Monday, November 20, 2017

ಕುಂಡದೊಳಗಿಟ್ಟು ನಾವು ಸಾಕುತ್ತಿರುವ ಸೌಹಾರ್ದ!

ಇತ್ತೀಚೆಗೆ ಕರಾವಳಿಯಲ್ಲಿ ಜಿಲ್ಲಾ ಮಟ್ಟದ ಒಂದು ಕ್ರಿಕೆಟ್ ಪಂದ್ಯ ‘ಸೌಹಾರ್ದ’ ಕಾರಣಕ್ಕಾಗಿ ಸುದ್ದಿಯಾಯಿತು. ಈ ಪಂದ್ಯದ ಪ್ರಮುಖ ನಿಯಮಾವಳಿ ಏನೆಂದರೆ ‘ಭಾಗವಹಿಸುವ ಪ್ರತೀ ತಂಡದಲ್ಲಿ ಎಲ್ಲ ಧರ್ಮಕ್ಕೆ ಸೇರಿದ ಆಟಗಾರರು ಇರಬೇಕು” ಎನ್ನುವುದು. ಪತ್ರಿಕೆಗಳಲ್ಲೂ ಈ ಸೌಹಾರ್ದ ಕ್ರಿಕೆಟ್ ಪಂದ್ಯವನ್ನು ಶ್ಲಾಘಿಸಿ ಲೇಖನಗಳು ಪ್ರಕಟವಾದವು. ೨೦ ವರ್ಷಗಳ ಹಿಂದಿನ ಮಾತು. ನಮ್ಮ ಊರಿನ ಮೈದಾನದಲ್ಲಿ ಆಟದ ಖುಷಿಗಾಗಿ ಆಟಗಾರರು ಸೇರುತ್ತಿದ್ದರೇ ಹೊರತು, ಅವರು ತಮ್ಮ ಧರ್ಮದ ಪ್ರತಿನಿಧಿಗಳಾಗಿ ಅಲ್ಲಿ ಸೇರುತ್ತಿರಲಿಲ್ಲ. ಸಂಜೆಯಾದಾಕ್ಷಣ ಕ್ರಿಕೆಟ್ ಬ್ಯಾಟುಗಳ ಜೊತೆಗೆ ಸೇರುವ ನಝೀರ್, ಮೋಹನ, ರಾಮಕೃಷ್ಣ, ಮಜೀದ್, ಪಿಂಟೋ...ಇವರೆಲ್ಲ ತಮ್ಮ ಆಟದ ಸಾಮರ್ಥ್ಯಕ್ಕನುಗುಣವಾಗಿ ಅಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತಿದ್ದರು. ಸಂಜೆ ಏಳರವರೆಗೂ ಆಡಿ, ಬಳಿಕ ಒಂದು ಅರ್ಧ ಗಂಟೆ ‘ಪಟ್ಟಾಂಗ’ ಹೊಡೆದು ಅವರವರ ಮನೆಗೆ ತೆರಳುವುದು ಹದಿಹರೆಯದ ಹುಡುಗರ ಒಂದು ದಿನಚರಿಯೇ ಆಗಿತ್ತು. ಮುಖ್ಯವಾಗಿ, ಎಲ್ಲ ಜಾತಿ ಧರ್ಮಗಳನ್ನು ಮೀರಿ ನಾವಿಲ್ಲಿ ಒಂದಾಗಿದ್ದೇವೆ ಎನ್ನುವ ಅರಿವೂ ಅವರಿಗಿರಲಿಲ್ಲ. ಶಾಲೆಗಳನ್ನು ಹೊರತು ಪಡಿಸಿದರೆ, ನಮ್ಮೆಲ್ಲರನ್ನು ಜಾತಿ ಧರ್ಮದಾಚೆಗೆ ಒಂದಾಗಿಸುತ್ತಿದ್ದುದು ಈ ಮೈದಾನವೇ ಆಗಿತ್ತು. ಯಾವ ಸೌಹಾರ್ದದ ಭಾಷಣಗಳು, ದೇಶಭಕ್ತಿಯ ಘೋಷಣೆಗಳು ನಮಗೆ ಒಂದಾಗುವುದಕ್ಕೆ ಅಗತ್ಯವಿರಲಿಲ್ಲ. ಮನೆಯ ಬಳಿಕ ನಾವು ಹೊರಜಗತ್ತನ್ನು ಮುಖಾಮುಖಿಯಾಗುವುದೇ ಊರಿನ ಈ ಮೈದಾನಗಳ ಮೂಲಕ. ನಮ್ಮನ್ನು ಆ ಊರಿನ ಅಧಿಕೃತ ಸದಸ್ಯನಾಗಿ ಘೋಷಿಸುವುದು ಈ ಮೈದಾನಗಳೇ ಆಗಿದ್ದವು.
ನಮ್ಮ ಮನೆಯ ಹೊರಗಿನ ಸಮಾಜ ನಮಗೆ ಮೊದಲು ತೆರೆದುಕೊಳ್ಳುವುದು ಶಾಲೆಗಳ ಮೂಲಕ. ಇಲ್ಲಿ ಬೇರೆ ಬೇರೆ ಧರ್ಮ, ಸಂಸ್ಕೃತಿ, ಭಾಷೆಗಳ ಮುಖಾಮುಖಿಯಾಗುತ್ತದೆ. ಯಾರೂ ನಮಗೆ ಇನ್ನೊಂದು ಧರ್ಮವನ್ನು, ಭಾಷೆಯನ್ನು ಪರಿಚಯಿಸಬೇಕಾಗಿರಲಿಲ್ಲ. ನಾವೆಲ್ಲ ತುಳು ಭಾಷೆಯನ್ನು ಯಾವುದೇ ಶಾಲೆಯಲ್ಲಿ ಅಥವಾ ಗುರುಗಳಲ್ಲಿ ಕಲಿತಿರುವುದಲ್ಲ. ಮನೆ ಭಾಷೆ ಬ್ಯಾರಿಯಾಗಿದ್ದರೆ, ಊರ ಹುಡುಗರ ಜೊತೆಗೆ ಮೈದಾನದಲ್ಲಿ, ಶಾಲೆಯಲ್ಲಿ ಆಟವಾಡುತ್ತಲೇ ತುಳುವನ್ನು ನಮ್ಮದಾಗಿಸಿಕೊಂಡೆವು. ಜಾತ್ರೆಗಳಲ್ಲಿ, ಉರೂಸುಗಳಲ್ಲಿ ಓಡಾಡುತ್ತಾ ವಿವಿಧ ಸಂಸ್ಕೃತಿಗಳನ್ನು ಸಹಜವಾಗಿ ನಮ್ಮೊಳಗೆ ಇಳಿಸಿಕೊಳ್ಳತೊಡಗಿದೆವು. ಶಾಲೆಯಲ್ಲಿ ಒಟ್ಟಾಗಿ ಓದುತ್ತಾ, ಜಗಳ ಮಾಡುತ್ತಾ, ಆಡುತ್ತಾ ಎಲ್ಲರೂ ನಮ್ಮವರಾದರು. ನಾನು ಓದಿರುವುದು ಚರ್ಚ್ ಶಾಲೆಯಾಗಿತ್ತು. ಆ ಕಾಲದಲ್ಲಿ ಎಲ್ಲ ಧರ್ಮೀಯರು ಆದ್ಯತೆಯ ಮೇಲೆ ಚರ್ಚ್ ಶಾಲೆಗಳಿಗೇ ತಮ್ಮ ಮಕ್ಕಳನ್ನು ಸೇರಿಸುತ್ತಿದ್ದರು. ಆದರೆ ಎಂದಿಗೂ ಅದು ಒಂದು ಧರ್ಮೀಯರ ಶಾಲೆ ಎಂದು ನಮಗಾಗಲಿ, ನಮ್ಮ ಪಾಲಕರಿಗಾಗಲಿ ಅನಿಸಿರಲಿಲ್ಲ. ನಾವ್ಯಾರೂ ಆ ಶಾಲೆಯಲ್ಲಿ ಕಲಿತ ಕಾರಣಕ್ಕೆ ಮತಾಂತರ ಹೊಂದಲಿಲ್ಲ. ಶಾಲೆಯಲ್ಲಿ ಕ್ರಿಸ್ಮಸ್, ದೀಪಾವಳಿ ಆಚರಿಸಿದ ಸಂದರ್ಭಗಳಲ್ಲಿ, ಅದೆಲ್ಲ ಬೇರೆಯವರದು ಎಂದೆನಿಸದೇ ನಾವೆಲ್ಲರೂ ತುಂಬು ಖುಷಿಯಿಂದ ಆಚರಿಸುತ್ತಿದ್ದೆವು. ಇಂದಿಗೂ ದೀಪಾವಳಿ ಹಬ್ಬ ಬಂದಾಗ ಹೃದಯದಲ್ಲೇನೋ ಅರಳಿದಂತಾಗುವುದು ಇದೇ ಕಾರಣಕ್ಕೆ ಇರಬಹುದು. ಇಲ್ಲಿ, ಯಾವುದೇ ಭಾಷಣ, ಸಮ್ಮೇಳನ, ಧಾರ್ಮಿಕ ಪುಸ್ತಕಗಳು ನಮ್ಮನ್ನು ಪರಸ್ಪರ ಪರಿಚಯಿಸಿ ಒಂದಾಗಿಸಿರುವುದಲ್ಲ. ಒಂದು ರೀತಿಯಲ್ಲಿ, ಸೌಹಾರ್ದವೆನ್ನುವುದು ನಮ್ಮ ಕಾಲಕ್ಕೆ, ಸಹಜವಾಗಿ ಹರಡಿಕೊಂಡ ಕಾಡುಗಳಾಗಿದ್ದವು. ಅದಕ್ಕೆ ಯಾರೂ ನೀರುಣಿಸಿರಲಿಲ್ಲ, ಯಾರೂ ಗೊಬ್ಬರ ಹಾಕಿರಲಿಲ್ಲ. ಆದರೂ ಅದು ಯಥೇಚ್ಛವಾಗಿ, ಸಮೃದ್ಧವಾಗಿ ಹರಡಿಕೊಳ್ಳುತ್ತಾ ಹೋಯಿತು. ಆದುದರಿಂದಲೇ ನಮ್ಮ ಪಾಲಿಗೆ ಯಾರೂ ಅನ್ಯರಲ್ಲ, ಯಾವುದೂ ಅನ್ಯವಾಗಿರಲಿಲ್ಲ. ನಮಗೆ ಆಗ ‘ಗೆಳೆಯ’ರಷ್ಟೇ ಇದ್ದರು. ಇಂದಿನ ಹಾಗೆ, ಮುಸ್ಲಿಮ್ ಗೆಳೆಯರು, ಹಿಂದೂ ಗೆಳೆಯರು, ಕ್ರಿಶ್ಚಿಯನ್ ಗೆಳೆಯರು ಇದ್ದಿರಲಿಲ್ಲ. ಹಿಂದೂ ಆಟಗಾರ, ಮುಸ್ಲಿಮ್ ಆಟಗಾರ ಎನ್ನುವ ಭಾಷೆಯೂ ಆಗ ಚಾಲ್ತಿಯಲ್ಲಿರಲಿಲ್ಲ. ವಿಪರ್ಯಾಸವೆಂದರೆ, ಇಂದು ಅಂತಹ ಸಹಜವಾಗಿ ಬೆಳೆದ, ಬೆಳೆಯುತ್ತಿರುವ ಕಾಡುಗಳನ್ನೆಲ್ಲ ಸಮಾಜ ಭಾಗಶಃ ಕಡಿದು ಹಾಕಿದೆ. ವಿವಿಧ ಜಾತಿ, ಧರ್ಮ, ಸಂಸ್ಕೃತಿಯ ಪುಟಾಣಿ ಮಕ್ಕಳು ಒಟ್ಟು ಸೇರುವ ಎಲ್ಲ ಮೈದಾನಗಳನ್ನು, ವೇದಿಕೆಗಳನ್ನು ನಾಶ ಮಾಡಿ, ನಾವು ನಮ್ಮ ನಮ್ಮ ಕಾಂಪೌಂಡ್‌ನೊಳಗೆ ಕುಂಡದಲ್ಲಿ ಸೌಹಾರ್ದ ಗಿಡಗಳನ್ನು ನೆಟ್ಟು ಬೆಳೆಸಲು ಹೊರಟಿದ್ದೇವೆ. 

ಇತ್ತೀಚೆಗೆ ಎಂಟನೆ ತರಗತಿಯಲ್ಲಿ ಕಲಿಯುತ್ತಿರುವ ನನ್ನ ಪರಿಚಯದ ಹುಡುಗನ ಜೊತೆಗೆ ನಾನು ಮಾತನಾಡಿದೆ. ಅವನು ಓದುತ್ತಿರುವ ಶಾಲೆಯ ಹೆಸರು ಕೇಳಿದೆ. ಅದು ಧಾರ್ಮಿಕ ಹಿನ್ನೆಲೆಯಿರುವ ಸಂಘಟನೆಯೊಂದು ನಡೆಸುವ ಶಾಲೆ. ಎಲ್‌ಕೆಜಿಯಿಂದ ಹಿಡಿದು ಎಂಟನೆಯ ತರಗತಿಯವರೆಗೂ ಅವನು ಅದೇ ಶಾಲೆಯಲ್ಲಿ ಕಲಿಯುತ್ತಾ ಬಂದಿದ್ದಾನೆ. ‘ನಿನ್ನ ಶಾಲೆಯಲ್ಲಿ ಬೇರೆ ಧರ್ಮೀಯರು ಎಷ್ಟಿದ್ದಾರೆ?” ಎಂಬ ಪ್ರಶ್ನೆಗೆ ಆಘಾತಕಾರಿ ಉತ್ತರ ದೊರಕಿತು. ಅವನ ಶಾಲೆಯಲ್ಲಿ ಒಬ್ಬನೇ ಒಬ್ಬ ಬೇರೆ ಧರ್ಮೀಯ ವಿದ್ಯಾರ್ಥಿಯಿರಲಿಲ್ಲ. ಈ ವಿದ್ಯಾರ್ಥಿ ತನ್ನ ಮನೆಯಿಂದ ಹೊರಗೆ, ಸಮಾಜಕ್ಕೆ ತೆರೆದುಕೊಳ್ಳುವುದು ಈ ಶಾಲೆಯ ಮೂಲಕವಾಗಿದೆ. ಶಾಲೆಯಿಂದ ನೇರವಾಗಿ ಈತ ಮನೆಗೆ ಬರುತ್ತಾನೆ. ಮನೆಯಿಂದ ಟ್ಯೂಶನ್‌ಗೆ ಹೋಗುತ್ತಾನೆ. ಬಳಿಕ ಮತ್ತೆ ಮನೆಗೆ. ತನ್ನ ಧರ್ಮೀಯರನ್ನು ಬಿಟ್ಟರೆ ಇನ್ನೊಂದು ಧರ್ಮದ ವಿದ್ಯಾರ್ಥಿಯನ್ನು ಭೇಟಿಯಾಗುವ ಅವಕಾಶವೇ ಅವನಿಗೆ ಈವರೆಗೆ ಸಿಕ್ಕಿಲ್ಲ. ಎಲ್ಲೋ ನೆರೆಯಲ್ಲಿ ಅಥವಾ ಹೊರಗಡೆ ಸಿಕ್ಕಿದರೂ ಅದು ಅತ್ಯಲ್ಪ. ಹಿಂದಿನಂತೆ ಮಕ್ಕಳನ್ನು ಹೊರಗಡೆ ಸಾರ್ವಜನಿಕ ಮೈದಾನಕ್ಕೆ ಆಟ ಆಡಲು ಸ್ವತಂತ್ರವಾಗಿ ಕಳುಹಿಸುವ ಪರಿಪಾಠವೂ ಈಗ ಇಲ್ಲ. ಈ ಹುಡುಗ ಹತ್ತನೇ ತರಗತಿಯವರೆಗೂ ಆ ಶಾಲೆಯಲ್ಲಿ ಕಲಿತು, ಬಳಿಕ ಕಾಲೇಜಿಗೆ ಕಾಲಿಡುತ್ತಾನೆ. ಅಂದರೆ ಹೊರಗಿನ ಸಮಾಜಕ್ಕೆ ಈತ ನಿಜವಾದ ಅರ್ಥದಲ್ಲಿ ಕಾಲಿಡುವುದು ತನ್ನ ಹತ್ತನೇ ತರಗತಿಯ ಬಳಿಕ. ಕಾಲೇಜಿಗೆ ಕಾಲಿಡುವುದೆಂದರೆ, ಈವರೆಗೆ ಅವನ ಕಣ್ಣಿಗೆ ಕಟ್ಟಿದ ಪಟ್ಟಿಯನ್ನು ಒಮ್ಮೆಲೆ ಬಿಚ್ಚಿದಂತೆ. ತನ್ನೆದುರು ಕಾಣುತ್ತಿರುವುದೆಲ್ಲವೂ ಅವನಿಗೆ ‘ಅನ್ಯ’ ಅನ್ನಿಸತೊಡಗುತ್ತದೆ. ಇನ್ನೊಂದು ಧರ್ಮೀಯರ ಹೆಸರು, ಮಾತು, ಸಂಸ್ಕೃತಿ ಯಾವುದೂ ಅವನಿಗೆ ಪರಿಚಿತವಲ್ಲ. ಅವನು ಅದನ್ನು ಆ ಹೊತ್ತಿನಲ್ಲಿ ಹೊಸದಾಗಿ ತನ್ನದಾಗಿಸಲು ಪ್ರಯತ್ನಿಸಬೇಕು. ಬಾಲ್ಯದಲ್ಲೇ ಅವರ ಜೊತೆ ಜೊತೆಯಾಗಿ ಬಾಳುತ್ತಾ ತನ್ನದಾಗಿಸಿಕೊಳ್ಳುವುದಕ್ಕೂ, ಅನಿವಾರ್ಯ ಎನ್ನುವ ಕಾರಣಕ್ಕಾಗಿ ಇನ್ನೊಬ್ಬರನ್ನು ತನ್ನದಾಗಿಸಿಕೊಳ್ಳುವ ಪ್ರಯತ್ನಕ್ಕೂ ವ್ಯತ್ಯಾಸವಿದೆ. ಯಾವುದನ್ನೂ ಅವನಿಗೆ ಸಹಜವಾಗಿ ಸ್ವೀಕರಿಸುವುದು ಕಷ್ಟವಾಗುತ್ತದೆ. ಆದುದರಿಂದ, ಆತ ಬೆರೆಯುವುದಕ್ಕಾಗಿ ತನ್ನ ಧರ್ಮೀಯನನ್ನೇ ಹುಡುಕಿಕೊಂಡು ಹೋಗುತ್ತಾನೆ. ಇದು ಯಾವುದೇ ಒಂದು ಧರ್ಮಕ್ಕೆ ಸೀಮಿತವಾಗಿರುವ ಅಪಾಯ ಅಲ್ಲ. ವಿಪರ್ಯಾಸವೆಂದರೆ, ಒಂದು ಕಾಲದಲ್ಲಿ ಲಕ್ಷಾಂತರ ಶಿಕ್ಷಿತರನ್ನು ಸೃಷ್ಟಿಸಿದ ಕ್ರಿಶ್ಚಿಯನ್ ಶಾಲೆಗಳಿಗೂ ಇದೀಗ ಧರ್ಮದ ಕಳಂಕವನ್ನು ಅಂಟಿಸಲಾಗಿದೆ. ಕ್ರಿಶ್ಚಿಯನ್ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಿದರೆ ಅವರು ತಮ್ಮ ಧರ್ಮವನ್ನು ಮಕ್ಕಳ ತಲೆಯೊಳಗೆ ತುಂಬುತ್ತಾರೆ ಎಂಬ ಅಪಪ್ರಚಾರ ಹಿಂದೂಗಳಲ್ಲೂ, ಮುಸ್ಲಿಮರಲ್ಲೂ ತಿಳಿದೂ ತಿಳಿಯದಂತೆ ಹರಡಿಕೊಂಡಿದೆ. ಇತ್ತೀಚೆಗೆ ಒಬ್ಬ ಪುಟಾಣಿ ವಿದ್ಯಾರ್ಥಿಯ ಬಳಿ ಕೇಳಿದ್ದೆ “ನಿಮ್ಮ ಮನೆಯ ಹತ್ತಿರವೇ ಆ ಶಾಲೆಯಿರುವಾಗ ನೀನೇಕೆ ಅಷ್ಟು ದೂರ ಹೋಗಿ ಕಲಿಯಬೇಕು?”. ಆತ ತಕ್ಷಣ ನೀಡಿದ ಉತ್ತರ “ಅದು ಮುಸ್ಲಿಮರ ಶಾಲೆ ಅಲ್ಲವಾ?”. 
ಇಷ್ಟೇ ಅಲ್ಲ, ಕಲ್ಲಡ್ಕದಲ್ಲಿ ಪ್ರಭಾಕರಭಟ್ಟರಂತಹ ಸಂಘಪರಿವಾರ ನಾಯಕನ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕಲಿತ ವಿದ್ಯಾರ್ಥಿ ಈ ಸಮಾಜವನ್ನು ಹೇಗೆ ನೋಡಬಹುದು ಎನ್ನುವುದನ್ನು ನಾವು ಕಲ್ಪಿಸಿಕೊಳ್ಳೋಣ. ಬಹು ಸಂಸ್ಕೃತಿಯ ನಾಡು ಹೀಗೆ, ತನ್ನ ಬೇರಿನಲ್ಲೇ ವಿಭಜನೆಯ ರೋಗವನ್ನು ಇಟ್ಟುಕೊಂಡು ಬೆಳೆಯುತ್ತಿದೆ. ಇಂದು ಎಲ್ಲ ಧರ್ಮಗಳು, ಜಾತಿಗಳು ತಮ್ಮ ತಮ್ಮ ಸಮುದಾಯವನ್ನು ಶೈಕ್ಷಣಿಕವಾಗಿ ಮೇಲೆತ್ತಲು ತುದಿಗಾಲಿನಲ್ಲಿ ನಿಂತಿವೆ. ಆದುದರಿಂದಲೇ ಮದ್ರಸ, ಚರ್ಚು, ದೇವಸ್ಥಾನಗಳ ಅಂಗಳಗಳಲ್ಲೇ ಶಾಲೆಗಳು ತೆರೆಯುತ್ತಿವೆ. ಶಾಲೆಗಳು ತೆರೆಯುತ್ತಿರುವುದೇನೋ ಸರಿ. ಆದರೆ ಆ ಮೂಲಕ ಮಕ್ಕಳು ಧರ್ಮ, ಜಾತಿಯ ಹೆಸರಲ್ಲಿ ಸಂಪೂರ್ಣ ಬೇರ್ಪಟ್ಟು ಪರಸ್ಪರ ಅಪರಿಚಿತರಾಗಿ ಓದುವುದಕ್ಕೆ ಶುರು ಹಚ್ಚಿದರೆ ಈ ನಾಡಿನ ಬಹುತ್ವ ಉಳಿಯುವುದು ಹೇಗೆ?
ಇನ್ನೊಂದು ವಿಪರ್ಯಾಸವನ್ನೂ ನಾವು ಗಮನಿಸಬೇಕು. ಹೀಗೆ ವಿದ್ಯಾರ್ಥಿಗಳನ್ನು ವಿಭಜಿಸುವ ಧಾರ್ಮಿಕ ಸಂಘಟನೆಗಳೇ, ವರ್ಷಕ್ಕೊಮ್ಮೆ ಬೇರೆ ಬೇರೆ ಉತ್ಸವದ ಸಂದರ್ಭದಲ್ಲಿ ಸೌಹಾರ್ದ ಸಮ್ಮೇಳನಗಳನ್ನೂ ಹಮ್ಮಿಕೊಳ್ಳುತ್ತಿವೆ. ಮುಸ್ಲಿಮ್ ಧಾರ್ಮಿಕ ಸಂಘಟನೆಗಳ ಸಮಾವೇಶದಲ್ಲಿ ಪೇಜಾವರ ಶ್ರೀಗಳಂತಹ ಹಿರಿಯ ಧಾರ್ಮಿಕ ನಾಯಕರು ಭಾಗವಹಿಸುತ್ತಾರೆ. ಹಾಗೆಯೇ ಪೇಜಾವರ ಶ್ರೀಗಳ ಪರ್ಯಾಯ ಉತ್ಸವದ ಸರ್ವಧರ್ಮ ಸೌಹಾರ್ದ ಸಮ್ಮೇಳನದಲ್ಲಿ ಸಿ. ಎಂ. ಇಬ್ರಾಹೀಂರಂತಹ ಮುಸ್ಲಿಮ್ ಮುಖಂಡರು ಮಾತನಾಡಿ ಸೌಹಾರ್ದದ ಮಹತ್ವವನ್ನು ವಿವರಿಸುತ್ತಾರೆ. ಇಂತಹ ಸಮಾವೇಷಗಳಲ್ಲಿ, ಎಲ್ಲ ಧಾರ್ಮಿಕ ಮುಖಂಡರೂ ತಮ್ಮ ತಮ್ಮ ಧರ್ಮಗಳಲ್ಲಿರುವ ಸೌಹಾರ್ದದ ಮೌಲ್ಯಗಳನ್ನು ಸಮಾಜಕ್ಕೆ ಸಾರುತ್ತಾರೆ. ನಿಜ, ವಿವಿಧ ಧಾರ್ಮಿಕ ಸಂಘಟನೆಗಳು ಇಂದು ಸೌಹಾರ್ದಕ್ಕಾಗಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಾಕುತ್ತಿವೆ. ಸಮಾವೇಶಗಳನ್ನು ನಡೆಸುತ್ತಿವೆ. ಆದರೆ ಇದೊಂದು ರೀತಿ, ಸಹಜವಾಗಿ ಹರಡಿ ನಿಂತ ಸೌಹಾರ್ದದ ಕಾಡುಗಳನ್ನು ಕಡಿದು, ನಮ್ಮ ನಮ್ಮ ಕಾಂಪೌಂಡ್‌ಗಳೊಳಗೆ ಕುಂಡದಲ್ಲಿಟ್ಟು ಅದನ್ನು ಸಾಕಿದ ಹಾಗೆ. ಇಂತಹ ಸೌಹಾರ್ದಗಳು ಹೆಚ್ಚು ಸಮಯ ಬಾಳುವುದಿಲ್ಲ ಎನ್ನುವ ಎಚ್ಚರಿಕೆ ಬೇಕು. ಗಿಡಗಳನ್ನಾಗಲಿ, ಸೌಹಾರ್ದವನ್ನಾಗಲಿ ಕುಂಡದೊಳಗಿಟ್ಟು ಸಾಕುವುದು ದುಬಾರಿ. ಒಂದಿಷ್ಟು ಕಣ್ಣು ತಪ್ಪಿದರೂ ಆ ಗಿಡ ಬಾಡಿ ಹೋಗಬಹುದು ಅಥವಾ ಸತ್ತು ಹೋಗಬಹುದು. ಬಹುತೇಕ ಧಾರ್ಮಿಕ ಸಂಘಟನೆಗಳು ಹಮ್ಮಿಕೊಳ್ಳುವ ಸೌಹಾರ್ದ ಸಮಾವೇಶಗಳ ಉದ್ದೇಶ ತಾವು ತಮ್ಮ ಕಾಂಪೌಂಡ್‌ನೊಳಗೆ ಸಾಕಿರುವ ಸೌಹಾರ್ದದ ಕುಂಡಗಳ ಪ್ರದರ್ಶಿಸುವುದಷ್ಟೇ ಆಗಿರುತ್ತದೆ. ಈ ಮೂಲಕ, ತಮ್ಮ ಧರ್ಮದ ಸೌಹಾರ್ದ ಸಂದೇಶಗಳ ‘ಗೊಬ್ಬರ’ದ ಹಿರಿಮೆಯನ್ನು ಪ್ರದರ್ಶಿಸುವುದಾಗಿದೆ. ಅಂದರೆ “ನೋಡಿ, ನಮ್ಮ ಧರ್ಮದ ಗೊಬ್ಬರ ಹಾಕಿ ಬೆಳೆಸಿದ ಸೌಹಾರ್ದದ ಗಿಡಗಳು ಎಷ್ಟು ಸೊಂಪಾಗಿವೆ?” ಎನ್ನುವ ಮೂಲಕ ತಮ್ಮ ತಮ್ಮ ಧರ್ಮಗಳ ಗೊಬ್ಬರಗಳನ್ನು ಮಾರ್ಕೆಟ್ ಮಾಡುವ ಪರೋಕ್ಷ ಉದ್ದೇಶ ಅದರ ಹಿಂದೆ ಇರುತ್ತದೆ. ಇಷ್ಟಕೂ  ಸಹಜವಾಗಿ ಹಬ್ಬಬಲ್ಲ ಸೌಹಾರ್ದದ ಎಲ್ಲ ಬಾಗಿಲುಗಳನ್ನು ಮುಚ್ಚಿ, ಉಪದೇಶಗಳ ಮೂಲಕ, ಪುಸ್ತಕಗಳ ಮೂಲಕ, ಭಾಷಣಗಳ ಮೂಲಕ ಸಮಾಜದಲ್ಲಿ ಸೌಹಾರ್ದವನ್ನು ನಿರ್ಮಿಸಲು ಹೊರಡುವುದೇ ಒಂದು ದೊಡ್ಡ ವ್ಯಂಗ್ಯವಾಗಿದೆ.
ವಿದ್ಯಾರ್ಥಿ ಕಾಲದಲ್ಲಿ ರಾಮಾಯಣ, ಮಹಾಭಾರತ ಕತೆಗಳೆಂದರೆ ನಮಗೆ ಹಬ್ಬ. ಅಮರ ಚಿತ್ರಕತೆಗಳಿಂದ ಆರಂಭವಾದ ಮಹಾಭಾರತದ ಓದು ಪಂಪ, ರನ್ನರ ಮೂಲಕ ಮೂಲ ವ್ಯಾಸನವರೆಗೂ ನಿರಂತರವಾಗಿ ನಡೆಯುತ್ತಿತ್ತು. ಮಹಾಭಾರತ, ರಾಮಾಯಣ ಈ ದೇಶದ ಎರಡು ಮಹಾಕಾವ್ಯಗಳು ಎಂದು ನಮ್ಮ ಮೇಷ್ಟ್ರು ನಮಗೆ ಬೋಧಿಸಿದ್ದರು. ಇಂದಿಗೂ ನಮಗದು ಅದ್ಭುತ ಮಹಾಕಾವ್ಯಗಳೇ ಆಗಿವೆ. ಎಲ್ಲ  ಭಾರತೀಯರಿಗೆ ಸೇರಿದ  ಕೃತಿಗಳು ಅವು. ಇದೇ ಸಂದರ್ಭದಲ್ಲಿ, ವಿಳಾಸ ಕಳುಹಿಸಿದರೆ ಬೈಬಲ್ ಕತೆ ಪುಸ್ತಕಗಳ ಕಟ್ಟು ಕಳುಹಿಸುವ ಸಂಸ್ಥೆಯೊಂದಿತ್ತು. ನಾವೆಲ್ಲ ಪದೇ ಪದೇ ಆ ವಿಳಾಸಕ್ಕೆ ಪತ್ರ ಬರೆಯುತ್ತಿದ್ದೆವು. ಅಂಚೆಯಲ್ಲಿ ಬೈಬಲ್ ಕತೆಗಳ ಕಟ್ಟು ಬರುವುದೇ ಒಂದು ಸಂಭ್ರಮ. ಬೈಬಲ್ ಧಾರ್ಮಿಕ ಪುಸ್ತಕವೇ ಆಗಿದ್ದರೂ ನಮಗದು ಆಗ ಕತೆಪುಸ್ತಕಗಳೇ. ನನ್ನ ವಿದ್ಯಾರ್ಥಿ ಕಾಲದಲ್ಲಿ, ಕನ್ನಡ ಪಂಡಿತರಾದ ವಿ. ಆರ್. ಹೆಗಡೆ ನನ್ನ ಮೇಲೆ ವಿಶೇಷ ಪ್ರೀತಿಯಿಟ್ಟುಕೊಂಡಿರುವುದಕ್ಕೆ ‘ಮಹಾಭಾರತದ ಯಾವುದೇ ಪ್ರಶ್ನೆಗಳಿಗೂ ಚಕಚಕನೇ ಉತ್ತರಿಸುವುದೂ’  ಕಾರಣವಾಗಿರಬೇಕು. ರಾಮಾಯಣ, ಮಹಾಭಾರತ, ಬೈಬಲ್‌ನಲ್ಲಿ ಬರುವ ಕೆಲವು ನೀತಿಕತೆಗಳಿಂದ ನಾನು ಇನ್ನಷ್ಟು ಒಳ್ಳೆಯ ಮುಸ್ಲಿಮನಾಗಲು ಸಾಧ್ಯವಾಯಿತೇ ಹೊರತು, ಹಿಂದೂ ಅಥವಾ ಕ್ರೈಸ್ತನಾಗಿ ನಾನೆಂದಿಗೂ ಬದಲಾಗಲಿಲ್ಲ. 
ಇತ್ತೀಚೆಗೆ ನಾನು ಮಹಾಭಾರತದ ಒಂದು ಪಾತ್ರವನ್ನು ವಿಶ್ಲೇಷಣೆ ಮಾಡಿ ಸಾಮಾಜಿಕ ತಾಣದಲ್ಲಿ ಹಾಕಿದ್ದೆ. ಕೆಲವೇ ಕ್ಷಣದಲ್ಲಿ ಒಬ್ಬ ತರುಣ ಆಕ್ರೋಶಿತನಾಗಿ “ನಮ್ಮ ಧರ್ಮದ ಗ್ರಂಥದ ಬಗ್ಗೆ ಮಾತನಾಡಲು ನೀನು ಯಾರು?” ಎಂದವನೇ ವಾಚಾಮಗೋಚರವಾಗಿ ಕುರ್‌ಆನ್ ಗ್ರಂಥವನ್ನು ನಿಂದಿಸತೊಡಗಿದ. ನಾನು ಸಹನೆಯಿಂದಲೇ ಆ ತರುಣನಿಗೆ ಮಹಾಭಾರತದ ಕೆಲವು ಪ್ರಶ್ನೆಗಳನ್ನು ಕೇಳಿದೆ. ‘ದ್ರೌಪದಿಯ ಅಣ್ಣನ ಹೆಸರು ಏನು ಗೊತ್ತಾ?’ ಎಂದು ಕೇಳಿದೆ. ಅವನಲ್ಲಿ ಯಾವ ಪ್ರಶ್ನೆಗಳಿಗೂ ಉತ್ತರವಿರಲಿಲ್ಲ. ಅವನು ಮಹಾಭಾರತವನ್ನೇ ಸರಿಯಾಗಿ ಓದಿರಲಿಲ್ಲ. ಆದರೆ ಮಹಾಭಾರತವೆಂದರೆ ‘ಹಿಂದೂಗಳ ಧರ್ಮ ಗ್ರಂಥ’ ಎಂದು ಅವನ ತಲೆಗೆ ಯಾರೋ ತುಂಬಿಸಿದ್ದರು. 

ಮೇಲಿನೆಲ್ಲದರ ಅರ್ಥ, ಧಾರ್ಮಿಕ, ಜಾತಿ ಸಂಘಟನೆಗಳು ತಮ್ಮ ತಮ್ಮ ಪ್ರತ್ಯೇಕ ಶಾಲೆಗಳನ್ನು, ವಿದ್ಯಾರ್ಥಿ ಹಾಸ್ಟೆಲ್‌ಗಳನ್ನು ಕಟ್ಟಬಾರದು ಎಂದಲ್ಲ.  ದುರ್ಬಲ ಸಮುದಾಯ ಶಿಕ್ಷಣ ಕ್ಷೇತ್ರದಲ್ಲಿ ಕಾಲಿಡುತ್ತಿರುವುದು ಅಭಿನಂದನೀಯ. ಇದು ಇಂದಿನ ಅಗತ್ಯವೂ ಕೂಡ. ಹಾಗೆಂದು ಆ ಶಾಲೆಗಳು, ಹಾಸ್ಟೆಲ್‌ಗಳು ತಮ್ಮದೇ ಜಾತಿ, ಸಮುದಾಯದ ಘೆಟ್ಟೋಗಳು ನಿರ್ಮಾಣವಾಗಲು ಕಾರಣವಾದರೆ ಅದರಿಂದ ಸಮುದಾಯಕ್ಕೆ ಭವಿಷ್ಯದಲ್ಲಿ ಇನ್ನಷ್ಟು ಅಪಾಯವಿದೆ. ಈ ಕಾರಣಕ್ಕೇ, ದುರ್ಬಲ ವರ್ಗದ ಸಮುದಾಯಗಳನ್ನು ಪ್ರತಿನಿಧಿಸುವ ಶಾಲೆಗಳು ಕೇವಲ ತಮ್ಮ ಧರ್ಮ, ಜಾತಿಯ ವಿದ್ಯಾರ್ಥಿಗಳಿಗಷ್ಟೇ ಸೀಮಿತವಾಗುವಂತಹ ಸ್ಥಿತಿಯನ್ನು ಅಲ್ಲಿ ನಿರ್ಮಾಣ ಮಾಡಬಾರದು. ಇದಕ್ಕೂ ಕೆಲವರು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ. ಒಂದು ಧರ್ಮದ ಸಂಘಟನೆ ನಡೆಸುವ ಶಾಲೆಯ ಮುಖ್ಯಸ್ಥರು ನನ್ನೊಂದಿಗೆ ಹೀಗೆ ಹಂಚಿಕೊಂಡರು “ನೋಡಿ, ನಮ್ಮ ಶಾಲೆಯಲ್ಲಿ ಬೇರೆ ಧರ್ಮೀಯರಿಗೂ ಧಾರಾಳ ಅವಕಾಶವಿದೆ. ಬೇರೆ ಧರ್ಮೀಯರು ಬಂದರೆ ಅವರಿಗೆ ಶುಲ್ಕದಲ್ಲೂ ನಾವು ವಿನಾಯಿತಿಯನ್ನು ಇಟ್ಟಿದ್ದೇವೆ. ಆದರೂ ಬರುತ್ತಿಲ್ಲ. ಇದು ನಮ್ಮ ತಪ್ಪೇ?”. ಅವರ ತಪ್ಪಲ್ಲ ನಿಜ. ಆದರೆ ಬೇರೆ ಧರ್ಮೀಯರು ಬರುತ್ತಿಲ್ಲ ಎನ್ನುವುದೂ ನಿಜ. ಅದರಿಂದ ಭವಿಷ್ಯದಲ್ಲಿ ಸಮಾಜ ಸಂಪೂರ್ಣವಾಗಿ ಒಡೆದು ಹೋಗಲಿದೆ ಎನ್ನುವುದೂ ಅಷ್ಟೇ ನಿಜ. ಆದುದರಿಂದ ‘ನಮ್ಮ ತಪ್ಪೇ?’ ಎನ್ನುವ ಅಸಹಾಯಕತೆ ಇದಕ್ಕೆ ಖಂಡಿತಾ ಪರಿಹಾರವಲ್ಲ. ಶಾಲೆಯೊಳಗೆ ಒಂದು ವೈವಿಧ್ಯವನ್ನು ಕಾಪಾಡಲು ಸಂಘಟಕರು ಗರಿಷ್ಠ ಪ್ರಮಾಣದಲ್ಲಿ ಶ್ರಮಿಸಿದರೆ ‘ಮುಸ್ಲಿಮ್ ಶಾಲೆ’ ‘ಹಿಂದೂ ಶಾಲೆ’ ಎನ್ನುವ ವ್ಯತ್ಯಾಸ ನಿಧಾನಕ್ಕಾದರೂ ಅಳಿಸಿ ಹೋಗಬಹುದು. ಈ ನಿಟ್ಟಿನಲ್ಲಿ ವಿವಿಧ ಧಾರ್ಮಿಕ ಸಂಘಟನೆಗಳು ನಡೆಸುವ ಶಾಲೆಗಳಲ್ಲಿ ‘ಕಡ್ಡಾಯವಾಗಿ’ ಇತರ ಧರ್ಮೀಯರು ‘ಇಷ್ಟು ಶೇಕಡ ಇರಲೇ ಬೇಕು’ ಎಂಬ ನಿಯಮವನ್ನಾದರೂ ಸರಕಾರ ತರಬೇಕು. ಇದೇ ಸಂದರ್ಭದಲ್ಲಿ, ಇದಕ್ಕಿರುವ ಇನ್ನೊಂದು ಅತ್ಯುತ್ತಮ ಪರಿಹಾರವೆಂದರೆ, ಸರಕಾರವು ಸರಕಾರಿ ಶಾಲೆಗಳನ್ನು ಮೇಲೆತ್ತುವುದು. ಮಠ, ಮಾನ್ಯಗಳಿಗೆ ಸರಕಾರ ಕೋಟಿ ಗಟ್ಟಳೆ ಅನುದಾನ ನೀಡಿ ಅದನ್ನು ಸದೃಢಗೊಳಿಸಲು ಅತ್ಯುತ್ಸಾಹ ವ್ಯಕ್ತಪಡಿಸುವಾಗ, ಅದೇ ಉತ್ಸಾಹದಲ್ಲಿ ಸರಕಾರಿ ಶಾಲೆಗಳನ್ನು ಮೇಲೆತ್ತಲು ಯಾಕೆ ಪ್ರಯತ್ನಿಸುತ್ತಿಲ್ಲ? ರಾಜ್ಯದಲ್ಲಿರುವ ಎಲ್ಲ ಸರಕಾರಿ ಶಾಲೆಗಳನ್ನು ಗುರುತಿಸಿ, ಯಾವುದೇ ಖಾಸಗಿ ಶಾಲೆಗಳಿಗಿಂತ ಅತ್ಯಾಧುನಿಕವಾಗಿ ರೂಪಿಸುವ ಮೂಲಕ ಎಲ್ಲ ಜಾತಿ ಧರ್ಮಗಳ ವಿದ್ಯಾರ್ಥಿಗಳನ್ನು ಅದರೆಡೆಗೆ ಆಕರ್ಷಿಸುವಂತೆ ಮಾಡುವುದರಿಂದ ಸಮಾಜಕ್ಕೆ ನೂರಾರು ಬಗೆಯ ಲಾಭಗಳಿವೆ. ಇಂದು ನಮ್ಮ ಮಕ್ಕಳು ಯಾವ ಮಾಧ್ಯಮಗಳಲ್ಲಿ ಕಲಿಯಬೇಕು ಎನ್ನುವುದನ್ನಷ್ಟೇ ನಾವು ಚರ್ಚಿಸುತ್ತಿದ್ದೇವೆ. ಯಾವ ಮಾಧ್ಯಮಗಳಲ್ಲಿ ಬೇಕಾದರೂ ಕಲಿಯಲಿ, ಆದರೆ ಎಲ್ಲ ಧರ್ಮ, ಜಾತಿಯ ಮಕ್ಕಳು ಒಟ್ಟಾಗಿ ಕಲಿಯುವಂತಹ ಶಾಲೆಗಳು ಇಂದಿನ ಅಗತ್ಯ. ಒಂದನೇ ತರಗತಿಯಿಂದಲೇ ಒಟ್ಟಾಗಿ ಆಡುತ್ತಾ, ಕಲಿಯುತ್ತಾ, ಜಗಳವಾಡುತ್ತಾ, ಪ್ರೀತಿಸುತ್ತಾ, ಮಧ್ಯಾಹ್ನದ ಬಿಸಿಯೂಟವನ್ನು ಒಂದೇ ಪಂಕ್ತಿಯಲ್ಲಿ ಉಣ್ಣುತ್ತಾ ಬೆಳೆಯಲಿ. ಆಗ ಯಾವ ಧರ್ಮೀಯರೂ “ನಮ್ಮ ಧರ್ಮ ಶಾಂತಿಯ ಧರ್ಮ” “ನಾವೂ ನಿಮ್ಮಂತೆಯೇ ಮನುಷ್ಯರು” ಎಂದೆಲ್ಲ ಪರಿಚಯಿಸಿಕೊಳ್ಳುವ ಅಗತ್ಯ ಬರುವುದಿಲ್ಲ. ಇಂದು ಪರಸ್ಪರ ಅನ್ಯರಂತೆ ಬಾಳುತ್ತಿರುವವರನ್ನು ಭವಿಷ್ಯದಲ್ಲಿ ಒಂದಾಗಿಸುವುದಕ್ಕೆ ಇರುವ ದಾರಿ ಇದೊಂದೆ. ಬಹುಸಂಸ್ಕೃತಿಯ ಭಾರತವನ್ನು ಉಳಿಸಿಕೊಳ್ಳಬೇಕಾದರೂ ನಮಗೆ ಇರುವ ದಾರಿ ಇದೊಂದೆ.

Thursday, November 9, 2017

ಹೌದು, ಗೌರಿ- ಲಂಕೇಶರಂತಾಗಲಿಲ್ಲ ...

