Saturday, September 20, 2014

ವೆಜಿಟೇರಿಯನ್ ರಕ್ತ ಮತ್ತು ಇತರ ಕತೆಗಳು

 ಕೊಲೆ
ಕವಿಯನ್ನು ಬಂಧಿಸಲಾಯಿತು.
ಜೈಲಿನಲ್ಲಿ ಆತನಿಗೆ ಓದಲು, ಬರೆಯಲು ಪುಸ್ತಕ,ಕಾಗದಗಳನ್ನು ನೀಡದೆ  ಕೊಂದು ಹಾಕಲಾಯಿತು


ಲೈಕು
ಅವನು ಸತ್ತ ಸುದ್ದಿಗೆ
ಫೇಸ್ ಬುಕ್ ತುಂಬಾ
ಲೈಕುಗಳು !

ಆಸೆ
ಬಾಲ್ಯದಲ್ಲಿ ಅವನಿಗೆ ವೈದ್ಯ ಆಗುವ ಆಸೆ
ಬೆಳೆದಂತೆ ಪೋಲಿಸ್ ಆದರೆ ಒಳ್ಳೆಯದು ಅನ್ನಿಸಿತು
ಹರೆಯದಲ್ಲಿ ಪೈಲಟ್ ಆಗಲು ಬಯಸಿದ
ಕೊನೆಗೆ ಆತ ಕಲಾವಿದನಾದ
ಆಗ ಬೇಕಾದುದನೆಲ್ಲ ಅಭಿನಯಿಸಿ
ಒಂದೇ ಬದುಕಲ್ಲಿ ಆಸೆ ತೀರಿಸಿಕೊಂಡ

ವೆಜಿಟೇರಿಯನ್ ರಕ್ತ
ಗೆಳೆಯನೊಬ್ಬನಿಂದ  ದೂರವಾಣಿ ಕರೆ "ತುರ್ತಾಗಿ ಬಿ ನೆಗೆಟಿವ್ ರಕ್ತ ಬೇಕಾಗಿದೆ. ವೆಜಿಟೇರಿಯನ್ ರಕ್ತ ಆಗಿದ್ದರೆ ತುಂಬಾ ಉಪಕಾರ. ದಯವಿಟ್ಟು ಪ್ರಯತ್ನಿಸಿ. ನನ್ನ ತಂದೆಯ ಜೀವ ಅಪಾಯದಲ್ಲಿದೆ"

ಬಂಗಾರ
"ಒಂದು ಕಾಲದಲ್ಲಿ ಆಟೋ ರಿಕ್ಷಾ ಓಡಿಸುತ್ತಿದ್ದ ನೀವು ಇಂದು ಈ ಮಟ್ಟಿಗೆ ಮೇಲೆ ಬಂದುದು ಹೇಗೆ?"
"ಅದರ ಹಿಂದೆ ಒಂದು ಕತೆ ಇದೆ. ಒಂದು ದಿನ ನನ್ನ ಆಟೋದಲ್ಲಿ ಪ್ರಯಾಣಿಕನೊಬ್ಬ ಒಂದು ಕಟ್ಟು ಬಿಟ್ಟು ಹೋದ. ತೆರೆದು ನೋಡಿದರೆ ಒಳಗೆ ಪುಟ್ಟ ಬ್ಯಾಗ್. ಅದರ ತುಂಬಾ ಬಂಗಾರ. ಜೊತೆಗೆ ಆದಾಗಲೇ ಪ್ರಿಂಟ್ ಮಾಡಿಸಿದ ಮಗಳ ಮದುವೆ ಆಮಂತ್ರಣ ಪತ್ರ "
"ಅಂದ್ರೆ ... "
"ನಾನು ಆ ಬಂಗಾರವನ್ನು ಆ ಕುಟುಂಬದ ವಿಳಾಸ ಹುಡುಕಿ ಅವರಿಗೆ ತಲುಪಿಸಿದೆ. ಅಂದಿನಿಂದ ನಾನು ಮುಟ್ಟಿದ್ದೆಲ್ಲ ಬಂಗಾರವಾಗ ತೊಡಗಿತು"

ಅವಲಕ್ಕಿ
ಒಂದು ಮುಷ್ಟಿ ಅವಲಕ್ಕಿ ನೀಡಿದ್ದಕ್ಕೆ ಕೃಷ್ಣ ಕುಚೇಲನಿಗೆ ಶ್ರೀಮಂತಿಕೆಯ ಭಂಡಾರವನ್ನೇ ಕೊಟ್ಟದ್ದು ಊರಿಡೀ ಸುದ್ದಿಯಾಯಿತು.
ಎಲ್ಲರೂ ಅವಲಕ್ಕಿ ಮೂಟೆಗಳೊಂದಿಗೆ ಕೃಷ್ಣನ ಅರಮನೆಯ ಮುಂದೆ ನೆರೆದರು.
ಕೃಷ್ಣ ನಕ್ಕ. "ನಿಮ್ಮ ಅವಲಕ್ಕಿಗೂ ಕುಚೇಲನ ಅವಲಕ್ಕಿಗೂ ವ್ಯತ್ಯಾಸ ಇದೆ'' ಎಂದ.
"ಏನದು'' ಎಲ್ಲರು ನಿರಾಸೆಯ ದ್ವನಿಯಿಂದ ಕೇಳಿದರು.
"ಒಂದು ಮುಷ್ಠಿ ಅವಲಕ್ಕಿ ಕುಚೇಲನ ಮನೆಯೊಳಗಿದ್ದ ಸರ್ವಸ್ವ ಸಂಪತ್ತಾಗಿತ್ತು. ನೀವು ನನ್ನ ಸ್ನೇಹಕ್ಕಾಗಿ ನಿಮ್ಮ ಸರ್ವಸ್ವ ಸಂಪತ್ತನ್ನು ಒಂದು ಮುಷ್ಟಿಯೊಳಗೆ ತುಂಬಿಸಿ ತಂದರೆ ನನ್ನ ಸ್ನೇಹವನ್ನು ಗಳಿಸಬಹುದು''

Sunday, September 14, 2014

ಮಂಗಳೂರು ವಿಮಾನ ನಿಲ್ದಾಣದಲ್ಲಿ ಉಗ್ರರು!

ಶನಿವಾರ ರಾತ್ರಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಾಸರಗೋಡು ಜಿಲ್ಲೆಯ ಉಪ್ಪಳದ ಒಬ್ಬ ತರುಣನನ್ನು (ಹೆಸರು ಅಬ್ದುಲ್ ಖಾದರ್)ವಿಚಾರಣೆಗಾಗಿ ಅಲ್ಲಿನ ಸಿಬ್ಬಂದಿಗಳು ವಶಕ್ಕೆ ತೆಗೆದುಕೊಂಡರು. ಅದರ ಕುರಿತಂತೆ ಬೇರೆ ಬೇರೆ ಪತ್ರಿಕೆಗಳು, ವೆಬ್‌ಸೈಟ್‌ಗಳು ಕೆಳಗಿನಂತೆ ವರದಿ ಮಾಡಿದವು.

ಸಿರಿಯಾ ಉಗ್ರ!: ದಾಯ್ಜಿ ವೆಬ್‌ಸೈಟ್
ಬಂಧಿನತನಿಗೆ ಸಿರಿಯಾ ಉಗ್ರನೊಂದಿಗೆ ಸಂಬಂಧವಿದೆ ಎಂದು ದಾಯ್ಜಿ ವಲ್ಡ್ ಎಂಬ ವೆಬ್‌ಸೈಟ್ ಘೋಷಿಸಿತು. ಸಿರಿಯಾ ಉಗ್ರರೊಂದಿಗೆ ಸಂಬಂಧ ಇದೆ ಎಂದು ಮೂಲಗಳು ತಿಳಿಸಿವೆ ಎಂದಿರುವ ಈ ವೆಬ್‌ಸೈಟ್ ಯಾವ ಮೂಲಗಳು ತಿಳಿಸಿವೆ ಎಂದು ಮಾತ್ರ ಹೇಳಲಿಲ್ಲ. ಜೊತೆಗೆ ಇನ್ನಷ್ಟು ಕಪೋಲಕಲ್ಪಿತ ಕತೆಗಳೊಂದಿಗೆ, ಬೆಚ್ಚಿ ಬೀಳಿಸುವ ಫೋಟೋಗಳು, ಇಸ್ಲಾಮ್ ಧರ್ಮಕ್ಕೆ ಸಂಬಂಧ ಪಟ್ಟ ಸಂಕೇತವನ್ನೂ ಫೋಟೋ ಹೆಸರಿನಲ್ಲಿ ಛಾಪಿಸಿತ್ತು.

ವಿಮಾನ ಸ್ಫೋಟಕ್ಕೆ ಸಂಚು ರೂಪಿಸಿರಬಹುದೇ ಎಂಬ ಶಂಕೆ: ಉದಯವಾಣಿ
‘‘ದುಬೈಗೆ ತೆರಳಲಿದ್ದ ಕೇರಳ ಮೂಲದ ವ್ಯಕ್ತಿಯೊಬ್ಬನ ಬಳಿ ಸ್ಫೋಟಕಗಳನ್ನು ತಯಾರಿಸುವ ಸಾಮಗ್ರಿ ಪತ್ತೆಯಾಗಿದ್ದು ವಿಮಾನ ಸ್ಫೋಟಕ್ಕೆ ಸಂಚು ರೂಪಿಸಿರಬಹುದೇ ಎಂಬ ಸಂಶಯ ಮೂಡಿದೆ’’ ಇದು ಉದಯವಾಣಿಯ ವರದಿಯ ಮೊದಲ ಪ್ಯಾರ. ಸಿರಿಯಾ ಮೂಲದ ಭಯೋತ್ಪಾದಕರ ಜೊತೆ ಈತನಿಗೆ ಸಂಬಂಧ ಇರಬಹುದೇ ಎಂಬ ಶಂಕೆ ವ್ಯಕ್ತವಾಗಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದೂ ಉದಯವಾಣಿ ಹೇಳಿತು.

‘ವಿಜಯಕರ್ನಾಟಕ’ದಿಂದ ಸಹನೆಯ ವರದಿ
ವಿಜಯ ಕರ್ನಾಟಕ ಮಾತ್ರ ‘ಶಂಕಿತ ಸ್ಫೋಟಕ ವಸ್ತು ಪತ್ತೆ’ ಎಂದು ಸಹನೆಯಿಂದ ವರದಿ ಮಾಡಿತ್ತು. ತನ್ನ ವರದಿಯೊಳಗೆ ‘ಕೂಲಂಕಷವಾಗಿ ಪರಿಶೀಲನೆ ನಡೆಸಿದಾಗ ಅದರಲ್ಲಿ ಸ್ಫೋಟಕ ಅಂಶ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಅದನ್ನು ವಶಕ್ಕೆ ಪಡೆದು ತಪಾಸಣೆಗೆ ಒಳಪಡಿಸಲಾಗುತ್ತಿದೆ’ ಎಂದು ವಿಜಯಕರ್ನಾಟಕ ಹೇಳಿದೆ.

ಸಿರಿಯಾ ಉಗ್ರರಿಂದ ಸ್ಪೋಟಕ ಸರಬರಾಜು: ವಿಜಯವಾಣಿ
ವಿಜಯವಾಣಿ ಪತ್ರಿಕೆಯಂತೂ ಅತ್ಯದ್ಭುತವಾದ ವರದಿಯನ್ನು ಶೋಧಿಸಿ ತೆಗೆದಿತ್ತು ‘‘ಈತನಿಗೆ ಸಿರಿಯಾ ಮೂಲದ ವ್ಯಕ್ತಿ ಸ್ಫೋಟಕ ಒದಗಿಸುತ್ತಿದ್ದ ಎಂದು ವಿಚಾರಣೆ ವೇಳೆ ಅಧಿಕಾರಿಗಳಿಗೆ ತಿಳಿಸಿದ್ದಾನೆ’’ ಎಂದು ವಿಜಯವಾಣಿಯಲ್ಲಿ ವರದಿಯಾಗಿದೆ.



 ಅಂದ ಹಾಗೆ ತರುಣನಲ್ಲಿ ಇದ್ದದ್ದೇನು?
ಇದೀಗ ಪೊಲೀಸರು ತರುಣನಲ್ಲಿ ಇದ್ದದ್ದೇನು ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ. ಆತನಲ್ಲಿ ಒಂದು ಕೆಟ್ಟು ಹೋದ ಟ್ಯಾಬ್ ಮತ್ತು ಅದರ ಕಳಚಿದ ಬ್ಯಾಟರಿ ಇತ್ತು. ಮತ್ತೊಂದು ಚಾರ್ಜರ್, ಜೊತೆಗೆ ಇಲೆಕ್ಟ್ರಾನಿಕ್ ವಸ್ತುಗಳನ್ನು ಶುಚಿಗೊಳಿಸುವ ರಾಸಾಯನಿಕ ಇತ್ತು. ಆದರೆ ಎಲ್ಲಕ್ಕಿಂತ ಅಪಾಯಕಾರಿಯಾದುದು ಒಂದಿತ್ತು. ಅದೆಂದರೆ ಆತನ ಹೆಸರು. ಆತನ ಹೆಸರು ಅಬ್ದುಲ್ ಖಾದರ್. ಆದುದರಿಂದ ಸಿಬ್ಬಂದಿಗಳು ಅನುಮಾನ ಪಟ್ಟು ಆತನ ತಪಾಸಣೆಗೈದರು. ಬಳಿಕ ಅದು ಕೇವಲ ಎಲೆಕ್ಟ್ರಾನಿಕ್ ವಸ್ತುಗಳು ಎನ್ನುವುದು ಸಾಬೀತಾಯಿತು.

