದೆಷ್ಟೋ ಹೊತ್ತಿನ ತನಕ ಮೊಳಗುತ್ತಲೇ ಇತ್ತು. ಮತ್ತೆ.. ಮತ್ತೆ...
ನಡುವೆ ಒಂದು ಕ್ಷಣ ರಿಂಗುಣಿಸುವ ಸದ್ದು ಆತನಿಗೆ ಕೇಳಿದಂತಾಯಿತು. ಮನಮೋಹನ ಬಹು ಪ್ರಯಾಸದಿಂದ ಮೇಲೆದ್ದು ಕೂತನು. ಅವನ ಪಾದಗಳು ಲಯ ಕಳೆದುಕೊಂಡಿದ್ದವು. ನಡುಗುವ ಕಾಲುಗಳು ಹೆಜ್ಜೆಗಳಿಗೆ ಸ್ಥಿರತೆ ನೀಡಲು ಅಸಹಾಯಕವಾಗಿದ್ದವು. ಗೋಡೆಯನ್ನು ಆಧರಿಸಿಕೊಂಡು ತಡವರಿಸುತ್ತಾ ಟೆಲಿಫೋನ್ ಬಳಿಗೆ ಬಂದ ಆತ ನಡುಗುವ ಕೈಗಳಿಂದ ರಿಸೀವರ್ ಎತ್ತಿಕೊಂಡನು. ಆತನ ನಾಲಗೆ ಮರದಂತೆ ಒಣಗಿ ಹೋಗಿತ್ತು. ನಾಲಗೆಯನ್ನು ತುಟಿಯ ಮೇಲೆ ತರಲು ಇನ್ನಿಲ್ಲದ ಪಾಡು ಪಟ್ಟ ಮನಮೋಹನ, ಪ್ರಯಾಸದಿಂದ ‘‘ಹಲೋ’’ಅಂದನು.
‘‘ಹಲೋ, ಮೋಹನ್’’
‘‘ಮೋಹನ್ ಮಾತಾಡುತ್ತಿದ್ದೇನೆ’’ ಅವನ ಧ್ವನಿ ಬಾವಿಯ ಆಳದಿಂದ ಬರುವಂತಿತ್ತು.
‘‘ಮೋಹನ್, ನೀನು ಮಾತಾಡ್ತಿರೋದು ನನಗೆ ಕೇಳಿಸುತ್ತಿಲ್ಲ. ಗಟ್ಟಿಯಾಗಿ ಹೇಳು’’
ಅವನು ಏನೇನೋ ಹೇಳಲು ಪ್ರಯತ್ನಿಸಿದನು. ಆದರೆ ಅವನ ಸ್ವರ ಗಂಟಲಲ್ಲೇ ಉಡುಗಿ ಹೋಗುತ್ತಿತ್ತು.
‘‘ನಾವು ಯೋಚಿಸಿದ್ದಕ್ಕಿಂತಲೂ ಬೇಗನೇ ಮನೆಗೆ ಮರಳಿದೆವು. ಕಳೆದ ಕೆಲವು ಗಂಟೆಗಳಿಂದ ನಾನು ನಿನಗೆ ರಿಂಗ್ ಮಾಡುತ್ತಲೇ ಇದ್ದೇನೆ. ಎಲ್ಲಿ ಹೋಗಿದ್ದೆ ನೀನು?’’ ಅವಳು ನುಡಿದಳು.
ಮನಮೋಹನನ ತಲೆ ಗಿರಗಿಟ್ಟಿಯಂತೆ ಗಿರಗಿರ ತಿರುಗತೊಡಗಿತು.
‘‘ಮೋಹನ್, ಏನಾಯ್ತು? ಯಾಕೆ ನೀನು ಏನೂ ಹೇಳುತ್ತಿಲ್ಲ’’ ಆಕೆ ಪ್ರಶ್ನಿಸಿದಳು. ಅವನು ಬಹಳ ಕಷ್ಟಪಟ್ಟು ನುಡಿದ: ‘‘ನನ್ನ ಸಾಮ್ರಾಜ್ಯ ಈ ದಿನ ಕೊನೆಗಾಣಲಿದೆ’’
ಆತನ ತುಟಿಯಿಂದ ರಕ್ತ ಹೊರ ಹೊಮ್ಮಿ ಕೆನ್ನೆಯ ಮೇಲೆ ಇಳಿಯಿತು.
‘‘ಹಾಗಿದ್ದರೆ ಮೋಹನ್, ನನ್ನ ನಂಬರ್ ಬರೆದುಕೋ..50314...50314..ನಾಳೆ ಬೆಳಗ್ಗೆ ನಿನ್ನ ಫೋನ್‌ಗಾಗಿ ಕಾಯುತ್ತಿರುತ್ತೇನೆ. ಫೋನ್ ಮಾಡಲು ಮರೆಯಬೇಡ’’ ಆಕೆ ಫೋನ್ ಕೆಳಗಿಟ್ಟಳು.
ಮನಮೋಹನ ಟೆಲಿಫೋನ್ ಮೇಲೆ ಕುಸಿದು ಬಿದ್ದನು. ಕಾರಂಜಿಯಂತೆ ಅವನ ಬಾಯಿಂದ ಹೊರಚಿಮ್ಮಿದ ರಕ್ತ ನೆಲದ ಮೇಲೆ ಮಡುಗಟ್ಟತೊಡಗಿತು.