ಗೌರಿ ಲಂಕೇಶ್ ತೀರಿದ ದಿನ  ಒಂದೇ ಉಸಿರಲ್ಲಿ  ಬರೆದ ಲೇಖನ. ಒಂದಿಷ್ಟು ಹಸಿಯಾಗಿದೆ.  ಇವತ್ತು ಯಾಕೋ ಮತ್ತೆ ಕಣ್ಣಿಗೆ ಬಿತ್ತು. ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.  

ಅದು ಪಿ. ಲಂಕೇಶರು ‘ಲಂಕೇಶ್ ಪತ್ರಿಕೆ’ಯನ್ನು ನಡೆಸುತ್ತಿದ್ದ ಕಾಲ. ಲಂಕೇಶ್ ಪತ್ರಿಕೆಯ ಆತ್ಮೀಯರು ಯಾರಾದರೂ ಭೇಟಿಯಾದರೆ ನಾನು ಮೊದಲು ಕೇಳುತ್ತಿದ್ದ ಪ್ರಶ್ನೆ ‘‘ಲಂಕೇಶ್‌ರ ಆನಂತರ ಲಂಕೇಶ್ ಪತ್ರಿಕೆ ಯನ್ನು ನಡೆಸುವವರು ಯಾರು?’’ 
ಆಗಾಗ ಲಂಕೇಶ ರನ್ನು ಕಾಡುತ್ತಿದ್ದ ತೀವ್ರ ಅನಾರೋಗ್ಯ ನಮ್ಮನ್ನೆಲ್ಲ ಇಂತಹ ಪ್ರಶ್ನೆ ಕೇಳುವಂತೆ ಮಾಡುತ್ತಿತ್ತು. ನಮಗೆಲ್ಲ ಲಂಕೇಶ್ ಪತ್ರಿಕೆ ಓದೋದು ಬದುಕಿನ ಅವಿಭಾಜ್ಯವಾಗಿ ಹೋಗಿದ್ದುದರಿಂದ ಇಂತಹ ಪ್ರಶ್ನೆ ನಮ್ಮನ್ನು ಪದೇ ಪದೇ ಕಾಡುತ್ತಿತ್ತು. ಅದು ನಾನು ಮುಂಬೈಯಲ್ಲಿ ಕೆಲಸ ಮಾಡುತ್ತಿದ್ದ ಕಾಲ. ಮುಂಬೈ ಯ ನ್ಯಾಯಾಲಯದಲ್ಲಿ ಲಂಕೇಶರ ವಿರುದ್ಧ ಒಂದು ವರದಿಗೆ ಸಂಬಂಧಿಸಿ ದೂರು ದಾಖಲಾಗಿತ್ತು. ಈ ಸಂಬಂಧ ದ್ವಾರಕಾನಾಥ್, ತ್ಯಾಗರಾಜ್ ಆಗಾಗ ಮುಂಬೈಗೆ ಬರು ತ್ತಿದ್ದರು. ತ್ಯಾಗರಾಜ್ ಒಂದೆರಡು ಬಾರಿ ನನ್ನ ಜೊತೆ ಉಳಿದುಕೊಂಡಿದ್ದರು. ಆಗ ಅವರ ಜೊತೆಗೂ ಇಂತಹದೇ ಪ್ರಶ್ನೆಯನ್ನು ನಾನು ಇಟ್ಟಿದ್ದೆ. ಆಗ ಅವರು ತಡವರಿಸದೇ ಖಂಡತುಂಡವಾಗಿ ಹೇಳಿದ್ದರು ‘‘ಲಂಕೇಶ್ ಬಳಿಕ ಪತ್ರಿಕೆ ಮುಚ್ಚುತ್ತೆ ಬಶೀರ್’’. ಆಳದಲ್ಲಿ ಇದು ನಮ್ಮ ಅರಿವಿನಲ್ಲೂ ಇತ್ತು. ಯಾಕೆಂದರೆ ಲಂಕೇಶರ ಹೆಸರಿನ ಮೂಲಕವೇ ನಡೆಯುತ್ತಿರುವ ಪತ್ರಿಕೆಯನ್ನು ಇನ್ನಾರೂ ಮುನ್ನಡೆಸುವುದು ಕಷ್ಟ. ಯಾರೇ ಮುನ್ನಡೆಸಿದರೂ ಅದು ಲಂಕೇಶ್ ಪತ್ರಿಕೆ ಯಾಗಿ ಉಳಿಯುವುದು ಸಾಧ್ಯವಾಗುವ ಮಾತೇ ಅಲ್ಲ. 
ಮುಂಬೈಯ ನ್ಯಾಯಾಲಯವೊಂದು ಪಿ. ಲಂಕೇಶರಿಗೆ ಬಂಧನ ವಾರಂಟ್‌ನ್ನು ಹೊರಡಿಸಿದಾಗ, ಬೆಂಗಳೂರಿನಿಂದ ನನಗೆ ಒಂದು ಕರೆ ಬಂದಿತ್ತು. ‘‘ನಾನು ಗೌರಿ ಲಂಕೇಶ್ ಮಾತನಾಡ್ತ ಇದ್ದೇನೆ. ನ್ಯಾಯಾಲಯದಲ್ಲಿ ಏನು ಬೆಳವಣಿ ಗೆಯಾಗಿದೆ?’’ ಎಂದು ಕೇಳಿದ್ದರು. ನಾನೂ ಸಂಕ್ಷಿಪ್ತವಾಗಿ ಮಾತನಾಡಿ ಮುಗಿಸಿದ್ದೆ. ಆ ಧ್ವನಿಯ ಹಿಂದಿರುವ ಮುಖ ವನ್ನು ಕಂಡದ್ದು ಅದಾದ ಹತ್ತು ವರ್ಷಗಳ ಬಳಿಕ. ಲಂಕೇಶ್ ನಿಧನರಾದಾಗ ಗೌರಿ ಮುನ್ನೆಲೆಗೆ ಬಂದರು. ಲಂಕೇಶ್ ಪತ್ರಿಕೆಯ ಸಂಪಾದಕರಾಗಿ ಗೌರಿ ಹೊಣೆ ಹೊತ್ತು ಕೊಳ್ಳುತ್ತಾರೆ ಎನ್ನುವಾಗ ಬಹಳಷ್ಟು ಅನುಮಾನಗಳಿದ್ದವು. ಮೊತ್ತ ಮೊದಲಾಗಿ, ರಾಷ್ಟ್ರಮಟ್ಟದ ಮಾಧ್ಯಮಗಳಲ್ಲಿ ಗೌರಿ ಕೆಲಸ ಮಾಡುತ್ತಿದ್ದರು. ಆ ಕೆಲಸವನ್ನು ತೊರೆದು, ಈ ಪತ್ರಿಕೆಯನ್ನು ಬೆನ್ನಿಗೆ ಕಟ್ಟಿಕೊಳ್ಳುವುದೆಂದರೆ ಅಪಾಯಗಳನ್ನು ತಾನಾಗಿಯೇ ಬೆನ್ನಿಗೆ ಕಟ್ಟಿಕೊಂಡಂತೆ. ಜೊತೆಗೆ ಗೌರಿಗೆ ಅತೀ ದೊಡ್ಡ ಸವಾಲು ಸ್ವತಃ ಲಂಕೇಶ್ ಆಗಿದ್ದರು. ಲಂಕೇಶ್ ಬರೇ ಪತ್ರಕರ್ತರಲ್ಲ. ಅವರಲ್ಲೊಬ್ಬ ಕವಿ, ಸಾಹಿತಿ, ಲೇಖಕನಿದ್ದ. ಪತ್ರಿಕಾ ಬರಹಗಳಿಗೆ ಪದ್ಯದ ಲಾಲಿತ್ಯವನ್ನು ನೀಡಿದವರು ಲಂಕೇಶ್. ತಮ್ಮ ವಿಶಿಷ್ಟ ಬರಹಗಳ ಮೂಲಕ ಅವರು ಅದಾಗಲೇ ಒಂದು ಪ್ರಭಾವಳಿಯನ್ನು ತನ್ನ ಸುತ್ತ ಸೃಷ್ಟಿಸಿಕೊಂಡಿದ್ದರು. ಲಂಕೇಶರಿಗಾಗಿಯೇ ‘ಲಂಕೇಶ್ ಪತ್ರಿಕೆ’ಯನ್ನು ಕೊಂಡುಕೊಳ್ಳುತ್ತಿದ್ದವರು ಅಧಿಕ. ಅಷ್ಟೇ ಅಲ್ಲ, ಲಂಕೇಶರ ಜೊತೆಗಿದ್ದ ಬಸವರಾಜು, ನಟರಾಜ್, ತ್ಯಾಗರಾಜ್, ದ್ವಾರಕಾನಾಥ್, ರೇಷ್ಮೆ, ಗಂಗಾಧರ ಕುಷ್ಠಗಿಯಂತಹ ಪ್ರತಿಭೆಗಳನ್ನು ನಿಭಾಯಿಸುವುದು ಗೌರಿ ಲಂಕೇಶರಿಗೆ ಅಷ್ಟು ಸುಲಭವಿರಲಿಲ್ಲ. ಕನ್ನಡ ಪತ್ರಿಕೋದ್ಯಮಕ್ಕೇ ಹೊಸಬರಾಗಿದ್ದ ಗೌರಿ ಲಂಕೇಶ್‌ರ ನಿರ್ಧಾರಗಳನ್ನು, ಲಂಕೇಶರ ನಿರ್ಧಾರಗಳಂತೆ ಸ್ವೀಕರಿಸುವುದು ಈ ಹಿರಿಯರಿಗೆ ಕಷ್ಟವೇ ಸರಿ. ಇದರ ಜೊತೆ ಜೊತೆಗೇ ಅವರ ಸೋದರ ಇಂದ್ರಜಿತ್ ಇನ್ನೊಂದು ಸವಾಲಾಗಿದ್ದರು. ಗೌರಿ ಲಂಕೇಶ್ ಒಂದು ರೀತಿ ಲಂಕೇಶ್ ಪತ್ರಿಕೆಯ ಹಲವು ಉದ್ಯೋಗಿಗಳಲ್ಲಿ ಒಬ್ಬರಾಗಿದ್ದರೇ ಹೊರತು, ಅವರೇ ಅದರ ಮಾಲಕರಾಗಿರಲಿಲ್ಲ. ಇಂದ್ರಜಿತ್ ಮತ್ತು ಗೌರಿ ಇವರಿಬ್ಬರ ನಡುವಿನ ಅಭಿರುಚಿಗಳೇ ಬೇರೆ. ಬದುಕನ್ನು ಶೋಕಿಯಾಗಿ ಸ್ವೀಕರಿಸಿರುವ ಇಂದ್ರಜಿತ್, ಅದನ್ನು ಸಂಘರ್ಷವಾಗಿ ಸ್ವೀಕರಿಸಿರುವ ಗೌರಿ ಜೊತೆಗೂಡಿ ಪತ್ರಿಕೆಯನ್ನು ಮುನ್ನಡೆಸುವುದು ಅಸಾಧ್ಯವಾಗಿತ್ತು.
ಒಂದು ರೀತಿಯಲ್ಲಿ, ಪತ್ರಿಕೆ ಮುನ್ನಡೆಯಬೇಕಾದರೆ ಎಲ್ಲವನ್ನೂ ಹೊಸದಾಗಿಯೇ ಕಟ್ಟಬೇಕಾದಂತಹ ಸವಾಲು ಗೌರಿ ಅವರ ಮುಂದಿತ್ತು. ಬರೇ ಸಹೋದ್ಯೋಗಿಗಳಿಗಷ್ಟೇ ಇದು ಸೀಮಿತವಾದ ವಿಚಾರವಲ್ಲ. ಇಡೀ ಓದುಗಬಳಗವನ್ನೂ ಹೊಸದಾಗಿಯೇ ಕಟ್ಟಬೇಕಾಗಿತ್ತು. ಯಾಕೆಂದರೆ, ಲಂಕೇಶರಿಗಾಗಿ ಲಂಕೇಶನ್ನು ಓದುತ್ತಿದ್ದ ಕರ್ನಾಟಕದ ವಿದ್ವತ್ ಮಂದಿಗಳು ಲಂಕೇಶರು ತೀರಿದ ದಿನವೇ ಲಂಕೇಶ್ ಪತ್ರಿಕೆಯ ಕೈ ಬಿಟ್ಟಿದ್ದರು. ಈ ಎಲ್ಲ ಕಾರಣದಿಂದ ಲಂಕೇಶರಿಲ್ಲದ ಮೊದಲ ಸಂಚಿಕೆಗಾಗಿ ನಾನು ಚಾತಕ ಪಕ್ಷಿಯಂತೆ ಕಾದಿದ್ದೆ ಮತ್ತು ಅನಿರೀಕ್ಷಿತ ರೀತಿಯಲ್ಲಿ, ಅವರ ಸಂಪಾದಕೀಯದ ಸರಳ ಭಾಷೆ, ಸರಳ ಕನ್ನಡ ಇಷ್ಟವಾಯಿತು. ಬಳಿಕ ಅಪ್ಪ ಎನ್ನುವ ಕಾಲಂ ಕೆಲವು ವಾರಗಳ ಕಾಲ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂತು. ಬಹಳಷ್ಟು ಆತ್ಮೀಯ ಬರಹ ಅದಾಗಿದ್ದರೂ, ಆ ಕಥಾನಕವನ್ನು ಅರ್ಧದಲ್ಲೇ ಅವರು ನಿಲ್ಲಿಸಿದರು. ಆದರೆ ಲಂಕೇಶ್ ಪತ್ರಿಕೆ ನಿರಂತರವಾಗಿ ಮುಂದುವರಿಯಿತು. ಲಂಕೇಶರ ಪ್ರಭಾವಳಿಯಿಂದ ಪತ್ರಿಕೆಯನ್ನು ಹೊರಗೆ ತರುವಲ್ಲೂ ಅವರು ಹಂತಹಂತವಾಗಿ ಯಶಸ್ವಿಯಾದರು. ಭಾರೀ ಆರ್ಥಿಕ ಅಡಚಣೆಗಳ ನಡುವೆಯೂ ಅದನ್ನು ತನ್ನ ಕೊನೆಯ ಉಸಿರಿರುವವರೆಗೆ ಮುನ್ನಡೆಸಿದರು. ಲಂಕೇಶ್ ಎನ್ನುತ್ತಿದ್ದ ನಾಡಿನ ಜನರು, ಗೌರಿ ಲಂಕೇಶ್ ಎನ್ನುವ ಹೊಸ ಹೆಸರನ್ನು ರೂಢಿ ಮಾಡಿಕೊಳ್ಳತೊಡಗಿದರು.
ಲಂಕೇಶರು ಮತ್ತು ಗೌರಿ ನಡುವೆ ವ್ಯಕ್ತಿತ್ವದಲ್ಲಿ ಭಾರೀ ಅಂತರವಿದೆ. ಲಂಕೇಶ್ ತನ್ನ ಗುಹೆಯಲ್ಲಿದ್ದುಕೊಂಡೇ ಕೆಲಸ ಮಾಡಿದವರು. ಪತ್ರಿಕೆಗಳಲ್ಲಿ ಅವರಿಂದ ಎಡವಟ್ಟುಗಳಾದರೂ, ಅವರಿಗೆ ಬಚ್ಚಿಟ್ಟುಕೊಳ್ಳುವುದಕ್ಕೆ ಸಾಹಿತ್ಯ, ನಾಟಕ, ಸಿನೆಮಾ, ಕಾವ್ಯ ಹೀಗೆ ಹಲವು ಜಾಗಗಳಿವೆ ಮತ್ತು ಇವುಗಳನ್ನು ಅವರು ಕವಚವಾಗಿಟ್ಟುಕೊಂಡೇ ಪತ್ರಿಕೆಯ ವಾರದ ಯುದ್ಧದಲ್ಲಿ ಭಾಗಿಯಾಗುತ್ತಿದ್ದರು. ಒಬ್ಬೊಬ್ಬರು ಒಂದೊಂದು ಕಾರಣಕ್ಕಾಗಿ ಪತ್ರಿಕೆಯನ್ನು ಇಷ್ಟಪಡುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ವ್ಯವಹಾರ ದಲ್ಲಿ ಅವರು ಚತುರರಾಗಿದ್ದರು. ಯಾವುದೇ ವಿಷಯಗಳಲ್ಲೂ ಒಂದು ಸಣ್ಣ ಅಂತರವನ್ನು ಅವರು ಕಾಯ್ದುಕೊಳ್ಳುತ್ತಿದ್ದರು. ಸಂಪೂರ್ಣವಾಗಿ ಯಾವುದಕ್ಕೂ ಅವರು ತನ್ನನ್ನು ತೆತ್ತುಕೊಂಡಿರಲಿಲ್ಲ. ರಾಜಕಾರಣಿಗಳ ವಿರುದ್ಧ ಹಿಗ್ಗಾಮುಗ್ಗ ಬೀಳುತ್ತಿದ್ದರೂ, ಪಾರಾಗುವ ಸಣ್ಣ ದೊಂದು ‘ಜಾಗ’ವನ್ನು ಅವರು ಉಳಿಸಿ ಕೊಳ್ಳುತ್ತಿದ್ದರು. ಈ ಕಾರಣದಿಂದಲೇ, ಅವರ ವಿಪತ್ತಿನ ಸಂದರ್ಭದಲ್ಲಿ ಅವರಿಗೆ ಹಲವು ರಾಜಕಾರಣಿಗಳು ನೆರವಾದ ಉದಾಹರಣೆಗಳೂ ಇವೆ. ಆದರೆ ಗೌರಿ ಅವರು ರಕ್ತದಲ್ಲೇ ಹೋರಾಟದ ಗುಣವನ್ನು ಬೆಳೆಸಿಕೊಂಡು ಬಂದವರು. ಲಂಕೇಶ್ ಅವರ ಹತ್ತಿರದಲ್ಲಿದ್ದವರು ಹೇಳುವಂತೆ ಅವರು ಆಳದಲ್ಲಿ ತುಸು ಪುಕ್ಕರಾಗಿದ್ದರು. ಆದರೆ ಲಂಕೇಶರಿಗೆ ಹೋಲಿಸಿದರೆ ಗೌರಿ ಅಪಾರ ಧೈರ್ಯವನ್ನು ಮೈಗೂಡಿಸಿಕೊಂಡವರು. ಲಂಕೇಶರು ಒಂದು ರಾಜಕೀಯ ಪಕ್ಷವನ್ನು ಕಟ್ಟಲು ಬೀದಿಗಿಳಿದರಾದರೂ, ಅದು ಅಸಾಧ್ಯ ಎಂದು ಕಂಡಾಗ ತಕ್ಷಣವೇ ಸಾಹಸದಿಂದ ಹಿಂಜರಿದರು. ಆದರೆ ಗೌರಿ ಬೀದಿಯಲ್ಲಿ ನಿಂತೇ ತನ್ನ ಪತ್ರಿಕೆ ಕಟ್ಟ ತೊಡಗಿದರು. ಗೌರಿಯನ್ನು ಹಳಿಯುವುದಕ್ಕೋಸ್ಕರವೇ ಹಲವರು ‘ಲಂಕೇಶ್ ತೀರಿ ಹೋದ ಮೇಲೆ ಆ ಪತ್ರಿಕೆ ಸತ್ತು ಹೋಯಿತು’ ಎಂದದ್ದಿದೆ. ನಾನಾಗ ಅದನ್ನು ಒಪ್ಪುತ್ತಲೇ ಹೇಳುತ್ತಿದ್ದೆ ‘‘ಲಂಕೇಶ್ ಬೇರೆ, ಗೌರಿ ಬೇರೆ. ಲಂಕೇಶರನ್ನು ಗೌರಿಯಲ್ಲಿ ಹುಡುಕೋದನ್ನು ಬಿಡೋಣ. ಗೌರಿಯಲ್ಲಿರುವ ಸ್ವಂತಿಕೆಯನ್ನು ಗುರುತಿಸಿ ಸಾಧ್ಯವಾದರೆ ಇಷ್ಟಪಡೋಣ. ಇದು ಲಂಕೇಶ್ ಪತ್ರಿಕೆ ಅಲ್ಲ. ಇದು ಗೌರಿ ಲಂಕೇಶ್ ಪತ್ರಿಕೆ’’. ಇದಾದ ಎಷ್ಟೋ ದಿನಗಳ ಬಳಿಕ, ಇಂದ್ರಜಿತ್ ಜೊತೆ ಭಿನ್ನಾಭಿಪ್ರಾಯ ಹೊಂದಿ, ಗೌರಿಯವರು ತಮ್ಮದೇ ಹೆಸರಲ್ಲಿ ಪತ್ರಿಕೆ ನಡೆಸಿದರು ಮತ್ತು ತನ್ನದೇ ವ್ಯಕ್ತಿತ್ವದ ಮೂಲಕ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾದರು. 
ಲಂಕೇಶರ ಕಾಲಕ್ಕೂ ಗೌರಿಯ ಕಾಲಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ಲಂಕೇಶರ ಕಾಲದಲ್ಲಿ ‘ಟ್ಯಾಬ್ಲಾಯಿಡ್’ ಓದುಗರ ಸಂಖ್ಯೆ ದೊಡ್ಡ ಮಟ್ಟದಲ್ಲಿತ್ತು ಮತ್ತು ಅದನ್ನು ಗಂಭೀರವಾಗಿಯೂ ಸ್ವೀಕರಿಸುತ್ತಿದ್ದರು. ಆದರೆ ಗೌರಿಯ ಕಾಲದಲ್ಲಿ ‘ಟ್ಯಾಬ್ಲಾಯಿಡ್’ ಪತ್ರಿಕೆಗಳನ್ನು ಓದುವ ಓದುಗರ ಸಂಖ್ಯೆಯೇ ಇಳಿಮುಖವಾಗಿತ್ತು. ಲಂಕೇಶರ ಕಾಲದಲ್ಲಿ ಸಂಘಪರಿವಾರ ಗಳು ಈ ಮಟ್ಟಿಗೆ ನಾಡಲ್ಲಿ ಮುಕ್ತವಾಗಿ ಬೇರಿಳಿಸಿಕೊಂಡಿರಲಿಲ್ಲ. ಗೌರಿಯ ಕಾಲ ದಲ್ಲಿ, ಸಂಘಪರಿವಾರದ ಜನರು ಕೂಗು ಮಾರಿಗಳಾಗಿ ರಾಜ್ಯಾದ್ಯಂತ ಹರಡಿ ಕೊಳ್ಳತೊಡಗಿದ್ದರು. ಇಂತಹ ಸಂದರ್ಭ ದಲ್ಲಿ ಪತ್ರಿಕೆಯನ್ನು ತನ್ನ ಹೋರಾಟದ ಅಸ್ತ್ರವಾಗಿಸಿಕೊಂಡ ವರು ಗೌರಿ ಲಂಕೇಶ್. ಅನೇಕ ಬಾರಿ, ಹಿಂದಿನ ಲಂಕೇಶ್‌ನ ಲೇಖಕರು ‘‘ಲಂಕೇಶರಿದ್ದಿದ್ದರೆ ಈ ರೀತಿ ಬರೆಯು ತ್ತಿರಲಿಲ್ಲ’’ ‘‘ಲಂಕೇಶರು ಈ ಕುರಿತಂತೆ ಬೇರೆಯೇ ನಿಲುವು ತಳೆಯುತ್ತಿದ್ದರು’’ ಎನ್ನುತ್ತಾ ಗೌರಿಯ ಬರಹಗಳಿಗೆ, ಹೋರಾಟಗಳಿಗೆ ಅಡ್ಡಗಾಲು ಹಾಕಿರುವುದನ್ನೂ ನಾನು ಗಮನಿಸಿದ್ದೇನೆ. ಲಂಕೇಶರ ವ್ಯಕ್ತಿತ್ವವನ್ನೇ ಗೌರಿಯ ವಿರುದ್ಧ ಎತ್ತಿಕಟ್ಟುವ ಹುನ್ನಾರಗಳೂ ನಡೆದಿದ್ದವು. ಆದರೆ ಈ ಎಲ್ಲ ಹುನ್ನಾರಗಳನ್ನೂ ಮೀರಿ, ಕರ್ನಾಟಕದ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯವಾಗಿ ಗೌರಿಯ ವರು ತೊಡಗಿಸಿಕೊಂಡರು. ಬಾಬಾಬುಡಾನ್‌ಗಿರಿಯ ಹೋರಾಟದಲ್ಲಿ ಗೌರಿ ಲಂಕೇಶ್‌ನ ಪಾತ್ರ ದೊಡ್ಡ ಮಟ್ಟದ್ದು. ಬಾಬಾಬುಡಾನ್‌ಗಿರಿ ಚಳವಳಿಗಾರರನ್ನು ಪೊಲೀಸರು ಅಲ್ಲಲ್ಲಿ ಬಂಧಿಸತೊಡಗಿದಾಗ ಲಾರಿಯಲ್ಲಿ ಹತ್ತಿ ಬಾಬಾಬುಡಾನ್‌ಗಿರಿಗೆ ಹೋಗಿ, ಅಲ್ಲಿಯ ಸಭೆಯಲ್ಲಿ ಭಾಗವಹಿಸಿದವರು ಮತ್ತು ಜೈಲು ಸೇರಿ, ಅಲ್ಲಿಂದಲೇ ಪತ್ರಿಕೆಯ ಸಂಪಾದಕೀಯ ಬರೆದವರು. ಕಳೆದ ಒಂದು ದಶಕದ ಈಚೆಗಿನ ಬಹುತೇಕ ಚಳವಳಿ ಹೋರಾಟಗಳಲ್ಲಿ ಗೌರಿ ಲಂಕೇಶ್ ಸಕ್ರಿಯರಾಗಿದ್ದರು. ಮುಖ್ಯವಾಗಿ, ನಕ್ಸಲೀಯರನ್ನು ಮುಖ್ಯವಾಹಿನಿಗೆ ತರುವ ಮಹತ್ತರ ಕೆಲಸವನ್ನು ಅವರು ಮಾಡಿದರು. ಎನ್‌ಕೌಂಟರ್‌ಗಳ ರಾಜ್ಯದಲ್ಲಿ ಸಾಲುಸಾಲಾಗಿ ನಕ್ಸಲರ (ಪಶ್ಚಿಮಘಟ್ಟದ ಆದಿವಾಸಿ ಹುಡುಗರು ಇವರು) ಹೆಣಗಳು ಬೀಳುತ್ತಿರುವಾಗ, ಹಿಂಸೆಯ ವಿರುದ್ಧ ಮಾತನಾಡುತ್ತಲೇ, ಹೋರಾಟದ ಹೊಸ ದಾರಿಯನ್ನು ಅವರಿಗೆ ತೆರೆದುಕೊಡಲು ಶ್ರಮಿಸಿದವರು ಗೌರಿ. ಹೀಗೆ ಇವರು ಮತ್ತು ಸಹವರ್ತಿ ಗಳ ಅಪಾರ ಶ್ರಮದಿಂದ ಕಾಡಿನಿಂದ ನಾಡಿಗೆ ಬಂದ ತರುಣರು ಇಂದು ಪ್ರಜಾಸತ್ತಾತ್ಮಕವಾಗಿ ಸಾಮಾಜಿಕ ಹೋರಾಟಗಳನ್ನು ನಡೆಸುತ್ತಾ, ನಾಡಿಗೆ ಹೊಸ ಸ್ಫೂರ್ತಿ ಯನ್ನು ಬಿತ್ತಿದ್ದಾರೆ. ಹೊಸ ಸಾಮಾಜಿಕ ಹೋರಾಟಗಳ ನಿರೀಕ್ಷೆಗಳನ್ನು ಹುಟ್ಟಿಸಿದ್ದಾರೆ. ವೌಢ್ಯಗಳ ವಿರುದ್ಧ ಕಾನೂನು ಜಾರಿಗಾಗಿ ಹೋರಾಟ, ಜನನುಡಿ, ಉಡುಪಿ ಚಲೋ, ಕಲಬುರ್ಗಿ ಪರ ಹೋರಾಟ, ಆದಿವಾಸಿಗಳ ಭೂ ಹೋರಾಟ, ಕೋಮುವಾದಿಗಳ ವಿರುದ್ಧ ಹೋರಾಟ... ಹೀಗೆ ನಾಡಿನ ಎಲ್ಲ ಪ್ರಗತಿಪರ ಹೋರಾಟಗಳಲ್ಲಿ ಪಕ್ಷಭೇದ ನೋಡದೆ ಕೈಜೋಡಿಸುತ್ತಾ ಬಂದವರು ಗೌರಿ. ಒಬ್ಬ ಹೆಣ್ಣು ಮಗಳು ಒಂದು ಪ್ರಖರ ವಿಚಾರಗಳ ಪತ್ರಿಕೆಯೊಂದರ ಸಂಪಾದಕಿಯಾಗಿ ಕೋರ್ಟು, ಕಚೇರಿಗಳನ್ನು ಎದುರಿಸುತ್ತಾ, ಸಾಮಾಜಿಕ ಹೋರಾಟಗಳಲ್ಲಿ ದಿಟ್ಟವಾಗಿ ಭಾಗವ ಹಿಸಿದ ರೀತಿ ವಿಸ್ಮಯ ಹುಟ್ಟಿಸುವಂತಹದು. ಎರಡು ತಿಂಗಳ ಹಿಂದೆ ವಾರ್ತಾಭಾರತಿ ಪತ್ರಿಕೆ ಕಚೇರಿಗೆ ಗೌರಿಯವರು ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ತನ್ನ ಪತ್ರಿಕೆ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟನ್ನು ಹಂಚಿಕೊಂಡಿದ್ದರು. ಲಂಕೇಶರು, ಹೆಣ್ಣು ಮಕ್ಕಳಿಗಾಗಿ ವಿಶೇಷವಾದ ಆಸ್ತಿಯನ್ನೂ ಬಿಟ್ಟು ಹೋಗಿರಲಿಲ್ಲ. ಅಷ್ಟೇ ಏಕೆ, ಗೌರಿಗೆ ನಡುಬೀದಿಯಲ್ಲಿ ನಿಂತು ಬಡಿದಾಡುವುದಷ್ಟೇ ಗೊತ್ತಿತ್ತು. ಇವುಗಳ ನಡುವೆ ವ್ಯವಸ್ಥೆಯೊಂದಿಗೆ ಸೂಕ್ಷ್ಮವಾಗಿ ವ್ಯವಹರಿಸುವ ಕೆಲವು ‘ಜಾಣ’ ಸಂಗತಿಗಳ ಅರಿವು ಅವರಿಗಿರಲಿಲ್ಲ. ಇದ್ದಿದ್ದರೆ ಗೌರಿ ಲಂಕೇಶ್ ಪತ್ರಿಕೆಯನ್ನು ಇಟ್ಟುಕೊಂಡೇ ಸಾಕಷ್ಟು ಹಣ, ಹೆಸರು ಮಾಡಬಹುದಿತ್ತೇನೋ. ಪತ್ರಿಕೆಯೂ ಉಳಿಯುತ್ತಿತ್ತು, ಅವರ ಪ್ರಾಣವೂ ಉಳಿಯುತ್ತಿತ್ತು,  ಜೊತೆಗೆ ಈ ನಾಡಿನ ಬಹುಸಂಖ್ಯೆಯ ‘ಸಜ್ಜನ’ ‘ಸೃಜನಶೀಲ’ ‘ಸಂವೇದನಾಶೀಲ’ ಕವಿಗಳು, ಕಥೆಗಾರರು, ಸಾಹಿತಿಗಳ ಮೆಚ್ಚುಗೆ, ಮಾನ್ಯತೆಯೂ ಸಿಗುತ್ತಿತ್ತು.
ಗೌರಿ ಇನ್ನೊಂದು ಲಂಕೇಶ್ ಆಗದೇ ಪತ್ರಿಕೆಯನ್ನೂ, ತನ್ನನ್ನೂ ಸಮಾಜಕ್ಕೆ ಸಂಪೂರ್ಣ ಅರ್ಪಿಸಿದ ಕಾರಣಕ್ಕೆ ಇಂದು ದೇಶದ ಲಕ್ಷಾಂತರ ಮನಸ್ಸುಗಳು ಆ ತಾಯಿ ಮನಸ್ಸಿಗಾಗಿ ಕಣ್ಣೀರಿಡುತ್ತಿವೆ. ಗೌರಿಯವರು ಲಂಕೇಶ್ ಆಗದೇ ಇದ್ದುದು ಅವರ ಹೆಗ್ಗಳಿಕೆಯೇ ಹೊರತು ದೌರ್ಬಲ್ಯವಲ್ಲ. ಗೌರಿಯವರ ಬಲಿದಾನ ಖಂಡಿತ ವಾಗಿಯೂ ವ್ಯರ್ಥವಾಗುವುದಿಲ್ಲ. ಅದು ನಾಡಿನಲ್ಲಿ ಇನ್ನಷ್ಟು ಗೌರಿಯರನ್ನು ಹುಟ್ಟಿಸುತ್ತದೆ. ಹೊಸ ಕನ್ನಡ ನಾಡೊಂದನ್ನು ಕಟ್ಟಲು ತರುಣರ ತಂಡ ಗೌರಿಯವರ ನೆನಪಿನ ಬೆಳಕಿನಲ್ಲಿ ಮುನ್ನಡೆಯುತ್ತದೆ.
 ...............................................

ಮೂರು ವರ್ಷಗಳ ಹಿಂದೆ, ಗೌರಿ ಲಂಕೇಶ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ನಾನೊಂದು ಶುಭಾಶಯ ಪದ್ಯವನ್ನು ಬರೆದಿದ್ದೆ. ಅದನ್ನು ಇದೀಗ ಶ್ರದ್ಧಾಂಜಲಿ ರೂಪದಲ್ಲಿ ಮತ್ತೆ ನೆನಪಿಸಿಕೊಂಡಿದ್ದೇನೆ. 
ದಾರಿ ಹೋಕರು ಎಸೆದ ನೂರು
ಕಲ್ಲುಗಳ ತಾಳಿಕೊಂಡು 
ಹುಳಿ ಮಾವಿನ ಮರದಲ್ಲಿ ತೂಗುತ್ತಿರುವ ಹಣ್ಣು 
ಲಂಕೇಶರ ಕನಸುಗಳ 
ಕಣ್ಣ ರೆಪ್ಪೆಯೊಳಗೆ ಜೋಪಾನ ಮಾಡಿ 
ಕಾವು ಕೊಡುತ್ತಾ 
ಎರಗುವ ಹದ್ದುಗಳ ಜೊತೆಗೆ 
ಬೀದಿಗಿಳಿದು ಬಡಿದಾಡುತ್ತಾ 
ಕೋರ್ಟು ಕಚೇರಿ ಎಂದು ಅಲೆದಾಡುತ್ತ 
ಟೀಕೆ-ಟಿಪ್ಪಣಿಗಳ ಬಾಣಕ್ಕೆ ಎದೆಗೊಟ್ಟ 
ಮುಸ್ಸಂಜೆ ಕಥಾ ಪ್ರಸಂಗದ ರಂಗವ್ವ 
ಕೆಲವರ ಪಾಲಿಗೆ ಅಕ್ಕ 
ಹಲವರ ಪಾಲಿಗೆ ಅವ್ವ 
ಸಾವಂತ್ರಿ, ರಂಗವ್ವ, ಸುಭದ್ರೆ, ದೇವೀರಿ 
ನೀಲು, ನಿಮ್ಮಿ... ಎಲ್ಲರೊಳಗೂ 
ಚೂರು ಚೂರಾಗಿ ನೀವು...
ನಿಮ್ಮಿಳಗೆ ಲಂಕೇಶರು 
ಹೊಸದಾಗಿ ಹುಟ್ಟಿದರು 
ಪತ್ರಿಕೆ ನಿಮ್ಮನ್ನು ಸಿಗರೇಟಿನಂತೆ 
ಸೇದುತ್ತಿದೆ... 
ಪ್ರತಿವಾರ ಸುಡು ಕೆಂಡ
ವಿಷ ಹೀರಿದ ನಂಜುಂಡ 
ಮಾತಿಲ್ಲದವರ ಪಾಲಿಗೆ 
ಪತ್ರಿಕೆಯೇ ನಾಲಗೆ 
ನಿರೀಕ್ಷೆ, ಸಮತೆಯ ನಾಳೆಗೆ
ಇಂದು ನಿಮಗೆ ಹುಟ್ಟಿದ ದಿನ 
ನಾಡು, ನುಡಿಯನ್ನು ನೀವು ಮುಟ್ಟಿದ ದಿನ


Sunday, September 17, 2017

ಗೌರಿಯ ಪದಗಳು


1
ಅವರು ಒಳ್ಳೆಯ ಭಾಷಣಕಾರರಾಗಿರಲಿಲ್ಲ 
ಆದರೂ ಅವರು ಒಳ್ಳೆಯದನ್ನು ಮಾತನಾಡಿದರು
ಅವರು ಪ್ರಕಾಂಡ ಲೇಖಕಿಯಾಗಿರಲಿಲ್ಲ 
ಅಕ್ಷರ ಅಕ್ಷರಗಳನ್ನು ಜೋಡಿಸಿ 
ಬರೆದು, ತಾನೇ ಮಾದರಿ ಪುಸ್ತಕವಾದರು
ವ್ಯವಹಾರ ಗೊತ್ತಿರಲಿಲ್ಲ 
ಸಾಲ ಸೋಲಗಳ ಶಿಲುಬೆ ಹೊತ್ತು 
ನಡುಗು ಹೆಜ್ಜೆಯಲ್ಲಿ ಮುಂದೆ ನಡೆದರು, 
ಪತ್ರಿಕೆಯ ಲಾಭದ 
ಕೊಯ್ಲನ್ನು ನಮಗೆಂದು ಬಿಟ್ಟು ಹೋದರು
ಸಂಸಾರವಂದಿಗಳಲ್ಲ
ಒಂಟಿ ಹೆಣ್ಣು ಆಕೆ 
ಆದರೂ, ಇಂದು ಜಗದ ಮಕ್ಕಳು 
ಅನಾಥರಾದೆವೆಂದು ಅಳುತ್ತಿದ್ದಾರೆ
ಆಕೆ ದೈಹಿಕವಾಗಿ 
ದುರ್ಬಲರಾಗಿದ್ದರು 
ಆದರೂ ಅವರನ್ನು ಕೊಲ್ಲಲು 
ಏಳು ಗುಂಡುಗಳು ಬೇಕಾಯಿತು !
2
ಹೌದು, ನಾನು ಅತ್ತಿದ್ದೇನೆ
ಹೀಗೆನ್ನಲು ನಾನು ನಾಚೂದಿಲ್ಲ 
ನೆಲಕ್ಕೆ ಬಿದ್ದ ನನ್ನ ಕಣ್ಣ ಹನಿಗಳು 
ವ್ಯರ್ಥವಾಗುವುದಿಲ್ಲ... 
ಅವು ಸಂಕ್ರಾಂತಿಯನ್ನು 
ಒಡಲೊಳಗೆ ಬಚ್ಚಿಟ್ಟುಕೊಂಡ ಬೀಜಗಳು
3
ಆ ಓಣಿಯಲ್ಲಿ ಸಾಗುವಾಗ ಎಚ್ಚರ 
ಅದು ಸಜ್ಜನರು ಬದುಕುವ ಓಣಿ 
ಈಗಷ್ಟೇ ಒಂದು ಹೆಣವನ್ನು ನೋಡಿದವರಂತೆ 
ಅಲ್ಲಿ ಆವರಿಸಿಕೊಂಡ ಮೌನ 
ನಿಮ್ಮನ್ನು ಬೆಚ್ಚಿ ಬೀಳಿಸಬಹುದು !
4
ನಮಗೆ ದೊರಕಿರುವ
 "ಅಭಿವ್ಯಕ್ತಿ" ಎನ್ನೋ ಪದ 
ಲಕ್ಷಾಂತರ ಜನರ ರಕ್ತದಲ್ಲಿ 
ನೆಂದಿದೆ 
ಎನ್ನೋ ಕೃತಜ್ಞತೆ ನಮಗಿರಬೇಕು
5
ದಾರಿ ಹೋಕರು ಎಸೆದ ನೂರು 
ಕಲ್ಲುಗಳ ತಾಳಿಕೊಂಡು 
ಹುಳಿ ಮಾವಿನ ಮರದಲ್ಲಿ ತೂಗುತ್ತಿರುವ 
ಹಣ್ಣು
ಲಂಕೇಶರ ಕನಸುಗಳ 
ಕಣ್ಣ ರೆಪ್ಪೆಯೊಳಗೆ ಜೋಪಾನ ಮಾಡಿ 
ಕಾವು ಕೊಡುತ್ತಾ 
ಎರಗುವ ಹದ್ದುಗಳ ಜೊತೆಗೆ 
ಬೀದಿಗಿಳಿದು ಬಡಿದಾಡುತ್ತಾ 
ಕೋರ್ಟು ಕಚೇರಿ ಎಂದು ಅಲೆದಾಡುತ್ತ 
ಟೀಕೆ-ಟಿಪ್ಪಣಿಗಳ ಬಾಣಕ್ಕೆ ಎದೆಗೊಟ್ಟ 
ಮುಸ್ಸಂಜೆ ಕಥಾ ಪ್ರಸಂಗದ ರಂಗವ್ವ
ಕೆಲವರ ಪಾಲಿಗೆ ಅಕ್ಕ 
ಹಲವರ ಪಾಲಿಗೆ ಅವ್ವ 
ಸಾವಂತ್ರಿ, ರಂಗವ್ವ, ಸುಭದ್ರೆ, ದೇವೀರಿ 
ನೀಲು, ನಿಮ್ಮಿ... ಎಲ್ಲರೊಳಗೂ 
ಚೂರು ಚೂರಾಗಿ ನೀವು... 
ನಿಮ್ಮೊಳಗೆ ಲಂಕೇಶರು 
ಹೊಸದಾಗಿ ಹುಟ್ಟಿದರು
ಪತ್ರಿಕೆ ನಿಮ್ಮನ್ನು ಸಿಗರೇಟಿನಂತೆ 
ಸೇದುತ್ತಿದೆ... 
ಪ್ರತಿವಾರ ಸುಡು ಕೆಂಡ 
ವಿಷ ಹೀರಿದ ನಂಜುಂಡ 
ಮಾತಿಲ್ಲದವರ ಪಾಲಿಗೆ 
ಪತ್ರಿಕೆಯೇ ನಾಲಗೆ 
ನಿರೀಕ್ಷೆ, ಸಮತೆಯ ನಾಳೆಗೆ
ಇಂದು ನಿಮಗೆ ಹುಟ್ಟಿದ ದಿನ 
ನಾಡು, ನುಡಿಯನ್ನು ನೀವು ಮುಟ್ಟಿದ ದಿನ

ಗೌರಿ ಮೇಡಂಗೆ ಪದ್ಯದ ಮೂಲಕ ನಾನು ಶುಭಾಷಯ ಹೇಳಿದಾಗ ಅವರು ನನಗೆ ಇನ್ಬಾಕ್ಸ್ ನಲ್ಲಿ ಪ್ರತಿಕ್ರಯಿಸಿದ್ದು ಹೀಗೆ ...
01/29/2015 7:12PM
Oh basheer!!!!!!!!!!! you made me cry on my birthday. thank you thank you thank you. first time someone has written a poem about me. this is the most beautiful gift i have got in all my 53 birthdays. of course the best gift i have got was LIFE from my parents.
6
ನನ್ನ ಮರಣವ 
ಕಂಡು ಅವರು ಉದ್ಗರಿಸುತ್ತಾರೆ 
ಇವನು ಮಹಮದೀಯನಲ್ಲ, 
ಕ್ರಿಶ್ಚಿಯನ್ನನಲ್ಲ, 
ಯಹೂದಿಯಲ್ಲ 
ಹಿಂದೂ ಅಂತೂ ಅಲ್ಲವೇ ಅಲ್ಲ ... 
ಈ ಮರಣ ಕೂಗಿ ಹೇಳುತ್ತಿದೆ 
ಇವನೊಬ್ಬ ಶರಣ!!

Wednesday, September 13, 2017

ಗಾಂಧಿಯ ಬೆಳಕಲ್ಲಿ ಗೌರಿ....

