Saturday, October 25, 2014

ಒಂದಿಷ್ಟು ಕ್ರಾಂತಿ ಪದಗಳು

1
ಮಸೀದಿ-ಮಂದಿರದೊಳಗೆ
ದೇವರನ್ನು ಹುಡುಕುವ
ಭಕ್ತನಿಗೂ
ಕಮ್ಯುನಿಸ್ಟ್ ಪಕ್ಷದ ಕಚೇರಿಯೊಳಗೆ
ಕಮ್ಯುನಿಸಂ ಹುಡುಕುವ
ಕಾರ್ಯಕರ್ತನಿಗೂ
ಹೆಚ್ಚಿನ ವ್ಯತ್ಯಾಸವಿಲ್ಲ
2
ಮಾಕ್ಸಿಂ ಗಾರ್ಕಿಯ
ತಾಯಿ
ನಂದಿಗ್ರಾಮದ ಮುಸ್ಲಿಮರ
ಮನೆ ಮನೆಯಲ್ಲಿ
ಎದೆ ಬಡಿದುಕೊಂಡು  ಅಳುತ್ತಿದ್ದಾಳೆ
3
ಸಿಂಗೂರಿನಲ್ಲಿ
ಟಾಟಾ ಕಾರು ಹರಿದದ್ದು
ಮಾರ್ಕ್ಸ್ ನ ಎದೆಯ ಮೇಲೆ !
ಚಾಲಕ ಸೀಟಿನಲ್ಲಿ
ಕಾರಟ್ ಕೂತಿದ್ದರು
4
ಕಂಬಾಲಪಲ್ಲಿಯಲ್ಲಿ
ದಲಿತರು ಬೆಂದು
ಕರಟಿ ಹೋಗುತ್ತಿರುವಾಗ
ಭಾರತೀಯ ಕಮ್ಯುನಿಸ್ಟರ
ಕುಡುಗೋಲು ಮೊಂಡಾಗಿತ್ತು
ಸುತ್ತಿಗೆ ಹಿಡಿ ಕಳೆದು ಕೊಂಡಿತ್ತು
ನಕ್ಷತ್ರ
ವೈದಿಕರ ದೀಪಾವಳಿಗೆ
ಮನೆಯ ಹೆಬ್ಬಾಗಿಲಲ್ಲಿ
ಹೆಣವಾಗಿ ತೂಗುತಿತ್ತು
5
ಚೀನಾದ ತಿಯಾನೈನ್ ಚೌಕದಲ್ಲಿ
ಕೆಂಪು ಯುದ್ಧ ಟ್ಯಾಂಕರ್ ಗಳು
ನೂರಾರು ನಿಶ್ಶಸ್ತ್ರ ವಿದ್ಯಾರ್ಥಿಗಳ 

ಎದೆಯ ಮೇಲೆ ಹರಿದಾಗ
ನೆನಪಾಯಿತು
ರಕ್ತ ಸಾಕ್ಷಿಗಳಿಗೆ ಮರಣವಿಲ್ಲ
6
ಕುತ್ತಿಗೆಗೆ ಕೆಂಪು ಪಟ್ಟಿ
ಕಟ್ಟಿಕೊಂಡು ತಿರುಗಾಡುವ
ನನ್ನ ಕಮ್ಯುನಿಸ್ಟ್ ಗೆಳೆಯನನ್ನು ನೋಡಿದಾಗ
ನನಗೆ ಮೇಡ್ ಇನ್ ಚೈನಾ
ಹಣೆ ಪಟ್ಟಿ ಹೊತ್ತ
ನಕಲಿ ಸರಕುಗಳ ನೆನಪಾಗುತ್ತದೆ
7
ಪಕ್ಷದ ಕಚೇರಿಯಲ್ಲಿ
"ಕಮ್ಯುನಿಸಂ ಎಂದರೇನು?'' ಎನ್ನೋದನ್ನು
ಎರಡು ಗಂಟೆ ತಮ್ಮ ನಾಯಕನಿಂದ
ಕೊರೆಸಿಕೊಂಡ ಆತನಿಗೆ
ಏನೊಂದೂ ಅರ್ಥವಾಗಲಿಲ್ಲ

ತಲೆಗೆಟ್ಟು ಮನೆಗೆ ಬಂದ ಮಗನಿಗೆ
ತಂದೆ ಅಂಗಳದ ಕಡೆ ಕೈ ತೋರಿಸಿ
ಹೇಳಿದ "ಇದೆ ಕಮ್ಯುನಿಸಂ"
ಅಲ್ಲಿ ಕಾಗೆಗಳು ಜೊತೆಯಾಗಿ ಹಂಚಿ ತಿನ್ನುತ್ತಿದ್ದವು

3 comments:

  1. ಗುಜರಿ ಅಂಗಡಿಯ ಪದಗಳು ಗುಜರಿ ಅಂಗಡಿಯದ್ದೆ ಎಂದು ಖಾತ್ರಿ ಯಾಗಿದೆ. ದಾರಿತಪ್ಪಿದ ಯೋಚನೆ, ಜೀವನದಲ್ಲಿ ಸೋತ ಮನಸು, ಯಥಾ ಸ್ಥಿತಿ ಯನ್ನು ಒಪ್ಪಿಅಪ್ಪಿ ಕೊಂಡವರಿಂದ ಊಹಿಸಬಹುದಾದ ಕ್ರಾಂತಿಯ ಪದಗಳು.

    ReplyDelete
  2. "ನಕ್ಷತ್ರ
    ವೈದಿಕರ ದೀಪಾವಳಿಗೆ
    ಮನೆಯ ಹೆಬ್ಬಾಗಿಲಲ್ಲಿ
    ಹೆಣವಾಗಿ ತೂಗುತಿತ್ತು"

    ಒಟ್ಟಿನಲ್ಲಿ ವೈದಿಕರ ಮನೆಯಂಗಳದಲ್ಲಿ ಹೆಣ ಉರುಳಿಸುವ ಹುನ್ನಾರ. ಮಧ್ಯಯುಗೀನ ಆಕ್ರಮಣಕಾರರ ಮನಸ್ಥಿತಿಯೇ ಇಂದೂ ಕೂಡ. ಮಾಡುವುದು ಸೆಕ್ಯೂಲರಿಸಂ ಭಜನೆ ಮನಸ್ಸೊಳಗೆ ಹೆಣ ಉರಳಿಸುವುದರ ಧ್ಯಾನ!

    ReplyDelete