ಮೂಲ: ಸಾದತ್ ಹಸನ್ ಮಂಟೊ

Sunday, May 4, 2014

ಸ್ಪೈಡರ್ ಮ್ಯಾನ್-2: ಇನ್ನಷ್ಟು ಆ್ಯಕ್ಷನ್‌ಗಳೊಂದಿಗೆ....

ಈಗಾಗಲೇ ಅಮ್ಯಾಝಿಂಗ್ ಸ್ಪೈಡರ್  ಮ್ಯಾನ್ ಹಾಲಿವುಡ್‌ನಲ್ಲಿ ತನ್ನ ಬಲೆಯನ್ನು ಗಟ್ಟಿಯಾಗಿ ಹರಡಿದ್ದಾನೆ. ಇದೀಗ ಭಾಗ ಎರಡರಲ್ಲಿ ಇನ್ನಷ್ಟು ಖಳರನ್ನು ಮುಖಾಮುಖಿಗೊಳ್ಳುವ ಮೂಲಕ ನೋಡುಗರನ್ನು ಮೂಕ ವಿಸ್ಮಿತಗೊಳಿಸುತ್ತಾನೆ. ಸಾಹಸ ತ್ರೀಡಿಯ ಮೂಲಕ ಈ ಸಾಹಸಗಳನ್ನು ಇನ್ನಷ್ಟು ಹತ್ತಿರಕ್ಕೆ ತಂದಿದ್ದಾರೆ ನಿರ್ದೇಶಕ ಮಾರ್ಕ್‌ವೆಬ್. ಒಂದೆಡೆ ಪೀಟರ್ ಪಾರ್ಕರ್ ಮಗದೊಂದೆಡೆ ಸ್ಪೆೃಡರ್ ಮ್ಯಾನ್ ಹೀಗೆ ಎರಡು ಐಡೆಂಟಿಟಿಯೊಂದಿಗಿನ ಘರ್ಷಣೆಯನ್ನು ತೆರೆದಿಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಈ ಬಾರಿ ಸ್ಪೈಡರ್ನ ಸಾಹಸಗಳ ಮಧ್ಯೆ, ಭಾವನಾತ್ಮಕ ದೃಶ್ಯಗಳನ್ನೂ ಹೆಣೆದಿರುವುದು ನಿರ್ದೇಶಕರ ಹೆಚ್ಚುಗಾರಿಕೆ. ಸ್ಪೆೃಡರ್‌ಮ್ಯಾನ್‌ನ ಸಾಹಸಗಳ ಮುಂದೆ ಅಷ್ಟೊಂದು ಪರಿಣಾಮಕಾರಿಯಾಗಿ ಮುಟ್ಟುವುದಿಲ್ಲವಾದರೂ, ಚಿತ್ರಕ್ಕೊಂದು ಹೊಸ ದಿಕ್ಕನ್ನು ನೀಡಿದೆ.. ಈ ಹಿಂದಿನ ಸ್ಪೆೃಡರ್‌ಮ್ಯಾನ್‌ನ ಮುಗ್ಧತೆ ಅಮ್ಯಾಝಿಂಗ್ ಸ್ಪೆೃಡರ್ ಮ್ಯಾನ್ ಆಗಿ ಕಾಣಿಸಿಕೊಂಡಿರುವ ಗಾರ್ಫೀಲ್ಡ್‌ನಲ್ಲಿ ಇಲ್ಲ. ಆದರೆ ಈತ ಸಾಹಸಕ್ಕೆ ಹೇಳಿ ಮಾಡಿಸಿದಂತೆ, ಲೀಲಾಜಾಲವಾಗಿ ತನ್ನ ಬಲೆಯನ್ನು ಬೀಸುತ್ತಾ ಹೋಗುತ್ತಾನೆ. ತನ್ನ ಪ್ರೇಯಸಿ ಗ್ವೆನ್(ಸ್ಟೋನ್)ಜೊತೆಗಿನ ಸಂಬಂಧಗಳಿಗೂ ಈ ಬಾರಿ ತುಸು ಮಹತ್ವ ನೀಡಿದ್ದಾನೆ.
ಭಾಗ 2 ಎಲ್ಲ ರೀತಿಯಲ್ಲೂ ಭಾಗ ಒಂದನ್ನು ಮೀರಿಸುತ್ತದೆ. ಇಲ್ಲಿ ಖಳರನ್ನು ರೂಪಿಸುವಲ್ಲಿಯೂ ವಿಶೇಷ ತಾಂತ್ರಿಕತೆಯನ್ನು ಬಳಸಿಕೊಳ್ಳಲಾಗಿದೆ. ಹಾಗೆಯೇ ಮಾನವೀಯ ಅಂಶದೊಂದಿಗೆ ಇಡೀ ಚಿತ್ರದ ಕತೆಯನ್ನು ನೇಯಲು ಯತ್ನಿಸಲಾಗಿದೆ. ಈ ಕಾರಣದಿಂದಲೇ ಭಾಗ ಎರಡರಲ್ಲಿ ಕೆಲವು ಅನಿರೀಕ್ಷಿತಗಳು ಪ್ರೇಕ್ಷಕರನ್ನು ಎದುರುಗೊಳ್ಳುತ್ತವೆ.