ತನಿಖೆಯ ಪ್ರಶ್ನೆಯೇ ಇಲ್ಲ: ಕಮಿಶನರ್
  ಅಬ್ದುಲ್ ಖಾದರ್ ಬಳಿ ಸಿಕ್ಕಿರುವುದು ಎಲೆಕ್ಟ್ರಾನಿಕ್ ವಸ್ತುಗಳು ಎಂಬುದು ಸ್ಪಷ್ಟವಾಗಿದೆ. ಆತನಲ್ಲಿ ಯಾವುದೇ ಸ್ಫೋಟಕವಾಗಲಿ, ಅದಕ್ಕೆ ಸಂಬಂಧಪಟ್ಟ ವಸ್ತುವಾಗಲಿ ಪತ್ತೆಯಾಗಿಲ್ಲ. ಆದರ ಬಳಿಕ ಆವರ ವಿರುದ್ಧ ತನಿಖೆ ನಡೆಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆತನ ಪ್ರಯಾಣ ತಡೆದುದಕ್ಕೆ ವಿಮಾನ ನಿಲ್ದಾಣದ ಅಧಿಕಾರಿಗಳೇ ಜವಾಬ್ದಾರರು. ಅವರ ಯಾನ ತಡೆದುದಕ್ಕೆ ಏನು ಮಾಡುತ್ತಾರೆ ಎಂಬುದು ವಿಮಾನ ನಿಲ್ಧಾಣದ ಪ್ರಾಧಿಕಾರ ಮತ್ತು ಅವರು ಪ್ರಯಾಣಿಸಲಿದ್ದ ವಿಮಾನ ಯಾನ ಸಂಸ್ಥೆಗೆ ಸಂಬಂಧಿಸಿದ ವಿಷಯ ಎಂದು ಮಂಗಳೂರು ಪೊಲೀಸ್ ಕಮೀಷನರ್ ಸ್ಪಷ್ಟಪಡಿಸಿದ್ದಾರೆ.

ಹಾಗಾದರೆ ನಿಜವಾದ ಉಗ್ರರು ಯಾರು?
ಬಂಧಿಸಲ್ಪಟ್ಟ ಯುವ ಉಗ್ರನೂ ಅಲ್ಲ. ಆತನಲ್ಲಿ ಸ್ಫೋಟಕಕ್ಕೆ ಸಂಬಂಧಪಟ್ಟ ಯಾವ ವಸ್ತುವೂ ಪತ್ತೆಯಾಗಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ ಮತ್ತು ಆತನನ್ನು ಬಿಡುಗಡೆಗೊಳಿಸಿದ್ದಾರೆ ಎಂದ ಮೇಲೆ, ಈ ಗ ಉಳಿಯುವ ಪ್ರಶ್ನೆ ನಿಜವಾದ ಉಗ್ರರು ಯಾರು? ಮದುವೆಯಾಗುವುದಕ್ಕೆಂದೇ ದುಬೈಯಿಂದ ಕಳೆದ ತಿಂಗಳು ಊರಿಗೆ ಮರಳಿದ್ದ ಈ ಉಪ್ಪಳದ ತರುಣ ಮದುವೆ ಮುಗಿಸಿ, ಹೊಸ ಬದುಕು ಅರಸಿ ಮತ್ತೆ ದುಬೈಗೆ ತೆರಳಿದ್ದ. ಆದರೆ ಈ ಎಲ್ಲ ಆದರೆ ಮಾಧ್ಯಮಗಳ ಅವಾಂತರದಿಂದ ಆತ ದುಬೈಗೆ ಕ್ಲಪ್ತ ಸಮಯಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಆದುದರಿಂದ ಉದ್ಯೋಗ ಕಳೆದುಕೊಂಡಿದ್ದಾನೆ. ಆತನ ಮೇಲೆ ಶಂಕಿತ ಉಗ್ರ ಎಂಬ ಮೊಹರನ್ನು ಮಾಧ್ಯಮಗಳು ಒತ್ತಿವೆ. ಆತನ ವ್ಯಕ್ತಿತ್ವ, ಚಾರಿತ್ರದ ಮೇಲೆ ದಾಳಿ ಮಾಡಿವೆ. ಈ ಆಘಾತದಿಂದ ಆತನ ತಂದೆ ಆಸ್ಪತ್ರೆ ಸೇರಿದ್ದಾರೆ. ಈ ಮಾಧ್ಯಮ ಉಗ್ರರಿಂದಾದ ಹಾನಿಗೆ ಆತನಿಗೆ ಪರಿಹಾರ ನೀಡಬೇಕಾದವರು ಯಾರು?

ಇರುವೆಗೆ

ನನ್ನ ಕಿರುಬೆರಳ ಹಿಡಿದು
ಜಗ್ಗುತ್ತಿರುವ ಪುಟ್ಟ ಇರುವೆಯೇ
ತಡೆ ತಡೆ, ಬಂದೆ !


ಈ ನನ್ನ ದೊಡ್ಡ ಮೆದುಳು, ಸಣ್ಣ ಹೃದಯ
ದೊರೆಯ ಎಡೆಗಿನ ದಾರಿಗೆ ಅಡ್ಡಿಯಾಗಿದೆ
ಮುನ್ನಡೆಸು ನನ್ನ 


ಪುಟ್ಟ ಕಣ್ಣಿನ ನನ್ನ ಪುಟಾಣಿ ಇರುವೆಯೇ
ನೀನು ನನ್ನ ಧಾರ್ಮಿಕ ಗುರು
ನನ್ನ ದೊರೆ ನನಗಾಗಿಯೇ
ಆಕಾಶದಿಂದ ಇಳಿಸಿದ ಸಂತ ನೀನು 


ನಿನ್ನ ಸೂಜಿಯ ಮೊನೆಗಿಂತಲೂ
ಸಣ್ಣದಾದ ಮೆದುಳು ಮತ್ತು
ಎಲ್ಲ ಅಗಲಗಳನ್ನು ಮೀರಿದ ಹೃದಯ
ಮಾತ್ರ ನನ್ನನ್ನು ನನ್ನ ದೊರೆಯೆಡೆಗೆ ತಲುಪಿಸೀತು

Wednesday, September 10, 2014

ಯು. ಆರ್. ಅನಂತಮೂರ್ತಿ-ವಾರ್ತಾಭಾರತಿಯ ಒಂಬುಡ್ಸ್‌ಮನ್

ಪತ್ರಿಕೋದ್ಯಮದ ರಾಜಹೆದ್ದಾರಿಯಲ್ಲಿ ಭಾರೀ ಮದಗಜಗಳು ಓಡಾಡುತ್ತಿರುವ ಕಾಲದಲ್ಲಿ "ವಾರ್ತಾಭಾರತಿ" ತನ್ನದೊಂದು ಕಾಲು ದಾರಿಯನ್ನು ಆರಿಸಿಕೊಂಡಿತು. ಪ್ರಭುತ್ವದ ಪರವಾಗಿರುವ ಬಹುತೇಕ ‘ಮುಖ್ಯವಾಹಿನಿ’ ಕನ್ನಡ ಪತ್ರಿಕೆಗಳ ನಡುವೆ ಒಂದು ವಿರೋಧ ಪಕ್ಷ ಹುಟ್ಟಿಕೊಂಡಿದ್ದೂ ವಾರ್ತಾಭಾರತಿಯ ಮೂಲಕವೇ ಆಗಿದೆ. ತಳಸ್ತರದ ಜನರ ಪಾದ ಅಚ್ಚಿನಿಂದ ಮೂಡಿದ ಈ ದಾರಿ ನಿಧಾನಕ್ಕೆ ರಾಜ ಹೆದ್ದಾರಿಗೆ ಪರ್ಯಾಯ ದಾರಿಯಾಗಿ ವಿಸ್ತಾರಗೊಳ್ಳುತ್ತಿರುವುದನ್ನು ಮೊತ್ತ ಮೊದಲು ಗುರುತಿಸಿದವರು ದಿವಂಗತ ಯು. ಆರ್. ಅನಂತಮೂರ್ತಿ. ಕಳ್ಳುಮುಳ್ಳುಗಳ ಎಡರು ತೊಡರು ದಾರಿಯಲ್ಲಿ ವಾರ್ತಾಭಾರತಿ ಒಂಟಿತನಕ್ಕೆ ಅಂಜದೇ ಮುನ್ನಡೆಯುವುದನ್ನು ಕಂಡ ಅವರು, ತಕ್ಷಣ ತಮ್ಮನ್ನು ವಾರ್ತಾಭಾರತಿಯೊಂದಿಗೆ ಗುರುತಿಸಿಕೊಳ್ಳಲು ಬಯಸಿದರು. ನಾವು ಅವರನ್ನು ತಲುಪುವ ಮೊದಲೇ ಅವರು ನಮ್ಮನ್ನು ತಲುಪಿದರು. ಅಲ್ಲಿಂದ ತನ್ನ ಬದುಕಿನ ಕೊನೆಯ ಉಸಿರಿರುವವರೆಗೆ ವಾರ್ತಾಭಾರತಿಯೊಂದಿಗೆ ಕರುಳ ಸಂಬಂಧವನ್ನು ಉಳಿಸಿಕೊಂಡರು. ಪತ್ರಿಕೆ ಅವರ ಮೂಲಕ ಇನ್ನಷ್ಟು ಬೆಳೆಯುವುದಕ್ಕೆ ಸಾಧ್ಯವಾಯಿತು.

ವಾರ್ತಾಭಾರತಿಯ ಹೆಜ್ಜೆಗೆ ಹೆಜ್ಜೆ ಸೇರಿಸಿದ ಚಿಂತಕರ ಮೊದಲ ಸಾಲಲ್ಲಿರುವವರು, ಮೈಸೂರಿನ ಹಿರಿಯ ಚಿಂತಕ, ದಿವಂಗತ ಕೆ. ರಾಮದಾಸ್. ಅವರು ಪತ್ರಿಕೆಯ ಕುರಿತಂತೆ ಮೈಸೂರಿನ ಚಿಂತಕರೊಡನೆ ಬಹಿರಂಗವಾಗಿ ಚರ್ಚಿಸತೊಡಗಿದರು. ಒಂದೆಡೆ ಅವರು ಪತ್ರಿಕೆಯ ಕುರಿತಂತೆ ತನ್ನ ಅನಿಸಿಕೆಯನ್ನು ಹೀಗೆ ದಾಖಲಿಸಿದ್ದಾರೆ ‘‘ವರ್ತಮಾನದ ಕನ್ನಡ ಪತ್ರಿಕೋದ್ಯಮದಲ್ಲಿ ವಿಶಿಷ್ಟವಾದ ಮತ್ತು ಪ್ರಾಮಾಣಿಕವಾದ ಜನಪರ ಕಾಳಜಿಯಿಂದ ಮೂರ್ತವಾಗಿರುವ ವಾರ್ತಾಭಾರತಿಯನ್ನು ನಾನು ಹೆಮ್ಮೆಯಿಂದ ಓದುತ್ತೇನೆ. ಅಷ್ಟೇ ಅಲ್ಲ, ಪತ್ರಕರ್ತ ಮಿತ್ರರಿಗೆ ವಾರ್ತಾಭಾರತಿಯ ಮಾದರಿಯನ್ನು ಗಮನಿಸಲು ಒತ್ತಾಯಿಸುತ್ತಿದ್ದೇನೆ. ವಾರ್ತಾ ಭಾರತಿಯ ವಿನ್ಯಾಸ, ಮುದ್ರಣ ಮತ್ತು ಅಂಕಣಗಳ ಆದ್ಯತೆಗಳು, ವರದಿಗಳ ವಸ್ತುನಿಷ್ಠತೆ, ಸಾಮಾಜಿಕ-ಸಾಂಸ್ಕೃತಿಕ ಜೀವ ಪರ ಕಾಳಜಿಯ ಬೌದ್ಧಿಕ ಚರ್ಚೆ, ಸಂಪಾದಕೀಯ, ಜನಪರ ಬದ್ಧತೆಗಳು ತಮ್ಮ ಅಂಕಣಗಳ ಚೌಕಟ್ಟನ್ನು ದಾಟಿಕೊಂಡು ಓದುಗರನ್ನು ಸ್ಪರ್ಶಿಸುತ್ತವೆ. ಬಹುರೂಪಿ ಸಾಂಸ್ಕೃತಿಕತೆಯ ಕರಾವಳಿಯ ಜೀವನವನ್ನು ಪರಿಣಾಮಕಾರಿಯಾಗಿ ಪತ್ರಿಕೆ ಪ್ರತಿಬಿಂಬಿಸುತ್ತಿದೆ.’’

ರಾಮ್‌ದಾಸ್ ಪತ್ರಿಕೆಯನ್ನು ಗಂಭೀರವಾಗಿ ಗಮನಿಸುತ್ತಿರುವುದು ನಮಗೊಂದು ಎಚ್ಚರಿ ಕೆಯ ಗಂಟೆಯಾಗಿತ್ತು. ಇದೇ ಸಂದರ್ಭದಲ್ಲಿ ಒಂದು ಬೆಳಗ್ಗೆ ಪತ್ರಿಕಾ ಕಚೇರಿಗೆ ಯು. ಆರ್. ಅನಂತಮೂರ್ತಿಯವರು ಕರೆ ಮಾಡಿದರು. ನಕ್ಸಲ್ ಸಮಸ್ಯೆ ಕುರಿತಂತೆ ವಾರ್ತಾಭಾರತಿ ಬರೆದ ಸಂಪಾದಕೀಯದ ಕುರಿತಂತೆ ಅವರು ಮಾತನಾಡುತ್ತಿದ್ದರು. ಫೋನನ್ನು ನಾನು ಎತ್ತಿಕೊಂಡಿದ್ದೆ. ಅದೊಂದು ರೋಮಾಂಚನದ ಕ್ಷಣ. ಅವರು ತಾಯಿಯ ಪ್ರೀತಿಯನ್ನು ಮಾತಿನಲ್ಲಿ ತುಂಬಿಕೊಂಡು ಆಡುತ್ತಿದ್ದರು. ‘‘ಈ ವಿಷಯದ ಕುರಿತಂತೆ ನಾನು ಬರೆಯು ವುದಿದ್ದರೂ ಇದನ್ನೇ ಬರೆಯುತ್ತಿದ್ದೆ. ತುಂಬಾ ತುಂಬಾ ಇಷ್ಟವಾಯಿತು. ಪತ್ರಿಕೆ ಚೆನ್ನಾಗಿ ಬರುತ್ತಿದೆ’’ ನಮಗೆ ಮಾತಿಗೆ ಅವಕಾಶವೇ ಇರಲಿಲ್ಲ. ಅಂದಿನಿಂದ ಯಾವುದೇ ಸಂಪಾದಕೀಯ ಮೆಚ್ಚುಗೆಯಾದರೂ ಅವರು ಬೆಳ್ಳಂಬೆಳಗ್ಗೆ ಏಳುಗಂಟೆಯ ಹೊತ್ತಿಗೆ ಫೋನ್ ಮಾಡತೊಡಗಿದರು. ಪತ್ರಿಕೆಯ ಸಂಪಾದಕರಿಗೆ ಸಂಪಾದಕೀಯ ಬರೆಯುವುದು ಇನ್ನಷ್ಟು ಸವಾಲಾಗಿ ಪರಿಣ ಮಿಸಿದ್ದು ಯು. ಆರ್. ಅನಂತಮೂರ್ತಿ ಅದನ್ನು ಓದುತ್ತಾರೆ ಎನ್ನುವ ಕಾರಣಕ್ಕಾಗಿ. ಯಾವುದೇ ವಿಷಯವಿರಲಿ. ನಮ್ಮ ಸಂಪಾದಕೀಯ ಸದಾ ಜೀವಪರ ನಿಲುವನ್ನು ಹೊಂದಿರುತ್ತಿತ್ತು. ಆ ಕಾರಣಕ್ಕೆ ಅನಂತಮೂರ್ತಿಯಂತಹ ಚಿಂತಕರಿಗೆ ಅದು ಇಷ್ಟವಾಗಿತ್ತು. ಅನಂತಮೂರ್ತಿಯ ಕಣ್ಗಾವಲು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸಿತ್ತು. ಕೆಲವೊಮ್ಮೆ, ನಮ್ಮ ನಿಲುವುಗಳಿಗೂ ಅನಂತಮೂರ್ತಿಯವರ ನಿಲುವುಗಳಿಗೂ ತಿಕ್ಕಾಟ ಕಾಣಿಸಿಕೊಳ್ಳುತ್ತಿತ್ತು. ಮುಖ್ಯವಾಗಿ ದಲಿತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ. ಅಂತಹ ಸಂದರ್ಭದಲ್ಲಿ ಅನಂತಮೂರ್ತಿ ಯಾವ ಕಾರಣಕ್ಕೂ ಪತ್ರಿಕೆಯ ಮೇಲೆ ತಮ್ಮ ಅಭಿಪ್ರಾಯಗಳನ್ನು ಹೇರುತ್ತಿರಲಿಲ್ಲ. ಕೆಲವೊಮ್ಮೆ ನಮ್ಮ ನಿಲುವುಗಳು ತೀರಾ ತೀಕ್ಷ್ಣ ಎನಿಸಿದಾಗ ಅವರು ತನ್ನ ತಂಪಾದ ದನಿಯಲ್ಲಿ ನಮ್ಮನ್ನು ಎಚ್ಚರಿಸುತ್ತಿದ್ದರು. ಅನಂತಮೂರ್ತಿಯವರ ದೂರವಾಣಿ ಕರೆ ಬಂತು ಎನ್ನುವಾಗಲೇ, ಅದನ್ನು ಎತ್ತಬೇಕೋ ಬೇಡವೋ ಎನ್ನುವಷ್ಟು ನಾವು ಗಲಿಬಿಲಿಗೊಳ್ಳುತ್ತಿದ್ದೆವು. ಅವರು ಇರುವಷ್ಟು ದಿನ ಪತ್ರಿಕೆಯ ಆತ್ಮಸಾಕ್ಷಿಯಾಗಿ ಕೆಲಸ ನಿರ್ವಹಿಸಿದರು.


ಪತ್ರಿಕೆಯ ಎಲ್ಲ ವಿಶೇಷ ಸಮಾರಂಭಗಳಲ್ಲೂ ಅವರು ಅತ್ಯಾಸಕ್ತಿಯಿಂದ ಭಾಗವಹಿಸುತ್ತಿದ್ದರು. ಮತ್ತು ಎಲ್ಲ ವಾರ್ಷಿಕ ವಿಶೇಷಾಂಕಗಳಲ್ಲೂ ಅವರ ಉಪಸ್ಥಿತಿ ಆ ಸಂಚಿಕೆಗಳ ಹೆಗ್ಗಳಿಕೆಯಾ ಗಿರುತ್ತಿತ್ತು. ಪತ್ರಿಕೆ ಐದನೆ ವರ್ಷಕ್ಕೆ ಕಾಲಿಟ್ಟಾಗ ಅವರು ತಮ್ಮ ಲೇಖನ ದಲ್ಲಿ ಪತ್ರಿಕೆಯನ್ನು ಒಬ್ಬಂಟಿ ಪಯಣವೆಂದು ಬಣ್ಣಿಸಿದ್ದರು. ಅದಾಗಲೇ ತನಗನ್ನಿಸಿದ್ದನ್ನು ನೇರವಾಗಿ ಹೇಳುವ ಮೂಲಕ ಅವರು ಒಬ್ಬಂಟಿ ಯಾಗಿದ್ದರು. ಪತ್ರಿಕೆಗಳನ್ನೂ ಟೀಕಿಸಲು ಹೆದರುತ್ತಿರಲಿಲ್ಲ. ಆ ಸಂದರ್ಭದಲ್ಲೇ ಅವರು ‘‘ಒಂಟಿತನಕ್ಕೆ ಹೆದರದವರ ಸಮುದಾಯ’’ ಎಂಬ ಲೇಖನವನ್ನು ಪತ್ರಿಕೆಗೆ ಬರೆದರು. ಅದರಲ್ಲಿ ತನ್ನೊಳಗಿನ ಸಂಕಟಗಳನ್ನು ಹೀಗೆ ತೋಡಿಕೊಂಡರು ‘‘ಎಲ್ಲ ಬಗೆಯ ತೀವ್ರವಾದಿಗಳೂ ಹೀಗೆ ನಮ್ಮ ಸ್ವಾತಂತ್ರವನ್ನು ಕಿತ್ತುಕೊಳ್ಳುತ್ತಿದ್ದಾರೆ. ಇಂತಹ ದಿಕ್ಕು ಗೆಡುವ, ದಿಕ್ಕು ತಪ್ಪಿಸುವ ಸಂದರ್ಭದಲ್ಲೂ ಒಂದು ಕೃತಿಯಾಗಿ ನೋಡಿ, ಎಲ್ಲ ಕ್ರಿಯೆಗಳನ್ನೂ ಸತ್ಯದ ಒರೆಗಲ್ಲಿಗೆ ಹಚ್ಚಿ ನೋಡಿ, ನಮ್ಮ ವಿಮರ್ಶೆಯನ್ನು ಯಾವ ಹಂಗಿಲ್ಲದೆ, ದಿಗಿಲಿಲ್ಲದೆ ಮಾಡುವ ಆಸೆಯನ್ನು ನಾವು ಕಳೆದುಕೊಳ್ಳಕೂಡದು. ಅದಕ್ಕೆ ಅಗತ್ಯವಾದ ನಿಷ್ಠುರದ ಭಾಷೆಯನ್ನೂ, ಮನಃಸ್ಥಿತಿಯನ್ನು ನಾವು ನಮ್ಮ ಅಂತರಂಗದ ಒಳಗೂ, ನಮ್ಮ ಸಮಾಜದಲ್ಲೂ ಸೃಷ್ಟಿಸುವ ಪರೀಕ್ಷೆಯಲ್ಲಿ, ಜನಪ್ರಿಯವಾಗುವಂತೆ ಬರೆಯುವ, ಮಾತನಾಡುವ ಗೀಳನ್ನು ಬಿಡಬೇಕಾಗಿದೆ. ಜನಪ್ರಿಯವಾಗಲೆಂದು ಯಾವುದಕ್ಕೂ ಹೇಸದ ಬಲಿಷ್ಠರ ಮೀಡಿಯಾ ಗಳನ್ನು ನಿರ್ಲಕ್ಷಿಸಬೇಕಾಗಿದೆ. ಅಂದರೆ ಒಂಟಿತನಕ್ಕೆ ಹೆದರದವರೇ ಒಂದು ಸಮುದಾಯವಾಗಬೇಕಾಗಿದೆ’’ ಇದನ್ನು ಅನಂತಮೂರ್ತಿ ತಮ್ಮ ಕೊನೆಯ ದಿನದವರೆಗೂ ಪಾಲಿಸಿಕೊಂಡು ಬಂದರು.

ವಾರ್ತಾಭಾರತಿಯ ಹತ್ತನೆ ವರ್ಷದ ವಿಶೇಷಾಂಕದಲ್ಲಂತೂ ಒಂದು ಪತ್ರಿಕೆ ಯಾವುದನ್ನು ಮಾಡ ಬಾರದು ಎನ್ನುವುದರ ಕುರಿತಂತೆ ಅತ್ಯಂತ ಕಾಳಜಿಯಿಂದ ಬರೆದರು. ಬಣ್ಣ ಬಣ್ಣದ ಜಾಹೀರಾತುಗಳನ್ನು ತುಂಬಿಕೊಂಡು, ಅವರದೇ ಹಣದಲ್ಲಿ ನಡೆಯುವ ಪತ್ರಿಕೆಗಳ ಕುರಿತಂತೆ ಈ ಲೇಖನದಲ್ಲಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು. ಜಾಹೀರಾತುದಾರರ ದುಡ್ಡಿನಿಂದ ನಡೆಯುವ ಪತ್ರಿಕೆ ಓದುಗರಿಗೆ ನಿಷ್ಠವಾಗಿರಲು ಸಾಧ್ಯವಿಲ್ಲ. ಆದುದರಿಂದ ದಿನಪತ್ರಿಕೆಗಳು ಓದುಗರ ದುಡ್ಡಿನಿಂದಲೇ ನಡೆಯಬೇಕು ಎಂದು ಅವರು ಅವರು ಆ ಲೇಖನದಲ್ಲಿ ಆಗ್ರಹಿಸಿದರು. ‘‘ಇಂದು ಜಾಹೀರಾತುಗಳಿಲ್ಲದೆ ಪತ್ರಿಕೆ ನಡೆಯೋದಿಲ್ಲ. ಆ ಕಾರಣಕ್ಕಾಗಿಯೇ ಹಲವು ಪತ್ರಿಕೆಗಳು ಮುಚ್ಚಿವೆ. ಇಂದು ಪತ್ರಿಕೆಗಳು ಓದುಗರ ದುಡ್ಡಿನಿಂದ ನಡೆಯುವಂತಾಗಬೇಕು. ಆಗ ಮಾಧ್ಯಮಗಳು ತನಗನ್ನಿಸಿದ್ದನ್ನು ಮಾಡಲು ಸಾಧ್ಯ. ಇದು ಒಮ್ಮೆಲೆ ಆಗುತ್ತದೆ ಎಂದಲ್ಲ. ಆದರೆ ನಿಧಾನಕ್ಕಾದರೂ ಇದನ್ನು ಮಾಡಬೇಕಾಗಿದೆ. ಇದು ಆಗುತ್ತದೆ. ಆಗಬೇಕು ಎನ್ನುವುದು ನನ್ನ ಆಶಯ’’ ಎಂದು ಅವರು ಕಾಳಜಿ ವ್ಯಕ್ತಪಡಿಸಿದ್ದರು. ವಾರ್ತಾಭಾರತಿ ಪತ್ರಿಕೆಯ ಬೀಜದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪತ್ರಿಕೆ ‘ಗಾರ್ಡಿಯನ್’ನ ಗುಣ ಲಕ್ಷಣಗಳಿರುವುದನ್ನು ಅವರು ಗುರುತಿಸಿ ಆ ಲೇಖನದಲ್ಲಿ ಬರೆದರು. ಓದುಗರೇ ಕಟ್ಟಿ ಬೆಳೆಸಿದ ಪತ್ರಿಕೆ ಗಾರ್ಡಿಯನ್. ಇಂದಿಗೂ ಅದು ಓದುಗರಿಗೆ ನಿಷ್ಠವಾಗಿದೆ. ವಾರ್ತಾಭಾರತಿ ಈ ದಾರಿಯಲ್ಲಿ ಮುನ್ನಡೆಯಬೇಕು ಎಂದು ಅವರು ತಮ್ಮ ಲೇಖನದಲ್ಲಿ ಅಭಿಪ್ರಾಯಪಟ್ಟರು. ಇಷ್ಟೇ ಅಲ್ಲ. ವಾರ್ತಾಭಾರತಿಯ ಕುರಿತಂತೆ ಅವರ ಪ್ರೀತಿ, ವಿಶ್ವಾಸ, ನಂಬಿಕೆ ಎಲ್ಲಿಯವರೆಗೆ ಇತ್ತು ಎಂದರೆ, ತಮ್ಮ ‘ಮಾತು ಸೋತ ಭಾರತ’ ಕೃತಿಯ ಮುನ್ನುಡಿಯಲ್ಲೂ ಅವರು ಪತ್ರಿಕೆಯನ್ನು ಪ್ರಸ್ತಾಪಿಸುತ್ತಾರೆ ‘‘ವಾರ್ತಾಭಾರತಿ ಪತ್ರಿಕೆಯ ಇಡೀ ತಂಡ, ನಮ್ಮ ಮಾನವೀಯತೆಯನ್ನು ಕಾಯಬಲ್ಲವರಾಗಿದ್ದಾರೆ. ವಾರ್ತಾಭಾರತಿ ಪತ್ರಿಕೆಯ ಈ ದಿನಗಳ ಸಂಪಾದಕೀಯಗಳಂತೂ ನನಗೆ ಬಹಳ ಪ್ರಿಯವಾಗಿವೆ. ಸದ್ಯ ಎಲ್ಲ ಕನ್ನಡ ಪತ್ರಿಕೆಗಳಿಗಿಂತ ಗುಣದಲ್ಲಿ ಶ್ರೇಷ್ಠವಾಗಿರುವ ಈ ಪತ್ರಿಕೆ ಯಾವ ರಾಜಿಯನ್ನೂ ಮಾಡಿಕೊಳ್ಳದಂತೆ ಬೆಳೆಯಬೇಕು ಎಂಬು ನನ್ನ ಆಶಯ’’