ಗೌರಿ ಲಂಕೇಶ್ ಪತ್ರಿಕೆಯ ಕೊನೆಯ ಸಂಚಿಕೆಗೆಂದು ಬರೆದಿರುವ ಲೇಖನ ....
ನಾನು ಬಾಲ್ಯದಲ್ಲಿ ಕೇಳಿದ ಕತೆ ಇದು. ಈ ಕತೆ ಹೇಳಿದ್ದು ನನ್ನ ತಾಯಿ. ಆಕೆ ಅದನ್ನು ನನಗೆ ಹೇಳುವ ಸಂದರ್ಭದಲ್ಲಿ ಯಾವ ಉದ್ದೇಶ ಇತ್ತು ಎನ್ನುವುದು ನನಗೆ ಅರಿಯದು. ಆದರೆ ಆ ಬಳಿಕ, ಈ ಕತೆ ನಾನು ಬೆಳೆದಂತೆ ಹೆಚ್ಚು ಹೆಚ್ಚು ಉಜ್ವಲಗೊಳ್ಳುತ್ತಾ ನನ್ನನ್ನು ವಾಸ್ತವಕ್ಕೆ ಮುಖಾಮುಖಿಯಾಗುವುದಕ್ಕೆ ಪ್ರೇರೇಪಿಸಿದೆ. ನನ್ನ ತಾಯಿ ಹೇಳಿದ ಕತೆ ಹೀಗಿದೆ. 

ಪ್ರವಾದಿ ಮಹಮ್ಮದ್ ಆಗಷ್ಟೇ ಮಕ್ಕಾದಲ್ಲಿ ತನ್ನ ಚಿಂತನೆಗಳನ್ನು ಹರಡುತ್ತಿದ್ದ ಕಾಲ. ಅವರು ಭಾಗಶಃ ಒಂಟಿಯಾಗಿದ್ದರು. ಹಲವರಿಂದ ಹುಚ್ಚ ಎಂಬ ಟೀಕೆಗೀಡಾಗಿದ್ದರಷ್ಟೇ ಅಲ್ಲದೆ ಹಲ್ಲೆಗೂ ಒಳಗಾಗಿದ್ದರು. ಎಲ್ಲರಿಗೂ ಅವರೊಂದು ತಮಾಷೆಯ ವಸ್ತು. ಇನ್ನೊಂದೆಡೆ ಮಹಮ್ಮದರ ಸಂಬಂಧಿಯಾಗಿರುವ ಮಕ್ಕಾದ ನಾಯಕ ಅಬೂಜಹಲ್(ಈತನ ನಿಜವಾದ ಹೆಸರು ಅಮ್ರ್ ಬಿನ್ ಹಿಶಾಮ್) ಮಹಮ್ಮದರಿಗೆ ಸರಿಯಾದ ಪಾಠ ಕಲಿಸಲು ಕಾಯುತ್ತಿದ್ದ. ಕೈಗೆ ಸಿಕ್ಕಿದರೆ ಕೊಂದೇ ಹಾಕುವುದೆಂದು ತೀರ್ಮಾನಿಸಿದ್ದ. ಮಕ್ಕಾದ ಪುಂಡರೆಲ್ಲ ಸಮಯ ಸಿಕ್ಕಿದಾಗ ಮಹಮ್ಮದರ ಮೇಲೆ ಟೀಕೆ, ದಾಳಿಗಳನ್ನು ನಡೆಸುತ್ತಿದ್ದರು.

 ಒಂದು ದಿನ ಮಕ್ಕಾದ ನಗರದ ಮೂಲೆಯಲ್ಲಿ, ರೌಡಿಗಳೆನಿಸಿಕೊಂಡ ಕೆಲವರು ಕುಳಿತು ಮಹಮ್ಮದರ ಚಿಂತನೆ, ಹೋರಾಟವನ್ನು ಚರ್ಚಿಸಿ ನಗುತ್ತಿದ್ದರು. ಆ ಸಂದರ್ಭದಲ್ಲಿ ಆ ಗುಂಪಿನ ಕಡೆಗೆ ಒಬ್ಬ ಬಡ ಕಾರ್ಮಿಕ ಬಂದ. ‘‘ಈ ನಗರದ ಆಗರ್ಭ ಶ್ರೀಮಂತ ಅಬೂಜಹಲ್ ನನಗೆ ಹಣವನ್ನು ಕೊಡುವುದಕ್ಕಿದೆ. ಕೇಳಿದರೆ ಬೆದರಿಸುತ್ತಾನೆ. ದಯವಿಟ್ಟು ಅದನ್ನು ವಸೂಲಿ ಮಾಡಿ ಕೊಡಿ’’ ಎಂದು ಗೋಗರೆಯ ತೊಡಗಿದ. ಅಲ್ಲಿದ್ದವರೆಲ್ಲ ಬಲಿಷ್ಟರು. ಶಕ್ತಿವಂತರು. ಗಣ್ಯರೂ ಅವರ ನಡುವೆ ಇದ್ದರು. ಆದರೆ ಅವರ್ಯಾರಿಗೂ ಈ ಕಾರ್ಮಿಕನಿಗಾಗಿ ಅಬೂಜಹಲ್‌ನೊಂದಿಗೆ ನಿಷ್ಠುರ ಕಟ್ಟಿಕೊಳ್ಳುವ ಇರಾದೆಯಿರಲಿಲ್ಲ. ಇನ್ನೇನು ಆತನನ್ನು ಗದರಿಸಿ ಓಡಿಸಬೇಕು ಎನ್ನುವಷ್ಟರಲ್ಲಿ ಒಬ್ಬನಿಗೆ ಏನನ್ನಿಸಿತೋ ‘‘ನೋಡು, ಓ ದೂರದಲ್ಲಿ ಒಬ್ಬ ಏಕಾಂಗಿಯಾಗಿ ಕುಳಿತಿದ್ದಾನಲ್ಲ. ಅವನ ಬಳಿಗೆ ಹೋಗು. ಅವನು ಖಂಡಿತವಾಗಿಯೂ ನಿನ್ನ ಹಣವನ್ನು ಅಬೂಜಹಲ್‌ನಿಂದ ವಸೂಲಿ ಮಾಡಿ ಕೊಡುತ್ತಾನೆ’’ ಎಂದು ಹೇಳಿದ. ಕೂಲಿ ಕಾರ್ಮಿಕ ಅದನ್ನು ನಂಬಿ ಆ ವ್ಯಕ್ತಿಯ ಕಡೆಗೆ ನಡೆದ. ಅಲ್ಲಿ ಮುಹಮ್ಮದರು ಏಕಾಂಗಿಯಾಗಿ ಕೂತಿದ್ದರು. ಕಾರ್ಮಿಕನನ್ನು ಮತ್ತು ಮಹಮ್ಮದರನ್ನು ಏಕಕಾಲದಲ್ಲಿ ತಮಾಷೆ ಮಾಡುವುದು ಅಲ್ಲಿ ಗುಂಪು ಕೂಡಿದ್ದವರ ಉದ್ದೇಶವಾಗಿತ್ತು. ಕಾರ್ಮಿಕ ಇವರ ಮಾತನ್ನು ನಂಬಿ ಮಹಮ್ಮದರ ಬಳಿಗೆ ಸಾರಿ, ತನ್ನ ಅಳಲನ್ನು ಹೇಳಿದ. ಕಾರ್ಮಿಕನ ಅಳಲನ್ನು ವಿವರವಾಗಿ ಆಲಿಸಿದ ಮಹಮ್ಮದರು, ಎಲ್ಲರೂ ನೋಡು ನೋಡುತ್ತಿದ್ದಂತೆಯೇ ಆತನ ಕೈ ಹಿಡಿದು ನೇರವಾಗಿ ಅಬೂಜಹಲನ ಮನೆಯ ಕಡೆಗೆ ನಡೆದರು. ಹೋದವರೇ ಅಬೂಜಹಲರ ಮನೆ ಬಾಗಿಲನ್ನು ತಟ್ಟಿದರು. ಆತ ಬಾಗಿಲು ತೆರೆದರೆ, ತನ್ನ  ಮುಂದೆ ತಾನು ಹುಡುಕುತ್ತಿರುವ ಮುಹಮ್ಮದ್! ಜೊತೆಗೆ ತಾನು ಹಣ ನೀಡುವುದಕ್ಕೆ ಬಾಕಿಯಿಟ್ಟಿರುವ ಕಾರ್ಮಿಕ!  ಮಹಮ್ಮದರು ಕಾರ್ಮಿಕನನ್ನು ತೋರಿಸಿ ಒಂದೇ ವಾಕ್ಯ ಹೇಳಿದರು ‘‘ಈತನಿಗೆ ನೀಡಬೇಕಾಗಿರುವ ಹಣವನ್ನು ಕೊಟ್ಟು ಬಿಡಿ’’. ಅಬೂಜಹಲ್ ಯಾವುದೋ ವಿಸ್ಮೃತಿಗೆ ತಳ್ಳಲ್ಪಟ್ಟವನಂತೆ ನೇರ ಒಳಹೋದವನೇ ಹಣವನ್ನು ತಂದು ಕಾರ್ಮಿಕನಿಗೆ ಒಪ್ಪಿಸಿದ. ಮಹಮ್ಮದ್ ಕಾರ್ಮಿಕನ ಜೊತೆಗೆ ಅಲ್ಲಿಂದ ವಾಪಾಸಾದರು. ಇವನ್ನೆಲ್ಲ ವಿಸ್ಮಿತರಾಗಿ ನೋಡುತ್ತಿದ್ದ ಮಕ್ಕಾ ನಗರದ ಪುಂಡರು ಅಬೂಜಹಲ್‌ನನ್ನು ತರಾಟೆಗೆ ತೆಗೆದುಕೊಂಡರು. ಆಗ ಅಬೂಜಹಲ್ ನುಡಿದನಂತೆ ‘‘ಮಹಮ್ಮದರ ಎರಡು ಭುಜಗಳಲ್ಲಿ ನಾನು ಎರಡು ಸಿಂಹಗಳು ಘರ್ಜಿಸುತ್ತಿರೂದನ್ನು ನೋಡಿದೆ’’
   ಮಹಮ್ಮದರ ಭುಜಗಳಲ್ಲಿ ಎರಡು ಸಿಂಹಗಳು ಗರ್ಜಿಸುತ್ತಿತ್ತೋ ಇಲ್ಲವೋ ನನಗೆ ಗೊತ್ತಿಲ್ಲ. ಮಹಮ್ಮದರು ಒಬ್ಬ ಅನಕ್ಷರಸ್ಥರು. ಅನಾಥರು. ದೈಹಿಕವಾಗಿ ದುರ್ಬಲರು. ಬಡವರು. ಎಲ್ಲಕ್ಕಿಂತ ಮುಖ್ಯವಾಗಿ ಅವರು ಏಕಾಂಗಿ. ಆದರೆ ಮಹಮ್ಮದರ ಪ್ರಾಮಾಣಿಕತೆ, ನಿಷ್ಠುರತೆ, ನ್ಯಾಯಪರತೆಗೆ ಅವನು ಹೆದರಿದ. ಒಬ್ಬ ಮನುಷ್ಯನೊಳಗಿರುವ ನೈತಿಕ ಶಕ್ತಿಯೇ ಆತನ ನಿಜವಾದ ಬಲ ಎನ್ನುವುದನ್ನು ಆ ಕತೆಯಿಂದ ಅರಿತುಕೊಳ್ಳುತ್ತಾ ಹೋದೆ. ಯಾವಾಗ ಗಾಂಧೀಜಿಯ ಬದುಕು ಮತ್ತು ಹೋರಾಟವನ್ನು ನಾನು ಓದತೊಡಗಿದೆನೋ, ಮೇಲಿನ ಕತೆ ತನ್ನ ಒಳ ತಿಳಿವನ್ನು ಇನ್ನಷ್ಟು ಇನ್ನಷ್ಟು ಬಿಟ್ಟು ಕೊಡತೊಡಗಿತು. ತನ್ನೆಲ್ಲ ಸೋಗಲಾಡಿತನಗಳ ಮೂಲಕ ಬದುಕುವ ಮನುಷ್ಯ ತನ್ನ ದೌರ್ಬಲ್ಯಗಳನ್ನು ಖಾಕಿಯ ಮೂಲಕ, ಹಣದ ಮೂಲಕ, ದೈಹಿಕ ಬಲದ ಮೂಲಕ, ಹಿಂಬಾಲಕರ ಮೂಲಕ, ಪುರೋಹಿತ ಶಾಹಿ ವ್ಯವಸ್ಥೆಯ ಮೂಲಕ ರಕ್ಷಿಸಿಕೊಳ್ಳಲು ಯತ್ನಿಸುತ್ತಾನೆ. ಅನೇಕ ಸಂದರ್ಭಗಳಲ್ಲಿ ಆತ ತನ್ನ ಪಾಂಡಿತ್ಯ, ವಿದ್ವತ್ತುಗಳ ಮೂಲಕವೂ ಬಚ್ಚಿಟ್ಟುಕೊಳ್ಳಲು ಯತ್ನಿಸುತ್ತಾನೆ. ಆದರೆ ಮೂಲತಃ ಅವನು ಪ್ರಾಮಾಣಿಕ, ನ್ಯಾಯನಿಷ್ಠುರ ಮನುಷ್ಯನಿಗೆ ಒಳಗೊಳಗೆ ಅಂಜುತ್ತಾ ಬದುಕುತ್ತಾನೆ. ಇಲ್ಲವಾದರೆ, ಒಬ್ಬ ಫಕೀರ, ವೃದ್ಧ, ನಿಶ್ಶಸ್ತ್ರ ಮನುಷ್ಯನನ್ನು ಗೋಡ್ಸೆಯಂತಹ ವ್ಯಕ್ತಿಗೆ ಗುಂಡು ಹಾಕಿ ಕೊಲ್ಲುವ ಅಗತ್ಯವೇ ಬೀಳುತ್ತಿರಲಿಲ್ಲ. ಇದೇ ಸಂದರ್ಭದಲ್ಲಿ ನೆಹರೂನ ಮಾತಿನ ಲಾಲಿತ್ಯ, ವಲ್ಲಭಬಾಯಿ ಪಟೇಲರ ಶಕ್ತಿ, ಬಾಲಗಂಗಾಧರ ತಿಲಕರ ವಾಕ್ ವೈಭವ ಎಲ್ಲವನ್ನೂ ಗಾಂಧಿ ಮೀರಿದ್ದು ತನ್ನ ನ್ಯಾಯನಿಷ್ಠುರವಾದ ವ್ಯಕ್ತಿತ್ವದ ಮೂಲಕ. ತನ್ನ ಸರಳತೆಯ ಮೂಲಕ. 

ರಾಜ್ಯದಲ್ಲಿ ಲಂಕೇಶರ ವಿದ್ವತ್‌ಭರಿತ ವ್ಯಕ್ತಿತ್ವವನ್ನು ಮೀರಿ ಗೌರಿ ಲಂಕೇಶ್ ಬೆಳೆದು, ನಾಡನ್ನು ಆವರಿಸಿದ್ದು ಇದೇ  ನೈತಿಕಶಕ್ತಿಯಿಂದ ಎನ್ನುವುದನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ. ಗೌರಿ ಆಳದಲ್ಲಿ ಒಂಟಿಯಾಗಿದ್ದವರು. ದೈಹಿಕವಾಗಿ ದುರ್ಬಲರಾಗಿದ್ದರು. ಒಳ್ಳೆಯ ಭಾಷಣಕಾರ್ತಿಯಂತೂ ಆಗಿರಲೇ ಇಲ್ಲ. ಹಾಗೆಯೇ ವಿದ್ವ,ತ್ ಪೂರ್ಣ ಬರಹಗಾರ್ತಿಯೂ ಅವರಲ್ಲ. ಆದರೆ ನಡು ಬೀದಿಯಲ್ಲಿ ಅಮಾಯಕನೊಬ್ಬ ಬರ್ಬರವಾಗಿ ಹಲ್ಲೆಗೀಡಾಗುತ್ತಿರುವಾಗ ಅವನು ನಮ್ಮಿಂದ ನಿರೀಕ್ಷಿಸುವುದು ಪ್ರಗಲ್ಭ ಭಾಷಣವನ್ನಲ್ಲ, ವಿದ್ವತ್ತನ್ನಲ್ಲ  ಎನ್ನುವುದು ಗೌರಿಗೆ ಗೊತ್ತಿತ್ತು. ‘ನಿಲ್ಲಿಸಿ’ ಎನ್ನುವ ಒಂದೇ ಒಂದು ಶಬ್ಬ ನಮ್ಮ ಬಾಯಿಯಿಂದ ಮೊಳಗಿದರೆ ಅಥವಾ ನಮ್ಮ ಲೇಖನಿಯಿಂದ ಉದುರಿದರೆ ಅದನ್ನು ವರ್ತಮಾನ ಆಲಿಸುತ್ತದೆ. ತಿರಸ್ಕರಿಸುತ್ತದೆ. ಅಥವಾ ಆ ಪದವನ್ನು ಗಂಭೀರವಾಗಿ ಚರ್ಚಿಸುತ್ತದೆ. "ನಿಲ್ಲಿಸಿ" ಅಥವಾ "ಬೇಡ" ಎನ್ನುವುದು ಇಂದಿನ ದಿನಗಳಲ್ಲಿ ಒಂದು ಪದ ಅಥವಾ ಒಂದು ವಾಕ್ಯ ಮಾತ್ರವಲ್ಲ, ಅದೊಂದು ಪೂರ್ಣ ಲೇಖನವೂ ಕೂಡ. ಇಂಗ್ಲಿಶ್  ಪತ್ರಿಕೋದ್ಯಮದಿಂದ ಬಂದ ಗೌರಿಗೆ ಕನ್ನಡದಲ್ಲಿ ವಿದ್ವತ್ ಪೂರ್ಣವಾಗಿ ಬರೆಯಲು ಸಾಧ್ಯವಿರಲಿಲ್ಲ. ಅವರು  ಕನ್ನಡದಲ್ಲಿ ತಡವರಿಸುತ್ತಾ ಮಾತನಾಡಿದರು. ಅಕ್ಷರಕ್ಷರಗಳನ್ನು ಕೂಡಿಸಿ ಬರೆದರು. ‘ಕನ್ನಡವೇ ಸರಿಯಾಗಿ ತಿಳಿಯದ ಈಕೆ ಲಂಕೇಶರ ಪತ್ರಿಕೆಯನ್ನು ಹೇಗೆ ಮುಂದುವರಿಸಿಯಾಳು?’ ಎಂಬ ಪ್ರಶ್ನೆಗಳಿಗೆ ತನ್ನ ಸರಳ ಆದರೆ ಅಷ್ಟೇ ನಿಷ್ಠುರವಾದ ವ್ಯಕ್ತಿತ್ವದ ಮೂಲಕ ಅವರಿಗೆ ಉತ್ತರಿಸಿದರು. ಅವರು ಸಾಹಿತ್ಯದ ಭಾಷೆಯಲ್ಲಿ ಮಾತನಾಡದೆ, ಜನಸಾಮಾನ್ಯರ ಸರಳ ಕನ್ನಡದಲ್ಲಿ  ಮಾತನಾಡಿದರು. ಗೌರಿಯ ಸರಳ ಕನ್ನಡ ಕಾಲದ ಅಗತ್ಯವಾಗಿತ್ತು. ಹನ್ನೆರಡನೇ ಶತಮಾನದಲ್ಲಿ  ವಚನಕಾರರು ಬಳಸಿದ ಪಾಂಡಿತ್ಯ ರಹಿತ  ಸರಳ ಕನ್ನಡ ಅದು. ಇಂದಿನ ಕಾಲದ ಬೇಡಿಕೆಯೇ  ಸರಳ, ಸ್ಪಷ್ಟ ಮಾತುಗಳಾಗಿರುವಾಗ, ಗೌರಿಯ ಸರಳ ಭಾಷೆ ಅವರ ದೌರ್ಬಲ್ಯವಾಗದೆ, ಸಾಮರ್ಥ್ಯವಾಗಿ ಪರಿವರ್ತನೆಯಾಯಿತು.  ಆಕೆಯ ಸರಳ  ಮಾತು ಕಾಲದ ಬೇಡಿಕೆಯಾಗಿತ್ತು.  ಲಿಂಗಾಯತ ಸಮುದಾಯದಿಂದ ಬಂದಿದ್ದರೂ ಅವರು ಆ ಗುರುತನ್ನು ತಿರಸ್ಕರಿಸಿದ್ದರು. ಆದರೆ ಬಸವಣ್ಣನ ಆಶಯ ಅವರ ಅವರ ಹೋರಾಟಗಳ  ಅಡಿಗಲ್ಲಾಗಿತ್ತು. ಲಿಂಗಾಯತ ಧರ್ಮವನ್ನು ಇಂದಿನ ಕೆಲ ಸ್ವಾಮೀಜಿಗಳಿಗಿಂತ  ಹೆಚ್ಚು ತನ್ನದಾಗಿಸಿ ಕೊಂಡಿದ್ದರು. ರಾಜ್ಯದಲ್ಲಿ ಹರಡುತ್ತಿರುವ ಲಿಂಗಾಯತ ಚಳವಳಿಯ ಮಹತ್ವವನ್ನು ಮನಗಂಡಿದ್ದರು. ಆಕೆ ಬದುಕಿದ ರೀತಿ, ಆಕೆಯ ಅಸೀಮ ಧೈರ್ಯ, ಹೋರಾಟ, ಮತ್ತು ಅಂತ್ಯ   ಒಬ್ಬ ಶ್ರೇಷ್ಠ ಶರಣೆಗೆ ತಕ್ಕುದಾಗಿತ್ತು.   
‘ಲಂಕೇಶರ ಪತ್ರಿಕೆ ಈಗ ಅವರ ಮಗಳಂತೆ ಸೊರಗಿದೆ’  ಕೆಲವರು  ತೆರೆ ಮರೆಯಲ್ಲಿ ವ್ಯಂಗ್ಯವಾಡುತ್ತಿದ್ದರು. ಆದರೆ ಆ ಮಾತುಗಳಿಗೆ ತನ್ನ ಬದುಕು ಮತ್ತು ಮರಣದ ಮೂಲಕವೇ ಅವರು ಉತ್ತರಿಸಿದರು. ಆಕೆಯ ತಮ್ಮನೂ ಸೇರಿದಂತೆ ಈ ನಾಡಿನ ಪ್ರಮುಖ ಟ್ಯಾಬ್ಲಾಯಿಡ್ ಪತ್ರಿಕೆಯ ಸಂಪಾದಕರು ಗನ್ ಇಟ್ಟು ಓಡಾಡುತ್ತಿರುವಾಗ, ಈಕೆ ಯಾವ ಶಸ್ತ್ರಗಳ ರಕ್ಷಣೆ ಇಲ್ಲದೆಯೇ ಓಡಾಡಿದರು. ಗಾಂಧೀಜಿಗೋ ಅವರ ‘ಮಹಾತ್ಮ’ನೆಂಬ ಪ್ರಭಾವಳಿ ರಕ್ಷಣೆಗಿತ್ತು. ಆದರೆ ಗೌರಿಯೆನ್ನುವ ಈ ತಾಯಿಗೆ ಅದೂ ಇದ್ದಿರಲಿಲ್ಲ. ಆದರೆ ಆಕೆ ಎಷ್ಟು ಶಕ್ತಿವಂತೆ ಎನ್ನುವುದು ಆಕೆಯನ್ನು ಕೊಂದವರಿಗೆ ಗೊತ್ತಿತ್ತು. ಅದಕ್ಕಾಗಿಯೇ ಅವರನ್ನು ಕೊಲ್ಲುವುದಕ್ಕಾಗಿ ಏಳು ಗುಂಡುಗಳನ್ನು ಅವರು ಬಳಸಬೇಕಾಯಿತು. ಆದರೂ ಆಕೆಯನ್ನು ಕೊಲ್ಲಲು ಸಾಧ್ಯವಾಗಲಿಲ್ಲ ಎನ್ನುವ ಅಂಶ ಕೊಲೆಗಾರರಿಗೆ ತಡವಾಗಿಯಾದರೂ ಮನವರಿಕೆಯಾಗಿರಬಹುದು. ಯಾಕೆಂದರೆ, ಗೌರಿ ಸಾಯುವ ಮೊದಲು ಕರ್ನಾಟಕಕ್ಕಷ್ಟೇ ಸೀಮಿತವಾಗಿದ್ದರು. ಈಗ ನೋಡಿದರೆ ದೇಶಾದ್ಯಂತ ತನ್ನ ವ್ಯಕ್ತಿತ್ವವನ್ನು ವಿಸ್ತರಿಸಿಕೊಂಡು ವಿಕ್ರಮ ರೂಪತಾಳಿದ್ದಾರೆ. ಈ ದೇಶದ ಸೌಹಾರ್ದವನ್ನು ನಾಶ ಮಾಡುವ ಶಕ್ತಿಗಳಿಗೆ ಇನ್ನಷ್ಟು ಸವಾಲಾಗಿ ನಿಂತಿದ್ದಾರೆ.

Monday, July 17, 2017

ಮಮತೆ ಮತ್ತು ಇತರ ಕತೆಗಳು

ಜಾತಿ
ಅವನು ಬಾಡಿಗೆ ಮನೆ ಹುಡುಕುತ್ತಿದ್ದ.
ಅದೊಂದು ಮನೆ ಬಾಡಿಗೆಗಿತ್ತು. ಇವನು ಹೋಗಿ ವಿಚಾರಣೆ ನಡೆಸಿದ.
ಒಡೆಯ ಹೇಳಿದ ‘‘ನಮ್ಮ ಜಾತಿಯವರಿಗೆ ಮಾತ್ರ ಕೊಡೋದು. ಹೇಳಿ, ನಿಮ್ಮ ಜಾತಿ ಯಾವುದು’’
ಅವನು ಉತ್ತರಿಸಿದ ‘‘ನನ್ನದು ಮನುಷ್ಯ ಜಾತಿ...’’
ಒಡೆಯ ತಕ್ಷಣವೇ ಹೇಳಿದ ‘‘ಇಲ್ಲ ಇಲ್ಲ, ಆ ಜಾತಿಯವರಿಗೆ ಕೊಡುವುದಕ್ಕಾಗುವುದಿಲ್ಲ. ನಮ್ಮ ಜಾತಿಯವರಿಗೆ ಮಾತ್ರ...’’ ಎಂದು ಕದ ಇಕ್ಕಿದ.

ಗ್ಯಾರಂಟಿ
‘‘ಸಾರ್...ಈ ಫ್ರಿಜ್ಜಿಗೆ ಎಷ್ಟು ವರ್ಷ ಗ್ಯಾರಂಟಿಯಿದೆ’’
ಗ್ರಾಹಕ ಅಂಗಡಿಯಾತನಲ್ಲಿ ಕೇಳಿದ
‘‘ಮನುಷ್ಯನಿಗಿರುವ ಗ್ಯಾರಂಟಿಗಿಂತ ಎರಡು ದಿನ ಜಾಸ್ತಿ’’ ಅಂಗಡಿಯಾತ ತಣ್ಣಗೆ ಹೇಳಿದ

ಕೊಲೆ
‘‘ಬೀದಿಯಲ್ಲೊಂದು ಕೊಲೆ’’
‘‘ಹೌದಾ...ನಮ್ಮವರದಾ? ಅವರದಾ?’’
‘‘ನಮ್ಮವರದು....’’
‘‘ಹೌದಾ..ಅನ್ಯಾಯ ಬಂದ್ ನಡೆಸಬೇಕು....ಕೊಂದವರು ಯಾರು ನಮ್ಮವರೋ, ಅವರೋ...?’’
‘‘ನಮ್ಮವರೇ...’’
‘‘ಛೆ...ಸ್ವಲ್ಪದರಲ್ಲಿ ಮಿಸ್ಸಾಯಿತು...’’

ಹಣ
ಒಬ್ಬ ದಿನಕ್ಕೆ 200 ರೂಪಾಯಿ ದುಡಿಯುತ್ತಿದ್ದ. ಅದರಿಂದ 50 ರೂ.ಯನ್ನು ಉಳಿಸಿ, ತನ್ನ ತಂದೆ ತಾಯಿಯ ಕೈಗಿಡುತ್ತಿದ್ದ.
 ಆತ ನಿಧಾನಕ್ಕೆ ಹೆಚ್ಚು ಹಣ ಸಂಪಾದಿಸತೊಡಗಿದ.
ಇದೀಗ ಆತ ಪ್ರತಿ ದಿನ 10 ಸಾವಿರ ದುಡಿಯುತ್ತಿದ್ದಾನೆ.
ಆದರೆ, ತಂದೆ ತಾಯಿಗೆ ಕೊಡಲು ಅವನಲ್ಲಿ ಹಣವೇ ಇಲ್ಲ. 
ಕೇಳಿದರೆ ‘‘ನಿಮಗೇಕೆ ಹಣ?’’ ಎನ್ನುತ್ತಾನೆ. 
ಮೈ ತುಂಬಾ ಸಾಲ ಮಾಡಿಕೊಂಡು ಓಡಾಡುತ್ತಿದ್ದಾನೆ. 

ಓದು
‘‘ನಾನು ಓದಿದ ಸರ್ವ ಶ್ರೇಷ್ಠ ಚಿಂತಕರು ಅವರು. ನನ್ನ ಬದುಕಿಗೆ ಅವರೇ ನಾಯಕ’’ ಆತ ತನ್ನ ನೇತಾರನ ಹೆಸರು ಹೇಳಿ ಘೋಷಿಸಿದ.
ಸಂತ ವಿನಯದಿಂದ ಕೇಳಿದ ‘‘ನೀವು ಯಾವ ಯಾವ ಚಿಂತಕರನ್ನೆಲ್ಲ ಈವರೆಗೆ ಓದಿದ್ದೀರಿ’’
‘‘ಅವರನ್ನು ಬಿಟ್ಟರೆ ಇನ್ನಾರನ್ನೂ ಓದಿಲ್ಲ. ಯಾಕೆಂದರೆ ಇನ್ನಾರೂ ಅವರಷ್ಟು ದೊಡ್ಡ ಚಿಂತಕರೇ ಅಲ್ಲ’’ ಇವನು ಮತ್ತೆ ಎದೆ ತಟ್ಟಿ ಹೇಳಿದ.
ಸಂತ ನಿಟ್ಟುಸಿರಿಟ್ಟು ಅಲ್ಲಿಂದ ತೆರಳಿದ. 

ಮಮತೆ
ಒಬ್ಬ ವೃದ್ಧ ಕಾಲೆಳೆಯುತ್ತಾ ನಡೆಯುತ್ತಿದ್ದ.
ಅದನ್ನು ನೋಡಿದ ದಯಾಮಯ ಯುವಕನೊಬ್ಬ ಹೇಳಿದ ‘‘ನಾನು ನಿಮ್ಮನ್ನು ಹೆಗಲಲ್ಲಿ ಹೊತ್ತು ನಿಮ್ಮ ಮನೆಯವರೆಗೆ ನಡೆಯಲೆ?’’
ವೃದ್ಧ ಅವನನ್ನು ಮಮತೆಯಿಂದ ನೋಡಿ ಹೇಳಿದ ‘‘ನೀನು ನನ್ನನ್ನು ಹೊತ್ತುಕೊಳ್ಳುತ್ತೀಯೋ, ಇಲ್ಲವೋ ಗೊತ್ತಿಲ್ಲ. ಆದರೆ ನಿನ್ನನ್ನಂತೂ ನಾನು ನನ್ನ ಮನೆಯವರೆಗೆ ಹೊತ್ತುಕೊಂಡು ಹೋಗುವೆ’’ ಎಂದು ಅವನು ಕಾಲೆಳೆಯುತ್ತಾ ಮುಂದೆ ಸಾಗಿದ. 

ನೆರಳು
‘‘ನೆರಳಿಲ್ಲದ ಮನುಷ್ಯನಿದ್ದಾನೆಯೆ?’’ ಶಿಷ್ಯರು ಕೇಳಿದರು.
‘‘ಇದ್ದಾನೆ’’ ಸಂತ ನುಡಿದ.
‘‘ಯಾರು?’’ ಶಿಷ್ಯರು ಅಚ್ಚರಿಯಿಂದ ಪ್ರಶ್ನಿಸಿದರು.
‘‘ಯಾರು ಜೀವನದಲ್ಲಿ ತಪ್ಪನ್ನೇ ಮಾಡಿರುವುದಿಲ್ಲವೋ ಅವನಿಗೆ ನೆರಳಿರುವುದಿಲ್ಲ...’’
ಎಂದ ಸಂತ ಅಲ್ಲಿಂದ ಹೊರ ನಡೆದ. ಅವನ ನೆರಳು ಅವನನ್ನು ಹಿಂಬಾಲಿಸುತ್ತಿತ್ತು.

Sunday, March 19, 2017

ದೇವರ ಅಂಗಡಿಯ ಚಪ್ಪಲಿ....!

ಇಲ್ಲ ಎನ್ನುವ ದುಃಖ ಪಂಟುವನ್ನು ಯಾವತ್ತೂ ಕಾಡಿದ್ದಿಲ್ಲ. ನಗರಕ್ಕೆ ಒತ್ತಿಕೊಂಡಿರುವ ಕೊಳೆಗೇರಿಯಲ್ಲಿ ಹರಡಿಕೊಂಡಿರುವ ನೂರಾರು ಕುಟುಂಬಗಳ ಸದಸ್ಯರಲ್ಲಿ ಪಂಟು ಒಬ್ಬ. ಅವನ ಹೆಸರು ಪಾಂಡು ಎಂದೋ ಪಾಂಡುರಂಗ ಎಂದೋ ಇರಬಹುದು ಎಂದು ಗುಡಿಸಲ ಅಕ್ಕಪಕ್ಕದ ಹಿರಿಯರು ಮಾತನಾಡಿಕೊಳ್ಳುತ್ತಾರೆ. ತನಗೆ ಹೆಸರಿಟ್ಟವರಾರು ಎನ್ನುವುದೇ ಗೊತ್ತಿಲ್ಲದ ಕಾರಣದಿಂದ ತನ್ನ ಹೆಸರು ಪಂಟು ಅಥವಾ ಪಾಂಡು ಏನೇ ಆಗಿದ್ದರೂ ದೊಡ್ಡ ವ್ಯತ್ಯಾಸವಿಲ್ಲ ಎಂದು ಅವನು ತಿಳಿದುಕೊಂಡಿದ್ದ. ಪಂಟು ಶಾಲೆ ಕಲಿತಿಲ್ಲ. ಹುಟ್ಟಿದವನು ನೇರವಾಗಿ ನಗರದ ಓಣಿಯ ಕಡೆಗೆ ಅಂಬೆಗಾಲಿಕ್ಕಿ ನಡೆದ. ಸರಕಾರ, ಕಾನೂನು, ವ್ಯವಸ್ಥೆ ಯಾವುದೂ ಅವನಿಗೆ ಅರ್ಥವಾಗುವುದಿಲ್ಲ. ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿಯೂ ಇರಲಿಲ್ಲ. ಇಡೀ ಭೂಮಿ, ಆಕಾಶ, ನಕ್ಷತ್ರಗಳೆಲ್ಲ ನನ್ನವು, ನಾನು ಬೇಕೆಂದಾಗ ಅವನ್ನು ಬಳಸಿಕೊಳ್ಳಬಹುದು ಎನ್ನುವ ಅಪಾರ ಶ್ರೀಮಂತಿಕೆಯ ಜೊತೆಗೆ ಬದುಕಿಕೊಂಡು ಬಂದಿರುವ ಪಂಟುವಿಗೆ, ಜೋಪಡಿಗೆ ಒತ್ತಿಕೊಂಡ ಪುಟ್ಟ ನಗರ ಒಡೆಯನೇ ಇಲ್ಲದ, ತೆರೆದಿಟ್ಟ ತಿಜೋರಿಯಂತೆ ಕಾಣುತ್ತಿತ್ತು. ಬೇಕೆಂದಾಗಲೆಲ್ಲ ಈ ನಗರ ಅವನನ್ನು ಕರೆದು ಕೊಟ್ಟು, ಸಂತೈಸಿ ಕಳುಹಿಸುತ್ತಿತ್ತು. 

ಅಗತ್ಯ ಹಣ ಬೇಕೆಂದಾಗ ಯಾರದಾದರೂ ಜೇಬಿಗೆ ಕತ್ತರಿ ಹಾಕುತ್ತಿದ್ದ. ಹೊಸ ಪ್ಯಾಂಟು ಕೊಳ್ಳಬೇಕು ಎಂದಾಗ ರಸ್ತೆಯ ಜನಸಂದಣಿಯ ನಡುವೆ ಹರಡಿ ಮಾರಾಟಕ್ಕಿಟ್ಟಿರುವ ಬಟ್ಟೆಗಳಲ್ಲಿ ಒಂದೆರಡನ್ನು ನಾಜೂಕಾಗಿ ಎತ್ತಿ, ಅದರಲ್ಲಿ ತನ್ನ ಸೈಜಿನದನ್ನು ಇಟ್ಟುಕೊಂಡು ಉಳಿದುದನ್ನು ಕಡಿಮೆ ದರಕ್ಕೆ ತನ್ನ ಗೆಳೆಯರಿಗೇ ಮಾರುತ್ತಿದ್ದ. ಕೆಲವೊಮ್ಮೆ ಪುಕ್ಕಟೆಯಾಗಿಯೇ ಹಂಚುತ್ತಿದ್ದ. ಹಲವು ಪರಿಚಿತ ಗೂಡಂಗಡಿಗಳಲ್ಲಿ ಅವನು ಪುಕ್ಕಟೆಯಾಗಿಯೇ ದೋಸೆ, ಇಡ್ಲಿ ಹಾಕಿಸಿಕೊಂಡು ತಿನ್ನುತ್ತಿದ್ದ. ದುಡ್ಡಿದ್ದಾಗ ದುಪ್ಪಟ್ಟು ಕೊಡುತ್ತಿದ್ದ. ಇಲ್ಲವಾದರೆ ಅಕೌಂಟ್‌ನಲ್ಲಿ ಬರ್ಕೋ ಎಂದು ಬಿಂದಾಸಾಗಿ ಎದ್ದು ಹೋಗುತ್ತಿದ್ದ. ಆಗಾಗ ಜೈಲು ಸೇರುವ ಅಭ್ಯಾಸವೂ ಆಗಿತ್ತಾದರೂ, ಅದೂ ಅನ್ಯವೆಂದು ಅವನಿಗೆ ಅನ್ನಿಸಿರಲೇ ಇಲ್ಲ. ಅಲ್ಲಿರುವ ಸಿಬ್ಬಂದಿಯಿಂದ ಹಿಡಿದು ವಿಚಾರಣಾಧೀನ ಕೈದಿಗಳೆಲ್ಲ ಅವನಿಗೆ ಒಂದಲ್ಲ ಒಂದು ರೀತಿಯಲ್ಲಿ ಆಪ್ತರೇ ಆಗಿದ್ದರು. ಜೈಲು ಎನ್ನುವುದು ಅವನಿಗೊಂದು ಅಚ್ಚರಿಯಾಗಿತ್ತು. ಅನ್ನ, ಆಹಾರ, ವಸತಿಯನ್ನು ಪುಕ್ಕಟೆಯಾಗಿ ಜೈಲುಗಳ ಮೂಲಕ ಕೊಡುವ ಸರಕಾರದ ಕರುಣೆಗೆ ಅವನ ಹೃದಯ ತುಂಬಿ ಬರುತ್ತಿತ್ತು. ಅಲ್ಲಿನ ಜೈಲು ಸಿಬ್ಬಂದಿಗೂ ಅವನು ಆಪ್ತನಾಗಿದ್ದ. ಅದೆಷ್ಟೋ ಕೆಲಸಗಳನ್ನು ಅವನಿಂದ ಮಾಡಿಸಿಕೊಳ್ಳುತ್ತಿದ್ದರು. ಅದಕ್ಕಾಗಿ ಸಣ್ಣ ಹಣವನ್ನೂ ನೀಡುತ್ತಿದ್ದರು. ಮತ್ತು ಹೀಗಿದ್ದರೂ ಈ ನಗರದ ಜನರು ಯಾಕೆ ಇಷ್ಟು ಒತ್ತಡ ಅನುಭವಿಸುತ್ತಿದ್ದಾರೆ, ಗಡಿಬಿಡಿಯಿಂದ ಓಡಾಡುತ್ತಿದ್ದಾರೆ, ಕಷ್ಟ ಪಡುತ್ತಿದ್ದಾರೆ ಎಂದು ಅಚ್ಚರಿಗೊಳ್ಳುತ್ತಿದ್ದ. 

ಹೀಗೇ ಬದುಕು ಕಳೆಯುತ್ತಿರುವ ಹೊತ್ತಿಗೆ ವಯಸ್ಸಿನಲ್ಲಿ ತುಂಬಾ ಹಿರಿಯನಾಗಿರುವ ಅವನ ಗೆಳೆಯ ಜಗ್ಗು ‘ಮದುವೆ ಆಗು’ ಎಂಬ ಸಲಹೆಯನ್ನು ನೀಡಿದ. 
‘ಯಾಕಾಗಬಾರದು?’ ಎಂದು ಪಂಟುವಿಗೂ ಅನ್ನಿಸಿತು. 
‘‘ಹುಡುಗಿ ತೋರ್ಸು. ನೀನು ತೋರ್ಸಿದ ಹುಡುಗೀನಾ ಮದುವೆ ಆಯ್ತೀನಿ’’ ಎಂದ ಪಂಟು. 
‘‘ನಿನಗೊಬ್ಬ ಚಂದದ ಹುಡ್ಗೀನ ನೋಡಿ ಇಟ್ಟಿದ್ದೀನಿ. ನನ್ನ ಹೆಣ್ತಿಗೆ ಪರಿಚಯ. ಅವಳು ನಿನ್ನನ್ನು ನೋಡಿದ್ದಾಳೆ. ಮೊದಲು ಕಾಲಲ್ಲಿರುವ ಚಪ್ಪಲಿ ಬದಲಿಸು. ನೀನು ಅವ್ಳ ಮೀಟ್ ಮಾಡೋ ವ್ಯವಸ್ಥೆ ಮಾಡಿಸ್ತೀನಿ’’ ಎಂದ ಜಗ್ಗು.
ಮೊದಲ ಬಾರಿಗೆ ಅವನಿಗೆ ಅವನ ಚಪ್ಪಲಿಯ ಕಡೆಗೆ ಗಮನ ಹೋಯಿತು. ಒಂದೆರಡು ವರ್ಷಗಳಿಂದ ಅವನ ಜೊತೆಗಾರನಾಗಿದ್ದ ಚಪ್ಪಲಿ ಭಾಗಶಃ ಹರಿದು ಚಿಂದಿಯಾಗಿತ್ತು. ಸರಿ, ಯಾವುದಾದರೂ ಬೀದಿ ಬದಿಯಲ್ಲಿರುವ ಅಂಗಡಿಯಿಂದ ಎಗರಿಸಿದರಾಯಿತು ಎಂದು ಯೋಚಿಸಿದ.
‘‘ಸ್ವಲ್ಪ ಕ್ವಾಸ್ಟ್ಲಿ ಚಪ್ಪಲಿ ಹಾಕು...ಮರ್ಯಾದೆ ಬತ್ತದೆ. ಚಪ್ಪಲಿಗಿರುವ ಮರ್ಯಾದೆ, ಹಾಕೋ ಬಟ್ಟೆಗಿಲ್ಲ ತಿಳ್ಕೋ’’ ಎಂದ ಜಗ್ಗು.
‘‘ಸೋ ರೂಂಗೆ ಹೋದ್ರೆ ಹೆಂಗೆ?’’ ಕೇಳಿದ ಪಂಟು.
‘‘ಏ...ಅಲ್ಲೆಲ್ಲ ಸಿಸಿ ಕ್ಯಾಮರಾ ಆಯ್ತದೆ....ಪೊಲೀಸ್ರು ಕಾವ್ಲ ಕಾಯ್ತ ನಿಂತಿರ್ತಾರೆ...ನೀ ಹುಡುಗಿ ನೋಡೋ ಬದ್ಲು ಹುಡುಗೀನೇ ನಿನ್ನನ್ನು ಟೇಸನ್‌ಗೆ ಬಂದು ನೋಡಬೇಕಾಯ್ತದೆ.....’’ ಜಗ್ಗು ಎಚ್ಚರಿಸಿದ.
‘‘ಸರಿ ಬಿಡು. ಈಟು ಅಂಗಡಿಗಳಿವೆ. ನನಗಾಗಿ ಒಂದು ಜೋಡು ಸಿಗಾಕಿಲ್ಲವಾ?’’ ಎಂದು ಅವನನ್ನು ಸಮಾಧಾನಿಸಿದ.