 ಸಾಹಸ, ನಟನೆ ಹಾಗೂ ಭಾವನಾತ್ಮಕ ಸನ್ನಿವೇಶಗಳನ್ನು ಗಾರ್ಫೀಲ್ಡ್ ಚೆನ್ನಾಗಿಯೇ ನಿಭಾಯಿಸಿದ್ದಾರೆ. ಇಲ್ಲಿಯೂ ಸ್ಪೆೃಡರ್ ಮ್ಯಾನ್ ಪಾಲಕರ ಕತೆಗೆ ಒತ್ತು ನೀಡಲಾಗಿದೆ. ಕಳೆದ ಬಾರಿಗಿಂತ ಹೆಚ್ಚು ವಿವರಗಳಿವೆ. ಮತ್ತು ಅವರಿಂದಲೇ ಚಿತ್ರ ಆರಂಭವಾಗುತ್ತದೆ. ಪಾರ್ಕರ್‌ನ ಹೆತ್ತವರು-ರಿಚಾರ್ಡ್ ಹಾಗೂ ಮೇರಿಯ ಕತೆಯ ಸಣ್ಣ ತುಣುಕು ಇಲ್ಲಿ ಮುಂದುವರಿಯುತ್ತದೆ. ತಾನು ಹಾಗೂ ತನ್ನ ಹೆಂಡತಿ ತರಾತುರಿಯಲ್ಲಿ ಏಕೆ ಕಾಲುಕೀಳಬೇಕಾಯಿತು ಎಂದು ವಿವರಿಸುವ ಪ್ರಯತ್ನದಲ್ಲಿ ರಿಚಾರ್ಡ್ ವೀಡಿಯೊ ಸಂದೇಶವೊಂದನ್ನು ಮುದ್ರಿಸುತ್ತಾನೆ. ಅವರು ತಮ್ಮ ವಿಮಾನದ ಮೇಲಾದ ಹತ್ಯಾಯತ್ನದಿಂದಲೂ ಪಾರಾಗಲು ಪ್ರಯತ್ನಿಸುತ್ತಾರೆ. ಅವರ ಕಿರಿಯ ಮಗನನ್ನು ಆಂಟ್ ಮೇರಿ ಹಾಗೂ ಆಕೆಯ ಗಂಡನ ಪಾಲನೆಯಲ್ಲಿ ಬಿಟ್ಟಿರುತ್ತಾರೆ. ಓಸ್ಕೋರ್ಪನ ನಿಗೂಢ ಪ್ರಯೋಗಗಳ ಹಿಂದಿರುವ ರಹಸ್ಯವನ್ನು ಭೇದಿಸಲು ಸಹಾಯ ಮಾಡಬಲ್ಲ ಈ ಸಂದೇಶವನ್ನು ಪೀಟರ್ ಪತ್ತೆ ಹಚ್ಚುತ್ತಾನೆಯೇ? ಇದು ಈ ಬಾರಿಯ ಸ್ಪೆೃಡರ್ ಮ್ಯಾನ್‌ನ ಸವಾಲುಗಳು.

