Wednesday, November 12, 2014

ಅಶಾಂತಿ ಪರ್ವ

ಅತ್ಯಾಚಾರ ಸುದ್ದಿಗಳು ಭಾರತದ ನೈತಿಕ ಬುಡವನ್ನೇ ಅಲುಗಾಡಿಸುತ್ತಿರುವ ಇಂದಿನ ಸಂದರ್ಭಕ್ಕೆ ಅನ್ವಯವಾಗುವ ಕವಿತೆ ದಿವಂಗತ ಬಿ. ಎಂ. ರಶೀದ್ ಬರೆದಿರುವ ‘ಅಶಾಂತಿ ಪರ್ವ’. ಅತ್ಯಾಚಾರವೆನ್ನುವುದು ಇಲ್ಲಿ ರಾಜಕೀಯ ರೂಪವನ್ನೂ ಪಡೆಯುತ್ತದೆ. ಶತಶತಮಾನಗಳಿಂದ ಹೇಗೆ ಭಾರತ ಬೇರೇ ಬೇರೆ ಶಕ್ತಿಗಳಿಂದ ದೌರ್ಜನ್ಯಕ್ಕೊಳಗಾಗುತ್ತಾ ಬಂತು ಮತ್ತು ಈಗ ತನ್ನವರಿಂದಲೇ ಹೇಗೆ ಶೋಷಣೆಗೀಡಾಗುತ್ತಿದೆ ಎನ್ನುವುದನ್ನು ತಿಳಿಸುವ ಪದ್ಯ ಇದು. ಬಿ. ಎಂ. ರಶೀದ್ ಅವರ ಪ್ರಪ್ರಥಮ ಪ್ರಕಟಿತ ಕವಿತೆ ಇದು. ಕಾಲೇಜು ವಿದ್ಯಾರ್ಥಿಯಾಗಿದ್ದಾಗ ಬರೆದಿರುವುದು. ಮಣಿಪಾಲ ಸಾಹಿತ್ಯ  ಸಂಘಟನೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಡಾ. ಟಿ. ಎಂ. ಎ. ಪೈ ಸ್ಮಾರಕ ಕನ್ನಡ ಆಶುಕವಿತಾ ರಚನೆಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಕವನ. ಆಗ ಕವಿ ಉಪ್ಪಿನಂಗಡಿ ಸರಕಾರಿ ಕಾಲೇಜಿನ ವಿದ್ಯಾರ್ಥಿಯಾಗಿದ್ದ. ಈ ಕವಿತೆ ಮುಂದೆ ತರಂಗ ವಾರಪತ್ರಿಕೆಯಲ್ಲಿ 1992ರಲ್ಲಿ ಪ್ರಕಟವಾಯಿತು. ಈ ಕವನವನ್ನು ದಿ. ಬಿ. ಎಂ. ರಶೀದ್ ಅವರ ಸಮಗ್ರ ಬರಹಗಳ ಸಂಕಲನ ‘ಪರುಷಮಣಿ’ ಸಂಕಲನದಿಂದ ಆರಿಸಲಾಗಿದೆ.


ಅಶಾಂತಿ ಪರ್ವ
1
ಅಂದು ನೀನು ಹರೆಯದ ಬಾಲೆ
ಸಮೃದ್ಧ ದೇಹದ ಲಲನೆ
ನಿನ್ನ ಕೈ ಕಾಲು ಬಿಗಿದು; ಮೈ ಬರಿದು-
ಮಾಡಿದರು ಅತ್ಯಾಚಾರ...
ಬಿಳಿಯ-ಕರಿಯ
ದಿವಾನ-ಜವಾನ
ಹಗಲೂ-ರಾತ್ರಿ ಎನ್ನದೇ...
ನಿನ್ನ ಉಬ್ಬು-ತಗ್ಗು, ಏರಿಳಿತಗಳಲ್ಲಿ
ಕೈಯಿಳಿಸಿ, ಧ್ವಜವ ನೆಟ್ಟರು ಕಿತ್ತಾಡಿ
ಬಾಯಿಯಿಲ್ಲದ ಕೋಟಿಯಲ್ಲಿ ಯಾರೋ
ಕೆಲವು ಮಕ್ಕಳು ನಿನ್ನ ಬಾಯಾದರು

2
ಕಳಚಿ ಬಿತ್ತು ನಿನ್ನ ಸುತ್ತಿದ ಸಂಕಲೆ
ನರ ಸತ್ತವರಿಗಾಗ ಬಂತು ಉಸಿರು
ಉದ್ಘೋಷಿಸಿದರು ನಿನ್ನ ಹೆಸರು ಮೇಲೆ
ನಿನ್ನ ಬಾಯಾದವರು ಹುಡುಕಿದರೆ ತೆಪ್ಪಗೆ ಮೂಲೆ
ನೀನು ಪೊರೆವ ತೊಟ್ಟಿಲಾದವಳು; ಮೆರೆವ ಮಡಿಲಾದವಳು
ಬೆದೆಗೆ ಬಂದ ನಿನ್ನ ಹೈಕಳೋ ‘ಈಡಿಪಸ್’ಗಳಾದರು
ಸರಿ ರಾತ್ರಿಯಲಿ ನಿನ್ನ ಉಡಿಗೆ ಕೈಯಿಕ್ಕಿದರು
ಹಾರಿದರು; ಏರಿದರು; ಊರಿದರು
ಬರಿ ಬರಿದು ಮಾಡಿ ತೋಡಿದರು
ಖಾದಿ-ಗಾದಿಗಾಗಿ ನಿನ್ನ ಅಡವಿಟ್ಟು ಮಾರಿದರು

3
ಈಗೆಲ್ಲಿ ನಿನ್ನೊಳಗಿನ ಲಾಲಿತ್ಯದ ಬಾಲೆ...?
ನೀನೋ ಈಗ ಮೂರು ಕಾಸಿಗೂ ಬೇಡದ
ಬಡಕಲು ಮೈಯ ಸೂಳೆ!
ಬಹು ಪರಾಕು; ಭಟ್ಟಂಗಿತನದ ‘ಬ್ರಾ’ದೊಳಗಿರುವ
ನಿನ್ನ ಬತ್ತಿ ಬರಡಾದ ಮೊಲೆಗಾಗಿ
ಹಂಬಲಿಸಿ ಬರುವ ಹೈಕಳಿಗೆ ಏನನ್ನಿಡುವೆ ನಾಳೆ...?

4
ನಿನ್ನ ತಲೆ ಕಾಶ್ಮೀರ,
ಹೃದಯ ಪಂಜಾಬ
ಭುಜದಲ್ಲೊಂದು ಅಯೋಧ್ಯೆ,
ಕಾಲ ಬುಡದಲ್ಲೊಂದು ಲಂಕೆ
ಮೈಯ ನರನರಗಳಲ್ಲೂ ಕುಲುಮೆ ಬೆಂಕಿ
ಮುಖದ ಸುಕ್ಕುಗಳಲ್ಲಿ ಹೃದಯದ ಬಿಕ್ಕು
ತನ್ನೊಡನೆ ಗರ್ಭದಲ್ಲಿ
ಜೀವ ಸೆಲೆಯೊರತೆಯ ಕೊರತೆಗೆ
ಸುಟ್ಟು ಕರಕಲಾದ ರಾಷ್ಟ್ರಪಿತನ ಕನಸಿನ ಬೀಜಗಳು
ಮತ್ತೆ ಚಿಗುರೀತೆ... ? ಚಿಗಿತು ಅರಳೀತೇ... ?

No comments:

Post a Comment