ಕೈಯಲ್ಲಿ ಕಾಸೂ ಇಲ್ಲದ, ಯಾವುದನ್ನೂ ಕಾಸು ಕೊಟ್ಟು ತಗೊಂಡು ಅಭ್ಯಾಸವಿಲ್ಲದ ಪಂಟು ಈಗ ಒಂದು ಜೋಡು ಒಳ್ಳೆಯ ಬ್ರಾಂಡಡ್ ಚಪ್ಪಲಿಗಾಗಿ ಅಲೆದಾಡ ತೊಡಗಿದ. ಒಂದೆರಡು ಚಪ್ಪಲಿಗಳನ್ನು ಎಗರಿಸಿದನಾದರೂ ಅದು ಅವನ ಕಾಲಿಗೆ ಸರಿ ಹೊಂದುತ್ತಿರಲಿಲ್ಲ. ಯಾವುದೋ ಅಂಗಡಿಯೊಂದರಲ್ಲಿ ಇನ್ನೇನು ಪಸಂದಾದ ಜೋಡು ಚಪ್ಪಲಿ ಕೈಗೆ ಸಿಕ್ಕಬೇಕು ಎನ್ನುವಷ್ಟರಲ್ಲಿ ಮಾಲಿಕನ ಕೈಗೆ ಸಿಕ್ಕಿ, ಕೆನ್ನೆಗೆ ಎರಡೇಟು ಬಿಗಿಸಿಕೊಂಡ.
 ‘‘ಒಂದು ಜೋಡು ಚಪ್ಪಲಿ ಕೂಡಿಸಿಕೊಳ್ಳೋ ಯೋಗ್ಯತೆಯಿಲ್ಲ...ನಿನಗೆ ಹುಡುಗಿ ಬೇರೆ ಕೇಡು...’’ ಜಗ್ಗು ಛೀಮಾರಿ ಹಾಕಿದ.
‘‘ಸಿಗತ್ತೆ ಬಿಡೂ....ಸ್ವಲ್ಪ ಹುಡುಕೋಣ...ಎಲ್ಲ ಕೂಡಿ ಬರಬೇಕು...’’ ಪಂಟು ಸಮಾಧಾನಿಸಿದ.
ಅಷ್ಟರಲ್ಲಿ ಜಗ್ಗು. ಒಂದು ಸಲಹೆ ಕೊಟ್ಟ ‘‘ದೇವಸ್ಥಾನಕ್ಕೊಮ್ಮೆ ಹೋಗಿ ಟ್ರೈ ಮಾಡು...’’
 ಪಂಟು ತಕ್ಷಣವೇ ನಿರಾಕರಿಸಿದ 
‘‘ಬೇಡ ಬೇಡ....ಈ ದೇವ್ರ ದಿಂಡರ ಸಹವಾಸ ಬೇಡ. ನಮಗೇಂತ ಇಷ್ಟೆಲ್ಲ ಅಂಗಡಿಗಳನ್ನು ಅವನು ತೆರೆದುಕೊಟ್ಟಿಲ್ವಾ? ಹಿಂಗಿರುವಾಗ ಅವನ ಅಂಗಡಿಗೇ ಹೋಗಿ ಅವನ ಭಕ್ತರ ಚಪ್ಪಲೀನ ಎಗರಿಸೋದು ಎಷ್ಟು ಸರಿ? ಬೇಡ...ಬೇಡ...’’ 
‘‘ಸರಿ ದೇವಸ್ಥಾನಕ್ಕೆ ಬೇಡಪ್ಪ...ಮಸೀದಿಗೆ ಹೋಗು....ನಿಜಕ್ಕೂ ಮಸೀದಿ ಮುಂದೇನೇ ಒಳ್ಳೊಳ್ಳೆ ಚಪ್ಪಲಿಗಳು ಸಿಗೋದು...’’ ಜಗ್ಗು ಇನ್ನೊಂದು ಸಲಹೆ ನೀಡಿದ. 
‘‘ಅವ್ರ ದೇವ್ರಾದರೇನು? ಇವ್ರ ದೇವ್ರಾದರೇನು? ದೇವ್ರ ದೇವ್ರೇ ಅಲ್ವಾ? ಇವರ ದೇವರು ಕಿರೀಟ ಹಾಕ್ಕೊಂಡಿರ್ತಾನೆ. ಅವ್ರ ದೇವ್ರ ಟೋಪಿ ಹಾಕ್ಕೊಂಡಿರ್ತಾನೆ....’’
‘‘ನೋಡು ಜಗದಾಗೆ ಇರೋದೆಲ್ಲ ದೇವ್ರದ್ದು. ನಮ್ಮ ಹಣೇಲಿ ನಮ್ಮದೂಂತ ಇದ್ದದ್ದಷ್ಟೇ ನಮಗೆ ಅವನು ಕೊಡ್ತಾನೆ. ಆದುದರಿಂದ ದೇವರ ಅಂಗಡಿಯಿಂದ ಎಗರಿಸಿದ್ರೆ ಯಾವ ತಪ್ಪು ಇಲ್ಲ...ನೀನು ಹೋಗು...’’ ಜಗ್ಗು ಅಧ್ಯಾತ್ಮ ಹೇಳಿ ಧೈರ್ಯ ತುಂಬಿದ.
 ಪಂಟು ಈವರೆಗೆ ದೇವರು, ದಿಂಡರ ಕಡೆಗೆ ತಲೆಯನ್ನೇ ಹಾಕಿರಲಿಲ್ಲ. ಅವನಿಗದರಲ್ಲಿ ಆಸಕ್ತಿಯೂ ಇರಲಿಲ್ಲ. ಆ ಜಗತ್ತು ಅವನಿಗೆ ಅರ್ಥವಾಗುತ್ತಲೂ ಇರಲಿಲ್ಲ. ಒಮ್ಮೆ ಪ್ರಸಾದಕ್ಕಾಗಿ ದೇವಸ್ಥಾನದೊಳಗೆ ಹೋಗಿ, ಅಲ್ಲಿ ಅವನ ಜಾತಿ ಕೇಳಿದ ದಿನದಿಂದ ಅದು ತನ್ನ ಜಾಗ ಅಲ್ಲವೇ ಅಲ್ಲ ಎಂದು ದೂರ ಸರಿದಿದ್ದ. ಅದರೊಳಗೆ ಏನು ನಡೆಯುತ್ತದೆ ಎನ್ನುವುದೂ ಅವನಿಗೆ ಗೊತ್ತಿರಲಿಲ್ಲ.
‘‘ದೇವಸ್ಥಾನ, ಇಗರ್ಜಿ, ಮಸೀದಿ...ಎಲ್ಲಿಗೆ ಹೋಗಲಿ?’’ ಪಂಟು ಆಲೋಚಿಸಿ ಕೇಳಿದ. 
ಜಗ್ಗು ಉತ್ತರಿಸಿದ ‘‘ನೋಡೋ ಪಂಟು...ಈ ಹಿಂದೂ ದೇವ್ರೂ ಬೋ ಸಂಖ್ಯೆಯಲ್ಲಿರುವುದರಿಂದ ದೇವಸ್ಥಾನದಲ್ಲಿ ಕದಿಯೋದು ಸುಲಭ. ಆ ದೇವ್ರ ನೋಡ್ಕೋತಾನೆ ಅಂತ ಈ ದೇವ್ರ...ಈ ದೇವ್ರ ನೋಡ್ಕೋತಾನೆ ಅಂತ ಆ ದೇವ್ರೂ ಯೋಚಿಸ್ತಾ ಇರೋವಾಗಲೇ ಸುಲಭದಲ್ಲಿ ಎಗರಿಸಿ ಬಿಡಬಹುದು. ತಮ್ಮ ದೇವರ ಸೋಮಾರಿತನ ಗೊತ್ತಿರೋದರಿಂದಲೇ ದೇವಸ್ಥಾನಕ್ಕೆ ಬರೋರೆಲ್ಲ ಹಳೆ ಹರಿದ ಚಪ್ಪಲಿ ಹಾಕ್ಕೊಂಡು ಬರ್ತಾರೆ. ಆ ಚಪ್ಪಲಿ ಹಾಕ್ಕೊಂಡು ನೀನು ಹುಡುಗೀನ ನೋಡೋಕೋದ್ರೆ ಅಷ್ಟೇಯ? ಆದರೆ ಈ ಸಾಬ್ರ ದೇವ್ರ ಇದ್ದಾನಲ್ಲ, ಅವ್ನ ತುಂಬಾ ಪವರ್‌ಫುಲ್... ನಮ್ಮ ದೇವ್ರ ಹಾಗೆ ಅವನಿಗೆ ಹೆಂಡ್ತಿ ಮಕ್ಕಳಿಲ್ಲ. ಸಂಸಾರ ಕಾಟ ಇಲ್ಲ. ನಿದ್ರೆ ಮಾಡೋ ಹಂಗಿಲ್ಲ. ಜೊತೆಗೆ ಒಬ್ಬಂಟಿ ಬ್ರಹ್ಮಚಾರಿ ಬೇರೆ. ಆ ಧೈರ್ಯದಿಂದಲೇ ಸಾಬರು ಭಾರೀ ಬೆಲೆ ಬಾಳೋ ಚಪ್ಪಲಿ ಹಾಕ್ಕೊಂಡೇ ಮಸೀದಿಗೆ ಬರ್ತಾರೆ....’’
‘‘ಮತ್ತೆ ಇಗರ್ಜಿ ದೇವ್ರ...’’
‘‘ಅಯ್ಯೋ ಅವನು ಪಾಪ...ಸಿಲುಬೆಗೇರಿಸಿ ಮೊಳೆ ಹೊಡ್ದು ಬಿಟ್ರು ಪಾಪಿಗಳು. ಅದಕ್ಕೆ...ಇಗರ್ಜಿಗೆ ಹೋಗೋರು ಚಪ್ಪಲೀನ ಹೊರಗೆ ಇಡೋದೇ ಇಲ್ಲ. ಚಪ್ಪಲಿ ಹಾಕ್ಕೊಂಡೇ ಇಗರ್ಜಿ ಒಳಗೆ ಹೋಗಿ ಅವನಿಗೆ ಕ್ಯಾಂಡಲ್ ಹಚ್ಚಿ ಬರ್ತಾರೆ...’’
‘‘ಈಗ ನಾನು ಯಾವ ದೇವ್ರ ಚಪ್ಪಲಿ ಎಗರಿಸ್ಲಿ...’’
‘‘ಎಗರಿಸೋದು ಅನ್ನಬೇಡವೋ ಹುಚ್ಚಪ್ಪ. ಪ್ರಸಾದ ಅಂತ ಸ್ವೀಕರಿಸೋದು. ಅವ್ರಿಗೆಲ್ಲ ಹಣ್ಣುಹಂಪಲು ಪ್ರಸಾದ ಅಂತ ಕೊಟ್ರೆ, ನಮ್ಮೆಂತೋರಿಗೆಲ್ಲ ಕಾಲಿಗೆ ಹಾಕೋಕೆ ಜೋಡು ಚಪ್ಪಲಿ ಪ್ರಸಾದವಾಗಿ ಕೊಡ್ತಾನೆ ಎಂದು ತಿಳ್ಕೊಂಡು ಎತ್ಕೊಂಡು ಬಿಡು. ನಾವೆಲ್ಲ ಅವನ ಮಕ್ಕಳೇ ಅಲ್ಲವೇನಾ? ನೋಡು ಸೋಮಾರಿ ದೇವರ ಕಳಪೆ ಚಪ್ಪಲಿ ಬೇಕಾ?. ಪವರ್‌ಫುಲ್ ದೇವ್ರ ಕ್ವಾಸ್ಟ್ಲಿ ಚಪ್ಪಲಿ ಬೇಕಾ? ಯಾವುದು ಬೇಕು ನೀನೇ ತೀರ್ಮಾನಿಸು...’’
‘‘ಪವರ್‌ಫುಲ್ ದೇವ್ರ ಚಪ್ಪಲಿ ಎಂದ ಮೇಲೆ ರಿಸ್ಕು ಜಾಸ್ತಿ....’’
‘‘ಹಂಗೆಲ್ಲ ಹೇಳಬೇಡವೋ...ನೀ ಅಲ್ಲಿಗೆ ಹೋಗು...ಅವನೇ ಎರಡು ಒಳ್ಳೆ ಚಪ್ಪಲೀನ ಆರಿಸಿ ನಿನ್ನ ಕೈಗೆ ಇಡ್ತಾನೆ....ಬೇಕಾದ್ರೆ ನೋಡು...ಮನುಸರಿಗಾದ್ರೆ ಹೆದರ್ಬೇಕು. ದೇವ್ರಿಗೇಕೆ ಹೆದರ್ಬೇಕು?’’ ಜಗ್ಗು ಧೈರ್ಯ ತುಂಬಿದ. ‘‘ಆದ್ರೆ ನಮ್ ದೇವ್ರ ಥರ ಅವ್ರ ದೇವ್ರ ಕಣ್ಣಿಗೆ ಕಾಣಂಗಿಲ್ವಲ್ಲ...ಮತ್ತೆ ಹೆಂಗೆ ಕೊಡ್ತಾನೆ....’’
‘‘ಅದಕ್ಕೆಲ್ಲ ನಾವೇಕೆ ತಲೆಕೆಡುಸ್ಕೋಬೇಕು? ಕೊಡೋನು ಅವನು. ಹೆಂಗಾದ್ರೂ ಬಂದು ಕೊಡಲಿ....ಅವನ ಅಂಗಡಿ. ಅವನ ಚಪ್ಪಲಿ...’’
ಪಂಟುವಿಗೆ ಸರಿ ಅನ್ನಿಸಿತು. ‘‘ಹಾಗಾದ್ರೆ...ಸಾಬ್ರ ದೇವಸ್ಥಾನ ಎಲ್ಲಿದೆ...?’’ ಕೇಳಿದ.
‘‘ಎರಡು ಓಣಿಯಾಚೆಗಿರುವ ದೊಡ್ಡ ಮಸೀದಿಗೆ ಹೋಗು...ಬೋ ದೊಡ್ಡ ಮಿನಾರ ಇರೋ ಮಸೀದಿ ಅದು...’’ ಜಗ್ಗು ದಾರಿ ವಿವರಿಸಿದ.
ಪಂಟು ತಲೆಯಾಡಿಸಿದ.
***

ಅಂದು ಶುಕ್ರವಾರ. ನಮಾಝಿಗೆಂದು ಒಬ್ಬೊಬ್ಬರಾಗಿ ಮಸೀದಿಯ ವರಾಂಡಕ್ಕೆ ಕಾಲಿಡುತ್ತಿದ್ದರು. ಚಪ್ಪಲಿಗಳನ್ನು ಕಳಚಿಟ್ಟು ಅಲ್ಲಿಯೇ ಇರುವ ಸಣ್ಣ ನೀರಿನ ಟ್ಯಾಂಕೊಂದರಲ್ಲಿ ಕಾಲು ತೊಳೆದು, ಮುಖ, ಕೈ ತೊಳೆಯಲು ದೊಡ್ಡ ಟ್ಯಾಂಕಿನ ಬಳಿ ಒಬ್ಬೊಬ್ಬರಾಗಿ ಸಾಗುತ್ತಿದ್ದರು. 
‘ಯಾವುದನ್ನು ಬೇಕಾದರೂ ಆರಿಸಿಕೋ’ ಎಂಬಂತೆ ಪಂಟುವಿನ ಮುಂದೆ ಚಪ್ಪಲಿಗಳು, ಶೂಗಳು ಒಂದೊಂದಾಗಿ ಹರಡಿಕೊಳ್ಳುತ್ತಿದ್ದವು. ಕಾಂಪೌಂಡ್ ಕಟ್ಟೆಯ ಮೇಲೆ ನಿಂತು ಅವನು ಆ ಚಪ್ಪಲಿಗಳನ್ನೇ ನೋಡುತ್ತಿದ್ದ. ತುಸು ದೂರದಲ್ಲಿ ಪಂಟು ಬೋರ್ಡೊಂದನ್ನು ನೋಡಿದ.
‘‘ನಿಮ್ಮ ನಿಮ್ಮ ಚಪ್ಪಲಿಗೆ ನೀವೇ ಜವಾಬ್ದಾರರು’’ ಪಂಟುವಿಗೆ ಅರ್ಥವಾಗಲಿಲ್ಲ. ದೇವರಿಗೆ ನಮಸ್ಕರಿಸುವುದಕ್ಕಾಗಿ ತಾನೇ ಮಸೀದಿಯ ಒಳಗೆ ಹೋಗುತ್ತಿದ್ದಾರೆ. ಚಪ್ಪಲಿ ಹಾಕ್ಕೊಂಡು ಹೋಗಬಾರದು ಎಂದು ಹೇಳಿರುವುದೂ ದೇವರೇ ತಾನೇ? ಹಾಗಿರುವಾಗ ಚಪ್ಪಲಿಯ ಜವಾಬ್ದಾರಿ ದೇವರದ್ದಲ್ಲವೇೆ? ಜಗ್ಗು ಇದ್ದಿದ್ದರೆ ಉತ್ತರ ಹೇಳುತ್ತಿದ್ದ ಅನ್ನಿಸಿತು. ತುಸು ದೂರದಲ್ಲಿ ಇನ್ನೊಂದು ಬೋರ್ಡ್ ಲಗತ್ತಿಸಲಾಗಿತ್ತು ‘‘ಚಪ್ಪಲಿ ಕಳ್ಳರಿದ್ದಾರೆ, ಎಚ್ಚರಿಕೆ!’’
  ಅರೆ! 
‘‘ದೇವರಿದ್ದಾನೆ...ಚಪ್ಪಲಿ ಕಳ್ಳರೇ ಎಚ್ಚರಿಕೆ!’’ ಎಂದು ಬೋರ್ಡ್ ಹಾಕಬೇಕಾಗಿತ್ತಲ್ಲ. ಕಳ್ಳರಿಗೆ ಎಚ್ಚರಿಕೆ ಕೊಡದೇ ಭಕ್ತರಿಗೇ ಎಚ್ಚರಿಕೆ ಕೊಡುತ್ತಿದ್ದಾರೆ? ಪಂಟುವಿಗೆ ಅರ್ಥವಾಗಲಿಲ್ಲ. ಹಾಗಾದರೆ ನಾನು ಇಲ್ಲಿ ಹೆದರುವ ಅಗತ್ಯವೇ ಇಲ್ಲ ಅಂದಾಯಿತು. ಎಚ್ಚರಿಕೆಯಿಂದಿರಬೇಕಾದವರು ಕಳ್ಳರಲ್ಲ, ಚಪ್ಪಲಿ ಹೊಂದಿರುವವರು. ದೇವರು ನಮ್ಮ ಜೊತೆಗಿದ್ದಾನೆ ಎನ್ನುವುದು ಬೋರ್ಡ್ ಹಾಕಿದವನಿಗೆ ಚೆನ್ನಾಗಿ ಗೊತ್ತಿರುವಂತಿದೆ. ಚಪ್ಪಲಿಗಳ ಕಡೆಗೆ ಕಣ್ಣಾಯಿಸಿದ. ಬಣ್ಣ ಬಣ್ಣದ ಥರಾವರಿ ಚಪ್ಪಲಿಗಳು. ಜಗ್ಗು ಹೇಳಿದ ಹಾಗೆ ಎಲ್ಲವೂ ಕ್ವಾಸ್ಟ್ಲಿ ಚಪ್ಪಲಿಗಳು.
 ‘‘ಅವರಲ್ಲೆಲ್ಲ ದುಬಾಯಿಯ ಹಣ ಇರುತ್ತವೆ. ಆದುದರಿಂದಲೇ ಅವರೆಲ್ಲ ದುಬಾರಿ ಚಪ್ಪಲಿಗಳು, ಶೂಗಳನ್ನು ಧರಿಸುತ್ತಾರೆ. ನಿನಗೆ ಬೇಕಾದುದನ್ನು ನೀನು ತೆಗೆದುಕೊಂಡು ಬಾ. ಅವರು ಕಳೆದು ಹೋದುದರ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳದೆ ಹೊಸತನ್ನು ತೆಗೆದುಕೊಂಡು ಬರುತ್ತಾರೆ...’’ ಎಂದಿದ್ದ ಜಗ್ಗು.
ತಾನೇ ಕೈ ಹಾಕಿ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳಲೇ ಅಥವಾ ಜಗ್ಗು ಹೇಳಿದಂತೆ ದೇವರೇ ಬಂದು ನನಗೆ ಬೇಕಾದ ಚಪ್ಪಲಿಯನ್ನು ಕೊಡಬಹುದೇೆ? ಎಂಬ ಪ್ರಶ್ನೆಯೂ ಅವನನ್ನು ಕಾಡತೊಡಗಿತು. ಅವನು ನೋಡು ನೋಡುತ್ತಿದ್ದಂತೆಯೇ ಒಂದು ಬಿಳಿ ಕಾರು ಕಾಂಪೌಂಡು ಹೊರಗೆ ಬಂದು ನಿಂತಿತು. ಬಿಳಿ ಪ್ಯಾಂಟು, ಬಿಳಿ ಬಟ್ಟೆ ಧರಿಸಿದ ಒಬ್ಬ ಗಡ್ಡಧಾರಿ ಅದರಿಂದ ಇಳಿದ. ಒಳಬಂದವನೇ ತನ್ನ ಚಪ್ಪಲಿಯ ಬೆಲ್ಟ್‌ನ್ನು ಕಳಚ ತೊಡಗಿದ. ಜಗ್ಗು ಕಣ್ಣು ಬೆಳಗಿತು. ತೆಗೆದುಕೊಳ್ಳುವುದ್ತಿದ್ದರೆ ಮಿರ ಮಿರ ಮಿಂಚುತ್ತಿರುವ ಈ ಚಪ್ಪಲಿಯನ್ನೇ ಎಂದು ನಿರ್ಧರಿಸಿ ಬಿಟ್ಟ. ಕಳಚಿಟ್ಟು ಆತ ಮಸೀದಿಯೊಳಗೆ ಹೋದದ್ದೇ ಕಾಲಿಗೆ ಧರಿಸಿಕೊಂಡು ಹೊರಟು ಬಿಡಬೇಕು. ಆದರೆ ಒಂದು ವಿಚಿತ್ರ ನಡೆಯಿತು.
ಚಪ್ಪಲಿಯನ್ನು ಕಳಚಿದ ಆ ಗಡ್ಡಧಾರಿ ಕಟ್ಟೆಯ ಮೇಲೆ ಕುಳಿತಿದ್ದ ಜಗ್ಗುವಿನ ಕಡೆಗೇ ಬಂದ. ಅರೆ! ಇದೇನಿದು ನನ್ನೆಡೆಗೇ ದಾವಿಸಿ ಬರುತ್ತಿದ್ದಾನೆ. ನಾನು ಚಪ್ಪಲಿ ಕದಿಯಲು ಬಂದಿದ್ದೇನೆ ಎನ್ನುವುದು ಆತನಿಗೆ ತಿಳಿದು ಬಿಟ್ಟಿರಬಹುದೇ? ಓಡಿದರೆ ಹೇಗೆ? ಅಥವಾ ಜಗ್ಗು ಹೇಳುವಂತೆ ದೇವರೇ ನನಗೆ ಬೇಕಾದ ಚಪ್ಪಲಿಯನ್ನು ಆರಿಸಿ ನನ್ನ ಕೈಗೆ ಇಡುತ್ತಿದ್ದಾನೆಯೇ? ಈತ ಸಾಬರ ದೇವರಾಗಿರಬಹುದೇ?
ಎಂದೆಲ್ಲ ಯೋಚಿಸುವಷ್ಟರಲ್ಲಿ ಗಡ್ಡಧಾರಿ ಹಸನ್ಮುಖನಾಗಿ ಆತನೆಡೆಗೆ ಬಾಗಿದ. ಎರಡೂ ಚಪ್ಪಲಿಗಳನ್ನು ಪಂಟುವಿನ ಪಕ್ಕದಲ್ಲಿ ಇಟ್ಟು ಹೇಳಿದ ‘‘ಜಾಗೃತೆಯಾಗಿ ನೋಡಿಕೊಳ್ಳಿ...ಐದು ಸಾವಿರ ರೂಪಾಯಿ ಬೆಲೆಬಾಳುವ ಚಪ್ಪಲಿ ಇದು...ನಿಮ್ಮ ಧೈರ್ಯದಲ್ಲಿ ಬಿಟ್ಟು ಹೋಗುತ್ತಿದ್ದೇನೆ’’ ಎಂದು ಅವನ ತೋಳನ್ನು ಅಮುಕಿ ಕಿಸೆಯಿಂದ ನೂರು ರೂಪಾಯಿ ನೋಟನ್ನು ತೆಗೆದು ಅವನ ಕೈಗಿಟ್ಟ. ಬಳಿಕ ಆತ ಮಸೀದಿಯೊಳಗೆ ಸರಿದು ಹೋದ. 
ಪಂಟು ದಿಗ್ಭ್ರಾಂತನಾಗಿದ್ದ. ಯಾವ ಚಪ್ಪಲಿಯನ್ನು ತಾನು ಹೊತ್ತೊಯ್ಯಬೇಕೆಂದು ಭಾವಿಸಿದ್ದೆನೋ ಅದೇ ಚಪ್ಪಲಿಯ ರಕ್ಷಣೆಯನ್ನು ಈತ ನನ್ನ ಕೈಗೆ ವಹಿಸಿ ಹೋಗಿದ್ದಾನೆ. ಅವನು ರೋಮಾಂಚನಗೊಂಡ. ಜೋಡಿ ಚಪ್ಪಲಿಯ ಜೊತೆಗೆ ನೂರು ರೂಪಾಯಿಯೂ ಸಿಕ್ಕಿದೆ. ದೇವರು ಯಾವ ರೂಪದಲ್ಲಿ ಬರುತ್ತಾನೆ ಎಂದು ಯಾರಿಗೆ ಗೊತ್ತು? ಅವನು ದೇವರೇ ಆಗಿರಬಹುದು. ಗಡ್ಡ ಬೇರೆ ಇಟ್ಟಿರುವುದರಿಂದ ಸಾಬರ ದೇವರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ‘ಜಾಗೃತೆಯಾಗಿ ನೋಡಿಕೊಳ್ಳಿ...’ ಎಂದ. ನನ್ನ ಮೇಲೆ ಭರವಸೆ ಇಟ್ಟು ಕೊಟ್ಟು ಹೋದ. ಅದೂ ಐದು ಸಾವಿರ ರೂಪಾಯಿಯ ಚಪ್ಪಲಿಯನ್ನು. 
ಅಷ್ಟರಲ್ಲಿ ಇನ್ನಾವನೋ ಒಬ್ಬ ಬಂದು ತನ್ನ ಚಪ್ಪಲಿಯನ್ನೂ ಇವನ ಮುಂದೆ ಕಳಚಿಟ್ಟ. ಮತ್ತು 20 ರೂಪಾಯಿಯ ನೋಟನ್ನು ಕೈಯಲ್ಲಿಟ್ಟು ‘ಭದ್ರವಾಗಿ ನೋಡಿಕೊಳ್ಳಿ, ಹೊಸ ಚಪ್ಪಲಿ’ ಎಂದ.
 ಯಾರು? ಎತ್ತ ಎಂದು ಅವನು ನೋಡುವಷ್ಟರಲ್ಲಿ ಹಣ ಕೈಯಲ್ಲಿಟ್ಟವನು ಮಸೀದಿ ಸೇರಿಯಾಗಿತ್ತು. ಇದೀಗ ಒಬ್ಬೊಬ್ಬರೇ ಅವನ ಸುತ್ತ ತಮ್ಮ ಚಪ್ಪಲಿ ಕಳಚಿಟ್ಟು ಹೋಗುತ್ತಿದ್ದರು. ಅವನ ಕೈಗೆ 5 ರೂ., 10 ರೂ. 20 ರೂ., ಹೀಗೆ ಸೇರ್ಪಡೆಯಾಗುತ್ತಲೇ ಇದ್ದವು. ಅವನ ಸುತ್ತ ಈಗ ನೋಡಿದರೆ ನೂರಾರು ಚಪ್ಪಲಿಗಳು ‘ಆರಿಸಿಕೋ...ಬೇಕಾದುದನ್ನು ಆರಿಸಿಕೋ’ ಎನ್ನುತ್ತಿದ್ದವು. ಕಿಸೆ ತುಂಬಾ ಹಣವೂ. ತುಸು ಹೊತ್ತಲ್ಲಿ ಮಸೀದಿಯೊಳಗೆ ಎಲ್ಲರೂ ಜೊತೆಯಾಗಿ ನಮಾಝ್ ಮಾಡ ತೊಡಗಿದ್ದರು. ಈ ಚಪ್ಪಲಿಯನ್ನೆಲ್ಲ ಎತ್ತಿಕೊಂಡು ಹೋದರೆ ಕೇಳುವವರೇ ಇಲ್ಲ. ಪಂಟು ವಿಸ್ಮಿತನಾಗಿದ್ದ. ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಅವನಿಗೆ ಅವನ ಮೇಲೆಯೇ ಅಭಿಮಾನವೊಂದು ಬಂದು ಬಿಟ್ಟಿತು. ನಿಜಕ್ಕೂ ಅಷ್ಟೂ ಚಪ್ಪಲಿಗಳನ್ನು ತಾನು ಕಾಯುತ್ತಿದ್ದೇನೆಯೇ ಅಥವಾ ಅಷ್ಟೂ ಚಪ್ಪಲಿಗಳು ನನ್ನನ್ನು ಕಾಯುತ್ತಿವೆಯೇ? ತನಗೆ ತಾನೇ ಗೊಣಗಿಕೊಂಡ.
 ಐದು ಸಾವಿರ ರೂಪಾಯಿಯ ಚಪ್ಪಲಿಯನ್ನು ನನ್ನ ಬಳಿ ಬಿಟ್ಟು ಹೋದವನು ನನ್ನ ಮೇಲೆ ಭರವಸೆಯಿಟ್ಟು ಅದೆಷ್ಟು ನಿರಾಳವಾಗಿ ಹೋದ. ಅವರೆಲ್ಲರೂ ನನ್ನ ಬಗ್ಗೆ ಭರವಸೆಯಿಟ್ಟಿದ್ದರು. ಎದುರಲ್ಲಿದ್ದ ‘ನಿಮ್ಮ ಚಪ್ಪಲಿಗೆ ನೀವೇ ಜವಾಬ್ದಾರರು’ ‘ಚಪ್ಪಲಿ ಕಳ್ಳರಿದ್ದಾರೆ ಎಚ್ಚರಿಕೆ!’ ಎಂಬ ಬೋರ್ಡ್‌ಗಳನ್ನೇ ಅಣಕಿಸುವಂತೆ. ದೇವರನ್ನು ನಂಬುವಷ್ಟೇ ತನ್ಮಯವಾಗಿ ಅಪರಿಚಿತನಾಗಿರುವ ನನ್ನನ್ನು ನಂಬಿದರು.
ಹೀಗೆ ಥರಥರವಾಗಿ ಯೋಚಿಸುತ್ತಾ ಕುಳಿತನೇ ಹೊರತು, ಚಪ್ಪಲಿಯನ್ನು ಹೊತ್ತೊಯ್ಯುವ ಧೈರ್ಯ ಅವನಿಗೆ ಬರುತ್ತಿರಲಿಲ್ಲ. ತುಸು ಹೊತ್ತಲ್ಲೇ ಎಲ್ಲರೂ ಮಸೀದಿಯಿಂದ ಹೊರ ಬರತೊಡಗಿದರು. ಒಬ್ಬೊಬ್ಬರಾಗಿ ಅವರವರ ಚಪ್ಪಲಿಗಳನ್ನು ಕಾಲಲ್ಲಿ ಧರಿಸಿ ಹೊರಟು ಹೋಗ ತೊಡಗಿದರು. ಆ ನೀಳ ಗಡ್ಡಧಾರಿ ಚಪ್ಪಲಿಯನ್ನು ಧರಿಸುತ್ತಿದ್ದಾಗ ತನ್ನ ಕಡೆ ನೋಡಿ ತುಂಟ ನಗು ನಕ್ಕ? ಅರೆ! ಅವನು ನಕ್ಕದ್ದು ಯಾಕೆ? ನಾನು ಕಳ್ಳನೆನ್ನುವುದು ಅವನಿಗೆ ಗೊತ್ತಿತ್ತೇ? ಅಥವಾ ಅವನು ನಿಜಕ್ಕೂ ಸಾಬರ ದೇವರೇ ಆಗಿರಬಹುದೇ? ನನ್ನನ್ನು ಪರೀಕ್ಷಿಸಲೆಂದು ಹೀಗೆ ಗಡ್ಡಧಾರಿಯಾಗಿ ಬಂದಿರಬಹುದೆ? ಅವನಿಗೆ ಅರ್ಥವಾಗಲಿಲ್ಲ. ಎಲ್ಲರೂ ಅವರವರ ಚಪ್ಪಲಿಗಳ ಜೊತೆಗೆ ಹೊರಟು ಹೋದ ಬಳಿಕವೂ ಅವನು ಕಡೆದಿಟ್ಟ ಕಲ್ಲಿನಂತೆ ಕುಳಿತೇ ಇದ್ದ. ಅಲ್ಲೇ ಇದ್ದ ಯಾರೋ ‘‘ಭಾಯಿ ತಗೋ’’ ಎಂದು ಒಂದು ಕಟ್ಟನ್ನು ಅವನ ಮುಂದಿಟ್ಟರು. ಕಟ್ಟು ಬಿಚ್ಚಿದರೆ ಅದರಲ್ಲಿ ಬಿರಿಯಾನಿ ಗಮಗಮಿಸುತ್ತಿತ್ತು.
ಆತ ಬಿರಿಯಾನಿ ತಿಂದು, ಪಕ್ಕದಲ್ಲೇ ಇದ್ದ ನೀರಿನ ಟ್ಯಾಪ್‌ನಲ್ಲಿ ಕೈ ತೊಳೆದ. ನೀರು ಕುಡಿದ. ಬಳಿಕ ಕಿಸೆಯಲ್ಲಿದ್ದ ಹಣವನ್ನು ಎಣಿಸಿದ. 350 ರೂಪಾಯಿಯಿತ್ತು. ಹಾಗೆ ಯಾರೋ ಕೀಲಿ ತಿರುಗಿಸಿ ಬಿಟ್ಟ ಗೊಂಬೆಯಂತೆ ಪಂಟು ನಡೆಯ ತೊಡಗಿದ. ದೂರದಲ್ಲೊಂದು ಪುಟ್ಟ ಚಪ್ಪಲಿ ಅಂಗಡಿ ಕಂಡಿತು. ನೇರವಾಗಿ ಅದರ ಒಳ ಹೊಕ್ಕ. ‘‘350 ರೂಪಾಯಿಗೆ ಆಗುವ ಹಾಗೆ ಒಂದು ಚಪ್ಪಲಿ ಕೊಡಿ ಸಾಮಿ...’’ ಎಂದ.
ಅಂಗಡಿಯಾತ ಅವನೆಡೆಗೆ ಬಂದ. ಅವನ ಕೈಯಲ್ಲಿ ವಿವಿಧ ಸೈಜಿನ ಚಪ್ಪಲಿಗಳಿದ್ದವು. ಬಾಗಿದವನು ಪಂಟುವಿನ ಪಾದವನ್ನು ತನ್ನ ತೊಡೆಯ ಮೇಲಿಟ್ಟು ಚಪ್ಪಲಿಯನ್ನು ಜೋಡಿಸಿದ. ಪಂಟುವಿನ ಬದುಕಿನಲ್ಲೇ ಅದೊಂದು ವಿಚಿತ್ರ ಅನುಭವ. ತನ್ನ ಪಾದವನ್ನು ಯಾವ ಸಂಕೋಚವೂ ಇಲ್ಲದೆ ತನ್ನ ತೊಡೆಯ ಮೇಲೆ ಇಟ್ಟು ಕೊಂಡು ಚಪ್ಪಲಿಯನ್ನು ಜೋಡಿಸಿದ ಈತ ದೇವರೇ ಯಾಕಾಗಿರಬಾರದು? ಎಂಬ ಆಲೋಚನೆ ತಲೆಯಲ್ಲಿ ಬಂತು. ತನ್ನ ಪಾದಕ್ಕೆ ಹೇಳಿ ಮಾಡಿಸಿದ ಚಪ್ಪಲಿ ಆಗಿತ್ತು. ಧರಿಸಿದ. ಅವನಿಗೆ ಅಳುಬಂದಿತ್ತು. ‘ಇಷ್ಟು ಬೆಲೆ ಬಾಳುವ ಚಪ್ಪಲಿಯನ್ನು ತಾನು ಧರಿಸಿರಲೇ ಇಲ್ಲ’ ಎನ್ನುತ್ತಾ ಆ ಜೋಡಿ ಚಪ್ಪಲನ್ನು ತನ್ನ ಎದೆಗೊತ್ತಿ ಹಿಡಿದ. 
ಅಂದು ಸಂಜೆ ಜಗ್ಗುವಿನ ಮುಂದೆ ಆ ಚಪ್ಪಲಿಯನ್ನಿಟ್ಟು ಹೇಳಿದ ‘‘ದೇವ್ರೇ ಕೈಯಾರೆ ನನಗೆ ಕೊಟ್ಟ ಚಪ್ಪಲಿ ಇದು...ಇದನ್ನು ಕಾಲಲ್ಲಿ ಧರಿಸೋಕೆ ಮನಸ್ಸೇ ಬರುತ್ತಿಲ್ಲ’’
‘‘ಹೇ...ಅಂಗಾರೆ ತಲೆ ಮೇಲೆ ಹೊತ್ಕೊಂಡು ನಡಿ...’’ ಎನ್ನುತ್ತಾ ಜಗ್ಗು ನಕ್ಕ.
ಪಂಟು ಮೊದಲ ಬಾರಿಗೆ ಚಪ್ಪಲಿಯನ್ನು ತಲೆಯ ಮೇಲೆ ಇಟ್ಟುಕೊಳ್ಳಬೇಕೋ, ಕಾಲಿಗೆ ಧರಿಸಬೇಕೋ ಎಂಬ ಗೊಂದಲದಲ್ಲಿದ್ದ. 
***
ಅಂದು ಸಂಜೆ ಪಂಟು ತನ್ನ ಹುಡುಗಿಯನ್ನು ಭೇಟಿಯಾಗಬೇಕಾಗಿತ್ತು ಬೆಳಗ್ಗೆ ಬೇಗನೇ ಎದ್ದು ಹತ್ತಿರದ ಕೆರೆಯಲ್ಲಿ ಮಿಂದು, ಇದ್ದುದರಲ್ಲೇ ಬಿಳಿಯಾದ ಬಟ್ಟೆ ಬರೆ ಧರಿಸಿ ಕಾಲಿಗೆ ಹೊಸ ಚಪ್ಪಲಿ ಸಿಕ್ಕಿಸಿಕೊಂಡ. ಅವನ ಬದುಕಿನಲ್ಲೇ ಅದೇ ಮೊದಲ ಬಾರಿ ಅವನ ಮನಸ್ಸು ಒಂದು ವಿಚಿತ್ರ ಅನುಭೂತಿಗೆ ಸಿಕ್ಕಿತ್ತು. ಈವರೆಗಿನ ತನ್ನ ಬದುಕನ್ನೆಲ್ಲ ತಿರಸ್ಕರಿಸುವ, ಹೊಸ ಬದುಕೊಂದಕ್ಕೆ ತನ್ನನ್ನು ತಳ್ಳುವ ಶಕ್ತಿ ಆ ಅನುಭೂತಿಗಿರುವುದು ಅವನ ಗಮನಕ್ಕೆ ತೆಳುವಾಗಿ ಬರುತ್ತಿತ್ತು. ವಿಚಿತ್ರವೆಂದರೆ ಬೆಳಗ್ಗಿನಿಂದಲೇ ಅವನ ಮನಸ್ಸು ಒಂದು ಹಂಬಲದಲ್ಲಿತ್ತು. ಈ ಚಪ್ಪಲಿ ಧರಿಸಿಕೊಂಡು ಆ ಮಸೀದಿಯ ಕಡೆಗೆ ಮತ್ತೊಮ್ಮೆ ನಡೆಯಬೇಕು. ಅವನಿಗೆ ಇನ್ನಷ್ಟು ಚಪ್ಪಲಿಯ ಆಸೆ ಇರಲಿಲ್ಲ. ತನ್ನ ಕಡೆಗೆ ನೋಡಿ ತುಂಟ ನಗೆ ಬೀರಿದ ಆ ಗಡ್ಡಧಾರಿ ಅಲ್ಲೆಲ್ಲಾದರೂ ಸಿಗುತ್ತಾನೆಯೋ ಎಂಬ ಆಸೆ ಅವನದು. ಬೆಳಗ್ಗಿನಿಂದ ಅದನ್ನೇ ಯೋಚಿಸುತ್ತಾ ಇದ್ದವನು ಇದ್ದಕ್ಕಿದ್ದಂತೆಯೇ ಎದ್ದು ಹೊರಟೇ ಬಿಟ್ಟ. 

ಮಸೀದಿಯ ಮುಂದೆ ವಿಶೇಷ ಜನರೇನೂ ಕಾಣಲಿಲ್ಲ. ಆಗಾಗ ಬೆರಳೆಣಿಕೆಯ ಜನರು ಒಳಗೆ ಹೊರಗೆ ಬಂದು ಹೋಗುವುದನ್ನು ಮಾಡುತ್ತಿದ್ದರು. ಇವನು ಮಸೀದಿಯ ಆವರಣದೊಳಗೆ ಕಾಲಿಟ್ಟನಾದರೂ ಯಾರೂ ಇವನನ್ನು ಗಮನಿಸಲಿಲ್ಲ. ಆ ಮಸೀದಿಯ ಒಳಗಿನಿಂದ ಯಾರೋ ತನ್ನನ್ನು ಸೆಳೆಯುತ್ತಿದ್ದಾರೆ ಅನ್ನಿಸುವ ಭಾವ. ಹೋಗಿ ಆ ಸಾಬರ ದೇವರಿಗೆ ಒಮ್ಮೆ ಕೈ ಮುಗಿದು ಬಂದರೆ ಹೇಗೆ ಎನ್ನುವ ಅನಿಸಿಕೆ! ಮುಂದಕ್ಕೆ ಹೆಜ್ಜೆಯಿಟ್ಟ. ಅಷ್ಟರಲ್ಲಿ ಒಬ್ಬ ಬಂದು ಪಕ್ಕದ ಕಿರು ಟ್ಯಾಂಕ್‌ನಲ್ಲಿದ್ದ ನೀರನ್ನು ಕಾಲಿಗೆ ಸುರಿದು ಮಸೀದಿಯ ಒಳಗೆ ಹೋಗುವುದನ್ನು ನೋಡಿದ. ಇವನೂ ಅವನನ್ನೇ ಅನುಸರಿಸಿದ. ಅಳುಕುತ್ತಾ ಅವನು ಮಸೀದಿಯ ಒಳಗೆ ಹೆಜ್ಜೆಯಿಟ್ಟ. ಅಮೃತ ಶಿಲೆಗಳನ್ನು ಹಾಸಿದ ವಿಶಾಲವಾದ ಭವನ ಅದು. ದೊಡ್ಡ ದೊಡ್ಡ ಕಿಟಕಿಗಳು. ದೊಡ್ಡ ದೊಡ್ಡ ಕಂಬಗಳು ಆ ಮಸೀದಿಯನ್ನು ಎತ್ತಿ ನಿಲ್ಲಿಸಿದ್ದವು. ಅಪಾರ ಬೆಳಕು. ನೆಲ ಹಾಲಿನಂತೆ ಹೊಳೆಯುತ್ತಿತ್ತು. ನೆತ್ತಿಯ ಮೇಲೆ ದೊಡ್ಡ ಫ್ಯಾನುಗಳು ತಿರುಗುತ್ತಿದ್ದವು. ಪಂಟು ಮುಂದಕ್ಕೆ ಕಣ್ಣಾಯಿಸಿದ. ಒಂದೆರಡು ಜನ ಬಗ್ಗಿ, ಏಳುವ ಕೆಲಸವನ್ನು ಮಾಡುತ್ತಿದ್ದರು. ಪಂಟು ಆ ವಿಶಾಲ ಆವರಣದೊಳಗೆ ಸಾಬರ ದೇವರನ್ನು ಹುಡುಕುತ್ತಿದ್ದ. ಬರೇ ಖಾಲಿ ....ಗೋಡೆಯಲ್ಲಿ ಒಂದು ಫೋಟೋ ಕೂಡ ಇಲ್ಲ. ಹಾಂ...ಗೋಡೆಯಲ್ಲಿ ಒಂದೆರಡು ದೊಡ್ಡ ದೊಡ್ಡ ಗಡಿಯಾರಗಳು ಟಿಕ್ ಟಿಕ್ ಎನ್ನುವ ಸದ್ದು ಮಾಡುತ್ತಿದ್ದವು. ಹಾಗಾದರೆ ದೇವರೆಲ್ಲಿದ್ದಾನೆ? ಅವನಿಗೆ ಆರತಿ ಎತ್ತಿ ಪ್ರಸಾದ ಕೊಡುವವರು ಯಾರು? ಒಂದೂ ಅರ್ಥವಾಗಲಿಲ್ಲ. ನೋಡಿದರೆ ದೂರದ ಮೂಲೆಯೊಂದರಲ್ಲಿ ಕಿಟಕಿಯ ಪಕ್ಕ ಒಬ್ಬ ಗಡ್ಡಧಾರಿ ಮುದುಕ ಕುಳಿತು ಜಪಮಣಿ ಎಣಿಸುತ್ತಿರುವುದನ್ನು ನೋಡಿ ಅವನ ಕಣ್ಣು ಬೆಳಗಿತು. ಅದ್ಯಾರು? ಅವನೇ ಈ ಸಾಬರ ದೇವರು ಇರಬಹುದೇ? ನೇರವಾಗಿ ಅವನ ಬಳಿಗೆ ನಡೆದ. 