ಚಿತ್ರದಲ್ಲಿ ಇಬ್ಬರು ಖಳರನ್ನು ಸ್ಪೆೃಡರ್ ಮ್ಯಾನ್ ಎದುರಿಸಬೇಕಾಗುತ್ತದೆ. ಆದರೆ ಈ ಇಬ್ಬರೂ ಪರಿಸ್ಥಿತಿಗೆ ಸಿಲುಕಿ ಖಳನಾಯಕರಾದವರು. ಆದುದರಿಂದ ಅವರನ್ನು ಸಂಪೂರ್ಣವಾಗಿ ವಿರೋಧಿಸುವಂತಿಲ್ಲ. ಆದರೂ ಜಗತ್ತನ್ನು ಉಳಿಸಲು ಸ್ಪೆೃಡರ್ ಮ್ಯಾನ್ ಅವರೊಂದಿಗೆ ಹೋರಾಡಲೇ ಬೇಕಾಗುತ್ತದೆ. ಮ್ಯಾಕ್ಸ್ ಡಿಲ್ಲೋ ಒಂದು ಆಕಸ್ಮಿಕ ಅಪಘಾತದಲ್ಲಿ ಆತ ಇಲೆಕ್ಟ್ರೋ ಆಗಿ ಮಾರ್ಪಾಡಾಗುತ್ತಾನೆ. ಅಪಾರ ಶಕ್ತಿಯನ್ನು ತನ್ನದಾಗಿಸಿಕೊಂಡು ವ್ಯವಸ್ಥೆಗೆ ಸಮಸ್ಯೆಯಾಗುತ್ತಾನೆ. ಇನ್ನೊಂದು ಕಡೆ, ಓಕ್ಸೋರ್ಪ್ ಸಂಸ್ಥೆಯ ಹ್ಯಾರಿ ತನ್ನ ತಂದೆಯ ವಂಶಪಾರಂಪರ್ಯ ಕಾಯಿಲೆಯಿಂದ ಪಾರಾಗಲು ಯತ್ನಿಸಿ, ಇನ್ನೊಂದು ಹಸಿರು ದೈತ್ಯನಾಗುತ್ತಾನೆ. ಇವರನ್ನು ಸ್ಪೆೃಡರ್ ಅದು ಹೇಗೆ ಎದುರಿಸುತ್ತಾನೆ ಎನ್ನುವುದೇ ಚಿತ್ರದ ಜೀವಾಳ. ಆ್ಯಕ್ಷನ್ ದಶ್ಯಗಳು ಉಸಿರು ಬಿಗಿಹಿಡಿಯುವಂತಹವುಗಳಾಗಿದ್ದು, ಸಮಯ ಓಡುತ್ತಿದ್ದರೂ, ಚಿತ್ರ ಎಳೆಯಲ್ಪಡುವುದಿಲ್ಲ. ಈ ಸಾಹಸದ ಜೊತೆಗೆ ಸಣ್ಣದೊಂದು ಪ್ರೇಮದ ಎಳೆ ಚಿತ್ರದ ಕತೆಗೆ ಮಾನವೀಯ ಚೌಕಟ್ಟನ್ನು ನೀಡುತ್ತದೆ. ಒಟ್ಟಿನಲ್ಲಿ ಸ್ಪೆೃಡರ್ ಮ್ಯಾನ್ ಈ ಬಾರಿಯೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದಾನೆ.