ತಮ್ಮ ಬದುಕಿನ ಕೊನೆಯ ಐದು ವರ್ಷಗಳನ್ನು ಅನಾರೋಗ್ಯದಿಂದ ಕಳೆದರು. ಅವರ ಎರಡೂ ಕಿಡ್ನಿಗಳು ವಿಫಲವಾಗಿದ್ದವು. ವಾರಕ್ಕೆ ಒಂದು ಬಾರಿ ಡಯಾಲಿಸಿಸ್ ನಡೆಸಬೇಕಾಗುತ್ತಿತ್ತು. ಆದರೆ ಅವರ ಮುಖದ ನಳನಳಿಸುವ ನಗು ಅವರನ್ನು ಕೊನೆಯವರೆಗೂ ಅತ್ಯಂತ ಆರೋಗ್ಯಕರ ವ್ಯಕ್ತಿಯಾಗಿ ಉಳಿಸಿತ್ತು. ವಾರ್ತಾಭಾರತಿಯ ತಂಡ ತಮ್ಮ ಮನೆಗೆ ಬರುವುದನ್ನೇ ಕಾಯುತ್ತಿರುವವರಂತೆ ಅವರು ಸ್ವಾಗತಿ ಸುತ್ತಿದ್ದರು. ಒಮೊಮ್ಮೆ ವಾರ್ತಾಭಾರತಿಯ ಮಂಗಳೂರಿನ ಗೆಳೆಯರಿಗೆ ದೂರವಾಣಿ ಕರೆ ಮಾಡಿ ‘‘ಒಳ್ಳೆಯ ಮೀನು ಇದ್ದರೆ ಕಳುಹಿಸಿ’’ ಎಂದು ತನ್ನ ಪ್ರೀತಿಯನ್ನು ಹಂಚಿಕೊಳ್ಳುತ್ತಿದ್ದರು. ವಾರ್ತಾಭಾರತಿ ಕಚೇರಿಯ ದೊಡ್ಡವರೊಂದಿಗೂ, ಸಣ್ಣವರೊಂದಿಗೂ ಅವರು ಇಟ್ಟುಕೊಂಡ ಬಾಂಧವ್ಯ ಮರೆಯಲಾಗದ್ದು.


ಇಂದು ಅನಂತಮೂರ್ತಿ ಇಲ್ಲ. ಆದರೆ ವಾರ್ತಾಭಾರತಿ ಮಾತ್ರ ಅವರಿನ್ನೂ ಇದ್ದಾರೆ ಎಂದೇ ನಂಬಿಕೊಂಡಿದೆ. ಸಂಪಾದಕೀಯ ಬರೆಯಲು ಕುಳಿತಾಗ, ಇದನ್ನು ಅನಂತಮೂರ್ತಿ ಓದುತ್ತಾರೆ ಎಂಬ ಕಂಪನದೊಂದಿಗೇ ಸಾಲನ್ನು ಆರಂಭಿಸುತ್ತಿ ದ್ದೇವೆ. ಅನಂತಮೂರ್ತಿಯ ಕಣ್ಗಾವಲು ನಮ್ಮಲ್ಲಿ ಧೈರ್ಯ ತುಂಬಿದೆ. ನಮ್ಮನ್ನು ವಿವೇಕಿಗಳನ್ನಾಗಿಯೂ, ಸಹನಶೀಲರನ್ನಾಗಿಯೂ ಮಾಡಿದೆ. ಅನಂತಮೂರ್ತಿಯವರು ವಾರ್ತಾಭಾರತಿ ಪತ್ರಿಕೆಯ ಮೂಲಕ ಮುಂದೆಯೂ ಕನ್ನಡ ನಾಡಿನ ಮೂಲೆಮೂಲೆಯನ್ನು ತಲುಪಲಿದ್ದಾರೆ. ಇದರಲ್ಲಿ ಸಂಶಯವಿಲ್ಲ.

Tuesday, September 9, 2014

ಬುರ್ಖಾ ಮತ್ತು ಮಹಿಳಾ ಸಬಲೀಕರಣ

ಆಫ್ಘಾನಿಸ್ತಾನದ ಅಥ್ಲೀಟ್  ಕೊಹಿಸ್ತಾನಿ
ಸೆಪ್ಟೆಂಬರ್ ೫ರಂದು ಮಂಗಳೂರಿನಲ್ಲಿ ನಡೆದ ನನ್ನ ‘ಬಾಡೂಟದ ಜೊತೆಗೆ ಗಾಂಧಿ ಜಯಂತಿ’ ಕೃತಿ ಬಿಡುಗಡೆಯ ಸಂದರ್ಭದಲ್ಲಿ ಹಿರಿಯ ಪತ್ರಕರ್ತ ಅಮೀನ್ ಮಟ್ಟು ಅವರು ಅತ್ಯಂತ ಪ್ರಜ್ಞಾಪೂರ್ವಕವಾಗಿ ಮಾತನಾಡಿದರು. ಇಡೀ ಭಾಷಣ ಅದ್ಭುತವಾಗಿತ್ತು. ಜೊತೆಗೆ ಭಾಷಣದಲ್ಲಿ ಅವರು ಮೊದಲೇ ಹೇಳಿಕೊಂಡಂತೆ ಆ ಮಾತುಗಳು ಪ್ರಜ್ಞಾಪೂರ್ವಕವಾಗಿಯೂ ಇತ್ತು. ಸಾಧಾರಣವಾಗಿ ಇತ್ತೀಚಿನ ದಿನಗಳಲ್ಲಿ ಅವರನ್ನು ಎಲ್ಲರೂ ‘‘ನೀವು ಬರೇ ಹಿಂದೂಗಳ ಅಥವಾ ಬ್ರಾಹ್ಮಣ ಕಂಧಾಚಾರವನ್ನಷ್ಟೇ ಟೀಕಿಸುತ್ತೀರಿ. ಆದರೆ ಮುಸ್ಲಿಮರ ಕುರಿತಂತೆ ಏನನ್ನೂ ಮಾತನಾಡುವುದಿಲ್ಲ...’’ ಟೀಕಿಸುತ್ತಿದ್ದರು. ಅಥವಾ ಆ ಹೆಸರಿನಲ್ಲಿ ಅವರ ಬಾಯಿ ಮುಚ್ಚಿಸುವನ ಪ್ರಯತ್ನವನ್ನು ಮಾಡುತ್ತಿದ್ದರು. ಆ ಕೊರತೆಯನ್ನು ಎಲ್ಲೋ ತುಂಬಿಸುವ ಉಮೇದು ಅವರ ಮಾತಿನಲ್ಲಿ ಇದ್ದುದನ್ನು ನಾನು ಕಂಡೆ. ಆದರೆ ಆ ವೇದಿಕೆಗೆ ಅವರ ಮಾತುಗಳು ತೀರ ಅಗತ್ಯವಾಗಿತ್ತು ಎನ್ನುವುದೂ ಅಷ್ಟೇ ಸತ್ಯ. ನನ್ನ ಕೆಲವು ಗೆಳೆಯರು ಅಮೀನ್ ಭಾಷಣಕ್ಕೆ ನನ್ನಿಂದ ಸ್ಪಷ್ಟೀಕರಣವೊಂದನ್ನು ಅಥವಾ ಉತ್ತರವೊಂದನ್ನು ಬಯಸಿದ್ದು ನನಗೆ ಬಳಿಕ ಗೊತ್ತಾಯಿತು. ಆದರೆ ಅಮೀನ್‌ಮಟ್ಟು ಭಾಷಣದಲ್ಲಿ ಸಣ್ಣದೊಂದು ವಿರೋಧಾಭಾಸವಿತ್ತು. ಅವರು ಬುರ್ಖಾದ ಸಮಸ್ಯೆಯನ್ನು ಎತ್ತಿಕೊಂಡರು. ಮೂಲಭೂತವಾದವೇ ಬುರ್ಖಾ ಅಸ್ತಿತ್ವದಲ್ಲಿರಲು ಕಾರಣ ಎಂದು ಕರೆದರು. ಆದರೆ ಅದು ಒಂದು ಸಮಸ್ಯೆಯೇನೂ ಅಲ್ಲ ಎಂಬ ಉತ್ತರವನ್ನೂ ತಮ್ಮ ಭಾಷಣದಲ್ಲೇ ನೀಡಿದ್ದರು. ನನ್ನ ಮಟ್ಟಿಗೆ ಅದು ಎರಡೂ ನಿಜವಾಗಿತ್ತು. ನಿಜಕ್ಕೂ ಬುರ್ಖಾ ಪೂರ್ಣವಾಗಿ ಮೂಲಭೂತವಾದದ ಫಲವೇ ಆಗಿದ್ದರೆ, ಮೂಲಭೂತವಾದಿಗಳಿಂದಲೇ ತುಂಬಿಕೊಂಡಿರುವ ಪಾಕಿಸ್ತಾನದ ಅಂದಿನ ಪ್ರಧಾನಿ ಬೆನಜ್ಹೀರ್ ಭುಟ್ಟೋ ಬುರ್ಖಾ ಹಾಕಿಕೊಂಡೇ ಓಡಾಡುವ ಸ್ಥಿತಿ ನಿರ್ಮಾಣವಾಗಿ ಬಿಡುತ್ತಿತ್ತು. ಬಾಂಗ್ಲಾದಲ್ಲಿ ಬುರ್ಖಾ ಹಾಕದೇ ಇರುವ ಹಸೀನಾ ಅಥವಾ ಖಲೀದಾ ಜಿಯಾ ಅವರು ಪಕ್ಕಾ ಸೆಕ್ಯುಲರ್ ಏನೂ ಅಲ್ಲ. ಅವರೂ ಪಕ್ಕಾ ಧಾರ್ಮಿಕ ಮನಸ್ಥಿತಿ ಇರುವ ನಾಯಕರೇ ಆಗಿದ್ದಾರೆ. ಮತ್ತು ಇಡೀ ಬಾಂಗ್ಲಾ ದೇಶ ಅವರನ್ನು ಮುಸ್ಲಿಮ್‌ ಎಂದೇ ಸ್ವೀಕರಿಸಿದೆ. ತಸ್ಲೀಮಾರ ಜೊತೆಗಿರುವ ಭಿನ್ನಮತ ಬುರ್ಖಾ ಧರಿಸದೇ ಇರುವ ಖಲೀದಾ, ಹಸೀನಾರಂತಹ ನಾಯಕಿಯರ ಜೊತೆಗೆ ಹೊಂದಿಲ್ಲ. ತಸ್ಲೀಮಾ ನಸ್ರೀನ್‌ರಂತಹ ಲೇಖಕಿಯಿಂದ ಬಾಂಗ್ಲಾದ ಮುಸ್ಲಿಮ್ ಮಹಿಳೆಯರಿಗೆ ಪ್ರಯೋಜನವಾದುದಕ್ಕಿಂತ ನಷ್ಟವಾದೇ ಅಧಿಕ. ಯಾಕೆಂದರೆ ತಸ್ಲೀಮಾ ಇಂದು ಜಗತ್ತಿನಲ್ಲಿ ಗುರುತಿಸಲ್ಪಡುತ್ತಿರುವುದು ಬಾಂಗ್ಲಾದ ಮಧ್ಯಮ ವರ್ಗದ ವಿರೋಧಗಳ ಮೂಲಕವಾಗಿದೆ. ತಸ್ಲೀಮಾ ಇಂದು ಮುಖ್ಯವಾಗುತ್ತಿರುವುದು ಬಾಂಗ್ಲಾದ ತನ್ನದೇ ಜನ ಸಮುದಾಯದ ಹೆಣ್ಣು ಮಕ್ಕಳಿಗಲ್ಲ. ಅಮೆರಿಕದ ಶಕ್ತಿಗಳಿಗೆ ತಸ್ಲೀಮಾ ಬೇಕು. ರಶ್ದಿಯೂ ಬೇಕು. ಮಧ್ಯ ಪ್ರಾಚ್ಯದ ನಿಜವಾದ ಸಮಸ್ಯೆಗಳಿಗೆ ಧ್ವನಿಯೆತ್ತುತ್ತಾ, ಅಲ್ಲಿನ ಜನರ ಶಿಕ್ಷಣ, ಸಾಮಾಜಿಕ ಅಭಿವೃದ್ಧಿಗೆ ಹೋರಾಡುತ್ತಿರುವ ನೂರಾರು ಮುಸ್ಲಿಮ್ ಬರಹಗಾರರಿಗೆ, ಕಾರ್ಯಕರ್ತರಿಗೆ ಕೊಟ್ಟ ಬೆಲೆಗಿಂತ ದೊಡ್ಡ ಗೌರವವನ್ನು ರಶ್ದಿ ಮತ್ತು ತಸ್ಲೀಮಾ ಇವರಿಗೆ ಅಮೆರಿಕ ನೀಡುವುದಕ್ಕೆ ಇದೇ ಕಾರಣ. ಹತ್ತು ಹಲವು ಹೆಣ್ಣು ಮಕ್ಕಳೊಂದಿಗೆ ಮಜಾ ಉಡಾಯಿಸುತ್ತಾ, ತಲಾಕ್ ನೀಡುತ್ತಾ, ಮತ್ತೆ ಮದುವೆಯಾಗುತ್ತಾ ಬೇಜವಾಬ್ದಾರಿ ಹೇಳಿಕೆ ನೀಡುತ್ತಾ, ಮುಸ್ಲಿಮ್‌ ಮೂಲಭೂತವಾದವನ್ನು ವಿರೋಧಿಸುವ ಹೆಸರಿನಲ್ಲೇ ಅಮೆರಿಕದ ಅಂತಃಪುರದಲ್ಲಿ ವಿಲಾಸಿ ಬದುಕನ್ನು ಕಳೆಯುತ್ತಿರುವ ರಶ್ದಿ ಸಮಯ ಸಾಧಕ ಬರಹಗಾರನಾಗಿಯಷ್ಟೇ ನನಗೆ ಭಾಸವಾಗುತ್ತಾನೆ. ತಸ್ಲೀಮಾ ನಸ್ರೀನ್ ಒಬ್ಬ ಹೆಣ್ಣು ಮಗಳು ಎನ್ನುವ ಕಾರಣಕ್ಕಾಗಿ ಮತ್ತು ಹಲವು ಸಂದರ್ಭಗಳಲ್ಲಿ ಆಕೆ ಬಾಂಗ್ಲಾದ ಹಿಂದೂ ಅಲ್ಪಸಂಖ್ಯಾತರ ಬಗ್ಗೆ ನೀಡಿದ ದಿಟ್ಟ ಪ್ರತಿಕ್ರಿಯೆಗಾಗಿ ಆಕೆಯನ್ನು ಸಂಪೂರ್ಣ ನಿರಾಕರಿಸಲು ಸಾಧ್ಯವಾಗುವುದಿಲ್ಲ. ಈ ಎಲ್ಲ ಕಾರಣಗಳಿಂದ ನನಗೆ ಬಾಂಗ್ಲಾದಂತಹ ಧಾರ್ಮಿಕ ಒಲವುಳ್ಳ ದೇಶದಲ್ಲಿ ಪ್ರಧಾನಿಯಾಗಿಯು, ವಿರೋಧ ಪಕ್ಷದ ನಾಯಕರಾಗಿಯೂ ಯಶಸ್ವಿಯಾಗಿರುವ ಶೇಖ್ ಹಸೀನಾ, ಖಲೀದಾ ಜಿಯಾ ಮೊದಲಾದ ಹೆಣ್ಣು ಮಕ್ಕಳು ಹೆಚ್ಚು ಇಷ್ಟವಾಗುತ್ತಾರೆ. ಪಾಕಿಸ್ತಾನದಲ್ಲಿ ನನಗೆ ಬೇಜನಝೀರ್ ಭುಟ್ಟೋ ಇಷ್ಟವಾಗುವುದೂ ಇದೇ ಕಾರಣಕ್ಕೆ.

