Sunday, October 25, 2015

ಲಾರ್ಡ್ ಲಿವಿಂಗ್‌ಸ್ಟನ್ 7000 ಕಂಡಿ: ಕಾಲದಾಚೆಗೊಂದು ವಿಫಲ ಪಯಣ

ನಿರ್ದೇಶಕನ ಬಳಿ ಒಂದು ಒಳ್ಳೆಯ ಚಿತ್ರ ಮಾಡಬೇಕು ಎನ್ನುವ ಉದ್ದೇಶ ಇದ್ದರೆ ಸಾಕಾಗುವುದಿಲ್ಲ. ಅದಕ್ಕೆ ಬೇಕಾದ ತಯಾರಿಯೂ ಸಾಕಷ್ಟಿರಬೇಕಾಗುತ್ತದೆ. ವರ್ತಮಾನವನ್ನು ಮುಟ್ಟುವ ಕತೆಯ ಎಳೆಯನ್ನು ಇಟ್ಟುಕೊಂಡೂ ಪ್ರತಿಭಾವಂತ ನಿರ್ದೇಶಕ ಅನಿಲ್ ರಾಧಾಕೃಷ್ಣನ್ ಮೆನನ್ ‘ಲಾರ್ಡ್ ಲಿವಿಂಗ್‌ಸ್ಟನ್7000 ಕಂಡಿ’ ಚಿತ್ರದಲ್ಲಿ ವಿಫಲವಾಗುವುದರ ಹಿಂದಿರುವ ಕಾರಣ ಒಂದೇ, ತಯಾರಿಯ ಕೊರತೆ. ಚಿತ್ರಕತೆ ಅತ್ಯಂತ ದುರ್ಬಲವಾಗಿರುವುದು. ಚಿತ್ರದ ಬಿಗಿ ನಿರೂಪಣೆಗೆ ಧಕ್ಕೆ ತರುವ ಪಾತ್ರ ಪೋಷಣೆ, ಪೂರ್ವನಿರ್ಧರಿತವಾದ ಚಿತ್ರದ ನಡೆ ಚಿತ್ರದ ಇನ್ನಷ್ಟು ಋಣಾತ್ಮಕ ಅಂಶಗಳು. ಒಂದು ಒಳ್ಳೆಯ ಉದ್ದೇಶದಿಂದ ಮಾಡಿದ ಚಿತ್ರ, ಅದ್ಭುತ ಛಾಯಾಗ್ರಹಣದ ಹೊರತಾಗಿಯೂ, ಬಿಗಿ ನಿರ್ದೇಶನದ ಲೋಪದಿಂದಾಗಿ ಪರದೆಯ ಮೇಲೆ ಪರಿಣಾಮಕಾರಿಯಾಗಿ ಮೂಡಿ ಬಂದಿಲ್ಲ. ಇನ್ನಷ್ಟು ಪೂರ್ವ ಸಿದ್ಧತೆ ಇದ್ದಿದ್ದರೆ ಈ ಚಿತ್ರ ಖಂಡಿತವಾಗಿಯೂ ಭಾರತದ ‘ಅವತಾರ್’ ಎಂದು ಕರೆಯಲ್ಪಡುತ್ತಿತ್ತೋ ಏನೋ. 
ಅನಿಲ್ ರಾಧಾಕೃಷ್ಣನ್ ಎಂದಾಕ್ಷಣ ನಮಗೆ ನೆನಪಾಗುವುದು ‘ನಾರ್ಥ್ 24 ಕಾದಂ’. ಫಾಸಿಲ್ ಮತ್ತು ನೆಡುಮುಡಿ ವೇಣು ನಟಿಸಿರುವ ಈ ಚಿತ್ರ ವಿಮರ್ಶಕರನ್ನೂ ಪ್ರೇಕ್ಷಕರನ್ನೂ ಸಮಾನವಾಗಿ ಸೆಳೆದಿತ್ತು. 24 ಕಾದಂ ಎನ್ನುವುದು ದಾರಿಯನ್ನು ಅಳೆಯುವ ಹಳ್ಳಿಯ ಜನರ ಒಂದು ಮಾಪನ. ನಗರದಲ್ಲಿ ಐಟಿ ಜೀವನದಲ್ಲಿ ಒಂದಾಗಿ ಬಿಟ್ಟ ನಾಯಕ, ಆಕಸ್ಮಿಕವಾಗಿ ಹಳ್ಳಿಯ ಕಡೆಗೆ ಪಯಣ ಬೆಳೆಸುವ ಕತೆ ಮತ್ತು ಅದು ಅವನ ಬದುಕಿನಲ್ಲಿ ಮಾಡುವ ಬದಲಾವಣೆಯೇ ಚಿತ್ರದ ಕತೆ. ಪ್ರತಿ ದೃಶ್ಯಗಳನ್ನು ಹೃದಯ ಮುಟ್ಟುವಂತೆ ನಿರೂಪಿಸಿದ್ದರು ನಿರ್ದೇಶಕ ಮೆನನ್. ಒಂದು ರೀತಿಯಲ್ಲಿ ‘ನಾಥ್ 24 ಕಾದಂ’ ಗಿಂತ ಇನ್ನಷ್ಟು ದೂರದ ಪಯಣ ‘7000 ಕಂಡಿ’. ಕಾದಂ ಚಿತ್ರದಲ್ಲಿ ಈ ಕಂಡಿಯ ಅಳತೆಯೂ ಬರುತ್ತದೆ. ಈ ಅಳತೆ ಅತ್ಯಂತ ಪುರಾತನವಾದುದು. ನಗರದಲ್ಲಿ ಬೇರೆ ಬೇರೆ ರೀತಿಯ ಒತ್ತಡಗಳಿಗೆ ಸಿಲುಕಿರುವ ಕೆಲವರು, ಹೀಗೊಂದು 7000 ಕಂಡಿ ದೂರದ ಪ್ರಯಾಣಕ್ಕೆ ತೆರೆದುಕೊಳ್ಳುವುದೇ ಕತೆಯ ಮುಖ್ಯ ವಸ್ತು. ಫಿಲಿಪ್ಪೋಸ್ ಜಾನ್ ವರ್ಕಿ(ಕುಂಜಾಕೋ ಬೋಬನ್) ಎಂಬ ಪ್ರಕೃತಿ ತಜ್ಞ, ಪರಿಸರ ಪ್ರಿಯ, ಅನ್ವೇಷಕನಿಂದ ನಗರದಲ್ಲಿ ವಿವಿಧ ರೀತಿಯಲ್ಲಿ ಜೀವನ ಮಾಡುತ್ತಿರುವ ಕೆಲವರಿಗೆ ಇಂತಹದೊಂದು ಪ್ರವಾಸದ ಆಹ್ವಾನ ಬರುತ್ತದೆ. ಆ ಆಹ್ವಾನವನ್ನು ಕೆಲವರಷ್ಟೇ ಸ್ವೀಕರಿಸಿ, ಸುದೀರ್ಘವಾದ ಕಾಡು ಪ್ರಯಾಣಕ್ಕೆ ಸಿದ್ಧವಾಗುತ್ತಾರೆ. ಒಬ್ಬ ಆದಿವಾಸಿಯ ಮೂಲಕ ಅವರು ಕಾಲು ನಡಿಗೆಯ ಮೂಲಕ 7000 ಕಂಡಿ ಅರಣ್ಯ ಪ್ರದೇಶವನ್ನು ಸೇರಬೇಕು. ಈ ಪ್ರದೇಶದ ಕುರಿತಂತೆ ವದಂತಿಗಳಿವೆ. ಭೂತಪ್ರೇತಗಳ ಕತೆಗಳೂ ಇವೆ. ಆದರೆ ಈ ನಿಗೂಢ ಅರಣ್ಯ ಪ್ರದೇಶದಲ್ಲಿ ಹೊರ ಜಗತ್ತಿನ ಪರಿಚಯವೇ ಇಲ್ಲದೆ ಬುಡಕಟ್ಟು ಜನಾಂಗವೊಂದು ಬದುಕುತ್ತಿರುತ್ತದೆ. ಅವರದೇ ಸಂಸ್ಕೃತಿ, ಅವರದೇ ತಂತ್ರಜ್ಞಾನ, ನಗರದ ಸ್ಪರ್ಶವೇ ಇಲ್ಲದ ಅವರ ಬದುಕಿನ ಶೈಲಿ. ದಟ್ಟ ಮರಗಳ ನಡುವೆ, ಪರಿಸರಕ್ಕೆ ಅನ್ಯೋನ್ಯವಾಗಿ ಬೆಸೆದುಕೊಂಡಿರುವ ಅವರ ಜೀವನ. ಜಾನ್ ವರ್ಕಿಯ ಕಾರಣದಿಂದಾಗಿ ಒಂದಿಷ್ಟು ಪಾತ್ರಗಳು ಆ ಪ್ರದೇಶವನ್ನು ತಲುಪುತ್ತವೆ. ಆದರೆ ಒಂದೆಡೆ 7000 ಕಂಡಿಯಲ್ಲಿ ಜೀವಿಸುತ್ತಿರುವ ಆದಿವಾಸಿಗಳ ಬದುಕು ಅಪಾಯದಲ್ಲಿದೆ. ಬಹುದೊಡ್ಡ ಬಿಲ್ಡರ್‌ಗಳು ಕಾಡು ಕಡಿದು ಅಭಿವೃದ್ಧಿ ಯೋಜನೆಗೆ ನೀಲನಕಾಶೆ ರೂಪಿಸಿದ್ದಾರೆ. ಅವರಿಂದ ಈ ಬುಡಕಟ್ಟು ಜನರನ್ನು ಈ ಯಾತ್ರಿಗಳು ಪಾರು ಮಾಡುವಲ್ಲಿ ಯಶಸ್ವಿಯಾಗುತ್ತಾರೋ, ಇಲ್ಲವೋ ಎನ್ನುವುದು ಚಿತ್ರದ ಒಟ್ಟು ಕತೆ.