ತನ್ನ ಬಳಿ ನಿಂತ ಆಗಂತುಕನನ್ನು ಜಪಮಣಿ ಎಣಿಸುತ್ತಿದ್ದ ಮುದುಕ ತಲೆಯೆತ್ತಿ ನೋಡಿದ. ಪಂಟುವಿಗೆ ಅವನ ಬಳಿ ಏನು ಕೇಳಬೇಕು ಎಂದೇ ಗೊತ್ತಾಗದೆ ‘‘ಇಲ್ಲಿ ದೇವರು ಎಲ್ಲಿದ್ದಾನೆ?’’ ಎಂದು ಕೇಳಿ ಬಿಟ್ಟ. ಮುದುಕ ದಿಗ್ಭ್ರಾಂತನಾಗಿ ಆಗಂತುಕನನ್ನು ನೋಡಿದ. ಇಂತಹದೊಂದು ಅಧ್ಯಾತ್ಮ ಪ್ರಶ್ನೆಯನ್ನು ಈವರೆಗೆ ಯಾರೂ ಅವನಲ್ಲಿ ಕೇಳಿರಲಿಲ್ಲ. ಆಘಾತದಿಂದ ಆತ ಆಗಂತುಕನ ಮುಖವನ್ನು ನೋಡುತ್ತಲೇ ಇದ್ದ.
‘‘ದೇವರಿಗೆ ಕೈ ಮುಗಿದು ಅಡ್ಡ ಬೀಳಬೇಕಾಗಿದೆ. ಇಲ್ಲಿ ನಿಮ್ಮ ದೇವರೆಲ್ಲಿದ್ದಾನೆ ಹೇಳಿ?’’ ಪಂಟು ವಿನೀತನಾಗಿ ಮತ್ತೆ ಕೇಳಿದ.
ಮುದುಕ ಮುಗುಳ್ನಕ್ಕ. ‘‘ಸುತ್ತ ಮುತ್ತ ಎಲ್ಲ ದೇವರಿದ್ದಾನೆ. ಈ ಗಾಳಿಯಲ್ಲಿ, ಬೆಳಕಲ್ಲಿ, ಪರಿಮಳದಲ್ಲಿ....ಎಲ್ಲ. ಇಲ್ಲಷ್ಟೇ ಅಲ್ಲ, ಹೊರಗೂ ಇದ್ದಾನೆ....ನಮ್ಮ ಒಳಗೂ ಇದ್ದಾನೆ....ಎಲ್ಲೆಡೆ ದೇವರಿದ್ದಾನೆ....’’
‘‘ಹಾಗಾದರೆ ನಾನು ಇಲ್ಲಿ ಯಾರಿಗೆ ಅಡ್ಡ ಬೀಳಲಿ...ಹೇಗೆ ಕೈ ಮುಗಿಯಲಿ...’’
‘‘ನಿನಗೇಕೆ ಕೈಮುಗಿಯಬೇಕು ಅನ್ನಿಸಿದೆ?’’ ಮುದುಕ ಕೇಳಿದ.
‘‘ನನಗವನು ಚಪ್ಪಲಿ ಕೊಟ್ಟ’’ ಪಂಟು ಉತ್ತರಿಸಿದ.
ಮುದುಕ ಮುಗುಳ್ನಕ್ಕ. ‘‘ನಿನಗವನು ಕೊಟ್ಟದ್ದು ಬರೀ ಚಪ್ಪಲಿ ಮಾತ್ರವೇ?’’ ಮುದುಕ ಕೇಳಿದ.
‘‘ಹೌದು. ಅವನೇ ಕೈಯಾರೆ ತಂದು ಕೊಟ್ಟ. ನಾನು ಅವನನ್ನು ನೋಡಿದೆ. ಅವನು ನನ್ನನ್ನು ನೋಡಿ ತುಂಟ ನಗೆ ನಕ್ಕ...’’
  ‘‘ನೀನು ಹೇಳಿದ್ದನ್ನು ನಾನು ನಂಬುತ್ತೇನೆ. ಅವನ ಕೈಯಿಂದ ನೀನು ಚಪ್ಪಲಿ ತೆಗೆದುಕೊಂಡದ್ದು ನಿಜವೇ ಆಗಿದ್ದರೆ ಅವನು ಅದಕ್ಕಾಗಿ ನಗಲೇ ಬೇಕಾಗುತ್ತದೆ....’’ ಎಂದವನು ಒಂದು ಕ್ಷಣ ವೌನವಾದ. 
‘‘ಆದರೆ ಅವನಿಂದ ನೀನು ಪಡೆದದ್ದು ಚಪ್ಪಲಿ ಮಾತ್ರವೇ ಅಲ್ಲ... ಅದರ ಜೊತೆಗೆ ಅವನು ಇನ್ನೇನೋ ಕೊಟ್ಟಿರಬೇಕು....ಸರಿಯಾಗಿ ನೋಡಿಕೋ....’’ ಎಂದ ಮುದುಕ ಪಕ್ಕದಲ್ಲೇ ಇದ್ದ ಅದೇನೋ ಮರದ ಪುಟ್ಟ ಹಲಗೆಯಂತಹ ವಸ್ತುವನ್ನು ಎಳೆದುಕೊಂಡ. ಆ ಹಲಗೆಗೆ ನಾಲ್ಕು ಚಕ್ರಗಳಿದ್ದವು. ಮತ್ತು ಎರಡೂ ಕೈಗಳನ್ನು ನೆಲಕ್ಕೆ ಒತ್ತಿ ಮುದುಕ ಆ ಹಲಗೆ ಏರಿದ. ಪಂಟು ಬೆಚ್ಚಿದ. ಮುದುಕನಿಗೆ ಎರಡು ಕಾಲುಗಳೇ ಇರಲಿಲ್ಲ. ತನ್ನ ಹಲಗೆಯ ಗಾಡಿಯಲ್ಲಿ ದರದರನೆ ಸಾಗಿ ಮಸೀದಿಯ ಹೊರಬಾಗಿಲು ದಾಟಿದ ಮುದುಕ ಕಾಣೆಯಾಗಿ ಬಿಟ್ಟ. ಪಂಟು ನಿಂತಲ್ಲೇ ಕಲ್ಲಾಗಿ ಬಿಟ್ಟ. ಅವನು ಸಣ್ಣಗೆ ಕಂಪಿಸುತ್ತಿದ್ದ. ಸುಸ್ತಾದವನಂತೆ ಗೋಡೆಯನ್ನು ಆಧರಿಸಿಕೊಂಡ. ಹಾಗೆಯೇ ಕಾಲಿಲ್ಲದವನಂತೆ ಕುಸಿದು ತುಂಬಾ ಹೊತ್ತು ಅಲ್ಲೇ ಕುಳಿತು ಬಿಟ್ಟ. ಒಂದರ್ಧ ಗಂಟೆಯ ಬಳಿಕ ಅವನು ಎದ್ದು ಹೊರಟ. ಮಸೀದಿಯ ಹೆಬ್ಬಾಗಿಲು ದಾಟಿದವನೇ ಅಂಗಳಕ್ಕೆ ಬಂದ. ಹೊರಾಂಗಣದ ಮೂಲೆಯಲ್ಲಿ ಇಟ್ಟಿರುವ ತನ್ನ ಚಪ್ಪಲಿಯ ಕಡೆಗೆ ನಡೆದ. ನೋಡಿದರೆ ಅವನ ಚಪ್ಪಲಿ ಅಲ್ಲಿ ಕಾಣಲಿಲ್ಲ.
ಅದನ್ನು ಹುಡುಕುವ ಪ್ರಯತ್ನವನ್ನೇ ಮಾಡದ ಪಂಟು ಮಸೀದಿಯ ಕಾಂಪೌಂಡ್ ಕಟ್ಟೆಯನ್ನೇರಿ ಕುಳಿತು ಆಕಾಶವನ್ನು ಚುಚ್ಚುವ ಪ್ರಯತ್ನದಲ್ಲಿದ್ದ ಮಿನಾರವನ್ನೊಮ್ಮೆ ನೋಡಿದ. 
ಅವನೊಳಗೀಗ ಅದೇನೋ ಕಳೆದು ಕೊಂಡು ಹಗುರಾದ ಭಾವ, ಜೊತೆಗೆ ಅದೇನೋ ಪಡೆದುಕೊಂಡು  ಸುಸ್ತಾದವನ ಸ್ಥಿತಿ. ಇದರಲ್ಲಿ ಯಾವುದು ನಿಜ ಎನ್ನೋದು ಸ್ಪಷ್ಟವಾಗದೆ ತನ್ನ ಮುಂದೆ ಹರಡಿಕೊಳ್ಳುತ್ತಿರುವ ಚಪ್ಪಲಿಗಳನ್ನು ಗಮನಿಸ ತೊಡಗಿದ. 

Saturday, February 11, 2017

ರೋಗಿಯ ಆತ್ಮಕತೆ

ಬೊಳುವಾರು ಮುಹಮ್ಮದ್ ಕು೦ಞ ಬರೆದ ಈ ಸುದೀರ್ಘ ಸಾಲುಗಳನ್ನು ಏನೆಂದು ಕರೆಯೋಣ ?
ಕತೆಯೆನ್ನೋಣವೇ ? ಕತೆಯಲ್ಲವೇ ಅಲ್ಲ ಎನ್ನುವಂತಹ ಕತೆ 
ಆತ್ಮ ಕತೆ... ಊಹುಂ ಅದರಾಚೆಗೆ 
ವೈದ್ಯಕೀಯ ಬರಹವೆನ್ನೋಣವೇ ... ಊಹುಂ ಅದನ್ನೂ ಮೀರಿದೆ 
ಕಾವ್ಯ ಗುಣವಿದೆ .... ದಾಂಪತ್ಯ ಗೀತೆ ಇದು ಎಂದರೆ ಇಲ್ಲ ಇನ್ನೂ ಅದರಾಚೆಗೆ ಏನೋ ಇದೆ 
ಇದು ಕನ್ನಡ ಸಾಹಿತ್ಯಕ್ಕೆ ಬೊಳುವಾರು ನೀಡಿದ ಒಂದು ಹೊಸ ಗದ್ಯ ಪ್ರಾಕಾರ... 
ಬೊಳುವಾರರ ಲೇಖನಿಗೆ ರಾವಣನ ಹತ್ತು ತಲೆಗಳು.. ಇಲ್ಲಿವೆ ಆ ರಾವಣ ಬರಹಗಾರ ಕಟ್ಟಿಕೊಟ್ಟ 

ಪುರೋಷೋತ್ತಮ  ತನ್ನ ಸಂಗಾತಿಯ ಜೊತೆ ಮರಣವನ್ನ ಗೆದ್ದ ಹೊಸ ರಾಮಾಯಣ 


ಟೈಪ್-1

ಅವನಿಗೆ ನಂಬಿಕೆಯೇ ಆಗಿದ್ದಿರಲಿಲ್ಲ! 
ಅದುವರೆಗೆ ಶೋಭನಾ ಯಾವುದಕ್ಕೂ ಕಾಡಿಸಿದವಳಲ್ಲ. ಪೀಡಿಸಿದವಳಲ್ಲ. 
ಮದುವೆಯಾಗಿ ಜೊತೆಯಲ್ಲಿ ಕಳೆದ ೨೫ ವರ್ಷಗಳಲ್ಲಿ ಹೊಸದೊಂದು ಸೀರೆ ತಂದು ಕೊಡು ಎಂದು ಬೇಡಿಕೆಯಿಟ್ಟವಳಲ್ಲ. ಬಂಗಾರದ ನೆಕ್ಲೆಸ್ ಬೇಕು ಎಂದು ತಮಾಷೆಗಾದರೂ ಹೇಳಿದವಳಲ್ಲ. ನಾಟಕ, ಯಕ್ಷಗಾನ, ಸೆಮಿನಾರುಗಳೆಂದು ಊರೂರು ಅಲೆಯುತ್ತಾ ನಡು ರಾತ್ರಿಯಲ್ಲಿ ಬಂದು ಬಾಗಿಲು ಬಡಿದಾಗಲೂ ಮುಖ ಸಿಂಡರಿಸಿಕೊಂಳವಳಲ್ಲ. ಅಂಥವಳಿಗೆ ಈಗ ಏನಾಯಿತು? ಯಾರ ಚಿತಾವಣೆಯಿಂದ ಹೀಗೆ ಮಾಡುತ್ತಿದ್ದಾಳೆ!? ಯಾವುದಕ್ಕೂ ಹಟ ಹಿಡಿಯದ ಇವಳು ಈಗೇಕೆ, ಹೀಗೇಕೆ ಹಿಂಸಿಸಿ ಕೊಲ್ಲುತ್ತಿದ್ದಾಳೆ!!? 
ಅವನು ಹುಚ್ಚನಂತಾಗಿದ್ದ. 
ಅವನನ್ನು ತಯಾರು ಮಾಡಿದ ದೇವರು ಸ್ರ್ತೀ ಪುರುಷೋತ್ತಮರಿಗೆಲ್ಲ ಜೋಡಿಸುವಂತೆ ಎಲ್ಲ ಅಂಗಾಂಗಗಳನ್ನೂ ಸರಿಯಾಗಿಯೇ ಅಂಟಿಸಿ, ಚೆನ್ನಾಗಿ ಜೀವಿಸು ಎಂದು ಹೇಳಿಯೇ, ಹಿಂದೂಸ್ತಾನದ ಪಶ್ಚಿಮ ಘಟ್ಟದ ತಪ್ಪಲಿನ ಕರಿಮಲೆಯ ಬುಡದಲ್ಲಿನ ಬಿಳಿಮಲೆ ಎಂಬ ಆರೇಳು ಮನೆಗಳ ಊರಿಗೆ ಟಿಕೇಟು ಕೊಟ್ಟು ಕಳಿಸಿದ್ದ. ಆದರೆ ಜೀವನವೆಂದರೆ ಏನೆಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದುಕೊಳ್ಳುವಷ್ಟರಲ್ಲಿ ಬದುಕಿನ ಬಹುಭಾಗವನ್ನು ಸಾಹಿತಿಗಳ, ಬುದ್ಧಿ ಜೀವಿಗಳ ನಡುವೆಯೇ ಕಳೆದುಕೊಂಡುಬಿಟ್ಟಿದ್ದ. 
ಎಂಬತ್ತರ ದಶಕದ ಆರಂಭದ ದಿನಗಳಲ್ಲಿ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದಾಗಲೇ ನಾಲ್ಕೂ ದಿಕ್ಕಿನಲ್ಲಿ ಕಾಣಿಸುತ್ತಿದ್ದ ಹಚ್ಚ ಹಸಿರಿನ ನಡುವೆ ಕೆಂಪು ಕಾಣುವ ಬಯಕೆ ಅವನೊಳಗಿತ್ತು. ಕೆಲವು ಸಮಾನ ಮನಸ್ಕ ಗೆಳೆಯರನ್ನು (ಐ. ಕೆ. ಬೊಳುವಾರು, ಮೋಹನ ಸೋನ, ಸುದೇಶ ಮಹಾನ, ಹಿಮಕರ, ಎಂ.ಜಿ. ಕಜೆ ಮೊದಲಾದವರು) ಜೊತೆಗೇರಿಸಿಕೊಂಡು ಬಗೆ ಬಗೆಯ ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ ಸಂಘಟನೆಗಳನ್ನು ಕಟ್ಟಿಕೊಂಡು ಅಲೆಯುತ್ತಿದ್ದ. ಅಭಿನಯ ನಾಟಕ ತಂಡ, ಸ್ವಂತಿಕಾ ಪ್ರಕಾಶನಗಳನ್ನು ಹುಟ್ಟುಹಾಕಿದ್ದ. ಬಂಡಾಯ ಸಾಹಿತ್ಯ ಸಂಘಟನೆಯೊಂದಿಗೆ ಗುರುತಿಸಿಕೊಂಡಿದ್ದ. ಆಗಷ್ಟೇ ಜನಪ್ರಿಯವಾಗುತ್ತಿದ್ದ ದಲಿತ ಚಳುವಳಿಯೂ ಅವನಿಗೆ ಆಪ್ತವಾಗಿತ್ತು. ಲಿಂಗ ಬೇಧ, ಜಾತಿಯ ಅಸಮಾನತೆ, ಅಲ್ಪ ಸಂಖ್ಯಾಕರ ಶೋಷಣೆ, ಸಾಮಾಜಿಕ ಅಸಮಾನತೆಗಳ ವಿರುದ್ಧ ಸಂಘಟಿತ ಹೋರಾಟಗಳು ಅಂದಿನ ಅವನ ಅಗತ್ಯಗಳು.
ಸಾಮಾಜಿಕ ಬದಲಾವಣೆಗೆ ಅವನೊಬ್ಬ ಕಾರಣಕರ್ತನಾಗದಿದ್ದರೆ ಚರಿತ್ರೆ ಅವನನ್ನು ಕ್ಷಮಿಸಲಾರದು ಎಂದು ಗಟ್ಟಿಯಾಗಿ ನಂಬಿಕೊಂಡಿದ್ದ. ನಾಳೆ ಬೆಳಗ್ಗೆ ಹನ್ನೊಂದುವರೆಯೊಳಗೆ ಕ್ರಾಂತಿಯಾಗುತ್ತದೆ ಎಂದು ಪ್ರಾಮಾಣಿಕವಾಗಿ ನಂಬಿದ್ದ. 
ಈ ನಂಬಿಕೆಗಳಿಗೆ ಪೂರಕವಾದ ಓದು ಅವನ ಅಂದಿನ ತುರ್ತು ಅಗತ್ಯಗಳಲ್ಲಿ ಒಂದಾಗಿತ್ತು. ಆಗಷ್ಟೇ ದಲಿತ ಕವಿ ಸಿದ್ಧಲಿಂಗಯ್ಯನವರ ಹೊಲೆಮಾದಿಗರ ಹಾಡು ಅವನಿಗೆ ಮತ್ತು ಅವನಂತಹ ಹಲವರಿಗೆ ಹುಚ್ಚು ಹಿಡಿಸಿತ್ತು. ಸುಳ್ಯದವರೇ ಆದ ಕುಳುಕುಂದ ಶಿವರಾಯ ಅಥವಾ ನಿರಂಜನರ ಕೆಯ್ಯೂರು ಕ್ರಾಂತಿಯ ಚಿರಸ್ಮರಣೆ ಅವನಲ್ಲಿ ಕ್ರಾಂತಿಯ ಕನಸನ್ನು ಬಿತ್ತಿತ್ತು. 
ಇವುಗಳ ಜೊತೆಗೆ ಪಾಬ್ಲೋ ನೆರುದಾನ ನೋಡಿ ರಕ್ತವಿದೆ ಬೀದಿಯ ಮೇಲೆ, ಬೀದಿಯ ಮೇಲೆ ರಕ್ತವಿದೆ ಸಾಲು, ಅದಾಗಲೇ ಗಾರ್ಕಿಯ ಮದರ್ ಕಾದಂಬರಿಯ ಸಾಲುಗಳಿಂದ ತುಂಬಿದ್ದ ಅವನ ದಿನಚರಿಯ ಪುಟಗಳ ನಡುವೆ ಸೇರಿಕೊಂದಿತ್ತು. ಚಿಲಿಯ ಕ್ರಾಂತಿಕಾರಿ ಹೋರಾಟಗಾರ ಚೆಗವಾರ ಬರೆದ ಪ್ರೇಮ ಪತ್ರದ ಸಾಲುಗಳನ್ನು ಬಾಯಿಪಾಠ ಮಾಡಿಕೊಂಡಿದ್ದ. ಅಮೇರಿಕಾದ ಸೈನಿಕರು ಚೆ ಗವಾರನನ್ನು ಗುಂಡಿಕ್ಕಿ ಸಾಯಿಸಿ, ಆತನ ದೇಹವನ್ನು ತಪಾಸಣೆ ಮಾಡಿದಾಗ ಅವರಿಗೆ ಸಿಕ್ಕಿದ್ದು ನೆರೂದಾನ ಕಾವ್ಯ ಮತ್ತು ಒಂದು ಮದ್ದು ಗುಂಡು ಎಂಬುದನ್ನು ಓದಿಕೊಂಡು ಪುಳಕಿತನಾಗಿದ್ದ. ಟಾಲ್ಸಟಾಯ್ ಕಾದಂಬರಿಗಳು, ಬೋದಿಲೇರನ ಪಾಪದ ಹೂಗಳು, ಶಿವರಾಮ ಕಾರಂತರ ಚೋಮನ ದುಡಿ, ಬೊಳುವಾರರ ಕತೆಗಳು, ಲಂಕೇಶ್ ಪತ್ರಿಕೆ, ಶೂದ್ರ, ಸಂಕ್ರಮಣ, ಹೀಗೆ ಹತ್ತು ಹಲವು ಸಂಗತಿಗಳ ಬಗ್ಗೆ ಸಂಗಾತಿಗಳೊಂದಿಗೆ ಚರ್ಚೆ ನಡೆಸುತ್ತಿದ್ದ. 
ಅವನು ಮತ್ತು ಅವನ ಸಂಗಾತಿಗಳು ಬಹಳ ಸಕ್ರಿಯರಾಗಿ ಕೆಲಸ ಮಾಡುತ್ತಿದ್ದುದರಿಂದ ಬಹಳ ಜನ ಚಿಂತಕರು, ಬುದ್ಧಿಜೀವಿಗಳು ತಾವಾಗಿಯೇ ಸುಳ್ಯದ ಕಡೆ ಬಂದು ಅವರನ್ನು ಮಾತಾಡಿಸುತ್ತಿದ್ದರು. ಮಂಗಳೂರಿನಿಂದ ರಾಮಚಂದ್ರ ರಾವ್, ಕಾಸರಗೋಡು ಕಡೆಯಿಂದ ಬಿ. ವಿ. ಕಕ್ಕಿಲ್ಲಾಯ ಮತ್ತಿತರರು ಸುಳ್ಯದಲ್ಲಿ ಕಾಣಿಸಿಕೊಂಡರು. ಈ ಸಂಗಾತಿಗಳು ವಾರಾಂತ್ಯಗಳಲ್ಲಿ ಮನೆ ಮನೆಗಳಲ್ಲಿ ನಡೆಸುತ್ತಿದ್ದ ಅಧ್ಯಯನ ವೇದಿಕೆಗಳಲ್ಲಿ ಕಾರ್ಲ ಮಾರ್ಕ್ಸ, ಎಂಗೆಲ್ಸ್, ಲೆನಿನ್, ಸಾಮ್ರಾಜ್ಯಶಾಹಿ, ಬಂಡವಾಳಶಾಹಿ, ದ್ವಂದ್ವ ಮಾನ ಭೌತಿಕವಾದ, ಬಡತನ, ಬಿಡುಗಡೆ, ವಿಮೋಚನೆ, ಹೋರಾಟ, ರಷ್ಯಾ ಕ್ರಾಂತಿ ಮತ್ತಿತರ ವಿಷಯಗಳೆಲ್ಲ ಸದ್ದು ಮಾಡತೊಡಗಿದ್ದವು. ಸಿದ್ಧಲಿಂಗಯ್ಯ, ಕೋವೂರ್, ಶೂದ್ರ ಪತ್ರಿಕೆ, ಸಮುದಾಯ ಜಾಥಾ, ಚಂಪಾ, ಬರಗೂರು, ಅತ್ರಿ ಅಶೋಕವರ್ಧನ ಮೊದಲಾದವರ ಪ್ರೇರಣೆಯಿಂದ ಹೊಸ ಯೋಚನೆಗಳು, ಯೋಜನೆಗಳು ರೂಪುಗೊಳ್ಳುತ್ತಿದ್ದುವು. 
ದೇವಮಾನವರ ವಿರುದ್ಧ ಹೋರಾಟ, ಜಾತಕಕ್ಕೆ ಬೆಂಕಿ, ಸಾಮಾಜಿಕ ಬದಲಾವಣೆಗಾಗಿ ಬೀದಿ ನಾಟಕ, ಕುವೆಂಪು ಪ್ರೇರಣೆಯಿಂದ ಶೂದ್ರತ್ವದ ಬಗೆಗೆ ಹೊಸ ತಿಳುವಳಿಕೆ, ಜಾತಿವಿನಾಶ ಚಳುವಳಿ- ಹೀಗೆ ಗೆಳೆಯರ ಚಟುವಟಿಕೆಗಳಿಗೆ ಹಲವು ಮುಖಗಳಿದ್ದುವು. ವಿದ್ಯಾರ್ಥಿಗಳ ಒಂದು ಗುಂಪು ಈ ಗುಂಪಿನ ಜೊತೆಗೆ ಕ್ರಾಂತಿ ಗೀತೆ ಹಾಡುತ್ತಿತ್ತು. 

ಕ್ರಾಂತಿಗೆ ಕಡಿದ ಸೊಳ್ಳೆ:

 ಕ್ರಾಂತಿಕಾರಿಗಳಿಗೆ ಸೊಳ್ಳೆ ಕಚ್ಚಬಾರದೆಂದೇನೂ ಇಲ್ಲವಲ್ಲ.
 ೧೯೮೨ರ ಜುಲಾಯಿ ತಿಂಗಳಿನ ಮಳೆಗಾಲದ ಒಂದು ಸಂಜೆ ಈ ಕ್ರಾಂತಿಕಾರಿಯ ಮೊಣಕಾಲ ಕೆಳಗೆ ಸೊಳ್ಳೆಯೊಂದು ಕಚ್ಚಿಬಿಟ್ಟಿತ್ತು. ಎಲ್ಲರ ಹಾಗೆ ಇವನೂ ಸೊಳ್ಳೆ ಕಡಿದ ಜಾಗವನ್ನು ಸಹಜವಾಗಿ ಕೆರೆದುಕೊಂಡ. ಚರ್ಮ ಎದ್ದು ಬಂತು, ಉರಿ ಶಮನವಾಯಿತು. ಮರುದಿನ ಕೆರೆದುಕೊಂಡ ಜಾಗ ಕೆಂಪಾಗಿತ್ತು. ಒಂದೆರಡು ದಿನಗಳಲ್ಲಿ ಅದು ಎಂದಿನಂತೆ ಒಣಗದೆ, ಆ ಜಾಗದಲ್ಲಿ ಪಾವಲಿಯಷ್ಟು ಅಗಲವಾದ ಸ್ಥಳ ಕಲ್ಲಿನಂತೆ ಗಟ್ಟಿಗೊಂಡು, ಅಸಾಧ್ಯ ನೋವು ಕಾಣಿಸಿಕೊಂಡಿತು. ನೋವುನಿವಾರಕ ಮಾತ್ರೆಗಳಿಂದ ಪ್ರಯೋಜನವಾಗಲಿಲ್ಲ. ಯಾವುದೋ ಗೆಳೆಯನ ಸಲಹೆಯಂತೆ ಮಂಗಳೂರಿಗೆ ಹೋಗಿ ರಕ್ತ ಪರೀಕ್ಷೆ ಮಾಡಿಸಿಕೊಂಡ. ಸಕ್ಕರೆಯ ಮಟ್ಟ ೨೫೬ಕ್ಕೆ ತಲುಪಿತ್ತು. ಹಂಪನಕಟ್ಟೆಯ ಡಾಕ್ಟರ್ ವರ್ಗೀಸ್ ವರದಿ ಹೇಳಿದ್ದರು, ಆರೋಗ್ಯವಂತ ದೇಹದಲ್ಲಿ ಸಕ್ಕರೆಯ ಮಟ್ಟ ೭೦-೧೨೦ ಇರಬೇಕು. ನಿಮ್ಮದು ಇಮ್ಮಡಿ ಆಗಿದೆ, ದುರ್ದೈವದಿಂದ ನಿಮಗೆ ಸಣ್ಣ ವಯಸ್ಸಿಗೆ ಮಧುಮೇಹ ಬಂದಿದೆ. ತುಂಬಾ ಜಾಗೃತೆಯಾಗಿರಿ. ಹಾಗೆ ಹೇಳಿದವರು ಯೂಗ್ಲೋಕೋನ್ ಎಂಬ ಮಾತ್ರೆ ಸೇವಿಸಲು ಹೇಳಿದರು.
 ಅವನು ತಣ್ಣನೆ ಯಾವುದೋ ಬಸ್ ಹಿಡಿದು ಮರುದಿನದ ಕ್ರಾಂತಿಕಾರೀ ಚಟುವಟಿಕೆಗಳ ಬಗ್ಗೆ ಯೋಚಿಸುತ್ತಾ ಮಧ್ಯರಾತ್ರಿ ಸುಳ್ಯಕ್ಕೆ ಹಿಂದಿರುಗಿ, ಹಳೆಯ ಚಾಪೆಯಲ್ಲಿ ಒರಗಿಕೊಂಡು ನಿದ್ದೆಯಿಲ್ಲದ ರಾತ್ರಿ ಕಳೆದ. ಈ ನಡುವೆ ಕಾಲಿನ ಹುಣ್ಣು ಗುಣವಾದರೂ, ಗಡ್ಡ ತೆಗೆಯುವಾಗ ಗಲ್ಲದಲ್ಲಾದ ಸಣ್ಣದೊಂದು ಗಾಯವು ತಿಂಗಳಾನುಗಟ್ಟಲೆ ಗುಣವಾಗದೆ ಹಿಂಸೆ ನೀಡಿತ್ತು. 
ಅಗಿನ್ನೂ ಮದುವೆಯಾಗಿರಲಿಲ್ಲ.
 ಹುಡುಗಿಯರಿಗೆ ಗಲ್ಲದ ವಿನ್ಯಾಸ ಗೊತ್ತಾಗಬಾರದೆಂದು ಗಡ್ಡಬೆಳೆಸಿದ. 
ಆತನ ಕುರುಚಲು ಕೂದಲು ಮತ್ತು ಕರ್ರಗಿನ ಗಡ್ಡ ಆ ಕಾಲದ ಅವನ ಕ್ರಾಂತಿಕಾರೀ ಚಟುವಟಿಕೆಗಳಿಗೆ ಪೂರಕವೆ ಆಗಿ ಹೋಯಿತು.
ಒಂದು ದಿನ ಸಿಕ್ಕಾಗ ನನ್ನಲ್ಲಿ ಅವಹಾಲು ತೋಡಿಕೊಂಡಿದ್ದ. ನಾನು ಡಯಾಬೆಟಿಕ್ ಅಂತ ಗೊತ್ತಾದಾಗ ನನಗೆ ೨೭ ವರ್ಷ. ಅಂದರೆ ಅದಕ್ಕೂ ನಾಲ್ಕಾರು ವರ್ಷಗಳ ಮೊದಲೇ ನಾನು ಡಯಾಬೆಟಿಕ್ ಆಗಿದ್ದಿರಬೇಕು. ನಿಜ ಯಾರಿಗೆ ಗೊತ್ತು? ನಾನು ಕುಡುಕನಲ್ಲ. ಸಿಗರೇಟು ಸೇದುತ್ತಿರಲಿಲ್ಲ, ಹೇಳುವಂತಹ ಕೆಟ್ಟ ಚಟಗಳು ಯಾವುದೂ ಇರಲಿಲ್ಲ, ಆದರೂ ಈ ಮಹಾಮಾರಿ ನನ್ನನ್ನೇ ಯಾಕೆ ಆರಿಸಿಕೊಂಡಿತು?
 ಹಾಗೆಂದು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ವಿಶೇಷ ಪ್ರಯತ್ನವನ್ನೇನೂ ಅವನು ಮಾಡಲಿಲ್ಲ. 
ಬದುಕನ್ನು ಅದು ಬಂದ ಹಾಗೆಯೇ ಸ್ವೀಕರಿಸುವ ಮನೋಭಾವ ಬೆಳೆಸಿಕೊಂಡಿದ್ದುರಿಂದ ಅವನು ಕಂಗೆಡಲಿಲ್ಲ. ಅವನ ಎಲ್ಲಾ ಕ್ರಾಂತಿಕಾರೀ ಚಟುವಟಿಗೆಗಳೂ ಹಾಗೆಯೇ ಮುಂದುವರಿದವು. 
ಗೆಳೆಯರ ಜೊತೆಗೆ ಖಾಯಿಲೆಯನ್ನೂ ಮುಚ್ಚಿಡಲಿಲ್ಲ. ಸಕ್ಕರೆಯ ನೇರ ಸೇವನೆಗೆ ತಿಲಾಂಜಲಿ ಕೊಟ್ಟ.
 ಆದರೆ, ಡಯಾಬೆಟಿಸ್‌ನ್ನು ನಿಯಂತ್ರಿಸಲು ಬೇಕಾದ ಅಗತ್ಯ ಆಹಾರ ಪದ್ಧತಿಯನ್ನು ರೂಢಿಸಿಕೊಳ್ಳುವಲ್ಲಿ ಬಹುತೇಕ ವಿಫಲನಾಗಿದ್ದ.ಅನ್ನ ಬಿಡಲಾಗಲಿಲ್ಲ. ಮಧುಮೇಹದ ದೂರಗಾಮೀ ಪರಿಣಾಮಗಳನ್ನು ಊಹಿಸಲಿಲ್ಲ. ಸುಳ್ಯದಿಂದ ಮಂಗಳೂರುವರೆಗೆ ಹೋಗಿ ನಿಯತವಾಗಿ ಪರೀಕ್ಷೆಮಾಡಿಸಿಕೊಳ್ಳಲು ಬೇಕಾದ ಆರ್ಥಿಕ ಶಕ್ತಿಯೂಅವನಿಗಿರಲಿಲ್ಲ. 
ಮುಂದೊಮ್ಮೆ ಪುತ್ತೂರು ಬಸ್ ನಿಲ್ದಾಣದಲ್ಲಿ ಸಿಕ್ಕಾಗ ನಗುತ್ತಲೇ ಹೇಳಿದ್ದ, ನನ್ನದೇನು ಮಹಾ? ಅನೇಕ ಕ್ರಾಂತಿಕಾರಿಗಳು ಸಣ್ಣ ದೊಡ್ಡ ಖಾಯಿಲೆಗಳಿಂದ ನರಳುತ್ತಿರಲಿಲ್ಲವಾ? ಈ ಖಾಯಿಲೆ ಸಾಮಾಜಿಕ ಬದಲಾವಣೆಗೆ ನಾನು ನಡೆಸುವ ಕೆಲಸಗಳಿಗೆ ಪೂರಕವಾಗಿದೆ. ಏನು ಹೇಳ್ತಿ? ನಾನೇನೂ ಹೇಳಿದ್ದಿರಲಿಲ್ಲ. ಆದರೆ ನಕ್ಕಿರಲಿಲ್ಲವೆಂದು ನೆನಪು. ಈ ನಡುವೆ ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪಿ.ಎಚ್.ಡಿ ಪದವಿಗಾಗಿ ಡಾ. ವಿವೇಕ ರೈ ಅವರ ಮಾರ್ಗ ದರ್ಶನದಲ್ಲಿ ಹೆಸರು ನೋಂದಣೆ ಮಾಡಿಸಿಕೊಂಡ. ಇದಕ್ಕಾಗಿ ಸುಳ್ಯ ತಾಲೂಕಿನ ಎಲ್ಲ ೪೨ ಗ್ರಾಮಗಳನ್ನು ಹಗಲೂ ರಾತ್ರಿ ಸುತ್ತಿದ. ವಿಷಯ ಸಂಗ್ರಹ ಮಾಡಿದ. ಈ ಹಂತದಲ್ಲಿ ಆಹಾರ, ನಿದ್ರೆ, ಇತ್ಯಾದಿಗಳ ಬಗ್ಗೆ ಗಮನವನ್ನೇ ಹರಿಸಲಿಲ್ಲ.
 ಮುಂದೆ ಪಿ.ಎಚ್.ಡಿ ಪದವಿಯೇನೋ ದೊರೆತಿತು. ಆದರೆ ಅಷ್ಟರಲ್ಲೇ ಮಧುಮೇಹ ಅವನನ್ನುಸದ್ದಿಲ್ಲದೆ ಕೊಲ್ಲಲು ಆರಂಭಿಸಿತ್ತು. 
ಮುಂದೆ ಅವನು ಮಂಗಳೂರು ವಿಶ್ವವಿದ್ಯಾಲಯ ಸೇರಿದ. ಅಲ್ಲಿ ಪಾಠ ಮಾಡುವುದರ ಜೊತೆಗೆ, ಬಂಡಾಯ ಚಳುವಳಿಯ ಜಿಲ್ಲಾ ಸಂಚಾಲಕನಾಗಿ ಕೆಲಸ ಮಾಡಿದ. ದಲಿತ ಚಳುವಳಿಯಲ್ಲಿ ತೊಡಗಿಸಿಕೊಂಡ. ನಡುವೆ ಯಕ್ಷಗಾನದ ಹುಚ್ಚು ಕೂಡಾ ಅಂಟಿಕೊಂಡಿತು. ಇವೆಲ್ಲದರ ಜೊತೆಗೆ ವಿಶ್ವವಿದ್ಯಾಲಯದಲ್ಲಿ ಶೈಕ್ಷಣಿಕವಾಗಿ ಬೆಳೆಯಲೇಬೇಕಾಗಿತ್ತಾದ್ದರಿಂದ, ಅಧ್ಯಯನ ಮತ್ತು ಕ್ಷೇತ್ರಕಾರ್ಯಗಳನ್ನೂ ಮುಂದುವರಿಸಿಕೊಂಡು ಬಂದ. ಅನೇಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ. ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿ ಪ್ರಬಂಧಗಳನ್ನು ಮಂಡಿಸಿದ. ಮುಂದೆ ಅವನಿಗೆ ಬಹಳ ಖ್ಯಾತಿ ತಂದು ಕೊಟ್ಟ ಕರಾವಳಿ ಜಾನಪದ ಕೃತಿಯೂ ಪ್ರಕಟವಾಯಿತು. ಈ ಎಲ್ಲಾ ಕೆಲಸಗಳು ಅವನಿಗೆ ಸಾಕಷ್ಟು ಪ್ರಸಿದ್ಧಿಯ ಸಿಹಿಯನ್ನೂ, ದೇಹದ ತುಂಬೆಲ್ಲ ಸಕ್ಕರೆಯ ಕಹಿಯನ್ನೂ ತಂದಿದ್ದವು. ಇಂಥ ಸ್ಥಿತಿಯಲ್ಲೇ ಅವನು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕೆ ಪ್ರಾಧ್ಯಾಪಕನಾಗಿ ಆಹ್ವಾನದ ಮೇಲೆ ಸೇರಿಕೊಂಡ. 
ಆಗ ಕಂಬಾರರು ಹಂಪಿಗೆ ಕುಲಪತಿಗಳು. 
ಎಳೆಯ ವಯಸ್ಸಿನಲ್ಲಿ ಪ್ರಾಧ್ಯಾಪಕ ಹುದ್ದೆ ನೀಡಿದ ಕಂಬಾರರ ಋಣ ತೀರಿಸಲು ಇವನು ಅಗತ್ಯಕ್ಕಿಂತ ಹೆಚ್ಚು ದುಡಿದ. ಒಂದೆಡೆ ಕಟ್ಟಡದ ಕೆಲಸಗಳು, ಇನ್ನೊಂದೆಡೆ ಶೈಕ್ಷಣಿಕ ಕೆಲಸಗಳು, ಹೀಗೆ ದುಡಿಯುವಾಗ ಮಧುಮೇಹದ ಕುರಿತು ಚಿಂತಿಸಲು ಸಮಯವೇ ದೊರಕಲಿಲ್ಲ. ಆದರೆ ವಿಶ್ವವಿದ್ಯಾಲಯ ಮೇಲೆ ಬರುತ್ತಿದ್ದಂತೆ ಕಂಬಾರರೂ ಸೇರಿದಂತೆ ಹಲವರಿಗೆ, ಇವನನ್ನೂ ಒಳಗೊಂಡಂತೆ ಇನ್ನೂ ಕೆಲವರು ಬೇಡವಾದರು. ಕಂಬಾರ ಮತ್ತು ಅವರೊಡನೆ ಇದ್ದ ಕೆಲವರಿಗೆ ಬೇಕಾದದ್ದು ಇವನಲ್ಲಿರಲಿಲ್ಲ. ಇವನಲ್ಲಿದ್ದದ್ದು ಅವರಿಗೆ ಬೇಕಾಗಿರಲಿಲ್ಲ. ಪ್ರಕಾಶ್ ಕಂಬತ್ತಳ್ಳಿಯವರನ್ನು ಹೊರಗೆ ಅಟ್ಟಲಾಯಿತು. ಚಿ. ಶ್ರಿನಿವಾಸ ರಾಜು, ಎಚ್.ಎಸ್. ರಾಘವೇಂದ್ರ ರಾವ್, ಓ.ಏಲ್. ನಾಗಭೂಷಣ ಸ್ವಾಮಿ ಹೀಗೆ ಹಲವರು ಒಬ್ಬೊಬ್ಬರಾಗಿ ತಮ್ಮ ತಮ್ಮ ಮಾತೃ ಸಂಸ್ಥೆಗೆ ಹಿಂದಿರುಗಿದರು. ಆದರೆ ಇವನಿಗೆ ಬೇರೆ ಗತಿ ಇಲ್ಲ. ನಿಧಾನವಾಗಿ ಇರುವಲ್ಲಿಯೇ ಒಂಟಿಯಾಗತೊಡಗಿದ. ೧೯೯೭ರ ನವಂಬರದ ಹೊತ್ತಿಗೆ ಇವನ ಜೊತೆಗಿದ್ದದ್ದು ಹಂಪಿಯ ಸುಮಾರು ೬೦೦ ವರ್ಷಗಳ ಇತಿಹಾಸವಿರುವ ವಿರೂಪಾಕ್ಷ ಮತ್ತು ೪೭೫ರ ಇತಿಹಾಸ ನಿರ್ಮಿಸಿದ್ದಇವನ ಸಕ್ಕರೆಯ ಮಟ್ಟ ಮಾತ್ರ. 

ಕು.ಶಿ.ಕೊಟ್ಟ ಅಮೇರಿಕಾದ ಇನ್ಸುಲಿನ್

 ಆ ಸಂದರ್ಭದಲ್ಲಿ ಒಂದು ದಿನ ಉಡುಪಿಯಿಂದ ಕು.ಶಿ. ಹರಿದಾಸ ಭಟ್ಟರು ಇವನು ಕೆಲಸ ಮಾಡುತ್ತಿದ್ದ ಹಂಪಿಯ ಜಾನಪದ ವಿಭಾಗಕ್ಕೆ ನಗು ನಗುತ್ತಾ ಬಂದಿದ್ದಾಗ ಇವನು ಅಳು ಅಳುತ್ತಲೇ ತನ್ನ ಕತೆ ಹೇಳಿದ. ಒಂದು ವಾರದಲ್ಲಿ ಅವರು ಉಡುಪಿಯಿಂದ ಫೋನ್ ಮಾಡಿ ದೆಹಲಿಯಲ್ಲಿ ಕೆಲಸ ಮಾಡಲು ತಯಾರಿದ್ದೀಯಾ ಅಂತ ಕೇಳಿದರು. ಬಗೆ ಬಗೆಯ ಹಿಂಸೆಗೆ ಒಳಗಾಗಿ ಜರ್ಝರಿತನಾಗಿದ್ದ ಅವನು ಹೂಂ ಎಂದ.
೧೯೯೮ರ ದಶಂಬರದಲ್ಲಿ ಇವನು ಹಂಪಿ ಬಿಟ್ಟು ದೆಹಲಿ ಸೇರಿದ. 
ದೆಹಲಿ ಇವನ ಆಯ್ಕೆಯಾಗಿರಲಿಲ್ಲ, ಆದರೆ ಇವನಿಗೆ ಬೇರೆ ಆಯ್ಕೆಗಳಿರಲಿಲ್ಲ. 
ಇವನು ದೆಹಲಿಯಲ್ಲಿ ಕೆಲಸಕ್ಕೆ ಸೇರಿದ ಸಂಸ್ಥೆಯ ಹೆಸರು – ಭಾರತೀಯ ಅಧ್ಯಯನಗಳ ಅಮೇರಿಕಾ ಸಂಸ್ಥೆ. 
ಅಮೇರಿಕಾದ ೬೦ ವಿಶ್ವವಿದ್ಯಾಯಗಳು ಒಟ್ಟು ಸೇರಿ ಸುರು ಮಾಡಿದ ಈ ಸಂಸ್ಥೆಯು ೧೯೪೫ರಿಂದಲೂ ಭಾರತದಲ್ಲಿ ಕೆಲಸ ಮಾಡುತ್ತಿತ್ತು. ವಿದೇಶೀಯರಿಗೆ ಭಾರತೀಯ ಭಾಷೆಗಳನ್ನು ಹೇಳಿಕೊಡುವುದು, ಭಾರತೀಯ ಅಧ್ಯಯನಗಳಿಗೆ ಶಿಷ್ಯ ವೇತನ ನೀಡುವುದು, ಎರಡು ಉನ್ನತ ಸಂಶೋಧನಾ ಕೇಂದ್ರಗಳನ್ನು ನಡೆಸುವುದು ಮತ್ತು ಸಂಶೋಧನಾ ಕೃತಿಗಳ ಪ್ರಕಟಣೆ – ಈ ಸಂಸ್ಥೆಯ ಮುಖ್ಯ ಕೆಲಸಗಳು. ಇಲ್ಲಿ ಆತ ಉಪನಿರ್ದೇಶಕನಾಗಿ ೧೯೯೮ರ ಜನವರಿ ತಿಂಗಳಲ್ಲಿ ಸೇರಿಕೊಂಡಿದ್ದ. 
ದೆಹಲಿಯಲ್ಲಿ ಸಿಕ್ಕಾಗಲೊಮ್ಮೆ ಬಹಳ ದೊಡ್ಡ ಪಾಪ ಮಾಡಿದವನಂತೆ ನಾಚಿಕೆಯಿಂದಲೇ ಹೇಳಿದ್ದ, ಅಲ್ಲಿ ಜೋಯ್ನಿಂಗ್ ರಿಪೋರ್ಟ್ ಬರೆಯುತ್ತಿದ್ದಾಗ ನನಗೆ ನೆನಪಾಗಿದ್ದದ್ದು ಅಮೆರಿಕಾದ ಅಧ್ಯಕ್ಷ ಬಿಲ್ ಕ್ಲಿಂಟನ್ ಅಲ್ಲ, ಮಂಡ್ಯದ ಸಕ್ಕರೆ ಕಾರ್ಖಾನೆಗಳೂ ಅಲ್ಲ; ಅದೇ ಅಮೇರಿಕಾದ ಯಾವುದೋ ವಿಶ್ವವಿದ್ಯಾಲದಲ್ಲಿದ್ದ ಕಾಮ್ರೇಡ್ ಎಂ.ಕೆ. ಭಟ್ಟರು, ಹಿಂದೂಸ್ತಾನದಲ್ಲಿ ಕ್ರಾಂತಿ ಮಾಡಲೆಂದು ಸುಳ್ಯಕ್ಕೆ ಬಂದಿದ್ದ ದಿನಗಳಲ್ಲಿ ಅವರ ಜೊತೆಗೆ ಅನುಭವಿಸಿದ್ದ ರೋಮಾಂಚನದ ಕ್ಷಣಗಳು.