 ಮೂಲಭೂತವಾದಿ ದೇಶಗಳು ಎಂದು ನಾವು ಭಾವಿಸಿಕೊಂಡಿರುವ ಪಾಕಿಸ್ತಾನ, ಬಾಂಗ್ಲಾದಲ್ಲಿ ಬುರ್ಖಾ ಹಾಕದೆಯೇ ಒಬ್ಬ ನಾಯಕಿಯಾಗಬಹುದು ಎಂದ ಮೇಲೆ, ಬುರ್ಖಾ ಎನ್ನುವುದು ಕೇವಲ ಮೂಲಭೂತವಾದಿ ಕಾರಣಗಳಿಂದಷ್ಟೇ ನೆಲೆನಿಂತಿರುವ ವ್ಯವಸ್ಥೆ ಅಲ್ಲ ಎನ್ನುವುದನ್ನು ಅಮೀನು ಮಟ್ಟು ಒಪ್ಪಿಕೊಂಡಂತೆಯೇ ಆಯಿತು. ಸಾರಾ ಅಬೂಬಕರ್ ಬುರ್ಖಾ ಹಾಕುವುದಿಲ್ಲ. ಅವರಂತೆ ನೀವೆಲ್ಲ ಯಾಕೆ ಇರಬಾರದು ಎಂದು ಕೆಲವರು ನನ್ನ ಸಮುದಾಯದ ಕೆಲವು ಬಡ ಹೆಣ್ಣು ಮಕ್ಕಳ ಬಳಿ ಕೇಳುವುದಿದೆ. ಸಾರಾ ಅಬೂಬಕರ್ ಬುರ್ಖಾ ಹಾಕುವುದಿಲ್ಲ ಎನ್ನುವ ಕಾರಣಕ್ಕಾಗಿ ಎಂದೂ ಸಮಾಜದಲ್ಲಿ ವಿವಾದಕ್ಕೊಳಗಾಗಿಲ್ಲ ಎನ್ನುವುದನ್ನು ನಾವು ಗಮನಿಸಬೇಕು. ಕೇರಳ, ಕಾಸರಗೋಡು ಭಾಗದಿಂದ ಬಂದಿರುವ ಸಾರಾ ಅಬೂಬಕರ್ ಬುರ್ಖಾ ಹಾಕುವುದಿಲ್ಲ ಎನ್ನುವುದು ನನಗೆ ಅಚ್ಚರಿಯ ವಿಷಯವೇ ಅಲ್ಲ. ಯಾಕೆಂದರೆ ಕೇರಳದಲ್ಲಿ ಬುರ್ಖಾ ಎಂದೂ ಚರ್ಚೆಯ ವಿಷಯ ಆಗಿಲ್ಲ. ಅಲ್ಲಿ ಬುರ್ಖಾ ಧರಿಸುವವರೂ ಇದ್ದಾರೆ. ಹಾಗೆಯೇ ಬುರ್ಖಾ ಧರಿಸದೇ ದೈನಂದಿನ ಚಟುವಟಿಕೆಗಳನ್ನು ನಡೆಸುವವರೂ ಇದ್ದಾರೆ. ಹೆಚ್ಚಿನವರು ಸ್ಕಾರ್ಫ್‌ನ್ನು ಬಳಸುತ್ತಾರೆ. ಯಾರಾದರೂ ಪತ್ರಿಕೆಯವರು ಇದನ್ನು ಸುದ್ದಿಯಾಗಿ ಪ್ರಕಟಿಸಿದಾಗಷ್ಟೇ ಅದು ಚರ್ಚೆಯ, ವಿವಾದದ ವಿಷಯವಾಗುತ್ತದೆ. ‘ನೀವು ಯಾಕೆ ಬುರ್ಖಾ ಧರಿಸುತ್ತೀರಿ?’ ‘ನೀವು ಯಾಕೆ ಸ್ಕಾರ್ಫ್ ಧರಿಸುತ್ತೀರಿ?’ ಎನ್ನುವ ಪ್ರಶ್ನೆಗಳು ‘ನೀವು ಯಾಕೆ ಸ್ಕರ್ಟ್ ಧರಿಸುತ್ತೀರಿ?’ ‘ನೀವು ಯಾಕೆ ಜೀನ್ಸ್ ಧರಿಸುತ್ತೀರಿ?’ ಎನ್ನುವ ಪ್ರಶ್ನೆಯಷ್ಟೇ ಬೇಜವಾಬ್ದಾರಿತನದಿಂದ ಕೂಡಿದ್ದು.


ಬಟ್ಟೆ ಎನ್ನುವುದು ನಂಬಿಕೆಗೆ ಸಂಬಂಧಿಸಿದ ವಿಷಯವಲ್ಲ. ಅದು ಸಂವೇದನೆಗೆ ಸಂಬಂಧಿಸಿದ ವಿಷಯ. ‘ನೀನು ಯಾಕೆ ಮೈ ತುಂಬಾ ಬಟ್ಟೆ ಧರಿಸುತ್ತಿದ್ದೀಯ?’ ಎಂದು ನನ್ನ ಅಮ್ಮನ ಜೊತೆಗೆ ನಾನು ಕೇಳುವುದು ಅಥವಾ ಆ ಕುರಿತಂತೆ ಅವಳಿಗೆ ಗುಪ್ತ ಮತದಾನದ ಅವಕಾಶ ನೀಡುವುದು ಇತ್ಯಾದಿಗಳೆಲ್ಲ ಹಾಸ್ಯಾಸ್ಪದ ವಿಷಯ. ಮೈ ತುಂಬಾ ಬಟ್ಟೆ ಹಾಕುವ ಹೆಣ್ಣಿಗೆ ಜೀನ್ಸ್ ಅಥವಾ ಚೂಡಿಧಾರವನ್ನು ಕೊಟ್ಟು ‘ಇದನ್ನು ಧರಿಸಿ ನೀನು ಸಾರ್ವಜನಿಕವಾಗಿ ಓಡಾಡಬೇಕು’ ಎಂದು ಆದೇಶ ನೀಡುವುದು, ಒಬ್ಬ ಅರೆಬರೆ ಬಟ್ಟೆ ಧರಿಸುತ್ತಾ ಬದುಕನ್ನು ರೂಢಿಸಿಕೊಂಡ ಹೆಣ್ಣಿಗೆ ಜರತಾರಿ ಸೀರೆಯನ್ನು ಕೊಟ್ಟಂತೆಯೇ ಆಗಿದೆ. ಇಬ್ಬರ ಸಂವೇದನೆಯನ್ನೂ ಅದು ಘಾಸಿ ಮಾಡಬಲ್ಲುದು. ಸೀರೆ, ರವಿಕೆ ಧರಿಸುವ ಒಬ್ಬ ತಾಯಿಗೆ ಚೂಡಿಧಾರ ಧರಿಸುವಂತೆ ಒತ್ತಾಯಿಸಿದರೆ ಅದು ಎಷ್ಟು ಅಭಾಸವಾಗಬಹುದೋ ಹಾಗೆಯೇ, ಮೈ ತುಂಬಾ ಬಟ್ಟೆ ಧರಿಸಿದ ಹೆಣ್ಣಿನ ಮುಂದೆ ನಾವು ನಮ್ಮ ಇಷ್ಟದ ಬಟ್ಟೆಗಳನ್ನು ಇಟ್ಟು ‘ಧರಿಸಿಕೋ’ ಎನ್ನುವುದು ಕೂಡ. ಬಟ್ಟೆ ಎನ್ನುವುದು ಧರಿಸುವವರ ಆಯ್ಕೆಯೇ ಹೊರತು, ನೋಡುವವರ ಆಯ್ಕೆ ಅಲ್ಲ. 