Saturday, May 3, 2014

ನಿನಗೆ ನಾನು ಹುಟ್ಟಿದ ನಿಮಿಷ....


(ಇದು ಕವಿ, ಪತ್ರಕರ್ತ ದಿವಂಗತ ಬಿ. ಎಂ. ರಶೀದ್ ಅವರ ‘ಪರುಷ ಮಣಿ’ ಸಂಕಲನದಿಂದ ಆಯ್ದ ಕವಿತೆ. 1996ರಲ್ಲಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.)

ಅಖಂಡ ಮೌನದೆದೆಯಿಂದ ಕಿತ್ತು ಬಂದ
ಅನಾಥ ಅಕ್ಷರದಂತೆ...
ನೋವಿನ ಸಬಲ ಗೋಡೆಗಳನ್ನು
ಸೀಳಿ ದಿಕ್ಕೆಟ್ಟು ನಿಂತ ಕಣ್ಣೀರಿನಂತೆ...
ನಿನ್ನ ಮಡಿಲೊಳಗೆ ನಾನು ಬಿದ್ದೆ!
ನನ್ನ ಎದೆ, ತುಟಿ, ಗಲ್ಲಗಳೆಲ್ಲಾ ಒದ್ದೆ,
ನಿನಗೆ ನಾನು ಹುಟ್ಟಿದ ನಿಮಿಷ
ತಾಯಿ, ನನಗೆ ಇಪ್ಪತ್ತೈದು ವರುಷ!

ನಾನು ನಿನ್ನೊಳಗಿನವನೋ,
ನೀನು ನನ್ನೊಳಗಿನವಳೋ,
ಆ ಕ್ಷಣದ ಪುಳಕಕ್ಕೆ ಸದ್ದುಗಳಿದ್ದರೆ ನೀನು
ಆಲಿಸುವೆ ಸಂಗೀತದಂತೆ!
ಎಲ್ಲಿ ಬಚ್ಚಿಟ್ಟಿದ್ದೆ ತಾಯಿ, ನಿನ್ನ
ಎಲ್ಲಿ ಬಚ್ಚಿಟ್ಟಿದ್ದೆ ನನ್ನ

ಬಿಸಿಗೆ ಬಿಸಿ ಹುಟ್ಟಿ ತನ್ಮಯತೆಯ ತಣಿಸು
ಎಂಜಲಿಗೆ ಎಂಜಲು ಅಮತ
ಪಡೆದೆ ಮರಳಿ ತವಕದ ಬಿಸಿಯುಸಿರು
ನಿನ್ನೆದೆಗೆ ತುಟಿ ಕೊಟ್ಟು ಬೆಳೆದೆ
ಕೊಟ್ಟಷ್ಟೂ ಹಿಗ್ಗು ನಿನಗೆ
ಹಸಿದ ತಬ್ಬಲಿ ಕೂಸು ನಾನು ಎದೆ ಹಾಲಿಗೆ

ಹಬೆಯಾಡಿದ ದೇಹ, ಹಿಗ್ಗರಳಿ ತೊನೆದ ಮುಖ
ಮುಖದಡಿ ಕೆಳಗೆ ಶಿಖರಾಗ್ರ ತೊಟ್ಟು
ಗಳ ನಡುವೆ ಜಾರಿದರೋ ಕೌತುಕದ ಗವಿ
ಪರವೂರಿನ ದಾರಿ

ಅದಾಗ ನಾನು ಕಣ್ಣು ಬಿಟ್ಟವನೋ,
ಕಗ್ಗಾಡ ನಡುವೆ ಕಣ್ಣು ಕಟ್ಟಿ ಬಿಟ್ಟವನೋ,
ನಿಜ ಹೇಳಿದರೆ ನೀನು ನಂಬಲಾರೆ
ನಾನಂತೂ ಆ ಕ್ಷಣದ ಮಗು!
ನಿನಗೆ ನಾನು ಹುಟ್ಟಿದ ನಿಮಿಷ
ತಾಯಿ, ನನಗೆ ಇಪ್ಪತ್ತೈದು ವರುಷ!