ತ್ರಿಪತಿಗಳ ಕರುಣೆ

ಆ ಅಮೇರಿಕಾದ ಸಂಸ್ಥೆಯೇನೋ ಚೆನ್ನಾಗಿತ್ತು. ಆದರೆ ಇವನ ಭಾಷಾಜ್ಞಾನ ಅಲ್ಲಿಗೆ ಸಾಕಾಗುತ್ತಿರಲಿಲ್ಲ. ಅಲ್ಲಿಗೆ ಬರುತ್ತಿದ್ದವರೆಲ್ಲ ಖ್ಯಾತ ವಿದೇಶೀ ವಿದ್ವಾಂಸರೇ ಆಗಿದ್ದರು. ಅವರೊಡನೆ ಸಂವಾದಿಸಲು ಇಂಗ್ಲಿಷ್ ಬೇಕೇ ಬೇಕು. ಸರೀಕರೊಡನೆ ಮಾತಾಡಲು ಹಿಂದಿ ಬೇಕು. ಈ ಎರಡೂ ಭಾಷೆಗಳು ಕನ್ನಡದಲ್ಲಿ ಎಂ.ಎ. ಮಾಡಿದ ಅವನಿಗೆ ಫ್ರೆಂಚ್ ಆಗಿದ್ದವು. ಪ್ರತಿವಾರದ ಕೊನೆಗೆ ವಿವರವಾದ ಪ್ರಗತಿ ವರದಿಯನ್ನು ಇಂಗ್ಲಿಷ್‌ನಲ್ಲಿ ಬರೆದು ಇ-ಮೇಲ್ ಮಾಡಬೇಕು. ಇವನು ಅದುವರೆಗೆ ಕಂಪ್ಯೂಟರ್ ಮುಟ್ಟಿದವನಲ್ಲ. ಅವನೊಳಗಿದ್ದ ಪಂಪ, ರನ್ನ, ಕುಮಾರವ್ಯಾಸ, ಬೇಂದ್ರೆ ಕುವೆಂಪು ಅಲ್ಲಿ ಯಾರಿಗೂ ಬೇಕಾಗಿರಲಿಲ್ಲ. ಜೊತೆಗೆ ದೆಹಲಿಯಂಥಾ ಮಹಾನಗರದಲ್ಲಿ ವಾಸ.

ಹಾಗೆ ನೋಡಿದರೆ ಆತ ಆತನ ಎಳವೆಯನ್ನು ಕಳೆದದ್ದು ವಾಟೆಕಜೆ ಎಂಬ ಪ್ರದೇಶದಲ್ಲಿ. ಬಂಟಮಲೆ ಕಾಡಿನ ನಡುವೆ ಇರುವ ಈ ಪ್ರದೇಶದಲ್ಲಿ ಅವನದ್ದು ಒಂದೇ ಮನೆ. ಆ ಮನೆಗೆ ಎರಡೇ ಮಾಡು. ಮಣ್ಣಿನ ಗೋಡೆಯ ಮೇಲೆ ಬಿದಿರು ಇರಿಸಿ, ಅದರ ಮೇಲೆ ಎಲ್ಲಿಂದಲೋ ಕಾಡಿ ಬೇಡಿ ತಂದ ಅಡಿಕೆ ಮರದ ಸೋಗೆ ಹಾಸಿ ಕಟ್ಟಿದ ಮನೆಯದು. ಅಪ್ಪ ಮನೆಯಿಂದ ದೂರವೇ ಇರುತ್ತಿದ್ದರು. ಅಮ್ಮ ಸೊಪ್ಪು ಸೌದೆ ತರಲು ಕಾಡಿನೊಳಕ್ಕೆ ಹೋಗುವಾಗ ಈತನನ್ನು ಮನೆಯೊಳಕ್ಕೆ ಇರಲು ಹೇಳಿ ಹೊರಗಿನಿಂದ ಬಾಗಿಲು ಮುಚ್ಚುತ್ತಿದ್ದರು. ಆ ಕತ್ತಲು ಕೋಣೆಯೊಳಗೆ ಆತ ಏಕಾಂಗಿಯೇನೂ ಅಲ್ಲ.

ಮನೆಯೆ ಒಡೆದ ಗೋಡೆಯ ತುಂಬಾ ವಾಸಮಾಡುತ್ತಿದ್ದ ಇಲಿಗಳು ಆತನ ಅಮ್ಮ ಬಾಗಿಲು ಮುಚ್ಚಿದ ತಕ್ಷಣ ಕ್ರಿಯಾಶೀಲವಾಗುತ್ತಿದ್ದವು. ಗೋಡೆಯ ಸಂದುಗೊಂದುಗಳಿಂದ ಸರಕ್ಕನೆ ಇಳಿದು ನೆಲದ ಮೇಲೆ ಓಡಾಡುವ ಚಿಕ್ಕ ದೊಡ್ಡ ಇಲಿಗಳನ್ನು ಕಂಡು ಅವನು ದಿಗಿಲಿನ ಜೊತೆಗೆ ಖುಷಿಗೊಳ್ಳುತ್ತಿದ್ದ. ಅವುಗಳನ್ನು ಮುಟ್ಟಲು ಪ್ರಯತ್ನಿಸುತ್ತಿದ್ದ. ಅವುಗಳ ಹಿಂದೆ ಓಡುತ್ತಿದ್ದ. ಕೈಗೆ ಸಿಗದ ಅವುಗಳ ಚುರುಕುತನಕ್ಕೆ ಅಸೂಯೆ ಪಡುತ್ತಿದ್ದ. ಜೊತೆಗೆ ಅನೇಕ ಬಾರಿ ಇಲಿಗಳೊಡನೆ ಮಾತಾಡಲೂ ಪ್ರಯತ್ನಿಸಿದ್ದುಂಟು. ಇಲಿಗಳು ಆತನನ್ನು ಎಂದೂ ಗಂಭೀರವಾಗಿ ಪರಿಗಣಿಸಲೇ ಇಲ್ಲ.

ಅವನಿಗೆ ಪ್ರಿಯವಾಗಿದ್ದ ಇಲಿಗಳ ಸಹವಾಸ ಭಯಾನಕವಾಗುತ್ತಿದ್ದುದು ಅವುಗಳನ್ನು ಹಿಡಿಯಲು ಹಾವುಗಳು ಬರುತ್ತಿದ್ದಾಗ. ಮನೆಯ ಮಣ್ಣಿನ ಗೋಡೆ ಒರಟಾಗಿದ್ದುದು ಮಾತ್ರವಲ್ಲ ಅದರ ತುಂಬಾ ಬಿರುಕುಗಳಿದ್ದುದರಿಂದ ಹಾವುಗಳು ಸುಲಭವಾಗಿ ಅದರ ಮೂಲಕ ಮನೆಯ ಮಾಡನ್ನೇರುತ್ತಿದ್ದುವು. ಹಾವುಗಳಲ್ಲಿ ಕೇರೆ ಹಾವು ಎಂಬ ಪ್ರಭೇದವೊಂದಿದ್ದು ಅವುಗಳಿಗೆ ಇಲಿ ಅಂದರೆ ಪ್ರಾಣ. ಇಲಿಗಳನ್ನು ಕಂಡೊಡನೆ ಅವುಗಳನ್ನು ವೇಗವಾಗಿ ಅಟ್ಟಿಸಿಕೊಂಡು ಹೋಗಿ, ಹಿಡಿದು ನುಂಗಿ ಬಿಡುವ ಕೇರೆ ಹಾವುಗಳು ಮನುಷ್ಯರ ಮಟ್ಟಿಗೆ ನಿರಪಯಕಾರಿ. ಅಮ್ಮ ಮನೆಯೊಳಕ್ಕೆ ಇವನನ್ನು ಬಿಟ್ಟು ಹೋಗುವಾಗ ಎಷ್ಟೋ ಬಾರಿ ಈ ಕೇರೆ ಹಾವುಗಳು ಮಣ್ಣಿನ ಗೋಡೆಯನ್ನೇರಿ ಮೆಲ್ಲನೆ ಮನೆಯೊಳಕ್ಕೆ ಇಣುಕುತ್ತಿದ್ದವು. ಹಾವುಗಳ ಆಗಮನದ ಸೂಚನೆ ದೊರೆತ ಇಲಿಗಳು ಅಡ್ಡಾದಿಡ್ಡಿಯಾಗಿ ಓಡುವಾಗ ಈತನಿಗೂ ಅಪಾಯದ ಅರಿವುಂಟಾಗುತ್ತಿತ್ತು. ಒಮ್ಮೊಮ್ಮೆ ಈ ಕೇರೆ ಹಾವುಗಳು ಆಯತಪ್ಪಿ ಮಾಡಿನಿಂದ ಧೊಪ್ಪನೆ ನೆಲದ ಮೇಲೆ ಬಿದ್ದು ಬಿಡುತ್ತಿದ್ದುವು. ಬಿದ್ದು ಸ್ವಲ್ಪ ಹೊತ್ತು ಸುಮ್ಮನಿರುತ್ತಿದ್ದುವು. ಹೊರಗೆ ಹೋಗಲಾಗದ ಆತ ಮುದುರಿ ಕುಳಿತುಕೊಂಡು, ಹಾವನ್ನು ಹೊರಗೆ ಹೋಗಲು ಬೇಡಿಕೊಳ್ಳುತ್ತಿದ್ದ. ಜಾರಿಬಿದ್ದ ಕಾರಣ ನಾಚಿಕೊಂಡಿತೋ ಎಂಬಂತೆ ಸ್ವಲ್ಪ ಹೊತ್ತಿನ ಆನಂತರ ಕೇರೆ ಹಾವು ಮೆಲ್ಲಗೆ ಹರಿದು, ಗೋಡೆಯ ಬಿರುಕಿನ ಮೂಲಕ ಹೊರಗೆ ಹೋಗುತ್ತಿತ್ತು. ಹಾವಿನ ಬಾಲ ಗೋಡೆಯ ಬಿರುಕಿನಿಂದ ಮಾಯವಾಗುತ್ತಲೇ ಆತ ಇಲಿಗಳನ್ನು ಮತ್ತೆ ಹೊರಗೆ ಕರೆಯುತ್ತಿದ್ದ. ಬಂಟಮಲೆಯಲ್ಲಿ ಕಾಳಿಂಗ ಸರ್ಪ, ನಾಗರ ಹಾವು ಸೇರಿದಂತೆ ಅನೇಕ ಬಗೆಯ ಭಯಾನಕ ವಿಷದ ಹಾವುಗಳಿದ್ದುವು ಆದರೆ ಅವು ಮನೆಯ ಅಂಗಳದವರೆಗೆ ಬರುತ್ತಿದ್ದರೂ ಮನೆಯೊಳಕ್ಕೆ ಬರುತ್ತಿರಲಿಲ್ಲ, ಬರುತ್ತಿದ್ದರೆ ಇವನ್ನೆಲ್ಲಾ ಹೇಳಲು ಅವನು ನಮ್ಮೊಡನೆ ಇರುತ್ತಿರಲಿಲ್ಲ.

ಆತ ಸ್ವಲ್ಪ ದೊಡ್ಡದಾದಾಗ ಮನೆಯೊಳಕ್ಕೆ ಇರಲು ಒಪ್ಪದೆ ಅಮ್ಮನೊಡನೆ ಸೊಪ್ಪು ಸೌದೆ ತರಲು ಕಾಡಿನೊಳಕ್ಕೆ ಬರುವುದಾಗಿ ಹಠ ಹಿಡಿಯತೊಡಗಿದ್ದ.

ನಿಗೂಢವಾದ ಕಾಡು ಆತನಿಗೊಂದು ಕುತೂಹಲ. ಮಳೆಗಾಲದಲ್ಲಿ ಬೀಸುವ ಭಯಾನಕ ಗಾಳಿಗೆ ನಡುರಾತ್ರಿಯಲ್ಲಿ ಧರೆಗೊರಗುವ ಮರಗಳ ಸದ್ದಿಗೆ ಮನೆಯೊಳಗೆ ಅಮ್ಮನ ಮಡಿಲಲ್ಲಿ ಬೆಚ್ಚಗೆ ಮಲಗಿದ್ದ ಅವನು ಬೆಚ್ಚಿ ಬೀಳುತ್ತಿದ್ದ. ಆ ಮರಗಳು ನೆಲಕ್ಕೊರಗುವಾಗ ತನ್ನೊಡನೆ ಇತರ ಮರಗಳನ್ನೂ ನೆಲಕ್ಕೊರಗಿಸುತ್ತವೆ. ಮರಗಳನ್ನು ಗಾಢವಾಗಿ ಅಪ್ಪಿಕೊಂಡಿರುವ ಬಳ್ಳಿಗಳಿಗೂ ಉಳಿಗಾಲವಿಲ್ಲ. ಒಂದು ಮರವನ್ನು ಅಪ್ಪಿಕೊಂಡು ಮೇಲೇರುವ ಬೃಹತ್ ಬಳ್ಳಿಗಳು ಮೇಲೇರುತ್ತಲೇ ಇನ್ನೊಂದು ಮರದ ಕಡೆಗೆ ಚಾಚಿಕೊಂಡು ವಿಸ್ತಾರವಾಗಿ ಬೆಳೆಯುತ್ತವೆ. ಹೀಗಾಗಿ ಒಂದು ಮರ ಬಿದ್ದರೆ ಈ ಬಳ್ಳಿಗಳು ಇನ್ನೊಂದನ್ನು ಬರಸೆಳೆದು ಬೀಳಿಸುತ್ತವೆ. ಹೀಗೆ ಬೀಳುವಾಗ ಮರದ ಮೇಲೆ ಆಶ್ರಯ ಪಡೆದಿದ್ದ ಕೆಲವು ಹಕ್ಕಿಗಳು ಮತ್ತು ಪ್ರಾಣಿಗಳು ನಡುರಾತ್ರಿಯಲ್ಲಿ ಕಿರುಚಿಕೊಂಡು ಅತ್ಯಂತ ಭಯಾನಕ ವಾತಾವರಣವೊಂದು ನಿರ್ಮಾಣವಾಗುತ್ತಿತ್ತು. ಆದರೂ ಸಾಮಾನ್ಯವಾಗಿ ಮಳೆಗಾಲದಲ್ಲಿ ಬೀಳುವ ಈ ಮರಗಳನ್ನು ನೋಡಲು ಕಾಡಿನೊಳಕ್ಕೆ ಹೋಗಬೇಕೆಂದು ಆಸೆ ಮಾತ್ರ ಅವನಲ್ಲಿ ಮುರುಟುತ್ತಿರಲಿಲ್ಲ.

ಕೊನೆಗೆ ಒಂದು ಬೇಸಗೆಯಲ್ಲಿ ಆವನ ಹಠಕ್ಕೆ ಒಪ್ಪಿ ಕಾಡಿಗೆ ಕರೆದೊಯ್ಯಲು ಅತನ ಅಮ್ಮ ಒಪ್ಪಿದ್ದರು.

ಕೈಯಲ್ಲಿ ಒಂದು ಪುಟ್ಟ ಕತ್ತಿ ಹಿಡಿದು ಅವನು ಅಮ್ಮನನ್ನು ಹಿಂಬಾಲಿಸಿದ.

ಅಮ್ಮ ನೇರವಾಗಿ ಬಿದಿರು ಹಿಂಡಿಲುಗಳಿರುವ ಸಮತಟ್ಟಾದ ಪ್ರದೇಶವೊಂದಕ್ಕೆ ಹೋಗಿ ಬಿದಿರಕ್ಕಿಯನ್ನು ಹೆಕ್ಕಲು ಆರಂಭಿಸಿದರು. ಈ ಬಿದಿರಕ್ಕಿಗೆ ರಾಜನಕ್ಕಿ ಎಂಬ ಹೆಸರೂ ಇತ್ತು. ಸಣ್ಣ ಆಕಾರದ ಈ ಬಿದಿರಿನ ಭತ್ತವನ್ನು ಮನೆಗೆ ತಂದು ಅದರ ಸಿಪ್ಪೆಯನ್ನು ತೆಗೆದು ಗಂಜಿ ಮಾಡಿ ಉಣ್ಣುವುದು ಅವರ ನಿತ್ಯದ ಕೆಲಸ. ತರಗೆಲೆಗಳ ನಡುವೆ ಅಡಗಿಹೋಗುವ ಆ ಅತಿ ಸಣ್ಣ ಭತ್ತದಂತಿರುವ ಬಿದಿರಕ್ಕಿಯನ್ನು ಹೆಕ್ಕಲು ತುಂಬಾ ತಾಳ್ಮೆ ಬೇಕು. ಅವನಿಗೋ ಕಾಡಿನೊಳಕ್ಕೆ ಮತ್ತಷ್ಟು ನುಗ್ಗುವ ತವಕ. ಮೆಲ್ಲನೆ ಅಮ್ಮನ ಕಣ್ಣು ತಪ್ಪಿಸಿ ಆಚೀಚೆ ನಡೆದು, ಕಾಡಿನೊಳಕ್ಕೆ ನೀಳವಾಗಿ, ಅನಾಥವಾಗಿ, ಎಲ್ಲವನ್ನು ಕಡಿದುಕೊಂಡು ಬಿದ್ದಿರುವ ಬೃಹತ್ ಮರಗಳ ಬಳಿ ಸುಳಿದಾಡುತ್ತಿದ್ದ. ಆ ಬಿದ್ದ ಮರಗಳ ಒಂದು ಬದಿಯಲ್ಲಿ ನಿಂತರೆ ಮತ್ತೊಂದು ಬದಿ ಕಾಣುತ್ತಿರಲಿಲ್ಲ. ಬಿದ್ದ ಮರದ ಬೇರುಗಳು ಅಕರಾಳ ವಿಕರಾಳವಾಗಿ ಆಕಾಶದೆತ್ತರಕ್ಕೆ ಚಾಚಿಕೊಂಡಿರುತ್ತಿದ್ದುವು. ಮಳೆಗಾಲದಲ್ಲಿ ಬಿದ್ದ ಈ ಮರಗಳ ತೊಗಟೆಯು ಬಂಟಮಲೆಯ ತೇವಾಂಶದಲ್ಲಿ ನಿಧಾನವಾಗಿ ಕರಗುತ್ತಿದ್ದವು. ಹಾಗೆ ಕರಗುತ್ತಿದ್ದಂತೆ ತೊಗಟೆಯ ಒಳಗಿನಿಂದ ಬಗೆ ಬಗೆಯ ಹುಳುಗಳು ಹೊರಬರುತ್ತಿದ್ದವು. ಹಲವು ಬಣ್ಣಗಳ, ವಿವಿಧ ಆಕಾರಗಳ ಆ ಹುಳುಗಳನ್ನು ನೋಡಿ ಆರಂಭದಲ್ಲಿ ಅವನು ಹೆದರಿದನಾದರೂ ನಿಧಾನವಾಗಿ ಅವುಗಳೊಡನೆಯೂ ಗೆಳೆತನ ಬೆಳೆಸಿದ. ಪ್ರೀತಿಯಿಂದ ಕೈಯಲ್ಲಿ ಸಣ್ಣ ಕೋಲು ಹಿಡಿದು ಆ ಹುಳುಗಳನ್ನು ಕೆಣಕುತ್ತಿದ್ದ. ಆಗೆಲ್ಲ ತಮ್ಮ ಪುಟ್ಟ ಹೆಡೆಬಿಚ್ಚಿ ಪ್ರತಿಭಟನೆ ತೋರುವ ಅವು ತೆವಳುತ್ತಾ ಮತ್ತೆ ಮರೆಗೆ ಸರಿಯುತ್ತಿದ್ದುವು. ಆ ಹುಳುಗಳಿಗೆ ಆತ ಬಗೆ ಬಗೆಯ ಹೆಸರಿಟ್ಟ. ಆ ಹೆಸರಿಂದ ಅವುಗಳನ್ನು ಕರೆಯುವಾಗ ಅವು ತಲೆಯಾಡಿಸುತ್ತಿರುವಂತೆ ಆತನಿಗಂತೂ ಅನ್ನಿಸುತ್ತಿತ್ತು. ಹುಳುಗಳ ಜೊತೆಗಣ ಆತನ ಸಂಭಾಷಣೆಗಳಿಂದ ಅವನ ಅಮ್ಮನಿಗೆ ಸಮಾಧಾನವಾಗುತ್ತಿತ್ತು. ಯಾಕೆಂzರೆ ಬಿದಿರಕ್ಕಿ ಹೆಕ್ಕುತ್ತಿದ್ದ ಆಕಗೆ ಪಕ್ಕದೆಲ್ಲೆಲ್ಲೋ ಮಗ ಕ್ಷೇಮವಾಗಿರುವ ಬಗ್ಗೆ ಸೂಚನೆ ದೊರೆಯುತ್ತಿತ್ತು.

ಇದೆಲ್ಲ ಕಳೆದು ಅರ್ಧ ಶತಮಾನ ಕಳೆದಿದೆ. ಆ ಹುಡುಗ ಈಗ ಅಮೇರಿಕಾ ಸಂಸ್ಥೆಗೆ ಹೊದಿಕೊಳ್ಳಬೇಕಾಗಿದೆ.

ಅವನು ಸೋಲೊಪ್ಪಿಕೊಳ್ಳಲು ಸಿದ್ದನಿದ್ದವನಲ್ಲ.

ಹಿಂದೊಮ್ಮೆ ಉಡುಪಿಯಲ್ಲಿ ನಡೆದಿದ್ದ ಅಂತರಾಷ್ಟ್ರೀಯ ಜಾನಪದ ಸೆಮಿನಾರಿನಲ್ಲಿ ಯು ಕ್ಯಾನ್ ಅಂಡರ್ ಸ್ಟಾಂಡ್ ಮೈ ಕನ್ನಡ ಬೆಟರ್ ದೇನ್ ಮ್ಯ್ ಇಂಗ್ಲಿಷ್ ಎನ್ನುತ್ತಲೇ, ಎದುರಿಗೆ ಕಣ್ ಕಣ್ ಬಿಟ್ಟು ನೋಡುತ್ತಿದ್ದ ಪರದೇಶೀ ವಿದ್ವಾಂಸರನ್ನೆಲ್ಲ ಕಂಗಾಲುಗೊಳಿಸುವಷ್ಟು ವಿದ್ವತ್ ಮೆರೆದವನೀತ. ಈಸಬೇಕು ಇದ್ದು ಜೈಸಬೇಕು ಎಂಬ ದಾಸರ ವಾಣಿಯನ್ನು ನೂರಕ್ಕೆ ನೂರು ಪಾಲಿಸಿದವನೀತ; ಪಾಲಿಸಿದ.

ಮತ್ತ್ತೊಮ್ಮೆ ಮಗುವಾಗಿ ೪೩ ನೇ ವಯಸ್ಸಿನಲ್ಲಿ ಎಲ್ಲವನ್ನೂ ಕಲಿಯತೊಡಗಿದ.

ಕಂಪ್ಯೂಟರ್, ಇಂಗ್ಲಿಷ್, ಹಿಂದಿ, ಕೆಟಲಾಗಿಂಗ್, ಡಾಟಾ ಬೇಸ್, ಇ-ಮೇಲ್, ಒರೇಕಲ್, ಪವರ್ ಪಾಯಿಂಟ್, ಪಾಶ್ಚಾತ್ಯ ಸಂಸ್ಥೆಯ ಕೆಲಸದ ಸಂಸ್ಕೃತಿ ಇತ್ಯಾದಿ. ಅದೇನೂ ಬಂಟಮಲೆಯಲ್ಲಿ ಹುಳುಗಳೊಡನೆ ಮಾತಾಡಿದಂತಲ್ಲ. ತುಂಬಾ ಒದ್ದಾಡಬೇಕಾಗಿತ್ತು. ಸಹೋದ್ಯೋಗಿಗಳಿಗಿಂತ ಇವನು ಇಮ್ಮಡಿ ಶ್ರಮ ಹಾಕಲೇ ಬೇಕಾಗಿತ್ತು. ಕೆಲವು ಬಾರಿ ಸೋಲಿನ ಅವಮಾನವನ್ನೂ ನುಂಗಿಕೊಳ್ಳಬೇಕಾಯಿತು. ಒಂದು ಸಣ್ಣ ದೀಪದ ಬೆಳಕನ್ನು ಅಡಗಿಸುವಷ್ಟು ಕತ್ತಲು ಈ ಲೋಕದಲ್ಲಿ ಇಲ್ಲ ಎಂದು ದೃಢವಾಗಿ ನಂಬಿದವನೀತ. ಸಿಡಿಲು ಹೊಡೆದೊಡೆ ಹಿಡಿದ ಕೊಡೆ ಕಾವುದೇ ಎಂಬ ಹರಿಶ್ಚಂದ್ರ ಕಾವ್ಯದ ಮಾತನ್ನು ಸಾರಾಸಗಟಾಗಿ ನಿರಾಕರಿಸುವ ಆಶಾವಾದಿ. ಹತಾಶೆಯನ್ನು ಮೀರುವ ಕಲೆಯನ್ನು ಕಷ್ಟ ಪಟ್ಟು ರೂಢಿಸಿಕೊಂಡ. ಹಗಲೂ ರಾತ್ರಿ ಅಧ್ಯಯನ ನಡೆಸಿದ.

ಅವನ ಕಲಿಕೆಯ ಹಠವನ್ನು ತಡೆಯುವ ಶಕ್ತಿ ಅಲ್ಲಿ ಯಾರಿಗೂ ಇರಲಿಲ್ಲ. ಅವನ ಪ್ರಾಮಾಣಿಕ ನಿಷ್ಠೆ ಮತ್ತು ಬದ್ಧತೆಯನ್ನು ಗುರುತಿದ ಆ ಅಮೇರಿಕಾದ ಸಂಸ್ಥೆ, ನಾಲ್ಕೇ ವರ್ಷಗಳಲ್ಲಿ ಇವನನ್ನು ಸಂಸ್ಥೆಯ ನಿರ್ದೆಶಕನಾಗಿ ನೇಮಿಸಿ ಮನ್ನಣೆ ನೀಡಿತು. ಇವನ ಜವಾಬ್ದಾರಿ ಏರಿತು. ಹಾಗಾಗಿ ಸಕ್ಕರೆಯ ಮಟ್ಟ ೫೦೦ ರಹತ್ತಿರ ತಲುಪಿತು.

ಆರೋಗ್ಯವಂತ ದೇಹದೊಳಗೆ ಅಂತರ್ಗತವಾಗಿರುವ ರೋಗ ನಿರೋಧಕ ಶಕ್ತಿ ಇವನೊಳಗೆ ಮಾಯವಾಗತೊಡಗಿತು.

ದೆಹಲಿಯ ಮೈಕೊರೆಯುವ ಛಳಿಯನ್ನು ತಡೆದುಕೊಳ್ಳುವುದು ಸುಲಭವಲ್ಲ. ಸೆಖೆಗೆ ಮೂಗಿನಿಂದ ರಕ್ತ ಒಸರುತ್ತಿತ್ತು. ಯಾರೋ ಹೇಳಿದರು ಅಂತ ಆಯುರ್ವೇದದ ಮೊರೆ ಹೋದ. ಒಂದಕ್ಕೆರಡಾಯಿತು. ಕಹಿ ಕಷಾಯ ಕುಡಿದಾಗ ಸಕ್ಕರೆಯ ಮಟ್ಟವೇನೋ ಕಡಿಮೆಯಾಗುತ್ತಿತ್ತು. ಆದರೆ ನಿರಂತರ ಕಹಿ ಕುಡಿದು ಪರಿಣಮವಾಗಿ ಲಿವರ್ ದುರ್ಬಲವಾಯಿತು. ಇದರ ಮುಂದಿನ ಹಂತವಾಗಿ ಜಾಂಡಿಸ್ ಕಾಣಿಸಿಕೊಂಡಿತು, ಜೊತೆಜೊತೆಗೆ ಕಾಲಲ್ಲಿ ಟಿ.ಬಿ. ಕಾಣಿಸಿಕೊಂಡಿತು. ಸಾವು ಹತ್ತಿರದಲ್ಲಿ ಎಲ್ಲೋ ಸುಳಿದಾಡುತ್ತಿದ್ದಂತೆ ಅನ್ನಿಸತೊಡಗಿತು. ನಿರ್ಲಕ್ಷಿಸಿದರೆ ಹೆಚ್ಚು ಕಾಲ ಬದುಕುವುದಿಲ್ಲ ಅಂತ ಖಚಿತವಾಗತೊಡಗಿತು.

೨೦೦೪ರ ಜನವರಿ ತಿಂಗಳಲ್ಲಿ ಅವನು ದೆಹಲಿಯ ಪ್ರಖ್ಯಾತವಾದ ಅಪೋಲೋ ಆಸ್ಪತ್ರೆಯ ಅತ್ಯಾಧುನಿಕ ಎಂಡೋಕ್ರಿನೋಲೊಜಿಗೆ ಹೋದ. ಈ ವಿಭಾಗದ ಮುಖ್ಯಸ್ಥರು ಡಾ.ಅಂಬರೀಶ್ ಮಿತ್ತಲ್. ಒಳ್ಳೆಯ ಬರೆಹಗಾರು ಕೂಡ.

ಡಾಕ್ಟರರ ಷಾಪಿಗೆ ಹೋದವರಿಗೆಲ್ಲ ಒಂದು ಅನುಭವವಾಗಿರುತ್ತದೆ; ಒಂದಲ್ಲ ಎರಡು ಮೂರು ಬಗೆಯದು. ಯಾವುದೇ ಡಾಕ್ಟರರ ಷಾಪಿಗೆ ಹೋದರೆ, ಡಾಕ್ಟರು ನಾಡಿ ಹಿಡಿಯುವ ಮೊದಲು ಪೆನ್ನು ಹಿಡಿಯುತ್ತಾರೆ. ಯಾವುದಾದರೊಂದು ಟೆಸ್ಟ್‌ಗೆಚೀಟಿ ಕೊಡುತ್ತಾರೆ.ವಾರದ ಹಿಂದೆ ಮತ್ತೊಬ್ಬ ಡಾಕ್ಟರು ಅದೇ ಪರೀಕ್ಷೆ ಮಾಡಿಸಿ ಬರೆದು ಕೊಟ್ಟಿರುವ ರಿಪೋರ್ಟ್ ಕಣ್ಣೆದುರು ಹಿಡಿದರೂ ಕಣ್ಣು ಮುಚ್ಚಿಕೊಳ್ಳುತ್ತಾರೆ. ಉಪಾಯವಿಲ್ಲದೆ ಹೊಸ ಲ್ಯಾಬ್‌ನಲ್ಲಿ ಮತ್ತೊಂದು ಬಾರಿ ಟೆಸ್ಟ್ ಮಾಡಿಸಿ ರಿಪೋರ್ಟ್ ತಂದುತೋರಿಸುತ್ತಿರುವಾಗ, ಅಲ್ಲೊಂದು ಕೋಟ್ಯಾಧಿಪತಿಸೀನ್ ಕ್ರಿಯೇಟ್ ಆಗುತ್ತದೆ. ತಾನು ನೀಡಿದ ಉತ್ತರ ಸರಿಯೇ ತಪ್ಪೇ ಎಂದು ಕುತೂಹಲದಿಂದ ಕಾಯುವವನನ್ನು ಸತಾಯಿಸುವವ ನಿರೂಪಕನಂತೆ, ಡಾಕ್ಟರು ಎದುರು ಕೂತ ರೋಗಿ ಮತ್ತು ರೋಗಿಯ ಕಡೆಯವರನ್ನು ಒಮ್ಮೆ ಅನುಕಂಪದಿಂದ ದಿಟ್ಟಿಸಿ, ರಿಪೋರ್ಟಿನತ್ತ ಕಣ್ಣುಹಾಯಿಸುತ್ತಾರೆ. ಜೋರಾಗಿ ಉಸಿರೆಳೆದುಕೊಂಡು ಒಮ್ಮೆ ಹುಬ್ಬು ಏರಿಸುತ್ತಾರೆ. ಮತ್ತೊಮ್ಮೆ ತುಟಿ ಕೊಂಕಿಸಿ ಏನೋ ಅನಾಹುತದ ಮುನ್ಸೂಚನೆ ಕಾಣುತ್ತಿರುವವರಂತೆ ಮುಖ ಮುದುಡಿಸುತ್ತಾರೆ.ಬಳಿಕ ರಿಪೋರ್ಟನ್ನು ಬದಿಗೆ ಸರಿಸಿ,ತನ್ನ ಮಾತಿಗಾಗಿ ಕಾತರಿಸಿ ಕುಳಿತವರತ್ತ ನೋಡಿ, ನೋ ಪ್ರಾಬ್ಲೆಮ್, ಎಲ್ಲ ನಾರ್ಮಲ್ ಇದೆ ಎಂದುಬಿಡುತ್ತಾರೆ. ಅಗ, ಆದಾಗಲೇ ಎರಡೆರಡು ಬಾರಿ ದುಬಾರಿ ಬೆಲೆ ತೆತ್ತು ಪರೀಕ್ಷೆ ಮಾಡಿಸಿಕೊಂಡು ಬಂದವನಿಗೆ ತಾನು ಕೇಳುತ್ತಿರುವುದು ಸಂತಸದ ಸಂಗತಿಯೇ ಅಥವಾ ದು:ಖದಸಂಗತಿಯೇ ಎಂಬುದನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲ. ಸಂತಸದ ಸಂಗತಿಯಾಗಿದ್ದರೆ, ಪರೀಕ್ಷೆಗೆಂದು ಕೊಟ್ಟ ದುಡ್ಡು ದಂಡವೆಂದು ಭಾಸವಾಗುತ್ತದೆ. ಖರ್ಚು ಮಾಡಿದ ದುಡ್ಡು ಸದುಪಯಾಗಿದೆಯೆಂಬ ಸುಖ ಅನುಭವಿಸಬೇಕಾಗಿದ್ದರೆ ಡಾಕ್ಟರಿಂದ ಎಲ್ಲವೂ ಅಬ್‌ನಾರ್ಮಲ್ ಎಂಬ ಮತು ಕೇಳಬೇಕಾಗುತ್ತದೆ. ಆದರೆ, ನಮ್ಮ ಬಿಳಿಮಲೆಗೆ ಇದು ಯಾವುದೂ ಆಗಲಿಲ್ಲ. ಪರೀಕ್ಷೆಗೆಂದು ಖರ್ಚು ಮಾಡಿದ್ದ ದುಡ್ಡು ವ್ಯರ್ಥವಾಗಲಿಲ್ಲ ಎಂಬ ತೃಪ್ತಿ ಮತ್ತು ಸುಖ ಎರಡನ್ನೂ ಬಹಳ ವರ್ಷಗಳಿಂದಲೇ ಹಲವು ಬಾರಿ ಅನುಭವಿಸಿದ್ದ.

ಇವನ ದೇಹವನ್ನು ಬಗೆ ಬಗೆಯಾಗಿ ಪರೀಕ್ಷೆ ಮಾಡಿದ ಮಿತ್ತಲ್ ಸಾಹೇಬರು,ಬಹುಕಾಲದ ಮಧುಮೇಹದ ಪರಿಣಾಮ ಹಾಗೂ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ ಕಾರಣದಿಂದಈ ಕ್ರಾಂತಿಕಾರಿಯನ್ನುಮೂರು ಇಂಗ್ಲಿಷ್ ರೋಗಗಳು- ಡಯಾಬೆಟಿಕ್ ರೆಟಿನೋಪತಿ, ಡಯಾಬೆಟಿಕ್ ನ್ಯೂರೋಪತಿ ಮತ್ತು ಡಯಾಬೆಟಿಕ್ ನೆಫ್ರೋಪತಿ -ಪ್ರೀತಿಸುತ್ತಿದ್ದು ಹಂತ ಹಂತವಾಗಿ ಕೊಲ್ಲುತ್ತಿದೆಯೆಂಬ ವರದಿ ನೀಡಿದರು. ಕೊನೆಗೊಂದು ಸಲಹೆಯನ್ನೂ ಕೊಟ್ಟಿದ್ದರು, ತ್ರಿಪತಿಗಳ ಕರುಣಿಗೆ ಪಾತ್ರನಾಗಿರುವವನನ್ನುತಿರುಪತಿ ತಿಮ್ಮಪ್ಪನಿಂದಲೂ ಕಾಪಾಡುವುದು ಸಾಧ್ಯವಿಲ್ಲ. ಆದರೆ ನಾನು ಹೇಳಿದಂತೆ ಕೇಳಿದರೆ ಸ್ವಲ್ಪ ಹೆಚ್ಚು ದಿನ ಬದುಕಬಹುದು.

ಡಾಕ್ಟರು ಹಾಗೆಲ್ಲ ಹೇಳಿದಾಗ ಅವನಿಗೆ ನೆನಪಾದದ್ದು, ಹಿಂದೊಮ್ಮೆ ಪಾಠ ಮಾಡುತ್ತಿದ್ದ ಆವ ಕಾಲವನಾದೊಡೆ ಮೀರಿ ಬಪ್ಪುದು ಸಾವ ಕಾಲ ಮೀರಬಹುದೇ? ಎನ್ನುವ ಮೋಹನ ತರಂಗಿಣಿಯ ಮಾತು.ಆ ಮಾತನ್ನು ಸುಳ್ಳು ಮಾಡುವ ಹಟ ಇವನಿಗೂ ಇರಲಿಲ್ಲ. ಹೇಳಿ ಕೇಳಿ ತಾನೊಬ್ಬ ಕ್ರಾಂತಿಕಾರಿ ಎಂದು ನಂಬಿದವನು.ಕ್ರಾಂತಿಕಾರಿಗಳು ಸಾವಿಗೆ ಹೆದರಬಾರದಲ್ಲ?

ಅದರೂ ಮರಣಕ್ಕೆ ಮದ್ದುಗಳಿಲ್ಲ ಎಂದಿದ್ದ ಸರ್ವಜ್ಞನನ್ನು ಸ್ವಲ್ಪ ಮರೆತು, ಅಂಬರೀಶ ಹೇಳಿದಂತೆ ತ್ರಿಪತಿಯ ಒಡೆಯ ಇನ್ಸುಲಿನ್‌ಗೆ ಶರಣಾದ.

ಶರಣೆನೆ ಮರಣವಿಲ್ಲ

ತನಗೆ ತಾನೇ ಸಮಾಧಾನ ಮಾಡಿಕೊಳ್ಳಲು ಕೆಲವು ಸಂಗತಿಗಳನ್ನು ಸಂಶೋಧನೆ ಮಾಡಿದ. ತನಗೆ ಅನ್ನ ನೀರು ಕೊಡುತ್ತಿರುವ ದೆಹಲಿಯ ಐದು ಜನರಲ್ಲಿ ಮೂವರು ಮಧುಮೇಹಿಗಳಾಗಿರುವುದರಿಂತ ಉತ್ತೇಜಿತನಾದ. ಹೋಟೆಲುಗಳಲ್ಲಿ ಚಹ ಕುಡಿಯುವಾಗ, ಊಟ ಮಾಡುವಾಗ ನಾಲ್ಕೂ ದಿಕ್ಕು ಕಿವಿಯಾಗತೊಡಗಿದ. ಸಕ್ಕರೆ ರಹಿತ ಚಹ ಬೇಡುವವರನ್ನು ಹತ್ತಿರದ ಬಂಧುಗಳಂತೆ ಆತ್ಮೀಯವಾಗಿ ದಿಟ್ಟಿಸತೊಡಗಿದ.ಐಸ್ ಕ್ರೀಮ್ ಪಾರ್ಲರ್‌ಗಳು ಸಾವಿನಂಗಡಿಗಳಂತೆ ಕಾಣಲಾರಂಭಿಸಿದವು. ಇವನಂಥವರಿಗಾಗಿಯೇ ಸುಗರ್‌ಲೆಸ್ ಸಿಹಿತಿನಿಸು ಮಾರುವ ಅಂಗಡಿಗಳಿದ್ದವು. ಡಯಾಬೆಟಿಕ್ ರೋಗಿಗಳಿಗಾಗಿಯೇ ಆಹಾರ ತಯಾರಿಸುವ ಅಂತರಾಷ್ಟ್ರೀಯ ಕಾರ್ಖಾನೆಗಳೂ ಇದ್ದವು. ಅಮೇರಿಕಾದ ಕೊಲಂಬಿಯಾ ವಿಶ್ವವಿದ್ಯಾಲಯ, ನ್ಯೂಯೋರ್ಕ ವಿಶ್ವವಿದ್ಯಾಲಯ, ಟೆಕ್ಸಾಸ್ ವಿಶ್ವವಿದ್ಯಾಲಯ(ಆಸ್ಟಿನ್) ಮತ್ತು ಹವಾಯಿ ವಿಶ್ವವಿದ್ಯಾಲಯಗಳಲ್ಲಿ ವಿಶೇಷ ಉಪನ್ಯಾಸಕ್ಕಾಗಿ ಹೋಗಬೇಕಾದ ಸಂದರ್ಭಗಳಲ್ಲಿ ತಾನೊಬ್ಬ ಮಧುಮೇಹಿ ಎಂಬುದನ್ನು ವಿಮಾನದ ಪರಿಚಾರಿಕೆಗೆ ಮೊದಲೇ ತಿಳಿಸಿಕಡಿಮೆ ಕೊಬ್ಬಿನ, ಸಕ್ಕರೆ ರಹಿತ ಊಟವನ್ನು ಪಡೆದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡ.

ಇನ್ಸುಲಿನ್ ಸಹವಾಸ ಸುಲಭವಲ್ಲ.

ಸಿಡಿಲು ಹೊಡೆಯುತ್ತಿರುವಾಗ ಕೊಡೆ ಹಿಡಿದುಕೊಂಡು ನೂಲ ಮೇಲೆ ನಡೆದಂತೆ ಅದು.

ದೇಹದಲ್ಲಿನ ಸಕ್ಕರೆಯ ಅಂಶವನ್ನು ಪರಿಗಣಿಸಿಕೊಂಡು ಎಷ್ಟು ಬೇಕೋ ಅಷ್ಟು ಇನ್ಸುಲಿನ್ ತೆಗೆದುಕೊಳ್ಳಬೇಕು.

ಸ್ವಲ್ಪ ಜಾಸ್ತಿ ಆದರೆ ಸಕ್ಕರೆಯ ಪ್ರಮಾಣ ಕಡಿಮೆ ಆಗಿ,ತಲೆತಿರುಗಿಬೀಳಬಹುದು.