ಯಾವುದು ಬುರ್ಖಾ? ಇದುವೇ ಬುರ್ಖಾ ಎನ್ನುವುದಕ್ಕೆ ಕುರ್‌ಆನ್‌ನಲ್ಲಾಗಲಿ, ಇಸ್ಲಾಮ್‌ನಲ್ಲಾಗಲಿ ಸ್ಪಷ್ಟ ವ್ಯಾಖ್ಯಾನವೇ ಇಲ್ಲ. ಇಂದಿಗೂ ದೇಶ, ಕಾಲಕ್ಕನುಗುಣವಾಗಿ ಬುರ್ಖಾಗಳಿಗೆ ಬಟ್ಟೆ ಉದ್ಯಮಗಳೇ ವ್ಯಾಖ್ಯಾನಗಳನ್ನು ನೀಡುತ್ತಾ ಬಂದಿವೆ. ಮೈ ತುಂಬಾ ಬಟ್ಟೆ ಹಾಕಿಕೊಳ್ಳುವುದಕ್ಕೆ ಇಸ್ಲಾಮ್ ಕಲಿಸುತ್ತದೆ ಎನ್ನುವುದನ್ನು ನಾನು ಓದಿದ್ದೇನೆ. ಆದರೆ ಬಟ್ಟೆಯ ಮೇಲೆ ಇನ್ನೊಂದು ಪೂರ್ಣ ಪ್ರಮಾಣದ ಬಟ್ಟೆಯನ್ನು ಹಾಕಿಕೊಳ್ಳಲಾಗಲಿ, ಮುಖವನ್ನು ಸಂಪೂರ್ಣ ಮುಚ್ಚಿಕೊಳ್ಳಲಾಗಲಿ ಎಲ್ಲೂ ಸ್ಪಷ್ಟ ಉಲ್ಲೇಖ ಇಲ್ಲ. ಬಟ್ಟೆ ಬದುಕಿನ ಭಾಗವಾಗಿ, ಸಾಂಸ್ಕೃತಿಕ ಬದಲಾವಣೆಯ ನೆಲೆಯಲ್ಲಿ ಹುಟ್ಟಿ ಬೇರೆ ಬೇರೆ ರೂಪಗಳನ್ನು ತಾಳುತ್ತಾ ಬಂದಿದೆ. ಭಾರತದ ಒಂದೊಂದು ಕಡೆ ಒಂದು ರೀತಿಯ ವಸ್ತ್ರ ಧಾರಣೆಗಳನ್ನು ಮಾಡುತ್ತಾರೆ. ಅದು ಅವರ ಸಂಸ್ಕೃತಿಯ ಭಾಗವಾಗಿದೆಯೇ ಹೊರತು ಧರ್ಮದ ಭಾಗವಾಗಿಲ್ಲ. ಬುರ್ಖಾ, ಸ್ಕಾರ್ಫ್ ಇತ್ಯಾದಿಗಳನ್ನು ತೊರೆಯುವುದು ವೈಚಾರಿಕತೆಯ ಭಾಗವೇ ಆಗಿದ್ದರೆ, ನನ್ನ ಬಾಲ್ಯದಲ್ಲಿ ನಾನು ಕಂಡ ಮರಿಯಮ್ಮಾದ, ಅವ್ವಮ್ಮಾದ, ಪಲ್ಲಿಮ್ಮಾದ ಇವರೆಲ್ಲ ಸಾರಾ ಅಬೂಬಕರ್ ಅವರಿಗಿಂತ ಮೊದಲೇ ಹುಟ್ಟಿದ ವಿಚಾರವಾದಿಗಳು. ಯಾಕೆಂದರೆ ಇವರು ಕಾಡಿಗೆ, ಗದ್ದೆಗೆ, ನದಿಗೆ ಹೋಗುವಾಗ ಬುರ್ಖಾ ಧರಿಸಿ ಹೋಗುತ್ತಿರಲಿಲ್ಲ. ತಲೆಗೊಂದು ತಲೆವಸ್ತ್ರ. ಉದ್ದ ಕೈಯ ಕುಪ್ಪಸ. ಹಸಿರು ಅಥವಾ ನೀಲಿ ಬಣ್ಣದ ಸೀರೆ. ಕೈಯಲ್ಲೊಂದು ಕತ್ತಿ. ಹಾಗೆಂದು ಇವರೇನೂ ಇಸ್ಲಾಮ್ ಧರ್ಮದಿಂದ ಬಹಿಷ್ಕೃತರೇನೂ ಆಗಿಲ್ಲ.

 ನಾನು ಬಾಲ್ಯದಲ್ಲಿರುವಾಗ ಈ ಕಪ್ಪು ಬುರ್ಖಾಗಳು ಇರಲಿಲ್ಲ. ಬದಲಿಗೆ ‘ವಲ್ಲಿ’ ಎನ್ನುವ ವಸ್ತ್ರವನ್ನು ಹೊದ್ದುಕೊಳ್ಳುತ್ತಿದ್ದರು. ಅದು ಅವರ ಸಂಸ್ಕೃತಿಯ ಭಾಗವಾಗಿತ್ತು. ಸಂವೇದನೆಯ ಭಾಗವಾಗಿತ್ತು. ಡಬಲ್ ವಲ್ಲಿ ಎನ್ನುವುದೊಂದು ಇತ್ತು. ಇದನ್ನು ಇಬ್ಬರು ಹೆಂಗಸರು ಜೊತೆಯಾಗಿ ಹೊದ್ದುಕೊಳ್ಳುತ್ತಿದ್ದರು. ಇದಾದ ಬಳಿಕ ಲಂಗ ಬುರ್ಖಾ ಬಂತು. ನನ್ನ ತಾಯಿ ತನ್ನ ಜೀವನ ಪೂರ್ತಿ ಲಂಗ ಬುರ್ಖಾ ಹಾಕುತ್ತಿದ್ದರು. ಇದಾದ ಬಳಿಕ ಇದರಲ್ಲೇ ಬಗೆ ಬಗೆಯ ಕಲರ್ ಬುರ್ಖಾ ಬಂತು. ಇದು ಮುಗಿದ ಬಳಿಕ ‘ಡಿಸ್ಕೋ ಬುರ್ಖಾ’ ಎನ್ನುವುದು ಬಂತು. ಇದರಲ್ಲೂ ಬೇರೆ ಬೇರೆ ರೀತಿಯ ವೈವಿಧ್ಯಗಳಿದ್ದವು. ಮೊಣಕಾಲಿಗಿಂತ ಮೇಲೆ ಇರುವಂತಹದು. ಹಾಗೆಯೇ ಉದ್ದ ಕೈಗಳು, ಗಿಡ್ಡ ಕೈಗಳು. ಹಾಗೆಯೇ ತಲೆಗೆ ಧರಿಸುವ ಸ್ಕಾರ್ಫ್‌ನಲ್ಲಿಯೂ ವೈವಿಧ್ಯತೆಗಳು ಇದ್ದವು. ಅಂದ ಹಾಗೆ ಲಂಗ ಬುರ್ಖಾ, ಡಿಸ್ಕೋ ಬುರ್ಖಾ ಇತ್ಯಾದಿಗಳನ್ನೆಲ್ಲ ಯಾವುದೋ ಮೌಲ್ವಿಗಳು ಫತ್ವಾ ಹೊರಡಿಸಿ ಬಿಡುಗಡೆ ಮಾಡುತ್ತಿರಲಿಲ್ಲ. ಆಯಾಯ ಕಾಲಮಾನಕ್ಕೆ ತಕ್ಕಂತೆಯೇ ಮಾರುಕಟ್ಟೆಗಳು ಇದನ್ನು ಬಿಡುಗಡೆ ಮಾಡುತ್ತಿದ್ದವು. ಬುರ್ಖಾ ಎನ್ನುವುದು ಒಂದು ದೊಡ್ಡ ಉದ್ಯಮ. ಅದರ ಹಿಂದೆ ಬೃಹತ್ ವ್ಯಾಪಾರಿಗಳಿಂದ್ದಾರೆ. ಫ್ಯಾಶನ್ ಡಿಸೈನರ್‌ಗಳಿದ್ದಾರೆ. ಅವರ್ಯಾರೂ ಮದರಸಗಳಿಂದ ಬಂದವರಲ್ಲ. ಅತ್ಯಾಧುನಿಕ ವಸ್ತ್ರವಿನ್ಯಾಸಗಳನ್ನು ಕಲಿತು ಈ ಕ್ಷೇತ್ರಕ್ಕೆ ಕಾಲಿಟ್ಟವವರು. ಹಾಗೆಯೇ ತರುಣಿಯರು ತಮ್ಮ ಅಂತಸ್ತು, ವಿದ್ಯಾಭ್ಯಾಸ ಇವುಗಳಿಗೆ ಪೂರಕವಾಗಿ ತಮ್ಮ ತಮ್ಮ ಬುರ್ಖಾಗಳನ್ನು ಸ್ಕಾರ್ಫ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು.

 ಇತ್ತೀಚೆಗೆ ಗಲ್ಫ್ ಶೈಲಿಯ ಬದುಕು ಒಂದು ಹೊಸ ಬುರ್ಖಾವನ್ನು ನಮ್ಮ ನಡುವೆ ತಂದಿದೆ. ಅದು ಭಾರತೀಯ ಬುರ್ಖಾಕ್ಕೆ ಭಿನ್ನವಾದುದು. ಬುರ್ಖಾ ಧರಿಸಿದ ಬಳಿಕ ಅರ್ಧ ಮುಖಕ್ಕೆ ಬಟ್ಟೆಯನ್ನು ಬಿಗಿದು ಕಟ್ಟುವುದು. ಇಷ್ಟೇ ಅಲ್ಲ. ಕೈಗೆ ಕಪ್ಪು ಗ್ಲೌಸ್‌ಗಳನ್ನು ಕೂಡ ಕೆಲವರು ಧರಿಸುತ್ತಾರೆ. ‘‘ಯಾರನ್ನೋ ಕೊಲೆ ಮಾಡಲು ಹೋಗುವುದಕ್ಕೆ ಸಿದ್ಧತೆಯಂತೆ’’ ನನಗೆ ಗ್ಲೌಸ್ ಕಂಡಿತ್ತು. ಅದೂ ತೀರಾ ಕೃತಕ ಮತ್ತು ಅತಿರೇಕದ ಎಲ್ಲ ಲಕ್ಷಣಗಳನ್ನು ಹೊಂದಿದ ಬುರ್ಖಾ ಆಗಿತ್ತು. ಯಾರನ್ನೋ ಪರೋಕ್ಷವಾಗಿ ಕೆರಳಿಸುವುದಕ್ಕಾಗಿ, ಮತ್ತು ಯಾರಿಗಾಗಿಯೋ ಧರಿಸಿದ್ದೇ ಹೊರತು ಅದು ಸಹಜವಾದ ಕ್ರಿಯೆ ಎಂದು ನನಗೆ ಅನ್ನಿಸಲಿಲ್ಲ. ವಿದೇಶದ ಹಣದ ಜೊತೆಗೆ ಬಂದ ಕೆಲವು ಸಿದ್ಧಾಂತಗಳು ತನ್ನ ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟುಕೊಂಡು ಬಂದ ಬುರ್ಖಾ ಅದಾಗಿತ್ತು. ವಿದೇಶದ ಹಣ ಮುಗಿದು ಹೋಗುವುದಕ್ಕೆ ಮುಂಚೆಯೇ ಈ ಬುರ್ಖಾ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತದೆ. ಮೈ ತುಂಬಾ ಬಟ್ಟೆ ಧರಿಸಿದ, ಬುರ್ಖಾವನ್ನೇ ಧರಿಸದ ಎಷ್ಟೋ ಹೆಣ್ಣುಮಕ್ಕಳು ಇಂದು ನಮ್ಮ ನಡುವೆ ಬಹುಸಂಖ್ಯೆಯಲ್ಲಿದ್ದಾರೆ. ಇವರು ಯಾವ ಲೇಖಕಿಯರೂ ಅಲ್ಲ, ವೈಚಾರಿಕ ಚಿಂತಕಿಯರೂ ಅಲ್ಲ. ತಮ್ಮ ತಮ್ಮ ಬದುಕಿಗೆ ಪೂರಕವಾಗಿ ತೀರಾ ಸಹಜವಾಗಿ, ಗಿಡಗಳಲ್ಲಿ ಒಂದು ಹೂವು ಅರಳಿ, ಹಣ್ಣಾಗುವಂತೆಯೇ ಅವರು ತಮ್ಮ ತಮ್ಮ ವಸ್ತ್ರಗಳನ್ನು ಆರಿಸಿಕೊಂಡಿದ್ದಾರೆ. ಹಳತು ಹೋಗಿ ಹೊಸತು ಬಂದಿದೆ. ಆದುದರಿಂದಲೇ ಅದು ಯಾರ ಗಮನವನ್ನೂ ಸೆಳೆದಿಲ್ಲ. ಒಂದು ವೇಳೆ ಬುರ್ಖಾ ಉದುರುವುದಿದ್ದರೂ ಅದೇ ದಾರಿಯಲ್ಲಿ ಉದುರಬೇಕೇ ಹೊರತು, ಅದನ್ನು ಕಿತ್ತೆಗೆಯಲು ಹೋದಂತೆಯೇ ಅದು ಬಿಗಿಯಾಗುತ್ತಾ ಹೋಗುತ್ತದೆ. 