ಚಿತ್ರ ಹಾಲಿವುಡ್‌ನ ‘ಅವತಾರ್’ನ್ನು ಹೋಲುತ್ತದೆ. ದಟ್ಟ ಕಾಡನ್ನು ಛಾಯಾಗ್ರಾಹಕ ರಾಜೇಶ್ ನಾಯರ್ ಕಟ್ಟಿಕೊಟ್ಟ ರೀತಿ ಅದ್ಭುತವಾದುದು. ಇಲ್ಲಿ ಕಾಡು ಬಿಟ್ಟರೆ ನೋಡುವುದಕ್ಕೆ ಏನೂ ಇಲ್ಲ. ಈ ಪ್ರಯಾಣ ಒಂದು ಸಾಕ್ಷ ಚಿತ್ರವಾಗದಂತೆ ನೋಡಿಕೊಳ್ಳುವುದು ನಿರ್ದೇಶಕರ ಹೊಣೆಗಾರಿಕೆಯಾಗಿತ್ತು. ಇಲ್ಲಿರುವ ಎಲ್ಲ ಪಾತ್ರಗಳೂ ಬಿಡಿ ಬಿಡಿಯಾಗಿವೆ ಮತ್ತು ಪೇಲವವಾಗಿವೆ. ಚಿತ್ರಕತೆಯ ಹೆಣಿಗೆ ದುರ್ಬಲವಾಗಿದೆ. ಆದಿವಾಸಿಗಳ ಬಗ್ಗೆ ಆರಂಭದಲ್ಲಿ ಕುತೂಹಲ ಹುಟ್ಟುತ್ತದೆಯಾದರೂ, ಅವುಗಳೂ ಅಂತಿಮವಾಗಿ ಕೃತಕವೆನಿಸುತ್ತದೆ. ನಿರ್ದೇಶಕನ ಆಶಯವಷ್ಟೇ ನಮ್ಮ ಗಮನಸೆಳೆಯುತ್ತದೆ. ಪರದೆಯ ಮೇಲೆ ಅದಕ್ಕೆ ಜೀವಕೊಡುವಲ್ಲಿ, ತನ್ನ ಆಶಯವನ್ನು ಸಿನೆಮಾವಾಗಿ ಮಾರ್ಪಡಿಸುವಲ್ಲಿ ಅವರು ವಿಫಲರಾಗಿದ್ದಾರೆ.
ಆದಿವಾಸಿಗಳು, ಬುಡಕಟ್ಟು, ಕಾಡು ಹಾಗೂ ಅಭಿವೃದ್ಧಿಯ ನಡುವಿನ ಸಂಘರ್ಷ ವರ್ತಮಾನದ ಜ್ವಲಂತ ಸಮಸ್ಯೆಯಾಗಿದೆ. ಇಂತಹದೊಂದು ವಸ್ತುವನ್ನು ಇಟ್ಟುಕೊಂಡು ಸಿನಿಮಾ ಮಾಡಲು ಹೊರಟ ರಾಧಾಕೃಷ್ಣನ್ ಸಾಹಸವನ್ನು ಮೆಚ್ಚಬೇಕು. ಅವರ ಅಗಾಧ ಶ್ರಮ, ಎಲ್ಲ ವ್ಯರ್ಥವಾಯಿತೇ ಎಂಬ ಖೇದ ನಮ್ಮನ್ನು ಬಹಳ ಸಮಯ ಕಾಡುತ್ತದೆ. ಅದೇನೇ ಇರಲಿ, ಕಾಡು, ಮರ, ಪರಿಸರ, ಬುಡಕಟ್ಟು ಜನರ ಬದುಕಿನ ಕುರಿತಂತೆ ಕಾಳಜಿಯುಳ್ಳ, ಮಾನವೀಯ ಸಂವೇದನೆಗಳ ಕುರಿತು ಗೌರವವುಳ್ಳವರು ಒಮ್ಮೆ ಈ ಚಿತ್ರ ನೋಡಬಹುದು. ನಿರ್ದೇಶಕನ ವೈಫಲ್ಯದ ನಡುವೆಯೂ ಕೆಲವು ದೃಶಗಳು ನಮ್ಮೊಳಗೆ ಉಳಿದುಕೊಳ್ಳುತ್ತವೆ. 

No comments:

Post a Comment