ಹಾಗಾದಾಗ ದೇಹದಲ್ಲಿರುವ ರಕ್ತ ಕಣಗಳು ಗಮನಾರ್ಹವಾಗಿ ಕಡಿಮೆಯಾಗಿಬಿಡಬಹುದು.

ಅಗ ಹಿಮೋಗ್ಲೋಬಿನ್ ಮಟ್ಟವೂ ಕಡಿಮೆಯಾಗುತ್ತದೆ.

ಹಾಗಂತ ಕಡಿಮೆ ಇನ್ಸುಲಿನ್ ತಗೊಂಡರೆ ಸಕ್ಕರೆಯ ಅಂಶ ಹೆಚ್ಚಾಗಬಹುದು.

ಆದ ಕಾರಣ ಅಳೆದು ಯೋಚಿಸಿ ಇನ್ಸುಲೆನ್ ತೆಗೆದುಕೊಳ್ಳಬೇಕು.

ಅದು ಅಲಗಿನಂತೆ ಹೋಗುತ್ತಲೂ ಕೊಯ್ಯುವುದು, ಬರುತ್ತಲೂ ಕೊಯ್ಯುವುದು

ಬಿಟ್ಟು ಬಿಡದ ಹುಟ್ಟು ಗುಣ:

ಹೀಗೇ ಸ್ವಲ್ಪ ತಡವಾಗಿಯಾದರೂ ಆರೋಗ್ಯದ ಬಗ್ಗೆ ಯೋಚಿಸತೊಡಗುವ ಸಂದರ್ಭದಲ್ಲಿಯೇ ದೆಹಲಿ ಕರ್ನಾಟಕ ಸಂಘದ ಚುನಾವಣೆ ಘೋಷಿತವಾಯಿತು.ಗೆಳೆಯರನೇಕರು ಅಧ್ಯಕ್ಷ ಸ್ಥಾನಕ್ಕೆ ಸ್ಫರ್ಧಿಸುವಂತೆ ಒತ್ತಾಯಿಸಿದರು. ಕನ್ನಡ ವಿಶ್ವವಿದ್ಯಾಲಯದ ಕೆಟ್ಟ ಅನುಭವದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಇಂಥ ಕಡೆ ಸಿಕ್ಕಿಕೊಳ್ಳಬೇಕೆಂಬ ಮನಸಿರಲಿಲ್ಲ. ಅದರೂ ಹುಟ್ಟು ಗುಣ ಕೈ ಕೊಟ್ಟಿತು.

ಗೆಳೆಯರ ಒತ್ತಾಯಕ್ಕೆ ಮಣಿದು, ರಾಜಧಾನಿಯಲ್ಲಿ ಕರ್ನಾಟಕದ ಧ್ವನಿಯನ್ನು ಗಟ್ಟಿಗೊಳಿಸಲು ಸಾಧ್ಯವಾದರೆ, ಕನ್ನಡದ ಋಣ ತೀರಿಸಲೊಂದು ಅವಕಾಶ ಅಂತ ಭಾವಿಸಿಕೊಂಡು ಚುನಾವಣಾ ಕಣಕ್ಕಿಳಿದ.ಗೆದ್ದ.ಆದರೆ ಈ ಜಯವು ಸಾಕಷ್ಟು ಸವಾಲುಗಳನ್ನು ಮುಂದೆ ತಂದಿರಿಸಿತ್ತು.ಚದುರಿ ಹೋಗಿದ್ದ ದೆಹಲಿ ಕನ್ನಡಿಗರನ್ನು ಒಂದೆಡೆಗೆ ತರಬೇಕಿತ್ತು, ಅಗಲೇ ಮೇಲೇಳುತ್ತಿದ್ದ ಹೊಸ ಕಟ್ಟಡದ ಕೆಲಸಗಳನ್ನು ಪೂರೈಸಲು ಹಣ ಸಂಗ್ರಹ ಆಗಬೇಕಿತ್ತು, ಮತ್ತು ರಾಜಧಾನಿಯಲ್ಲಿ ದುರ್ಬಲವಾಗಿರುವ ಕರ್ನಾಟಕದ ಧ್ವನಿಯನ್ನು ಕರ್ನಾಟಕ ಸಂಘದ ಮೂಲಕ ಬಲಗೊಳಿಸಲು ಕಾರ್ಯಕ್ರಮಗಳನ್ನು ಹಾಕಿಕೊಳ್ಳಬೇಕಾಗಿತ್ತು.ಕಾರ್ಯಕಾರೀ ಸಮಿತಿಯ ಸೂಕ್ತ ಮಾರ್ಗದರ್ಶನದಲ್ಲಿ ಮೇಲಿನ ಯೋಜನೆಗಳನ್ನು ಕಾರ್ಯಗತಗೊಳಿಸಲು ಶಕ್ತಿಮೀರಿ ದುಡಿಯತೊಡಗಿದ.

ಬೆಳಿಗ್ಗೆ ೮ ಗಂಟೆಗೆ ಗುರ್ಗಾಂವ್ ನಲ್ಲಿರುವ ಕಛೇರಿಗೆ ಹೋಗುವವನುಸಂಜೆ ಆರು ಗಂಟೆಗೆ ಮೋತಿ ಭಾಗ್ ನಲ್ಲಿರುವ ದೆಹಲಿ ಕರ್ನಾಟಕ ಸಂಘಕ್ಕೆ ಧಾವಿಸುತ್ತಿದ್ದ.ರಾತ್ರಿ ೧೧ ಗಂಟೆ ವರೆಗೆ ಅಲ್ಲಿ ಕೆಲಸ ಮಾಡುವುದು ದಿನ ನಿತ್ಯದ ಕಾರ್ಯವಾಗಿತ್ತು.ಶನಿವಾರ-ಆದಿತ್ಯವಾರಗಳೆಲ್ಲ ಸಂಘದ ಕೆಲಸಗಳಿಗೆ, ಕನಾಟಕದಿಂದ ಆಗಮಿಸಿದ ಕನ್ನಡಿಗರಿಗೆ ಸಹಾಯ ಮಾಡುವ ಕೆಲಸಗಳಿಗೆ ಸೀಮಿತವಾಗಿತ್ತು. ಎರಡು ಅವಧಿಗೆ ಅಂದರೆ ಒಟ್ಟು ನಾಲ್ಕು ವರ್ಷಗಳ ಕಾಲ ನಿರಂತರ ಅಧ್ಯಕ್ಷನಾಗಿ ಕೆಲಸ ಮಾಡಿದ ಇವನುಬಿತ್ತಿದ ಬೀಜ ಫಲ ನೀಡಿತ್ತು. ದೆಹಲಿ ಕನ್ನಡಿಗರು ದೊಡ್ಡ ಸಂಖ್ಯೆಯಲ್ಲಿ ಸಂಘದ ಕಡೆ ಬರತೊಡಗಿದ್ದರು. ಸಂಘವು ನಡೆಸುತ್ತಿದ್ದ ವಿಚಾರ ಸಂಕಿರಣ ಮತ್ತಿತರ ಕಾರ್ಯಕ್ರಮಗಳಿಂದ ಸಂಘಕ್ಕೆ ವಿಶ್ವವಿದ್ಯಾಲಯವೊಂದರ ಆಯಾಮ ಬರತೊಡಗಿತ್ತು. ಆದರೆ ಈ ಅವಧಿಯಲ್ಲಿ ಅವನ ಶೈಕ್ಷಣಿಕ ಕೆಲಸಗಳೆಲ್ಲ ಹಿಂದೆ ಸರಿದುಬಿಟ್ಟವು. ಕನ್ನಡಕ್ಕಾಗಿ ಕಟ್ಟಡವೊಂದನ್ನು ಕಟ್ಟುವುದು ಕೂಡಾ ಮುಖ್ಯ ಕೆಲಸ ಅಂದುಕೊಂಡು ಸಮಾಧಾನ ಪಟ್ಟುಕೊಂಡ.

ಇಂಥ ದಣಿವರಿಯದ ದುಡಿತದಿಂದ ಸಂಘದ ಸುಂದರ ಕಟ್ಟಡವು ಇವನ ಶುಗರ್ ಲೆವೆಲಿನಂತೆ ಮೇಲೆ ಮೇಲೆ ಏರತೊಡಗಿತು.

ಪರಿಣಾಮ ಹೊಸದಾಗಿ ಸೇರ್ಪಡೆಕೊಂಡ ಖಾಯಿಲೆ- ರಕ್ತದೊತ್ತಡ.

ಮಧುಮೇಹ ಮತ್ತು ರಕ್ತದೊತ್ತಡದ ಜಂಟೀ ಪರಿಣಾಮವೆಂದರೆ ಪಾರ್ಶ್ವವಾಯು ಮತ್ತು ಹೃದಯಾಘಾತ.


ಸತ್ಯದರ್ಶನ

ಇಂಥಹ ಜಾನ್‌ಲೇನಾ ಖಾಯಿಲೆಗಳು ಒಂದು ತರಹದ ಗುಪ್ತರೋಗದಂತೆ. ಅವುಗಳು ಮುನ್ಸೂಚನೆ ನೀಡಿ ಬರುವುದಿಲ್ಲ. ಸೂಚನೆ ಸಿಕ್ಕಾಗ ದೇಹದ ಸ್ಥಿತಿ ಸಿಕ್ಕುಸಿಕ್ಕಾಗಿರುತ್ತದೆ; ಅಪಾಯ ಸಂಭವಿಸಿ ಬಹು ಕಾಲ ಆಗಿರುತ್ತದೆ. ಅದಕ್ಕೆ ಇವನದ್ದೇ ಒಂದೆರಡು ಉದಾಹರಣೆಗಳುಂಟು.

೨೦೧೦ರ ಅಕ್ಟೋಬರದ ಒಂದು ದಿನ ಬೆಳಗ್ಗೆ ಎದ್ದು ಕನ್ನಡಿ ನೋಡಿದಾಗ ಎಡಗಣ್ಣಿನ ಒಳತಳದಲ್ಲಿ ರಕ್ತ ಸೋರಿ ಅರ್ಧ ಕಣ್ಣು ಕಾಣಿಸದಾಯಿತು. ಭಯದಿಂದ ತಕ್ಷಣ ಆಸ್ಪತ್ರೆಗೆ ಓಡಿದ.ಲೇಸರ್ ಕಿರಣಗಳನ್ನು ಉಪಯೋಗಿಸಿ, ಕಣ್ಣೊಳಗಿನ ರಕ್ತದ ಕಲೆಗಳನ್ನು ತೆಗೆದು ಹಾಕಲಾಯಿತು. ಹಾಗೆಯೇ ಕಣ್ಣೊಳಗೆ ಒಡೆದು ಹೋದ ನಾಳಗಳನ್ನು ಅಲ್ಲಿಯೇ ಬತ್ತಿಸಿ ಮತ್ತೆ ರಕ್ತ ಒಸರದಂತೆ ಮಾಡಲಾಯಿತು. ಸುಮಾರು ಮೂರು ತಿಂಗಳುಗಳ ಕಾಲ ನಡೆದ ಈ ಟ್ರೀಟ್‌ಮೆಂಟ್‌ನ ಆನಂತರ ಕಣ್ಣು ಮೊದಲಿನಂತಾಗದಿದ್ದರೂ ಓದಲು ಬರೆಯಲು ಅಡ್ಡಿಯಿಲ್ಲದಂತಾಯಿತು.

ಒಂದು ಅಮೇರಿಕಾ ಪ್ರವಾಸದಲ್ಲಿ ಇದ್ದಕ್ಕಿದ್ದಂತೆ ಆತನ ಎರಡೂ ಪಾದಗಳು ತೀಕ್ಷ್ಣವಾಗಿ ಊದಿಕೊಳ್ಳಲು ಆರಂಭವಾದುವು.ಸುದೀರ್ಘವಾದ ವಿಮಾನ ಪ್ರಯಾಣದಿಂದ ಹಾಗಾಗಿರಬೇಕು ಅಂದುಕೊಂಡಿದ್ದ. ಆದರೆ ನಾಲ್ಕಾರು ದಿನಗಳ ಆನಂತರವೂ ಊತ ಕಡಿಮೆಯಾಗಲಿಲ್ಲ. ಹೇಗೋ ಸುಧಾರಿಸಿಕೊಂಡು ಹಿಂದೂಸ್ತಾನಕ್ಕೆ ಮರಳಿದ. ೨೦೧೧ರ ಎಪ್ರಿಲ್ ತಿಂಗಳ ಕೊನೆಯಲ್ಲಿ, ಸಂಸ್ಥೆಯ ವೈದ್ಯರ ಸಲಹೆಯ ಮೇರೆಗೆ, ದೆಹಲಿಯ ಫೋರ್ಟಿಸ್ ಆಸ್ಪತ್ರೆಗೆ ಹೋಗಿ ರಕ್ತ ಮತ್ತು ಮೂತ್ರ ಪರೀಕ್ಷೆ ಮಾಡಿಸಿಕೊಂಡ. ಫಲಿತಾಂಶ ಆಘಾತಕಾರಿಯಾಗಿತ್ತು.

ಯೂರಿನ್ ಕ್ರಿಯೇಟಿನೈನ್ (ಮೂತ್ರ ಉತ್ಪಾದೆನೆಯ ಮಟ್ಟ) ೨.೬ಕ್ಕೆ ಏರಿತ್ತು.

ಆರೋಗ್ಯವಂತರ ದೇಹದಲ್ಲಿ ಅದು ೦.೬ ರಿಂದ ೧.೦೦ ಇರಬೇಕು.

ಥೇಟ್‌ಸಂತನ ಹಾಗೆ ಕಾಣಿಸುತ್ತಿದ್ದ ಡಾ. ಸಂಜೀವ್ ಗುಲಾಟಿ ಹೇಳಿದ್ದರಂತೆ, ನಿಮ್ಮ ಕಿಡ್ನಿಯ ಶೇಕಡಾ ೬೦ ಭಾಗ ಕೆಲಸ ಮಾಡುವುದನ್ನು ನಿಲ್ಲಿಸಿದೆ. ಇದು ಡಯಾಬೆಟಿಕ್‌ನ ಪರಿಣಾಮವಾದ್ದರಿಂದ ಇದರ ಅಧ:ಪತನವನ್ನು ಇನ್ನುತಡೆಯಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಇದು ಏರುತ್ತಾ ಹೋಗಲಿದೆ. ಕಾಲಿನ ನೀರು ದೇಹದಾದ್ಯಂತ ವ್ಯಾಪಿಸಲಿದೆ. ಹೆಚ್ಚೆಂದರೆ ಆರು ತಿಂಗಳುಗಳೊಳಗೆ ನಿಮಗೆ ಡಯಾಲಿಸಿಸ್ ಆರಂಭಿಸಲೇಬೇಕಾಗುತ್ತದೆ.

ಬದುಕುವ ಆಸೆ ಬಿಟ್ಟು ಮನೆಗೆ ಮರಳಿದ್ದ ಈತ ತಿಂಗಳಿಡೀ ಮೌನವಾಗಿದ್ದ.

ದೇಹದಲ್ಲಿ ಎರಡು ಕಿಡ್ನಿಗಳಿರುತ್ತವೆ.

ತಿಂದ ಆಹಾರದಲ್ಲಿ ದೇಹಕ್ಕೆ ಬೇಕಾದ್ದನ್ನು ಉಳಿಸಿ, ಬೇಡವಾದ್ದನ್ನು ಮೂತ್ರದ ಮೂಲಕ ಹೊರ ಹಾಕುವ ಕೆಲಸವನ್ನು ಕಿಡ್ನಿಗಳು ನಿರಂತರವಾಗಿ ಮಾಡುತ್ತಿರುತ್ತವೆ.

ಗೇರು ಬೀಜದ ಆಕ್ರತಿಯಲ್ಲಿರುವ ಕಿಡ್ನಿಯ ಒಳ ಭಾಗದಲ್ಲಿ ನೆಫ್ರೋ (ಕಿಡ್ನಿ ಅಧ್ಯಯನ ಶಾಸ್ತ್ರ -ನೆಫ್ರೋಲೊಜಿ) ಎಂಬ ಹೆಸರಿನ ಲಕ್ಷಕ್ಕೂ ಹೆಚ್ಚು ಸಂಖ್ಯೆಯ ಪುಟ್ಟ ಪುಟ್ಟ ಕಣಗಳಿರುತ್ತವೆ.

ಈ ನೆಫ್ರೋಗಳು ತಿಂದ ಆಹಾರದಲ್ಲಿರುವ ಸೋಡಿಯಂ, ಪೊಟಾಷಿಯಂ ಮತ್ತಿತರವುಗಳನ್ನು ಕರಾರುವಾಕ್ಕಾಗಿ ಲೆಕ್ಕ ಹಾಕಿ, ಆಯಾ ದೇಹಕ್ಕೆ ಅಗತ್ಯವಿರುವಷ್ಟನ್ನು ರಕ್ತಕ್ಕೆ ದಾಟಿಸುತ್ತದೆ.ಅನಗತ್ಯವಾದ್ದನ್ನು ಮೂತ್ರದ ಮೂಲಕ ಹೊರಹಾಕುತ್ತವೆ.

ಡಯಾಬೆಟಿಸ್ ಮತ್ತಿತರ ಖಾಯಿಲೆಗೆಳು ಈ ಎಲ್ಲ ನೆಫ್ರೋಗಳನ್ನು ನಿಧಾನವಾಗಿ ಸಾಯಿಸುತ್ತವೆ, ಇಲ್ಲವೇ ಶಕ್ತಿಹೀನಗೊಳಿಸುತ್ತವೆ. ಆಗ ದೇಹಕ್ಕೆ ಅನಗತ್ಯವಾಗ ಅಂಶಗಳು ಮೂತ್ರದ ಮೂಲಕ ಹೊರಹೋಗದೆ, ರಕ್ತಕ್ಕೆ ಸೇರಿಕೊಂಡು ದೇಹ ಅಸ್ತವ್ಯಸ್ತಗೊಳ್ಳುತ್ತದೆ.

ಸತ್ತು ಹೋದ ನೆಫ್ರೋಗಳನ್ನು ಮತ್ತೆ ಬದುಕಿಸಲು ಮನುಷ್ಯ ಕಲಿತಿಲ್ಲ.

ತಪಸ್ಸು ಮಾಡದೆಯೇ ತಾನೇನು ಎಂಬುದನ್ನು ಕಂಡುಕೊಂಡುಬಿಟ್ಟಿದ್ದ.

ಹೆಂಡತಿ ಶೋಬಾನಾಳಿಗಾಗಲೀ ಮಗ ಅನನ್ಯನಿಗಾಗಲೀ ಇದನ್ನು ಹೇಳುವ ಧೈರ್ಯ ಇವನಿಗಿರಲಿಲ್ಲ.

ಆದರೆ ದಿನೇ ದಿನೇ ಏರುತ್ತಿರುವ ಇವನ ಕಾಲಿನ ಊತ ಮೊಣಕಾಲಿನವರೆಗೆ ಆವರಿಸಿಕೊಂಡದ್ದನ್ನು ಗಮನಿಸಿದ ಅವರಿಬ್ಬರೂ ಮೌನವಾಗಿ ದು:ಖಿಸುತ್ತಿರುವುದು ಇವನಿಗೂ ಗೊತ್ತಾಗಿತ್ತು.

ಈ ನಡುವೆ ಹೇಗಿದ್ದೀಯಾ ಮಗಾ.. ಎಂದು ಅಕ್ಕರೆಯಿಂದ ವಿಚಾರಿಸುವ ಮತ್ತೊಬ್ಬರೂ ಕಡಿಮೆಯಾಗಿಬಿಟ್ಟರು. ೨೦೧೧ರ ಜೂನ್‌ನಲ್ಲಿತಂದೆ ತೀರಿಕೊಂಡರು. ಇವನು ಹದಿನೈದು ದಿನಗಳ ರಜ ಹಾಕಿ ಊರಿಗೆ ಹೋಗಿದ್ದ. ಕಂಡವರೆಲ್ಲರೂ ಸ್ವಲ್ಪ ಊದಿಕೊಂಡಂತಿದ್ದ ಅವನ ದೇಹದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಮುಖ್ಯವಾಗಿ ಕಣ್ಣುಗಳ ಕೆಳಭಾಗದಲ್ಲಿ ರೆಪ್ಪೆಗಳಡಿಯಲ್ಲಿ ನೀರು ಕಾಣಿಸಿಕೊಂಡಿತ್ತು. ಮೂತ್ರ ಪಿಂಡಗಳು ದೇಹದಲ್ಲಿನ ಅನಗತ್ಯ ನೀರನ್ನು ಹೊರಹಾಕುವಲ್ಲಿ ವಿಫಲವಾದ್ದರಿಂದ ನೀರು ದೇಹದಲ್ಲಿಯೇ ಉಳಿದು ಎಲ್ಲೆಂದರಲ್ಲಿ ಅದು ಶೇಖರವಾಗತೊಡಗಿತ್ತು. ಅವನೀಗ ಉರುಟು ಉರುಟಾಗಿ ಕಾಣಿಸತೊಡಗಿದ್ದ. ಕೇಳಿದವರಿಗೆಲ್ಲರಿಗೂ ಕಿಡ್ನಿ ಸಮಸ್ಯೆಯಿದೆ ಎಂದಷ್ಟೇ ಹೇಳಿದ್ದ.

ಜುಲೈ ತಿಂಗಳಿಗಾಗುವಾಗ ಕಿಡ್ನಿಯ ಕಾರ್ಯಕ್ಷಮತೆ ಶೇಕಡಾ ಮೂವತ್ತಕ್ಕೆ ಇಳಿದಿತ್ತು.

ಅವನು ಡಯಾಲಿಸಿಸ್‌ಗೆ ಮಾನಸಿಕವಾಗಿ ಸಿದ್ಧನಾಗತೊಡಗಿದ್ದ. ಆದರೂ ಕಛೇರಿಯ ಕೆಲಸಗಳನ್ನು ನಿರ್ಲಕ್ಷಿಸಲಿಲ್ಲ. ದೇಹ ಕುಸಿಯುತ್ತಿದ್ದಂತೆ ಹೆಚ್ಚು ಹೆಚ್ಚು ಕೆಲಸ ಮಾಡಲು ಆರಂಭಿಸಿದ.ಗೆಳೆಯ ಉಮಾಪತಿಯ ಒತ್ತಾಯಕ್ಕೆ ಮಣಿದು ವಿಜಯ ಕರ್ನಾಟಕ ಪತ್ರಿಕೆಗೆ ಕಾಲಂ ಬರೆಯಲೂ ಒಪ್ಪಿಕೊಂಡ. ಸಾವಿಗೇ ಸವಾಲು ಹಾಕುವವನಂತೆ.

ನವಂಬರ ತಿಂಗಳಲ್ಲಿ ಹೆಂಡತಿಗೆ ಎಲ್ಲವನ್ನೂ ವಿವರಿಸಿದ.

ಎಲ್ಲವನ್ನೂ ಕೇಳಿಸಿಕೊಂಡ ಆಕೆ, ಡಯಾಲಿಸಿಸ್ ನಿಜಕ್ಕೂ ಪರಿಹಾರವಲ್ಲ. ಜೊತೆಗೆ ಅದನ್ನು ನಿರಂತರವಾಗಿ ಮಾಡುತ್ತಲೇ ಇರಬೇಕು.ಅಂತಿಮವಾಗಿ ದಿನಕ್ಕೆ ಮೂರು ಬಾರಿ ಮಾಡಿಸಿಕೊಳ್ಳಬೇಕು, ಕಾರಣ ಕಿಡ್ನಿ ಕಸಿ (ಕಿಡ್ನಿ ಟ್ರಾನ್ಸ್‌ಪ್ಲಾಂಟೇಶನ್) ಮಾಡಿಸಿಕೊಳ್ಳುವುದೇ ಒಳ್ಳೆಯದು ಅಂತ ಸಲಹೆ ನೀಡಿದಳು.

ಇವನು ಸರಿ ಎಂದು ತಲೆಯಾಡಿಸಿದ.

ಆದರೆ ಕಿಡ್ನಿ ತಪಾಸಣೆಗೆ ಹೊರಟವನಿಗೆ ಬಲುಬೇಗ ಸತ್ಯದರ್ಶನವಾಗಿತ್ತು.

ಸರಕಾರೀ ಕಿಂಡಿಯ ಮೂಲಕವೇ ಕಿಡ್ನಿಗೆ ಬೇಡಿಕೆ ಸಲ್ಲಿಸಿ, ಅದು ಸಿಗುವವರೆಗೆ ವರ್ಷಾನುಗಟ್ಲೆ ತೆಪ್ಪಗೆ ಕಾಯಬೇಕು.

ಅದಕ್ಕೆ ಇರಬೇಕು ಪ್ರಭುದೇವ, ಸಾವನ್ನಕ್ಕರ ಸಾಧನೆ ಮಾಡಿದೊಡೆ ಕಾದುವ ದಿನವಾವುದು ಎಂದು ಪರಿತಪಿಸಿದ್ದು.

ಎಷ್ಟೋ ವರ್ಷಗಳ ನಿರೀಕ್ಷೆಯ ಬಳಿಕ ಸಿಗುವ ಕಿಡ್ನಿಯ ಕಂಡಿಷನ್ ಹೇಗಿರುತ್ತದೆ ಅಂತ ಊಹಿಸುವುದೂ ಕಷ್ಟ.

೬೦ ವರ್ಷ ದಾಟಿದವರ ಕಿಡ್ನಿಯಿಂದ ಹೆಚ್ಚು ಪ್ರಯೋಜನವಿಲ್ಲ.

ಯಾವುದೋ ಅಫಘಾತದಲ್ಲಿ ಆಕಸ್ಮಿಕ ಮರಣ ಹೊಂದಿದ

ತರುಣರ ಕಿಡ್ನಿ ಸಿಕ್ಕರೆ, ಅದು ನಿಮ್ಮ ದೇಹಕ್ಕೆ ಒಪ್ಪಿಗೆಯಾದರೆ ನೀವು ಲಕ್ಷದಲ್ಲಿ ಒಬ್ಬರು,

ಅದು ನಿಮ್ಮ ಪುಣ್ಯ.

ಭಾರತ ದೇಶದಲ್ಲಿ ಸತ್ತಮೇಲೆ ದೇಹದಾನ ಮಾಡುವುದು ಇನ್ನೂ ಜನಪ್ರಿಯವಾಗಿಲ್ಲ.

ಸತ್ತ ಮೇಲಾದರೂ ದೇಶ ಸೇವೆ ಮಾಡಲು ನಮಗೆ ತಿಳಿದಿಲ್ಲ,

ಸತ್ತವರನ್ನು ಸುಟ್ಟು ಹಾಕುವುದೇ ಇಲ್ಲಿ ಜಾಸ್ತಿ.

ಹೀಗಾಗಿ ಕಿಡ್ನಿ ದೊರೆಯುವುದು ಸುಲಭವಲ್ಲ.

ಅವನು ಡಯಾಲಿಸಿಸ್‌ಗೆ ಮಾನಸಿಕವಾಗಿ ಮತ್ತೊಮ್ಮೆ ಸಿದ್ಧನಾಗತೊಡಗಿದ್ದ.

ಟೈಪ್-2

ನನ್ನ ಬ್ಲಡ್ ಗ್ರೂಪ್ ಮತ್ತು ನಿಮ್ಮದು ಒಂದೇ ಅಲ್ವಾ? ಅಲ್ಲಿ ಇಲ್ಲಿ ಹುಡುಕುವುದು ಯಾಕೇ? ನನ್ನದೆ ಒಂದು ಕಿಡ್ನಿ ತೆಗೆದುಕೊಳ್ಳಿ. ಕಿಡ್ನಿ ದಾನ ಮಾಡಿದವರಿಗೆ ಏನೂ ತೊಂದರೆಯಾಗುವುದಿಲ್ಲ ಅಂತಲ್ಲಾ? ಸುಮಾರು ೨೫ ವರ್ಷಗಳ ಹಿಂದೆ ಹೃದಯವನ್ನು ಕೊಟ್ಟಿದ್ದವಳು ಈಗ ಕಿಡ್ನಿ ತೆಗೆದುಕೋ’ ಎನ್ನುತಿದ್ದಾಳೆ.ಅದೂ ಅತ್ಯಂತ ನಿರ್ಮಲ ಚಿತ್ತದಲ್ಲಿ, ಆತಂಕ ರಹಿತ ಧ್ವನಿಯಲ್ಲಿ.ಆದರೆ ನಿರ್ಣಾಯಕ ವಾಣಿಯಲ್ಲಿ. ದುಷ್ಟ ವ್ಯಾಘ್ರನೆದುರು ಖಂಡವಿದೆ ಕೋ, ಮಾಂಸವಿದೆ ಕೋ ಎಂದಿದ್ದ ಪುಣ್ಯ ಕೋಟಿಯ ಕತೆ ನೆನಪಾಗಿ ಗಳಗಳನೆ ಅಳಲು ಶುರುಮಾಡಿದ್ದ.

ಇವನವಳ ಗಂಡ ಇರಬಹುದು.ಆದರೆ ಅತ್ಯಂತ ಆರೋಗ್ಯವಂತಳಾಗಿರುವ ಅವಳ ಕಿಡ್ನಿ ಕತ್ತರಿಸುವ ಅಧಿಕಾರ ಇವನಿಗೆಲ್ಲಿದೇ? ಲಿಂಗ ಅಸಮಾನತೆಯ ವಿರುದ್ಧ ಇಷ್ಟು ವರ್ಷ ಹೋರಾಡಿದ್ದರ ಅಂತಿಮ ಪರಿಣಾಮ ಇದುವೆಯೇ? ಕೊನೆಯಿಲ್ಲದ ಅಸಂಖ್ಯ ಪ್ರಶ್ನೆಗಳ ಕಡಲಲ್ಲಿ ಮುಳುಗುತ್ತಲೇ ಮತ್ತೂ ಒಂದು ತಿಂಗಳು ಕಳೆದ.

ಕಿಡ್ನಿ ಕಸಿಯ ಆಸೆ ಬಿಟ್ಟ ಇವನು ಡಯಾಲಿಸಿಸ್‌ಗೆ ಸಜ್ಜಾಗತೊಡಗಿದ.

೨೦೧೨ ರ ಜನವರಿ ತಿಂಗಳಿಗಾಗುವಾಗ ಯೂರಿನ್ ಕ್ರಿಯೇಟಿನೈನ್ ೬ಕ್ಕೆ ತಲುಪಿತ್ತು.

ಅದು ಹಿಮ್ಮುಖವಾಗಿ ಚಲಿಸಬಹುದೇ ಎಂಬ ಅವನ ಆಸೆ

ನಿಧಾನವಾಗಿ ಸುಳ್ಳಾಗಲಾರಂಭಿಸಿತ್ತು.

ದೇಹವಿಡೀ ನೀರೇರುತ್ತಿತ್ತು.

ಕಫ ಕಾಣಿಸಿಕೊಂಡಿತು.

ಮೂಗು ಕಟ್ಟಿಕೊಳ್ಳತೊಡಗಿತು

ರಾತ್ರಿ ನಿದ್ರಿಸುವುದು ಕಷ್ಟವಾಗತೊಡಗಿತು.

ಕೈ ಬೆರಳುಗಳು ಬಾಗಲಾರದಾದುವು.

ಚರ್ಮದ ಮೇಲೆ ತುರಿಕೆ ಕಾಣಿಸಿಕೊಂಡು

ದೆಹಲಿಯ ಛಳಿಯಲ್ಲೂ ಬಟ್ಟೆ ಹಾಕಲಾಗದ ಅಸಹನೀಯ ಪರಿಸ್ಥಿತಿ ನಿರ್ಮಾಣಗೊಂಡಿತು.

ಯೂರಿನ್ ಕ್ರಿಯೇಟಿನೈನ್ ೭ಕ್ಕೆ ತಲುಪಿತ್ತು.

ಈ ನಡುವೆ ಅಣ್ಣನ ಮಗಳ ಮದುವೆಗೆಂದು ಊರಿಗೆ ಹೋದವನು ತಂಗಿ ಗುಲಾಬಿ ಬಿಳಿಮಲೆಯ ಒತ್ತಾಯದಿಂದ

ಮಂಗಳೂರಿನಕಿಡ್ನಿ ಡಾಕ್ಟರರೊಬ್ಬರನ್ನು ಭೇಟಿ ಮಾಡಿದ. ಅವರು ಎಲ್ಲ ಪರೀಕ್ಷೆ ಮಾಡಿ ಸದ್ಯ ನಿಮ್ಮ ಕಿಡ್ನಿಯ ೮೯ ಭಾಗ ಕೆಲಸ ಮಾಡ್ತಾ ಇಲ್ಲ. ಸರಿಯಾದ ದಾನಿಗಳು ದೊರೆತು ಕಿಡ್ನಿ ಕಸಿ ಮಾಡಿಸಿಕೊಂಡರೆ ಮಾತ್ರ ಮುಂದಕ್ಕೆ ಕನಿಷ್ಠ ೨೦ ವರ್ಷಕ್ಕೆ ಮೋಸವಿಲ್ಲ ಅಂತ ಹೇಳಿಬಿಟ್ಟರು. ಇವನು ಹಗುರವಾದ ಕಿಡ್ನಿಯೊಂದಿಗೆ ದೆಹಲಿಗೆ ಹಿಂತಿರುಗಿದ.ಒಲವು ಗೆಳೆಯರಿಗೆ ತನ್ನ ಆತಂಕವನ್ನು ಹೇಳಿಕೊಂಡಾಗ, ಕಿಡ್ನಿ ಕಸಿ ಮಾಡಿಸಿಕೊಳ್ಳುವ ಮತ್ತು ಮಾಡಿಸಿಕೊಂಡವರ ಬಗ್ಗೆ ಹಲವು ಮಾಹಿತಿಗಳು ದೊರಕಿದವು.

ಇವನು ಮತ್ತೊಮ್ಮೆ ಕಿಡ್ನಿ ಕಸಿಗೆ ಮಾನಸಿಕವಾಗಿ ಸಿದ್ಧನಾಗತೊಡಗಿದ್ದ! ಇದಕ್ಕೆ ಹೆಂಡತಿಯ ನಿಷ್ಟುರ ಮಾತುಗಳೇ ಕಾರಣ!

ಮುತ್ತೈದೆ ಸಾವು ಇತ್ಯಾದಿ ಬಯಸಿದವಳಲ್ಲ ಶೋಭನಾ. ಇಷ್ಟು ವರ್ಷಗಳ ಕಾಲ ತನ್ನ ಜೊತೆಗಾರನಾಗಿದ್ದವನು ಮತ್ತೊಂದಷ್ಟು ವರ್ಷಗಳ ಕಾಲ ಜೊತೆಯಲ್ಲಿರಲಿ ಎಂಬ ಸಣ್ಣ [?] ಸ್ವಾರ್ಥ ಇದ್ದಿರಲೂಬಹುದು. ಆಕೆಯ ಪುಟ್ಟ ಲೋಕದಲ್ಲಿ ಗಂಡ ಮತ್ತು ಮಗ ಬಿಟ್ಟರೆ ಬೇರಾರೂ ಇದ್ದಂತಿಲ್ಲ. ಗಂಡನನ್ನು ಹೀಗೇ ಉಳಿಸಿಕೊಳ್ಳಲು ಅವಳೆದುರು ಬೇರೆ ದಾರಿ ಯಾವುದೂ ಉಳಿದಿರಲಿಲ್ಲ ಎಂಬುದಂತೂ ಸತ್ಯ. ಮಿತ ಮಾತಿನ, ಆದರೆ ಮಾತಾಡಿದಾಗಲೆಲ್ಲ ನಿರ್ಣಾಯಕವಾಗಿ ಮಾತಾಡುವ ಆಕೆಗೆದುರಾಗಿ ಆತನೆಂದೂ ವಾದಿಸಿರಲಿಲ್ಲ.

ಒಟ್ಟಿನಲ್ಲಿ ಕೊಡುಗೆ ಕೊಡಲು ಅವಳಿಗೆ ಕಾರಣಗಳಿದ್ದವು.

ಆದರೆ ಹೆಂಡತಿಯ ಕೊಡುಗೆ ಸ್ವೀಕರಿಸಲು ಇವನಿಗೆ ಕಾರಣಗಳಿರಲಿಲ್ಲ.

ಕಾರಣಗಳನ್ನು ಹುಟ್ಟಿಸಿಕೊಂಡು ತನ್ನದೇ ಹೃದಯವನ್ನು ಒಪ್ಪಿಸಬೇಕಾಗಿತ್ತು; ಒಪ್ಪಿಸತೊಡಗಿದ್ದ.


ಓ.., ನನ್ನ ಪ್ರಿಯ ಹೃದಯವೇ..

ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು.

ಆದರೆ ನನ್ನ ಹೋರಾಟಕ್ಕೆ ಉಳಿದಿರುವುದು ಒಂದೇ ಹಾದಿ..

ಮೇಲಾಗಿ ಅವಳು ನೀನು ಪ್ರೀತಿಸಿದ್ದ, ಪ್ರೀತಿಸುತ್ತಿರುವ ನನ್ನ ಪ್ರೀತಿಯ ಹೆಂಡತಿ.

ಅವಳಾಗಿಯೇ ನೀಡಿದ ಸಲಹೆ ಇದು. ನಾನವಳ ಆರೋಗ್ಯವನ್ನು ಕಿತ್ತುಕೊಳ್ಳಲು ಹೊರಟಿಲ್ಲ.

ಈ ಕುರಿತು ಆಕೆಯಲ್ಲೂ ಯಾವುದೇ ಗೊಂದಲಗಳಿದ್ದಂತೆ ನನಗಂತೂ ಕಾಣಿಸುವುದಿಲ್ಲ.

ಮೇಲಾಗಿ ಅವಳೇ ನನ್ನಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಪಾಪ ಪ್ರಜ್ಞೆಯನ್ನು ಕಡಿಮೆ ಮಾಡುತ್ತಿದ್ದದ್ದು ನಿನಗೂ ಗೊತ್ತಿದೆ.

ಅವಳೇ ದೂರವಾಣಿಯ ಮೂಲಕ ಆಕೆಯ ತಂದೆ-ತಾಯಿ, ತಮ್ಮ ಮತ್ತು ತಂಗಿಯರಿಗೆ ಅದನ್ನು ಹೇಳಿದ್ದಳು. ನನಗೆ ತೊಂದರೆಯಾಗದೆ ಅವರಿಗೆ ಉಪಕಾರವಾಗುವುದಿದ್ದರೆ ಯಾಕೆ ಮಾಡಬಾರದು? ಈ ಹಂತದಲ್ಲಿ ನಾನವರಿಗೆ ಬೆಂಬಲವಾಗಿ ನಿಲ್ಲದೆ ಬೇರಾರು ನಿಲ್ಲಬೇಕು? ಎಂದೆಲ್ಲಾ ಆಕೆ ಹೇಳುತ್ತಿದ್ದುದನ್ನು ನೀನೂ ಕೇಳಿದ್ದೀಯಾ.

ಅವಳ ಉದಾತ್ತ ವ್ಯಕ್ತಿತ್ವ, ಉದಾರ ಮನಸು, ಗಟ್ಟಿ ನಿರ್ಧಾರಗಳ ಬಗ್ಗೆ ನಿನಗೆ ಗೊತ್ತಿದೆ.ಅವಳದ್ದು ಭಾಷೆ ಮೀರಿದ ಭಾವ. ನನ್ನ ಮುಂದೆ ಹೆಚ್ಚು ಆಯ್ಕೆಗಳಿಲ್ಲದೇ ಇದ್ದಾಗ ಬೇರೇನು ಮಾಡಲು ನನ್ನಿಂದ ಸಾಧ್ಯ?

ಸಾಮಾನ್ಯವಾಗಿ ಆಸ್ಪತ್ರೆಯ ನಿಯಮಾನುಸಾರ ಬಂಧುಗಳು ಕಿಡ್ನಿ ಕೊಡಬೇಕು. ಅಣ್ಣ, ತಮ್ಮ, ತಂಗಿಹೀಗೆ ರಕ್ತ ಸಂಬಂಧಿಗಳ ನಡುವೆಯೇ ಕಿಡ್ನಿ ಕಸಿ ಯಶಸ್ವಿಯಾಗುತ್ತದಂತೆ.

ಆದರೆ ನನ್ನ ಅಣ್ಣಂದಿರಿಬ್ಬರೂ ಮಧುಮೇಹಿಗಳು. ಅವರು ಕಿಡ್ನಿ ಕೊಟ್ಟರೂ ವೈದ್ಯರು ತೆಗೆದುಕೊಳ್ಳಲಾರರು. ನನ್ನ ತಂಗಿ ಗುಲಾಬಿ ಬಿಳಿಮಲೆಯ ಗಂಡ ಶ್ರೀನಿವಾಸ್ ಕಾರ್ಕಳ ಬೆನ್ನು ಮೂಳೆಯ ತೊಂದರೆಗೆ ಒಳಗಾಗಿ, ಎರಡೂ ಕಾಲುಗಳನ್ನು ಕಳೆದುಕೊಂಡು, ಕಳೆದ ೧೨ ವರ್ಷಗಳಿಂದ ಮನೆ ಬಿಟ್ಟು ಹೊರಬಾರದೇ ಉಳಿದಿರುವಾಗ ತಂಗಿಯನ್ನು ನಾನು ಕೇಳುವುದಾದರೂ ಹೇಗೆ?

ನಾನು ಕೆಲಸ ಮಾಡುವ ಕಛೇರಿಯ ಕ್ಯಾಂಟೀನ್‌ನಲ್ಲಿದ್ದ ಸುಮಾರು ೪೦ ವರ್ಷದ ರಮೇಶ್ ಒಂದಿನ ನನ್ನ ಕಛೇರಿಗೆ ಬಂದು ದೇವರಿಗೆ ಬಾಯಿಗೆ ಬಂದ ಹಾಗೇ ಬೈದು, ನಿಮ್ಮಂತಹವರಿಗೆ ಹೀಗಾಗ ಬಾರದಿತ್ತು, ತಗೊಳ್ಳಿ ನನ್ನ ಕಿಡ್ನಿನಾ ಅಂತ ವೀರಾವೇಶದಿಂದ ಹೇಳಿದ್ದನ್ನು ನೀನೂ ಕೇಳಿದ್ದೀಯಾ. ಅವನಿಗೆ ನಾನೇ ಸಮಾಧಾನ ಹೇಳಿದ್ದಿರಲಿಲ್ಲವೇ?

ಬದುಕಿನ ಇಕ್ಕಟ್ಟಿನ ಘಳಿಗೆಗಳಲ್ಲಿ ಜೊತೆ ನಿಲ್ಲುವ ಹೆಂಡತಿಯ ಮುಂದೆ ಯಾವ ದೈವ? ಯಾವ ದೇವರು?

೨೫ ವರ್ಷಗಳ ಹಿಂದೆ ನೀನು ಅವಳನ್ನು ಪ್ರೀತಿಸಿದ್ದರಿಂದಲ್ಲವೇ ನಾನು ಮದುವೆಯಾದದ್ದು?

ನಮ್ಮ ಮದುವೆಗೆ ಜಾತಿ ಅಡ್ಡ ಬಂದುದರಿಂದ ಸುಮಾರು ಏಳು ವರ್ಷಗಳ ಕಾಲ ನಾವು ಮೌನವಾಗಿ, ತಾಳ್ಮೆಯಿಂದ ಕಾಯಲಿಲ್ಲವೇ? ಕೊನೆಗೂ ನಿನ್ನ ಪ್ರೀತಿಯೇ ಗೆಲ್ಲಲಿಲ್ಲವೇ? ತಂದೆ ತಾಯಿ, ಬಂಧುಗಳನ್ನು ತೊರೆದು ನನ್ನೊಡನೆ ಬಂದ ಆಕೆ ನನ್ನ ಉಸಿರಾದಳು. ನಮ್ಮ ಪ್ರೀತಿ ನನ್ನ ಮನೆಯವರನ್ನೂ, ಆಕೆಯ ಮನೆಯವರನ್ನೂ ಬಹಳ ಬೇಗ ಹತ್ತಿರ ಮಾಡಿತು.

ಜಾತಿ ನಮಗೆಂದೂ ಗೋಡೆಯಾಗಲಿಲ್ಲ. ಜಾತಕದ ಮೇಲೆ ತುಂಬಾ ವಿಶ್ವಾಸವಿರುವ ನನ್ನ ತಂದೆ ಬಿಳಿಮಲೆಗೆ ಹೋದಾಗಲೆಲ್ಲ ನಿನ್ನೆದುರೇ ಹೇಳಲಿಲ್ಲವೇ? ಶೋಭಾಳ ಜಾತಕ ಚೆನ್ನಾಗಿದೆ, ನಿನ್ನದು ಸಾಲದು.ಅವಳ ಜಾತಕದ ಫಲದಿಂದ ನಿನ್ನ ಜಾತಕ ನಡೆಯತ್ತಿದೆ, ಅವಳನ್ನು ಚೆನ್ನಾಗಿ ನೋಡಿಕೋ ಅಂತ?