ಬಟ್ಟೆಗಾಗಿ ಬದುಕು ಅಲ್ಲ. ಬದುಕಿಗಾಗಿ ಬಟ್ಟೆ. ಅವರವರ ಬದುಕಿಗೆ ಪೂರಕವಾಗಿ ಬಟ್ಟೆಗಳಲ್ಲಿ ಬದಲಾವಣೆಗಳು ಕಾಣುತ್ತಾ ಹೋಗುತ್ತದೆ. ಹಿಂದೆ ಕಾಡಿಗೆ ಕಟ್ಟಿಗೆಗೆ ಹೋಗುವ ಮರಿಯಮ್ಮಾದ ಸ್ಕಾರ್ಫ್ ಧರಿಸದೇ ತಲೆವಸ್ತ್ರ ಹಿಂದಕ್ಕೆ ಕಟ್ಟಿ, ಬುರ್ಖಾ ಇಲ್ಲದೆ ಓಡಾಡುತ್ತಿದ್ದರು. ಇಸ್ಲಾಮಿನಿಂದ ಯಾರೂ ಅವರನ್ನು ಬಹಿಷ್ಕರಿಸಿರಲಿಲ್ಲ. ಅದೇ ಮರಿಯಮ್ಮಾದನ ಮಕ್ಕಳು ಮುಂದೆ ಗಲ್ಫ್‌ಗೆ ಹೋದರು. ಹಣವಾಯಿತು. ದೊಡ್ಡ ಬಂಗಲೆ ಕಟ್ಟಿದರು. ಅಲ್ಲಿಂದ ಬರುವಾಗ ಚಿತ್ರ ವಿಚಿತ್ರ ಬುರ್ಖಾವನ್ನು, ವಿಚಿತ್ರ ಬದುಕಿನ ಶೈಲಿಯನ್ನು ಹಿಡಿದುಕೊಂಡು ಬಂದರು. ಮರಿಯಮ್ಮಾದ ತನ್ನ ಜೀವನದ ಕೊನೆಯಲ್ಲಿ ಬುರ್ಖಾ ಧರಿಸುತ್ತಾ ‘ತಾನು ಕೂಡ ಎಲ್ಲರಂತೆ ಆದುದಕ್ಕೆ ಹೆಮ್ಮೆ ಪಡುತ್ತಾ’ ಬದುಕಿದರು. ಹೌದು. ಬುರ್ಖಾ ಅವರಿಗೆ ಅಂತಸ್ತಿನ ವಿಷಯವಾಗಿತ್ತು. ಮರ್ಯಾದಸ್ಥರ ವಿಷಯವಾಗಿತ್ತು. ಅವರ ಮಗ ಗಲ್ಫಿಗೆ ಹೋಗಿ ತನ್ನ ತಾಯಿಗೆ ಅದನ್ನು ತಂದುಕೊಟ್ಟಿದ್ದ. ಹಾಗೆಂದು ಮರಿಯಮ್ಮಾದನ ಮುಂದೆ ‘ಅದೆಲ್ಲ ಸುಳ್ಳು, ಅನಗತ್ಯ, ಮೂಲಭೂತವಾದ’ ಎಂದು ಅವರನ್ನು ಬುರ್ಖಾ ಧರಿಸದಂತೆ ನಾನು ಒತ್ತಾಯಿಸುವುದು ಭ್ರಾಮಕ ವೈಚಾರಿಕತೆಯ ಪರಮಾವಧಿ. ಅಂತಹ ವೈಚಾರಿಕತೆ ಈ ನೆಲದೊಂದಿಗೆ, ಶ್ರೀಸಾಮಾನ್ಯರ ಬದುಕಿನೊಂದಿಗೆ ಯಾವ ಸಂಬಂಧವನ್ನು ಹೊಂದಿರುವುದಿಲ್ಲ ಎಂದು ನಂಬಿದ್ದೇನೆ.

  ಆದುದರಿಂದ ನಾನು ಧರಿಸುವ ಧಿರಿಸನ್ನು  ಬದಲಾಯಿಸುವ ಕಡೆಗೆ ಹೆಚ್ಚು ಆಸಕ್ತನಾಗಿಲ್ಲ. ಅವರ ಬದುಕಿನಲ್ಲಿ ಬದಲಾವಣೆಯಾಗಬೇಕು ಎನ್ನುವುದು ನನ್ನ ಆಶಯ. ಅವರು ಹೆಚ್ಚು ಶಿಕ್ಷಣವನ್ನು ಪಡೆಯಬೇಕು. ಸಮಾಜದ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗಳನ್ನು ಮಾಡಬೇಕು. ಅವರ ಬದುಕಿನಲ್ಲಿ ಅಮೂಲಾಗ್ರ ಬದಲಾವಣೆಯಾದಾಗ ಅವರ ವಸ್ತ್ರ ಧಾರಣೆ ಇತ್ಯಾದಿಗಳಲ್ಲೂ ಬದಲಾವಣೆಯಾಗಬಹುದು. ಅಥವಾ ಅವರಿಗೆ ವಸ್ತ್ರದಲ್ಲಿ ಬದಲಾವಣೆ ಇಷ್ಟವಿಲ್ಲದೆ ಇದ್ದರೆ, ನಾನಂತೂ ಅವರದನ್ನು ಬದಲಾಯಿಸಬೇಕು ಎಂದು ಬಯಸಲಾರೆ. ಒಂದು ಕಾಲದಲ್ಲಿ ಮುಸ್ಲಿಮ್ ಹೆಣ್ಣು ಮಕ್ಕಳು ಶಾಲೆ ಕಲಿಯುವುದೇ ಒಂದು ಅಪರೂಪದ ಸುದ್ದಿಯಾಗಿತ್ತು. ಸುಮಾರು 90ರ ಆರಂಭದಲ್ಲಿ ಡಿಗ್ರಿ ಮುಗಿಸಿದ ಒಂದೆಡೆರಡು ಹೆಣ್ಣು ಮಕ್ಕಳಷ್ಟೇ ಇದ್ದರು. ಆದರೆ ಇಂದು ಪದವಿ ಮಾಡದ ಹೆಣ್ಣು ಮಕ್ಕಳೇ ಇಲ್ಲ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ. ಗ್ರಾಮೀಣ ಹೆಣ್ಣು ಮಕ್ಕಳು ಸ್ಕಾರ್ಫ್ ಹಾಕಿಕೊಂಡು, ತಮ್ಮದೇ ಒತ್ತಾಯದೊಂದಿಗೆ ಶಾಲೆಗೆ ಕಾಲಿಡತೊಡಗಿದರು. ಆಗ ಈ ಸ್ಕಾರ್ಫ್‌ನ ಕುರಿತಂತೆ ಸಂಘಪರಿವಾರ ವಿವಾದವನ್ನು ಎಬ್ಬಿಸಿತು. ಶಾಲೆಗೆ, ಕಾಲೇಜುಗಳಿಗೆ ಸ್ಕಾರ್ಫ್ ಹಾಕಿ ಪ್ರವೇಶಿಸಬಾರದು ಎಂದು ಕೆಲವರು ತಕರಾರು ತೆಗೆದರು. ಇದು ಎಷ್ಟರ ಮಟ್ಟಿಗೆ ಮುಂದೆ ಹೋಯಿತು ಎಂದರೆ ಎಷ್ಟೋ ಹೆಣ್ಣು ಮಕ್ಕಳು ಶಾಲೆ ತೊರೆಯುವಂತಹ ಸ್ಥಿತಿ ನಿರ್ಮಾಣ ಮಾಡಿತು. ಅಳಿದುಳಿದವರು ತಮ್ಮದೇ ಧಾರ್ಮಿಕ ಸಂಘಟನೆಗಳು ನಡೆಸುವ ಶಾಲಾ ಕಾಲೇಜುಗಳಿಗೆ ತೆರಳುವ ವಾತಾವರಣವನ್ನು ಸೃಷ್ಟಿಸಿತು. ಇಂತಹ ಸಂದರ್ಭದಲ್ಲಿ ಕೆಲವು ಅರೆಬೆಂದ ವಿಚಾರವಾದಿಗಳೇ ‘‘ನಿಮಗೆ ಸ್ಕಾರ್ಫ್ ಬೇಕೋ-ಶಿಕ್ಷಣ ಬೇಕೋ’’ ಎನ್ನೋ ಬ್ಲಾಕ್‌ಮೇಲ್‌ಗೆ ಇಳಿದರು. ಕೆಲವು ಹೆಣ್ಣು ಮಕ್ಕಳು ಇದನ್ನು ದಿಟ್ಟವಾಗಿ ಪ್ರತಿಭಟಿಸಿದರು. ಸ್ಕಾರ್ಫ್ ಧರಿಸದೇ ಒಬ್ಬ ಹೆಣ್ಣಿಗೆ ಹೊರಗೆ ಇಳಿಯಲು ಅಸಾಧ್ಯವಾಗುತ್ತದೆ ಎನ್ನುವುದಾದರೆ ಆ ಸಂವೇದನೆಯನ್ನು ನಾವು ಗೌರವಿಸಬೇಕು. ಹೆಣ್ಣು ಮಕ್ಕಳನ್ನು ಯಾವ ರೀತಿಯಲ್ಲಾದರೂ ಒಲಿಸಿ ಶಾಲೆ, ಕಾಲೇಜುಗಳಿಗೆ ಸೇರಿಸಿ ಎಂದು ನಮ್ಮ ಶಿಕ್ಷಣ ನೀತಿ ಹೇಳುತ್ತದೆ. ಸ್ಕಾರ್ಫ್ ಅವೈಚಾರಿಕ ಸಂಗತಿಯೇ ಆಗಿದ್ದರೆ, ಶಿಕ್ಷಣವೇ ಅವಳನ್ನು ಸ್ಕಾರ್ಫ್ ಹಾಕದಂತೆ ತಡೆಯುತ್ತದೆ. ಇಂದು ಸ್ಕಾರ್ಫ್ ಧರಿಸಿಯೇ ಡಾಕ್ಟರ್‌ಗಳಾಗಿ, ಇಂಜಿನಿಯರ್‌ಗಳಾಗಿ ನೂರಾರು ಮುಸ್ಲಿಮ್ ಮಹಿಳೆಯರು ಸಾಧನೆ ಮಾಡಿದ್ದಾರೆ. ಸ್ಕಾರ್ಫ್ ಧರಿಸಿಯೇ ಒಲಿಂಪಿಕ್‌ನಲ್ಲಿ ಚಿನ್ನದ ಪದಕ ಪಡೆದ ಅಥ್ಲೆಟಿಕ್‌ಗಳ ಬಗ್ಗೆ ವರದಿಯಾಗಿವೆ. ಮುಸ್ಲಿಮ್ ಮಹಿಳೆಯರನ್ನು ಮುಖ್ಯವಾಹಿನಿಗೆ ಕರೆದುಕೊಳ್ಳುವುದು ಶಿಕ್ಷಣದ ಹೆಬ್ಬಾಗಿಲನ್ನು ತೆರೆಯುವ ಮೂಲಕ. ಇಂದು ಸಂಘಪರಿವಾರವೂ ಸೇರಿದಂತೆ ಹಲವಾರು ಸಂಘಟನೆಗಳ ಅಡೆತಡೆಗಳನ್ನು ಎದುರಿಸಿ ಮುಸ್ಲಿಮ್ ಮಹಿಳೆಯರು ಶಿಕ್ಷಣ ಕ್ಷೇತ್ರದಲ್ಲಿ ಧಾಪುಗಾಲು ಇಡುತ್ತಿದ್ದಾರೆ. ಮುಸ್ಲಿಮ್ ಮಹಿಳೆಯರೇ ಒಂದಾಗಿ ‘ಮರಳಿ ಬಾ ಶಾಲೆಗೆ’ ಎಂದು ಅಳಿದುಳಿದ ಮಹಿಳೆಯರನ್ನು ಶಿಕ್ಷಿತರನ್ನಾಗಿಸಲು ಮುಂದಾಗಿದ್ದಾರೆ. ಇದನ್ನೆಲ್ಲ ನಾವು ಗುರುತಿಸಿ, ಅವರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತಾ ಹೋಗುವುದೇ ನಿಜವಾದ ಮಹಿಳಾ ಸಬಲೀಕರಣವಾಗಿದೆ.


  ಎರಡು ಘಟನೆಗಳನ್ನು ನಾನು ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ನಮೂದಿಸಿದ್ದೆ. ಒಂದು, ಕಳೆದ ಎಸೆಸೆಲ್ಸಿ ಫಲಿತಾಂಶದಲ್ಲಿ ಬೆಳ್ತಂಗಡಿಯ ಮುಸ್ಲಿಮ್ ತರುಣಿಯೊಬ್ಬಳು ಸಾಧಿಸಿದ ಸಾಧನೆ. ಆಕೆ ಕನ್ನಡ ಮಾಧ್ಯಮದಲ್ಲಿ ಬರೆದು ಇಡೀ ರಾಜ್ಯಕ್ಕೆ ಎರಡನೆ ಸ್ಥಾನ ಪಡೆದಿದ್ದಳು. ಅಂದ ಹಾಗೆ ಈಕೆ ಒಬ್ಬ ಮದರಸ ಶಾಲೆಯ ವೌಲವಿಯ ಮಗಳು. ಇನ್ನೊಂದು, ಶಿವಮೊಗ್ಗದಲ್ಲಿ ನಡೆದ ಘಟನೆ. ಈಕೆಯೂ ಒಬ್ಬ ಮುಸ್ಲಿಮ್ ತರುಣಿ. ಹೆರಿಗೆಯಾದ ಮರುದಿನವೇ ಅಂಬುಲೆನ್ಸ್‌ನಲ್ಲಿ ಹೋಗಿ ಶಿಕ್ಷಕ ಹುದ್ದೆಯ ಪರೀಕ್ಷೆಗೆ ಹಾಜರಾಗಿದ್ದಳು. ಆಕೆಯ ಕುಟುಂಬ, ಸಮಾಜ ಎಲ್ಲರೂ ಅದಕ್ಕೆ ಸಹಕರಿಸಿದ್ದರು. ಈ ಘಟನೆಗಳು ನಮ್ಮ ಭವಿಷ್ಯದ ಆಶಾಕಿರಣಗಳಾಗಿವೆ. ಇಲ್ಲಿ ‘ಆಕೆ ಬುರ್ಖಾ ಹಾಕಿದ್ದಳೋ...ಇಲ್ಲವೋ’’ ಎನ್ನುವ ಪ್ರಶ್ನೆಯೇ ಅಪ್ರಸ್ತುತ. ಅಂತಹ ಪ್ರಶ್ನೆಯನ್ನು ಯಾರೇ ಪ್ರಶ್ನಿಸಲಿ. ಅದು ಉತ್ತರಿಸುವುದಕ್ಕೆ ಅನರ್ಹವಾದ ಪ್ರಶ್ನೆ.





 ಬಳಿಕ ಸೇರಿಸಿದ ಟಿಪ್ಪಣಿ:
ಧರ್ಮದೊಳಗಿನ ಯಾವುದೇ ಮೌಡ್ಯಗಳ ಕುರಿತು ಮಾತಾಡಿದಂತೆ ಆಹಾರ ಮತ್ತು ಉಡುಪಿನ ಕುರಿತಂತೆ ಬೀಸಾಗಿ ಮಾತನಾಡೂದು ಕೆಲವೊಮ್ಮೆ ತಪ್ಪು ಧ್ವನಿಗಳನ್ನು ನೀಡಬಹುದು. ನೀವು ಬುರ್ಖಾ ಯಾಕೆ ಧರಿಸುತ್ತೀರಿ, ಸ್ಕಾರ್ಫ್ ಯಾಕೆ ಧರಿಸುತ್ತೀರಿ ? ಎಂಬ ಪ್ರಶ್ನೆ ನೀವು ಗೋಮಾಂಸ ಯಾಕೆ ಸೇವಿಸುತ್ತೀರಿ ಎಂದು ಕೆಲವರು ಕೇಳಿದಂತೆಯೇ ಧ್ವನಿಸೋದು ಇದೆ ಕಾರಣಕ್ಕೆ. (ಕೆಲವು ಹುಡುಗರು ಬುರ್ಖಾ, ಸ್ಕಾರ್ಫ್, ನಿಕಾಬ್ ಇವುಗಳ ವ್ಯತ್ಯಾಸವೇ ತಿಳಿಯದೆ ವಾದಿಸುತ್ತಿದ್ದರು). ಯಾವುದೇ ಕಾರಣಕ್ಕೆ ಒಂದು ಉಡುಪು ಧಾರಣೆ ಆರಂಭವಾಗಲಿ, ಧರಿಸುತ್ತಾ ಹೋದಂತೆ ಅದು ನಿಧಾನಕ್ಕೆ ಬದುಕಿನ, ಮೈ ಮೇಲಿನ ಸಂವೇದನೆಯ ಭಾಗವಾಗುತ್ತದೆ. ಆದುದರಿಂದಲೇ ಇದು ಯಾವುದೇ ಆದೇಶದಿಂದಲಾಗಲಿ, ನಮ್ಮಂಥವರ ಘೋಶನೆಗಳಿನ್ದಾಗಲಿ(ಬುರ್ಖಾ ಬೇಕು -ಬೇಡ) ಇಲ್ಲವಾಗಿಸೋದು ಸಾಧ್ಯವಿಲ್ಲ. ಬದಲಿಗೆ ಅವರ ಬದುಕಿನಲ್ಲಿ (ಶಿಕ್ಷಣದ ಮೂಲಕ, ಸ್ವಾವಲಂಬಿ ಸಾಧನೆಗಳ ಮೂಲಕ) ಬದಲಾವನೆಗಳಾದಾಗ ಧಿರಿಸಿನಲ್ಲೂ ಸಹಜವಾಗಿ ಬದಲಾವಾನೆ ಆಗುತ್ತದೆ. ಇದನ್ನು ನನ್ನ ಲೇಖನದಲ್ಲಿ ನಾನು ಹೇಳಿದೆ. ಆದರೆ ಇಲ್ಲಿ ಕೆಲವು ಚಿಂತಕರು ಬುರ್ಖಾ ಹೋದರೆ ಅವರ ಬದುಕಿನಲ್ಲಿ ಬದಲಾವಣೆ ಯಾಗುತ್ತೆ ಎಂದು ಚರ್ಚಿಸಿದರು. ನಾನು, ಬದುಕಿನಲ್ಲಿ ಬದಲಾವಣೆಯಾದರೆ ಧಿರಿಸಿನಲ್ಲಿ ಬದಲಾವಣೆಯಾಗುತ್ತದೆ ಎಂದೇ. ಅಷ್ಟೇ. ಇಲ್ಲಿ ಬುರ್ಖಾ ಕುರಿತಂತೆ ಮಾತನಾಡಿದ ದಿನೇಶ್ ಅಮೀನ್ ಮಟ್ಟು, ಜಿ. ಎನ್. ನಾಗಾರಾಜ್ ರಂಥವರು ಮುಸ್ಲಿಂ ಸಮುದಾಯದ ಕುರಿತಂತೆ ಇಟ್ಟಿರುವ ಕಾಳಜಿಯ ಬಗ್ಗೆ ನನಗಂತೂ ಯಾವ ಅನುಮಾನವೂ ಇಲ್ಲ. ದಲಿತರು, ಅಲ್ಪಸಂಖ್ಯಾತರು, ದುರ್ಬಲರ ಪರವಾಗಿ ಅಮೀನು ಮಟ್ಟು ತಳೆಯುತ್ತಾ ಬಂದಿರುವ ನಿಲುವು ಅತ್ಯಂತ ಶ್ರೇಷ್ಠ ವಾದುದು. ಅದರ ಬಗ್ಗೆ ಅನುಮಾನ ವ್ಯಕ್ತ ಪಡಿಸೋದು ನಮಗೆ ನಾವೇ ದ್ರೋಹ ಮಾಡಿಕೊಂಡಂತೆ. ಈ ಚರ್ಚೆಯ ಬಳಿಕ ಮಟ್ಟು, ನಾಗರಾಜ್ ಕುರಿತಂತೆ ನನ್ನ ಪ್ರೀತಿ ದುಪ್ಪಟ್ಟಾಗಿದೆ. ಉಳಿದಂತೆ ನನ್ನ ಲೇಖನದಲ್ಲಿ ಬಳಸಿದ "ಸೆರಗಿಗೆ ಕೈ ಹಾಕಿದಂತೆ" "ವೈಚಾರಿಕ ಮೂಲಭೂತವಾದಿ" ಎನ್ನೋ ಶಬ್ದ ಮಟ್ಟು ಸೇರಿದಂತೆ ಕೆಲವು ಗೆಳೆಯರಿಗೆ ತೀವ್ರ ನೋವು ಕೊಟ್ಟಿದೆ ಎಂದು ತಿಳಿಯಿತು. ಇದು ಉದ್ದೇಶ ಪೂರ್ವಕವಾಗಿ ಅಥವಾ ಯಾರಿಗೋ ವೈಯಕ್ತಿಕವಾಗಿ ಬಳಸಿದ ಶಬ್ದ ಅಲ್ಲ. ಆದರೂ ಈ ಶಬ್ದ ಬಳಕೆ ಋಣಾತ್ಮಕವಾದುದನ್ನು ಧ್ವನಿಸುತ್ತದೆ ಎಂದು ನನಗೂ ಈಗ ಅನ್ನಿಸುತ್ತಿದೆ. ಇದಕ್ಕಾಗಿ ನಾನು ವಿಷಾದಿಸುತ್ತಿದ್ದೇನೆ. ಮತ್ತು ಈ ಎರಡೂ ವಾಕ್ಯವನ್ನು ನಾನು ಹಿಂದಕ್ಕೆ ತೆಗೆದುಕೊಂಡಿದ್ದೇನೆ. ಅದಕ್ಕೆ ಕತ್ತರಿ ಹಾಕಿದ್ದೇನೆ. ನನ್ನ ಬರಹದಿಂದ ಯಾರಿಗೇ ನೋವಾಗಿದ್ದರು ಕ್ಷಮೆ ಇರಲಿ. ಈ ಚರ್ಚೆ ಒಂದು ಒಳ್ಳೆಯ ಸಮಾಜವೊಂದನ್ನು ನಿರ್ಮಿಸಲು ಪೂರಕವಾಗಲಿ ಎಂದು ನಾನು ಬಯಸುತ್ತೇನೆ. ಇಲ್ಲಿಗೆ ಈ ಕುರಿತಂತೆ ನನ್ನ ಭಾಗದ ಹೇಳಿಕೆ ಪ್ರತಿ ಹೇಳಿಕೆಗಳನ್ನು ನಿಲ್ಲಿಸಿದ್ದೇನೆ

Monday, September 8, 2014

ಹೊಳೆದದ್ದು ಹೊಳೆದಂತೆ-2

ದೇವರಿದ್ದಾನೆ ಎನ್ನೋದು ಒಂದು ನಂಬಿಕೆಯೇ ಆಗಿದ್ದರೆ ದೇವರಿಲ್ಲ ಎನ್ನೋದು ಕೂಡ ಒಂದು ನಂಬಿಕೆಯೇ.

ಹೊಳೆದದ್ದು ಹೊಳೆದಂತೆ-೧

ದೇವರ ಇರವು ಸ್ಪಷ್ಟ ಗೊಳ್ಳುತ್ತಾ ಹೋಗೋದು ಯಾವುದೇ ಧರ್ಮಗುರು ಅಥವಾ ಧರ್ಮ ಗ್ರಂಥಗಳಿನ್ದಲ್ಲ. ನಮ್ಮ ನಮ್ಮ ಬದುಕಿನ ಅನುಭವಗಳೇ ಅವನ ಇರವಿನ ಎಡೆಗೆ, ಅವನ ಅರಿವಿನ ಎಡೆಗೆ ನಮ್ಮನ್ನು ತಲುಪಿಸುತ್ತದೆ. ಈ ಕಾರಣದಿಂದಲೇ ದೇವರ ಅನುಭವ ಜನರಿಂದ ಜನರಿಗೆ ಭಿನ್ನವಾಗಿರುತ್ತದೆ. ನಮ್ಮ ಬದುಕಿನಲ್ಲಿ ಎದುರಾಗುವ ಎಲ್ಲ ಸುಖ, ಸಂಕಟ ಗಳಲ್ಲೂ ಕೆಲವು ಸಂಕೇತಗಳು, ಸೂಚನೆಗಳು ಇರುತ್ತವೆ. ಕಿವಿ, ಕಣ್ಣು, ಮೂಗು, ಹೃದಯ ತೆರೆದು ಅದನ್ನು ಆಲಿಸುವ ಸಹನೆ, ವಿನಯ ನಮ್ಮಲ್ಲಿದ್ದರೆ ಆ ಭಾಷೆ ನಮಗೆ ನಿಧಾನಕ್ಕೆ ಅರ್ಥವಾಗ ತೊಡಗುತ್ತದೆ.

ಬಾಡೂಟದ ಕ್ಷಣಗಳು

ಸೆಪ್ಟೆಂಬರ್ ೫ರಂದು ಸಂಜೆ ಮಂಗಳೂರಿನ ಸಹೋದಯ ಹಾಲ್ ನಲ್ಲಿ ನಡೆದ "ಬಾಡೂಟದ ಜೊತೆಗೆ ಗಾಂಧೀ ಜಯಂತಿ'' ಕೃತಿ ಬಿಡುಗಡೆಯ ಸಮಾರಂಭದ ಕೆಲವು ಹೃದಯ ಸ್ಪರ್ಶಿ ಕ್ಷಣಗಳನ್ನು ನನ್ನ ಕುಟುಂಬದ ಸದಸ್ಯರಲ್ಲೊಬ್ಬರಾದ ಐವನ್ ಡಿಸಿಲ್ವಾ ಸೆರೆ ಹಿಡಿದಿದ್ದಾರೆ. ಅದನ್ನು ಇಲ್ಲಿ ನಿಮ್ಮೊಂದಿಗೆ ಹಂಚಿ ಕೊಂಡಿದ್ದೇನೆ.
ಐವನ್ ಡಿಸಿಲ್ವಾ ಮನೆಯಲ್ಲಿ ನಾನು ಮತ್ತು ಲಡಾಯಿ ಬಸು 

ಅಧ್ಯಕ್ಷತೆಯನ್ನು ವಹಿಸಲಿದ್ದ ಕಾಳೇಗೌಡ ನಾಗವಾರ ಅವರು, ಕಾರ್ಯಕ್ರಮಕ್ಕೆ ಮುನ್ನ
ವೇದಿಕೆಯ ಮುಂಭಾಗ ಬ್ಯಾನರ್ ಕಟ್ಟುತ್ತಿರುವ ಲಡಾಯಿ ಬಸು 

ಪುಸ್ತಕಾಸಕ್ತರು
ಉದ್ಘಾಟಕರು ಮತ್ತು ಅಧ್ಯಕ್ಷರು

ಸುರೇಶ್ ಭಟ್ ಬಾಕ್ರಬೈಲ್ ಮತ್ತು ಗೆಳೆಯರು
ವಾರ್ತಾಭಾರತಿ ಪತ್ರಿಕೆಯ ನನ್ನ ಆತ್ಮೀಯ ಬಂಧುಗಳಿಬ್ಬರು
ಪಟ್ಟಾಭಿರಾಮ ಸೋಮಯಾಜಿ ಮತ್ತು ಲಡಾಯಿ
ಇನ್ನೊಂದಿಷ್ಟು ಪುಸ್ತಕಾಸಕ್ತರು
ಕಾರ್ಯಕ್ರಮ ಆರಂಭ
ಸಹೃದಯರು
ನಾನು
ಬಿಡುಗಡೆಯ ಕ್ಷಣ
ಮೊದಲ ಪ್ರತಿ ನನ್ನ ಅಣ್ಣನಿಗೆ  (ಬಿ. ಎಂ. ಇದ್ದಿನಬ್ಬರ ಹಿರಿಯ ಮಗ, ನನ್ನ ದೊಡ್ಡಪ್ಪನ ಮಗ)
ಸಹೃದಯರು
ಬಿಡುಗಡೆಯ ಮಾತು
ಅಮೃತ ಮಾತು
ನನಗೂ ಮಾತು ಬರತ್ತೆ
ಅಧ್ಯಕ್ಷರ ಮಾತು
ಆತ್ಮೀಯ ವಾಸುದೇವ ಬೆಳ್ಳೆ
ಮಾತಿನ ಮೋಡಿ
ಲಡಾಯಿಯ ಮೊದಲ ಮಾತು