ಮಹಾರೋಗದ ಮಜ

ದೆಹಲಿ ಕರ್ನಾಟಕ ಸಂಘದಲ್ಲಿ ಇವನೇ ಅಧ್ಯಕ್ಷನಾಗಿದ್ದಾಗ ಮೆನೇಜರ್ ಆಗಿ ಕೆಲಸ ಮಾಡುತ್ತಿದ್ದ ಬಾಲಚಂದ್ರರ ಹೆಂಡತಿ, ತನ್ನ ತಂಗಿಯಿಂದ ಕಿಡ್ನಿ ದಾನ ಪಡೆದು ಕಸಿ ಮಾಡಿಸಿಕೊಂಡಿದ್ದರು. ಇವನ ದೂರದ ನೆಂಟ ಪುತ್ತೂರಿನ ಶ್ರೀ ಸಿ.ಪಿ ಜಯರಾಮರಿಗೆ ಅವರ ಹೆಂಡತಿಯೇ ಕಿಡ್ನಿ ದಾನ ಮಾಡಿದ್ದರು. ಇವನು ನೇರವಾಗಿ ಅವರನ್ನೇ ಮಾತನಾಡಿಸಿದಾಗ ಅವರೂ ಧೈರ್ಯ ಹೇಳಿದ್ದರು. ನಾನು ಒಂದು ಕಿಡ್ನಿಯನ್ನು ಅವರಿಗೆ ಕೊಟ್ಟಿದ್ದೇನೆ. ಅದರಿಂದ ನನಗೇನೂ ತೊಂದರೆಯಾಗಿಲ್ಲ. ಮೇಲಾಗಿ ನಾವೆಲ್ಲ ಹಳ್ಳಿಯಲ್ಲಿ ಇರುವವರು, ಬೇರೆ ಬೇರೆ ಕೆಲಸ ಮಾಡಬೇಕಾಗುತ್ತದೆ, ನೀವು ಪೇಟೆಯಲ್ಲಿ ಇರುವವರು, ಏನೋ ತೊಂದರೆ ಆಗಲಾರದು ಎಂಬ ಅವರ ಮಾತು ಇವನಿಗೆ ವಿಶೇಷ ಬಲ ನೀಡಿತ್ತು.

ಕಿಡ್ನಿ ತೊಂದರೆಯ ಅಂತಿಮ ಹಂತದಲ್ಲಿ ಕಸಿ ಚಿಕಿತ್ಸೆ ಅನಿವಾರ್ಯ. ಕಿಡ್ನಿ ಚಿಕಿತ್ಸೆಯಂತೆಯೇ ಅದಕ್ಕಾಗಿ ನಡೆಸಬೇಕಾದ ತಯಾರಿಯೂ ಅಷ್ಟೆ ಕಾಂಪ್ಲೆಕ್ಸ್. ದಾನ ಮಾಡುವವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಗಟ್ಟಿ ಇರಬೇಕಾಗುತ್ತದೆ. ಅದಕ್ಕಾಗಿ ನಡೆಸಲಾಗುವ ಎಲ್ಲ ಪರೀಕ್ಷೆಗಳಲ್ಲೂ ಪಾಸ್ ಆಗಬೇಕಾಗುತ್ತದೆ.ಐವತ್ತು ವರ್ಷ ವಯಸ್ಸು ದಾಟಿದವರು, ಮಧುಮೇಹ, ಅಧಿಕ ರಕ್ತದೊತ್ತಡ ಹಾಗೂ ಇವೆರಡರ ಫ್ಯಾಮಿಲಿ ಹಿಸ್ಟರಿ ಇರುವವರು, ಧೂಮಪಾನಿಗಳು, ಅಧಿಕ ತೂಕವಿರುವವರು ಕನಿಷ್ಟ ವರ್ಷಕೊಮ್ಮೆಯಾದರೂ ತಮ್ಮ ಕಿಡ್ನಿ ಯನ್ನು ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು.

ಎಲ್ಲಿ ಕಸಿ ಮಾಡಿಸಿಕೊಳ್ಳುವುದು?

ಮೈಸೂರು, ಬೆಂಗಳೂರು ಮತ್ತು ಮಣಿಪಾಲಗಳಿಂದ ಮಾಹಿತಿ ತರಿಸಿಕೊಂಡ.ಕೊನೆಗೆ ದೆಹಲಿಯೇ ಒಳಿತೆಂಬ ನಿರ್ಣಯಕ್ಕೆ ಬಂದ.

ದೆಹಲಿಯಲ್ಲಿ ಹತ್ತಾರು ಒಳ್ಳೆಯ ಆಸ್ಪತ್ರೆಗಳಿವೆ. ಅದರಲ್ಲಿ ಇವನು ಆಯ್ದುಕೊಂಡದ್ದು ಮ್ಯಾಕ್ಸ್ ಆಸ್ಪತ್ರೆ. ಇದಕ್ಕೆ ಕಾರಣವಿಲ್ಲದೆ ಇಲ್ಲ. ಮ್ಯಾಕ್ಸ್ ಆಸ್ಪತ್ರೆಯ ನಿರ್ದೇಶಕರ ಕಾರ್ಯದರ್ಶಿಯಾಗಿರುವ ಶ್ರೀಮತಿ ಅನುರಾಧಾ ರಾವ್ ಅವರು ಮೂಲತಹ ಆಂಧ್ರ ಪ್ರದೇಶದವರು ಮತ್ತು ಅವರ ಗಂಡ ಇವನ ಒಳ್ಳೆ ಸ್ನೇಹಿತರು. ಶ್ರೀಮತಿ ಅನುರಾಧ ಅವರು ಇವನ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಒಂದು ಸೂಚನೆ ನೀಡಿ ಇವನಿಗೆ ವಿ.ಐ.ಪಿ ಸ್ಥಾನ ಮಾನ ನೀಡಲು ಕಾರಣರಾಗಿದ್ದರು. ಇದರಿಂದಾಗಿ ವೈದ್ಯರಿಂದ ಆರಂಭವಾಗಿ ದಾದಿಗಳವರಗೆ ಇವನಿಗೆ ಎಲ್ಲಿಯೂ ಯಾವ ಬಗೆಯಲ್ಲೂ ತೊಂದರೆಯಾಗಲಿಲ್ಲ. ಎಲ್ಲಿಯೂ ಕ್ಯೂ ನಿಲ್ಲುವ ಪ್ರಸಂಗ ಬರಲಿಲ್ಲ. ಇವನ ಕಾರಿನ ನಂಬರ್ ಕಂಡ ತಕ್ಷಣ ಒಳಗೆ ಸುದ್ದಿ ರವಾನೆಯಾಗುತ್ತದೆ. ಗಗನ ಸಖಿಯಂತಿರುವ ಚೆಲುವೆಯೊಬ್ಬಳು ಅವನ ಸಹಾಯಕ್ಕೆ ಬರುತ್ತಾಳೆ. ಇವನಿಗೆ ಅಲ್ಲಿಯೂ ರಾಘವಾಂಕನ ನೆನಪು-ರೋಗ ರುಜೆಯಡಸಿಕೊಂಬಲ್ಲಿ ರಂಭೆ ದೊರಕೊಂಡಲ್ಲಿ ಫಲವೇನು?. ಏನಿದ್ದರೂ ಒಂದು ಮಹಾರೋಗದ ನಡುವೆಯೇ ಅವನು ಸ್ವಲ್ಪ ಮಜ ತಗೊಂಡದ್ದು ಮಾತ್ರ ನಿಜವಂತೆ. ಅವನ ಊರಾದ ಪಂಜದ ಸರಕಾರೀ ಆಸ್ಪತ್ರೆಯೆಲ್ಲಿ? ದೆಹಲಿಯ ಮ್ಯಾಕ್ಸ್ ಆಸ್ಪತ್ರೆಯೆಲ್ಲಿ? ಒಂದೇ ದೇಶದಲ್ಲಿ ಎಷ್ಟೊಂದು ತಾರತಮ್ಯ?

ಆಸ್ಪತ್ರೆಗೆ ಸೇರುವ ಹಿಂದಿನ ದಿನ ನಿನಗೆ ಭಯವಾಗಿದ್ದಿರಲಿಲ್ಲವೇ ಎಂದು ಪ್ರಶ್ನಿಸಿದರೆ ಅವನ ಉತ್ತರ ನಂಬುವಂತಿತ್ತು. ಅವನು ಅದಾಗಲೇ ಅಂತರ್ಜಾಲವನ್ನು ಪೂರ್ತಿ ಜಾಲಾಡಿಸಿ ಸಾಕಷ್ಟು ಮಾಹಿತಿ ಸಂಗ್ರಹಿಸಿ ಗೆಳೆಯರಿಗೆ, ಕುಟುಂಬದವರಿಗೆ ವಿವರಿಸಿದ್ದ.ಅವನು ಮೊದಲು ತಿಳಿದುಕೊಂಡದ್ದು ಅವನ ಎರಡು ಕಿಡ್ನಿಗಳಲ್ಲಿ ಒಂದನ್ನು ತೆಗೆದು, ಹೊಸದನ್ನು ಅದಕ್ಕೆ ಜೋಡಿಸುವುದು ಅಂತ.

ಆದರೆ ಅದು ಹಾಗಲ್ಲ.

ಕಿಡ್ನಿ ಕಸಿ ಆದ ನಂತರವೂ ಕಸಿ ಮಾಡಿಸಿಕೊಂಡವನ ಎರಡೂ ಕಿಡ್ನಿಗಳು ಹಾಗೆಯೇ ಇರುತ್ತವೆ. ಈ ಕಿಡ್ನಿಗಳಿಂದ ಮೂತ್ರವನ್ನು ಮೂತ್ರ ಕೋಶಕ್ಕೆ ಒಯ್ಯುವ ಎರಡು ನಾಳಗಳಲ್ಲಿ ಒಂದಕ್ಕೆ ಹೊಸ ಕಿಡ್ನಿಯನ್ನು ಜೋಡಿಸುವುದು ತಂತ್ರ.ಅಂದರೆ ಕಸಿಯ ಬಳಿಕ ಒಟ್ಟು ಮೂರು ಕಿಡ್ನಿಗಳು ದೇಹದಲ್ಲಿರುತ್ತವೆ.

ಈ ಬಗ್ಗೆ ಇವನು ಹೆಚ್ಚು ತಲೆ ಕೆಡಿಸಿಕೊಳ್ಳಲಿಲ್ಲ. ಏನಿದ್ದರೂ ಈ ಕೆಲಸ ಮಾಡುವವರು ವೈದ್ಯರು, ದೇಹವನ್ನು ಅವರಿಗೆ ಒಪ್ಪಿಸಿದರೆ ಆಯಿತು.ಹಾಗೆಂದುಕೊಂಡುಇವನು ನಿಶ್ಚಿಂತನಾಗಿದ್ದ; ಆಸ್ಪತ್ರೆಗೆ ಸೇರುವ ಹಿಂದಿನ ದಿನವೂ ಕಛೇರಿಯಲ್ಲಿ ತಡರಾತ್ರಿವರೆಗೂ ಕೆಲಸ ಮಾಡಿದ್ದ.

ಆಸ್ಪತ್ರೆಯ ಡಾಕ್ಟರರುಗಳು ಎಲ್ಲವನ್ನೂ ಸಾವಧಾನದಿಂದ ಮೊದಲೇ ವಿವರಿಸಿದ್ದರು. ವೈದ್ಯರಾದ ಡಾ.ಮೋಹಿತ್ ಕಿರ್ಬಾತ್ ಅತ್ಯಂತ ತಾಳ್ಮೆಯಿಂದ ಬಿಡಿ ಬಿಡಿಯಾಗಿ ಎಲ್ಲವನ್ನೂ ವಿವರಿಸಿ ಒಟ್ಟು ಸುಮಾರು ಆರೂವರೆ ಲಕ್ಷ ರೂಪಾಯಿಗಳ ಖರ್ಚಿನ ಬಗ್ಗೆ ಮಾಹಿತಿಯನ್ನೂ ನೀಡಿದರು.ಅದರಲ್ಲಿ ಸರ್ಜರಿಗೆ ಮುನ್ನ ಮತ್ತು ಸರ್ಜರಿಯ ಆನಂತರ ಕೊಡಬಹುದಾದ ಎರಡು ಇಂಜಕ್ಷನ್‌ಗಳ ಬೆಲೆಯೇ ಒಂದು ಲಕ್ಷದ ನಲುವತ್ತು ಸಾವಿರರೂಪಾಯಿಗಳಾಗಿತ್ತು. ಈ ಇಂಜಕ್ಷನ್‌ಗಳು ಹಳೆ ದೇಹವು ಹೊಸ ಕಿಡ್ನಿಯನ್ನು ತಿರಸ್ಕರಿಸಬಹುದಾದ ಸಾಧ್ಯತೆಗಳನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.ಹೇಗೋ ಹಣ ಜೋಡಿಸಿಕೊಂಡ. ಗೆಳೆಯರು ಚಾಚಿದ ಸಹಾಯ ಹಸ್ತವನ್ನು ಮುಕ್ತವಾಗಿರಿಸಿಕೊಂಡ.

ದೇವರೇ ಮಾಡಿದ ಜೋಡಿಯಿದು

ಕಿಡ್ನಿ ಕಸಿಯ ಬಗ್ಗೆ ಇವನು ಅಂತಿಮ ನಿರ್ಧಾರ ತೆಗೆದುಕೊಂಡದ್ದು ೨೦೧೨ರ ಎಪ್ರಿಲ್ ಮೊದಲ ವಾರದಲ್ಲಿ. ಆನಂತರ ದಂಪತಿಗಳಿಗೆ ಬಗೆಬಗೆಯ ಪರೀಕ್ಷೆಗಳು. ಮೇ ೧೫ರ ಹೊತ್ತಿಗೆ ಸುಮಾರು ೬೦ ಬಗೆಯ ಪರೀಕ್ಷೆಗಳನ್ನು ಮುಗಿಸಿದ್ದರು. ಅದರಲ್ಲಿ ಮುಖ್ಯವಾಗಿ ಇಬ್ಬರ ರಕ್ತದ ಗ್ರೂಪ್ ಒಂದೇ ಆಗಿರಬೇಕು. ಇಬ್ಬರ ರಕ್ತವನ್ನು ಮಿಶ್ರ ಮಾಡಿ ಪರೀಕ್ಷಿಸಿದಾಗ, ಅದು ನಿರೀಕ್ಷಿತ ಪರಿಣಾಮವನ್ನು ಬೀರಬೇಕು. ಜೊತೆಗೆ ಹೃದಯ, ಕಿಡ್ನಿಗಳು ಕೆಲಸ ಮಾಡುವ ಬಗೆಯನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. ಕಿಡ್ನಿಯನ್ನು ದೇಹದ ಇತರ ಭಾಗಗಳಿಗೆ ಜೋಡಿಸಿದ ರಕ್ತನಾಳಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಯಾವ ನಾಳವನ್ನು ಕತ್ತರಿಸಬಹುದು ಎಂಬ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳಬೇಕು. ಹೀಗೇ ಹತ್ತು ಹಲವು ಸಂಗತಿಗಳು. ಆ ೬೦ ಪರೀಕ್ಷೆಗಳಲ್ಲೂಅವರಿಬ್ಬರೂ ಯಾವ ತೊದರೆಯಿಲ್ಲದೆ ಪ್ಫಸ್ಟ್ ಕ್ಲಾಸಿನಲ್ಲಿ ಪಾಸಾದರು.

ಡಾ. ಮೋಹಿತ್ ಹೇಳಿದ್ದರು-ದೇವರೇ ಮಾಡಿದ ಜೋಡಿಯಿದು.

ಹೀಗೇ ಬಗೆ ಬಗೆಯ ಪರೀಕ್ಷೆಗಳಿಗೆ ಒಳಪಡುತ್ತಲೇ ಕಾನೂನಿನ ಅಗತ್ಯಗಳನ್ನೂ ಪೂರೈಸಿಕೊಳ್ಳಬೇಕಾಗುತ್ತಿತ್ತು.ಮುಖ್ಯವಾಗಿ ಯಾವ ಒತ್ತಡವೂ ಇಲ್ಲದೆ ಸ್ವ ಇಚ್ಛಯಿಂದ ಕಿಡ್ನಿಯನ್ನು ಕೊಡುತ್ತಿದ್ದೇನೆ ಅಂತ ದಾನಿ ಅಫಿದವಿತ್ ಮಾಡಬೇಕು. ಅದಕ್ಕೆ ನೋಟರಿಯ ಸಹಿ ಬೇಕು. ದಾನಿಯ ಹತ್ತಿರದ ಸಂಬಂಧಿಯ (ಇಲ್ಲಿ ಇವರಿಬ್ಬರ ಮಗ ಅನನ್ಯ) ಒಪ್ಪಿಗೆ ಬೇಕು. ಮನಶ್ಯಾಸ್ತ್ರಜ್ಞರ ಟಿಪ್ಪಣಿ ಬೇಕು. ಸ್ತ್ರೀ ರೋಗ ತಜ್ಞೆ, ಹೃದಯ ರೋಗ ತಜ್ಞರ ಒಪ್ಪಿಗೆ ಬೇಕು, ಎಲ್ಲಕ್ಕಿಂತ ಮಿಗಿಲಾಗಿ ಆಸ್ಪತ್ರೆಯಲ್ಲಿ ಕಿಡ್ನಿ ಪ್ಯಾನಲ್ ಮುಂದೆ ಹಾಜರಾಗಿ ನಿರ್ಣಯಗಳನ್ನು ಸಮರ್ಥಿಸಿಕೊಳ್ಳಬೇಕು.ಇವಕ್ಕೆಲ್ಲ ಸುಮಾರು ಒಂದು ಲಕ್ಷ ರೂಪಾಯಿಗಳ ಖರ್ಚು ತಗಲುತ್ತದೆ. ಇಂಥ ಕಠಿಣ ನಿಯಮಗಳ ಮೂಲಕ ಕಿಡ್ನಿ ಅಪಹರಣದಂಥ ಅತ್ಯಂತ ಹೇಯವಾದ ಪ್ರಕ್ರಿಯೆಗಳನ್ನು ತಡೆಯಲು ಪ್ರಯತ್ನಿಸಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಇಂದು ಆರೋಗ್ಯವಂತ ಕಿಡ್ನಿಯೊಂದರ ಬೆಲೆ ಸುಮಾರು ೫೦ ಲಕ್ಷ ರೂಪಾಯಿಗಳು. ಬಡವರಿಗೆ ೧೦ ಸಾವಿರ ರೂಪಾಯಿಗಳನ್ನು ಕೊಟ್ಟು ಲಕ್ಷಾಂತರ ರೂಪಾಯಿಗಳಿಗೆ ಕಿಡ್ನಿಗಳನ್ನು ಮಾರಾಟ ಮಾಡುವ ನೀಚರು ಇಂದಿಗೂ ಇದ್ದಾರೆ. ಜೊತೆಗೆ ಮಕ್ಕಳ ಅಪಹರಣದ ಹಿಂದೆಯೂ ಕಿಡ್ನಿ ವಂಚಕರ ಜಾಲ ಇರುವುದನ್ನು ಪತ್ತೆ ಹಚ್ಚಲಾಗಿದೆ.

ಒಂದು ವರದಿಯ ಪ್ರಕಾರ, ಹೆಂಗಸರ ಒಂದು ಕಿಡ್ನಿ ನಿಧಾನವಾಗಿ ಕಾರಣಾಂತರದಿಂದ ಬಾಡಿ, ಸುರುಟಿ ಹೋಗುವ ಪರಿಸ್ಥಿತಿಯು ದೇಹದಲ್ಲಿ ತಾನೇ ತಾನಾಗಿ ನಿರ್ಮಾಣಗೊಳ್ಳುತ್ತದಂತೆ. ಆಗ ಅದನ್ನು ಬೇರೆ ದೇಹಕ್ಕೆ ಜೋಡಿಸಿದಾಗ ಮತ್ತೊಮ್ಮೆ ಅದು ಸಕ್ರಿಯವಾಗುವುದಂತೆ.ಆಸ್ಪತ್ರೆಯಲ್ಲಿ ನಡೆಸಿದ ಒಂದು ಅತ್ಯಾಧುನಿಕವಾದ ಪರೀಕ್ಷೆಯಲ್ಲಿ ( ಆ ಪರಿಕ್ಷೆಗೆ ೧೩ ಸಾವಿರ ರೂಪಾಯಿಗಳ ಖರ್ಚು ತಗುಲಿತ್ತು) ಶೋಭನಾಳ ಎಡದ ಕಿಡ್ನಿಯು ಕ್ಷೀಣವಾಗಿರುವುದನ್ನು ವೈದ್ಯರು ಇವನಿಗೆ ತೋರಿಸಿ, ಅದನ್ನು ತೆಗೆದು ನಿಮಗೆ ಕಸಿ ಮಾಡಲಾಗುವುದು ಎಂದಿದ್ದರು. ಅತ್ಯುತ್ತಮವಾಗಿ ಕೆಲಸ ಮಾಡುವ ಕಿಡ್ನಿಯನ್ನು ಅವರು ತೆಗೆಯುವುದಿಲ್ಲ. ಇದೊಂದು ಸಮಾಧಾನ ಕೊಡುವ ಹೊಸ ವಿಷಯವಾಗಿತ್ತು ಇವನಿಗೆ.

೨೦೧೨ರ ಜೂನ್ ಒಂದನೇ ತಾರೀಕಿನಂದು ಶಸ್ತ್ರ ಚಿಕಿತ್ಸೆಗೆ ದಿನ ನಿಗದಿಯಾಗಿತ್ತು. ಅಂದರೆ ಮೇ ೩೧ರಂದು ಅಪರಾಹ್ನ ಎರಡು ಗಂಟೆಯ ಒಳಗೆ ಆಸ್ಪತ್ರೆಗೆ ಅವರಿಬ್ಬರೂ ಸೇರಬೇಕಾಗಿತ್ತು. ಅದೇ ಪ್ರಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದ್ದರು. ಮಗ ಒಂದು ವಾರಗಳ ಅವಧಿಗೆ ರಜೆ ಹಾಕಿ ಜೊತೆಗಿರಲು ಸಿದ್ಧನಾಗಿದ್ದ. ಬೆಂಗಳೂರಿನಿಂದ ಡಾ. ಯು.ಆರ್. ಅನಂತಮೂರ್ತಿಯವರು ಫೋನ್ ಮಾಡಿ ನಿಮಗೆ ಶುಭವಾಗಲಿ, ಒಂದು ವೇಳೆ ಕಿಡ್ನಿ ಕಸಿ ವಿಫಲವಾದರೂ ಯೋಚನೆ ಬೇಡ, ಡಯಾಲಿಸಿಸ್ ಇದೆಯಲ್ಲ? ಎಂದ್ದಿದ್ದರಂತೆ.

ಅಮೇರಿಕಾದ ಅಯೋವಾ ವಿಶ್ವವಿದ್ಯಾಲಯದಿಂದ ಡಾ.ಫಿಲಿಪ್, ಹಾರ್ವರ್ಡನಿಂದ ಡಾ. ನಸೀಮ್ ಹೈನ್ಸ್, ವಾಷಿಂಗ್ಟನ್ ನಿಂದ ಮೈಕ್ ಹಲವಾಚ್ಸ್, ಟೆಕ್ಸಾಸ್ ನಿಂದ ಮಾರ್ಥಾ ಸೆಲ್ಬಿ, ಇಂಡಿಯಾನದಿಂದ ರೆಬೆಕಾ, ಇಸ್ರೇಲ್ ನಿಂದ ಶುಲ್ಮನ್, ಟೋಕಿಯೋದಿಂದ ಸುಮಿಯೋ ಮೊರಿಜಿರಿ ಮತ್ತು ಮೀಕೋ ಮಿನಕವ, ಹೀಗೆ ಜಗತ್ತಿನಾದ್ಯಂತದಿಂದ ಶುಭ ಹಾರೈಕೆಗಳು ಬಂದು ತಲುಪಿದವು. ಇವರಿಗೆಲ್ಲ ಸುದ್ದಿ ತಿಳಿದದ್ದು ಹೇಗೆ? ಎಂದು ಇವನೇ ಅಚ್ಚರಿಗೊಡಿದ್ದ.

ಆಯುಷ್ಯ ಮರೆತ ಮಾವ

ಆಸ್ಪತ್ರೆಗೆ ಸೇರುವ ಆದಿನ ಬಂತು.

ಭಾವನೆಗಳೇ ಇಲ್ಲದ ದಿನವದು.

ಅದರೆ!

ಆದರೆ ೩೧ರ ಬೆಳಗ್ಗೆ ೬ ಗಂಟೆಯ ಸುಮಾರಿಗೆ ಇವನ ಮಾವ -ಹೆಂಡತಿಯ ಅಪ್ಪ- ಕಾಸರಗೋಡಿನ ಆಸ್ಪತ್ರೆಯಲ್ಲಿ ತೀರಿಕೊಂಡ ಸುದ್ದಿ ಬರಸಿಡಿಲಿನಂತೆ ಅಪ್ಪಳಿಸಿತು.

ಅಪ್ಪನನ್ನು ಪ್ರಾಣಕ್ಕೂ ಮಿಗಿಲಾಗಿ ಪ್ರೀತಿಸುತ್ತಿದ್ದ ಶೋಭನಾಳ ಆಗಿನ ಪರಿಸ್ಥಿತಿ ಹೇಗಿರಬೇಡ? ಅವರು ಅಂತಿಂಥ ಅಪ್ಪ ಅಲ್ಲ. ಅಪರಿಮಿತ ಯಕ್ಷಗಾನ ಪ್ರೇಮಿ, ಇವನೋ ಯಕ್ಷಗಾನದ ಅಸೀಮ ಅಭಿಮಾನಿ. ಹೀಗಾಗಿ ಇವರಿಬ್ಬರು ಎಷ್ಟೋ ಬಾರಿ ಒಟ್ಟಗೇ ತಾಳಮದ್ದಳೆಯಲ್ಲಿ ಅರ್ಥ ಹೇಳಿದ್ದುಂಟು. ಕಿಡ್ನಿ ಕಸಿಯ ವಿವರ ಕೇಳಿದ ಅವರು ಮಗಳ ಮೇಲೆ ಅಭಿಮಾನ ಪಟ್ಟದ್ದಲ್ಲದೆ, ಆಪರೇಶನ್‌ನ ಯಶಸ್ವಿಗೆ, ದಂಪತಿಗಳ ದೀರ್ಘಾಯುಷ್ಯಕ್ಕೆ ವಿಶೇಷಪೂಜೆಯನ್ನೂ ಮಾಡಿಸುತ್ತಿರುವಾಗ ತಮ್ಮ ಆಯುಷ್ಯದ ಬಗ್ಗೆ ಯೋಚನೆಯನ್ನೇ ಮಾಡಿದ್ದಿರಲಿಲ್ಲ. ಅವರು ಆ ದಿನವೇ ಕಣ್ಮರೆಯಾದರು. ಕಣ್ಣಿಂದ ರಕ್ತ ಒಸರತೊಡಗಿ ದೆಹಲಿಯಿಂದ ಕಾಸರಗೋಡಿನ ವರೆಗೆ ಹರಿಯತೊಡಗಿತು.

ಕಾಸರಗೋಡಿನವರೆಗೆ ಪಯಣಿಸುವಷ್ಟು ಆರೋಗ್ಯ ಇವನಿಗಿರಲಿಲ್ಲ. ಮಗ ಅಮ್ಮನೊಡನೆ ಹೋಗಲು ತಯಾರಾದ.ಆದರೆ ಮುಂಬ್ಯೆ ಮೂಲಕವಾಗಲೀ, ಬೆಂಗಳೂರು ಮೂಲಕವಾಗಲೀ ಕಾಸರಗೋಡು ತಲುಪಲು ಬೇಕಾದ ಅನುಕೂಲಕರ ವಿಮಾನ ದೊರೆಯಲೇ ಇಲ್ಲ. ಒಂದು ವೇಳೆ ದೊರೆತಿದ್ದರೂ ಶೋಭನಾಳನ್ನು ಆ ಸ್ಥಿತಿಯಲ್ಲಿ ಕಳುಹಿಸಿಕೊಡುವ ಸ್ಥಿತಿಯಲ್ಲಿ ನಾನಿರಲಿಲ್ಲ. ಮಗ ನಮ್ಮ ಸಹಾಯಕ್ಕೆ ನಿಂತ. ಈಗ ಯಾವುದೇ ನಿರ್ಣಯ ತೆಗೆದುಕೊಳ್ಳುವುದು ಬೇಡ, ಸ್ವಲ್ಪ ಹೊತ್ತು ಜೊತೆಗಿರೋಣ ಎಂದು ಹೇಳಿದ ಅವನು ಪರಿಸ್ಥಿಯನ್ನು ಕೈಗೆ ತೆಗೆದುಕೊಂಡ. ಹೊತ್ತೇರುತ್ತಲೇ ಊರಿಗೆ ಫೋನ್ ಮಾಡಿ, ನಾವೀಗ ಬರುವ ಪರಿಸ್ಥಿತಿಯಲ್ಲಿ ಇಲ್ಲ, ನೀವು ಮುಂದುವರಿಸಿ ಎಂದು ಹೇಳಿಬಿಟ್ಟ.

ಇವನು ಶೋಭನಾಗೆ ಅಂಟಿಕೊಂಡು ಮೌನವಾಗಿ ಕೊರಗುತ್ತಿದ್ದ. ಸುಮಾರು ೧೧ ಗಂಟೆಯ ಹೊತ್ತಿಗೆ ಆಸ್ಪತ್ರೆಗೆ ಫೋನ್ ಮಾಡಿ ಶಸ್ತ್ರ ಚಿಕಿತ್ಸೆಯನ್ನು ಮುಂದಕ್ಕೆ ಹಾಕಲು ಯೋಚಿಸುತ್ತಿದ್ದಾಗ ಶೋಭನಾ ಹೇಳಿದ್ದಳು ಹಾಗೆ ಮಾಡಬೇಡಿ.ಮಾಡಿದರೆ ಮತ್ತೆ ನಾವು ಅನೇಕ ಪರೀಕ್ಷೆಗಳಿಗೆ ಹಾಜರಾಗಬೇಕಾಗುತ್ತದೆ. ಊರಿಗಂತೂ ಹೋಗಲಾಗಲಿಲ್ಲ, ಇದನ್ನಾದರೂ ಮುಗಿಸೋಣ.

ಮುಂದಿನ ನಾಲ್ಕಾರು ಗಂಟೆಗಳ ಕಾಲ ಭಯಾನಕ ಮೌನ.

ಈ ಮೌನದಲ್ಲಿಯೇ ಇವರಿಬ್ಬರೂ ಆಸ್ಪತ್ರೆ ಸೇರಿದರು.ನಗು ನಗುತ್ತಾ ಇದ್ದವರು ಈಗ ಇದ್ದಕ್ಕಿದ್ದಂತೆ ಮೌನಕ್ಕೆ ಶರಣಾದ್ದನ್ನು ಗಮನಿಸಿದ ಡಾ.ಮೋಹಿತ್ ಸಮಾಧಾನ ಪಡಿಸಿ, ಧೈರ್ಯದಿಂದಿರಿ, ಶಸ್ತ್ರ ಚಿಕಿತ್ಸೆ ಯಶಸ್ವಿಯಾಗುವುದರಲ್ಲಿ ನನಗೆ ಸಂಶಯವಿಲ್ಲ ಎಂದಿದ್ದರು. ಅವರಿಬ್ಬರೂ ಒಳಗೊಳಗೇ ರೋಧಿಸುತ್ತಿದ್ದರು. ಇವನ ವಿಶೇಷ ಕೋರಿಕೆಯನ್ನು ಮನ್ನಿಸಿದ ಆಸ್ಪತ್ರೆಯ ಅಧಿಕಾರಿಗಳು ಮೇ ೩೧ರ ರಾತ್ರಿ ಅವರಿಬ್ಬರೂ ಒಂದೇ ಕೊಠಡಿಯಲ್ಲಿರಲು ಅವಕಾಶ ಮಾಡಿಕೊಟ್ಟಿದ್ದರಂತೆ.

ಮರುದಿನ ೮ ಗಂಟೆಗೆ ಸರಿಯಾಗಿ ಶೋಭನಾಳನ್ನು ಆಪರೇಶನ್ ಥಿಯೇಟರ್‌ಗೆ ಕರೆದೊಯ್ದರು. ೮.೧೫ಕ್ಕೆ ಇವನನ್ನೂಎಳೆದುಕೊಂಡು ಹೋದರು. ಕಣ್ಣಿಗೆ ಕಾಣುವಷ್ಟು ದೂರದವರೆಗೆ ಗೆಳೆಯ ಕೃಷ್ಣ ಭಟ್ಟರನ್ನು, ಗೆಳತಿ ವಿದ್ಯಾರನ್ನೂ ನೋಡುತ್ತಿದ್ದ. ಅವರು ಕೈಬೀಸಿದಾಗ ಇವನೂ ಮುಗುಳ್ನಕ್ಕಿದ್ದನಂತೆ. ಆಪರೇಶನ್ ಥಿಯೇಟರ್‌ನಲ್ಲಿ ಹೆಂಡತಿಯನ್ನು ಇವನು ಕ್ಷಣ ಮಾತ್ರ ನೋಡಿದ್ದೆ. ಅಷ್ಟರಲ್ಲಿ ಅವರು ಇವನ ಅಂಗಿಯನ್ನು ಕಳಚಿದ್ದರು. ಜೊತೆಗಿದ್ದ ವೈದ್ಯರು ಛಳಿಯಾಗುವುದೇ? ಅಂತ ಕೇಳಿದ್ದಷ್ಟೇ ನೆನಪು.

ಮತ್ತೆ ಕಣ್ಣು ಬಿಟ್ಟಾಗ ಅಪರಾಹ್ನ ೩ ಗಂಟೆ.

ದಾದಿಯರಿಬ್ಬರೂ ಅವನ ಸುತ್ತ ಕುಳಿತಿದ್ದರು.

ಇವನು ಕಣ್ಣು ಬಿಟ್ಟೊಡನೆ ಕೈ ಹಿಡಿದು ಮುಗುಳ್ನಕ್ಕ ಅವರು ಡಾ.ಮೋಹಿತ್ ಮತ್ತು ಸರ್ಜನ್ ಡಾ. ಪಿ.ಬಿ. ಸಿಂಗ್ ಅವರಿಗೆ ಸುದ್ಧಿ ತಲುಪಿಸಿದರು.

ನಾಲ್ಕಾರು ನಿಮಿಷಗಳಲ್ಲಿ ಅವರು ಆತನ ಕಣ್ಣೆದುರು ಹಾಜರು.

ಮಿ. ಬಿಳಿಮಲೆಯವರೇ ಹೇಗಿದ್ದೀರಿ?ಡಾ.ಸಿಂಗ್ ಕೇಳಿದ್ದರು.

ಚೆನ್ನಾಗಿದ್ದೇನೆ ಸರ್, ಆಪರೇಶನ್ ಎಷ್ಟು ಹೊತ್ತಿಗೆ? ಮುಗ್ಧವಾಗಿ ಪ್ರಶ್ನಿಸಿದ್ದ ಇವನು.

ಪಕ್ಕದಲ್ಲಿದ್ದ ಡಾ.ಮೋಹಿತ್ ನಗುತ್ತಾ ಹೇಳಿದ್ದರು, ಆಪರೇಶನ್ ಆಗಿದೆ, ದೇವರ ದಯದಿಂದ ಅದು ಯಾವ ತೊಂದರೆಯೂ ಇಲ್ಲದೆ ಮುಗಿದಿದೆ.ನಿಮ್ಮ ಶ್ರೀಮತಿಯವರೂ ಆರಾಮವಾಗಿದ್ದಾರೆ, ಅಭಿನಂದನೆಗಳು ಎಂದು ಕೈ ಹಿಡಿದು ದಾದಿಯರಿಗೆ ಏನೋ ಸೂಚನೆ ನೀಡಿ ಮತ್ತೆ ಬರುವೆನೆಂದು ಹೇಳಿ ಹೊರಟು ಹೋದರು.

ಇವನು ಅವಕ್ಕಾಗಿದ್ದ.

ಮುಂದಿನ ಕೆಲವು ದಿನಗಳು ಮಹಾ ಅನಿಶ್ಚಿತತೆಯ ದಿನಗಳು.

ಯಾವ ಕ್ಷಣದಲ್ಲೂ, ಯಾವ ದಿನದಲ್ಲೂ ಆತನ ದೇಹ ಆ ಹೊಸ ಕಿಡ್ನಿಯನ್ನು ಒಲ್ಲೆ ಎಂದು ತಿರಸ್ಕರಿಸಬಹುದು.

ಆತ ಯೋಚಿಸುತ್ತಿದ್ದ, ಆಕೆಯೇ ಮನಸಾ ಒಲಿದಿತ್ತ ಕಿಡ್ನಿಯದು, ನನ್ನ ದೇಹ ಯಾಕಾದರೂ ತಿರಸ್ಕರಿಸುತ್ತದೆ

ಅವನ ನಿರೀಕ್ಷೆ ಸುಳ್ಳಾಗಲಿಲ್ಲ.

ಸರ್ಜರಿಯ ಮೂರನೇ ದಿವಸಕ್ಕೆ

ದೇಹದಲ್ಲಿನ ಅನಗತ್ಯ ನೀರೆಲ್ಲ ಆರಿ ಹೋಯಿತು,

ಬೆರಳುಗಳು ಬಾಗತೊಡಗಿದವು.

ಯೂರಿನ್ ಕ್ರಿಯೇಟಿನೈನ್ ೦.೮ ರಲ್ಲಿ ಸ್ಥಗಿತಗೊಂಡಿತು.

ಮುಂದಿನ ಐದೇ ದಿವಸದಲ್ಲಿ ಶೋಭನಾಳನ್ನು ಮನೆಗೆ ಕಳಿಸಿದರು.

ಅವಳು ಅವನಿಗಾಗಿ ಕಾಯತೊಡಗಿದಳು.

ಇವನೋ ೧೨ ದಿವಸಗಳವರೆಗೆ ಆಸ್ಪತ್ರೆಯಲ್ಲಿದ್ದ.

ಅದು ಚಿನ್ನದ ಪಂಜರದ ವಾಸ.

ಮಲೆಯಾಳೀ ದಾದಿಯರ ಅಕ್ಕರೆಯ ಸೇವೆ.

ಅವರು ಬೆಳಗ್ಗೆ ಅವನನ್ನು ಎಬ್ಬಿಸಿ ಪೂರ್ತಿ ಬೆತ್ತಲಾಗಿಸುತ್ತಾರೆ.

ಇಡೀ ದೇಹವನ್ನು ಸ್ಪಂಜಿನಿಂದ ಶುದ್ಧಗೊಳಿಸುತ್ತಾರೆ. ಹೊಸ ಬಟ್ಟೆ ಹಾಕಿಸುತ್ತಾರೆ.

ಅವನೊಮ್ಮೆ ದಾದಿ ಟ್ರೇಸಿಗೆ ಹೇಳಿದ್ದ, ನನ್ನ ಅಮ್ಮನ ಆನಂತರ ಹೀಗೆ ನನ್ನನ್ನು ನೋಡಿದವರು ಮತ್ತು ಸೇವೆ ಮಾಡಿದವರು ನೀವು ಮಾತ್ರ. ನನಗೆ ಮದರ್ ತೆರೆಸಾ ನೆನಪಾಗುತ್ತಿದ್ದಾರೆ

ಟ್ರೇಸಿ ಉತ್ತರಿಸಿದ್ದಳು ಪ್ರತಿ ರೋಗಿಯನ್ನು ನಾವು ಮಗುವಿನ ಹಾಗೆ ನೋಡುತ್ತೇವೆ.

ಬೇರೊಬ್ಬರ ದೇಹವನ್ನು ಇಷ್ಟೊಂದು ಕಾಳಜಿಯಿಂದ ನೋಡುವ ರೀತಿಗೆ ಆತ ಬೆಚ್ಚಿ ಬಿದ್ದಿದ್ದ.

ಮಣಿಪುರದ ದಿಮಿತಾ ದೀದಿ, ನಾಗಲ್ಯಾಂಡಿನ ತಾಯ್ ದೀದಿ, ಕೊಟ್ಟಾಯಂನ ಶನೀಶ್, ದೆಹಲಿಯ ಜಗನ್ನಾಥ್, ಎಷ್ಟೊಂದು ಸೇವೆ ಮಾಡಿದರು?

ಹಣಕ್ಕಾಗಿ ಕೆಲಸ ಮಾಡುವವರಿಗೆ ಇಷ್ಟೊಂದು ನಿಷ್ಠೆ ಬರಲಾರದು.

೧೩ನೇ ದಿನ ಮನೆಗೆ ಅವನನ್ನು ಮನೆಗೆ ಕಳಿಸಲಾಯಿತು. ಡಾ. ಮೋಹಿತ್, ಡಾ.ಪಿ ಬಿ ಸಿಂಗ್, ಡಾ. ಜೆನ್ಸಿ ಮರಿಯಂ, ಡಾ. ಅಂಜುಮ್ ಗುಲಾಟಿ, ಡಾ. ಶಶಿ, ದಾದಿಯರು -ಹೀಗೇ ಎಲ್ಲರೂ ಕೈ ಬೀಸಿ ಅವನನ್ನು ಬೀಳ್ಕೊಟ್ಟರು. ಈ ಕಡೆಯಿಂದ ಮಗ ಅನನ್ಯ, ಗೆಳೆಯ ಕೃಷ್ಣ ಭಟ್, ವಿದ್ಯಾ ಕೋಳ್ಯೂರು ಆತನನ್ನು ಮನೆಗೆ ಕರೆದೊಯ್ಯಲು ಸಿದ್ಧರಾದರು.

ಆಸ್ಪತ್ರೆ ಮೆಟ್ಟಲಿಯಿಳಿತ್ತಲೇ ಏನೋ ಕಳಕೊಂಡ ವಿಚಿತ್ರ ದುಗುಡ!

ಮನೆಗೆ ತಲುಪುತ್ತಲೇ ಅವನಿಗೆ ಮಂಗಳೂರಿನಿಂದ ಶ್ರೀನಿವಾಸ ಕಾರ್ಕಳನಿಂದ ಕರೆ, ಈ ನಡುವೆ ನಮ್ಮ ಕಕ್ಕಿಲ್ಲಾಯರು, ಏಣಗಿ ನಟರಾಜ್ ತೀರಿಕೊಂಡದ್ದು ನಿಮಗೆ ತಿಳಿಯಿತಾ?

ಅವನ ಮನಸ್ಸು ೩೨ ವರ್ಷಗಳ ಹಿಂದಿನ ಕ್ರಾಂತಿಕಾರಿ ದಿನಗಳ ಕಡೆಗೆ ಹೊರಳಿಕೊಂಡಿತು.

ಮತ್ತೆ ಒಂದೆರಡು ದಿನಗಳಲ್ಲೇ ತನ್ನೆಲ್ಲ ಗೆಳೆಯರಿಗೆ ಆತ ಎಸ್.ಎಂ.ಎಸ್. ಕಳಿಸಿದ್ದ.

ಪರಶಿವನಿಗೆ ಮೂರು ಕಣ್ಣು, ನನಗೋ ಮೂರು ಕಿಡ್ನಿ. ನನ್ನ ಪತ್ನಿಯ ಒಂದು ಕಿಡ್ನಿ ನನ್ನಲ್ಲಿದೆಯಾದ್ದರಿಂದ ನಿಜವಾದ ಅರ್ಥದಲ್ಲಿ ನಾನೀಗ ಅರ್ಧನಾರೀಶ್ವರ.ಜೊತೆಗೆ ತ್ರಿ ಮೂತ್ರಪಿಂಡ ಧಾರಿ, ಭಗವಂತನಿಗೂ ಮಿಗಿಲು

————————

ಕತೆಯಿಂದ ನಾವು ಕಲಿಯಬೇಕಾದ ನೀತಿ:

ಕಾಯುತಿಹುದು ಸಾವು ಇಂದು ಸಂಜೆಗೆ, ನಾಳೆ ಮುಂಜಾನೆಯೂ ಬಂದೀತು ಅದು ಮೆಲ್ಲಗೆ.

ಇಂದೇ ಕಡೆ ರಾತ್ರಿಯೆಂದು ದೇವರೇ ಹೇಳಿದರೂ, ನೆನೆ ಹಾಕಿಡು ಉದ್ದು ನಾಳೆ ಬೆಳಗ್ಗಿನ ಇಡ್ಳಿಗೆ.